ನಿಮ್ಮ ಪ್ರೀತಿಪಾತ್ರರಿಗೆ ಮಾನಸಿಕ ತೊಂದರೆ ಇದೆ ಎಂದಾಗ
ಗಂಭೀರ ಮತ್ತು ಉಲ್ಬಣಗೊಳ್ಳುತ್ತಿರುವ ಮಾನಸಿಕ ಖಾಯಿಲೆಯಿರುವ ವ್ಯಕ್ತಿಯನ್ನು ನೋಡಿಕೊಳ್ಳುವುದು ಅತ್ಯಂತ ಸವಾಲಿನ ಕಾರ್ಯ. ಆರೈಕೆದಾರರು ಅನಾರೋಗ್ಯ ಪೀಡಿತ ವ್ಯಕ್ತಿಯ ದೈನಂದಿನ ಆರೈಕೆಯ ಜೊತೆಗೆ ಔಷಧ ನೀಡುವುದು, ನಿಯಮಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ರೋಗಿಯ ಆಹಾರದ ಬಗ್ಗೆ ಕಾಳಜಿ ವಹಿಸುವುದು, ಮತ್ತು ಅವರ ಹಣಕಾಸಿನ ಅಗತ್ಯವನ್ನು ನೋಡಿಕೊಳ್ಳುವುದು ಸೇರಿದಂತೆ ಹಲವಾರು ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.
ಆರೈಕೆದಾರರು ವ್ಯಕ್ತಿಯ ಬದಲಾದ ನಡವಳಿಕೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಇವೆಲ್ಲವೂ ಆರೈಕೆದಾರರಲ್ಲಿ ಅತಿಯಾದ ಒತ್ತಡ ಮತ್ತು ಹೊರೆಯನ್ನುಂಟು ಮಾಡುತ್ತದೆ. ತಮ್ಮ ಪ್ರೀತಿಪಾತ್ರರಿಗೆ ಮಾನಸಿಕ ಸಮಸ್ಯೆಯಿರುವುದು ತಿಳಿದ ಕ್ಷಣದಿಂದ, ತಾವು ಆರೈಕೆಗೆ ತೊಡಗಿರುವ ಅವಧಿಯಾದ್ಯಂತ ಆರೈಕೆದಾರರು ಹಲವು ರೀತಿಯ ಭಾವನಾತ್ಮಕ ಏರಿಳಿತಗಳಿಗೆ ಒಳಗಾಗುತ್ತಾರೆ.
ಈ ಪ್ರಕ್ರಿಯೆಯು ಸಾಮಾನ್ಯ. ಆದರೆ ಪ್ರತಿ ವ್ಯಕ್ತಿಯೂ ಸಂದರ್ಭಕ್ಕನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕೆಲವರು ಲಘುವಾಗಿ ಪರಿಗಣಿಸಿ, ಉಳಿದ ಸಾಮಾನ್ಯ ಸಮಸ್ಯೆಯಂತೆಯೇ ಬಗೆಹರಿಸಿಕೊಂಡರೆರೆ, ಇನ್ನು ಕೆಲವರು ಬಹಳ ಗಂಭೀರವಾಗಿ ಪರಿಗಣಿಸಿ ಅತ್ಯಂತ ಭಾವುಕವಾಗಿ ವರ್ತಿಸುತ್ತಾರೆ.
ಕೆಲವು ಭಾವನೆಗಳು ಆರೈಕೆದಾರರಲ್ಲಿ ಸಾಮಾನ್ಯವಾಗಿದ್ದು, ಹಂತಹಂತವಾಗಿ ಅವು ಪ್ರಕಟಗೊಳ್ಳುತ್ತವೆ. ತಜ್ಞರು ಅವನ್ನು ಈ ರೀತಿಯಾಗಿ ಗುರುತಿಸಿದ್ದಾರೆ.
