ಆಪ್ತ ಸಮಾಲೋಚನೆ ಎಂದರೇನು ? ಅದು ಹೇಗೆ ನೆರವಾಗುತ್ತದೆ ?

ಆಪ್ತ ಸಮಾಲೋಚನೆ ಎಂದರೇನು ? ಅದು ಹೇಗೆ ನೆರವಾಗುತ್ತದೆ ?

ಆಪ್ತ ಸಮಾಲೋಚನೆ

ನಮ್ಮ ಜೀವನದ ಯಾವುದೋ ಒಂದು ಘಟ್ಟದಲ್ಲಿ ನಾವು ಎಂದೂ ಕಾಣದಂತಹಅಥವಾ ನಮ್ಮ ತಾಳಿಕೆಯ ಸಾಮರ್ಥ್ಯವನ್ನೂ ಮೀರಿದಂತಹ ಸವಾಲುಗಳನ್ನು ಎದುರಿಸುತ್ತೇವೆ. ಈ ಸನ್ನಿವೇಶದಲ್ಲಿ ನಾವು ನಮ್ಮ ಶಕ್ತಿ ಕಳೆದುಕೊಳ್ಳಬಹುದು, ಕೋಪಗೊಳ್ಳಬಹುದು, ಅಸಹಾಯಕರಾಗಬಹುದು, ಹೆದರಿಕೊಳ್ಳಬಹುದು, ಜಿಗುಪ್ಸೆ ಹೊಂದಬಹುದು, ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳಬಹುದು, ನನ್ನಿಂದ ಏನೂ ಮಾಡಲಾಗದು ಎಂದು ಬೇಸರವಾಗಬಹುದು ಅಥವಾ ಭಾವುಕರಾಗಬಹುದು. ಕೆಲವು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಿಗೆ ನಾವು ಸ್ಪಂದಿಸುವ ರೀತಿ ನಮ್ಮನ್ನೇ ಗೊಂದಲಕ್ಕೆ ಸಿಲುಕಿಸಬಹುದು ಅಥವಾ ಅಸ್ಥಿರಗೊಳಿಸಬಹುದು. ನಮ್ಮ ಬದುಕು ಯಾವುದೋ ಒಂದು ರೀತಿಯಲ್ಲಿ ಗಲಿಬಿಲಿಗೆ ಒಳಗಾದಂತೆ ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ಆಪ್ತ ಸಮಾಲೋಚನೆ ಪಡೆಯುವುದರಿಂದ ನಮ್ಮ ಸಂಕಷ್ಟಗಳ ಬಗ್ಗೆ ಒಂದು ವಿಶ್ವಾಸ ಮೂಡಿಸುವಂತಹ, ಅನುಕಂಪ ಭರಿತ ವಾತಾವರಣದಲ್ಲಿ ಮಾತನಾಡಲು ಅವಕಾಶ ದೊರೆಯುವುದೇ ಅಲ್ಲದೆ ಈ ಸವಾಲುಗಳನ್ನು ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಎದುರಿಸಲು ನೆರವಾಗುತ್ತದೆ.

ಇಲ್ಲಿ ಕೆಲವು ವ್ಯಕ್ತಿಗಳ ಮತ್ತು ಅವರು ಎದುರಿಸಿದ ಸನ್ನಿವೇಶಗಳತ್ತ ಒಮ್ಮೆ ನೋಡೋಣ :

43 ವರ್ಷದ ರಾಜನ್ ಒಬ್ಬ ಯಶಸ್ವಿ ಉದ್ಯಮಿ. ಆರ್ಥಿಕವಾಗಿ ಸುರಕ್ಷಿತವಾಗಿದ್ದು ಒಳ್ಳೆಯ ಸಂಸಾರವನ್ನೂ ಹೊಂದಿದ್ದರು. ತಮ್ಮ ಬಾಲ್ಯದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿದ್ದ ರಾಜನ್ ತಮ್ಮ ಜೀವನದ ಸಂಕಷ್ಟಗಳಿಂದ ಪಾರಾಗಲು ಸಾಕಷ್ಟು ಕಷ್ಟ ಪಟ್ಟಿದ್ದು ಜೀವನದಲ್ಲಿ ಈ ಹಂತ ತಲುಪಿದ್ದಾರೆ. ಆದರೆ ಜೀವನವನ್ನು ಆನಂದದಿಂದ ಕಳೆಯಲು ಸಾಧ್ಯವಾಗದೆ ರಾಜನ್ ಸದಾ ಒತ್ತಡಕ್ಕೆ ಸಿಲುಕಿದವರಂತಿದ್ದು ಆತುರಕ್ಕೆ ಸಿಲುಕಿದಂತಿರುತ್ತಾರೆ. ಇತ್ತೀಚೆಗೆ ರಾಜನ್ ಹಲವು ಸಂದರ್ಭಗಳಲ್ಲಿ ಹೆಚ್ಚು ಕೋಪ ವ್ಯಕ್ತಪಡಿಸುತ್ತಿರುವುದರಿಂದ ಅವರೂ ತೊಂದರೆಗೊಳಗಾಗಿದ್ದಾರೆ ಮತ್ತು ಅವರ ವೈಯ್ಯಕ್ತಿಕ ಹಾಗೂ ಕಚೇರಿಯಲ್ಲಿನ ಸಂಬಂಧಗಳೂ ತೊಂದರೆಗೊಳಗಾಗಿವೆ.

