ಮಾನಸಿಕ ಅಸ್ವಸ್ಥರನ್ನು ಆರೈಕೆ ಮಾಡುವವರಿಗೆ ಆರ್ಥಿಕ ಬೆಂಬಲ ನೀಡುವ ಯೋಜನೆಗಳು
ಕಾಳಜಿ ವಹಿಸುವುದು

ಮಾನಸಿಕ ಅಸ್ವಸ್ಥರನ್ನು ಆರೈಕೆ ಮಾಡುವವರಿಗೆ ಆರ್ಥಿಕ ಬೆಂಬಲ ನೀಡುವ ಯೋಜನೆಗಳು

ವೈಟ್ ಸ್ವಾನ್ ಫೌಂಡೇಶನ್

ಮಾನಸಿಕ ಅಸ್ವಸ್ಥರ ಆರೈಕೆ ಕೇವಲ ಮಾನಸಿಕ ಮತ್ತು ಭಾವನಾತ್ಮಕ ಹೊರೆ ಮಾತ್ರವಲ್ಲ, ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತದೆ. ಉದ್ಯೋಗಸ್ಥನಾಗಿರುವ, ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುವ ಒಬ್ಬ ವ್ಯಕ್ತಿ ತನ್ನ ಕೌಟುಂಬಿಕ ಜವಾಬ್ದಾರಿಗಳು ಹಾಗೂ ವೃತ್ತಿಯ ಹೊಣೆಗಾರಿಕೆಯನ್ನು ಸರಿಸಮಾನವಾಗಿ, ಸಮತೋಲನದಿಂದ ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ಮಾನಸಿಕ ಅಸ್ವಸ್ಥ ವ್ಯಕ್ತಿ ಹಾಸಿಗೆ ಹಿಡಿದಿದ್ದರೆ ಅಥವಾ ಅವರನ್ನು ನಿರಂತರ ಗಮನವಿಟ್ಟು ನೋಡಿಕೊಳ್ಳಲೇ ಬೇಕಾದ ಪರಿಸ್ಥಿತಿಯಿದ್ದರೆ, ಆರೈಕೆ ಮಾಡುತ್ತಿರುವವರು ತಾವು ದುಡಿಮೆಗೆ ಹೊರಡುವ ಮೊದಲು ಮತ್ತು ದುಡಿಮೆ ಮುಗಿಸಿ ಬಂದ ನಂತರವೂ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಕೆಲವೊಮ್ಮೆ ಅಸ್ವಸ್ಥರ ಆರೈಕೆಗೆಂದೇ ಹೆಚ್ಚುವರಿ ರಜೆಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ವಿಷಮ ಪರಿಸ್ಥಿತಿಗಳಲ್ಲಿ, ಉದ್ಯೋಗವನ್ನೇ ತೊರೆಯಬೇಕಾದ ಸಂದರ್ಭ ಬರುವುದೂ ಉಂಟು.

ಆರೈಕೆಯ ಜವಾಬ್ದಾರಿ ಹೊತ್ತವರು ಅಸ್ವಸ್ಥರ ವೈದ್ಯಕೀಯ ಪರೀಕ್ಷೆಗಳಿಗಾಗಿ  ಅಥವಾ  ಚಿಕಿತ್ಸೆಗಾಗಿ  ತಗಲುವ ವೆಚ್ಚದ ಬಗ್ಗೆ ಆತಂಕ ಪಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕೆಲವೊಮ್ಮೆ ಇದು ಅವರ ಭವಿಷ್ಯದ ಮೇಲೆ ಪರಿಣಾಮ ಬೀರುವುದೂ ಉಂಟು. ಆರೈಕೆ ಮಾಡುತ್ತಿರುವವರಿಗೆ ಆರ್ಥಿಕ ಮುಗ್ಗಟ್ಟು ಉಂಟು ಮಾಡುವ ಅಂಶಗಳು ಹೀಗಿವೆ :

 • ಅಧಿಕಗೊಳ್ಳುತ್ತಿರುವ ಚಿಕಿತ್ಸಾ ವೆಚ್ಚ ಹಾಗು ಔಷಧಗಳ ಬೆಲೆ.

 • ಕಡಿಮೆ ಸಂಪಾದನೆ; ಅದರಲ್ಲೂ ಆರೈಕೆ ಜವಾಬ್ದಾರಿ ಹೊತ್ತವರು ನಿವೃತ್ತಿ ಹೊಂದಿದ್ದರೆ ಹೆಚ್ಚಿನ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ.

 • ಕುಟುಂಬದಲ್ಲಿ, ಸಂಪಾದಿಸುತ್ತಿರುವ ವ್ಯಕ್ತಿಯೇ ಅನಾರೋಗ್ಯದ ಸಮಸ್ಯೆಯನ್ನು ಹೊಂದಿದ್ದರೆ; ಮತ್ತು ತನ್ನ ಅನಾರೋಗ್ಯದಿಂದ ಕೆಲಸವನ್ನೇ ಕಳೆದುಕೊಂಡಿದ್ದರೆ, ಆರ್ಥಿಕಹೊರೆ ಮತ್ತಷ್ಟು ಹೆಚ್ಚುತ್ತದೆ.

 • ಆರೈಕೆ ಮಾಡುತ್ತಿರುವ ವ್ಯಕ್ತಿಗೆ ನಿರುದ್ಯೋಗ ಸಮಸ್ಯೆ ಅಥವಾ ನಿರಂತರವಾಗಿ ದೀರ್ಘಕಾಲದ ರಜೆ ತೆಗೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಬಹುದು.

ಆರ್ಥಿಕನೆರವಿನ ಸೌಲಭ್ಯಗಳು

ಮಾನಸಿಕ ಅಸ್ವಸ್ಥರ ಆರೈಕೆ ಮಾಡುತ್ತಿರುವವರಿಗೆ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸಲು ಕೆಲವು ಅವಕಾಶಗಳು ಹೀಗಿವೆ :

 • ಪಿಂಚಣಿ ಸೌಲಭ್ಯ

 • ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇ ಪಿ ಎಫ್)ನಂತಹ ಕೆಲವೊಂದು ಯೋಜನೆಗಳಲ್ಲಿ ಹಣ ತೊಡಗಿಸುವುದು.

 • ಮಿತ್ರರಿಂದ ಅಥವಾ ಕುಟುಂಬದವರಿಂದ ಹಣಕಾಸಿನ ನೆರವು ಪಡೆದುಕೊಳ್ಳುವುದು.

