ಮಾನಸಿಕ ಯೋಗಕ್ಷೇಮಕ್ಕೆ ಹತ್ತು ಸಲಹೆಗಳು

ಮಾನಸಿಕ ಯೋಗಕ್ಷೇಮಕ್ಕೆ ಹತ್ತು ಸಲಹೆಗಳು

ಮಾನಸಿಕ ಆರೋಗ್ಯದ ಕಾಳಜಿಯೂ ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ.

ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವು ನಮ್ಮ ಪರಿಪೂರ್ಣ ಯೋಗಕ್ಷೇಮದ ಪ್ರಮುಖವಾದ ಭಾಗವಾಗಿದೆ. ನಮ್ಮಲ್ಲಿ ಹೆಚ್ಚಿನವರು, ಜಿಮ್ಗೆ ಹೋಗುವುದು, ವಾಕಿಂಗ್ ಮಾಡುವುದು, ಈಜು ಮತ್ತು ಆಟಗಳನ್ನಾಡುವ ಮೂಲಕ ದೈಹಿಕವಾಗಿ ಸದೃಢರಾಗಿರಲು ಪ್ರಯತ್ನಿಸುತ್ತೇವೆ. ಹಾಗೆಯೇ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಾಗಿಯೂ ಕೆಲವು ಚಟುವಟಿಕೆಗಳನ್ನು ಮಾಡಬೇಕು. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಗೆ ಮಾನಸಿಕ ಕಾಯಿಲೆ ಇಲ್ಲವೆಂದರೆ ಆತನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢವಾಗಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ವಿವರಿಸುತ್ತಾರೆ.

ನಿಮ್ಮ ಬಾವನಾತ್ಮಕ ಆರೋಗ್ಯಕ್ಕೆ ಏಕೆ ಮಹತ್ವ ನೀಡಬೇಕು?

ಭಾವನೆಗಳ ನಿರ್ವಹಣೆ ಮತ್ತು ಸಮತೋಲ ಹೊಂದುವುದು ಒಂದು ಮುಖ್ಯ ಕೌಶಲ್ಯ. ಇದು ತಿಳಿಯದಿದ್ದರೆ   ಜೀವನದಲ್ಲಿ ಎದುರಾಗುವ ಸನ್ನಿವೇಶಗಳ, ಸಂಬಂಧಗಳ ನಿರ್ವಹಣೆ, ಮತ್ತು ವಿವೇಚನೆಯಿಂದ ಕೆಲಸ ಮಾಡುವಾದಕ್ಕೆ ಕಷ್ಟವಾಗಬಹುದು. ನಾವು ದೈಹಿಕ ಹಾಗೋ ಮಾನಸಿಕವಾಗಿ ಆರೋಗ್ಯದಿಂದಿದ್ದರೆ  ದೈನಂದಿನ ಜೀವನದಲ್ಲಿ ನಾವು ಹೆಚ್ಚು ಚಟುವಟಿಕೆಯಿಂದಿರುವಂತೆ ಮಾಡುತ್ತದೆ. ಇತರರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಜೀವನದ ಹಾದಿಯಲ್ಲಿ ಬರುವ ಸವಾಲುಗಳನ್ನೆದುರಿಸಲು ಶಕ್ತನಾಗೀರುತ್ತೇವೆ.

“ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ನಾವು ಇಷ್ಟಪಡದ ವ್ಯಕ್ತಿಗಳೊಂದಿಗೆ ಕೆಲಸ ಮಾಡಬೇಕಾಗುತ್ತದೆ, ಇಷ್ಟಪದ ವಾತಾವರಣದಲ್ಲಿ ಕೆಲಸ ಮಾಡಬೇಕಾಗುತ್ತದೆ.   ಇಂಥ ಸಮಯದಲ್ಲಿ ಸಂದರ್ಭಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುವ ಬದಲು ಸನ್ನಿವೇಶವನ್ನೇ ಬದಲಾಯಿಸಲು ಪ್ರಯತ್ನಿಸುತ್ತೇವೆ. ಸವಾಲುಗಳನ್ನು ಎದುರಿಸಲು ಕಲಿತಂತೆಲ್ಲಾ, ನಾವು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತೇವೆ,” ಎನ್ನುತ್ತಾರೆ ಬೆಂಗಳೂರು ಮೂಲದ ಆಪ್ತ ಸಮಾಲೋಚಕಿ ಮೌಲಿಕಾ ಶರ್ಮಾ.