35 ವರ್ಷದ ಲಕ್ಷ್ಮಿ ದಿನವಿಡೀ ನಡೆದ ಹಲವಾರು ಮೀಟಿಂಗುಗಳನ್ನು ಮುಗಿಸಿಕೊಂಡು, ಸುಸ್ತಾದ ಪ್ರಯಾಣದಿಂದ ಬಳಲಿ  ಮನೆಗೆ ಬರುತ್ತಾರೆ. ಬಂದ ಕೂಡಲೇ ಅವರ ಚಿಂತೆಗಳೆಲ್ಲವನ್ನೂ ಮರೆತು ಮಲಗುವುದೊಂದೇ ಅವರ ಆಯ್ಕೆಯಾಗಿರುತ್ತದೆ. ತನ್ನ ಪತಿಯೊಂದಿಗೆ ಮಾತನಾಡುವುದು ಅವರಿಗೆ ಸುತರಾಂ ಇಷ್ಟವಿರುವುದಿಲ್ಲ. ಪ್ರತಿಬಾರಿಯೂ ಇದು ಹೀಗೆಯೇ ಆರಂಭವಾಗಿ , ಮಾತಿಗೆ ಮಾತು ಬೆಳೆದು ಕೊನೆಗೆ ದೊಡ್ಡ ಜಗಳದಲ್ಲಿ ಕೊನೆಯಾಗುತ್ತದೆ. ಇದರಿಂದ ನೊಂದು ಮನೆಗೆ ಬರುವುದೇ ಬೇಡ ಎಂದು ನಿರ್ಧರಿಸಿದ್ದ ಲಕ್ಷ್ಮಿ ಬೇರೆಲ್ಲಾದರೂ ಹೋಗಲು ಯೋಚಿಸುತ್ತಾರೆ.

19 ವರ್ಷದ ಅಮಿತ್ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿ. ಎಲ್ಲರೊಡನೆಯೂ ಸ್ನೇಹದಿಂದಿರುವ ಉತ್ಸಾಹಿ ಹುಡುಗ. ಆದರೆ ಅವನ ತಂದೆಗೆ ಗಂಭೀರವಾದ ಖಾಯಿಲೆ ಇದೆ ಎಂದು ವೈದ್ಯರ ತಪಾಸಣೆಯ ನಂತರ ತಿಳಿದಾಗ ಮನೆಯಲ್ಲಿ ಪರಿಸ್ಥಿತಿ ಹಠಾತ್ತನೆ ಬದಲಾಗಿಬಿಡುತ್ತದೆ. ಅವನ ತಾಯಿ ತನ್ನ ಗಂಡನನ್ನು ಆರೈಕೆ ಮಾಡುವುದರಲ್ಲೇ ತೊಡಗಿರುತ್ತಾರೆ. ಅವನ ಅಜ್ಜಿ ತಾತ ಸಹ ಅವರಿಗೆ ಸಹಾಯ ಮಾಡುವುದರಲ್ಲೇ ತೊಡಗಿರುತ್ತಾರೆ.  ತನ್ನ ಮನೆಯಲ್ಲಿ ಹಣಕಾಸು ಮುಗ್ಗಟ್ಟು ಹೆಚ್ಚಾಗುತ್ತಿರುವುದು ಅಮಿತನಿಗೆ ಅರಿವಾಗುತ್ತದೆ. ಆದರೂ ತನ್ನ ವಿದ್ಯಾಭ್ಯಾಸವನ್ನು ಕಷ್ಟಪಟ್ಟು ಮುಂದುವರೆಸಲು ಪ್ರಯತ್ನಿಸುವ ಅಮಿತ್ ಭರವಸೆ ಕಳೆದುಕೊಳ್ಳುತ್ತಾನೆ, ಹೆಚ್ಚು ಹೆಚ್ಚು ಒಂಟಿತನ ಅನುಭವಿಸುತ್ತಾನೆ ಮತ್ತು ಯಾರೊಡನೆಯೂ ಸಂಬಂಧವೇ ಇಲ್ಲದವನಂತೆ ಇರಲಾರಂಭಿಸುತ್ತಾನೆ. ತನ್ನ ಸ್ನೇಹಿತರಿಂದಲೂ ದೂರ ಇರಲು ಬಯಸುತ್ತಾನೆ. ತನ್ನ ತಂದೆ ಸತ್ತು ಹೋದರೆ ತನ್ನ ಗತಿ ಏನು ಮತ್ತು ಕುಟುಂಬದ ಗತಿ ಏನು ಎಂದು ಯೋಚಿಸಲಾರಂಭಿಸುತ್ತಾನೆ. ಆದರೂ ಮನೆಯಲ್ಲಿ ಯಾರೊಬ್ಬರೂ ಈ ವಿಷಯವನ್ನು ಮಾತನಾಡುವುದಿಲ್ಲ. ಇದು ಅವನಿಗೆ ಬೃಹತ್ ಸಮಸ್ಯೆಯಾಗಿ ಕಾಣುತ್ತದೆ.

