ಮದ್ಯಪಾನ : ದುರಾಚಾರ

ಮದ್ಯಪಾನವು ಚಟವಾಗಲು ಕಾರಣಗಳೇನು? ಮದ್ಯದ ಅವಲಂಬನೆ ಎಂದರೇನು? ವ್ಯಸನದ ಲಕ್ಷಣಗಳಾವುವು? ವ್ಯಸನವನ್ನು ಗುರುತಿಸುವುದು ಹೇಗೆ? ವ್ಯಸನದಿಂದ ಹೊರ ಬರಲು ಏನು ಮಾಡಬೇಕು?

ಪರಸ್ಪರ ಸಂಬಂಧಗಳಲ್ಲಿ, ಶರೀರ, ಮನಸ್ಸು, ಹಾಗೂ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವದೆಂಬ ಅರಿವಿದ್ದರೂ ಮತ್ತೆ ಮತ್ತೆ ಮದ್ಯಪಾನ ಮಾಡುವಂತೆ ವ್ಯಕ್ತಿಯನ್ನು ಪ್ರೇರೇಪಿಸುವ ಸ್ಥಿತಿಯನ್ನು ಮದ್ಯಪಾನ ದುರಾಚಾರ ಅಥವಾ ಅಲ್ಕೋಹಾಲ್ ಅಬ್ಯೂಸ್ (alochol abuse) ಎಂದು ಹೇಳಬಹುದು. ಯಾವ ವ್ಯಕ್ತಿಗೆ ಕುಡಿತವನ್ನು ಒಮ್ಮೆ ಆರಂಭಿಸಿದರೆ ಮತ್ತೆ ನಿಲ್ಲಿಸಲು ಆಗುವುದಿಲ್ಲವೋ ಅವರನ್ನು ಕುಡಿತದ ಚಟದಿಂದ ನರಳುತ್ತಿರುವವರು ಎಂದು ಹೇಳಲಾಗುತ್ತದೆ.

ಭಾರತದಲ್ಲಿ 30% ಪುರುಷ ಮತ್ತು 5% ಮಹಿಳೆಯರು ನಿರಂತರವಾಗಿ ಮದ್ಯಪಾನ ಮಾಡುತ್ತಾರೆಂದು ಅಂದಾಜಿಸಲಾಗಿದೆ. ಹೆಚ್ಚಿನ ಯುವಜನರು ಮೊದಲಿಗೆ ಕುತೂಹಲಕ್ಕಾಗಿ ಅಥವಾ ಸ್ನೇಹಿತರ ಒತ್ತಡಕ್ಕೆ ಮಣಿದು ಕುಡಿತ ಆರಂಭಿಸುತ್ತಾರೆ. ನಂತರ ಅದು ಚಟವಾಗಿ ಮಾರ್ಪಾಡಾಗುತ್ತದೆ. ಅಧ್ಯಯನವೊಂದರ ಪ್ರಕಾರ 1980ರ ದಶಕದಲ್ಲಿ ಮೊದಲ ಬಾರಿಗೆ ಕುಡಿತ ಪ್ರಾರಂಭಿಸುವವರ ವಯಸ್ಸು ಸರಾಸರಿ 28 ವರ್ಷ ಆಗಿತ್ತು. ಈಗ ಅದು 17 ವರ್ಷಕ್ಕೆ ಬಂದಿಳಿದಿದೆ.1

ಬಿಯರ್, ವೈನ್ ಮತ್ತು ಇನ್ನಿತರ ಮದ್ಯಪಾನೀಯಗಳ (ಪಟ್ಟಣಗಳಲ್ಲಿ ಹೆಚ್ಚಾಗಿ ಬಳಸಲ್ಪಡುವ) ಹೊರತಾಗಿ, ಹೆಂಡ, ಸಾರಾಯಿ, ದಾರು ಮತ್ತು ಇತರ ಸ್ಥಳೀಯ ಮದ್ಯಗಳ ಬಳಕೆ ಗ್ರಾಮೀಣ ಭಾಗವನ್ನು ಆವರಿಸಿದೆ. ಈ ಎಲ್ಲಾ ಪಾನೀಯಗಳು ಈಥೈಲ್ ಆಲ್ಕೊಹಾಲ್ ಗುಣ ಹೊಂದಿದ್ದು, ಅವುಗಳಲ್ಲಿರುವ ಮೂಡ್ ಬದಲಾಯಿಸುವ ಅಂಶವು ದೇಹದ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಂದು ಮದ್ಯ ಪಾನೀಯಗಳಲ್ಲಿ ಈಥೈಲ್ ಆಲ್ಕೊಹಾಲ್ ಪ್ರಮಾಣ ಮಾತ್ರ ಬೇರೆ ಬೇರೆಯಾಗಿರುತ್ತದೆ.