ನಿಮ್ಮ ಮಾನಸಿಕ ಯೋಗಕ್ಷೇಮದ ಕುರಿತು ಕಾಳಜಿ ತೆಗೆದುಕೊಳ್ಳಿ

ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಂಕೀರ್ಣ, ಮತ್ತು ಕಷ್ಟಕರವೆನಿಸಬಹುದು. ಆದರೆ ತಜ್ಞರ ಪ್ರಕಾರ ನಿಮ್ಮ ಜೀವನದಲ್ಲಿ ಕೆಲವು ಸರಳ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದರಿಂದ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮಾನಸಿಕ ಆರೊಗ್ಯವನ್ನು ಕಾಪಾಡಿಕೊಳ್ಳಬಹುದು. ಇಲ್ಲಿ ನಿಮಗೆ ಸಹಾಯಕವಾಗುವ ಕೆಲವು ಅಂಶಗಳನ್ನು ನೀಡಲಾಗಿದೆ:

1.ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ:  ಮನಸ್ಸಿನ ಯೋಗಕ್ಷೇಮಕ್ಕೆ ದೈಹಿಕ ಆರೋಗ್ಯ ಸಹ ಕಾಪಾಡಿಕೊಳ್ಳುವುದು ಅವಶ್ಯ. ಸಮತೋಲನ ಆಹಾರ ಸೇವಿಸಿ, ಅಗತ್ಯದ ವಿಶ್ರಾಂತಿ ತೆಗೆದುಕೊಂಡು, ವ್ಯಾಯಾಮ ಮಾಡಿದರೆ ಆರೋಗ್ಯದಿಂದಿರಬಹುದು.

ಪೌಷ್ಠಿಕಾಂಶ ಆಹಾರ ನಿಮ್ಮ ದೈನಿಕ ಒತ್ತಡವನ್ನು ನಿಭಾಯಿಸಲು ಸಹಕರಿಸುತ್ತದೆ. ವಿಟಬಿನ್ ಬಿ-12 ಮತ್ತು ಒಮೆಗಾ 3 ಫ್ಯಾಟೀ ಆಸಿಡ್ ಸಮೃದ್ಧವಾಗಿರುವ ಆಹಾರವು ಮಿದುಳಿನ ರಾಸಾಯನಿಕಗಳ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಸಾಕಷ್ಟು ವಿಶ್ರಾಂತಿ ಪಡೆಯುವುದು ಕೂಡಾ ಮುಖ್ಯವಾಗಿರುತ್ತದೆ. ನಿದ್ರೆಯ ಕೊರತೆಯಿಂದ ಸುಸ್ತು, ಒತ್ತಡ ಜಾಸ್ತಿಯಾಗಬಹುದು. ಸಾಕಷ್ಟು ವ್ಯಾಯಾಮ ಮಾಡುವುದರಿಂದ ನಿಮ್ಮ ಹಸಿವೂ ಹೆಚ್ಚುತ್ತದೆ ಮತ್ತು ನಿದ್ರೆಯೂ ಚೆನ್ನಾಗಿ ಬರುತ್ತದೆ. 