ಆಪ್ತ ಸಮಾಲೋಚನೆ ಪಡೆಯುವುದು ರಾಜನ್, ಲಕ್ಷ್ಮಿ, ಅಮಿತ್ ಅವರಿಗೆ ನೆರವಾಗುತ್ತದೆಯೇ ? ಈ ಎಲ್ಲ ಪ್ರಕರಣಗಳಲ್ಲಿ ಸರಳ ಉತ್ತರ ಎಂದರೆ, ಹೌದು ನೆರವಾಗುತ್ತದೆ. ಆಪ್ತ ಸಮಾಲೋಚನೆ ನಿಜಕ್ಕೂ ಸಹಾಯಕವಾಗುತ್ತದೆ.

ಆಪ್ತ ಸಮಾಲೋಚನೆ ಪ್ರತಿಯೊಬ್ಬರಿಗೂ ನೆರವಾಗುತ್ತದೆ.

ಆಪ್ತ ಸಮಾಲೋಚನೆ ಪ್ರತಿಯೊಬ್ಬರಿಗೂ ನೆರವಾಗುತ್ತದೆ. ವಿಶೇಷವಾಗಿ ಸಮಸ್ಯೆ ತೀವ್ರವಾದಾಗ ಅಥವಾ ಬಹಳ  ಕಠಿಣ ಎನಿಸಿದಾಗ ಇದು ನೆರವಾಗುತ್ತದೆ. ಆಪ್ತ ಸಮಾಲೋಚನೆ ಒಂದು ಪ್ರಕ್ರಿಯೆ, ಒಂದು ಪ್ರಯಾಣದಂತೆ. ಇದು ನಮ್ಮನ್ನು ನಾವು ಹೆಚ್ಚು  ಅರ್ಥ ಮಾಡಿಕೊಳ್ಳಲು, ಸ್ಪಷ್ಟತೆ ಪಡೆಯಲು, ಮತ್ತು ನಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಹಾಗೆಯೇ ಆಪ್ತ ಸಮಾಲೋಚನೆ ಪಡೆಯುವುದರಿಂದ ನಮ್ಮ ಜೀವನದ ಅನುಭವಗಳನ್ನು ಅರ್ಥಮಾಡಿಕೊಳ್ಳಲು, ಸವಾಲುಗಳನ್ನು ಎದುರಿಸುವಾಗ ಉತ್ತಮವಾದ ಹಾಗೂ ಸರಿಯಾದ ಮಾರ್ಗಗಳನ್ನು ಗುರುತಿಸಲು, ಬದಲಾವಣೆಗಳಿಗೆ ನೆರವಾಗಲು, ನಮ್ಮ ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು, ಚೇತರಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇವೆಲ್ಲವೂ ಸಹ ನಮ್ಮ ವೈಯ್ಯಕ್ತಿಕ ಬೆಳವಣಿಗೆಗೆ ನೆರವಾಗುವುದೇ ಅಲ್ಲದೆ ಹೆಚ್ಚು ಸಮಾಧಾನಕರ ಜೀವನ ಸಾಗಿಸಲು ನಮ್ಮನ್ನೇ ನಾವು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.