ವ್ಯಕ್ತಿಯೊಬ್ಬ ಮದ್ಯಪಾನ ಮಾಡಿದಾಗ, ಅದು ಅವರ ರಕ್ತದಲ್ಲಿ ಒಂದಾಗಿ ಇಡೀ ದೇಹಕ್ಕೆ ಸರಬರಾಜಾಗುತ್ತದೆ. ವ್ಯಕ್ತಿಯು ಮಂಪರುಗೊಂಡವನಂತೆ, ತೂಕತಪ್ಪಿದವನಂತೆ ವರ್ತಿಸತೊಡಗುತ್ತಾನೆ. ಒಂದು ಸಲಕ್ಕೆ ಸೇವಿಸಿದ ಮದ್ಯವು ದೇಹದ ಮೇಲೆ ಒಂದೆರಡು ಗಂಟೆಗಳ ಕಾಲ ಪರಿಣಾಮ ಬೀರಬಹುದು. ವ್ಯಕ್ತಿಗೆ ತಾವು ಆರಾಮವಾಗಿ ಮತ್ತು ಆನಂದದಿಂದ ಇರುವ ಭಾವನೆಯನ್ನು ಹುಟ್ಟುಹಾಕಬಹುದು. ಇದನ್ನು ಪಾನಮತ್ತತೆ ಎಂದು ಕರೆಯಬಹುದು.

ಕ್ರಮೇಣವಾಗಿ ಇದರ ಪರಿಣಾಮ ಕಡಿಮೆಯಾದಂತೆಲ್ಲ ವ್ಯಕ್ತಿಯು ಗೊಂದಲದಲ್ಲಿ, ಮಂಪರಿನಲ್ಲಿರುವಂತೆ ವರ್ತಿಸುತ್ತಾರೆ. ಮದ್ಯಪಾನವು ಸಂಕೋಚವನ್ನು ಕಡಿಮೆಗೊಳಿಸಿ, ವ್ಯಕ್ತಿಯ ಸರಾಗ ಚಲನೆಯನ್ನು ಅಡ್ಡಿಪಡಿಸಿ, ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆಯಾದರೂ ಲೈಂಗಿಕ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

ಮದ್ಯಪಾನ ವ್ಯಸನವು ದೀರ್ಘಕಾಲ ಕಾಡುವ ಮತ್ತು ಮರುಕಳಿಸುವ ಮಿದುಳಿನ ಅಸ್ವಸ್ಥತೆಯಾಗಿದೆ. ಇದರಿಂದಾಗಿ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ನೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ಮದ್ಯವು ಮಾನವನ ಮಿದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?

ಮಾತನಾಡಲು, ಕಾರ್ಯನಿರ್ವಹಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುವ ಮಿದುಳಿನ ಭಾಗಗಳ ಮೇಲೆ ಮದ್ಯವು ಪರಿಣಾಮ ಬೀರುತ್ತದೆ. ಅಪರೂಪಕ್ಕೆ ಮದ್ಯಪಾನ ಮಾಡುವ ವ್ಯಕ್ತಿಗಳ ಕೆಲವು ಉದಾಹರಣೆಗಳಲ್ಲಿ, ಮಿದುಳು ಆ ಪರಿಣಾಮಗಳಿಂದ ಹೊರಬಂದು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮದ್ಯಸೇವನೆಯನ್ನು ನಿರಂತರವಾಗಿ ಅವಲಂಬಿಸಿರುವ ವ್ಯಕ್ತಿಗಳಲ್ಲಿ, ಅವರ ದೇಹವು ಮದ್ಯದ ಪರಿಣಾಮದಿಂದ ಚೇತರಿಸಿಕೊಂಡರೂ ಮಿದುಳು ಚೇತರಿಸಿಕೊಳ್ಳಲು ಅಸಮರ್ಥವಾಗುತ್ತದೆ.

