ಸ್ಕಿಸೋಫ್ರೆನಿಯಯಿರುವ ವ್ಯಕ್ತಿಯ ಆರೈಕೆ

Q

ಸ್ಕಿಸೋಫ್ರೆನಿಯಗೆ ಚಿಕಿತ್ಸೆ ಇದೆಯೇ?

A

ಅನೇಕ ಮನೋರೋಗಗಳಂತೆ, ಸ್ಕಿಸೋಫ್ರೆನಿಯ ಕೂಡ ಒಂದು ಅಸ್ವಸ್ಥತೆಯಾಗಿದ್ದು, ಪರಿಣಾಮಕಾರಿಯಾದ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಂತಕ್ಕೆ ಮರಳಿದ್ದಾರೆ. ದೀರ್ಘಕಾಲದ ದೈಹಿಕ ಅಸ್ವಸ್ಥತೆಗಳಾದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತೆ, ಈ ಖಾಯಿಲೆಯನ್ನು ಕೂಡ ಸೂಕ್ತ ಔಷಧ, ಕುಟುಂಬ ಮತ್ತು ಸ್ನೇಹಿತರ ಸಹಕಾರ, ನಿತ್ಯವೂ ತಪ್ಪಿಸದ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ಪಡೆಯುವುದರಿಂದ ಚೇತರಿಸಿಕೊಳ್ಳಬಹುದು.

"ಚಿಕಿತ್ಸೆ ನೀಡುವಲ್ಲಿನ ಮಾರ್ಗದರ್ಶಕರ ಕೆಲವು ನಿಯಮದ ಪ್ರಕಾರ, ಮೂರನೇ ಒಂದು ಭಾಗದಷ್ಟು ರೋಗಿಗಳು ಸಾಮಾನ್ಯ ಕ್ರಿಯಾತ್ಮಕ ಬದುಕಿಗೆ ಮರಳಬೇಕು. ನಂತರದ ಮೂರನೇ ಒಂದರಷ್ಟು ರೋಗಿಗಳು ಸಾಮಾನ್ಯ ಕ್ರಿಯಾತ್ಮಕ ಬದುಕಿಗಿಂತ ಸ್ವಲ್ಪ ಕೆಳಗಿನ ಹಂತಕ್ಕೆ ಹಿಂದಿರುಗಬೇಕು ಮತ್ತು ಅವರು ಬದುಕು ನಡೆಸಬೇಕು. ಉಳಿದ ಮೂರನೇ ಒಂದರಷ್ಟು ಜನರಿಗೆ ಹೆಚ್ಚಿನ ಸಹಕಾರ ಮತ್ತು ನೀವು ಅವರ ಸಮಸ್ಯೆಯನ್ನು ಗುರುತಿಸಿ, ಹೆಚ್ಚಿನ ಎಚ್ಚರಿಕೆಯಿಂದ ಚಿಕಿತ್ಸೆಯನ್ನು ಅನುಸರಿಸಿದರೆ ಚೇತರಿಸಿಕೊಳ್ಳುವ ಸಾಧ್ಯತೆ ಹೆಚ್ಚು" ಎನ್ನುತ್ತಾರೆ ರಿಚ್ಮಂಡ್ ಫೆಲೋಶಿಫ್ ಸೊಸೈಟಿ, ಬೆಂಗಳೂರು ಶಾಖೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ಆಗಿರುವ ಮನೋವೈದ್ಯ ಡಾ. ಎಸ್. ಕಲ್ಯಾಣಸುಂದರಮ್.

Q

ರೋಗ ಪರೀಕ್ಷೆ ಮತ್ತು ಚಿಕಿತ್ಸೆಯಲ್ಲಿ ಆರೈಕೆದಾರರ ಪಾತ್ರವೇನು?

A

ಸ್ಕಿಸೋಫ್ರೆನಿಯಯು ಹಂತಹಂತವಾಗಿ ಬೆಳೆಯುತ್ತದೆ. ಸೂಕ್ತ ಚಿಕಿತ್ಸೆ ಪಡೆಯದೇ ಇದ್ದಲ್ಲಿ ರೋಗ ಲಕ್ಷಣಗಳು ತೊಂದರೆ ನೀಡುತ್ತದೆ. ಸ್ಕಿಸೋಫ್ರೆನಿಯದಿಂದ ಬಳಲುತ್ತಿರುವ ವ್ಯಕ್ತಿಗೆ ತಮ್ಮ ವರ್ತನೆ ವಿಚಿತ್ರ ಅಥವಾ ಅಸಹಜವಾಗಿದೆ ಎಂದು ತಿಳಿದಿರುವುದಿಲ್ಲ. ಆ ವ್ಯಕ್ತಿಯ ಕುಟುಂಬದವರು ಅಥವಾ ಸ್ನೇಹಿತರು ಯಾರಾದರೂ ವ್ಯಾಧಿಯನ್ನು ಗುರುತಿಸಿ, ಚಿಕಿತ್ಸೆ ತೆಗೆದುಕೊಳ್ಳಲು ಸಹಾಯ ಮಾಡಬೇಕು.

ಸ್ಕಿಸೋಫ್ರೆನಿಯ ಆರಂಭದ ಹಂತದಲ್ಲಿ ಗುರುತಿಸಿದರೆ ಚಿಕಿತ್ಸೆ ಬೇಗ ಶುರು ಮಾಡಬಹುದು. ಇದರಿಂದ ಔಷಧದ ಪರಿಣಾಮ ಹೆಚ್ಚು. ಪ್ರಾರಂಭದಲ್ಲಿ ಕಾಣುವ ಲಕ್ಷಣಗಳು - ಸ್ಪಷ್ಟ ಪ್ರಚೋದನೆ ಇಲ್ಲದೆ ಕಿರಿಕಿರಿ ಹೆಚ್ಚುವುದು, ಪ್ರತ್ಯೇಕತೆ ಭಾವನೆ, ಹಸಿವು ಹಾಗೂ ನಿದ್ರಾಹೀನತೆ, ಏಕಾಗ್ರತೆಯ ಕೊರತೆ, ನೈರ್ಮಲ್ಯ ಹಾಗೂ ಅಂದದ ಕುರಿತಾಗಿ ಆಸಕ್ತಿ ಕಡಿಮೆಯಾಗುವುದು. ಈ ಎಲ್ಲ ಲಕ್ಷಣಗಳು ನಿಧಾನವಾಗಿ, ಹಂತಹಂತವಾಗಿ ಹೆಚ್ಚಾಗುತ್ತವೆ.  ಯಾವುದೊ ಒಂದು ಲಕ್ಷಣ ನಿಮ್ಮ ಪ್ರೀತಿಪಾತ್ರರಲ್ಲಿ ಕಾಣಿಸಿದರೆ  ಅದು ಸ್ಕಿಸೋಫ್ರೆನಿಯ ಅಲ್ಲ.

Q

ವೈದ್ಯರು ರೋಗನಿರ್ಣಯ ಮಾಡಲು ನಾನು ಹೇಗೆ ಸಹಾಯ ಮಾಡಬಹುದು? ನಾನು ಎಷ್ಟು ಮಾಹಿತಿ ಹಂಚಿಕೊಳ್ಳಬಹುದು?

