ಆರೈಕೆದಾರರಿಗೆ ನೀವು ಹೇಗೆ ಸಹಾಯ ಮಾಡಬಹುದು?

ಆರೈಕೆದಾರರಿಗೆ ಸಹಾಯದ ಅಗತ್ಯವಿದೆಯೇ ಎಂದು ಕೇಳುವುದನ್ನು ರೂಢಿಸಿಕೊಳ್ಳುವ ಮೂಲಕ ನೀವು ಅವರ ಹೊರೆಯನ್ನು ಕಡಿಮೆಮಾಡಬಹುದು.

ಪರಿಣಿತಾಗೆ ಔಷಧ ತೆಗೆದುಕೊಂಡರೂ ನಿಯಂತ್ರಣಕ್ಕೆ ಬಾರದ ಸ್ಕಿಜೋಫ್ರೀನಿಯಾ. ಅವಳ ಮದುವೆಯ ಸಂದರ್ಭದಲ್ಲಿ ಈ ವಿಷಯವನ್ನು ಮುಚ್ಚಿಟ್ಟಿದ್ದರಿಂದ ಅವಳ ಪತಿ ಅವಳನ್ನು ಬಿಟ್ಟು ಹೋಗಿದ್ದಾನೆ. ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಆಕೆಯ ತಾಯಿ ಅವಳ ಏಕಮಾತ್ರ ಆರೈಕೆದಾರಳು. ಅವಳ ತಾಯಿಯು ಪರಿಣಿತಾಳನ್ನು ನಿಯಮಿತ ಪರೀಕ್ಷೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ ದಿನಗೂಲಿಯನ್ನು ಕಳೆದುಕೊಳ್ಳುತ್ತಾಳೆ. ಇದರಿಂದ ಶ್ಯಾಮಲಾ ಎಂಬ ಅವರ ಕುಟುಂಬದ ಸ್ನೇಹಿತೆ ಆಕೆಯನ್ನು ನಿಯಮಿತ ವೈದ್ಯಕೀಯ ಪರೀಕ್ಷೆಗಳಿಗೆ ಕರೆದುಕೊಂಡು ಹೋಗುತ್ತಾಳೆ. ಶ್ಯಾಮಲಾ ಪರಿಣಿತಾಳಿಗೆ ಅಂಗವಿಕಲತೆಯ ಪ್ರಮಾಣಪತ್ರ ಕೊಡಿಸಿದ್ದಾಳೆ. ಅವಳು ಪರಿಣಿತಾಳ ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನಿನ ಕಾರ್ಯಗಳಲ್ಲೂ ನೆರವಾಗುತ್ತಾಳೆ.

(ಇದು ಮಾನಸಿಕ ಆರೋಗ್ಯ ತಜ್ಞರು ವಿವರಿಸಿದ ಒಂದು ನೈಜ ಘಟನೆ. ಖಾಸಗಿತನದ ರಕ್ಷಣೆಗೆ ಹೆಸರುಗಳನ್ನು ಬದಲಾಯಿಸಲಾಗಿದೆ.)