2. ವ್ಯಾಯಾಮ ಮಾಡಿ ಮತ್ತು ಸ್ವಲ್ಪ ತಾಜಾ ಗಾಳಿ ಸೇವಿಸಿ: ಸೂರ್ಯನ ಬೆಳಕು ಮೆದುಳಿನಲ್ಲಿ ಸೆರೊಟೊನಿನ್ ರಾಸಾಯನಿಕದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪ್ರತಿದಿನವೂ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಖಿನ್ನತೆಯುಂಟಾಗುವುದನ್ನು ತಡೆಯಬಹುದು. ದೈಹಿಕ ಚಟುವಟಿಕೆಯು ಮನಸ್ಸಿಗೂ ಒಳ್ಳೆಯದು. ವ್ಯಾಯಾಮದಿಂದ ಸಾಮರ್ಥ್ಯ ವೃದ್ಧಿಸುತ್ತದೆ, ಒತ್ತಡ ಕಡಿಮೆಯಾಗಿ, ಮಾನಸಿಕ ಬಳಲಿಕೆಯೂ ಕಡಿಮೆಯಾಗುತ್ತದೆ. ನಿಮಗೆ ಖುಷಿ ಕೊಡುವ ಚಟುವಟಿಕೆಯನ್ನು ಮಾಡುವುದರಿಂದ ಉಲ್ಲಾಸವೆನಿಸುತ್ತದೆ.

3. ನಿಮ್ಮ ಬಗ್ಗೆ ಕಾಳಜಿವಹಿಸಿ: ಭಾವನೆಗಳನ್ನು ಆಪ್ತರಲ್ಲಿ ವ್ಯಕ್ತಪಡಿಸಿದರೆ ಮನಸ್ಸು ಹಗುರವಾಗುತ್ತದೆ.  ನಿಮಗಾಗಿ ಸಮಯವನ್ನು ಮೀಸಲಿಡಿ; ನಿಮ್ಮ ಭಾವನಾತ್ಮಕ ಅಗತ್ಯಗಳಿಗೆ ಆದ್ಯತೆ ನೀಡಿ, ಒಳ್ಳೆಯ ಪುಸ್ತಕಗಳನ್ನು ಓದಿ. ನಿಮ್ಮ ಸಾಮರ್ಥ್ಯ ಅರಿತು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ.

ವರ್ತಮಾನದ ಪ್ರತಿ ಗಳಿಗೆಯನ್ನು ಪೂರ್ಣ ರೀತಿಯಿಂದ ಅರಿತು ಆ ಗಳಿಗೆಯಲ್ಲಿ ಮಾಡುವ ಕೆಲಸವನ್ನು ಸಂಪೂರ್ಣ ಏಕಾಗ್ರತೆಯಿಂದ ಮಾಡಿ ಅದನ್ನು ಆಸ್ವಾದಿಸುವುದು  'ಮೈನ್ಡ್ಫುಲ್ನೆಸ್' ಎಂದು ಹೇಳುತ್ತಾರೆ.  “ ಹಿಂದೆ ನಡೆದಿದ್ದರ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಯೋಚಿಸದೇ ವರ್ತಮಾನದಲ್ಲಿರುವುದೇ ಆಗಿದೆ; ಮನಸ್ಸಿಗೆ ಬರುವ ಎಲ್ಲಾ ವಿಚಾರಗಳ ಬಗ್ಗೆ ಗಮನ ನೀಡುವ ಬದಲು ನೀವು ಯಾವುದಕ್ಕೆ ಪ್ರಕ್ರಿಯಿಸಬೇಕೆಂಬುದನ್ನು ಆಯ್ದುಕೊಳ್ಳಿ; ಒಮ್ಮೆಗೆ ಒಂದು ವಿಷಯದ ಕಡೆಗೆ ಮಾತ್ರ ಗಮನ ಹರಿಸಿ, ಯಾವುದೇ ವಸ್ತು ಅಥವಾ ಪರಿಸ್ಥಿತಿಯು ಶಾಶ್ವತವಲ್ಲವೆಂಬುದು ನೆನಪಿರಲಿ. ಇದರಿಂದ ನೀವು ಎದುರಿಸುವ ಸನ್ನಿವೇಶಗಳ ಬಗ್ಗೆ ಆತಂಕ ಪಡದೆ ಅವುಗಳಿಂದ ಪಾಠ ಕಲಿಯಲು ಸಾಧ್ಯವಿದೆ,” ಎಂದು  ನಿಮ್ಹಾನ್ಸಿನ ಕ್ಲಿನಿಕಲ್ ಸೈಕಾಲಜಿ ವಿಬಾಗದ ಹೆಚ್ಚುವರಿ ಪ್ರೊಫೆಸರ್ ಡಾ. ಮಂಜುಳಾ ಹೇಳುತ್ತಾರೆ.