A

ಮಾನಸಿಕ ಅಸ್ವಸ್ಥತೆಯನ್ನು ನಿರ್ಣಯ ಮಾಡುವುದು, ದೈಹಿಕ ಅಸ್ವಸ್ಥತೆಯನ್ನು ನಿರ್ಣಯ ಮಾಡುವುದಕ್ಕಿಂತ ಹೆಚ್ಚಿನ ಸವಾಲು. ಕ್ಷ-ಕಿರಣ (X-Ray), ಸ್ಕ್ಯಾನ್ (Scan) ಅಥವಾ ಯಾವುದೇ ಪ್ರಯೋಗಾಲಯ (Lab test) ಪರೀಕ್ಷೆಗಳ ಸಹಾಯದಿಂದ ವೈದ್ಯರಿಗೆ ರೋಗ ನಿರ್ಣಯ ಮಾಡಲು ಸಾಧ್ಯವಿಲ್ಲ. ವ್ಯಕ್ತಿಯೊಡನೆ ಸಂವಹನ, ವ್ಯಕ್ತಿಯ ಪಾಲಕರು ಮತ್ತು ಆರೈಕೆದಾರರು ಬದಲಾದ ವರ್ತನೆಯ ಲಕ್ಷಣಗಳ ಬಗ್ಗೆ ನೀಡುವ ನಿಖರ ಮಾಹಿತಿಯ ಆಧಾರದ ಮೇಲೆ ನಿರ್ಣಯ ಮಾಡಬೇಕು.

ವೈದ್ಯರ ಜೊತೆ ಮುಕ್ತವಾಗಿರಿ. ಅವರು ವೃತ್ತಿಪರರು ಮತ್ತು ಗೌಪ್ಯತೆಯ ಕುರಿತಾಗಿ ತಿಳಿದಿರುತ್ತಾರೆ. ಕುಟುಂಬದ ರಹಸ್ಯ ಅಥವಾ ವಿಚಾರಗಳು ನಿಮಗೆ ಅಪ್ರಸ್ತುತ ಎನಿಸಬಹುದು. ಆದರೆ ಇದು ವ್ಯಕ್ತಿಯ ಯಾತನೆಗೆ ಕಾರಣವಿರಬಹುದು. ವೈದ್ಯರಿಗೆ ವ್ಯಕ್ತಿಯ ಎಲ್ಲಾ ಅಸಹಜ ವರ್ತನೆಗಳ ಬಗ್ಗೆ ಮಾಹಿತಿ ನೀಡುವುದು ಒಳ್ಳೆಯದು ಮತ್ತು ಅವರು ಯಾವುದು ಸಂಬಂಧ ಪಟ್ಟ ವಿಷಯ ಎಂದು ನಿರ್ಧರಿಸುತ್ತಾರೆ.

ಯಾವ ಮಾಹಿತಿಯೂ ಅನಾವಶ್ಯಕವಲ್ಲ ಎನ್ನುವುದನ್ನು ನೆನಪಿಡಿ.  ವೈದ್ಯರು ವೈದ್ಯರು ಸಂಬಂಧಪಟ್ಟ ವಿಷಯವನ್ನು ಮಾತ್ರ  ಆಯ್ಕೆ ಮಾಡುತ್ತಾರೆ; ನೀವು ಅಥವಾ ಅನಾರೋಗ್ಯ ಹೊಂದಿರುವ ವ್ಯಕ್ತಿ ಇದನ್ನು ನಿರ್ಣಯಿಸುವುದಲ್ಲ. 

Q

ವೈದ್ಯರಿಂದ ನಾನು ಯಾವ ಮಾಹಿತಿಯನ್ನು ಪಡೆಯಬಹುದು?

A

ಇಲ್ಲಿ ಕೆಲವು ಪ್ರಶ್ನೆಗಳಿವೆ. ಇವುಗಳನ್ನು ರೋಗ ಪರೀಕ್ಷೆ ಮಾಡುತ್ತಿರುವ ವೈದ್ಯರ ಹತ್ತಿರ ಕೇಳಿ. ಇದರಿಂದ ನಮಗೆ ರೋಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

  • ರೋಗಲಕ್ಷಣಗಳು ಯಾವವು?

  • ರೋಗನಿರ್ಣಯ ಮಾಡುವ ಪರೀಕ್ಷೆಗಳೇನು?

  • ಚಿಕಿತ್ಸೆಗೆ ಎಷ್ಟು ಸಮಯ ಬೇಕಾಗಬಹುದು?

  • ಯಾವುದಾದರು ಎಚ್ಚರಿಕೆಯ ಸಂಜ್ಞೆಗಳ ಕುರಿತು ಲಕ್ಷ್ಯವಿಡಬೇಕೆ?

  • ವ್ಯಕ್ತಿ ಯು ಚೇತರಿಸಿಕೊಳ್ಳಲು ಯಾವ ರೀತಿಯ ಸಹಕಾರ ಮತ್ತು ವ್ಯವಸ್ಥೆ ಅಗತ್ಯ?

  • ವ್ಯಕ್ತಿಗೆ ಔಷಧೋಪಚಾರ ಮತ್ತು ಸಲಹೆ (counselling) ಅಗತ್ಯವೇ?

  • ಎಲ್ಲಾ ಸಮಯದಲ್ಲಿ ಆರೈಕೆದಾರರು ರೋಗಿಯ ಜೊತೆಗಿರುವ ಅವಶ್ಯಕತೆ ಇದೆಯೆ?

  • ಯಾವ ಔಷಧಗಳನ್ನು ವ್ಯಕ್ತಿಗೆ ಶಿಫಾರಸು ಮಾಡಲಾಗಿದೆ? ಯಾವಾಗ ಅವು ಕೆಲಸ ಮಾಡಲು ಆರಂಭಿಸುತ್ತವೆ?

  • ವ್ಯಕ್ತಿ ಔಷಧ ತೆಗೆದುಕೊಳ್ಳದೇ ಇದ್ದಲ್ಲಿ ಏನು ಮಾಡಬೇಕು?

  • ಔಷಧದ ಅಡ್ಡಪರಿಣಾಮಗಳೇನು ? ರೋಗಿಯು ಅದನ್ನು ನಿರ್ವಹಿಸಲು ನೀವು ಹೇಗೆ ಸಹಾಯ ಮಾಡುತ್ತೀರಿ? ಯಾವುದಾದರು ಕೆಲವು ಅಡ್ಡ ಪರಿಣಾಮಗಳು ಕಂಡುಬಂದಲ್ಲಿ ತಕ್ಷಣ ವೈದ್ಯರಿಗೆ ವರದಿ ಮಾಡಬೇಕೆ?

  • ವ್ಯಕ್ತಿ ಸರಿಯಾಗಿ ಔಷಧ ತೆಗೆದುಕೊಳ್ಳುತ್ತಿದ್ದಾನೆಯೆ ಎನ್ನುವುದನ್ನು ನೀವು ಮೇಲ್ವಿಚಾರಣೆ ಮಾಡುತ್ತೀರಾ? ವ್ಯಕ್ತಿಗೆ ತೊಂದರೆಯಾಗದಂತೆ ಹೇಗೆ ಅದನ್ನು ಮಾಡಬೇಕು?

  • ಕುಟುಂಬ ಮತ್ತು ಸ್ನೇಹಿತರು ವ್ಯಕ್ತಿಯ ಚೇತರಿಕೆಗೆ ಸಹಕರಿಸಲು ನಿಮ್ಮ ಸಲಹೆ ಏನು? 

Q

ನನ್ನ ಪ್ರೀತಿಪಾತ್ರರೊಂದಿಗೆ ಅವರ ವರ್ತನೆ ಕುರಿತು ನಾನು ಹೇಗೆ ಮಾತನಾಡಬೇಕು? ಚಿಕಿತ್ಸೆ ತೆಗೆದುಕೊಳ್ಳುವಂತೆ ಅವರಿಗೆ ಹೇಗೆ ಮನದಟ್ಟು ಮಾಡಬೇಕು?