 • ಮ್ಯೂಚುವಲ್ ಫಂಡ್ಸ್, ಫಿಕ್ಸೆಡ್ ಡಿಪಾಸಿಟ್ಸ್ ಅಥವಾ ಇನ್ನಿತರೆ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವುದು.

 • “ವೈಯಕ್ತಿಕ ಸಾಲ”ದ ಸೌಲಭ್ಯಗಳು.

ಇವುಗಳನ್ನು ಹೊರತುಪಡಿಸಿ, ಆರೈಕೆ ಮಾಡುತ್ತಿರುವ ವ್ಯಕ್ತಿ ಸ್ವತಃ ಅನಾರೋಗ್ಯಕ್ಕೆ ಒಳಗಾಗಿದ್ದರೆ, ನೋಡಿಕೊಳ್ಳುವುದು ಕಷ್ಟವಾಗಿಬಿಡುತ್ತದೆ. ಇದು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರು ತಮ್ಮ ಪ್ರೀತಿಪಾತ್ರರನ್ನು ಆರೈಕೆ ಮಾಡುವ ಭರದಲ್ಲಿ ತಮ್ಮ ಸ್ವ-ಆರೋಗ್ಯವನ್ನು ನಿರ್ಲಕ್ಷಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆರೈಕೆ ನೀಡುತ್ತಿರುವ ವ್ಯಕ್ತಿ ತೀವ್ರ ಆರ್ಥಿಕ ಸಂಕಷ್ಟವನ್ನು, ಒತ್ತಡವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಲಭ್ಯವಿರುವ ಕೆಲವೊಂದು ಆರ್ಥಿಕ ನೆರವಿನ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಮಾನಸಿವಾಗಿ ಅಸ್ವಸ್ಥರಾಗಿರುವ ವ್ಯಕ್ತಿಗಳಿಗಾಗಿ ಕೆಲವೊಂದು ಯೋಜನೆಗಳಿವೆ. ಅವು:

 • ಚಿಕಿತ್ಸಾವೆಚ್ಚವನ್ನು ಭರಿಸುತ್ತವೆ.

 • ಗುಣಮುಖರಾಗುತ್ತಿರುವ ವ್ಯಕ್ತಿಗಳಿಗೆ ಸ್ವ – ಉದ್ಯೋಗಾವಕಾಶ ಕಲ್ಪಿಸುತ್ತವೆ.

 • ಮಾನಸಿಕ ಅಸ್ವಸ್ಥರ ಕಾಯಕಲ್ಪ ಯೋಜನೆಗಳಿವೆ.

ಸೂಚನೆ : ಈ ಲೇಖನವು ಮಾನಸಿಕ ಅಸ್ವಸ್ಥರಿಗೆ ಲಭ್ಯವಿರುವ ಹಲವು ಯೋಜನೆಗಳ ಮಾಹಿತಿಯನ್ನಷ್ಟೆ  ತಿಳಿಸುತ್ತದೆ. ಯೋಜನೆಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ, ಸಂಬಂಧಪಟ್ಟ ಇಲಾಖೆ / ವ್ಯಕ್ತಿಗಳನ್ನು ಸಂಪರ್ಕಿಸಬಹುದು.

ಚಿಕಿತ್ಸೆ ಸೌಲಭ್ಯಗಳು: ಡಿಸ್ಟ್ರಿಕ್ ಮೆಂಟಲ್ ಹೆಲ್ತ್ ಪ್ರೋಗ್ರಾಂ (ಡಿ ಎಮ್ ಹೆಚ್ ಪಿ ) ಯೋಜನೆಯಡಿಯಲ್ಲಿ ಮಾನಸಿಕ ಅಸ್ವಸ್ಥರಿಗೆ ಉಚಿತವಾಗಿ ಸೈಕೋಟ್ರೋಪಿಕ್ ಚಿಕಿತ್ಸೆ ಹಾಗು ಇನ್ನಿತರ ಅಗತ್ಯ ಚಿಕಿತ್ಸೆಗಳನ್ನು ಜಿಲ್ಲಾ ಆಸ್ಪತ್ರೆಗಳು ಕಡ್ಡಾಯವಾಗಿ ನೀಡಬೇಕು.

ಈ ಸೌಲಭ್ಯ ಪಡೆಯಲು ಬೇಕಾದ ಅರ್ಹತೆ : ಬಿ ಪಿ ಎಲ್ ಕಾರ್ಡ್ ಹೊಂದಿರುವಂತಹ ವ್ಯಕ್ತಿ / ಕುಟುಂಬ. ಬಿ ಪಿ ಎಲ್ ಕಾರ್ಡ್ ಇಲ್ಲದವರಿಗೆ ರಿಯಾಯತಿ ನೀಡಲಾಗುತ್ತದೆ.

ಆರೋಗ್ಯವಿಮೆ ಎಂದರೇನು ?

ವಿಮೆ ಮಾಡಿಸಿರುವ ವ್ಯಕ್ತಿಯ ಸಂಪೂರ್ಣ ಚಿಕಿತ್ಸಾ ವೆಚ್ಚ ಹಾಗೂ ಶಸ್ತ್ರಚಿಕಿತ್ಸೆಯ ಖರ್ಚನ್ನು ಭರಿಸುವ ಯೋಜನೆಯೇ ಆರೋಗ್ಯವಿಮೆ. ಈ ವಿಮೆಯು ಯಾವುದೇ ರೀತಿಯ ಅಸ್ವಸ್ಥತೆ ಅಥವಾ ಕಾಯಿಲೆಗೆ ನೀಡಲಾಗುವ ಚಿಕಿತ್ಸೆಯ ವೆಚ್ಚವನ್ನು ನೇರವಾಗಿ ಆಸ್ಪತ್ರೆಗೆ ಪಾವತಿಸುತ್ತದೆ. ಇದಕ್ಕಾಗಿ ಆ ವ್ಯಕ್ತಿಯು ವಾರ್ಷಿಕವಾಗಿ ಒಂದಷ್ಟು ನಿರ್ದಿಷ್ಟ ಮೊತ್ತವನ್ನು ವಿಮಾ ಕಂಪೆನಿಗೆ ಪಾವತಿಸಬೇಕು (ಪ್ರೀಮಿಯಂ ಮೊತ್ತ). ಆರೋಗ್ಯ ವಿಮೆಯು ಸಾಮಾನ್ಯವಾಗಿ ಭವಿಷ್ಯದಲ್ಲಿ ತಲೆದೋರಬಹುದಾದ ಅನಾರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಪ್ರಯೋಜನಕ್ಕೆ ಬರುವ ವಿಮಾ ಯೋಜನೆಯಾಗಿದೆ.