ದೀರ್ಘಕಾಲದ ಮದ್ಯಸೇವನೆಯಿಂದ ಕೆಳಗೆ ಹೇಳಲಾದ ಸಮಸ್ಯೆಗಳು ಉದ್ಭವಿಸಬಹುದು-

  • ಜ್ಞಾಪಕ ಶಕ್ತಿಯ ನಷ್ಟ
  • ಖಿನ್ನತೆ
  • ಕಿರಿಕಿರಿ ಅಥವಾ ಮನಸ್ಥಿತಿ ಬದಲಾವಣೆ
  • ಅಧಿಕ ರಕ್ತದೊತ್ತಡ
  • ಭ್ರೂಣಕ್ಕೆ ತೊಂದರೆ
  • ಕ್ಯಾನ್ಸರ್ ತಗುಲಬಹುದಾದ ಅಪಾಯದ ಹೆಚ್ಚಳ
  • ಬುದ್ದಿಮಾಂದ್ಯತೆ ಸಂಭವಿಸುವ ಅಪಾಯದ ಹೆಚ್ಚಳ
  • ಲಿವರ್ಗೆ ಹಾನಿ
  • ಮಿದುಳಿನ ಜೀವಕೋಶಗಳ ಕುಗ್ಗುವಿಕೆ
  • ಹೃದಯ ಸ್ನಾಯುಗಳ ದೌರ್ಬಲ್ಯ ಮತ್ತು ಪಾರ್ಶ್ವವಾಯುವಿನ ತೊಂದರೆ
  • ಅಜೀರ್ಣದ ತೊಂದರೆಗಳು
  • ಲೈಂಗಿಕ ದೌರ್ಬಲ್ಯ
  • ಅಕಾಲಿಕ ಮುಪ್ಪು
  • ಬೌದ್ಧಿಕ ಕಾರ್ಯಚಟುವಟಿಕೆಯ ಹಾನಿ

ಶಾರೀರಿಕ ಬದಲಾವಣೆಗಳೊಂದಿಗೆ, ಮದ್ಯಸೇವನೆಯು ವ್ಯಕ್ತಿಗಳ ಪರಸ್ಪರ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ. ಭಾರತದಲ್ಲಿ ಹೆಚ್ಚಿನ ಕೌಟುಂಬಿಕ ಹಿಂಸಾ ಪ್ರಕರಣಗಳು ಮತ್ತು ರಸ್ತೆ ಅಪಘಾತಗಳು ಮದ್ಯಸೇವನೆಯಿಂದಾಗಿ ಸಂಭವಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಮದ್ಯ ವ್ಯಸನದ ಕುರಿತಾದ ಕೆಲವು ವಾಸ್ತವಾಂಶಗಳು

  • ಮದ್ಯಸೇವಿಸುವ ಪ್ರತಿ ಇಬ್ಬರಲ್ಲಿ ಒಬ್ಬನು ತೀವ್ರವಾಗಿ ಆ ವ್ಯಸನಕ್ಕೆ ಬಲಿಬೀಳುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿಸಿದೆ.
  • ಮದ್ಯ ಸೇವಿಸುವ ವ್ಯಕ್ತಿಗಳು ಮದ್ಯ ಸೇವಿಸದ ವ್ಯಕ್ತಿಗಳಿಗಿಂತ ಮೂರು ಪಟ್ಟು ಹೆಚ್ಚು ಗಂಭೀರ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿದೆ.
  • ಭಾರತದ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರತೀ ಐದು ರೋಗಿಗಳಲ್ಲಿ ಒಬ್ಬರು ನೇರವಾಗಿ ಮದ್ಯವ್ಯಸನಕ್ಕೆ ಸಂಬಂಧಿಸಿದವರಾಗಿರುತ್ತಾರೆ.
  • ಮಿದುಳಿನ ಗಾಯಕ್ಕೆ ಸಂಬಂಧಿಸಿ ಆಸ್ಪತ್ರೆಗಳಲ್ಲಿ ದಾಖಲಾಗುವ ಐವರಲ್ಲಿ ಒಬ್ಬರು, ಹಾಗೂ ಉಳಿದ ಗಾಯಾಳುಗಳಲ್ಲಿ ಎರಡನೇ ಮೂರರಷ್ಟು ರೋಗಿಗಳು ಮದ್ಯಪಾನ ವ್ಯಸನಕ್ಕೆ ಸಂಬಂಧಿಸಿದವರಾಗಿರುತ್ತಾರೆ.
  • ಮದ್ಯ ಸೇವನೆ ಮಾಡುವವರು ಹಿಂಸೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಅವರ ಸಂಗಾತಿಗಳೊಂದಿಗೆ ಆ ಸಾಧ್ಯತೆ ಅಧಿಕ. ಈ ರೀತಿಯ ಹಿಂಸೆಯು ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಅಥವಾ ಆರ್ಥಿಕವಾಗಿಯೂ ಕೂಡ ನಡೆಯಬಹುದು.
  • ಮದ್ಯಪಾನ ವ್ಯಸನಕ್ಕೆ ದಾಸರಾದವರು ಆತ್ಮಹತ್ಯೆ ಪ್ರಯತ್ನ ಮಾಡಬಹುದು, ಅಥವಾ ಅಪಾಯಕಾರಿಯಾದ ಲೈಂಗಿಕ ವರ್ತನೆ ತೋರಬಹುದು. ಅಥವಾ HIV ಸೋಂಕು, ಕ್ಷಯ, ಅನ್ನನಾಳದ ಕ್ಯಾನ್ಸರ್ (Food pipe cancer), ಲಿವರ್ನ ರೋಗ ಮತ್ತು ಕರುಳಿನ ಹುಣ್ಣುಗಳಿಗೆ ಒಳಗಾಗಬಹುದು.