A

ಸ್ಕಿಸೋಫ್ರೆನಿಯದಿಂದ ಬಳಲುತ್ತಿರುವ ವ್ಯಕ್ತಿ ಕೆಲವೊಮ್ಮೆ (ಅಥವಾ ಸಾಮಾನ್ಯವಾಗಿ) ವಾಸ್ತವದಿಂದ ದೂರವಿರಬಹುದು. ಚಿಕಿತ್ಸೆ ಅಗತ್ಯ ಮತ್ತು ಎಂದು ಅವರಿಗೆ ಮನವರಿಕೆ ಮಾಡುವುದು ಉತ್ತಮ. ಅವರ ವರ್ತನೆಯ ಬಗ್ಗೆ ಮಾತನಾಡುವಾಗ ತಾಳ್ಮೆಯಿಂದ ಕೇಳಿಸಿಕೊಳ್ಳಿ ಮತ್ತು ಕುಟುಂಬವು ಈ ಬದಲಾವಣೆ ಕುರಿತಾಗಿ ಕಾಳಜಿ ಹೊಂದಿದೆ ಎಂದು ಅವರಿಗೆ ತಿಳಿಸಿ. ಅವರ ವರ್ತನೆಯಲ್ಲಿನ ಬದಲಾವಣೆ ಬಗ್ಗೆ ಅವರನ್ನು ದೂಷಿಸದೆ, ಇದಕ್ಕಾಗಿ ಚಿಂತಿಸುವ ಅವಶ್ಯಕತೆಯಿಲ್ಲ ಎಂದು ತಿಳಿಸಿ.

ಅವರೊಂದಿಗೆ ಹೇಗೆ ಸಂಭಾಷಣೆ ನಡೆಸಬೇಕೆಂದು ನಿಮಗೆ ಖಚಿತತೆ ಇಲ್ಲದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.

ತೀವ್ರ ಸ್ಕಿಸೋಫ್ರೆನಿಯ ಇದ್ದರೆ ವ್ಯಕ್ತಿಯಲ್ಲಿ ಭ್ರಮೆ, ಬುದ್ಧಿಭ್ರಮಣೆ/ಸಂಶಯಗ್ರಸ್ಥ(Paranoid) ಮನಸ್ಥಿತಿ ಮತ್ತು ಆಕ್ರಮಣಕಾರಿ ವರ್ತನೆ ಇರಬಹುದು. ಕುಟುಂಬದ ಕೆಲವು ಸದಸ್ಯರ ಸಲಹೆ ವ್ಯಕ್ತಿಗೆ ಅಹಿತಕರ ಎನಿಸಬಹುದು ಅಥವಾ ಇಷ್ಟವಾಗದಿರಬಹುದು. ಅವರು ಇದನ್ನು ಪಿತೂರಿಯ ವಿಸ್ತರಣೆ ಎಂದು ತಿಳಿದು, ಅವರ ಮನಸ್ಥಿತಿಯನ್ನು ಮೀರಿ ವರ್ತಿಸಬಹುದು.

ಅಂತಹ ಸಮಯದಲ್ಲಿ ವ್ಯಕ್ತಿಗತ ಚಿಕಿತ್ಸೆಯನ್ನು ವಿರೋಧಿಸಬಹುದು. ಆಗ ಅವರು ನಂಬುವ ಹಾಗು ಆತ್ಮೀಯರಾಗಿರುವ ಕುಟುಂಬ ಸದಸ್ಯರು ಅಥವಾ ಸ್ನೇಹಿತರು, ಅವರ ವರ್ತನೆಯಲ್ಲಿನ ಬದಲಾವಣೆಗಳ ಕುರಿತು ಹಾಗೂ ಚಿಕಿತ್ಸೆಯ ಅಗತ್ಯದ ಕುರಿತು ಅವರಿಗೆ ತಿಳಿಸುವುದು ಅತಿ ಮುಖ್ಯ.

ಕೆಲವೊಮ್ಮೆ ಸ್ಕಿಸೋಫ್ರೆನಿಯ ಪೀಡಿತ ವ್ಯಕ್ತಿ ತಾರ್ಕಿಕವಾಗಿ ಯೋಚಿಸಲು ಅಸಮರ್ಥನಾಗುತ್ತಾನೆ ಮತ್ತು ಚಿಕಿತ್ಸೆಗೆ ಒಪ್ಪದಿರಬಹುದು. ಇತರರ ಹಾಗೂ ತನ್ನ ರಕ್ಷಣೆಯ ಕುರಿತಾಗಿ ಬೆದರಿಕೆ ಒಡ್ಡಬಹುದು ಅಥವಾ ಓಡಿಹೋಗಬಹುದು.

ವ್ಯಕ್ತಿಗೆ ಅರಿವಿಲ್ಲದೆಯೆ ಆಸ್ಪತ್ರೆಗೆ ಸೇರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. (ಮನೋಚಿಕಿತ್ಸೆಯನ್ನು ವ್ಯಕ್ತಿಯ ಒಪ್ಪಿಗೆಯಿಲ್ಲದೆ ಆರಂಭಿಸಬಹುದು). ವ್ಯಕ್ತಿಯು ತನಗೆ ಮತ್ತು ಇತರರಿಗೆ ಬೆದರಿಕೆ ಉಂಟುಮಾಡಿದರೆ, ಅದರ ತೀವ್ರತೆ ಹೆಚ್ಚಾದರೆ ಮಾತ್ರ ಅವರಿಗೆ ತಿಳಿಸದೆ ಆಸ್ಪತ್ರೆಗೆ ಸೇರಿಸಬಹುದು.

Q

ನನ್ನ ಪ್ರೀತಿಪಾತ್ರರ ಹತ್ತಿರ ಅವರ ಭ್ರಮೆ ಮತ್ತು ತಪ್ಪು ಗ್ರಹಿಕೆಯ ಕುರಿತಾಗಿ ಹೇಗೆ ಮಾತನಾಡಲಿ?

A

ಯಾವಾಗ ವ್ಯಕ್ತಿಯು ಅವರ ಭ್ರಮೆ ಅಥವಾ ತಪ್ಪುಗ್ರಹಿಕೆಯ ಕುರಿತಾಗಿ ಹೇಳುತ್ತಾರೊ ಆಗ ಆರೈಕೆದಾರರು ಆ ಅನುಭವಗಳು ನಿಜವಲ್ಲ, ಅವು ’ಕಲ್ಪನೆ’ ಎಂದು ’ಸರಿಯಾಗಿ’ ಅವರಿಗೆ ಹೇಳಬೇಕು. ವ್ಯಕ್ತಿಗೆ ನಿಮ್ಮ ಅನುಭವ ಸತ್ಯ ಎಂದು ತಿಳಿಸುವುದು ಅತಿ ಮುಖ್ಯ. ಏಕೆಂದರೆ ಭ್ರಮೆ ಮತ್ತು ತಪ್ಪು ಗ್ರಹಿಕೆ ಆ ಸಮಯದಲ್ಲಿ ಆಗುವುದು ನಿಜ/ಸಹಜ.

