ಛಿದ್ರಮನಸ್ಕತೆ (ಸ್ಕಿಜೋಫ್ರೇನಿಯಾ)ಗೆ ಕಲಾ ಚಿಕಿತ್ಸೆ

ಚಿತ್ರಕಲೆ, ಜೇಡಿಮಣ್ಣು ಅಥವಾ ಇತರ ವೈವಿಧ್ಯಮಯ ಕಲೆಗಳ ಮೂಲಕ ಒಬ್ಬ ವ್ಯಕ್ತಿಯ ಮಾನಸಿಕ ಅಸ್ವಸ್ಥತೆ ಅಭಿವ್ಯಕ್ತಿಯಾಗಬಲ್ಲದು. ಆತನ ಯೋಚನಾ ಲಹರಿ ತಿಳಿದುಕೊಳ್ಳಲು ಆರ್ಟ್‌ಥೆರಪಿ ಕೂಡ ಉತ್ತಮ ಮಾರ್ಗ.

ಕಲಾ ಚಿಕಿತ್ಸೆ (ಆರ್ಟ್‌ ಥೆರಪಿ) ಎಂದರೇನು? ಚಿಕಿತ್ಸಕರ ಮಾರ್ಗದರ್ಶನದಲ್ಲಿ ಕಲೆಯನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಳ್ಳುವುದು ಕಲಾಚಿಕಿತ್ಸೆಯ ಭಾಗ. ಚಿತ್ರಕಲೆ, ಜೇಡಿಮಣ್ಣು ಅಥವಾ ಇತರ ವೈವಿಧ್ಯಮಯ ಕಲೆಗಳ ಮೂಲಕ ಒಬ್ಬ ವ್ಯಕ್ತಿಯ ಮಾನಸಿಕ ಅಸ್ವಸ್ಥತೆ ಅಭಿವ್ಯಕ್ತಿಯಾಗಬಲ್ಲದು. ಆತನ ಯೋಚನಾ ಲಹರಿ ತಿಳಿದುಕೊಳ್ಳಲು ಮಾತೇ ಆಗಬೇಕಿಲ್ಲ. ಕಲಾಚಿಕಿತ್ಸೆಯು ಸಾಮಾನ್ಯವಾಗಿ ಇತರ ಚಿಕಿತ್ಸಕ ವಿಧಾನಗಳಾದ ಸಂಗೀತ, ನೃತ್ಯ, ಚಲನೆ ಮುಂತಾದ ಪರ್ಯಾಯ ಚಿಕಿತ್ಸಾ ವಿಧಾನಗಳ ಜತೆಗೆ ಇದೂ ಬಳಕೆಯಾಗುತ್ತದೆ. ಕಲಾಚಿಕಿತ್ಸೆಯ ಉದ್ದೇಶ ಕಲೆಯನ್ನು ಅಥವಾ ಕಲಾತ್ಮಕತೆಯ ಕೌಶಲ ಕಲಿಸುವುದಲ್ಲ. ಬದಗಾಗಿ ಯೋಚನಾ ಲಹರಿಯನ್ನು, ಒಳತೋಟಿಯನ್ನು ಉತ್ತಮವಾಗಿ ಅರ್ಥೈಸಿಕೊಳ್ಳುವುದು.

ಗಮನಿಸಿ: ಕಲಾ ಚಿಕಿತ್ಸೆಯು ಇತರ ಕಲಾಪ್ರಕಾರಗಳಾದ ಸಂಗೀತ, ನೃತ್ಯ, ನಾಟಕ ಇತ್ಯಾದಿಗಳನ್ನು ಒಳಗೊಳ್ಳುತ್ತದೆ. ಆದರೆ ಈ ಲೇಖನ ಕೇವಲ ದೃಶ್ಯಕಲಾ ಮಾಧ್ಯಮದ ಬಗ್ಗೆ ಮಾತ್ರ.

ಛಿದ್ರಮನಸ್ಕತೆ (ಸ್ಕಿಜೋಫ್ರೇನಿಯಾ)ಗೆ ಕಲಾ ಚಿಕಿತ್ಸೆ ಛಿದ್ರಮನಸ್ಕತೆಯಿಂದ ಬಳಲುವ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಭ್ರಮೆಗಳು, ವಿಕೃತ ಹಾಗೂ ತಪ್ಪು ಕಲ್ಪನೆಗಳು ಇರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಅವರ ಸ್ನೇಹಿತರು, ಕುಟುಂಬ ಸದಸ್ಯರು ಕೂಡಾ ಗಮನಿಸುವ ಸಾಧ್ಯತೆ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಕಲಾ ಚಿಕಿತ್ಸೆ ಅವರ ನೆರವಿಗೆ ಬರುತ್ತದೆ.