ನಿರಾಕರಣೆ
ಆರೈಕೆದಾರರು ಮೊದಲ ಬಾರಿಗೆ ಮಾನಸಿಕ ಅನಾರೋಗ್ಯದ (ಸ್ಕಿಜೋಫ್ರೀನಿಯಾ, ಬೈಪೊಲಾರ್ ಡಿಸಾರ್ಡರ್, ಇತ್ಯಾದಿ) ಬಗ್ಗೆ ತಿಳಿದಾಗ, ಇದು ತಾತ್ಕಾಲಿಕ, ಕೆಲ ಸಮಯದ ಬಳಿಕ ಅನಾರೋಗ್ಯ ಪೀಡಿತ ವ್ಯಕ್ತಿಯು ಸರಿಹೋಗುತ್ತಾನೆ ಎಂದು ಯೋಚಿಸುತ್ತಾರೆ. ದೀರ್ಘಕಾಲದವರೆಗೆ ಅವರು ಇದೊಂದು ಚಿಕ್ಕ ಸಂಗತಿಯೆಂದು ಭಾವಿಸುತ್ತಾರೆ. ಈ ತಪ್ಪು ಗ್ರಹಿಕೆಗೆ ಮಾನಸಿಕ ಅನಾರೋಗ್ಯದ ಬಗೆಗಿನ ಅಜ್ಞಾನವೇ ಕಾರಣ.
ಅನಾರೋಗ್ಯ ಪೀಡಿತ ವ್ಯಕ್ತಿಯು ಸುಧಾರಿಸುವ ಯಾವುದೇ ಲಕ್ಷಣವನ್ನು ತೋರಿಸದಿದ್ದಾಗ ಅವರು ಆತಂಕಗೊಳ್ಳಲು ಆರಂಭಿಸುತ್ತಾರೆ. ಈಗಲೂ ಸಹ ಆರೈಕೆದಾರರು ವಾಸ್ತವಿಕತೆಯನ್ನು ನಿರಾಕರಿಸುವ ಸ್ಥಿತಿಯಲ್ಲಿಯೇ ಇರುತ್ತಾರೆ. ಅವರು ಇದಕ್ಕೆಲ್ಲಾ ಮಾಟಮಂತ್ರದಂತಹ ಧಾರ್ಮಿಕ ಸಂಗತಿಗಳೇ ಕಾರಣ ಎಂದು ನಂಬುತ್ತಾರೆ. ಅನಾರೋಗ್ಯವನ್ನು ಹೋಗಲಾಡಿಸಲು ಧಾರ್ಮಿಕ ನಂಬಿಕೆಗಳ ಮತ್ತು ವಿಧಿವಿಧಾನಗಳ ಮೊರೆಹೋಗುತ್ತಾರೆ. ಆರೈಕೆದಾರರಿಗೆ ಈ ಹಂತದಿಂದ ಹೊರಬಂದು ತಮ್ಮ ಪ್ರೀತಿಪಾತ್ರರಿಗೆ ಏನಾಗಿದೆ ಎಂದು ತಿಳಿದು ವೈದ್ಯರನ್ನು ಸಂಪರ್ಕಿಸಲು ಕೆಲವು ಸಮಯ ತೆಗೆದುಕೊಳ್ಳುತ್ತದೆ.
ಕೋಪ
‘ಇದು ನನ್ನ ಕುಟುಂಬದ ಸದಸ್ಯರಿಗೆ/ಪತಿ/ಪತ್ನಿ/ಮಗುವಿಗೆ ಏಕಾಯಿತು?’ ‘ ಇದಕ್ಕೆಲ್ಲಾ ನಾನೇ ಕಾರಣನೇ?’ ಎಂದು ಆರೈಕೆದಾರರು ತಮ್ಮಲ್ಲಿಯೇ ಪ್ರಶ್ನಿಸಿಕೊಳ್ಳಲು ಆರಂಭಿಸುತ್ತಾರೆ. ಮೊದಲು, ಅವರು ಇದಕ್ಕೆಲ್ಲಾ ತಾವೇ ಕಾರಣವೆಂದು ಯೋಚಿಸಿ ತಮ್ಮ ಮೇಲೆಯೇ ಕೋಪಗೊಳ್ಳುತ್ತಾರೆ.