ಸ್ನೇಹಿತೆಯೊಬ್ಬಳು ಆರೈಕೆದಾರರಿಗೆ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಹೇಗೆ ನೆರವಾಗಿದ್ದಾರೆ ಮತ್ತು ಆಕೆಯ ಹೊಣೆಯನ್ನು ಹೇಗೆ ಹಂಚಿಕೊಂಡಿದ್ದಾಳೆ ಎಂಬುದನ್ನು ಈ ಘಟನೆ ತಿಳಿಸುತ್ತದೆ. ದುರದೃಷ್ಟವಶಾತ್, ಪರಿಣಿತಾಳ ತಾಯಿಯಂತೆ ಎಲ್ಲರಿಗೂ ಇಂತಹ ಸಹಾಯ ದೊರೆಯುವುದಿಲ್ಲ. ಆರೈಕೆದಾರರು ಕೆಲವು ಕಾರ್ಯಗಳನ್ನು ಒಬ್ಬರೇ ನಿರ್ವಹಿಸಬೇಕಾಗುತ್ತದೆ. ಮಾನಸಿಕ ಅನಾರೋಗ್ಯ ಪೀಡಿತರನ್ನು ನೋಡಿಕೊಳ್ಳುವ ಜೊತೆಗೆ ಅವರು ಅಧ್ಯಯನ ಅಥವಾ ಕೆಲಸ ಮಾಡಬೇಕಾಗುತ್ತದೆ, ಜೊತೆಗೆ ಮನೆಗೆಲಸವನ್ನೂ ಮಾಡುತ್ತಾರೆ ಮತ್ತು ಉಳಿದ ಕೆಲಸಗಳ ಜೊತೆ ಕುಟುಂಬದ ಸದಸ್ಯರ ಅಗತ್ಯಗಳನ್ನೂ ಪೂರೈಸುತ್ತಿರುತ್ತಾರೆ. ಈ ಹೆಚ್ಚುವರಿ ಕೆಲಸಗಳಿಂದ ಅವರು ದಿನದ ಬಹುಪಾಲು ಸಮಯವನ್ನು ಉಳಿದವರ ಅಗತ್ಯಗಳನ್ನು ಪೂರೈಸುವುದಕ್ಕೆ ಕಳೆಯುವುದರಿಂದ ತಮ್ಮ ಬಗ್ಗೆ ಕಾಳಜಿ ಮಾಡಲು ಸಮಯ ದೊರೆಯುವುದಿಲ್ಲ. ಈ ಅತಿಯಾದ ಕೆಲಸಗಳು ಆರೈಕೆದಾರರಲ್ಲಿ ಒತ್ತಡವನ್ನು ಉಂಟುಮಾಡಬಹುದು. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಆರೈಕೆದಾರರು ತಮ್ಮ ಕುಟುಂಬದವರ, ಸ್ನೇಹಿತರ ಮತ್ತು ಸಂಬಂಧಿಗಳ ಸಹಾಯವನ್ನು ಪಡೆಯಬಹುದು.

ಕುಟುಂಬದ ಸದಸ್ಯರಿಂದ ಸಹಾಯ
ಸಾಂಪ್ರದಾಯಿಕ ಕೂಡುಕುಟುಂಬಗಳಲ್ಲಿ ಆರೈಕೆದಾರರಿಗೆ ಮಾನಸಿಕ ರೋಗಿಗಳನ್ನು ನೋಡಿಕೊಳ್ಳಲು ಇತರರ ಸಹಾಯ ದೊರೆಯುತ್ತದೆ. ಆದರೆ ಇವತ್ತು ವಿಭಕ್ತ ಕುಟುಂಬಗಳೇ ಹೆಚ್ಚಿದ್ದು, ಇವುಗಳಲ್ಲಿ ಆರೈಕೆದಾರರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಇಂಥ ವೇಳೆಯಲ್ಲಿ ವಿಭಕ್ತ ಕುಟುಂಬದ ಸದ್ಯರೂ ಕೂಡ ಪ್ರಾಥಮಿಕ ಆರೈಕೆದಾರರ ಹೊರೆಯನ್ನು ಹಂಚಿಕೊಳ್ಳಬೇಕು.

ಉದಾಹರಣೆಗೆ, ತಂದೆ, ತಾಯಿ, ಮಗಳು ಮತ್ತು ಮಾನಸಿಕ ಸಮಸ್ಯೆಯಿರುವ ಮಗನನ್ನು ಹೊಂದಿರುವ ಕುಟುಂಬದಲ್ಲಿ ತಾಯಿಯು ಪ್ರಾಥಮಿಕ ಆರೈಕೆದಾರಳಾಗಿರುತ್ತಾಳೆ. ಇಲ್ಲಿ ಕುಟುಂಬದ ಉಳಿದ ಸದಸ್ಯರು (ತಂದೆ ಮತ್ತು ಮಗಳು) ಆರೈಕೆಯ ಜವಾಬ್ದಾರಿಯನ್ನು ಹಂಚಿಕೊಳ್ಳದೇ ಇರಬಹುದು. ದಿನಕಳೆದಂತೆ ತಾಯಿಯ ಮೇಲೆ ಆರೈಕೆಯ ಹೊರೆಯು ಹೆಚ್ಚಬಹುದು. ಆದ್ದರಿಂದ ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯ ಕುಟುಂಬದವರಿಗೆ ತಿಳುವಳಿಕೆ ನೀಡಬೇಕು. ಇಲ್ಲಿ ಕುಟುಂಬದ ಉಳಿದ ಸದಸ್ಯರು ಖಾಯಿಲೆಯ ಬಗ್ಗೆ ಅರಿತುಕೊಂಡು ತಮ್ಮ ಬಿಡುವಿನವೇಳೆಯ ಆಧಾರದ ಮೇಲೆ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. (ನಾನು ಬೆಳಿಗ್ಗೆ ನೋಡಿಕೊಳ್ಳತ್ತೇನೆ, ನೀನು ರಾತ್ರಿ ನೋಡಿಕೋ ಇತ್ಯಾದಿ ಹೊಂದಾಣಿಕೆಗಳ ಮೂಲಕ)