  • ಅವರ ಭಾವನೆಗಳು ಹಾಗೂ ಮನಸ್ಸಿನ ಲಹರಿಯಲ್ಲಿ ವಿಶ್ಲೇಷಿಸುವ ಸಲುವಾಗಿ, ಅವುಗಳನ್ನು ಶಬ್ದದ ರೂಪದಲ್ಲೇ ಅಭಿವ್ಯಕ್ತಿಪಡಿಸಬೇಕಿಲ್ಲ. ಇದು ಅವರ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಆತನನ್ನು ಹೆಚ್ಚು ಸೂಕ್ತವಾಗಿ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ.
  • ಔಷಧಗಳ ಅಡ್ಡ ಪರಿಣಾಮಗಳ ವಿರುದ್ಧದ ಅಸ್ತ್ರವಾಗಿ: ಛಿದ್ರ ಮನಸ್ಕತೆ ಹೊಂದಿರುವ ವ್ಯಕ್ತಿಗಳಿಗೆ ನೀಡುವ ಔಷಧಗಳ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಕೂಡಾ ಈ ಚಿಕಿತ್ಸಾ ವಿಧಾನ ಅತ್ಯಂತ ಸಹಕಾರಿ. ಸಾಮಾನ್ಯವಾಗಿ ಅವರಲ್ಲಿ ಕಂಡುಬರುವ ಅಮಲು ಮನಸ್ಕತೆ, ಆಲಸ್ಯಗಳನ್ನು ದೂರ ಮಾಡಲು ಚಿತ್ರ ಬಿಡಿಸುವುದು ಅಥವಾ ಕೊಲ್ಯಾಜ್ ಸಹಕರಿಸುತ್ತದೆ. ಈ ಮೂಲಕ ಅವರು ಹೆಚ್ಚು ಸಕ್ರಿಯವಾಗಿ ಇರುವಂತೆ ನೋಡಿಕೊಳ್ಳಬಹುದು.

"ಛಿದ್ರ ಮನಸ್ಕತೆ ಹೊಂದಿರುವ ವ್ಯಕ್ತಿಗಳಿಗೆ ಕಲಾ ಚಿಕಿತ್ಸೆಯು ವಿವಿಧ ಬಗೆಯ ವ್ಯಾಕುಲತೆಗಳಾದ ವಿಕ್ಷಿಪ್ತ ಆಲೋಚನೆ, ದೊಡ್ಡ ಸದ್ದು ಮಾಡುವುದು ಮುಂತಾದ ಕ್ರಿಯೆಗಳಿಂದ ದೂರ ಮಾಡಬಹುದಾದ ಆರೋಗ್ಯಕರ ವಿಧಾನ. ದಿನಕ್ಕೆ ಒಂದರಿಂದ ಎರಡು ಗಂಟೆಗಳ ಕಾಲ ನೀಡುವ ಇಂಥ ಚಿಕಿತ್ಸೆ ಖಂಡಿತಾಗಿಯೂ ಅವರಿಗೆ ನೀಡುವ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಳ್ಳಲು ಪ್ರೇರಣೆ ನೀಡಬಲ್ಲದು" ಎನ್ನುತ್ತಾರೆ ಪುನರ್ವಸತಿ ತಜ್ಞೆ ಆಶಾ. ಇವರು ಬೆಂಗಳೂರಿನ ರಿಚ್‌ಮಂಡ್ ಫೆಲೋಶಿಪ್ ಸೊಸೈಟಿಯ ಆಶ್ರಯದಲ್ಲಿ ನಡೆಯುತ್ತಿರುವ ಛಿದ್ರ ಮನಸ್ಕ ಹಾಗೂ ಎರಡು ಇತರ ಮಾನಸಿಕ ಕಾಯಿಲೆಗಳ ವ್ಯಕ್ತಿಗಳಿಗಾಗಿ ಪರ್ಯಾಯ ಚಿಕಿತ್ಸಾ ಕೇಂದ್ರವನ್ನು ನಿರ್ವಹಿಸುತ್ತಿದ್ದಾರೆ.