ಯಾವಾಗ ವ್ಯಕ್ತಿಯು ಭ್ರಮೆ ಅಥವಾ ತಪ್ಪುಗ್ರಹಿಕೆಯನ್ನು ನಂಬುತ್ತಾನೋ, ಸಮಸ್ಯೆ ಇರುವುದನ್ನು ಮತ್ತಷ್ಟು ನಿರಾಕರಿಸುತ್ತಾನೆ. ಭ್ರಮೆಯ ಅನುಭವದ ಕುರಿತು ಅವರೊಂದಿಗೆ ಮಾತನಾಡಿ ಮತ್ತು ಅದು ಅವರಲ್ಲಿ ತುಂಬಾ ಗೊಂದಲ ಉಂಟುಮಾಡುತ್ತಿದೆಯೆ ಎಂದು ಗುರುತಿಸಿ. ಉದಾಹರಣೆಗೆ, ಈ ರೀತಿಯ ಪ್ರಶ್ನೆಗಳನ್ನು ಕೇಳಿ: "ನಿಮಗೆ ಆ ಧ್ವನಿಗಳನ್ನು ಕೇಳಿದಾಗ ಹೆದರಿಕೆ ಆಗುತ್ತದೆಯೇ..?", "ಬೇರೊಂದು ಸ್ಥಳದಲ್ಲಿ ಸುರಕ್ಷಿತರು ಎನ್ನುವ ಭಾವನೆ ಇದೆಯೇ...?" ಎಂದು ಕೇಳಿ.  ವಾಕಿಂಗ್ (walking) ಅಥವಾ ಇನ್ನಾವುದೊ ಚಟುವಟಿಕೆ ಅವರಲ್ಲಿ ಸಮಾಧಾನದ ಭಾವನೆ ಉಂಟುಮಾಡುತ್ತಿದೆಯೆ ಎಂದು ಪರಿಶೀಲಿಸಿ. ಅವರು ಚಟುವಟಿಕೆಯಿಂದಿರಲು ಇಷ್ಟಪಡದಿದ್ದಲ್ಲಿ, ಒಂದು ಪ್ರಶಾಂತ ಕೋಣೆಯಲ್ಲಿ ಇರಲು ಬಿಡಿ. ಅತಿರೇಕದ ಉದ್ದೀಪನವನ್ನು ಮತ್ತು ಇನ್ನಷ್ಟು ಭ್ರಮೆಗೆ ಒಳಗಾಗುವುದನ್ನು ತಪ್ಪಿಸಲು ಪ್ರಯತ್ನಿಸಿ.

ಯಾವುದಾದರು ಪ್ರಚೋದನೆಗಳ ಕುರಿತು ಕೇಳಿ- ಧ್ವನಿ ಕೇಳಿಸುವುದು, ಮಾತನಾಡಿದಂತೆ ಭಾಸವಾಗುವುದು ವ್ಯಕ್ತಿ ಒಬ್ಬನೆಯಿದ್ದಾಗ ಆಗುತ್ತದೆಯೊ ಅಥವಾ ಉದ್ವಿಗ್ನಗೊಂಡಾಗ ಅಥವಾ ಅಪರಿಚಿತರೊಂದಿಗೆ ಇರುವಾಗ, ಇತ್ಯಾದಿ ಯಾವ ಸಮಯದಲ್ಲಿ ಆಗುತ್ತದೆ ಎಂದು ವಿಚಾರಿಸಿ. ಯಾವ ಸಂದರ್ಭದಲ್ಲಿ ಧ್ವನಿ ಕಡಿಮೆ ಕೇಳುತ್ತದೆ? ವ್ಯಕ್ತಿಯು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಾಗ ಅವು ಕಣ್ಮರೆಯಾಗುತ್ತವೆಯೆ? ಎಂದು ವಿಚಾರಿಸಿ.

ಧ್ವನಿಗಳು ಆ ವ್ಯಕ್ತಿಗೆ ಕೆಲವು ವಿಷಯಗಳ ಕುರಿತಾಗಿ ನಿರ್ದೇಶಿಸುತ್ತವೆಯೊ ಎಂದು ಕೇಳಿ ಮತ್ತು ವ್ಯಕ್ತಿಯು ಧ್ವನಿಯ ಆದೇಶವನ್ನು ಪಾಲಿಸುತ್ತಾನೊ ಎನ್ನುವುದನ್ನು ಪರಿಶೀಲಿಸಿ. ಹಾಗಾದಾಗ ವ್ಯಕ್ತಿ ಯಾರೊಂದಿಗೂ ಇರುವುದನ್ನು ಅಪೇಕ್ಷಿಸದೆ ಇರಬಹುದು.

ವ್ಯಕ್ತಿಯು ಆತ್ಮಹತ್ಯೆ ಅಥವಾ ಸಾಯುವ ಕುರಿತು ಆಲೋಚಿಸುತ್ತಿದ್ದಾನೆಯೆ ಎಂದು ತಿಳಿದುಕೊಳ್ಳಿ. ಧ್ವನಿ ಕೇಳುವ ಯಾತನೆ ಹೊರುವುದಕ್ಕಿಂತ ಸಾಯುವುದು ಒಳ್ಳೆಯದು ಎಂದು ಕೆಲವು ಸಲ ವ್ಯಕ್ತಿಗೆ ಅನಿಸಬಹುದು. ಆತ್ಮಹತ್ಯೆಯ ಕುರಿತು ಕೇಳಿದರೆ ವ್ಯಕ್ತಿಗೆ ಹೊಸ ವಿಚಾರಗಳು ತಿಳಿಯುತ್ತವೆ ಎನ್ನುವುದು ತಪ್ಪು ಗ್ರಹಿಕೆಯಾಗಿದೆ. ಆ ರೀತಿಯ ವರ್ತನೆಯ ಬಗ್ಗೆ ಒಂದು ಲಕ್ಷ್ಯವಿರಲಿ ( ಉದಾ: ಮನೆಯಲ್ಲಿ ತಪಾಸಣೆ) ಅಥವಾ ಇತರರೊಂದಿಗೆ ಆ ಬಗ್ಗೆ ಚರ್ಚಿಸುತ್ತಾರೆಯೆ ಎನ್ನುವುದರ ಬಗ್ಗೆ ಎಚ್ಚರಿಕೆಯಿರಲಿ. ನೀವೇನು ಸಹಾಯ ಮಾಡಬಹುದೆಂದು ಕೇಳಿ.

ಅಂತಹ ತೀವ್ರತೆರನಾದ ಹಂತದಲ್ಲಿ ವೈದ್ಯರು ’ಎಸ್‌ಒಎಸ್ ಸೆಡಾಟಿವ್ಸ್’ (SOS sedatives)ಗೆ ಶಿಫಾರಸ್ಸು ಮಾಡಬಹುದು. ಇದು ಅತಿ ತುರ್ತಿನ ಪರಿಸ್ಥಿತಿಯಲ್ಲಿ ಮಾತ್ರ. ಅಗತ್ಯ ಬಿದ್ದಾಗ ಮಾತ್ರ ಸೆಡಾಟಿವ್ಸ್ ಬಳಸಿ. ರೋಗಿಯ ಮೇಲ್ವಿಚಾರಣೆ ಮಾಡುತ್ತಿರಿ ಮತ್ತು ನಿಮಗೆ ಅನುಮಾನಗಳಿದ್ದರೆ ವೈದ್ಯರ ಸಹಾಯ ಪಡೆಯಿರಿ.

Q

ರೋಗಲಕ್ಷಣಗಳು ಬದಲಾದರೆ ಅಥವಾ ಹೆಚ್ಚಾದರೆ ನಾನೇನು ಮಾಡಬೇಕು? ಇಂಥ ಸಮಯದಲ್ಲಿ ಔಷಧ ಬದಲಾಯಿಸಬೇಕೆ?

A

ಆರೈಕೆದಾರರಾದ ನೀವು ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿರಿ ಮತ್ತು ರೋಗಲಕ್ಷಣಗಳಲ್ಲಿ ಬದಲಾವಣೆ ಕಂಡುಬಂದಲ್ಲಿ ವೈದ್ಯರಿಗೆ ತಿಳಿಸಿ. ಸ್ಕಿಸೋಫ್ರೆನಿಯದ ಲಕ್ಷಣಗಳು ಹಂತಹಂತವಾಗಿ ಹೆಚ್ಚಾಗುತ್ತವೆ. 