ಕೆಲವೊಮ್ಮೆ ಎದುರಾಗುವ ಗಂಭೀರ ಸಮಸ್ಯೆಗಳು ಮತ್ತು ಒತ್ತಡದ ಸನ್ನಿವೇಶಗಳಿಗೆ ಕೂಡಲೇ ಗಮನ ನೀಡಬೇಕಾಗುತ್ತದೆ. ಇನ್ನು ಕೆಲವು ಬಾರಿ ನಮ್ಮ ಇಂದಿನ ಅನುಭವಗಳ ಮೇಲೆ, ವರ್ತನೆಯ ಮೇಲೆ, ಸಂಬಂಧಗಳ ಮೇಲೆ ಎಂದೋ ಸಂಭವಿಸಿದ ಘಟನೆಗಳ ಅನುಭವಗಳೂ ಪ್ರಭಾವ ಬೀರುತ್ತವೆ.  ಒಂದು ಹಂತದಲ್ಲಿ ಭವಿಷ್ಯದ ಸಾಧ್ಯತೆಗಳನ್ನು ಹುಡುಕಬೇಕಾಗುತ್ತದೆ ಅಥವಾ ನಮ್ಮ ಸ್ವಂತ ಬುದ್ಧಿಯನ್ನು ಉಪಯೋಗಿಸಬೇಕಾಗುತ್ತದೆ.  ನಮ್ಮ ಕಾಳಜಿ ಅಥವಾ ಸಮಸ್ಯೆಯ ಸ್ವರೂಪ ಏನೇ ಆಗಿರಲಿ, ಆಪ್ತ ಸಮಾಲೋಚನೆಯ ಪ್ರಕ್ರಿಯೆ ಯಾವುದೇ ಅಂತಿಮ ತೀರ್ಪು ಇಲ್ಲದಂತಹ ಒಂದು ಸುರಕ್ಷಿತ ವಾತಾವರಣವನ್ನು ಒದಗಿಸುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಒಳನೋಟಗಳನ್ನು ಒದಗಿಸುತ್ತದೆ.

ಆಪ್ತ ಸಮಾಲೋಚನೆ ಪಡೆಯುವ ನಿಟ್ಟಿನಲ್ಲಿ ಮುಂದಾಗಲು ಹಲವಾರು ಕಾರಣಗಳು ಇರಬಹುದಾದರೂ, ಈ ಕೆಲವು ಸಂದರ್ಭಗಳಲ್ಲಿ ಆಪ್ತ ಸಮಾಲೋಚನೆ ಹೆಚ್ಚು ಸಹಾಯಕವಾಗುತ್ತದೆ :

