ಆರೈಕೆದಾರರಿಗೂ ಆರೈಕೆ ಬೇಕು

ಬಹಳಷ್ಟು ಆರೈಕೆದಾರರಿಗೆ ವೃತ್ತಿಪರ ಆರೈಕೆ ಬಗ್ಗೆ ತಿಳಿದಿರುವುದಿಲ್ಲ. ಅನಿವಾರ್ಯದಿಂದ ಆರೈಕೆದಾರರಾಗಿರುತ್ತಾರೆ. ಇವರಿಗೆ ತಾವು ಆರೈಕೆ ಮಾಡಬೇಕಾದ ವ್ಯಕ್ತಿಯ ಕ್ಷೇಮವೇ ಅತಿ ಮುಖ್ಯವಾಗಿರುತ್ತದೆ. ಹೀಗಾಗಿ ತಮ್ಮ ಆರೋಗ್ಯದ ಬಗ್ಗೆ ಯೋಚಿಸುವುದಿಲ್ಲ. ಹಾಗೇನಾದರೂ ತಮಗೆ ಸ್ವಲ್ಪ ಸಮಯ ಮೀಸಲಿಟ್ಟರೆ/  ಸಮಯ ಕಳೆದರೆ ಅವರಿಗೆ ತಪ್ಪಿತಸ್ಥ ಭಾವನೆಯೂ ಬರುವುದುಂಟು.
ಆರೈಕೆದಾರರಲ್ಲಿ ಕಂಡು ಬರುವ ಒತ್ತಡಗಳನ್ನು ಈಗಾಗಲೇ ಸಂಶೋಧನೆಯು ಸ್ಪಷ್ಟಪಡಿಸಿದೆ. ಜೊತೆಗೆ ಯಾವುದೇ ಬೆಂಬಲವಿಲ್ಲದೆ ಪೂರ್ತಿಕಾಲ ಆರೈಕೆ ಮಾಡುತ್ತಾ ವಿಶ್ರಾಂತಿ ಸಿಗದೆ ಕಷ್ಟಪಡುವವರನ್ನು ಕೂಡ ಕಾಣಬಹುದು. ಆದರೆ ಹೀಗೆ ದಿನನಿತ್ಯ ಒಬ್ಬರೇ ಆರೈಕೆ ಮಾಡುತ್ತಾ ಹೋದಾಗ ಆರೈಕೆದಾರರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಅವರು ತಮ್ಮ ಆರೈಕೆಯ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.
ಸ್ವಯಂ- ಆರೈಕೆಯ 10 ಉತ್ತಮ ಸಲಹೆಗಳು:
  1. ಆಹಾರ: ಸಮಯಕ್ಕೆ ಸರಿಯಾದ ಆಹಾರ ಸೇವಿಸಿ ಮತ್ತು ಆರೋಗ್ಯಕರ  ಪಥ್ಯ ಪಾಲನೆ ಮಾಡಿ- ಇದು ದೀರ್ಘಕಾಲೀನ ಸುಸ್ತು ಮತ್ತು ಅಪೌಷ್ಟಿಕತೆಯನ್ನು ತಪ್ಪಿಸುತ್ತದೆ. 
  2. ನೀರು ಸೇವನೆ: ದೇಹಕ್ಕೆ ಅಗತ್ಯವಿರುವ ನೀರು ಸೇವಿಸಿ ಡೀಹೈಡ್ರೇಶನ್ ಆಗದೆ ಇರುವಂತೆ ನೋಡಿಕೊಳ್ಳಬೇಕು.ಇದರ ಕಡೆ ಗಮನ ಹರಿಸಿದಾಗ ದೇಹದಲ್ಲಿ ದ್ರವಾಂಶ ಕಡಿಮೆಯಾಗುವುದಿಲ್ಲ. 
  3. ವ್ಯಾಯಾಮ: ಇತರರ ಸಹಾಯ ಪಡೆದು ಸ್ವಲ್ಪ ಬಿಡುವು ಮಾಡಿಕೊಂಡು ಪ್ರತಿನಿತ್ಯ ವ್ಯಾಯಾಮ, ವಾಕಿಂಗ್ ಅಥವಾ ಯೋಗ ಮಾಡಿ. ಆರೈಕೆ ಮಾಡಬೇಕಾದ ವ್ಯಕ್ತಿಯನ್ನು ಬಿಟ್ಟು ಹೋಗಲು ಸಾಧ್ಯವಿಲ್ಲದಿದ್ದರೆ ಮನೆಯಲ್ಲಿಯೇ ಕುಳಿತು ಪ್ರಾಣಾಯಾಮ ಮತ್ತು ಧ್ಯಾನ ಮಾಡಿ.
