ಕುಟುಂಬದ ಆರೈಕೆ ಮಹಿಳೆಯರಿಗಷ್ಟೆ ಸೀಮಿತವಾಗಿರಬೇಕೆ ?

ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಮಹಿಳೆಯರಿಗಷ್ಟೇ ವಹಿಸಿದರೆ, ಅದು ಅವರಿಗೆ ಎಷ್ಟು ದೊಡ್ಡ ಹೊರೆಯಾಗುತ್ತದೆ ಗೊತ್ತೆ?

ಪುರುಷರು ಹೊರಗೆ ಹೋಗಿ ದುಡಿಯಬೇಕು ಮತ್ತು ಮಹಿಳೆಯರು ಮನೆವಾಳ್ತೆ ನಿರ್ವಹಿಸುತ್ತಾ, ಕುಟುಂಬವನ್ನು ಪಾಲಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಅನ್ನುವುದು ಒಂದು ಸಿದ್ಧಮಾದರಿಯ ನಿರೀಕ್ಷೆ.   “ಓ ಇ ಸಿ ಡಿ”ಯ ಪ್ರಕಾರ, ವಿಶ್ವಾದ್ಯಂತ ಇಂದಿಗೂ ಇಂಥದೊಂದು ಸಿದ್ಧಮಾದರಿಯ ನಂಬಿಕೆ ಚಾಲ್ತಿಯಲ್ಲಿದೆ; ಮತ್ತು ಮನೆಯಲ್ಲಿ ಮಹಿಳೆಯರ ದುಡಿಮೆ ಪುರುಷರಿಗಿಂತ ಹತ್ತು ಪಟ್ಟು ಹೆಚ್ಚಿದ್ದರೂ ಅವರಿಗೆ ಯಾವುದೇ ಬಗೆಯ ಮನ್ನಣೆ ದೊರೆಯುವುದಿಲ್ಲ.

ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ್ದರೆ ಅಥವಾ ಅಂಗವಿಕಲರು ಇದ್ದರೆ, ಅವರ ಆರೈಕೆಯನ್ನು ಕುಟುಂಬದ ಮಹಿಳೆಯರೇ ಮಾಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ನಮ್ಮ ಸಂಶೋಧನೆಯ ಪ್ರಕಾರ, ಭಾರತ ಮತ್ತು ನೇಪಾಳಗಳಲ್ಲಿ ಶೇ.84ರಷ್ಟು ಕುಟುಂಬ ನಿರ್ವಹಣೆ ಮಾಡುವವರು ಮಹಿಳೆಯರೇ ಆಗಿದ್ದಾರೆ. ನಮ್ಮ ಸಂಶೋಧನೆ ಮುಂದುವರಿದರೆ, ಈ ಪ್ರಮಾಣವು ಶೇ.90ಕ್ಕೆ ತಲುಪಬಹುದೆಂಬ ನಿರೀಕ್ಷೆಯಿದೆ.

ಕುಟುಂಬದ ಆರೈಕೆಯಲ್ಲಿ ಮಹಿಳೆಯರಿಗೆ ಹೊರಿಸಲಾಗುವ ಜವಾಬ್ದಾರಿಗಳು ಸಹಜವಾಗಿಯೇ ಸ್ತ್ರೀ – ಪುರುಷರ ನಡುವೆ ಅಸಮಾನತೆಯನ್ನು ಉಂಟುಮಾಡಿ, ತಾರತಮ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ, ಮಹಿಳೆಯರ ಹಕ್ಕುಗಳಿಗೂ ಚ್ಯುತಿ ತರುತ್ತವೆ.  ನಗರ ಪ್ರದೇಶದಲ್ಲಿನ ಮಹಿಳೆಯರಿಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಅಥವಾ ಬಡಕುಟುಂಬದ ಹೆಣ್ಣುಮಕ್ಕಳ ಮೇಲೆ ಈ ಹೇರಿಕೆಯು ಹೆಚ್ಚಿನ ದುಷ್ಪರಿಣಾಮ ಉಂಟುಮಾಡುತ್ತದೆ.

ಇದಕ್ಕೆ ಕೆಲವು ನಿದರ್ಶನಗಳು ಇಲ್ಲಿವೆ:

ಶಿಕ್ಷಣ

ಮನೆಗೆಲಸಗಳು, ನಿರ್ವಹಣೆ, ಕುಟುಂಬದ ಇತರ ಸದಸ್ಯರ ಬೇಕು - ಬೇಡಗಳ ಪೂರೈಕೆ – ಇತ್ಯಾದಿ ಜವಾಬ್ದಾರಿಗಳನ್ನು ಕೆಲವೊಮ್ಮೆ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳ ಮೇಲೆಯೂ ಹೊರಿಸಲಾಗುತ್ತದೆ. ಇದರಿಂದ ಆ ಹೆಣ್ಣುಮಕ್ಕಳಿಗೆ ಸರಿಯಾಗಿ ಶಾಲೆಗೆ ಹೋಗುವುದು ಸಾಧ್ಯವಾಗುವುದಿಲ್ಲ. ಮನೆಯಲ್ಲಿಯೂ ಓದಿಕೊಳ್ಳಲಿಕ್ಕಾಗಲೀ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಿಕ್ಕಾಗಲೀ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಸಮಾಜದಲ್ಲಿ ಯಾರೊಂದಿಗೂ ಬೆರೆಯುವುದಕ್ಕಾಗಲೀ ಗೆಳೆತನ ಬೆಳೆಸಲಿಕ್ಕಾಗಲೀ ಸಮಯ ಒದಗುವುದಿಲ್ಲ.