  • ಸಂಬಂಧಗಳ ವಿಚಾರಗಳು : ಪರಸ್ಪರ ವೈಯ್ಯಕ್ತಿಕ ಸಂಘರ್ಷ, ಬೇರೆಯಾಗುವಿಕೆ, ವೈವಾಹಿಕ ಮತ್ತು ಸಾಂಸಾರಿಕ ಕಲಹಗಳು.
  • ಕಷ್ಟಕರವಾದ ಉದ್ವೇಗವನ್ನು ನಿಭಾಯಿಸುವುದು : ಕೋಪ, ಭಯ, ಆತಂಕ, ನೋವು, ಒಂಟಿತನ ಮತ್ತು ಒತ್ತಡ.
  • ನಿಂದನೆಯನ್ನು ಎದುರಿಸುವುದು : ದೈಹಿಕ, ಲೈಂಗಿಕ, ಮಾನಸಿಕ ಮತ್ತು ಮೌಖಿಕ ನಿಂದನೆ.
  • ಕೌಟುಂಬಿಕ ದೌರ್ಜನ್ಯ ಮತ್ತು ಹಿಂಸೆಯನ್ನು ಎದುರಿಸುವುದು.
  • ಲಿಂಗ ಅಸ್ಮಿತೆ(ಐಡೆಂಟಿಟಿ), ಲೈಂಗಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು.
  • ಜೀವನದ ವಿವಿಧ ಹಂತಗಳ ಬದಲಾವಣೆ ಮತ್ತು ಸವಾಲುಗಳನ್ನು ಎದುರಿಸುವುದು : ಉದ್ಯೋಗ, ಮದುವೆ, ವಿಚ್ಚೇದನ, ಬೇರೆಯಾಗುವುದು, ಪೋಷಕರಾಗಿ ಕಾರ್ಯ ನಿರ್ವಹಿಸುವುದು, ವೃದ್ಧಾಪ್ಯ ನಿವೃತ್ತಿ.
  • ಕಾರ್ಯಕ್ಷೇತ್ರದ ಸಮಸ್ಯೆಗಳು : ಕಲಹಗಳನ್ನು ನಿಭಾಯಿಸುವುದು, ಸಾಧನೆ, ವೃತ್ತಿಯಲ್ಲಿ ಬಡ್ತಿ  ಮತ್ತು ಆಕಾಂಕ್ಷೆಗಳು, ತೃಪ್ತಿ ಮತ್ತು ಕಿರುಕುಳ.
  • ಖಿನ್ನತೆ,  ಸ್ಕಿಜೋಫ್ರೇನಿಯಾ  ಮುಂತಾದ ಮಾನಸಿಕ ಖಾಯಿಲೆಯನ್ನು ಎದುರಿಸುವುದು.
  • ದೈಹಿಕ ಖಾಯಿಲೆಯನ್ನು ಎದುರಿಸುವುದು.
  • ವ್ಯಸನಗಳು, ಚಟಗಳು, ಸ್ವಯಂ ಹಾನಿಕಾರಕ, ಆತ್ಮಹತ್ಯೆಯ ಮನಸ್ಥಿತಿ.
  • ಸಾವು, ಕಳೆದುಕೊಳ್ಳುವುದು ಮತ್ತು ಅಗಲಿಕೆಯನ್ನು ಎದುರಿಸುವುದು.
  • ಆಘಾತ ಮತ್ತು ವಿಕಲಾಂಗತೆಯನ್ನು ಎದುರಿಸುವುದು.
  • ದೈಹಿಕ ಮತ್ತು ಮಾನಸಿಕ ರೋಗ ಇರುವವರಿಗೆ ಆರೈಕೆ ಮಾಡುವುದು.
  • ಮಕ್ಕಳು ಮತ್ತು ಅಪ್ರಾಪ್ತರ ಸಮಸ್ಯೆಗಳು : ವರ್ತನೆಯಲ್ಲಿ ಬದಲಾವಣೆ, ವಿದ್ಯಾಭ್ಯಾಸದ ಒತ್ತಡಗಳು, ಸಾಂಸಾರಿಕ ಕಲಹಗಳ ಪ್ರಭಾವ, ತೀವ್ರವಾದ ಒತ್ತಡ ಇತ್ಯಾದಿ.

ನಾವು ಸ್ನೇಹಿತರೊಡನೆ ಅಥವಾ ಕುಟುಂಬದವರೊಡನೆ ಮಾತನಾಡಬಹುದಲ್ಲವೇ ? ಆಪ್ತ ಸಮಾಲೋಚಕರೊಡನೆ ಏಕೆ ಮಾತನಾಡಬೇಕು ? ಸಮಾಲೋಚಕರಿಂದ ನಾವು ಏನನ್ನು ನಿರೀಕ್ಷಿಸಬಹುದು ?

ತಮಗೆ ಅಗತ್ಯ ಎನಿಸಿದಾಗ ಸಮಾಲೋಚಕರನ್ನು ಸಂಪರ್ಕಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಆದಾಗ್ಯೂ ಬಹಳಷ್ಟು ಜನರು ಇದನ್ನು ಕಳಂಕ ಎಂದೇ ಭಾವಿಸುತ್ತಾರೆ. ಅಥವಾ ಸಮಾಲೋಚನೆಯಲ್ಲಿ ತೊಡಗಲು ಹಿಂಜರಿಯುತ್ತಾರೆ. ಸಾಮಾನ್ಯವಾಗಿ ಆಪ್ತ ಸಮಾಲೋಚನೆ ಗೊಂದಲ ಮನಸ್ಸಿನ ಯುವಕರಿಗೆ/ಯುವತಿಯರಿಗೆ, ದುರ್ಬಲ ಮನಸ್ಸು ಇರುವವರಿಗೆ ಅಥವಾ ಮಾನಸಿಕ ಖಾಯಿಲೆ ಇರುವವರಿಗೆ ಮಾತ್ರ ಅಗತ್ಯ ಎನ್ನುವ ಭಾವನೆ ಇದೆ. ಕೆಲವರು ಆಪ್ತ ಸಮಾಲೋಚನೆ ಎಂದರೆ ಸಲಹೆ ನೀಡುವುದು ಮಾತ್ರ ಎಂದು ಭಾವಿಸಿ ಯಾರಾದರೂ ಪರಿಚಯಸ್ಥರೊಡನೆ, ಅಂದರೆ ಸ್ನೇಹಿತರೊಡನೆ ಕುಟುಂಬದ ಸದಸ್ಯರೊಡನೆ, ಮಾತನಾಡಿದರೆ ಸಾಕು ಎನ್ನುವ ಭಾವನೆ ಹೊಂದಿರುತ್ತಾರೆ.

