ಮಕ್ಕಳು ಮನೆ ಬಿಟ್ಟು ಹೋದಾಗ

ವಯಸ್ಸಿಗೆ ಬಂದ ಮಕ್ಕಳು ಬೇರೆ ಬೇರೆ ಕಾರಣಗಳಿಗೆ ಮನೆಯನ್ನು ಬಿಟ್ಟು ಹೋದಾಗ ಏನಾಗುತ್ತದೆ? ಮನೆ ಬಿಟ್ಟು ಹೋಗುವುದು – ಹಾಗೆಂದರೇನರ್ಥ? ಅದರಿಂದ ಉಂಟಾಗುವ ಪರಿಣಾಮ ಏನು?

ಇದನ್ನು ಅರ್ಥ ಮಾಡಿಕೊಳ್ಳಲು ನಾವು ಕೆಲವು ಪರಿಣತರೊಂದಿಗೆ ಮಾತನಾಡಿದೆವು.

ಖಾಲಿಮನೆ ಅಂದರೆ  ವಯಸ್ಸಿಗೆ ಬಂದ ಮಕ್ಕಳು ಮನೆ ಬಿಟ್ಟು ಹೋದಾಗ ಉಂಟಾಗುವ ದುಃಖ ಮತ್ತು ಕಾಡುವ ಒಂಟಿತನದ ಅನುಭವ. ಮಕ್ಕಳು ಮನೆ ಬಿಟ್ಟು ಹೋಗುವ ಕಾರಣ ಬೇರೆ ಬೇರೆ  ರೀತಿಯದ್ದಾಗಿರುತ್ತದೆ. ಕೆಲವರ ಪಾಲಿಗೆ ಅಮೂಲ್ಯ ವಸ್ತುವೊಂದು ಕೈಬಿಟ್ಟು ಹೋದಂತೆ ಅನುಭವವಾದರೆ, ಕೆಲವರ ಪಾಲಿಗೆ ಭರಿಸಲಾಗದ ನಷ್ಟ ಎನ್ನುವ ಭಾವನೆ ಕಾಡತೊಡಗುತ್ತದೆ. ಈ ಅನುಭವ ಕೇವಲ ವಿಷಾದ ಪಡಲಿಕ್ಕಷ್ಟೇ ಅಲ್ಲ; ತಾವು ಮಕ್ಕಳ ಪಾಲಕರು ಅನ್ನುವ ಗುರುತನ್ನು ಕಳೆದುಕೊಳ್ಳುತ್ತೇವೆ ಅನ್ನುವ ಅಭದ್ರತೆಯನ್ನೂ ಕೆಲವರು ಅನುಭವಿಸುತ್ತಾರೆ.

ಒಮ್ಮೆ ಮಕ್ಕಳು ಮನೆಬಿಟ್ಟು ಹೋದರೆಂದರೆ, ಅದರಿಂದ ಉಂಟಾಗುವ ಪರಿಣಾಮಗಳು ಆಳವಾಗಿ ಉಳಿದುಹೋಗುತ್ತವೆ. ಮಕ್ಕಳು ಪ್ರತ್ಯೇಕವಾಗಿ ವಾಸಿಸತೊಡಗಿದ ಮೇಲೆ ಕೆಲವು ಪೋಷಕರು ಖಿನ್ನತೆ, ಉದ್ವೇಗ, ಹತಾಶೆ ಮೊದಲಾದ ಮಾನಸಿಕ ಅಸ್ವಸ್ಥತೆಗಳಿಗೆ ತುತ್ತಾಗುತ್ತಾರೆ. ತಮ್ಮ ಜೀವನವಿನ್ನು ನಿಷ್ಪ್ರಯೋಜಕ ಎಂದು ಭಾವಿಸತೊಡಗುತ್ತಾರೆ. ಇದನ್ನು ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಪರಿಹರಿಸಬಹುದು.