4. ನಿಮ್ಮನ್ನು ಗೌರವಿಸುವ ಹಾಗೂ ಪ್ರೀತಿಸುವ ಜನರೊಂದಿಗೆ ಸಮಯವನ್ನು ಕಳೆಯಿರಿ

ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆದರೆ ಹಿತಕರವೆನಿಸುತ್ತದೆ. ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳು ಮತ್ತು ನೆರೆಹೊರೆಯವರೊಡನೆ ಉತ್ತಮ ಸಂಬಂಧವನ್ನು ಹೊಂದುವುದರಿಂದ ಆತ್ಮೀಯತೆಯ ಭಾವನೆಯು ಬೆಳೆಯುತ್ತದೆ. ಸಹೋದ್ಯೋಗಿಗಳೊಂದಿಗೆ ಊಟ ಮಾಡುವುದು, ಅಥವಾ ನೀವು ಬಹುಸಮಯದಿಂದ ಭೇಟಿಯಾಗಿರದ ಸ್ನೇಹಿತರನ್ನು ಭೇಟಿಮಾಡಿ. ನಗು, ಪ್ರೀತಿ ಮತ್ತು ಅಪ್ಪುಗೆಯ ಮೌಲ್ಯ ಯಾವ ತಂತ್ರ ಜ್ಞಾನದಿಂದಲೂ ಸಿಗುವುದಿಲ್ಲ 

5. ಹೊಸ ಚಟುವಟಿಕೆ, ಹವ್ಯಾಸವನ್ನು ತೊಡಗಿಸಿಕೊಳ್ಳಿ.

ನೀವು ಇಷ್ಟಪಡುವ ಯಾವುದಾದರೂ ಚಟುವಟಿಕೆ ಮಾಡಿದರೆ ಸಂತೋಷದಿಂದಿರಬಹುದು. ಯಾವುದೇ ಹವ್ಯಾಸ ಅಥವಾ ಚಟುವಟಿಕೆ ನಿಮ್ಮಲಿ ಏಕಾಗ್ರತೆಯನ್ನು ಮೂಡಿಸಿ ವಿಶ್ರಮಿಸುವಂತೆ ಮಾಡುತ್ತದೆ. ಹವ್ಯಾಸಗಳ ನಿಮ್ಮ ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತದೆ.

ಹೊಸ ಚಟುವಟಿಕೆಗಳಿಂದ ನಿಮ್ಮಲ್ಲಿ ಒಂದು ಹೊಸ ದೃಷ್ಟಿಕೋನವು ಬೆಳೆಯುತ್ತದೆ. ಹೊಸ ವಿಷಯಗಳನ್ನು ಕಲಿಯುವುದರಿಂದಾಗಿ ನಿಮ್ಮ ಯೋಚನಾ ಸರಣಿಯು ಬದಲಾಗುತ್ತದೆ ಮತ್ತು ನಿಮ್ಮಲ್ಲಿ ಏಕಾಗ್ರತೆಯ ಪ್ರಮಾಣವು ಜಾಸ್ತಿಯಾಗುತ್ತದೆ. ಹೊಸ ವಿಷಯಗಳನ್ನು ಕಲಿತಿದ್ದರ ಬಗ್ಗೆ ಹೆಮ್ಮೆಯೆನಿಸುತ್ತದೆ. 