ರೋಗಲಕ್ಷಣಗಳಲ್ಲಿ ಬದಲಾವಣೆ ಮತ್ತು ಉಲ್ಬಣ ಕಂಡುಬಂದಲ್ಲಿ ವ್ಯಕ್ತಿಯು ಔಷಧ ತೆಗೆದುಕೊಳ್ಳುತ್ತಿಲ್ಲ ಎನ್ನುವ ಸಂಕೇತವೀರಬಹುದು. ವೈದ್ಯರು ಶಿಫಾರಸ್ಸು ಮಾಡಿದ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿದ್ದಾರೆಯೆ ಎಂದು ಗಮನಿಸಿ. ಕೆಲವು ಸಮಯದಲ್ಲಿ ವ್ಯಕ್ತಿಯು ತಮ್ಮ ಔಷಧೋಪಚಾರ ಮತ್ತು ಚಿಕಿತ್ಸೆ ಕುರಿತಾಗಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ರೋಗಲಕ್ಷಣಗಳು ಕಡಿಮೆಯಾಗುವವರೆಗೆ ಈ ಕೆಲಸವನ್ನು ಆರೈಕೆದಾರರು ಜವಾಬ್ದಾರಿಯಿಂದ ನಿಭಾಯಿಸಬೇಕಾಗುತ್ತದೆ. 

ಯಾವ ಔಷಧಗಳೂ ಖಾಯಿಲೆಯನ್ನು ಬೇಗನೆ ವಾಸಿಮಾಡಲಾರವು.  ರೋಗಲಕ್ಷಣ ನಿರ್ವಹಿಸಲು ಔಷಧಗಳು ಕೆಲವು ದಿನಗಳನ್ನು ತೆಗೆದುಕೊಳ್ಳಬಹುದು. ಕೆಲವು ಔಷಧಗಳು ಕೆಲವು ವಾರಗಳ ಸಮಯವನ್ನು ತೆಗೆದುಕೊಳ್ಳಬಹುದು. ಔಷಧಗಳು ಕೆಲಸ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ವೈದ್ಯರ ಹತ್ತಿರ ವಿಚಾರಿಸಿ.

Q

ರೋಗಲಕ್ಷಣಗಳು ನಿಯಂತ್ರಣದಲ್ಲಿವೆ. ಆದ್ದರಿಂದ ರೋಗಿಯು ಔಷಧವನ್ನು ನಿಲ್ಲಿಸಬಹುದೆ?

A

ರೋಗಲಕ್ಷಣಗಳು ಇಲ್ಲವಾದಾಗ ಅಥವಾ ಕಡಿಮೆಯಾದ ನಂತರ ಔಷಧೋಪಚಾರ ನಿಲ್ಲಿಸಬೇಕು ಎನ್ನುವುದು ಕಲ್ಪನೆ. ವೈದ್ಯರು ತಿಳಿಸುವ ಸಮಯದವರೆಗೆ ಔಷಧ ಸೇವನೆ ನಿಲ್ಲಿಸಬಾರದು. ಔಷಧವು ರೋಗಲಕ್ಷಣವನ್ನು ನಿಯಂತ್ರಣದಲ್ಲಿಡುತ್ತದೆ. ಅದಲ್ಲದೇ ಔಷಧ ಸೇವನೆಯನ್ನು ಮುಂದುವರೆಸದಿದ್ದರೆ ರೋಗ ಲಕ್ಷಣಗಳು ಮರುಕಳಿಸಬಹುದು. ರೋಗ ಮರುಕಳಿಸಿದಲ್ಲಿ ವ್ಯಕ್ತಿಯು ಕಡಿಮೆ ಕ್ರಿಯಾತ್ಮಕನಾಗಿ, ರೋಗ ನಿರ್ವಹಣೆ ಕಷ್ಟವಾಗಬಹುದು.

ಹಲವು ಆರೈಕೆದಾರರು ಔಷಧಗಳು ವ್ಯಸನಕಾರಿ ಅಥವಾ ಅವು ಹೆಚ್ಚಿನ ಅಡ್ಡ ಪರಿಣಾಮ ಹೊಂದಿವೆ ಎಂದು ನಂಬಿರುತ್ತಾರೆ. ಸ್ಕಿಸೋಫ್ರೆನಿಯಯ ಚಿಕಿತ್ಸೆಯಲ್ಲಿ ಈ ನಂಬಿಕೆ ಸತ್ಯವಲ್ಲ. ವೈದ್ಯರು ಔಷಧದ ಗುಣಾವಗುಣಗಳನ್ನು ಪರಿಶೀಲಿಸಿಯೆ ಶಿಫಾರಸ್ಸು ಮಾಡಿರುತ್ತಾರೆ. ಔಷಧ ಸೇವನೆಯ ಅಡ್ಡ ಪರಿಣಾಮಕ್ಕಿಂತ ಸೇವನೆಯಿಂದಾಗುವ ಲಾಭವೆ ಹೆಚ್ಚಿನದು. ವೈದ್ಯರು ಶಿಫಾರಸ್ಸು ಮಾಡಿದ ಔಷಧಗಳ ಕುರಿತಾಗಿ ನಿಮಗೆ ಕಾಳಜಿಯಿದ್ದರೆ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ.

Q

ರೋಗ ಮರುಕಳಿಸಿದರೆ ನನಗೆ ಹೇಗೆ ತಿಳಿಯುತ್ತದೆ?

A

ಮರುಕಳಿಸುವ ಸಂದರ್ಭದಲ್ಲಿ, ರೋಗದ ಆರಂಭದ ಹಂತದಲ್ಲಿ ಕಾಣಿಸಿಕೊಳ್ಳುವ ರೋಗಲಕ್ಷಣಗಳು ಪುನಃ ಕಾಣಿಸಿಕೊಳ್ಳುತ್ತವೆ.

ಕಿರಿಕಿರಿ, ನಿದ್ರಾಹೀನತೆ, ಅನುಮಾನದ ಅಥವಾ ಮತಿವಿಕಲ್ಪ ಲಕ್ಷಣ, ಸಮಾಜದಿಂದ ದೂರವಿರುವ ವರ್ತನೆ, ಕೋಪ, ಹಠಾತ್ ಸಿಟ್ಟು, ಸ್ಪಷ್ಟ ಕಾರಣಗಳಿಲ್ಲದೆ ನಗುವುದು, ನೈರ್ಮಲ್ಯ ಮತ್ತು ವೈಯಕ್ತಿಕ ಸೌಂದರ್ಯದ ಕುರಿತು ಆಸಕ್ತಿ ಕಡಿಮೆ ಆಗುತ್ತದೆ.

ಇವು ರೋಗ ಮರುಕಳಿಸುವ ಲಕ್ಷಣಗಳು, ಆದಷ್ಟು ಬೇಗ ಚಿಕಿತ್ಸೆ ಕೊಡಿಸುವುದು ಅವಶ್ಯಕ.

Q

ಪುನರ್ವಸತಿ ಎಂದರೇನು? ಇದು ಅವಶ್ಯಕವೆ?

A

ಸ್ಕಿಸೋಫ್ರೆನಿಯ ಪೀಡಿತ ವ್ಯಕ್ತಿಗೆ ಸಾಮಾನ್ಯವಾಗಿ ಪುನರ್ವಸತಿಯ ಅವಶ್ಯಕತೆ ಇದೆ. ರೋಗವು ಕಣ್ಣಿಗೆ ಗೋಚರಿಸುವುದಿಲ್ಲ, ಆದರೆ ಅದರ ಪರಿಣಾಮ ವ್ಯಕ್ತಿಯ ಆಲೋಚನೆ ಮತ್ತು ವರ್ತನೆಯಲ್ಲಿ ಕಂಡುಬರುತ್ತದೆ.