ನಂತರ, ಅವರು ಹೀಗಾಗಲು ಕಾರಣವೆನೆಂದು ನೋಡುತ್ತಾರೆ ಮತ್ತು ತಮ್ಮ ತಪ್ಪಿತಸ್ಥ ಭಾವನೆಯಿಂದ ಹೊರಬರಲು ಉಳಿದವರನ್ನು ದೂರಲು ಆರಂಭಿಸುತ್ತಾರೆ. ಉದಾಹರಣೆಗೆ, ಅವರ ಮಗ/ಮಗಳಲ್ಲಿ ಖಿನ್ನತೆ, ಆತಂಕ, ತಿನ್ನುವ ಸಮಸ್ಯೆ ಅಥವಾ ಇನ್ನವುದೇ ಮಾನಸಿಕ ಸಮಸ್ಯೆ ಕಂಡುಬಂದಲ್ಲಿ ಅವರ ಮಕ್ಕಳಲ್ಲಿ ಕೆಟ್ಟ ಹವ್ಯಾಸಗಳು ಬೆಳೆಯಲು ಮಕ್ಕಳ ಸ್ನೇಹಿತರೇ ಕಾರಣ ಎಂದು ಅವರನ್ನು ದೂರುತ್ತಾರೆ. ಅಥವಾ ಸಮಸ್ಯೆಯುಂಟಾಗಲು ಕಾಲೇಜಿನಲ್ಲಿ ನಡೆಯುವ ರಾಗಿಂಗ್ ಕಾರಣವೆಂದು ಹೇಳುತ್ತಾರೆ. ಅಥವಾ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವಂತೆ ಹೆಚ್ಚಾಗಿ ನಿರೀಕ್ಷಿಸುವುದು ಮತ್ತು ಹೆಚ್ಚು ಕಟ್ಟುನಿಟ್ಟಾಗಿರುವುದೇ ಕಾರಣ ಎಂದು ದೂರುತ್ತಾರೆ.
ಒಂದು ವೇಳೆ ನೌಕರಸ್ಥರಲ್ಲಿ ಇಂತಹ ಸಮಸ್ಯೆಯು ಕಂಡುಬಂದಲ್ಲಿ, ಕುಟುಂಬ ಸದಸ್ಯರು ಕೆಲಸ ಮಾಡುವ ಸ್ಥಳದ ನಿಯಮಗಳು, ಆಡಳಿತ ವ್ಯವಸ್ಥೆ, ಅಥವಾ ಕೆಲಸ ಮಾಡುವ ಸ್ಥಳದಲ್ಲಿನ ಅಧಿಕಾರಿಗಳು, ಮುಂತಾದವು ವ್ಯಕ್ತಿಯ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಭಾವಿಸುತ್ತಾರೆ.
ಹೆಚ್ಚಿನ ಸಂದರ್ಭದಲ್ಲಿ, ಈ ರೀತಿಯ ಭಾವನೆಗಳು ಸಹಜವಾಗಿರುತ್ತವೆ, ಈ ರೀತಿಯಾಗಿ ನಡೆದುಕೊಳ್ಳುವುದರಿಂದ ನೀವು ನಿಮ್ಮಲ್ಲಿನ ನಿರಾಶಾ ಭಾವನೆಯಿಂದ ಹೊರಬರಲು ಸಹಾಯವಾಗುತ್ತದೆ. ನೀವು ಒಮ್ಮೆ ಈ ಹಂತವನ್ನು ದಾಟಿದಲ್ಲಿ, ನೀವು ಪ್ರೀತಿಸುವ ವ್ಯಕ್ತಿಯ ಚಿಕಿತ್ಸೆ ಮತ್ತು ಅವರ ಕಾಳಜಿಯ ಬಗ್ಗೆ ಗಮನ ನೀಡಲು ಸಾಧ್ಯವಾಗುತ್ತದೆ.