“ಖಾಲಿ ಮನೆ” ನಿಮ್ಮ ಮಕ್ಕಳೊಂದಿಗಿನ ಸಂಬಂಧದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಇಂತಹ ಪರಿಸ್ಥಿತಿಗೆ ಒಳಗಾದಾಗ ಆತಂಕ ಮತ್ತು ಉದ್ವೇಗ ಮನೋಭಾವ ನಿಮ್ಮಲ್ಲಿ ಎದ್ದು ಕಾಣ ತೊಡಗುತ್ತದೆ. ಪ್ರತ್ಯೇಕವಾಗಿ ವಾಸಿಸುವ ಮಕ್ಕಳು ತಮ್ಮ ಪೋಷಕರಿಗೆ ಕಾಲ ಕಾಲಕ್ಕೆ ಕರೆ ಮಾಡಲು ಸಾಧ್ಯವಾಗದೆ ಹೋಗಬಹುದು. ಮಾತನಾಡಿಸುವ ಇಚ್ಛೆ ಇದ್ದರೂ ಕೆಲಸಗಳ ಒತ್ತಡದಲ್ಲಿ ಮರೆತು ಹೋಗಬಹುದು. ಪೋಷಕರು ಇದನ್ನು ಮಕ್ಕಳ ನಿರಾಸಕ್ತಿ ಎಂದು ತಪ್ಪಾಗಿ ಭಾವಿಸುವುದೇ ಹೆಚ್ಚು. ಮಕ್ಕಳ ಜೊತೆಗಿನ ಸಂಬಂಧ ಕಡಿದು ಹೋಗುತ್ತಿದೆ, ಅದನ್ನು ಸರಿ ಮಾಡಬೇಕು ಎನ್ನುವ ತರಾತುರಿಯಲ್ಲಿ ಪೋಷಕರು ಮಕ್ಕಳನ್ನು ಟೀಕಿಸಲು ಪ್ರಯತ್ನಿಸಬಹುದು. ಇದರಿಂದ ಸಂಬಂಧ ಮತ್ತಷ್ಟೂ ಹದಗೆಡುತ್ತದೆ ಹೊರತು ಸುಧಾರಿಸಲಾರದು.

ಆದರೆ ಎಲ್ಲ ಸಲವೂ ಹೀಗೆ ಆಗುವುದಿಲ್ಲ. ಕೆಲವು ಪೋಷಕರು ಮಕ್ಕಳೊಂದಿಗೆ ಸ್ನೇಹಿತರಂತೆ ಇರುತ್ತಾರೆ. ಮಕ್ಕಳೂ ಕೂಡ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದುಕೊಂಡೇ ಬಾಂಧವ್ಯ ಕಾಪಾಡಿಕೊಳ್ಳುತ್ತಾರೆ.  

ಈ ಅವಧಿಯಲ್ಲಿ ತೊಂದರೆಗಳನ್ನು ಕಡಿಮೆ ಮಾಡಲು ಮಕ್ಕಳು ಏನು ಮಾಡಬಹುದು?

ಒತ್ತಡಕ್ಕೆ ಒಳಗಾಗಿರುವ ಯಾವುದೇ ವ್ಯಕ್ತಿಯ ಜೊತೆ ವ್ಯವಹರಿಸುವಾಗ ಸಹನೆ ಮತ್ತು ಸಹಾನುಭೂತಿಯಿಂದ ಅವರೊಡನೆ ವರ್ತಿಸಬೇಕು. ತಾವು ಮನೆ ತೊರೆದು ಪ್ರತ್ಯೇಕವಾಗಿ ವಾಸಿಸತೊಡಗಿದಾಗ ಪೋಷಕರು ಅನುಭವಿಸುವ ಆತಂಕವನ್ನು ಮಕ್ಕಳು ಕೂಡ ಅರಿಯಬೇಕು. ಪೋಷಕರಲ್ಲಿ ತಮ್ಮ ಮಕ್ಕಳು ಎಲ್ಲಿರುತ್ತಾರೆ, ಹೇಗಿರುತ್ತಾರೆ ಎಂಬ ಆತಂಕಗಳಿರುತ್ತವೆ. ಈ ಆತಂಕಗಳಿಗೆ ಮಕ್ಕಳು ಸಮಾಧಾನ ಹೇಳಬೇಕು.

ಕೆಲವೊಮ್ಮೆ ಪೋಷಕರು ಚಿಕ್ಕ ಪುಟ್ಟ ವಿಷಯಕ್ಕೆಲ್ಲ (ಉದಾ: ಕಾಲಕಾಲಕ್ಕೆ ಕರೆ ಮಾಡಿ ವಿಚಾರಿಸಿಕೊಳ್ಳುವುದಿಲ್ಲ ಎಂದು) ಮಕ್ಕಳ ಮೇಲೆ ಕೋಪಗೊಳ್ಳುವುದುಂಟು. ಮಕ್ಕಳು ತಮ್ಮ ತಂದೆ ತಾಯಿಯಿಂದ ದೂರವಿದ್ದರೂ ಸಂಬಂಧವನ್ನು ಕಾಪಾಡಲು ಪ್ರಯತ್ನಿಸುತ್ತ ಇರುತ್ತಾರೆ. ಹಾಗಿದ್ದರೂ  ಪೋಷಕರು ಮನೆಗೆ ಮರಳಿ ಬರುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ.