ಕಲಾ ಚಿಕಿತ್ಸೆಯಲ್ಲಿ ಏನೇನಿರುತ್ತದೆ? ದೃಶ್ಯ ಕಲಾ ಚಿಕಿತ್ಸೆಯನ್ನು ಗುಂಪು ಚಟುವಟಿಕೆಯಾಗಿ ತೆಗೆದುಕೊಳ್ಳಬಹುದು ಅಥವಾ ಕಲಾ ಚಿಕಿತ್ಸಕರ ಜತೆ ಒಬ್ಬೊಬ್ಬರೇ ಸಂವಾದ ನಡೆಸಲು ಅವಕಾಶ ನೀಡುವ ಮೂಲಕವೂ ತೆಗೆದುಕೊಳ್ಳಬಹುದು. ಗುಂಪು ಚಟುವಟಿಕೆಗಳಿಂದ ಸಾಮಾನ್ಯವಾಗಿ ಇಂಥ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಹಾಗೂ ಸಮರ್ಥವಾಗಿ ಅಭಿವ್ಯಕ್ತಿಪಡಿಸಲು ಸಾಧ್ಯವಾಗುವುದು ಮಾತ್ರವಲ್ಲದೇ, ಸಾಮಾಜಿಕ ಕೌಶಲಗಳನ್ನು ಕಲಿಯಲು ಕೂಡಾ ಅವರಿಗೆ ನೆರವಾಗುತ್ತದೆ.

ಇದರಲ್ಲಿ ಪಾಲ್ಗೊಳ್ಳುವವರು ಇತರರ ಜತೆಗೆ ಚರ್ಚೆ ನಡೆಸಲು, ಸರಳ ಸಂವಹನ ಕೌಶಲಗಳನ್ನು ಬೆಳೆಸಿಕೊಳ್ಳಲು, ಇಡೀ ಗುಂಪಿನ ಒಟ್ಟಾರೆ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಪರಸ್ಪರರ ನಡುವೆ ಸಹಕಾರದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹೀಗೆ ಕಲಾ ಚಿಕಿತ್ಸೆಯು ಅಂತಿಮವಾಗಿ ಅವರ ಸಂಘಟನಾತ್ಮಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ.

"ಒಂದು ನಿರ್ದಿಷ್ಟ ಅವಧಿಗೆ ಅವರನ್ನು ತಂಡಗಳಾಗಿ ವಿಭಜಿಸಿದಾಗ, ನಾವು ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ದೃಷ್ಟಿಯಿಂದ ಕೆಲವು ಸ್ಪರ್ಧೆಗಳನ್ನೂ ಆಯೋಜಿಸಬಹುದು. ಅವರಿಗೆ ಒಂದು ನಿರ್ದಿಷ್ಟ ಕೆಲಸಗಳನ್ನು ನೀಡಿ, ಪ್ರತಿಯೊಬ್ಬರೂ ಇತರರ ಜತೆಗಿನ ಸ್ಪರ್ಧೆ ಎಂದು ಪರಿಗಣಿಸಿ ಇದನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಬಹುದು. ಹೀಗೆ ಆರೋಗ್ಯಕರ ಸ್ಪರ್ಧೆಗಳನ್ನು ಅವರಿಗಾಗಿ ಆಯೋಜಿಸಿದಾಗ, ಒಂದು ನಿರ್ದಿಷ್ಟ ಕಾರ್ಯವನ್ನು ಅಥವಾ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅವರಿಗೆ ಸಿಗುವ ಪ್ರೇರಣೆಯ ಮಟ್ಟವನ್ನು ಹೆಚ್ಚಿಸಬಹುದು. ಇದು ಅವರ ಸ್ವ ಸಾಮರ್ಥ್ಯವನ್ನು ಹಾಗೂ ಸಾಮಾಜಿಕ ತಂಡ ನಿರ್ಮಾಣದ ಕೌಶಲವನ್ನು ಹೆಚ್ಚಿಸುತ್ತದೆ" ಎಂಬುದು  ಇಂಥ ಅನೇಕ ಪುನರ್ವಸತಿ ವೃತ್ತಿತರರ ಅಭಿಪ್ರಾಯ.