ಕೋಪವನ್ನು ವ್ಯಕ್ತಪಡಿಸದೇ ಇದ್ದಲ್ಲಿ ಅಥವಾ ಮುಚ್ಚಿಟ್ಟಲ್ಲಿ ಇದು ಆತಂಕ, ಒತ್ತಡ ಅಥವಾ ಇನ್ನು ಕೆಲವು ಸಂದರ್ಭದಲ್ಲಿ ಖಿನ್ನತೆಗೆ ದಾರಿ ಮಾಡಿ ಕೊಡುತ್ತದೆ. ಕೋಪವು ಸಂಬಂಧಗಳಿಗೆ ಅಥವಾ ಇತರರಿಗೆ ಹಾನಿ ಮಾಡಬಹುದು. ಆದ್ದರಿಂದ ವ್ಯಕ್ತಿಯು ಇತರರ ಸಹಾಯ ಪಡೆಯುವ ಮೂಲಕ ಇಲ್ಲವೇ ಸಂದರ್ಭಗಳನ್ನು ಅರ್ಥ ಮಾಡಿಕೊಂಡು ಕೋಪವನ್ನು ನಿಯಂತ್ರಿಸಬೇಕು.
ಸತ್ಯಾಂಶವನ್ನು ಒಪ್ಪಿಕೊಳ್ಳದೆ ಇರುವುದು
ಕೆಲವು ಆರೈಕೆದಾರರು ವ್ಯಕ್ತಿಯು ಗಂಭಿರ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವಾಗಲೂ ಸಹ, ಯಾವುದೇ ಅಹಿತಕರ ಸಂಗತಿಯು ನಡೆದಿಲ್ಲವೆಂದು ತಮ್ಮ ವಿಧಿಯೊಂದಿಗೆ ಚೌಕಾಸಿಗೆ ಇಳಿಯುತ್ತಾರೆ. ಅವರು ವೈದ್ಯರು ಖಾಯಿಲೆಯನ್ನು ಪೂರ್ತಿಯಾಗಿ ಗುಣಪಡಿಸಬಲ್ಲರೆಂದು ನಂಬುತ್ತಾರೆ.
ಉಳಿದವರ ಟೀಕೆಗಳನ್ನು ಕೇಳಿದಾಗ ಅಥವಾ ತಮ್ಮ ನಂಬಿಕೆಗೆ ವಿರುದ್ಧವಾದ ವರದಿಯನ್ನು ಓದಿದಾಗ ಆರೈಕೆದಾರರು ರಕ್ಷಣಾತ್ಮಕವಾಗಿ ವರ್ತಿಸಬಹುದು.
ನಿಮ್ಮ ಪ್ರೀತಿಪಾತ್ರರ ಕುರಿತು ಉಳಿದವರೆಲ್ಲರಿಗಿಂತ ನಿಮಗೇ ಹೆಚ್ಚು ತಿಳಿದಿರುವುದರಿಂದ ನಿಮ್ಮ ರಕ್ಷಣಾತ್ಮಕ ವರ್ತನೆಯು ನಿಮ್ಮಲ್ಲಿ ಸಂಕುಚಿತ ಮನೋಭಾವವವನ್ನು ಉಂಟುಮಾಡುತ್ತದೆ. ಇದರಿಂದ ನೀವು ಬೆಂಬಲ ಮತ್ತು ಸಹಾಯದಿಂದ ವಂಚಿತರಾಗಬಹುದು. ಉದಾಹರಣೆಗೆ, ಒಬ್ಬ ಸಾಮಾಜಿಕ ಕಾರ್ಯಕರ್ತ ಅಥವಾ ಸ್ನೇಹಿತ ಈ ಸಂದರ್ಭವನ್ನು ಉತ್ತಮವಾಗಿ ನಿಭಾಯಿಸಲು ಸಲಹೆ ನೀಡಬಹುದು.