ದೂರದ ಸಂಬಂಧಿ ಅಥವಾ ಸ್ನೇಹಿತರಿಗೆ ಸಹಾಯಮಾಡುವುದು
ನಿಮ್ಮ ಸಂಬಂಧಿ ಅಥವಾ ಸ್ನೇಹಿತರು ಆರೈಕೆದಾರರಾಗಿದ್ದಲ್ಲಿ ನೀವು ಅವರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಬಹುದು.

  • ಅವರಿಗೆ ಮಧ್ಯಂತರ ಉದ್ಯೋಗವನ್ನು ಕೊಡಿಸಬಹುದು: ಗಂಭೀರ ಮಾನಸಿಕ ಸಮಸ್ಯೆಗಳಾದ ಬೈಪೋಲಾರ್ ಡಿಸಾರ್ಡರುಗಳಿರುವ ವ್ಯಕ್ತಿಗಳು ಬಹಳಕಾಲ ಉದ್ಯೋಗಾವಕಾಶದಿಂದ ವಂಚಿತರಾಗುತ್ತಾರೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಅವರಿಗೆ ಉದ್ಯೋಗವನ್ನು ಪಡೆಯಲು ಸಹಾಯ ಮಾಡುವುದರ ಮೂಲಕ ಅಪರೋಕ್ಷವಾಗಿ ಆರೈಕೆದಾರರಿಗೆ ಸಹಾಯ ಮಾಡಬಹುದು.
  • ಮಾನಸಿಕ ಕಾಯಿಲೆಗೆ ಪರಾನುಭೂತಿ: ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯನ್ನು ನೋಡಿಕೊಳ್ಳುತ್ತಿರುವವರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸುವುದರಿಂದ ಅವರಲ್ಲಿ ತಾವೂ ಕೂಡ ಸಮುದಾಯದ ಭಾಗವೆಂಬ ಭಾವನೆ ಉಂಟಾಗುತ್ತದೆ. ಇದು ಅವರ ಪ್ರತ್ಯೇಕತಾ ಭಾವನೆಯನ್ನು ಹೋಗಲಾಡಿಸಿ ಪೂರ್ವಾಗ್ರಹವನ್ನು ನಿವಾರಿಸಲು ಸಹಾಯ ಮಾಡುತ್ತದೆ. “ಅಂಧರಿಗೆ ಜನರು ಪರಾನುಭೂತಿಯನ್ನು ವ್ಯಕ್ತಪಡಿಸುತ್ತಾರೆ, ಏಕೆಂದರೆ ಅವರ ವೈಕಲ್ಯವು ಕಣ್ಣಿಗೆ ಕಾಣಿಸುತ್ತದೆ. ಆದರೆ ಮಾನಸಿಕ ಅನಾರೋಗ್ಯವು ಅದೃಶ್ಯವಾಗಿದ್ದು ನಡವಳಿಕೆಯ ಬದಲಾವಣೆಗೆ ಸಂಬಂಧಿಸಿರುವುದರಿಂದ ಜನರು ಸಾಮಾನ್ಯವಾಗಿ ಇದನ್ನು ನಿಯಂತ್ರಿಸಬಹುದೆಂದು ಭಾವಿಸುತ್ತಾರೆ. ಇದರಿಂದಾಗಿ ಅವರು ಮಾನಸಿಕ ಕಾಯಿಲೆಯಿರುವವರಿಗೆ ಅನುಭೂತಿಯನ್ನು ತೋರಿಸುವುದಿಲ್ಲ. ಮಾನಸಿಕ ಕಾಯಿಲೆಯೂ ಕೂಡ ಒಂದು ಗಂಭೀರ ಸಮಸ್ಯೆಯಾಗಿದ್ದು, ಚಿಕಿತ್ಸೆಯಿಂದ ಗುಣಮುಖವಾಗುತ್ತದೆ ಎಂಬುದನ್ನು ಅವರಿಗೆ ತಿಳಿಸಿಕೊಟ್ಟಾಗ ಪರಿಸ್ಥಿತಿಯು ಸುಧಾರಿಸುತ್ತದೆ,” ಎನ್ನುತ್ತಾರೆ ನಿಮ್ಹಾನ್ಸ್ ನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಕೃಷ್ಣಪ್ರಸಾದ್.