ಒಂದು ವೈಯಕ್ತಿಕ ಕಲಾ ಚಿಕಿತ್ಸೆಯ ಸೆಷನ್‌ನಲ್ಲಿ ಚಿಕಿತ್ಸಕರು ಹಾಗೂ ಮನೋವ್ಯಾಧಿಯ ವ್ಯಕ್ತಿ ಮಾತ್ರ ಇರುತ್ತಾರೆ. ಮೊದಲು ಆ ವ್ಯಕ್ತಿಗೆ ತಮ್ಮ ಯೋಚನೆಗಳ ಅಭಿವ್ಯಕ್ತಿಗೆ ಸೂಕ್ತವಾದ ದೃಶ್ಯ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗುತ್ತದೆ. ಅಂದರೆ ಚಿತ್ರಕಲೆ, ಮಣ್ಣಿನ ಕೌಶಲ, ಕೊಲಾಜ್ ಹೀಗೆ ವಿವಿಧ ಪ್ರಕಾರಗಳ ಆಯ್ಕೆಯನ್ನು ನೀಡಿ, ಅವರಿಗೆ ಅಗತ್ಯ ಪರಿಕರಗಳನ್ನು ಒದಗಿಸಲಾಗುತ್ತದೆ. ಇದರ ಮುಖ್ಯ ಉದ್ದೇಶವೆಂದರೆ, ಚಿಕಿತ್ಸಕರು ಹಾಗೂ ರೋಗಿಯ ಮಧ್ಯೆ ಪರಸ್ಪರ ಮಾತುಕತೆಗೆ, ಸಂವಾದಕ್ಕೆ ಪ್ರಚೋದಿಸುವುದು. ಈ ಸಂವಾದದಲ್ಲಿ ಆತನ ಮಾನಸಿಕ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ ಉದ್ದೇಶವೇ ವಿನಃ ಒಳ್ಳೆಯ ಕಲಾಕೃತಿಯನ್ನು ಸೃಷ್ಟಿಸಬೇಕು ಎನ್ನುವುದಲ್ಲ. ಇದು ಚಿಕಿತ್ಸಕರು ಆ ವ್ಯಕ್ತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಆ ವ್ಯಕ್ತಿ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ. ಇದಾದ ಬಳಿಕ ಚಿಕಿತ್ಸಕ ಹಾಗೂ ರೋಗಿ ಈ ಚಿಕಿತ್ಸೆಯ ಪರಿಣಾಮದಿಂದ ಆಗಿರುವ ಮಾನಸಿಕ ನಿರಾಳತೆಯ ಬಗ್ಗೆ ಸಂವಾದ ನಡೆಸುತ್ತಾರೆ. ಅಂಥ ಕಲಾಪ್ರಕಾರಗಳು ಅವರಿಗೆ ಹೇಗೆ ನೆರವಾಗುತ್ತವೆ ಎನ್ನುವುದನ್ನು ಮನವರಿಕೆ ಮಾಡುತ್ತಾರೆ.

ಛಿದ್ರ ಮನಸ್ಕತೆಯಂಥ ಗಂಭೀರ ಮನೋ ವ್ಯಾಧಿಯನ್ನು ಹೊಂದಿರುವ ವ್ಯಕ್ತಿ ಒಂದು ಕಲಾಪ್ರಕಾರವನ್ನು ಸೃಷ್ಟಿಸುವುದರಿಂದ ಅವರು ತಮ್ಮ ಭಾವನೆಗಳನ್ನು, ಆಲೋಚನೆಗಳನ್ನು, ತಾವು ವಿವರಿಸಬೇಕು ಎಂದು ಬಯಸುವ ಅಂಶಗಳನ್ನು ಅಭಿವ್ಯಕ್ತಿಪಡಿಸಲು ಮತ್ತು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದಕ್ಕೆ ಮುನ್ನ ಆತ ಯಾವ ಘಟನೆ ಅಥವಾ ಅನುಭವವನ್ನು ವಿವರಿಸಲು ಅಸಾಧ್ಯ ಎಂದುಕೊಳ್ಳುತ್ತಿದ್ದನೋ ಅದನ್ನು ಈ ಅಭಿವ್ಯಕ್ತಿಯ ಮೂಲಕ ಸಮರ್ಥವಾಗಿ ವಿವರಿಸಬಹುದು.