ನನಗೆ ಆರೋಗ್ಯ ವಿಮೆಯ ಅಗತ್ಯವಿದೆಯೇ?

ಪ್ರತಿವರ್ಷ ಚಿಕಿತ್ಸಾ ವೆಚ್ಚಗಳು ಅಧಿಕವಾಗುತ್ತಿರುತ್ತವೆ. ಒಬ್ಬ ವ್ಯಕ್ತಿ ತನ್ನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ಹಣವನ್ನು ಉಳಿತಾಯ ಮಾಡದೇ ಹೋದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಆರೋಗ್ಯ ವಿಮೆ ನೆರವಿಗೆ ಬರುತ್ತದೆ. ಒಬ್ಬ ವ್ಯಕ್ತಿಗೆ ತನ್ನ ವೃದ್ಧಾಪ್ಯದಲ್ಲಿ ಅಥವಾ ಭವಿಷ್ಯದಲ್ಲಿ ಸಂಭವಿಸಬಹುದಾದ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಲು, ವೈದ್ಯಕೀಯ ವೆಚ್ಚವನ್ನು ಭರಿಸಲು ಆರೋಗ್ಯ ವಿಮೆಯ ಅವಶ್ಯಕತೆ ಇದೆ.

ಆರೋಗ್ಯವಿಮೆ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ ? ಪ್ರತಿಯೊಂದು ಆರೋಗ್ಯ ವಿಮಾ ಯೋಜನೆಗೂ  ತನ್ನದೇ ಆದ ನಿರ್ದಿಷ್ಟ ನೀತಿ - ನಿಯಮಗಳಿರುತ್ತವೆ. ಸಾಮಾನ್ಯವಾಗಿ ಇಂತಹ ವಿಮೆಗಳು ಮುಂದೆ ತಲೆದೋರಬಹುದಾದ ಆರೋಗ್ಯದ ಸಮಸ್ಯೆಗಳು, ಅದಕ್ಕಾಗಿ ತಗಲುವ ವೈದ್ಯಕೀಯ ಖರ್ಚು, ಶಸ್ತ್ರಚಿಕಿತ್ಸೆಯ ವೆಚ್ಚ ಮತ್ತು ಇನ್ನಿತರೆ ಪ್ರಮುಖ ಖರ್ಚುಗಳನ್ನು ಭರಿಸುತ್ತವೆ.

ಒಂದು ವೇಳೆ ವಿಮಾ ಕಂಪೆನಿಗಳು ನೇರವಾಗಿ ಆಸ್ಪತ್ರೆಗೆ ಖರ್ಚು - ವೆಚ್ಚಗಳನ್ನು ಪಾವತಿಸಿದರೆ ಅದನ್ನು “ಕ್ಯಾಶ್ ಲೆಸ್ ಟ್ರ್ಯಾನ್ಸಾಕ್ಷನ್” ಎಂದು ಕರೆಯಲಾಗುತ್ತದೆ. ಅಥವಾ ಪರ್ಯಾಯವಾಗಿ ರೋಗಿಯನ್ನು ಆರೈಕೆ ಮಾಡುತ್ತಿರುವವರು ಆಸ್ಪತ್ರೆಯ ಖರ್ಚುವೆಚ್ಚಗಳನ್ನು ತಾವೇ ಪಾವತಿಸಿ ನಂತರ ಎಲ್ಲಾ ಸಂಬಂಧಪಟ್ಟ ಬಿಲ್ ಗಳನ್ನು ಮತ್ತು ಪ್ರಿಸ್ಕ್ರಿಪ್ಷನ್ ಗಳನ್ನು ವಿಮಾ ಕಂಪೆನಿಗೆ ನೀಡಿ ಹಣವನ್ನು ಪಡೆಯಬಹುದಾಗಿದೆ.

ಆರೋಗ್ಯ ವಿಮೆಯ ವ್ಯಾಪ್ತಿಗೆ ಯಾವುದು ಬರುವುದಿಲ್ಲ ? ಪ್ರತಿಯೊಂದು ಇನ್ಸೂರೆನ್ಸ್ ಕಂಪೆನಿಗಳು ತಮ್ಮದೇ ಆದ ಕೆಲವೊಂದು ನಿಯಮಾವಳಿಗಳನ್ನು ರೂಪಿಸಿಕೊಂಡಿರುತ್ತವೆ ಹಾಗೂ ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಅವು ತನ್ನದೇ ಆದ ಕೆಲವು ನಿಯಮಗಳ ಪಟ್ಟಿಯನ್ನು ಸಿದ್ದ ಪಡಿಸಿಕೊಂಡಿರುತ್ತವೆ. ಕೆಲವು ರೀತಿಯ ಖರ್ಚು-ವೆಚ್ಚಗಳನ್ನು ಅವು ಭರಿಸುವುದಿಲ್ಲ. ಉದಾಹರಣೆಗೆ :

 • ರೋಗಿಯ / ವ್ಯಕ್ತಿಯ ಬಾಹ್ಯ ಸೌಂದರ್ಯವನ್ನು ವೃದ್ಧಿಸಲು ನಡೆಸಲಾಗುವ ಶಸ್ತ್ರಚಿಕಿತ್ಸೆ ಅಂದರೆ, ಪ್ಲಾಸ್ಟಿಕ್ ಸರ್ಜರಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆಗಳ ವೆಚ್ಚವನ್ನು ಅವು ಭರಿಸುವುದಿಲ್ಲ.

 • ರೋಗಿಯ / ಕುಟುಂಬದವರ ಊಟೋಪಚಾರದ ಹೆಚ್ಚುವರಿ ಖರ್ಚನ್ನು ಭರಿಸುವುದಿಲ್ಲ.

 • ಸೂಜಿ, ಸಿರಿಂಜ್ ಮುಂತಾದ ಖರ್ಚುಗಳನ್ನು ಭರಿಸುವುದಿಲ್ಲ.

ಪ್ರೀಮಿಯಂ ಮೊತ್ತ ಎಷ್ಟಿರುತ್ತದೆ ? ಪ್ರೀಮಿಯಂ ಮೊತ್ತವು ಆಯ್ಕೆ ಮಾಡಿಕೊಂಡಿರುವ ವಿಮಾ ಪಾಲಿಸಿಯ ಮೇಲೆ, ವ್ಯಕ್ತಿಯ ವಯಸ್ಸಿನ ಮೇಲೆ, ಲೈಫ್ ಕವರ್ ಹಾಗು ವ್ಯಕ್ತಿಯ ಆರೋಗ್ಯ ಪರಿಸ್ಥಿತಿಯ ಮೇಲೆ ನಿರ್ಭರವಾಗಿರುತ್ತದೆ. ವಿಮಾ ಅವಧಿಯು ಮುಗಿಯುವವರೆಗೂ ಪ್ರೀಮಿಯಂ ಪಾವತಿಸುತ್ತಿರಬೇಕು ಮತ್ತು ವಾರ್ಷಿಕವಾಗಿ ಅಥವಾ ಎರಡು ವರ್ಷಕ್ಕೊಮ್ಮೆ ನವೀಕರಿಸಬೇಕು. ಇದು ವಿಮೆಯ ನೀತಿ – ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ.