ಪಾನಕೇಳಿ (ಕಂಠಮಟ್ಟ ಕುಡಿತ) ಎಂದರೇನು?

ದೀರ್ಘಕಾಲದಿಂದ ಮದ್ಯಸೇವನೆ ಮಾಡುವುದು ಮಾತ್ರ ಆರೋಗ್ಯಕ್ಕೆ ಹಾನಿಕರ ಎಂದು ಹೆಚ್ಚಿನ ಜನರು ತಿಳಿದಿದ್ದಾರೆ. ಕಂಠಮಟ್ಟದವರೆಗಿನ ಅತಿಯಾದ ಕುಡಿತ ಕೂಡ ಜ್ಞಾಪಕ ಶಕ್ತಿಯ ನಷ್ಟಕ್ಕೆ, ವಿಷಕಾರಕ ಸ್ಥಿತಿಗೆ, ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು.

ಪುರುಷರು ಒಂದು ಬಾರಿಗೆ (ಎರಡು ಗಂಟೆಗಳ ಅವಧಿಯಲ್ಲಿ) ಐದಕ್ಕಿಂತ ಹೆಚ್ಚು ಪೆಗ್ ಮದ್ಯಪಾನ ಮಾಡುವುದನ್ನು (ಅಥವಾ ಐದು ಚಿಕ್ಕ ಗ್ಲಾಸ್‌ಗಳಲ್ಲಿ ವೈನ್ ಕುಡಿಯುವುದು) ಪಾನಕೇಳಿ (ಕಂಠಮಟ್ಟದ ಕುಡಿತ) ಅಥವಾ ಅತಿಯಾದ ಕುಡಿತ ಎನ್ನಲಾಗುತ್ತದೆ.

ಮಹಿಳೆಯರಲ್ಲಿ ಈ ಪ್ರಮಾಣ ನಾಲ್ಕು ಪೆಗ್ಗಳಿಗೆ ಅನ್ವಯಿಸುತ್ತದೆ. ಪಾನಕೇಳಿಯಲ್ಲಿ ಮದ್ಯ ಸೇವಿಸುವ ಕುಡುಕರು ಗಟಗಟನೆ ಕುಡಿಯುತ್ತಾರೆ ಮತ್ತು ಕುಡಿಯಬೇಕೆಂಬ ಉದ್ದೇಶದಿಂದ ಕುಡಿಯುತ್ತಾರೆ. ಅಂತವರು ವ್ಯಸನಿಗಳಾಗಿರುವುದಿಲ್ಲ ಅಥವಾ ಮದ್ಯಪಾನ ಮಾಡದೇ ಇರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿರುವುದಿಲ್ಲ. ಅವರು ಮದ್ಯ ಸೇವನೆಯಿಲ್ಲದೆಯೂ ಚಟುವಟಿಕೆಗಳನ್ನು ನಿರ್ವಹಿಸಬಲ್ಲರು.

ಪಾನಕೇಳಿ ಕುಡಿತದ ಸಂದರ್ಭದಲ್ಲಿ, ಸೇವಿಸುವ ಪ್ರತಿಯೊಂದು ಪೆಗ್ ಅಲ್ಕೊಹಾಲ್ ಕೂಡ ಕುಡಿಯುವವನ ಮಿದುಳು ಮತ್ತು ದೇಹದ ಮೇಲೆ ಹೆಚ್ಚಾಗಿ ಪರಿಣಾಮವನ್ನುಂಟುಮಾಡುತ್ತದೆ. ತನ್ನನ್ನು ತಾನು ಸಂಭಾಳಿಸಲಾಗದಷ್ಟು ಮಟ್ಟಕ್ಕೆ ಅತಿಯಾದ ಕುಡಿಯುವುದು ವ್ಯಕ್ತಿಯನ್ನು ವಾಂತಿಯಿಂದ ಉಸಿರುಗಟ್ಟಿಸುವಂತೆ ಮಾಡುತ್ತದೆ. ಇದು ಮಿದುಳಿನ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕೂಡ ಕಡಿಮೆ ಮಾಡುತ್ತದೆ. ಇದರಿಂದಾಗಿ ವ್ಯಕ್ತಿಯು ಅಸುರಕ್ಷಿತ ಲೈಂಗಿಕ ಕ್ರಿಯೆಗೆ ತೊಡಗುವಂತಾಗಬಹುದು ಅಥವಾ ಅಪಾಯಕಾರಿ ವರ್ತನೆಯನ್ನು ತೋರಬಹುದು.