ತನ್ನ ಮನೆಯಲ್ಲಿ ನಡೆಯುತ್ತಿದ್ದ ಕಲಹದ ಬಗ್ಗೆ ಲಕ್ಷ್ಮಿ ಹತ್ತಿರದ ಗೆಳತಿಯೊಬ್ಬರೊಡನೆ ಮಾತನಾಡಿದಾಗ ಅವರು “ ಇದು ಎಲ್ಲ ಸಂಬಂಧಗಳಲ್ಲೂ ನಡೆಯುತ್ತದೆ, ನಿಮ್ಮ ಸಮಸ್ಯೆಗಳು ನೀವು ಅಂದುಕೊಂಡಿರುವಷ್ಟು ಸಂಕೀರ್ಣವಾಗಿಲ್ಲ. ಎಲ್ಲವೂ ಸರಿಹೋಗುತ್ತದೆ  ” ಎಂದು ಹೇಳುತ್ತಾರೆ. ಆದರೆ ಈ ಮಾತುಗಳು ಲಕ್ಷ್ಮಿಯ ಮನಸ್ಸಿಗೆ ಸಮಾಧಾನ ತರುವುದಿಲ್ಲ. ಬದಲಾಗಿ ಲಕ್ಷ್ಮಿ ಸ್ವತಃ ತಾವೇ ಯೋಚಿಸುತ್ತಾರೆ , ಸಣ್ಣ ಸಮಸ್ಯೆಯನ್ನು ದೊಡ್ಡದಾಗಿ ಮಾಡುತ್ತಿರುವೆನೇ ಎನಿಸುತ್ತದೆ. ಲಕ್ಷ್ಮಿ ಎಲ್ಲವನ್ನೂ ಕಳೆದುಕೊಂಡವರಂತೆ ನಿರಾಶರಾಗುತ್ತಾರೆಯೇ ?

ರಾಜನ್ ತನ್ನ ಸಮಸ್ಯೆಯನ್ನು ಸೋದರ ಸಂಬಂಧಿಯೊಬ್ಬರಿಗೆ ತನ್ನ ಸಮಸ್ಯೆಯನ್ನು ಹೇಳಿದಾಗ ಅವರು “ ಇದನ್ನೆಲ್ಲಾ ಹೇಳಬೇಡ ! ನಮ್ಮ ಕುಟುಂಬಕ್ಕೆ ನೀನು ಮಾದರಿ ವ್ಯಕ್ತಿಯಾಗಿದ್ದು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದೀಯ. ನೀನು ಒಂದು ಕಂಪನಿಯನ್ನು ನಡೆಸುತ್ತಿದ್ದೀಯ ಎಂದ ಮೇಲೆ ಇವೆಲ್ಲಾ ಯಾವ ಲೆಕ್ಕ ? ಸದಾ ನೆಮ್ಮದಿಯಿಂದಿರಲು ನೀನೇನೂ ಸಂತನಲ್ಲ. ಈಗ ಉತ್ಸಾಹದಿಂದಿರು ” ಎಂದು ಹೇಳುತ್ತಾರೆ. ರಾಜನ್ ಗೊಂದಲಕ್ಕೆ ಸಿಲುಕುತ್ತಾರೆ. ಅವರ ಹಗುರಾದ ತಮಾಷೆಯ ಮಾತುಗಳು ಸಮಾಧಾನ ನೀಡುವುದಿಲ್ಲ. ತಾನು ಯಾವುದೋ ಗೊಂದಲದಲ್ಲಿರುವುದು ಸರಿಯಲ್ಲ ಎಂದು ಭಾವಿಸಿ ಮತ್ತು ಇತರರಿಗೆ ಹೇಳಕೂಡದು ಎಂದುಕೊಳ್ಳುತ್ತಾರೆ.