ಆದರೆ, ಅದೇ ವಯಸ್ಸಿನ ಗಂಡುಮಕ್ಕಳಿಗೆ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಲು ಹೆಣ್ಣುಮಕ್ಕಳಿಗಿಂತ ಹೆಚ್ಚು ಅವಕಾಶಗಳಿರುತ್ತವೆ. ಹೆಣ್ಣುಮಕ್ಕಳಿಗೆ ಮನೆಯ ಜವಾಬ್ದಾರಿಗಳೇ ಹೆಚ್ಚಾಗಿರುವುದರಿಂದ, ಅವರು ಹೆಚ್ಚಿನ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಸಾಧನೆ ಇರಲಿ, ಕೆಲವೊಮ್ಮೆ ಅವರ ಶೈಕ್ಷಣಿಕ ಪ್ರಗತಿಯೇ ಕುಂಠಿತಗೊಳ್ಳುವುದೂ ಉಂಟು. ಕೆಲವು ಬಾರಿ ದಿನವಿಡೀ ಕುಟುಂಬದ ಆರೈಕೆ ಮಾಡಬೇಕಾದ ಸಂದರ್ಭಗಳು ಒದಗಿ, ಬಾಲಕಿ/ಯುವತಿಯರು ಬೇರೆ ದಾರಿಯಿಲ್ಲೆ ತಮ್ಮವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುವುದೂ ಉಂಟು.

ಉದ್ಯೋಗ ಮತ್ತು ಆರ್ಥಿಕ ಭದ್ರತೆ

ಮನೆಯಲ್ಲಿರುವವರನ್ನು ನೋಡಿಕೊಳ್ಳುವುದು, ಅವರ ಆರೈಕೆ ಮಾಡುವುದು ಒಂದು ರೀತಿಯ ಸಂಬಳವಿಲ್ಲದ ದುಡಿಮೆ. ಮನೆಯಲ್ಲಿ ಕೇವಲ ಕುಟುಂಬದವರ ಆರೈಕೆಯಲ್ಲಿ ತೊಡಗಿರುವ ಮಹಿಳೆಯರು ಹೊರಗೆ ದುಡಿಯಲಾಗದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುತ್ತಾರೆ. ಅವರು ಪ್ರತಿಯೊಂದು ಖರ್ಚು ವೆಚ್ಚಗಳಿಗೂ  ಪುರುಷರನ್ನೇ ಅವಲಂಬಿಸಬೇಕಾಗುತ್ತದೆ.

ಈ ಅವಲಂಬನೆಯು ಮಹಿಳೆಯರು ದ್ವಿತೀಯ ದರ್ಜೆಯ ಪ್ರಜೆಗಳು (ಸೆಕೆಂಡ್ ಕ್ಲಾಸ್ ಸಿಟಿಜೆನ್ಸ್) ಎಂಬ ಅಭಿಪ್ರಾಯ ಮೂಡಿಸುತ್ತದೆ. ಸ್ತ್ರೀ ಪುರುಷರ ನಡುವೆ ಅಸಮಾನತೆ ಹೆಚ್ಚುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಆರ್ಥಿಕ ಅವಲಂಬನೆಯು ಮಹಿಳೆಯರು ಸ್ವತಂತ್ರವಾಗಿರಲು ಸಾಧ್ಯವಿಲ್ಲವೆಂಬ ಮನೋಭಾವನೆಯನ್ನು ಬೆಳೆಸುತ್ತದೆ. ಇದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೂ ಕಾರಣವಾಗುತ್ತದೆ.

ಹಾಗೆಂದು ದುಡಿಮೆಯ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಿರುವ ಮಹಿಳೆಯರು ಇಂಥಾ ಒತ್ತಡಗಳಿಗೆ ಸಿಲುಕುವುದೇ ಇಲ್ಲವೆಂದಲ್ಲ. ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಉದ್ಯೋಗ ಮತ್ತು ಮನೆವಾಳ್ತೆ ಎರಡನ್ನೂ ಸಂಭಾಳಿಸುವ ಜವಾಬ್ದಾರಿ ಹೊತ್ತುಕೊಂಡು ಸಮಸ್ಯೆ ಅನುಭವಿಸುತ್ತಾರೆ. “ಕೆಲವು ಮಹಿಳೆಯರು ಕುಟುಂಬದ ಆರೈಕೆಯ ಜೊತೆಜೊತೆಗೆ ಸಣ್ಣ ಪುಟ್ಟ ಕೆಲಸ ಮಾಡಿ ಆದಾಯ ಗಳಿಸುತ್ತಾರೆ.