ಸಂತಾಪ/ಈರ್ಷ್ಯೆ
ಈ ಭಾವನೆಯನ್ನು ಎಷ್ಟು ನಿಷೇಧಿಸಲಾಗಿದೆ ಎಂದರೆ ಹೆಚ್ಚಿನ ಆರೈಕೆದಾರರು ಇದನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಇದಕ್ಕೆ ನಮ್ಮ ಸಮಾಜವು ಆರೈಕೆದಾರರ ಜೀವನ, ಬಯಕೆ, ಭಾವನೆ ಮತ್ತು ಆದ್ಯತೆಗಳನ್ನು ಪರಿಗಣಿಸದೆ, ಕೇವಲ ಅವರ ತ್ಯಾಗವನ್ನೇ ಗುರುತಿಸುತ್ತಾರೆ.
ಹೆಚ್ಚಿನ ಸಮಯ ಮನೆಯ ಉಳಿದ ಸದಸ್ಯರು ಮಾನಸಿಕ ಅನಾರೋಗ್ಯ ಪೀಡಿತ ವ್ಯಕ್ತಿಯ ಆರೈಕೆಗೆ ಸಹಾಯ ಮಾಡದೇ ಇರುವುದರಿಂದ ಆರೈಕೆದಾರರು (ಹೆಚ್ಚಿನ ಸಮಯ ಆರೈಕೆಯಲ್ಲಿ ತೊಡಗಿರುವ ವ್ಯಕ್ತಿ), ತಾವು ನಿರ್ಲಕ್ಷಕ್ಕೆ ಒಳಗಾಗಿದ್ದೇವೆ ಎಂದು ಭಾವಿಸಬಹುದು ಮತ್ತು ಹೆಚ್ಚು ಶ್ರಮವುಂಟಾಗಬಹುದು.
ಭಾರತದಲ್ಲಿ ಬಹುತೇಕ ವೇಳೆ ಮಹಿಳೆಯರೇ ಆರೈಕೆದಾರರಾಗಿರುತ್ತಾರೆ. ಪೂರ್ಣಾವಧಿಯ ಆರೈಕೆಯ ಅಗತ್ಯವಿರುವಾಗ ಅವರು ತಮ್ಮ ಉದ್ಯೋಗವನ್ನು ಬಿಡಬೇಕಾಗುತ್ತದೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರೇ ಮನೆಯ ಎಲ್ಲಾ ಕೆಲಸವನ್ನು ನಿರ್ವಹಿಸಬೇಕಾಗಿರುವದರಿಂದ ಅವರಿಗೆ ಅಗತ್ಯ ಸಾಮಾಜಿಕ ಬೆಂಬಲ ದೊರೆಯುವುದಿಲ್ಲ. ಆದ್ದರಿಂದ ಆರ್ಥಿಕ ಅನಾನುಕೂಲತೆ ಮತ್ತು ಉಳಿದ ಸದಸ್ಯರು ಅವರ ಪ್ರಯತ್ನವನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಅವರಲ್ಲಿ ಹತಾಶೆಯನ್ನುಂಟು ಮಾಡುತ್ತದೆ.
ಒಟ್ಟಿನಲ್ಲಿ ಆರೈಕೆದಾರರ ಔದ್ಯೋಗಿಕ ಜೀವನ, ಮದುವೆ, ಆರೋಗ್ಯ ಮತ್ತು ಮನೆಯ ಹೊರಗಿನ ಉಳಿದ ಚಟುವಟಿಕೆಗಳು ನಿರ್ಲಕ್ಷಕ್ಕೆ ಒಳಗಾದಾಗ ಅವರಲ್ಲಿ ಕೋಪ ಮತ್ತು ಈರ್ಷ್ಯೆಯುಂಟಾಗಬಹುದು.