ಅಸ್ವಸ್ಥತೆ ಪರಿಣಾಮವನ್ನು ಒಪ್ಪಿಕೊಳ್ಳದೆ ಇದ್ದಲ್ಲಿ, ಕುಟುಂಬ ಮತ್ತು ಸ್ನೇಹಿತರು ವ್ಯಕ್ತಿಯು ಮೂಡಿ (moody), ಸೋಮಾರಿ, ಅವಿಧೇಯರು ಆಗಿರುವುದನ್ನು ನೋಡಬೇಕಾಗುತ್ತದೆ. ಔಷಧವು ವ್ಯಕ್ತಿಗೆ ಕೆಲವು ಅಹಿತಕರ ಚಟುವಟಿಕೆಗಳಿಂದ ಮತ್ತು ಗೊಂದಲದ ರೋಗಲಕ್ಷಣಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಆದರೆ ವ್ಯಕ್ತಿಯು ಋಣಾತ್ಮಕ ರೋಗ ಲಕ್ಷಣಗಳಾದ ಸಾಮಾಜಿಕವಾಗಿ ಹೊಂದಿಕೊಳ್ಳಲಾರದ ಸ್ಥಿತಿ, ಭಯ ಮತ್ತು ಅಡ್ಡಿ-ಆತಂಕಗಳ ವಿರುದ್ಧ ಹೋರಾಡಬೇಕಾಗುತ್ತದೆ. ಪುನರ್ವಸತಿಯು ಈ ಎಲ್ಲಾ ಲಕ್ಷಣಗಳನ್ನು ಗೆಲ್ಲಲು, ಸ್ವತಂತ್ರವಾಗಿ ಬದುಕಲು ಮತ್ತು ಬೇರೆಯವರೊಂದಿಗೆ ಸಂವಹನ ನಡೆಸಲು ಕೂಡ ಪುನರ್ವಸತಿ ಅಗತ್ಯ.

ಪುನರ್ವಸತಿಯ ಸಮಯದಲ್ಲಿ, ವ್ಯಕ್ತಿಯು ಕುಟುಂಬದ ಹೊರತಾಗಿ ಇತರರೊಂದಿಗೆ (ಸಹೋದ್ಯೋಗಿಗಳು, ಇತರ ವ್ಯಕ್ತಿಗಳು) ಸಂವಹನ ನಡೆಸಬೇಕು. ಅವರ ಹವ್ಯಾಸ ಮತ್ತು ಇಷ್ಟಗಳ ಕುರಿತು ಆಸಕ್ತಿವಹಿಸುವುದು ಮತ್ತು ದೈನಂದಿನ ಕೆಲಸಗಳನ್ನು ರಚನಾತ್ಮಕವಾಗಿ ರೂಢಿಸಿಕೊಂಡು ಅದರ ಮೇಲ್ವಿಚಾರಣೆ ತೆಗೆದುಕೊಳ್ಳುವುದನ್ನು ಮಾಡಬೇಕು.

ಪುನರ್ವಸತಿಯು ವ್ಯಕ್ತಿ ಮತ್ತು ಕುಟುಂಬ ಇಬ್ಬರನ್ನು ಕೇಂದ್ರೀಕರಿಸುತ್ತದೆ. ಆರೈಕೆದಾರರಿಗೆ ಅಸ್ವಸ್ಥತೆಯ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಮತ್ತು ಅವರು ವ್ಯಕ್ತಿಯೊಂದಿಗೆ ಹೇಗೆ ಸಂವಹನ ನಡೆಸಬೇಕು ಮತ್ತು ಇನ್ನಿತರ ವರ್ತನೆಯ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಎಂದು ಅವರಿಗೆ ತಿಳಿಸಲಾಗುತ್ತದೆ.

Q

ನನಗೆ ತಿಳಿದಿರುವ ಒಬ್ಬರಿಗೆ ಸ್ಕಿಸೋಫ್ರೆನಿಯಯಿದೆ. ಅವರು ಮದುವೆ ಆಗಬಹುದೆ? ಸ್ಕಿಸೋಫ್ರೆನಿಯ ಗುಣವಾಗಲು ಮದುವೆ ಸಹಾಯ ಮಾಡುತ್ತದೆಯೆ?

A

ದುರದೃಷ್ಟವಶಾತ್, ಮದುವೆಯು ಮನೋರೋಗವನ್ನು ಗುಣಪಡಿಸುತ್ತದೆ ಎನ್ನುವ ತಪ್ಪುಗ್ರಹಿಕೆ ನಮ್ಮ ದೇಶದಲ್ಲಿ ಪ್ರಬಲವಾಗಿದೆ.

ಸ್ಕಿಸೋಫ್ರೆನಿಯ ಪೀಡಿತ ವ್ಯಕ್ತಿ ಯಾಕೆ ಮದುವೆಯಾಗಬಾರದು ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ. ರೋಗಲಕ್ಷಣಗಳು ನಿಯಂತ್ರಣದಲ್ಲಿದ್ದು, ಭವಿಷ್ಯದ ಸಂಗಾತಿ ಅಸ್ವಸ್ಥತೆಯ ಬಗ್ಗೆ ಎಲ್ಲ ವಿಷಯ ತಿಳಿದು ಅವರು ಇನ್ನಷ್ಟು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧವಿದ್ದರೆ ಮದುವೆ ಆಗಬಹುದು. ಒಂದು ಪಕ್ಷದಲ್ಲಿ, ವ್ಯಕ್ತಿ ಮದುವೆಯಾದ ನಂತರ ಅವರ ಸಂಗಾತಿ ಅಸ್ವಸ್ಥತೆಯನ್ನು ಒಪ್ಪಿಕೊಳ್ಳದಿದ್ದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಮದುವೆಯಾಗುವ ವ್ಯಕ್ತಿಗೆ ಮೊದಲೇ ಕುಟುಂಬದವರು ಅಸ್ವಸ್ಥತೆ ಮತ್ತು ಔಷಧೋಪಚಾರದ ಕುರಿತು ತಿಳಿಸುವುದು ಉತ್ತಮ.

ರೋಗಿಗೆ ತಿಳಿದಿರಬೇಕಾದ ಕೆಲವು ಅಂಶಗಳೆಂದರೆ:

  • ದೈಹಿಕ ಮತ್ತು ಭಾವನಾತ್ಮಕ ಅನ್ಯೋನ್ಯತೆ

  • ಹಣಕಾಸಿನ ನಿರ್ವಹಣೆ, ಮನೆಕೆಲಸದ ನಿರ್ವಹಣೆ ಮತ್ತು ಉಳಿದ ಜವಾಬ್ದಾರಿ (ಸಂಗಾತಿಯ ಅನೇಕ ಕೆಲಸಗಳು)

ಸಂಗಾತಿ ಆಗುವವರು/ಪೋಷಕರು ಇವುಗಳ ಕುರಿತು ಆಲೋಚಿಸುವ ಅಗತ್ಯವಿದೆ:

  • ರೋಗಿಯು ಸಂಗಾತಿಯೊಡನೆ ಎಷ್ಟರಮಟ್ಟಿಗೆ ಹಂಚಿಕೊಳ್ಳಲು ಸಿದ್ಧನಿದ್ದಾನೆ?

  • ರೋಗಿಯ ಹಣಕಾಸು ಮತ್ತು ಆಸ್ತಿಯ ಕುರಿತು ಯಾವುದೆ ಕಾನೂನು ಸಂಬಂಧಿ ಕಾಳಜಿ ತೆಗೆದುಕೊಳ್ಳುವ ಅಗತ್ಯವಿದೆಯೆ?