6. ನಿಮ್ಮ ಒತ್ತಡವನ್ನು ನಿಭಾಯಿಸಿ

ಕೆಲವು ವ್ಯಕ್ತಿಗಳಿಂದ ಮತ್ತು ಕೆಲಸಗಳಿಂದ ನಮ್ಮಲ್ಲಿ ಒತ್ತಡವುಂಟಾಗುತ್ತದೆ. ಯಾವ ಕಾರಣದಿಂದ ನಿಮ್ಮಲ್ಲಿ ಒತ್ತಡವುಂಟಾಗುತ್ತಿದೆ ಎಂದು ಅರಿಯಲು ಪ್ರಯತ್ನಿಸಿ. ಆದಷ್ಟೂ ಅಂತಹ ಪರಿಸ್ಥಿತಿಗಳಿಂದ ದೂರವಿರಿ. ಬಹುಶಃ ಎಲ್ಲಾ ಸಮಯದಲ್ಲಿಯೂ ಹಾಗೇ ಮಾಡುವುದು ಸಾಧ್ಯವಿಲ್ಲ. ಕೆಲವೊಮ್ಮೆ ಪರಿಸ್ಥಿತಿಯನ್ನು  ನಿಭಾಯಿಸಲು ಗೊತ್ತಾಗದೆ ಒತ್ತಡ ಅನುಭವಿಸಬಹುದು. ಆದ್ದರಿಂದ ಒತ್ತಡವನ್ನು ನಿರ್ವಹಿಸುವ ತಂತ್ರಗಳನ್ನು ರೂಢಿಸಿಕೊಳ್ಳಬೇಕು.

“ಒಂದು ವೇಳೆ ಪರೀಕ್ಷೆಗಳಿಂದ ಒತ್ತಡವುಂಟಾಗುತ್ತಿದ್ದರೆ, ಪರಿಕ್ಷೆ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಪರೀಕ್ಷೆಗಳು ನಿಮ್ಮ ಜೀವನದ ಒಂದು ಭಾಗವಾಗಿದ್ದು, ಸಹಜವಾಗಿ ನೀವು ಎದುರಿಸಬೇಕಾಗಿರುವ ಸಂಗತಿ ಹೊರತು ನಿಮ್ಮ ಜೀವನವನ್ನು ನಿರ್ಧರಿಸುವ ಅಂಶವಲ್ಲ.

ಕೆಲವು ಬಾರಿ ಒತ್ತಡವನ್ನುಂಟುಮಾಡುವ ಸನ್ನಿವೇಶದಿಂದ  ದೂರವಿದ್ದರೆ ಸಮಸ್ಯೆ ಪರಿಹಾರವಾಗುತ್ತದೆ. ಆದರೆ  ಅಂತ ಸನ್ನಿವೇಶದಿಂದ ಯಾವಾಗ ಸಾಧ್ಯ ಮತ್ತು ಯಾವಾಗ ಸಾಧ್ಯವಿಲ್ಲ ಎಂದು ತಿಳಿಯಲು ಕಷ್ಟವಾಗಬಹುದು. ಆದ್ದರಿಂದ ಒತ್ತಡವನ್ನು ನಿರ್ವಹಿಸಲು ನಿಮ್ಮದೇ ಆದ ಮಾರ್ಗ ಹುಡುಕಿ. ಸ್ನೇಹಿತರೊಂದಿಗೆ ಮಾತನಾಡುವುದು, ಪರಿಸ್ಥಿತಿಯನ್ನು ಇನ್ನೊಮ್ಮೆ ಅವಲೋಕಿಸುವುದು, ಧ್ಯಾನ, ವಾಕಿಂಗ್, ಸಂಗೀತ ಆಲಿಸುವುದು ಮತ್ತು ವ್ಯಾಯಾಮದಂತಹ ಚಟುವಟಿಕೆಗಳು ನಿಮಗೆ ನೆರವಾಗಬಹುದು.” ಎನ್ನುತ್ತಾರೆ ಮೌಲಿಕಾ ಶರ್ಮಾ.