ಒಂದು ವೇಳೆ ವಿಮೆ ಮಾಡಿಸಿರುವ ವ್ಯಕ್ತಿ ಪ್ರೀಮಿಯಂ ಪಾವತಿಸಲು ಮರೆತರೆ ಮತ್ತು / ಅಥವಾ ಪಾಲಿಸಿ ಲ್ಯಾಪ್ಸ್ ಆದರೆ, ಅವರು ಈ ಹಿಂದೆ ಪಾವತಿಸಿರುವ ಪ್ರೀಮಿಯಂ ಹಣವನ್ನು ಹಿಂದಿರುಗಿಸಲಾಗುವುದಿಲ್ಲ. ಸರಿಯಾಗಿ ಪ್ರೀಮಿಯಂ ಪಾವತಿಸುತ್ತಿದ್ದೀವೆಂದರೆ, ಒಬ್ಬ ವ್ಯಕ್ತಿ ಪ್ರತಿ ವರ್ಷ ಇದರ ಲಾಭ ಪಡೆಯಬಹುದು ಎಂದಲ್ಲ ಅಥವಾ ಆ ಹಣವನ್ನು ಬಳಸಬಹುದು ಎಂದಲ್ಲ. ವಿಮಾ ಯೋಜನೆಗಳನ್ನು ಭವಿಷ್ಯದಲ್ಲಿ ತಲೆದೋರಬಹುದಾದ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುತ್ತದೆ.

ನಿರಾಮಯ ಯೋಜನೆ

ವಿಮಾ ಮೊತ್ತ : ರೂ.1 ಲಕ್ಷ/ವಾರ್ಷಿಕ

ಅರ್ಹತೆ : “ಆಟಿಸಂ”ಗೊಳಗಾಗಿರುವ ವ್ಯಕ್ತಿಗಳು, ಸೆರೆಬ್ರಲ್ ಪಾಲ್ಸಿ, ಮೆಂಟಲ್ ರಿಟಾರ್ಡೆಷನ್ ಮತ್ತು ಮಲ್ಟಿಪಲ್ ಡಿಸೆಬಿಲಿಟಿ ಹೊಂದಿರುವವರು ಈ ಯೋಜನೆಗೆ ಅರ್ಹರು.

 • ಇಂತಹ ವ್ಯಕ್ತಿಗಳು ಅಧಿಕೃತ ಪ್ರಮಾಣಪತ್ರ ಹೊಂದಿರಬೇಕು.

 • ಪ್ರಾಧಿಕಾರ : “ಮಿನಿಸ್ಟ್ರಿ ಆಫ್ ಸೋಷಿಯಲ್ ಜಸ್ಟಿಸ್ ಅ್ಯಂಡ್ ಎಂಪವರ್ಮೆಂಟ್” ಅಂಡರ್ ದ ನ್ಯಾಷನಲ್ ಟ್ರಸ್ಟ್ ಆ್ಯಕ್ಟ್, 1999.

ಯೋಜನೆಯ ವ್ಯಾಪ್ತಿಯಲ್ಲಿ ನೀಡಲಾಗುವ ಸೌಲಭ್ಯಗಳು

ಈ ಯೋಜನೆಯು ಕೆಳಕಂಡ ಕೆಲವು ಸೌಲಭ್ಯಗಳನ್ನು ಒದಗಿಸುತ್ತದೆ :

 • ಈಗಾಗಲೇ ಇರುವ ವೈಕಲ್ಯತೆಯನ್ನು ಸರಿಪಡಿಸಲು ಅಗತ್ಯವಿರುವ ಕೆಲವೊಂದು ಶಸ್ತ್ರಚಿಕಿತ್ಸೆಗಳಿಗಾಗಿ -ರೂ.40000ವರೆಗಿನ ನೆರವು

 • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು(ಶಸ್ತ್ರ ಚಿಕಿತ್ಸೆ ಹೊರತುಪಡಿಸಿ) - ರೂ.15000

 • ರೋಗವು ಉಲ್ಬಣವಾಗದಂತೆ ತಡೆಯಲು ಅಗತ್ಯವಿರುವ ಶಸ್ತ್ರಚಿಕಿತ್ಸೆಗಾಗಿ - ರೂ.10000

 • ಓ ಪಿ ಡಿ ಟ್ರೀಟ್ಮೆಂಟ್, ಔಷಧಗಳು, ಪಾಥೋಲಜಿ, ಡಯೋಗ್ನಸ್ಟಿಕ್ ಟೆಸ್ಟ್ ಗಳಿಗೆ - ರೂ.8000

 • ಕೇವಲ ವೈದ್ಯಕೀಯ ತಪಾಸಣೆಗೆ - ರೂ.4000ವರೆಗೆ

 • ಪ್ರಿವೆಂಟಿವ್ ಡೆಂಟಿಸ್ಟ್ರಿ- ರೂ.2500

 • ಸಮಸ್ಯೆಯ / ರೋಗದ ಪರಿಣಾಮವನ್ನು ತಗ್ಗಿಸಲು ಅಗತ್ಯವಿರುವಂತಹ ನಿರಂತರ ಚಿಕಿತ್ಸೆಗಳಿಗಾಗಿ -ರೂ.10000

 • ಪರ್ಯಾಯ ಔಷಧಗಳಿಗಾಗಿ - ರೂ.4000

 • ಪ್ರಯಾಣದ ವೆಚ್ಚಗಳಿಗಾಗಿ - ರೂ.1000ವರೆಗಿನ ಸೌಲಭ್ಯ.

ಈ ವಿಮಾಯೋಜನೆಗೆ ಹೆಸರನ್ನು ನೋಂದಾಯಿಸುವುದು ಹೇಗೆ ?