ಸ್ನೇಹಿತರೊಡನೆ ಅಥವಾ ಕುಟುಂಬದ ಸದಸ್ಯರೊಡನೆ ಮಾತನಾಡುವುದು ಉಪಯುಕ್ತವಾಗಬಹುದು. ಸ್ನೇಹಿತರ ಸಲಹೆ ಒಳ್ಳೆಯ ಉದ್ದೇಶವನ್ನೇ ಹೊಂದಿರಬಹುದು. ಆದರೂ ಅಲ್ಲಿ ಅವರ ವೈಯ್ಯಕ್ತಿಕ ನಿರ್ಧಾರ ಅಥವಾ ಪಕ್ಷಪಾತದ ಧೋರಣೆ ಇರುತ್ತದೆ. ಕೆಲವೊಮ್ಮೆ ಇತರರೊಡನೆ ಮಾತನಾಡಿದರೆ ಅವರಿಗೆ ಹೊರೆಯಾಗುತ್ತದೇನೋ ಎಂಬ ಆತಂಕವೂ ಇರುತ್ತದೆ. ಇತರರು ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ, ಪರಿಸ್ಥಿತಿಗೆ ಸ್ಪಂದಿಸಲೂ ಆಗದಿರಬಹುದು ಅಥವಾ ಅವರದೇ ಯೋಚನೆಯಲ್ಲಿ ಮುಳುಗಿರಬಹುದು. ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ನಮ್ಮ ನೋವು ತುಂಬಿದ ಭಾವನೆಗಳನ್ನು, ಉದ್ವೇಗವನ್ನು ಕೇಳಿಸಿಕೊಳ್ಳದೆಯೂ ಇರಬಹುದು. ಮುಜುಗರವಿಲ್ಲದೆ ನಿಭಾಯಿಸಲು ಅಶಕ್ತರಾಗಿರಬಹುದು.

ಆದರೆ ಒಬ್ಬ ಸಮಾಲೋಚಕರು ವಿಶಿಷ್ಟ ಸ್ಥಾನ ಹೊಂದಿರುತ್ತಾರೆ. ಅವರು ಸ್ನೇಹಿತರೂ ಅಲ್ಲ, ಕುಟುಂಬದ ಸದಸ್ಯರೂ ಅಲ್ಲ. ಸಾಮಾಜಿಕವಾಗಿ ತಮ್ಮ ಬಳಿ ಬರುವವರೊಡನೆ ಸಂಬಂಧವನ್ನೇ ಹೊಂದಿರುವುದಿಲ್ಲ. ಸಮಾಲೋಚಕರು ಉದ್ದೇಶಪೂರಿತ ಸಂಬಂಧವನ್ನು ಕಲ್ಪಿಸುತ್ತಾರೆ ಮತ್ತು ಸುರಕ್ಷಿತವಾದ, ಯಾವುದೇ ಪೂರ್ವ ನಿರ್ಧರಿತ ಭಾವನೆಗಳಿಲ್ಲದೆ, ಸಮಸ್ಯೆ ಎಷ್ಟೇ ಕಷ್ಟವಾಗಿದ್ದರೂ, ಎಷ್ಟೇ ನೋವಿನಿಂದ ಕೂಡಿದ್ದರೂ, ವಿಶ್ವಾಸಪೂರ್ವವಾದ ವಾತಾವರಣದಲ್ಲಿ ಒಬ್ಬರ ಅನುಭವಗಳನ್ನು ಕುರಿತು, ಮಾತನಾಡುತ್ತಾರೆ.  ಸಮಾಲೋಚಕರು ತರಬೇತಿ ಪಡೆದ ವೃತ್ತಿಪರರಾಗಿದ್ದು ತಾತ್ವಿಕ ಹಿನ್ನೆಲೆಯನ್ನು ಹೊಂದಿರುತ್ತಾರೆ. ಚಿಕಿತ್ಸಕ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಮತ್ತು ತನ್ನ ಬಳಿ ಬರುವ ಗಿರಾಕಿಗಳ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ಸಲಹೆಯ ಮಾದರಿಯನ್ನು, ಧೋರಣೆಯನ್ನು ರೂಪಿಸಿಕೊಳ್ಳುತ್ತಾರೆ. ಸಮಾಲೋಚಕರು ತಮ್ಮ ಗಿರಾಕಿಗಳ ಭಾವನೆಗಳಿಗೆ ಸ್ಪಂದಿಸುತ್ತಲೇ ಅವರಿಗೆ ಬೆಂಬಲ ನೀಡುತ್ತಾರೆ, ವಿಶ್ವಾಸ ಹೆಚ್ಚಿಸುತ್ತಾರೆ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಸೂಕ್ತ ಸಂದರ್ಭದಲ್ಲಿ ಅವರ ನಿಲುವುಗಳನ್ನು ಪ್ರಶ್ನಿಸುತ್ತಾರೆ. ಆಪ್ತ ಸಮಾಲೋಚನೆ ಎಂದರೆ ಕೇವಲ ಒಂದು ಸಮಸ್ಯೆಯನ್ನು ಸರಿಪಡಿಸಲು ಸಲಹೆ ನೀಡುವುದು ಮಾತ್ರವೇ ಅಲ್ಲ ಬದಲಾಗಿ, ಸಮಾಲೋಚನೆ ಪಡೆಯುವವರು ತಮ್ಮನ್ನು ತಾವೇ ಅರ್ಥ ಮಾಡಿಕೊಳ್ಳಲು ನೆರವಾಗುವ ಒಂದು ಪ್ರಕ್ರಿಯೆಯಾಗಿ, ಅವರಿಗೆ ತಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ನಿಭಾಯಿಸುವ ಸಾಮರ್ಥ್ಯವನ್ನು ಪಡೆಯಲು ನೆರವಾಗುವ ಒಂದು ಮಾರ್ಗವಾಗಿರುತ್ತದೆ.