ಇನ್ನೂ ಕೆಲವು ಬಾರಿ ಪೋಷಕರು ಮಕ್ಕಳು ತಮ್ಮನ್ನು ವಂಚಿಸಿದರೆಂದು ಭಾವಿಸಿ ಅವರೊಡನೆ ಮಾತುಕತೆಯನ್ನು ಬಿಡುವುದುಂಟು. ಇಂಥಾ ಸಂದರ್ಭದಲ್ಲಿ ಮಕ್ಕಳು ಅಸಹಾಯಕರಾಗಿ ತುಂಬಾ ಸಂಕಟ ಅನುಭವಿಸುತ್ತಾರೆ. ಈ ಸ್ಥಿತಿಯಲ್ಲಿ ಮಕ್ಕಳು ಪೋಷಕರೊಂದಿಗೆ ಮುಕ್ತವಾಗಿ ಮಾತನಾಡಬೇಕು. ಅವರು ಹಾಗೆ ಮಾಡುವುದರಿಂದ ತಮ್ಮ ಮೇಲೆ ಉಂಟಾಗುವ ಪರಿಣಾಮವನ್ನು ವಿವರಿಸಬೇಕು. ನಾವೂ ತಂದೆ ತಾಯಿಯರೊಡನೆ ಸಮಯ ಕಳೆಯಲು ಬಯಸುತ್ತೇವೆ, ತಮಗೆ ಅವರ ಮೇಲೆ ಕಾಳಜಿ ಇದೆ ಅನ್ನುವುದನ್ನು ಮನದಟ್ಟು ಮಾಡಬೇಕು.

ಹೀಗೆ ಮುಕ್ತವಾಗಿ ಮಾತಾಡುವುದು ಮತ್ತು ಸಮಾಧಾನ ಪಡಿಸುವುದು, ಅವರ ಮಾತುಗಳನ್ನು ಆಲಿಸಿ ಸುಖ ದುಃಖಗಳನ್ನು ಹಂಚಿಕೊಳ್ಳುವುದು ಪೋಷಕರ ನೋವನ್ನು ಕಡಿಮೆ ಮಾಡುತ್ತದೆ.

ಹಾಗೆಯೇ ಮಕ್ಕಳು ಪೋಷಕರನ್ನು ಭೇಟಿ ಮಾಡಲು ಸಮಯ ಹೊಂದಿಸಿಕೊಂಡು, ಅವರನ್ನು ಖುಷಿಪಡಿಸಲು ಯತ್ನಿಸುವುದು ಅಗತ್ಯ. ಇದರಿಂದ ಮಕ್ಕಳು ಹಾಗೂ ಪೋಷಕರಿಬ್ಬರೂ ಇಂತಹ ಒಂದು ಖಾಲಿಮನೆ ಪರಿಣಾಮದ ಯಾತನೆಯಿಂದ ಹೊರಬರಲು ಸಾಧ್ಯವಾಗುತ್ತದೆ.

ಖಾಲಿಮನೆ ಪರಿಣಾಮವು ದಂಪತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮಕ್ಕಳು ಮನೆ ತೊರೆದು ಪ್ರತ್ಯೇಕವಾಗಿ ವಾಸಿಸತೊಡಗಿದ ಮೇಲೆ ದಂಪತಿ ತಮ್ಮ ನಡುವಿನ ಸಂಬಂಧಕ್ಕೆ ಬೆಲೆ ಕೊಡಲು ಪ್ರಾರಂಭಿಸುತ್ತಾರೆ. ಕೆಲವರಿಗೆ ತಮ್ಮ ಸಂಗಾತಿ ಕುಟುಂಬಕ್ಕೆ ಮಹತ್ತರ ಕೊಡುಗೆಯನ್ನೂ, ಅಪಾರ ಪ್ರೀತಿಯನ್ನೂ ನೀಡಿದ್ದಾರೆಂಬ ಅರಿವು ಮೂಡಿದರೆ; ಕೆಲವರಿಗೆ ಜೀವನದ ಬಹುಭಾಗ ಪೋಷಕರ ಪಾತ್ರವನ್ನೇ ನಿರ್ವಹಿಸಿ, ಧಿಡೀರನೆ ಬದಲಾದ ಜೀವನಕ್ಕೆ ಹೊಂದಿಕೊಳ್ಳದೆ ಹೋಗುತ್ತಾರೆ. ಇದರಿಂದ ದಾಂಪತ್ಯದಲ್ಲಿ ವಿರಸ ಉಂಟಾಗುತ್ತದೆ. ಗಂಡ ಹೆಂಡತಿಯ ಸಂಬಂಧವನ್ನು ಹಾಳು ಮಾಡುವ ಅಪಾಯವೂ ಇರುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳನ್ನು ನಿಭಾಯಿಸಲಾಗದೆ ದಂಪತಿ ಪರಸ್ಪರ ಅಸಹನೆ ತೋರುವುದೂ ಇದೆ.

ಖಾಲಿಮನೆ ಚಡಪಡಿಕೆಯನ್ನು ನಿಭಾಯಿಸುವುದು ಹೇಗೆ?