ದಾಖಲಾತಿಯ ಪ್ರಕ್ರಿಯೆ ವರ್ಷವಿಡೀ ನಡೆಯುತ್ತಿರುತ್ತದೆ. ನಿಮ್ಮ ಸಮೀಪದ ನೋಂದಾಯಿತ ಅಧಿಕೃತ ವಿಮಾ ಸಂಸ್ಥೆಯನ್ನು ಸಂಪರ್ಕಿಸಿ. ”ನ್ಯಾಷನಲ್ ಟ್ರಸ್ಟ್ ಆ್ಯಕ್ಟ್”ನ ವ್ಯಾಪ್ತಿಗೆ ಬರುವ ಸಂಸ್ಥೆಯನ್ನು ಆಯ್ದುಕೊಳ್ಳಿ ಮತ್ತು ಅಂತಹ ಕಂಪೆನಿಗಳು ನಿರಾಮಯ ಯೋಜನೆಯಡಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಇರಬೇಕು. ನಿಮಗೆ ಸಮೀಪವಿರುವ ನೋಂದಾಯಿತವಾಗಿರುವ ಸಂಸ್ಥೆಗಳಿಗಾಗಿ  ಇಲ್ಲಿ  ಸಂಪರ್ಕಿಸಿ

ಆನ್ ಲೈನ್ ದಾಖಲಾತಿ ಫಾರ್ಮ್ ನೊಂದಿಗೆ ಪರಿಷ್ಕರಣಾಶುಲ್ಕವನ್ನು ವಿಧಿಸಲಾಗುವುದು. ದಾಖಲಾತಿ ಪ್ರತಿಯಲ್ಲಿ ನಿಮ್ಮ ದೂರವಾಣಿ ಸಂಖ್ಯೆಯನ್ನು ನಮೂದಿಸಿರಬೇಕು. ಈ ದೂರವಾಣಿ ಸಂಖ್ಯೆಗೆ ನಿಮ್ಮ ಕ್ಲೈಮ್ ಐ ಡಿ ಯನ್ನು ಮತ್ತು ಇತರೆ ವಿವರಗಳನ್ನು ಒದಗಿಸಲಾಗುತ್ತದೆ. ನೀವು ಈ ಕೆಳಗೆ ತಿಳಿಸಲಾಗಿರುವ ಕೆಲವೊಂದು ದಾಖಲೆಗಳ ಪ್ರತಿಗಳನ್ನು ನೀಡಬಾಕಾಗುತ್ತದೆ. :

 • ಜಿಲ್ಲಾ ಆಸ್ಪತ್ರೆ ಅಥವಾ ಸೂಕ್ತ ಸರ್ಕಾರಿ ವೈದ್ಯಕೀಯ ಪ್ರಾಧಿಕಾರದಿಂದ ನೀಡಲಾಗುವ ಅಂಗವಿಕಲರ ಪ್ರಮಾಣ ಪತ್ರ.

 • ವಿಳಾಸದ ವಿವರ : ಪಡಿತರಚೀಟಿ, ಚಾಲನಾ ಪರವಾನಗಿಯ ಪತ್ರ, ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಪಾಸ್ ಬುಕ್ ಮತ್ತು ಮತದಾರರ ಗುರುತಿನ ಚೀಟಿ

 • ಬಿ ಪಿ ಎಲ್ ಪ್ರಮಾಣಪತ್ರ (ಅಗತ್ಯವಿದ್ದರೆ)

 • ಆದಾಯ ಪ್ರಮಾಣ ಪತ್ರ, ಕೌಟುಂಬಿಕ ವರಮಾನ ರೂ.15000 / ಮಾಸಿಕ ಇದ್ದಲ್ಲಿ.

 • ರೋಗಿಯ/ವ್ಯಕ್ತಿಯ ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.

ಈ ಯೋಜನೆಯ ದಾಖಲಾತಿ ಹಾಗೂ ನವೀಕರಣ ಒಂದು ವರ್ಷದ ಅವಧಿಯದ್ದಾಗಿರುತ್ತದೆ (ದಾಖಲಾತಿಯ ದಿನದಿಂದ ಹಣಕಾಸು ವರ್ಷದ ಅಂತ್ಯದವರೆಗೆ; ಅಂದರೆ ಮಾರ್ಚ್ 31ರವರೆಗೆ ) ವಿಮೆ ಮಾಡಿಸಿದವರು ನವೀಕರಣ ಶುಲ್ಕವನ್ನು ನ್ಯಾಷನಲ್ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಎನ್ ಇ ಎಫ್ ಟಿ ಮುಖಾಂತರ ಪಾವತಿಸಬೇಕು.

ಬ್ಯಾಂಕ್: (ಯಾವುದೇ ಶಾಖೆ)

ಇವರಿಗೆ ಸಂದಾಯವಾಗುವಂತೆ

ದಾಖಲಾತಿ ಶುಲ್ಕ

ನವೀಕರಣ ಶುಲ್ಕ

ಆ್ಯಕ್ಸಿಸ್ ಬ್ಯಾಂಕ್

“ದ ನ್ಯಾಷನಲ್ ಟ್ರಸ್ಟ್”

ಅಕೌಂಟ್ ನಂ.915010051091556

ಐ ಎಫ್ ಎಸ್ ಸಿ ಕೋಡ್: ಯುಟಿಐಬಿ0000049

ಬಿಪಿಎಲ್/ಮಾಸಿಕ 15000/- ರೂಗಿಂತ ಕಡಿಮೆ ಆದಾಯದವರಿಗೆ-ರೂ.250

ಮಾಸಿಕ ವರಮಾನ 15000ಕ್ಕಿಂತ ಹೆಚ್ಚಿರುವವರಿಗೆ ರೂ.500

ಬಿಪಿಎಲ್-ರೂ.50

ನಾನ್-ಬಿಪಿಎಲ್—ರೂ250

ಚಿಕಿತ್ಸೆಗೊಳಗಾಗಿರುವ ವ್ಯಕ್ತಿಯು ಕಡ್ಡಾಯವಾಗಿ ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಇದು ದಾಖಲಾತಿ, ನವೀಕರಣ ಮತ್ತು ಇತರೆ ವ್ಯವಹಾರಗಳಿಗೆ ಅತ್ಯಗತ್ಯ.

ಒಂದು ವೇಳೆ ಅಂತಹ ವ್ಯಕ್ತಿಯು ಅಪ್ರಾಪ್ತ ವಯಸ್ಕನಾಗಿದ್ದರೆ ತನ್ನ ಪೋಷಕರ ಅಥವಾ ಕಾನೂನಿನ ಪ್ರಕಾರ ಪಾಲಕರಾಗಿರುವವರೊಡನೆ ವಯಸ್ಕನಾಗುವವರೆಗೂ ಮತ್ತು ವಿವಾಹಿತನಾಗುವವರೆಗೂ ಜಂಟಿ ಖಾತೆಯನ್ನು ಹೊಂದಿರಬೇಕು.