ಕಲಾ ಚಿಕಿತ್ಸೆ ಪೂರಕ ವಿಧಾನ ಛಿದ್ರ ಮನಸ್ಕತೆ ಎನ್ನುವುದು ಗಂಭೀರ ಮಾನಸಿಕ ಕಾಯಿಲೆಯಾಗಿದ್ದು, ಒಬ್ಬ ವ್ಯಕ್ತಿಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡಬಹುದು. ಕಲಾ ಚಿಕಿತ್ಸೆಯು ಇಂಥ ಸಂದರ್ಭದಲ್ಲಿ ಋಣಾತ್ಮಕ ಗುಣಲಕ್ಷಣಗಳಾದ ಪ್ರೇರಣೆಯ ಕೊರತೆ, ಸಾಮಾಜಿಕವಾಗಿ ಪ್ರತ್ಯೇಕವಾಗಿ ಇರುವುದು, ಸಂವಹನದ ತಡೆ, ಮಾತುಗಾರಿಕೆಯ ಕೌಶಲ ಕೊರತೆಯಂಥ ಅಂಶಗಳನ್ನು ದೂರ ಮಾಡಬಲ್ಲದು. ಇದು ಒಂದು ಖಂಡಿತವಾಗಿಯೂ ಇತರ ಔಷಧಿ ಅಥವಾ ಚಿಕಿತ್ಸೆಯ ಜತೆಗೆ ಉತ್ತಮ ಹಾಗೂ ಪೂರಕ ಚಿಕಿತ್ಸೆ ಆಗಬಲ್ಲದು. ಇದು ರೋಗಿಯ ಚಿಕಿತ್ಸೆಗೆ ನೆರವಾಗುವುದು ಮಾತ್ರವಲ್ಲದೇ, ಇಂಥ ಅಸ್ವಸ್ಥತೆಯ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಮನದಟ್ಟು ಮಾಡಬಹುದಾಗಿದೆ. ಕಲಾ ಚಿಕಿತ್ಸೆಯು ಇಂಥ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ಪೋಷಕರು ಆತನನ್ನು ಅರ್ಥ ಮಾಡಿಕೊಳ್ಳಲು ಕೂಡಾ ಸಹಕಾರಿಯಾಗಲಿದೆ. ಇದು ಅಸ್ವಸ್ಥ ವ್ಯಕ್ತಿಯ ಕ್ರೋಧ, ಹತಾಶೆ ಹಾಗೂ ಭಾವನಾತ್ಮಕ ಅಭಿವ್ಯಕ್ತಿಗಳನ್ನು ಆರೋಗ್ಯಕರ ವಿಧಾನದಲ್ಲಿ ಆತನಿಗೆ ಪೂರಕವಾಗುವಂತೆ ಮತ್ತು ಆತನ ಜತೆ ಮುಕ್ತವಾಗಿ ಇರುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಕಲಾ ಚಿಕಿತ್ಸೆ ಎಲ್ಲಿ ದೊರಕುತ್ತದೆ? ಕಲಾ ಚಿಕಿತ್ಸಾ ಸೆಷನ್‌ಗಳನ್ನು ಸಾಮಾನ್ಯವಾಗಿ ಆಸ್ಪತ್ರೆ ಹಾಗೂ ಸಮುದಾಯ ಆಧರಿತ ಪುನರ್ವಸತಿ ಕೇಂದ್ರಗಳಲ್ಲಿ ನಿರ್ವಹಿಸಲಾಗುತ್ತದೆ. ತಮ್ಮ ಮಾನಸಿಕ ಆರೋಗ್ಯ ಕ್ಷೇತ್ರದ ವೃತ್ತಿಪರರಲ್ಲಿ ಕೂಡಾ ಈ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅಂಥ ಮನೋವೈದ್ಯರು ಸೂಕ್ತ ಪ್ರಮಾಣೀಕೃತ ಕಲಾ ಚಿಕಿತ್ಸಕರ ಬಗ್ಗೆ ಮಾಹಿತಿ ನೀಡುತ್ತಾರೆ. ನಿಮ್ಮ ಪರಿಚಯಸ್ಥ ಕಲಾ ಚಿಕಿತ್ಸಕರನ್ನು ಕೂಡಾ ನೀವು ಸಂಪರ್ಕಿಸಬಹುದಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org