  4. ಆತ್ಮೀಯರ ಭೇಟಿ: ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಆತ್ಮೀಯರ ಅಥವಾ ಪರಿಚಯಸ್ಥರ ಭೇಟಿ ಮಾಡಿ.  ಇದರಿಂದ  ಸಾಮಾನ್ಯ ಜ್ಞಾನ  ಹೆಚ್ಚುವುದರ ಜೊತೆಗೆ ಮನೆ ಮತ್ತು ಹೊರಗಿನ ಬದುಕಿನಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು. 
  5. ಮಾತುಕತೆ: ಆರೈಕೆದಾರರು ಎದುರಿಸುತ್ತಿರುವ ಕಷ್ಟದ ಬಗ್ಗೆ ಜನರಿಗೆ ಅರ್ಥವಾಗದಿದ್ದರೆ ಅವರು ಸಹಾಯ ಮಾಡಲು ಮುಂದೆ ಬರುವುದಿಲ್ಲ. ಮಾತುಕತೆಯ ಮೂಲಕ ನಿಮ್ಮಸಮಸ್ಯೆಯನ್ನು ಹಂಚಿಕೊಂಡಾಗ ಇತರರ ಸಹಾಯ ಸಿಗುವ ಸಾಧ್ಯತೆಗಳು ಹೆಚ್ಚುತ್ತದೆ. 
  6. ಬೇರೆ ಆರೈಕೆದಾರರ ಜೊತೆ ಸಂಪರ್ಕ:  ಮನಸ್ಸಿನ ಭಾವನೆಗಳು ಮತ್ತು ಕಷ್ಟವನ್ನು   ಇತರ ಆರೈಕೆದಾರರೊಂದಿಗೆ ಹಂಚಿಕೊಳ್ಳಿ .
  7. ಭಾವನಾತ್ಮಕ ಬೆಂಬಲ:  ವೈದ್ಯರ ಜೊತೆ ಅಥವಾ ಇತರ ವೃತ್ತಿಪರರ ಜೊತೆ ಮಾತನಾಡಿ. ಯಾವುದೇ ರೀತಿಯ ಹತಾಶೆಯ ಭಾವನೆ ಇದ್ದರೆ ವೈದ್ಯರಿಂದ ಸಹಾಯ ಪಡೆಯಿರಿ. ಬೇರೆಯವರ  ಸಹಾಯವನ್ನು ಪಡೆಯುವುದು ದೌರ್ಬಲ್ಯವಲ್ಲ.
  8. ವಾತಾವರಣ ಬದಲಾವಣೆ: ವ್ಯಕ್ತಿಗೆ ಮತ್ತು ಆರೈಕೆದಾರರಿಗೆ ಚಿಕ್ಕ ಪ್ರವಾಸಗಳು ಪ್ರಯೋಜನಕಾರಿ. ಸ್ವಲ್ಪ ಬಿಡುವು ಸಿಕ್ಕರೆ ಸ್ನೇಹಿತರನ್ನು ಭೇಟಿ ಮಾಡಿ ಅಥವಾ ವಿಹಾರಕ್ಕೆ ಹೋಗಿ.  ಇಲ್ಲವೇ ಪಾರ್ಕ್‌ನಲ್ಲಿ ಸ್ವಲ್ಪ ಹೊತ್ತು ಆರಾಮವಾಗಿ ಕುಳಿತು ವಿಶ್ರಮಿಸಿ.
  9. ಸಾಕಷ್ಟು ನಿದ್ದೆ: ದಿನಪೂರ್ತಿ ಕೆಲಸ ಮಾಡಲು ಸಾಧ್ಯವಾಗದೆ ಬಾಕಿ ಉಳಿದ ಕೆಲಸ ಮಾಡಲು ಸಂಜೆ ವೇಳೆ ಸೂಕ್ತವಾಗಿರಬಹುದು.  ಆದರೆ ಅನುದಿನ ತಡವಾಗಿ ಮಲಗಿದರೆ ಆರೋಗ್ಯ ಕೆಡುತ್ತದೆ ಮತ್ತು ಬೇಗ ಆಯಾಸವಾಗುತ್ತದೆ. ಆದರಿಂದ 7-8 ಘಂಟೆ ಕಾಲ ನಿದ್ರೆ ಮಾಡಿ.
ಸ್ವಯಂ ಆರೈಕೆಯಿಂದ ಮಾತ್ರ ಬೇರೆಯವರನ್ನು ನೋಡಿಕೊಳ್ಳಲು ಸಾಧ್ಯ ಎಂದು ಅರಿಯಬೇಕು . 

Related Stories

No stories found.