ದೀರ್ಘಕಾಲದಿಂದ ಅಭ್ಯಾಸಗೊಂಡ ಪಾನಕೇಳಿ ಕುಡಿತದ ಕ್ರಮದಿಂದ ಕ್ಯಾನ್ಸರ್, ಮಾನಸಿಕ ತೊಂದರೆಗಳಾದ ಖಿನ್ನತೆ ಅಥವಾ ಆತಂಕ,ಮಿದುಳಿನ ಶಾಶ್ವತವಾದ ಹಾನಿ ಮುಂತಾದ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚು.

ಮದ್ಯವ್ಯಸನವನ್ನು ಗುರುತಿಸುವುದು ಹೇಗೆ?

ಬಹಳಷ್ಟು ಜನರಿಗೆ ಒಂದು ಅಥವಾ ಎರಡು ಪೆಗ್ ಸೇವನೆಗೆ ತಮ್ಮನ್ನು ಮಿತಿಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅವರು ಮದ್ಯ ಅವಲಂಬಿತರಾಗಿರುವುದಿಲ್ಲ. ಯಾರು ಮದ್ಯದ ಗೀಳು ಅಂಟಿಸಿಕೊಂಡಿರುತ್ತಾರೊ ಅವರಿಗೆ ತಾವೆಷ್ಟು ಪ್ರಮಾಣದಲ್ಲಿ ಈ ಚಟಕ್ಕೆ ಅವಲಂಬಿತರಾಗಿದ್ದೇವೆ ಎಂದು ಗೊತ್ತೇ ಇರುವುದಿಲ್ಲ. ಅಂತಹ ಕೇಸುಗಳಲ್ಲಿ, ವ್ಯಕ್ತಿಗಳಿಗೆ ಅಥವಾ ಅವರ ಪ್ರೀತಿ ಪಾತ್ರರಿಗೆ, ಅವರ ಮದ್ಯಪಾನವು ವ್ಯಸನವಾಗಿ ಬದಲಾಗುತ್ತಿದೆ ಎಂದು ಮನವರಿಕೆಯಾಗಲು ಕೆಲವು ಸೂಚನೆಗಳು ಸಹಾಯ ಮಾಡುತ್ತವೆ.

ಯಾವ ವ್ಯಕ್ತಿಗಳು ಮದ್ಯವ್ಯಸನಕ್ಕೆ ಬಲಿಯಾಗಿರುತ್ತಾರೆಯೋ ಅವರಿಗೆ ತಾವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯಪಾನ ಮಾಡಿ ಸಹಿಸಿಕೊಳ್ಳಬಹುದು ಎಂದು ಅನಿಸುತ್ತದೆ. ಅಂದರೆ, ಅಲ್ಲಿಯವರೆಗೆ ಎರಡು ಪೆಗ್ ಕುಡಿದ ನಂತರದಲ್ಲಿ ಏನು ಕಿಕ್ ಅನುಭವಿಸುತ್ತಿದ್ದರೋ ಅದನ್ನು ಅನುಭವಿಸಲು ಈಗ ಐದು ಅಥವಾ ಆರು ಪೆಗ್ ಬೇಕಾಗುತ್ತದೆ ಎಂಬ ಮಟ್ಟಕ್ಕೆ ಅವರು ಕುಡಿಯಲು ಪ್ರಾರಂಭಿಸಬಹುದು.