  • ಔಷಧವು ರೋಗಿಯ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದೆ? ಇದರಿಂದ ಸಂಬಂಧದಲ್ಲಿ ಸಮಸ್ಯೆ ಉಂಟಾಗಬಹುದೆ?

  • ಅದೇ ಅಸ್ವಸ್ಥತೆಯಿರುವ ಮಕ್ಕಳಾಗುವ ಸಾಧ್ಯತೆ ಎಷ್ಟರಮಟ್ಟಿಗಿದೆ?

  • ಸಂಗಾತಿಗೆ ಪ್ರಾಥಮಿಕ ಆರೈಕೆದಾರರಾಗಿರಲು ಇಷ್ಟವಿದೆಯೆ? ಇಲ್ಲವಾದಲ್ಲಿ ಬದಲಿ ನಿರ್ವಹಣೆ ಹೇಗೆ?

ಪಾಲಕರು ಮತ್ತು ಭವಿಷ್ಯದ ಸಂಗಾತಿ ಇಬ್ಬರು ಮನೋವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯುವುದು ಉತ್ತಮ.

Q

ಸ್ಕಿಸೋಫ್ರೆನಿಯ ಹೊಂದಿರುವ ವ್ಯಕ್ತಿ ಅವರ ಕುಟುಂಬ ಅಥವಾ ಸ್ನೇಹಿತರಿಂದ ದೂರವಾಗಿಲ್ಲ ಎಂದು ನಾನು ಹೇಗೆ ತಳಿಸಬೇಕು? ನಾವು ಅವರನ್ನು ’ಸಾಮಾನ್ಯರಂತೆ’ ಕಾಣಬಹುದೆ?

A

ಸ್ಕಿಸೋಫ್ರೆನಿಯದಿಂದ ಹೊರಬರುವ ಹೋರಾಟವು ವ್ಯಕ್ತಿಗಿಂತ ಅವರ ಆರೈಕೆದಾರರಿಗೆ ಹೆಚ್ಚಿನ ಕಷ್ಟದ ಸ್ಥಿತಿ. ವ್ಯಕ್ತಿಯ ವಿಚಿತ್ರ ವರ್ತನೆ, ಔಷಧಿ ತೆಗೆದುಕೊಳ್ಳಲು ನಿರಾಕರಿಸುವುದು ಅಥವಾ ಅವರ ಸ್ನೇಹಿತರು ಹಾಗೂ ಕುಟುಂಬದವರನ್ನು ಅನುಮಾನಿಸುವುದು, ವಿರೋಧಿಸುವ ಪ್ರಯತ್ನ ಆರೈಕೆದಾರರನ್ನು ಬಳಲುವಂತೆ ಮಾಡುತ್ತದೆ.

ಯಾವಾಗಲೂ ವ್ಯಕ್ತಿಗೆ ಅಸ್ವಸ್ಥತೆಯು ಹೆಚ್ಚು ಕಾಡುತ್ತದೆ ಎಂಬುದನ್ನು ನೆನಪಿಡಿ. ಸ್ಕಿಸೋಫ್ರೆನಿಯ ಹೊಂದಿರುವ ವ್ಯಕ್ತಿಗೆ ಅನೇಕ ಯಾತನೆಯ ಪ್ರಶ್ನೆಗಳು ಕಾಡುತ್ತವೆ. "ನಾನು ಯಾರು?" ಎನ್ನುವುದು ಪ್ರಶ್ನೆಯಾಗುತ್ತದೆ. ಆರೈಕೆದಾರರು ಅವರಲ್ಲಿ ಆತ್ಮಗೌರವ, ಸ್ವಾಭಿಮಾನವನ್ನು ಪುನಃ ತುಂಬಬೇಕು. ಅವರು ಮೌಲ್ಯವಂತರು ಎಂದು ತಿಳಿಸಬೇಕು.

ನೀವು ಹೀಗೆ ಅದನ್ನು ಮಾಡಬಹುದು:

  • ಕೌಟುಂಬಿಕ ಸಂಭಾಣೆಯಲ್ಲಿ ಅವರನ್ನು ಸೇರಿಸಿಕೊಳ್ಳಿ: ವ್ಯಕ್ತಿಯಿಂದ ಹೆಚ್ಚಿನ ಸಲಹೆ ಸಿಗದಿರಬಹುದು. ಆದರೆ ಸಂಭಾಷಣೆಯಲ್ಲಿ ವ್ಯಕ್ತಿಯು ತೊಡಗಿಕೊಂಡರೆ ಅವರು ಕುಟುಂಬದ ಒಂದು ಭಾಗ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಸುತ್ತದೆ.

  • ಸಾಮಾಜಿಕವಾಗಿ ಬೆರೆಯುವಲ್ಲಿ ಸಣ್ಣ ಪ್ರಮಾಣದಲ್ಲಿ ಸಹಾಯ ಮಾಡಿಭಾರತದಲ್ಲಿ ಸಾಮಾಜಿಕ ಕಳಂಕ ಮತ್ತು ತಾರತಮ್ಯದ ಕಾರಣವಾಗಿ ವ್ಯಕ್ತಿಯನ್ನು ಸ್ನೇಹಿತರಿಂದ ಮತ್ತು ಜನಸಾಮಾನ್ಯರಿಂದ ದೂರವಿಡುವ ಅಭ್ಯಾಸ ಬೆಳೆದು ಬಂದಿದೆ. ಯಾವಾಗ ರೋಗಿಗಳನ್ನು ಪ್ರತ್ಯೇಕವಾಗಿ ನೋಡಲಾಗುತ್ತದೆಯೊ ಆಗ ಅವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅಸಮರ್ಥರಾಗುತ್ತಾರೆ. ಯಾವಾಗ ಅವರು ಕೋಪದಿಂದ ಅಥವಾ ನೋವಿನಿಂದ ಮಾತನಾಡಿದಾಗ ಪಾಲಕರು ಅದು "ಅಸ್ವಸ್ಥತೆಯ ಮಾತು" ಎಂದು ನೋಡಬಹುದು. ಇದು ರೋಗಿಯ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡುತ್ತದೆ. ಪಾಲಕರು ರೋಗಿಗೆ ಸಾಮಾಜಿಕವಾಗಿ ಬೆರೆಯುವಂತೆ ಮನವರಿಕೆ ಮಾಡಬಹುದು. ಆದರೆ ನಿರ್ಧಾರ ಮಾತ್ರ ರೋಗಿಯದ್ದಾಗಿರಬೇಕು.

  • ಆಲೋಚನೆಗಳನ್ನು ಪಾರದರ್ಶಕವಾಗಿರಿಸಿ: ಅವರಿಂದ ಯಾವುದೇ ವಿಷಯಗಳನ್ನು ಮುಚ್ಚಿಡಬೇಡಿ , ಮುಖ್ಯವಾಗಿ ಕುಟುಂಬದ ಇತರ ಸದಸ್ಯರ ವಿಷಯವನ್ನು, ಯಾತನೆಯಿಂದಾದ ಭಯವನ್ನು ಮುಚ್ಚಿಡಬೇಡಿ. ಆಕಸ್ಮಿಕವಾಗಿ ಅಥವಾ ಹೊರಗಿನವರಿಂದ ವಿಷಯ ತಿಳಿದರೆ ಅವರಿಗೆ ಮತ್ತಷ್ಟು ಯಾತನೆ ಆಗಬಹುದು. ರೋಗಿಯ ಹತ್ತಿರ ಕೌಟುಂಬಿಕ ಸಮಸ್ಯೆಯ ಕುರಿತು ಹೇಗೆ ಮಾತನಾಡುವುದು ಎಂದು ನಿಮಗೆ ತಿಳಿಯದಿದ್ದರೆ, ವೈದ್ಯರ ಅಥವಾ ಬೆಂಬಲ ಗುಂಪುಗಳ ಸಹಾಯ ಪಡೆಯಿರಿ.