7. ನಿಮ್ಮನ್ನು ಒಪ್ಪಿಕೊಳ್ಳಿ ಮತ್ತು ನಂಬಿಕೆಯಿಡಿ.

ಎಲರೂ ಭಿನ್ನವಾದ ವ್ಯಕ್ತಿತ್ವ ಹೊಂದಿರುತ್ತಾರೆ.  ನಿಮ್ಮ ಸಾಮರ್ಥ್ಯವನ್ನು ಪೋಷಿಸಿ ನಿಮ್ಮ ಕುಂದುಗಳನ್ನು ಒಪ್ಪಿಕೊಳ್ಳುವುದರಿಂದ ಜೀವನದಲ್ಲಿ ಧೈರ್ಯದಿಂದ ಮುನುಗ್ಗಲು ಸಾಧ್ಯ. ಯಾರೂ ಪರಿಪೂರ್ಣರಲ್ಲ, ನಿಮ್ಮಂತೆಯೇ ಇತರರಲ್ಲೂ ನ್ಯೂನ್ಯತೆಗಳಿವೆ.  ನಿಮ್ಮ ಕುಂದುಗಳನ್ನು ಗುರುತಿಸಿ, ಅದನ್ನು ತಿದ್ದಲು ಪ್ರಯತ್ನಿಸಿ. 

8. ಇರುವುದರ ಬಗ್ಗೆ ಕೃತಜ್ಞರಾಗಿರಿ.

ನಿಮ್ಮಲ್ಲಿ ಇರುವುದರ ಬಗ್ಗೆ ಕೃತಜ್ಞರಾದರೆ, ಇಲ್ಲದಿರುವುದರ ಬಗೆಗಿನ ಚಿಂತೆ ಕಡಿಮೆಯಾಗುತ್ತದೆ ಮತ್ತು ಮಾನಸಿಕ ಆರೋಗ್ಯ ವರ್ಧಿಸುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ನೀವು ಆ ದಿನ ಯಾವ ವಿಷಯಕ್ಕೆ ಕೃತಜ್ಞರಾಗಿದ್ದೀರಿ ಎಂಬುದನ್ನು ಪುಸ್ತಕದಲ್ಲಿ ಅಥವಾ ಡೈರಿಯಲ್ಲಿ ಬರೆಯಿರಿ. ನಿಮ್ಮ ಪ್ರೀತಿಪಾತ್ರರರಿಗೆ ಕೃತಜ್ಞತೆ ಸಲ್ಲಿಸಿ. ಕೃತಜ್ಞತೆ ಭಾವನೆಯಿಂದ ನೀವು ಸಂತೃಪ್ತತೆ ಅನುಭವಿಸುತ್ತೀರಿ.

9. ನಿಮ್ಮನ್ನು ನೀವು ಅಭಿವ್ಯಕ್ತಿಗೊಳಿಸಿ

ನಾವು ಋಣಾತ್ಮಕದ ‘ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತೇವೆ. ಆದರೆ ಅವುಗಳನ್ನು  ವ್ಯಕ್ತಪಡಿಸಿ ಮನಸ್ಸಿನಲ್ಲಿರುವ ಗೊಂದಲವನ್ನು ಪರಿಹರಿಸಿಕೊಳ್ಳಬಹುದು. ಹಲವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸದೆ ಇದ್ದರೆ ಅವರು ಗಟ್ಟಿಗರು ಎಂದು ಭಾವಿಸುತ್ತಾರೆ. ಆದರೆ ಇದು ಅಧಿಕ ಒತ್ತಡವನ್ನು ಉಂಟು ಮಾಡುತ್ತದೆ.