ವಿಥ್ ಡ್ರಾವಲ್ ಸಿಂಪ್ಟಮ್ಸ್ ಕೂಡ ಸಂಭವನೀಯ ಮದ್ಯವ್ಯಸನದ ಸಾಧ್ಯತೆಯನ್ನು ಸೂಚಿಸುತ್ತವೆ. ಯಾವಾಗ ವ್ಯಕ್ತಿ ಕುಡಿತವನ್ನು ನಿಲ್ಲಿಸುತ್ತಾನೋ, ಆಗ ಅವರು ಅತಿಯಾದ ಭಾವನಾತ್ಮಕ ಹಾಗೂ ದೈಹಿಕ ವಿಥ್ ಡ್ರಾವಲ್ ಸಿಂಪ್ಟಮ್ಸ್ ಗಳಾದ ನಡುಕ, ಹೆದರಿಕೆ, ಬೆವರುವಿಕೆ, ವಾಕರಿಕೆ ಅಥವಾ ಕಿರಿಕಿರಿಯನ್ನು ಅನುಭವಿಸಬಹುದು. ಈ ಲಕ್ಷಣಗಳು ನಿಮ್ಮ ಅನುಭವಕ್ಕೆ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಮದ್ಯವ್ಯಸನದ ರೋಗ ನಿರ್ಣಯ:

ನೀವು ಮದ್ಯವ್ಯಸನಕ್ಕೆ ಒಳಗಾಗಿದ್ದೀರಾ ಎಂದು ಗುರುತಿಸಲು ಅನೇಕ ತಪಾಸಣೆಗಳಿವೆ. ಇವುಗಳಲ್ಲಿ ಕೆಲವು ಸ್ವತಃ ಮಾಡಿಕೊಳ್ಳುವಂತಹದ್ದು, ಉಳಿದ ಕೆಲವು ಪರೀಕ್ಷೆಗಳಿಗೆ ಸೂಕ್ತ ತರಬೇತಿ ಪಡೆದ ಮಾನಸಿಕ ಆರೋಗ್ಯ ವೃತ್ತಿಪರರ ಸಹಾಯ ಅಗತ್ಯ.

ಮದ್ಯವ್ಯಸನಕ್ಕೆ ಸಂಬಂಧಿಸಿದ ಸಿಎಜಿಇ (CAGE) ಪರೀಕ್ಷೆಯು ಸರಳವಾದ ಪರೀಕ್ಷೆಯಾಗಿದ್ದು ಸ್ವತಃ ನೀವೇ ಮಾಡಿಕೊಳ್ಳಬಹುದು. ಇದು ನಾಲ್ಕು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

  • ನಿಮ್ಮ ಕುಡಿತವನ್ನು ಯಾವಾಗಲಾದರು ಕಡಿಮೆಮಾಡಬೇಕೆಂದು ನೀವು ಅಂದುಕೊಂಡಿದ್ದೀರಾ?
  • ನಿಮ್ಮ ಕುಡಿತವನ್ನು ಯಾರಾದರೂ ಟೀಕಿಸಿದಾಗ ನೀವು ಮುಜುಗರಕ್ಕೀಡಾಗಿದ್ದೀರಾ?
  • ಕುಡಿತದ ಕಾರಣಕ್ಕೆ ನೀವು ಎಂದಾದರೂ ತಪ್ಪಿತಸ್ಥ ಭಾವನೆ ಅನುಭವಿಸಿದ್ದೀರಾ?
  • ಹಿಂದಿನ ದಿನದ ಹ್ಯಾಂಗ್ ಓವರ್ ತಪ್ಪಿಸಿಕೊಳ್ಳಲು ಮುಂಜಾನೆ ಎದ್ದಕೂಡಲೇ ಪೆಗ್ ಸೇವಿಸಿದ್ದುಂಟೇ?

ಈ ಮೇಲಿನ ಪ್ರಶ್ನೆಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎಂದಾದಲ್ಲಿ ನೀವು ಮದ್ಯ ವ್ಯಸನಿ ಆಗಿದ್ದೀರಿ ಹಾಗೂ ಅದರಿಂದ ಹೊರಬರಲು ನಿಮಗೆ ಸಹಕಾರ ಅಗತ್ಯ.

ಮದ್ಯ ವ್ಯಸನದ ಕುರಿತಾದ ಆಡಿಟ್ ಟೆಸ್ಟನ್ನು ಕೂಡ ಮದ್ಯ ಸೇವನೆಯ ತೊಂದರೆಗಳನ್ನು ನಿರ್ಣಯ ಮಾಡಲು ಉಪಯೋಗಿಸಲಾಗುತ್ತದೆ.