ಆ ವ್ಯಕ್ತಿಯು 18ವರ್ಷ ಮೇಲ್ಪಟ್ಟವನಾಗಿದ್ದರೆ, ವಿವಾಹಿತನಾಗಿದ್ದರೆ ತನ್ನ ಪತಿ / ಪತ್ನಿಯೊಡನೆ ಜಂಟಿ ಖಾತೆಯನ್ನು ಹೊಂದಿರಬೇಕು.

ಒಬ್ಬ ವ್ಯಕ್ತಿ ಮರುಪಾವತಿಯ ಹಣವನ್ನು ಹೇಗೆ ಪಡೆಯಬಹುದು ?

ಹಣವನ್ನು ಮರಳಿಪಡೆಯಲು ಅಗತ್ಯವಿರುವ “ಕ್ಲೈಮ್ ಫಾರ್ಮ್”ಗಳು ನೋಂದಾಯಿತ ಕಛೇರಿಗಳಲ್ಲಿ ಲಭ್ಯವಿರುತ್ತದೆ. ಭರ್ತಿಮಾಡಿದ ಕ್ಲೈಮ್ ಫಾರಂನ್ನು 30 ದಿನಗಳೊಳಗೆ ವೈದ್ಯರ ಸಂಕ್ಷಿಪ್ತ ವರದಿ, ನಡೆಸಿದ ವೈದ್ಯಕೀಯ ಪರೀಕ್ಷೆಗಳ ವರದಿ, ಮೆಡಿಕಲ್ ಬಿಲ್, ಆಸ್ಪತ್ರೆಯ ದಾಖಲಾತಿಯ ವರದಿ ಹಾಗು ಬಿಡುಗಡೆಯ ವರದಿಯ ಮೂಲ ಪ್ರತಿಗಳೊಂದಿಗೆ ಸಮೀಪದ ಆಡಳಿತ ಕಛೇರಿಗೆ ಸಲ್ಲಿಸಬೇಕು. ಇದರ ವಿವರಗಳು ನಿರಾಮಯ ಕಾರ್ಡ್ ನಲ್ಲಿ ಲಭ್ಯವಿರುತ್ತದೆ.

ಕ್ಲೈಂ ಫಾರ್ಮ್ ನೊಂದಿಗೆ ಕೆಳಗೆ ತಿಳಿಸಲಾಗಿರುವ ದಾಖಲೆಗಳನ್ನು ಸಲ್ಲಿಸತಕ್ಕದ್ದು :

 • ನಿರಾಮಯ ಕಾರ್ಡಿನ ಪ್ರತಿ

 • ವೈದ್ಯರಿಂದ ದೃಢೀಕರಿಸಲ್ಪಟ್ಟಿರುವ ಅಂಗವಿಕಲರ ಪ್ರಮಾಣಪತ್ರ

 • ವೈದ್ಯರು ನೀಡಿರುವ ಎಲ್ಲಾ ವರದಿಗಳ ಮೂಲಪ್ರತಿಗಳು

 • ಎಲ್ಲಾ ರೀತಿಯ, ಆಸ್ಪತ್ರೆಯವರು ದೃಢೀಕರಿಸಿರುವ ಬಿಲ್ ಗಳು / ಚಿಕಿತ್ಸೆಯ ವೆಚ್ಚ / ವೈದ್ಯರ ವೆಚ್ಚ / ಇತರೆ ಖರ್ಚುಗಳ ಮೂಲಪ್ರತಿಗಳು

 • ಚಿಕಿತ್ಸಾ ವರದಿಯ ಮೂಲ ಪ್ರತಿ

 • ಫಲಾನುಭವಿಯ ಸಂಪೂರ್ಣ ಬ್ಯಾಂಕಿನ ವಿವರಗಳು - ಅಕೌಂಟ್ ನಂ.ಬ್ಯಾಂಕಿನ ಹೆಸರು, ಶಾಖೆ, ಐಎಫ್ಎಸ್ ಸಿ ಕೋಡ್ ಮತ್ತು ಖಾತೆ ಹೊಂದಿರುವ ವ್ಯಕ್ತಿಯ ಹೆಸರು.

ನವೀಕರಣ ಮಾಡಿಸುವುದನ್ನು ಮರೆತಿದ್ದರೆ ?

ನೀವು ಈಗಲೂ ವಿಮೆಯನ್ನು ನವೀಕರಿಸಬಹುದು ಆದರೆ ನವೀಕರಣದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ನಿಮ್ಮ ಹಣ ಮರುಪಾವತಿಯಾಗುವುದಿಲ್ಲ. ವಿಮೆಯು ನವೀಕರಣಗೊಳ್ಳಲು 30ದಿನಗಳ ಕಾಲಾವಕಾಶ ಬೇಕಾಗುತ್ತದೆ. ವಿಮೆ ಮಾಡಿಸಿರುವ ವ್ಯಕ್ತಿ ತನ್ನ ಎಲ್ಲಾ ಕ್ಲೈಮ್ ಗಳನ್ನು ನವೀಕರಿಸಲು ನಿಗದಿ ಪಡಿಸಲಾಗಿರುವ ಅಂತಿಮ ದಿನಾಂಕದಂದು ಅಥವಾ ಮುಂಚಿತವಾಗಿ (ಮಾರ್ಚ್-31ರೊಳಗೆ ) ಸಲ್ಲಿಸಬೇಕು.

ಸ್ವಾವಲಂಬನ್ ಯೋಜನೆ

ವಿಮೆಯ ಮೊತ್ತ: ಅಸ್ವಸ್ಥ ವ್ಯಕ್ತಿಗೆ ಮತ್ತು ಕುಟುಂಬಕ್ಕೆ (ಪತಿ/ಪತ್ನಿ ಅಥವಾ ಇಬ್ಬರು ಮಕ್ಕಳು ) ವಾರ್ಷಿಕ ರೂ.2ಲಕ್ಷ.

ಅರ್ಹತೆ: ಅಧಿಕೃತ ಪ್ರಮಾಣಪತ್ರ ಹೊಂದಿರುವ ಮಾನಸಿಕ ವಿಕಲರು ಹಾಗು ಅಸ್ವಸ್ಥರು.

ಸೆರೆಬ್ರಲ್ ಪಾಲ್ಸಿ ಮತ್ತು ಆಟಿಸಂ ಹಾಗು ಇನ್ನಿತರೆ ಅಸ್ವಸ್ಥತೆ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ಪ್ರಾಧಿಕಾರ: “ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ “ ಮತ್ತು “ಮಿನಿಸ್ಟ್ರಿ ಆಫ್ ಸೋಷಿಯಲ್ ಜಸ್ಟಿಸ್ ಅ್ಯಂಡ್ ಎಂಪವರ್ಮೆಂಟ್ “

ದಾಖಲಾತಿ ಪ್ರಕ್ರಿಯೆ ಹೇಗಿರುತ್ತದೆ ?

