ನಿರೂಪಣೆ: ವಸ್ತು-ವಿಷಯಗಳ ಕುರಿತು ಮನೋಹರ್‌ ತನ್ನಷ್ಟಕ್ಕೇ ಏನೇನೋ ಕಲ್ಪಸಿಕೊಂಡು, ಅದೇ ನಿಜ ಎಂದು ಪತ್ನಿಗೆ ಹೇಳುತ್ತಲಿದ್ದರು

ಔಷಧಿಗಳು ಮತ್ತು ಥೆರಪಿಗಳ ಸಂಯೋಜಿತ ಚಿಕಿತ್ಸಾಕ್ರಮದಿಂದ ಲಘು ಪ್ರಮಾಣದ ಮನೋವಿಕಾರಗಳನ್ನು ಗುಣಪಡಿಸಬಹುದು

ಮೀನಾಕ್ಷಿ ಮತ್ತು ಮನೋಹರ ದೇಸಾಯಿ (ವಿನಂತಿಯ ಮೇರೆಗೆ ಹೆಸರು ಬದಲಿಸಲಾಗಿದೆ) ನಿವೃತ್ತ ದಂಪತಿ. ಬೆಂಗಳೂರಿನಲ್ಲಿ ಮಗ ಹಾಗೂ ಸೊಸೆಯಿಂದಿಗೆ ವಾಸಿಸುತ್ತಿದ್ದಾರೆ. ಮನೋಹರ್‌ಗೆ ಮಗನ ಮೇಲೆ ತುಂಬಾ ಪ್ರೀತಿ. ನಿವೃತ್ತಿಯಾದ ನಂತರ ಮನೋಹರ್, ಅಡುಗೆ ಮನೆಯಲ್ಲಿ ಪತ್ನಿಗೆ  ಸಹಾಯ ಮಾಡುತ್ತಿದ್ದರು. ಮನೆಯ ಹಣಕಾಸು ನಿರ್ವಹಣೆ, ಬಿಲ್‌ಗಳನ್ನು ತುಂಬುವುದು ಮತ್ತು ಇತರ ಎಲ್ಲಾ ಕರ್ತವ್ಯಗಳನ್ನೂ ಅವರು ಮಾಡುತ್ತಿದ್ದರು. ಇದರಿಂದ ಪುತ್ರ ಮತ್ತು ಸೊಸೆ ತಮ್ಮ ವೃತ್ತಿಯಲ್ಲಿ ಹೆಚ್ಚು ಗಮನ ಹರಿಸಬಹುದು ಎಂಬುದು ಅವರ ಉದ್ದೇಶವಾಗಿತ್ತು. ಹೀಗಿರಲು, ಮೊಮ್ಮಗಳು ಜನಿಸಿ, ತಾವು ಅಜ್ಜ-ಅಜ್ಜಿಯಾಗಿದ್ದು ಈ ದಂಪತಿಗೆ ಅಪರಿಮಿತ ಖುಷಿಯನ್ನು ನೀಡಿತ್ತು. ಮೊಮ್ಮಗಳೇ ಅವರ ಜಗತ್ತಿನ ಕೇಂದ್ರದಂತಿದ್ದಳು.
ಹೀಗೆ ಜೀವನ ಖುಷಿಯಲ್ಲಿರುವಾಗಲೇ ಅದೊಂದು ದಿನ, ದೀರ್ಘಾವಧಿ ಕಾರ್ಯಭಾರದಿಂದಾಗಿ ಇಂಗ್ಲೆಂಡಿಗೆ ಸಕುಟುಂಬವಾಗಿ ತೆರಳಬೇಕಾಗಿರುವುದನ್ನು ಮಗ ಹೇಳಿದ. ಇದು  ಸುದ್ದಿ ಮನೋಹರ್‌ಗೆ ಶಾಕ್‌ ಉಂಟುಮಾಡಿತ್ತು. ಮಗ ತಮ್ಮಿಂದ ದೂರ ಹೋಗುತ್ತಾನೆ ಎಂಬ ವಿಚಾರವೇ ಅವರಿಗೆ ಬೇಸರದ ಸಂಗತಿಯಾಗಿತ್ತು. ಅದರಲ್ಲೂ ವಿಶೇಷವಾಗಿ ಮೊಮ್ಮಗಳಿಂದ  ದೂರವಿರುವುದು ಅವರಿಗೆ ಅತೀವ ದುಃಖವನ್ನುಂಟುಮಾಡಿತ್ತು.
ಮಗನ ಕುಟುಂಬ ಇಂಗ್ಲೆಂಡಿಗೆ ತೆರಳಿದ ನಂತರದಲ್ಲಿ ಮನೋಹರ್‌ ಹಾಗೂ ಅವರ ಪತ್ನಿಗೆ ಕೆಲವು ದಿನಗಳವರೆಗೂ ತುಂಬ ಬೇಸರ ಕಾಡುತ್ತಿತ್ತು. ಪತ್ನಿ ವಾಸ್ತವವನ್ನು ಅರಿತು ಹೊಂದಿಕೊಂಡು ಬಿಟ್ಟಿದ್ದರು. ಆದರೆ ಮನೋಹರ್‌ ತುಂಬಾ ಭಾವುಕರಾಗಿದ್ದರು. ಅಷ್ಟು ಸುಲಭವಾಗಿ ಈ ಬೇಸರ, ದುಃಖಗಳಿಂದ ಹೊರಬರುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಿರಲು, ಕೆಲವು ವಾರಗಳ ನಂತರ, ಅವರ ವರ್ತನೆಯಲ್ಲಿ ಹಲವು ಬದಲಾವಣೆಗಳಾಗಿರುವುದು ಪತ್ನಿಯ ಗಮನಕ್ಕೆ ಬಂದಿತ್ತು. ಮನೆಗೆ ಬಂದ ಯಾರೊಂದಿಗೂ ಅವರು ಮಾತನಾಡಲು ಮನಸ್ಸು ಮಾಡುತ್ತಿರಲಿಲ್ಲ. ಅವರು ತಮ್ಮದೇ ಯೋಚನೆಯಲ್ಲಿ ಮುಳುಗಿ ಗಂಟೆಗಟ್ಟಲೇ