ಅವರು ಮನೆಯ ಜವಾಬ್ದಾರಿ ಮತ್ತು ಹೊರಗಿನ ದುಡಿಮೆಗಳೆರಡನ್ನೂ ನಿಭಾಯಿಸಬೇಕಿರುವುದರಿಂದ; ಅವರಲ್ಲಿ ಅನಿಶ್ಚಿತತೆ, ಅಭದ್ರತೆ, ಅನಾರೋಗ್ಯದಂತಹ ಸಮಸ್ಯೆಗಳು ತಲೆದೋರುತ್ತವೆ” ಎಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಭಿಪ್ರಾಯಪಟ್ಟಿದೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ

ಮನೆಗೆಲಸಗಳು, ಕುಟುಂಬದ ಜವಾಬ್ದಾರಿ ಇತ್ಯಾದಿಗಳ ಹೆಚ್ಚುವರಿ ಹೊರೆಯಿಂದಾಗಿ ಮಹಿಳೆಯರಿಗೆ ಪುರುಷರಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ವಲಯದಲ್ಲಿ ಮಹಿಳೆಯರ ಸಹಭಾಗಿತ್ವ ಕಡಿಮೆಯಾದಷ್ಟೂ ನಿಯಮ ರೂಪಿಸುವ ಸಂದರ್ಭಗಳಲ್ಲಿ ಅವರ ಪ್ರಾತಿನಿಧ್ಯವಿಲ್ಲದೆ, ಮಹಿಳೆಯರ ಹಕ್ಕುಗಳಿಗೆ ಧಕ್ಕೆಯಾಗುತ್ತಾ ಹೋಗುತ್ತದೆ.

ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಪ್ರಕಾರ ಸಾರ್ವಜನಿಕ ವಲಯದಲ್ಲಿ ಕೆಳದರ್ಜೆಯಲ್ಲಿ ಕೆಲಸ ಮಾಡುವ ಸಮುದಾಯಗಳಲ್ಲಿ ಇಂತಹ ಅಸಮಾನತೆ ತೀವ್ರವಾಗಿರುತ್ತದೆ. ಸಂಬಳವಿಲ್ಲದ ಕೆಲಸಗಳಲ್ಲಿ ತೊಡಗಿರುವ ಮಹಿಳೆಯರು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ. ಇದರ ಪರಿಣಾಮವಾಗಿ ಸಾಮಾಜಿಕ ಸ್ಪಂದನೆಯು ಅವರಿಗೆ ದೊರೆಯದೇ, ಅನುತ್ಪಾದಕವಾಗಿ ಅವರು ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ.

ಕುಟುಂಬದ ಜವಾಬ್ದಾರಿ ಹೊರುವುದು ಹಾಗೂ ಮನೆವಾಳ್ತೆ ನಿರ್ವಹಣೆಯ ಹೆಚ್ಚುವರಿ ಹೊರೆಯಿಂದ ಉಂಟಾಗುವ ಲಿಂಗ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಮಹಿಳೆಯರ ಈ ಕೆಲಸಗಳು ಸಮಾಜಕ್ಕೆ ಎಷ್ಟು ಮಹತ್ವದ್ದು ಎಂಬ ಅರಿವು ಮೂಡಿಸುವುದು ಮುಖ್ಯವಾಗುತ್ತದೆ. ಮನೆಯಲ್ಲಿಯೇ ಕುಟುಂಬಕ್ಕಾಗಿ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿಗತಿಗಳು ಹಾಗೂ ಸಮಾಜಿಕ ಭಾಗೀದಾರಿಕೆಯ ಬಗ್ಗೆ ಸರ್ಕಾರಗಳೂ ವಿಶೇಷ ಗಮನ ಹರಿಸುವ ಅಗತ್ಯವಿದೆ.

ಇವೆಲ್ಲದರ ಹೊರತಾಗಿ, ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಕೇವಲ ಮಹಿಳೆಗೆ ವಹಿಸದೆ, ಸ್ತ್ರೀ - ಪುರುಷರಿಬ್ಬರೂ ಸಮಾನವಾಗಿ ಹಂಚಿಕೊಳ್ಳುವ; ಈ ಮೂಲಕ ಲಿಂಗ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದು ಅತ್ಯಗತ್ಯ.

ಡಾ.ಅನಿಲ್ ಪಾಟೀಲ್, ‘Carers Worldwide’ನ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇವರ ಸಂಸ್ಥೆಯು ಗೃಹಿಣಿಯರ ದುಡಿಮೆ ಮತ್ತು ಹಕ್ಕುಗಳ ಬಗ್ಗೆ ಹೆಚ್ಚಿನ ಕಾಳಜಿಯಿಂದ ಕೆಲಸ ಮಾಡುತ್ತದೆ.

ಲೇಖಕರ ಮೇಲ್ ಐಡಿ : columns@whiteswanfoundation.org.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org