ಭಾವನೆಗಳನ್ನು ಅದುಮಿಟ್ಟುಕೊಂಡರೆ ಖಿನ್ನತೆ ಅಥವಾ ಆತಂಕದ ಸಮಸ್ಯೆಗೂ ಕಾರಣವಾಗಬಹುದು. ವ್ಯಕ್ತಿಯು ಸಿಟ್ಟು ಮತ್ತು ದುಃಖವನ್ನು ಕೂಡಾ ಅಭಿವ್ಯಕ್ತಿ ಪಡಿಸಬಹುದು. ಆದ ಕಾರಣ ನಮಗೂ, ನಮ್ಮ ಸಂಬಂಧ ಮತ್ತು ನಮ್ಮ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮಾರ್ಗವನ್ನು ಅರಿಯಬೇಕು. “ಯಾವ ಭಾವನೆಯೂ ತನ್ನಷ್ಟಕ್ಕೇ ತಾನೆ ಒಳ್ಳೆಯದು ಅಥವಾ ಕೆಟ್ಟದ್ದಾಗಿರುವುದಿಲ್ಲ. ಎಲ್ಲಾ ತರಹದ ಭಾವನೆಗಳೂ ಮುಖ್ಯವಾಗಿರುತ್ತವೆ ಮತ್ತು ಅವಶ್ಯಕವಾಗಿರುತ್ತವೆ. ಆದರೆ ನೀವು ಅವುಗಳನ್ನು ಎಷ್ಟು ತೀವ್ರವಾಗಿ ಅನುಭವಿಸುತ್ತಿದ್ದೀರಿ, ಯಾವ ರೀತಿಯಲ್ಲಿ ಅಭಿವ್ಯಕ್ತಿಪಡಿಸುತ್ತೀರಿ  ಮತ್ತು ನಿಮ್ಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ  ಎಂದು ಅರಿಯುವುದು ಮುಖ್ಯ.” ಎನ್ನುತ್ತಾರೆ ಡಾ. ಮಂಜುಳಾ.

10. ಸಹಾಯ ಪಡೆಯಿರಿ.

ಒತ್ತಡ, ಆತಂಕ ಅಥವಾ ಬೇಸರದಿಂದ ಮುಕ್ತವಾದ ಪರಿಪೂರ್ಣ ಜೀವನವನ್ನು ಹೊಂದಿರುವವರು ಯಾರೂ ಇಲ್ಲ. ದುಃಖ, ಸವಾಲು, ನಿರಾಶೆ, ಗೊಂದಲ, ಕೋಪ ಅಥವಾ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲವೆನಿಸಿದಾಗ, ನಿಮ್ಮ ಸಂಗಾತಿ, ಸ್ನೇಹಿತರು, ಪಾಲಕರು, ಒಡಹುಟ್ಟಿದವರು ಅಥವಾ ಸಂಬಂಧಿಗಳಲ್ಲಿ ಮಾತನಾಡಿ.

ನಿಮಗೆ ಹೆಚ್ಚಿನ ಬೆಂಬಲದ ಅಗತ್ಯವಿದೆಯೆನಿಸಿದರೆ ಚಿಕಿತ್ಸಕರು ಅತವಾ ಆಪ್ತಸಮಾಲೋಚಕರನ್ನು ಭೇಟಿ ಮಾಡಿ. ನೀವು ಎಷ್ಟು ಬೇಗ ಸಹಾಯವನ್ನು ಪಡೆಯುತ್ತೀರೋ, ಅಷ್ಟು ಒಳ್ಳೆಯದು. ಸಹಾಯ ಕೇಳಲು ಸಂಕೋಚ ಪಡಬೇಡಿ - ಇದು ದೌರ್ಬಲ್ಯವಲ್ಲ, ಧೈರ್ಯದ ಲಕ್ಷಣವಾಗಿದೆ. ನೀವು ಒಂಟಿಯಾಗಿ ಜೀವನದ ಸವಾಲುಗಳನ್ನು ಎದುರಿಸಬೇಕಾಗಿಲ್ಲ. ಧೃಡ ಚಿತ್ತವಿರುವ  ಜನ ಸಹಾಯ, ಬೆಂಬಲ ಪಡೆದು ಮುಂದೆ ಸಾಗುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org