ಒಂದೇ ಕಡೆ ಕುಳಿತಿರುತ್ತಿದ್ದರು. ಸಮಯಕ್ಕೆ ಸರಿಯಾಗಿ ನಿಯಮಿತವಾಗಿ ನಿದ್ದೆಯನ್ನೂ ಮಾಡುತ್ತಿರಲಿಲ್ಲ. ಒಂದು ದಿನ, ನೆರೆಮನೆಯವರು ತನ್ನ ಕುರಿತು ಆಡಿಕೊಳ್ಳುತ್ತಿದ್ದಾರೆ ಎಂದು ಪತ್ನಿಗೆ ಹೇಳತೊಡಗಿದ್ದರು. ತನ್ನ ಮತ್ತು ಪತ್ನಿಯ ವಿರುದ್ಧ ಅವರು ಏನೆನೋ ಹೇಳುತ್ತಿದ್ದಾರೆ ಎಂದು ಪತ್ನಿಗೆ ಹೇಳಿದರು. ಇವೆಲ್ಲವೂ ಅವರ ಕಲ್ಪನೆಗಳಾಗಿದ್ದವು ಮತ್ತು ಪತ್ನಿಗೆ ಅದನ್ನೇ ಬಿಂಬಿಸಿ ನಂಬಿಸತೊಡಗಿದ್ದರು. ಅಲ್ಲದೇ ಅಕ್ಕಪಕ್ಕದ ಎರಡು ಮನೆಗಳಿಗೆ ತೆರಳಿ ತಮ್ಮ ವಿರುದ್ಧ ಸಂಚು ಮಾಡದಂತೆ ಗಲಾಟೆ ಕೂಡ ಮಾಡಿದರು.

ಗಂಡನ ಭ್ರಮಾಧೀನ ವರ್ತನೆ ಮೀನಾಕ್ಷಿಯವರನ್ನು ತುಂಬಾ ಚಿಂತೆಗೀಡು ಮಾಡಿತ್ತು. ಇನ್ನೊಂದು ದಿನ ನೆರೆಮನೆಯವರೊಬ್ಬರೊಡನೆ ಅವರು ಹೊಡೆದಾಟಕ್ಕೇ ನಿಂತರು. ಆಗ ಕುಟುಂಬ ವೈದ್ಯರ ಬಳಿ ಅವರನ್ನು ಕರೆದುಕೊಂಡು ಹೋಗಲು ಆಕೆ ನಿರ್ಧರಿಸಿದಳು. ಮಗ ಇಂಗ್ಲೆಂಡಿಗೆ ಹೋದ ಮೇಲೆ ಗಂಡನ ವರ್ತನೆಯಲ್ಲಿ ಆದ ಬದಲಾವಣೆಗಳ ಬಗ್ಗೆ ವೈದ್ಯರಲ್ಲಿ ಹೇಳಿದಳು. ಇದು ತನ್ನನ್ನು ಒತ್ತಡ ಮತ್ತು ಆತಂಕಗಳಿಗೀಡು ಮಾಡಿದೆ ಎಂದೂ ಆಕೆ ಹೇಳಿಕೊಂಡಳು.

ಎಲ್ಲವನ್ನೂ ಕೇಳಿಸಿಕೊಂಡ ಕೇಳಿದ ವೈದ್ಯರು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡುವಂತೆ ಸೂಚಿಸಿದರು. ಮನೋವೈಜ್ಞಾನಿಕ ಪರೀಕ್ಷೆಗಳ ನಂತರದಲ್ಲಿ, ಮನೋಹರ್ ಅವರು ಲಘು ಪ್ರಮಾಣದ ಮನೋವಿಕಾರದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ನಿರ್ಣಯಿಸಿದರು. ಥೆರಪಿ ಮತ್ತು ಔಷಧಗಳಿಂದ ಮನೋಹರ್‌ ತನ್ನ ಸಮಸ್ಯೆಯಿಂದ ಹೊರಬಂದರು. ಈ ರೀತಿಯ ಲಕ್ಷಣಗಳು ಅವರಲ್ಲಿ ಮತ್ತೆ ಎಂದೂ ಕಾಣಿಸಿಕೊಳ್ಳಲಿಲ್ಲ.

ವಿವಿಧ ರೋಗಿಗಳು ಮತ್ತು ಅವರ ರೋಗಲಕ್ಷಣಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಈ ನಿರೂಪಣೆಯನ್ನು ಹೆಣೆಯಲಾಗಿದೆ. ಈ ಕಥೆಯು ಯಾವುದೇ ಒಂದು ವ್ಯಕ್ತಿಗಷ್ಟೇ ಸೀಮಿತವಾದದ್ದಲ್ಲ. ಬದಲಿಗೆ ಲಘು ಪ್ರಮಾಣದ ಮನೋವಿಕಾರದಿಂದ ಬಳಲುತ್ತಿರುವವರೆಲ್ಲರದ್ದೂ ಆಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org