  • ಅವರ ಆಸ್ಪತ್ರೆ ಭೇಟಿಗೆ ಜೊತೆಯಾಗಿ: ನಿಮಗೆ ಸಮಯವಿದ್ದರೆ ರೋಗಿಯ ಜೊತೆ ಆಸ್ಪತ್ರೆಗೆ ತೆರಳಿ. ಇದು ಆರೈಕೆದಾರರ ಹೊರೆಯನ್ನು ಕಡಿಮೆಮಾಡುತ್ತದೆ.
  • ಆಲಿಸಿ: ಅವರ ಬಗ್ಗೆ ಯಾವುದೇ ಪೂರ್ವತೀರ್ಮಾನಕ್ಕೆ ಬರದೇ ಆರೈಕೆದಾರರ ಮಾತುಗಳನ್ನು ಆಲಿಸಿ. ಇದರಿಂದ ಅವರ ಮನಸ್ಸು ಹಗುರಾಗುತ್ತದೆ ಮತ್ತು ಆರೋಗ್ಯಕರವಾಗಿಯೂ ಪರಿಣಮಿಸುತ್ತದೆ.
  • ಕಾಯಿಲೆಯ ಹೊರತಾದ ವಿಷಯಗಳ ಕುರಿತು ಮಾತನಾಡಿ: ಮಾನಸಿಕ ಕಾಯಿಲೆಯು ರೋಗಿ ಮತ್ತು ಆರೈಕೆದಾರರ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಿದ್ದರೂ ಕೂಡ ಕೇವಲ ಅದೊಂದೇ ವಿಷಯವಾಗಿ ಮಾತನಾಡಬೇಡಿ. ಅವರೊಂದಿಗೆ ಉಳಿದ ಸಾಮಾನ್ಯರೊಂದಿಗೆ ಮಾತನಾಡುವಂತೆ ಮಾತನಾಡಿ. “ನಾನು ನನ್ನ ಸ್ನೇಹಿತೆಯ ಜೊತೆ ಮೊದಲಿನಂತೆಯೇ ಗಾಸಿಪ್ ಮಾಡುತ್ತೇನೆ, ನಾನು ನನ್ನ ಮಕ್ಕಳ ಬರ್ತಡೇ ಪಾರ್ಟಿಗಳಿಗೆ ಅವರನ್ನು ಆಹ್ವಾನಿಸುತ್ತೇನೆ, ನಾನು ಅವರೊಂದಿಗೆ ಶಾಪಿಂಗ್ ಮಾಡುತ್ತೇನೆ… ಇದು ರೋಗಿ ಮತ್ತು ಅವರ ಆರೈಕೆದಾರರಿಗೆ ಸಾಮಾಜಿಕವಾಗಿ ಒಳಗೊಳ್ಳಲು ಮತ್ತು ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಸಹಾಯಮಾಡುತ್ತದೆ,” ಎನ್ನುತ್ತಾರೆ ನಿಮ್ಹಾನ್ಸ್ ನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಆರತಿ ಜಗನ್ನಾಥನ್.

ನೀವು ನಿಮ್ಮದೇ ಜೀವನ ಮ್ತತು ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕೂಡ, ಆರೈಕೆದಾರರಾಗಿರುವ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳಿಗೆ ದೊಡ್ಡ ಅಥವಾ ಸಣ್ಣ ಸಹಾಯವನ್ನು ಮಾಡುವ ಮೂಲಕ ಆರೈಕೆದಾರರ ಜವಾಬ್ದಾರಿಯ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org