ರಾಜ್ಯದಾದ್ಯಂತ ವಿವಿಧೆಡೆಗಳಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿಯು “ಸ್ವಾವಲಂಬನ್ ಯೋಜನೆ”ಯಡಿಯಲ್ಲಿ ದಾಖಲಾತಿ ಶಿಬಿರಗಳನ್ನು ನಡೆಸುತ್ತದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಈ ಪ್ರಕ್ರಿಯೆ ನಡೆಯುತ್ತದೆ. ಹೆಚ್ಚಿನ ವಿವರಗಳಿಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದು.

ಅರ್ಜಿದಾರರು ಪ್ರೊಪೋಸಲ್ ಫಾರ್ಮ್ ನ್ನು ಭರ್ತಿಮಾಡಬೇಕು ಮತ್ತು ಅದರೊಂದಿಗೆ ಈ ಕೆಳಗೆ ತಿಳಿಸಲಾಗಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. :

 • ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವವರು ಹಾಗೂ ಅವನ ಕುಟುಂಬದವರ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು

 • ಪ್ರತಿ ವ್ಯಕ್ತಿಗೆ ಅಥವಾ ಕುಟುಂಬಕ್ಕೆ / ವರ್ಷಕ್ಕೆ ರೂ.355 ಪ್ರೀಮಿಯಂ ಮೊತ್ತದೊಂದಿಗೆ ಪ್ರೊಪೋಸಲ್ ಫಾರ್ಮನ್ನು ಸಲ್ಲಿಸಬೇಕು.

 • ಅಧಿಕೃತ ಅಂಗವಿಕಲತೆಯ ಪ್ರಮಾಣಪತ್ರ

 • ಮಾನ್ಯತೆ ಹೊಂದಿರುವ ಐಡಿ ಕಾರ್ಡ್ ನ ಪ್ರತಿ - ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ ಪತ್ರ.

 • ಅರ್ಜಿದಾರನ ಬ್ಯಾಂಕ್ ವಿವರಗಳು : ಅಕೌಂಟ್ ನಂ, ಬ್ಯಾಂಕಿನ ಹೆಸರು, ಐ ಎಫ್ ಎಸ್ ಸಿ ಕೋಡ್, ಇತ್ಯಾದಿ. ಜೊತೆಗೆ ಸಾಧ್ಯವಾದರೆ ಕ್ಯಾನ್ಸಲ್ಡ್ ಚೆಕ್ ನ ಒಂದು ಪ್ರತಿ

ಅರೋಗ್ಯ ವಿಮೆಯ ವ್ಯಾಪ್ತಿಯಲ್ಲಿ ಯಾವ ಸೌಲಭ್ಯಗಳಿವೆ ?

 • ಅಸ್ವಸ್ಥನಾಗಿರುವ ವ್ಯಕ್ತಿ ಅಪ್ರಾಪ್ತನಾಗಿದ್ದರೆ, ಈ ಯೋಜನೆಯಲ್ಲಿ ಪೋಷಕ / ಕಾನೂನಿನ ಪ್ರಕಾರ ಪಾಲಕರಾಗಿರುವವರಿಗೆ ಸೌಲಭ್ಯಗಳಿವೆ.

 • ಮಾನಸಿಕ ಅಸ್ವಸ್ಥ ಅಥವಾ ಮನೋವೈಕಲ್ಯ ಹೊಂದಿರುವ ವ್ಯಕ್ತಿಗೆ ವಾರ್ಷಿಕ ರೂ.3000ದಷ್ಟು ಓಪಿಡಿ ವೆಚ್ಚದ ಪಾವತಿಯ ಸೌಲಭ್ಯವಿರುತ್ತದೆ.

 • ವಿಮಾ ಕಂಪೆನಿಗಳು / ಟಿ ಪಿ ಎ ಸಮ್ಮತಿಯೊಂದಿಗೆ ವಿಕಲತೆಯನ್ನು ಸರಿಪಡಿಸಲು ಅಗತ್ಯವಿರುವ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶವಿದೆ.

 • ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುಂಚಿನ ಮತ್ತು ನಂತರದ ವೆಚ್ಚಗಳನ್ನು ಇತಿಮಿತಿಗೆ ತಕ್ಕಂತೆ ಭರಿಸಲಾಗುವುದು.

ಮರುಪಾವತಿ ಹೇಗೆ ?

ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಕಂಪೆನಿಯು ಸೂಚಿಸಿರುವಂತಹ, ತನ್ನ ಜಾಲದ ವ್ಯಾಪ್ತಿಗೆ ಬರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ “ಕ್ಯಾಶ್ ಲೆಸ್” ಮರುಪಾವತಿಯ ವ್ಯವಸ್ಥೆ ಇರುತ್ತದೆ. ತನ್ನ ಜಾಲದ ವ್ಯಾಪ್ತಿಯಲ್ಲಿ ಬರುವಂತಹ ಆಸ್ಪತ್ರೆಗಳ ಹೆಸರನ್ನು, ಅದರ ಪಟ್ಟಿಯನ್ನು ವಿಮಾ ಕಂಪೆನಿ ನೋಂದಣಿಯ ಸಮಯದಲ್ಲಿ ನೀಡಿರುತ್ತದೆ. ಒಂದು ವೇಳೆ ತುರ್ತು ಚಿಕಿತ್ಸೆಗಾಗಿ ವ್ಯಕ್ತಿಯು ಇತರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಆಸ್ಪತ್ರೆಯ ಎಲ್ಲಾ ವರದಿಗಳನ್ನು, ದಾಖಲೆಗಳನ್ನು ಮತ್ತು ಬಿಲ್ ಗಳನ್ನು ಕೂಲಂಕಷವಾಗಿ ಪರೀಕ್ಷಿಸಿ ಟಿ ಪಿ ಎ ಹಣವನ್ನು ಮರು ಪಾವತಿ ಮಾಡುತ್ತದೆ.