Q

ಬೆಂಬಲ ಗುಂಪಿನ ಅಗತ್ಯ ನನಗೆ ಏಕೆ ಬೇಕು?

A

ಮಾನಸಿಕ ಅಸ್ವಸ್ಥತೆ, ಅದರಲ್ಲೂ ಸ್ಕಿಸೋಫ್ರೆನಿಯಗೆ ಜೀವನಪೂರ್ತಿ ನಿರ್ವಹಣೆ ಅಗತ್ಯ. ಮನೋವೈದ್ಯರು ನಮಗೆ ಔಷಧ ಹಾಗೂ ಸಲಹೆ/ಮಾರ್ಗದರ್ಶನ ನೀಡಬಹುದು. ಆದರೆ ವ್ಯಕ್ತಿಯು ಕ್ರಿಯಾತ್ಮಕವಾಗಿ, ಸ್ವತಂತ್ರವಾಗಿ ಬದುಕಲು ಕುಟುಂಬ ಹಾಗೂ ಸ್ನೇಹಿತರ ಪಾತ್ರ ಮತ್ತು ಸಹಾಯ ಅತಿ ಅವಶ್ಯಕ.

ಆರೈಕೆದಾರರು ದಶಕಗಳಿಂದ ರೋಗಿಯನ್ನು ನೋಡಿಕೊಳ್ಳುತ್ತಿರುವುದರಿಂದ ಅವರಿಗೆ ಆ ಕುರಿತಾಗಿ ಚಿತ್ತಸ್ಥೈರ್ಯವಿರುತ್ತದೆ. ಇಂತಹ ಸಮಯದಲ್ಲಿ ಬೆಂಬಲ ಗುಂಪು ಆರೈಕೆದಾರರಿಗೆ ಈ ರೀತಿಯಾಗಿ ಸಹಾಯ ಮಾಡಬಹುದು:

(ಸಂಪರ್ಕದಲ್ಲಿರುವ ಬೆಂಬಲ ಗುಂಪುಗಳಿಗೆ ಸೇರಿಸಬಹುದು ಅಥವಾ ಹೊಸತೊಂದನ್ನು ಹುಡುಕಬಹುದು)

  • ಅದೇ ರೀತಿಯ ಸಮಸ್ಯೆ ಹೊಂದಿರುವವರನ್ನು ಭೇಟಿ ಮಾಡಿ ಮತ್ತು ಅವರ ಕಥೆಯನ್ನು ಕೇಳುವುದರಿಂದ ರೋಗಿಗೆ ಮತ್ತು ಆರೈಕೆದಾರರಿಗೆ ತಾವು ಒಬ್ಬಂಟಿಯಲ್ಲ ಎನ್ನುವ ಭಾವನೆ ಮೂಡುತ್ತದೆ.

  • ಬೇರೆಯವರ ಅನುಭವಗಳಿಂದ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ತಿಳಿಯಬಹುದು.

  • ಅಸ್ವಸ್ಥತೆತಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ರೋಗಲಕ್ಷಣಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಬಗ್ಗೆ ತಿಳಿಯಬಹುದು ಹಾಗೂ ನಿಮ್ಮ ಅನುಭವವನ್ನು ಹಂಚಿಕೊಳ್ಳಬಹುದು.

  • ರೋಗಿಯಲ್ಲಿ ಸ್ವತಂತ್ರ ಗುಣವನ್ನು ಆರೈಕೆದಾರರು ಹೇಗೆ ಹೆಚ್ಚಿಸಬಹುದು ಎನ್ನುವುದರ ಬಗ್ಗೆ ಕಲಿಯಬಹುದು.

  • ವೈದ್ಯರಲ್ಲಿ ಹೇಳಿಕೊಳ್ಳಲು ನಾಚಿಕೆಯಾಗುವಂತಹ ಮತ್ತು ಕುಟುಂಬದವರಿಕೆ ಕ್ಷುಲ್ಲಕ (silly) ಎನಿಸುವ ವಿಷಯಗಳನ್ನು ಇಲ್ಲಿ ಹೇಳಿಕೊಳ್ಳಬಹುದು.

Q

ಸ್ಕಿಸೋಫ್ರೆನಿಯ ಕುರಿತಾಗಿ ನಾನು ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಹೇಗೆ ಮಾತನಾಡಬೇಕು? ಮಾನಸಿಕ ಅಸ್ವಸ್ಥತೆ ಕಳಂಕ ಎಂಬ ಭಾವನೆ ನಮ್ಮ ಸಮಾಜದಲ್ಲಿದೆ.

A

ಮೊದಲ ಹೆಜ್ಜೆಯಾಗಿ ಉಳಿದವರೊಂದಿಗೆ ಅಸ್ವಸ್ಥತೆಯ ಕುರಿತು ಮಾತನಾಡಿ. ಅಸ್ವಸ್ಥತೆಯನ್ನು ಒಪ್ಪಿಕೊಳ್ಳಬೇಕಾದದ್ದು ವಾಸ್ತವ. ಅಲ್ಲದೆ ರೋಗಿಗೆ ಖಾಯಿಲೆಯ ಮೇಲೆ ನಿಯಂತ್ರಣವಿಲ್ಲ ಮತ್ತು ಜವಾಬ್ದಾರಿ ತೆಗೆದುಕೊಳ್ಳಲಾರ. ಇದನ್ನು ನೀವು ಮೊದಲು ಒಪ್ಪಿಕೊಂಡರೆ ಸ್ನೇಹಿತರು ಮತ್ತು  ಸಂಬಂಧಿಕರೊಡನೆ ಮಾತನಾಡುವ ಧೈರ್ಯ ಬರುತ್ತದೆ.

ಯಾರಾದರು ಏನಾದರು ಹೇಳಿದರೆ ಅಥವಾ ಪ್ರಶ್ನಿಸಿದರೆ ಅತಿರೇಕವಾಗಿ ಪ್ರತಿಕ್ರಿಯೆ ನೀಡಬೇಡಿ. ಜ್ವರಕ್ಕೆ ಹಾಗೂ ಉಳಿದ ದೈಹಿಕ ಅಸ್ವಸ್ಥತೆಗೆ ಹೇಗೆ ಪ್ರತಿಕ್ರಿಯಿಸುತ್ತೀರೊ ಹಾಗೆಯೇ ಇದಕ್ಕೂ ಪ್ರತಿಕ್ರಿಯಿಸಿ.

ಇದೊಂದು ಜೈವಿಕ ಸಮಸ್ಯೆ, ಮೆದುಳಿನಲ್ಲಿನ ರಾಸಾಯನಿಕಗಳ ಅಸಮತೋಲನದಿಂದ ವರ್ತನೆಯಲ್ಲಾಗುವ ಬದಲಾವಣೆ ಎಂದು ಮನವರಿಕೆ ಮಾಡಿಸಿ. ನೀವು ಅಥವಾ ರೋಗಿ ಯಾರೂ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಇದು ಯಾರಿಗೆ ಬೇಕಾದರೂ ಉಂಟಾಗಬಹುದು ಎಂದು ತಿಳಿಸಿ. ಈ ರೀತಿಯಾಗಿ ಮನವರಿಕೆ ಮಾಡುವುದರಿಂದ ನೀವು ನಿಮಗೆ, ರೋಗಿಗೆ ಮತ್ತು ಸುತ್ತಮುತ್ತಲಿನವರಿಗೆ ಸಹಾಯ ಮಾಡಿದಂತೆ ಆಗುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org