ಚಿಕಿತ್ಸೆ:

ಮದ್ಯ ಸೇವನೆಯಿಂದ ಹೊರ ಬರುವ ಮೊದಲ ಹೆಜ್ಜೆಯೆಂದರೆ ನಿಮಗೆ ತೊಂದರೆಯಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಮತ್ತು ಸಹಾಯ ಪಡೆಯುವುದು. ನೀವು ವೈದ್ಯರನ್ನು ಭೇಟಿಮಾಡಿ ಅಥವಾ ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರು, ಯಾರು ನಿಮಗೆ ಈ ಹಂತದಲ್ಲಿ ಬೆಂಬಲ ನೀಡುತ್ತಾರೊ ಅವರೊಂದಿಗೆ ಈ ಕುರಿತು ಮಾತನಾಡಿ. ವೈದ್ಯರು ಮೊದಲು ನಿಮಗಿರುವ ವ್ಯಸನದ ತೊಂದರೆಯನ್ನು ಗುರುತಿಸಲು ನಿಮ್ಮೊಂದಿಗೆ ಚರ್ಚಿಸುತ್ತಾರೆ ಮತ್ತು ಸಮಸ್ಯೆಯ ತೀವ್ರತೆ ಎಷ್ಟೆಂದು ನಿರ್ಣಯಿಸುತ್ತಾರೆ. ವೈದ್ಯರು ನಿಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಂದಿಗೂ ಈ ಕುರಿತು ಮಾತನಾಡಬಹುದು. ಈ ಎಲ್ಲಾ ಮಾಹಿತಿಗಳು ನಿಮಗೆ ಸೂಕ್ತವಾದ ಚಿಕಿತ್ಸೆ ನೀಡಲು ವೈದ್ಯರಿಗೆ ಸಹಾಯ ಮಾಡುತ್ತವೆ.

ಮದ್ಯ ವ್ಯಸನದ ಚಿಕಿತ್ಸೆಯು ಎರಡು ಗುರಿಗಳನ್ನು ಹೊಂದಿದೆ: ರೋಗಿಯು ಮದ್ಯವನ್ನು ಬಳಸದಂತೆ ತಡೆಯುವುದು ಮತ್ತು ಮದ್ಯ ಮುಕ್ತವಾದ, ಅವರು ಇಚ್ಛಿಸಿದ ಹೊಸ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುವುದು.

ಚಿಕಿತ್ಸೆಯು ಮೊದಲು ಡಿಟಾಕ್ಸಿಫಿಕೇಶನ್ ವಿಧಾನದೊಂದಿಗೆ ಆರಂಭಗೊಂಡು, ಅಂದಾಜು ಒಂದು ವಾರ ಅಥವಾ ಅದಕ್ಕೂ ಹೆಚ್ಚಿನ ಸಮಯಗಳ ಕಾಲ ಮುಂದುವರೆಯುತ್ತದೆ. ಈ ಅವಧಿಯಲ್ಲಿ, ವ್ಯಕ್ತಿಯು ಕುಡಿತವನ್ನು ಬಿಡುತ್ತಾರೆ ಮತ್ತು ಅವರಿಗೆ ಉಂಟಾಗಬಹುದಾದ ವಿಥ್ ಡ್ರಾವಲ್ ಸಿಂಪ್ಟಮ್ಸ್ ನಿಭಾಯಿಸಲು ಔಷಧಗಳನ್ನು ನೀಡಲಾಗುತ್ತದೆ. ಈ ಅವಧಿಯ ಇಂದ್ರಿಯ ನಿಗ್ರಹವು ವ್ಯಸನದಿಂದ ಹೊರಬರಲು ಸಹಾಯ ಮಾಡುತ್ತದೆ.