“ಆಟಿಸಂ”ಗೊಳಗಾಗಿರುವವರಿಗಾಗಿ “ಸ್ಟಾರ್ ಹೆಲ್ತ್ ಇನ್ಶೂರೆನ್ಸ್”

ಸ್ಟಾರ್ ಹೆಲ್ತ್ ಅ್ಯಂಡ್ ಅಲೈಡ್ ಇನ್ಶೂರೆನ್ಸ್ ಕಂಪೆನಿಯು “ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್”ಗೆ ತುತ್ತಾಗಿರುವ ಮಕ್ಕಳಿಗಾಗಿ ಒಂದು ಗ್ರೂಪ್ ಇನ್ಶೂರೆನ್ಸ್ ಯೋಜನೆಯನ್ನು ರೂಪಿಸಿದೆ. ಆಟಿಸಂ ಗೆ ತುತ್ತಾಗಿರುವ ಮಕ್ಕಳಿಗಾಗಿಯೇ ಇರುವ ಶಾಲೆಗಳು ಅಥವಾ ಸಂಸ್ಥೆಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ವಿಮಾ ಯೋಜನೆಯ ವ್ಯಾಪ್ತಿಯಲ್ಲಿ ಒಳರೋಗಿಗಳ ಚಿಕಿತ್ಸೆ / ಶಸ್ತ್ರ ಚಿಕಿತ್ಸೆ, ಆಟಿಸಂ ಗೆ ತುತ್ತಾಗಿರುವವರಿಗೆ  ಸೀಝರ್ಸ್, ಸಾಫ್ಟ್ ಟಿಶ್ಯೂ ಮತ್ತು ಬೋನ್ ಇಂಜ್ಯೂರಿ, ಮಸಲ್ ಸ್ಪಾಸ್ಮ್ ಗೆ ಅಗತ್ಯವಿರುವ ಶಸ್ತ್ರ ಚಿಕಿತ್ಸೆಗಳು ಹಾಗು ಎಲ್ಲಾ ರೀತಿಯ ಸೋಂಕು ರೋಗಗಳ ಚಿಕಿತ್ಸೆಗೆ ತಗಲುವ ವೆಚ್ಚಗಳು ಒಳಪಡುತ್ತವೆ.

 • ಅರ್ಹತೆ : “ಆಟಿಸಂ”ಗೆ ಒಳಗಾಗಿರುವ ಮಕ್ಕಳು; (ಆದಾಯದ ಮಿತಿಯಿಲ್ಲ)

 • ಸಹಾಯ ಧನದ ಮೊತ್ತ : ರೂ.1ಲಕ್ಷ / ಮಗುವಿಗೆ

 • ಸಂಪರ್ಕಿಸಬೇಕಾದ ವಿಳಾಸ : ನಿಮ್ಮ ಊರಿನಲ್ಲಿರುವ ಸ್ಟಾರ್ ಹೆಲ್ತ್ ಅ್ಯಂಡ್ ಅಲೈಡ್ ಇನ್ಶೂರೆನ್ಸ್ ಕಂಪೆನಿಯ ಕಛೇರಿ.

ಮಾನಸಿಕ ಅಸ್ವಸ್ಥರಿಗಾಗಿ ವಸತಿ ವ್ಯವಸ್ಥೆ

ಮಾನಸ ಕೇಂದ್ರ:

ಮಾನಸ ಕೇಂದ್ರ, ಕರ್ನಾಟಕ ರಾಜ್ಯ ಸರ್ಕಾರವು ಮಾನಸಿಕ ಅಸ್ವಸ್ಥರಿಗಾಗಿ ನಿರ್ಮಿಸಿರುವ ವಿಶೇಷ ವಸತಿ ಗೃಹಗಳಾಗಿವೆ. ರಾಜ್ಯ ಸರ್ಕಾರವು, ಯೋಜನೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು, ಬೆಳಗಾವಿ, ಬಳ್ಳಾರಿ, ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿದೆ. ಮಾರ್ಚ್ 30, 2016ರಿಂದ ಬೆಂಗಳೂರಿನ ಕೇಂದ್ರ ಕಾರ್ಯ ಪ್ರವೃತ್ತವಾಗಿದೆ.

 • ಯಾರು ಅರ್ಜಿ ಸಲ್ಲಿಸಬಹುದು : ಬಿ ಪಿ ಎಲ್ ಕಾರ್ಡ್ ಹೊಂದಿರುವ ಯಾವುದೇ ಮಾನಸಿಕ ಅಸ್ವಸ್ಥರು.

 • ಆರ್ಥಿಕ ನೆರವಿನ ಮೊತ್ತ : “ಮಾನಸ ಕೇಂದ್ರ”ವು ಮಾನಸಿಕ ಅಸ್ವಸ್ಥರಿಗೆ ಉಚಿತವಾಗಿ ಊಟ ಮತ್ತು ವಸತಿಯನ್ನು ಕಲ್ಪಿಸುತ್ತದೆ. ಈ ಕೇಂದ್ರದಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಚಿಕಿತ್ಸೆಯ / ಪುನರುಜ್ಜೀವನ ಕಲ್ಪಿಸುವ ಸೌಲಭ್ಯವಿದೆ.

 • ಸಂಪರ್ಕಿಸಬೇಕಾದ ವಿಳಾಸ : ಜಿಲ್ಲಾ ಕೇಂದ್ರಗಳಲ್ಲಿರುವ ‘ಡಿಸ್ಟ್ರಿಕ್ಟ್ ಡಿಸೆಬಿಲಿಟಿ ವೆಲ್ಫೇರ್ ಆಫೀಸರ್’ ಅವರನ್ನು ಸಂಪರ್ಕಿಸಿ ಹತ್ತಿರದ “ಮಾನಸ ಕೇಂದ್ರ”ದ ಬಗ್ಗೆ ಮಾಹಿತಿ ಪಡೆಯಬಹುದು.

ಕಾನೂನಿನ ಪ್ರಕಾರ, ಜಿಲ್ಲಾ ದಂಡಾಧಿಕಾರಿಗಳು ಪ್ರತಿ ತಿಂಗಳು ಕಡ್ಡಾಯವಾಗಿ ಅರ್ಧ ದಿನದ ಸಮಯವನ್ನು ಅಸ್ವಸ್ಥರ ಅಗತ್ಯತೆಗಳನ್ನು ಮತ್ತು ಸಮಸ್ಯೆಗಳನ್ನು ಆಲಿಸಲು ಮೀಸಲಿಡಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಅಸ್ವಸ್ಥರನ್ನು ಆರೈಕೆ ಮಾಡುತ್ತಿರುವ ನೀವೂ ಸಹಾ ಈ ಸದವಕಾಶವನ್ನು ಬಳಸಿಕೊಳ್ಳಬೇಕು ಮತ್ತು ಇತರರಿಗೆ ತಿಳಿಸಬೇಕು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ದಂಡಾಧಿಕಾರಿಗಳನ್ನು ಸಂಪರ್ಕಿಸಬಹುದು.                   

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org