ಪ್ರತಿಯೊಬ್ಬ ಸಮಾಲೋಚಕರೂ ತಮ್ಮದೇ ಆದ ಕಾರ್ಯ ಶೈಲಿಯನ್ನು ಹೊಂದಿರುತ್ತಾರೆ. ಆದಾಗ್ಯೂ ತನ್ನ ಬಳಿ ಬರುವ ಗಿರಾಕಿಗಳ ಸಮಸ್ಯೆಗಳ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಅವರೊಡನೆ ಕೊಂಚ ಸಮಯ ಕಳೆಯುವುದು ಅಗತ್ಯ ಹಾಗೂ ತಮ್ಮ ಬಳಿಗೆ ಏಕೆ ಬಂದಿದ್ದಾರೆ ಎಂದು ಅರ್ಥಮಾಡಿಕೊಳ್ಳುವುದು ಅಗತ್ಯ. ಸಮಾಲೋಚಕರು ಗಿರಾಕಿಗಳ ಕುಟುಂಬ, ಸಂಬಂಧಗಳು, ಆರೋಗ್ಯದ ಹಿನ್ನೆಲೆಯನ್ನು ಗುರುತಿಸಿ ತಾವು ನೀಡುವ ಚಿಕಿತ್ಸೆಯ ಗುರಿಯನ್ನು ನಿರ್ಧರಿಸುತ್ತಾರೆ. ನಂತರ ಚಿಕಿತ್ಸಾ ಪ್ರಕ್ರಿಯೆಯಲ್ಲಿ ತೊಡಗುವ ಸಮಾಲೋಚಕರು ತಮ್ಮ ಗುರಿಯನ್ನು ತಲುಪಲು ಯತ್ನಿಸುತ್ತಾರೆ.

ಸಮಾಲೋಚಕರು ವೃತ್ತಿಪರ ವೈದ್ಯರಲ್ಲ. ಅವರು ಯಾವುದೇ ತಪಾಸಣೆ ಮಾಡುವುದಿಲ್ಲ ಅಥವಾ ಔಷಧಿಗಳನ್ನು ಸೂಚಿಸುವುದಿಲ್ಲ. ಸಮಾಲೋಚಕರು ಮಾನಸಿಕ ಖಾಯಿಲೆಗಳಿಗೆ ಸಂಬಂಧಿಸಿದಂತೆ ಮಾನಸಿಕ ಚಿಕಿತ್ಸಕರು ಅಥವಾ ಮನಶ್ಶಾಸ್ತ್ರಜ್ಞರೊಡನೆ ಸಂಪರ್ಕವನ್ನು ಇಟ್ಟುಕೊಂಡು ತಮ್ಮ ಬಳಿ ಬರುವ ಗಿರಾಕಿಗಳ ಚಿಕಿತ್ಸೆಗೆ ನೆರವಾಗಬಹುದು.

** ಮೇಲೆ ಉಲ್ಲೇಖಿಸಿರುವ ಘಟನೆಗಳಲ್ಲಿ ಬಳಸಿರುವ ವ್ಯಕ್ತಿಗಳ ಹೆಸರು ಕೇವಲ ಉದಾಹರಣೆಗೆ ಬಳಸಲಾಗಿದ್ದು ಯಾವುದೇ ವ್ಯಕ್ತಿಗಳಿಗೆ ಸಂಬಂಧಿಸಿರುವುದಿಲ್ಲ.

ಅರ್ಚನ  ರಾಮನಾಥನ್ ಅವರು ಪರಿವರ್ತನ ಸಮಾಲೋಚಕ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ವೃತ್ತಿಪರ ಸಮಾಲೋಚಕರಾಗಿದ್ದಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org