ನಂತರದ ಹೆಜ್ಜೆಯೆಂದರೆ ಆಪ್ತಸಲಹೆ ಅಥವಾ ಚಿಕಿತ್ಸೆ. ಆ ಸಮಯದಲ್ಲಿ ರೋಗಿಗೆ ವ್ಯಸನದ ಸ್ವರೂಪ ಮತ್ತು ಅಪಾಯದ ಕುರಿತಾಗಿ ಎಚ್ಚರಿಕೆ ಮೂಡಿಸಿ ಅದರಿಂದ ಹೊರಬರಲು ಏನು ಮಾಡಬೇಕು ಎಂದು ತಿಳಿಸಲಾಗುತ್ತದೆ. ಈ ಹಂತದಲ್ಲಿ ರೋಗಿಗಳಿಗೆ ತಮ್ಮ ಮದ್ಯಸೇವನೆಯ ವ್ಯಸನಕ್ಕೆ ಕಾರಣವಾದ ಭಾವನಾತ್ಮಕ ವಿಷಯಗಳನ್ನು ಬಹಿರಂಗಪಡಿಸಲು ಆಪ್ತಸಲಹೆಗಾರರು ಅಥವಾ ಮನೋವೈದ್ಯರು ಸಹಾಯ ಮಾಡಿ ಅವರೊಂದಿಗೆ ಪರಿಹಾರ ಹುಡುಕಲು ತೊಡಗುತ್ತಾರೆ. ವ್ಯಕ್ತಿಯು ಸಪೋರ್ಟ್ ಗ್ರೂಪ್ ಚರ್ಚೆಗಳಲ್ಲಿ ಕೂಡ ಭಾಗವಹಿಸುತ್ತಾರೆ. ಸಮೂಹ ಚಿಕಿತ್ಸೆಯು ಮದ್ಯ ಅವಲಂಬನೆಯಿಂದಾದ ಮಾನಸಿಕ ಅಸ್ವಸ್ಥತೆ ಕುರಿತು ಮುಕ್ತವಾಗಿ ಮಾತನಾಡಲು ವ್ಯಕ್ತಿಗೆ ಅವಕಾಶ ನೀಡುತ್ತದೆ.  ವ್ಯಸನಕ್ಕೊಳಗಾದವರು, ಇತರರ ಪ್ರೋತ್ಸಾಹ ಪಡೆಯಲು ಮತ್ತು ಅವರಿಂದ ಸ್ಫೂರ್ತಿ ಪಡೆದು ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಲು ಸಮೂಹ ಚಿಕಿತ್ಸೆ ಸಹಕರಿಸುತ್ತದೆ. ಈ ಹಂತದ ಕೊನೆಯಲ್ಲಿ, ರೋಗಿಗಳು ವ್ಯಸನ ಮರುಕಳಿಸುವ ಸಂದರ್ಭವನ್ನು ಗುರುತಿಸಲು ಮತ್ತು ಒತ್ತಡಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವುದರ ಕುರಿತು ತರಬೇತಿ ಪಡೆದಿರುತ್ತಾರೆ.

ಈ ಹಂತದಲ್ಲಿ ರೋಗಿಗಳ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಕೂಡ ಸಮಸ್ಯೆಯ ಕುರಿತು ಅರಿತಿರುತ್ತಾರೆ ಮತ್ತು ತಾವು ಅವರಿಗೆ ಹೇಗೆ ಸಹಾಯ ಸಹಕಾರ ನೀಡಬಹುದೆಂಬುದನ್ನು ಸಮೂಹ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ತಿಳಿದುಕೊಂಡಿರುತ್ತಾರೆ.

ಮೂರನೆಯ ಮತ್ತು ಕೊನೆಯ ಹಂತದ ಚಿಕಿತ್ಸೆಯು ಫಾಲೊ-ಅಪ್ ಭೇಟಿಗಳನ್ನು ಒಳಗೊಂಡಿರುತ್ತದೆ. ಈ ಹಂತದಲ್ಲಿ ರೋಗಿಯ ಸುಧಾರಿತ ಸ್ಥಿತಿಯ ಕುರಿತು, ಅವರು ಮದ್ಯವ್ಯಸನ ಮುಕ್ತರಾಗಿ ಮರಳಿ ತಮ್ಮ ಜೀವನಕ್ಕೆ ಹಿಂತಿರುಗುವುದರ ಕುರಿತು ಸಹಾಯ ಮಾಡಲಾಗುತ್ತದೆ. ಈ ನಂತರದಲ್ಲಿ ಕೂಡ, ಮದ್ಯದಿಂದ ದೂರ ಉಳಿಯುವ ಬಗ್ಗೆ ಸಮೂಹ ಚರ್ಚೆಗಳಲ್ಲಿ ಭಾಗವಹಿಸುವುದರ ಮೂಲಕ ರೋಗಿಗಳು ಹೆಚ್ಚಿನ ಸಹಾಯ, ಬೆಂಬಲ ಪಡೆಯಬಹುದು.

1.  ಎಲ್ಲ ಆಂಖಿಯಂಶಗಳ ಮೂಲ: ಗುರುರಾಜ್ ಜಿ, ಪ್ರತಿಮಾ ಮೂರ್ತಿ, ಗಿರೀಶ್ ನ್, ಬೆನೆಗಲ್ ವೀ. ಆಲ್ಕೊಹಾಲ್ ರಿಲೇಟೆಡ್ ಹಾರ್ಮ್: ಇಂಪ್ಲಿಕೇಶನ್ಸ್ ಫಾರ್ ಪಬ್ಲಿಕ್ ಹೆಲ್ತ್ ಅಂಡ್ ಪಾಲಿಸೀ ಇನ್ ಇಂಡಿಯಾ, ಪಬ್ಲಿಕೇಶನ್ ನೋ. 73, ನಿಮ್ಹಾನ್ಸ್, ಬೆಂಗಳೂರು, 2011

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org