ಮೊದಲನೆಯದಾಗಿ ಇದರಿಂದ ಉಂಟಾಗುವ ಭಾವನಾತ್ಮಕ ಚಡಪಡಿಕೆಗಳನ್ನು ಗುರುತಿಸುವುದು ಮತ್ತು ಅವುಗಳ ತೀವ್ರತೆಯನ್ನು ನಿರ್ಧರಿಸುವುದು. ಈ ನಿಟ್ಟಿನಲ್ಲಿ, ಇಂಥದೇ ಅನುಭವಗಳನ್ನುಅನುಭವಿಸಿದ ಅಥವಾ ಅನುಭವಿಸದೆ ಇರುವ ಗೆಳೆಯರೊಂದಿಗೆ ಮುಕ್ತವಾಗಿ ಮಾತನಾಡುವುದು ಹೆಚ್ಚು ಸಹಕಾರಿ.

ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವಂಥ ಚಟುವಟಿಕೆಗಳನ್ನು ಮಾಡುವುದು, ಕೆಲವು ವ್ಯಕ್ತಿಗಳ ಜೊತೆ ಒಡನಾಡುವುದು ಕೂಡ ಇಂತಹ ಚಡಪಡಿಕೆಯಿಂದ ಹೊರಬರಲು ಸಹಾಯ ಮಾಡುವುದು.ಹಾಗೆಯೇ; ಉಲ್ಲಸಿತ ಚಟುವಟಿಕೆಗಳನ್ನು ನಡೆಸುವುದು, ಪರಸ್ಪರ ಆಪ್ತತೆ ಬೆಳೆಸಿಕೊಳ್ಳುವುದು (ಅಥವಾ ಮತ್ತಷ್ಟು ಗಟ್ಟಿಗೊಳಿಸುವುದು) ಒಂಟಿತನದ ಭಾವನೆಯಿಂದ ಹೊರಬರಲು ಉತ್ತಮ ಉಪಾಯವಾಗಿದೆ. ಪ್ರವಾಸ, ಹೊಸ ಸಾಹಸಮಯ ಚಟುವಟಿಕೆಗಳು, ಹೊಸ ಒಡನಾಟಗಳು ದಂಪತಿಯ ಪರಸ್ಪರ ಅಸಹನೆಯನ್ನು ಬಿಟ್ಟು ಒಗ್ಗೂಡಿಸಲು ಸಹಕಾರಿಯಾಗುತ್ತವೆ. ಹಾಗೂ ವೈಯಕ್ತಿಕವಾಗಿ ಇಬ್ಬರು ಮಕ್ಕಳಿಂದ ದೂರವಿರುವ ಒಂಟಿತನ, ಅಸಹಾಯಕತೆಯೇ ಮೊದಲಾದ ಭಾವನೆಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಇವೆಲ್ಲದರ ಜೊತೆಗೆ ವೃತ್ತಿಪರ ಆಪ್ತ ಸಮಾಲೋಚಕರನ್ನು  ಭೇಟಿಯಾಗುವ ಮೂಲಕವೂ ಪರಿಹಾರಕ್ಕೆ ಯತ್ನಿಸಬಹುದು.

ಆಪ್ತ ಸಮಾಲೋಚಕರಿಂದ ನೀವು ಏನನ್ನು ನಿರೀಕ್ಷಿಸಬಹುದು?

ಅವರನ್ನು ಭೇಟಿ ಮಾಡುವುದರಿಂದ ನಿಮ್ಮ ರೋಗ ಯಾವುದೆಂದು ನಿರ್ಣಯಿಸಲು ಸಾಧ್ಯವಿಲ್ಲ. ಆದರೆ ಪರಿಣಿತ ಆಪ್ತ ಸಮಾಲೋಚಕರು ನಿಮ್ಮ ಮನಃಪರಿವರ್ತನೆಗೆ ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಬಲ್ಲರು. ವೃತ್ತಿಪರ ಆಪ್ತ ಸಮಾಲೋಚಕರ ಜೊತೆ ಮಾತನಾಡುವ ಮೂಲಕ ನೀವು ನಿಮ್ಮದೇ ಆಲೋಚನಾ ವಿಧಾನಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳುತ್ತ ಸಾಗುವಿರಿ ಹಾಗೂ ಈ ಸಂದರ್ಭದಲ್ಲಿ ನೀವು ನಿಮ್ಮ ವರ್ತನೆಯನ್ನೂ ಸಂಗಾತಿಯೊಡನೆ ನಿಮ್ಮ ಸಂಬಂಧದಲ್ಲಿನ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗುವುದು ಮತ್ತು ಅವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಲು ಸಹಾಯವಾಗುವುದು.

(ನಿಮ್ಹಾನ್ಸ್ ನ ಡಾ.ಪ್ರೀತಿ ಸಿನ್ಹಾ ಅವರ ಪೂರಕ ಮಾಹಿತಿಯೊಂದಿಗೆ)

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org