ಅನಾರೋಗ್ಯ ಪೀಡಿತ ವ್ಯಕ್ತಿ ಮತ್ತು ಕುಟುಂಬದ ಸದಸ್ಯರ ಕುರಿತು ಆರೈಕೆದಾರರಲ್ಲಿ ಈರ್ಷ್ಯೆಯ ಭಾವವು ಸಾಮಾನ್ಯ. ಎಲ್ಲಿಯವರೆಗೆ ಅವರು ತಮಗೆ ಅಥವಾ ಮಾನಸಿಕ ಅನಾರೋಗ್ಯ ಪೀಡಿತ ವ್ಯಕ್ತಿಯ ಬಗ್ಗೆ ಯಾವುದೇ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವರೋ ಅಲ್ಲಿಯವರೆಗೆ ಇದು ಸಾಮಾನ್ಯ ಭಾವನೆ ಎಂದು ಎಣಿಸಬಹುದು.
ದುಃಖ
ಹೆಚ್ಚಿನ ಸಂದರ್ಭದಲ್ಲಿ ಆರೈಕೆದಾರರು ಸಹಜ ನಡವಳಿಕೆ ಮತ್ತು ನಗುವನ್ನು ತೋರಿಸುವುದರಿಂದ ನಾವು ಅವರಿಗೆ ಯಾವುದೇ ದುಃಖ, ನೋವು ಇಲ್ಲ ಎಂದು ಭಾವಿಸುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ನಾವು ದುಃಖವನ್ನು ಸಾವಿನ ಜೊತೆ ಜೋಡಿಸುತ್ತೇವೆ. ಆದರೆ, ಪ್ರೀತಿಪಾತ್ರರು ಗಂಭೀರವಾದ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವಾಗಲೂ ಕೂಡ ಜನರು ಅದೇ ತರಹದ ಭಾವನೆಗಳನ್ನು ಅನುಭವಿಸುತ್ತಾರೆ. ಶೋಕ ಆರೈಕೆದಾರರಲ್ಲಿ ಸಾಮಾನ್ಯವಾಗಿದ್ದು, ಯಾವುದೇ ಸಂದರ್ಭದಲ್ಲಿಯೂ ಅವರಿಗೆ ಉಂಟಾಗಬಹುದು. ಅದರಲ್ಲೂ ಅಲ್ಜ಼ೈಮರ್ಸ್, ಚಿತ್ತವೈಕಲ್ಯ ಮತ್ತು ಕ್ಯಾನ್ಸರ್ ಅಂತಿಮ ಹಂತಗಳಲ್ಲಿ ಇದು ಹೆಚ್ಚಾಗಿ ಬಾಧಿಸುತ್ತದೆ.
ನಿಮಗೆ ನಿಮ್ಮ ದುಃಖದ ಭಾವನೆಗಳು ಮತ್ತು ನೋವಿನ ಅರಿವಿದ್ದಲ್ಲಿ, ಅದನ್ನು ನಿಮ್ಮ ಆತ್ಮೀಯರು ಇಲ್ಲವೇ ನಿಮ್ಮನ್ನು ಬೆಂಬಲಿಸಿ ಅರ್ಥಮಾಡಿಕೊಳ್ಳುವವರಲ್ಲಿ ಹೇಳಿಕೊಂಡರೆ ಸ್ವಲ್ಪ ಹಗುರವೆನಿಸುತ್ತದೆ. ಎಲ್ಲವನ್ನೂ ಮುಚ್ಚಿಟ್ಟು ನಗುಮುಖದಿಂದ ಇರುವುದು ಸ್ವಲ್ಪ ಕಾಲದ ನಂತರ ಯಾತನೆಯನ್ನು ಉಂಟುಮಾಡುತ್ತದೆ.
ನಿಮಗಾಗಿ ಸ್ವಲ್ಪ ಸಮಯನ್ನು ಮೀಸಲಿಡಿ ಮತ್ತು ನಿಮಗೆ ಇಷ್ಟವಿರುವ ಚಟುವಟಿಕೆಯನ್ನು ಮಾಡಿ. ಇದು ನಿಮಗೆ ಸಂದರ್ಭವನ್ನು ಯತಾರ್ಥವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.
ಚಿಂತೆ
ನಾವು ಚಿಂತೆ ಮಾಡಬಾರದೆಂದು ಎಷ್ಟೇ ಪ್ರಯತ್ನಿದರೂ ಕೂಡ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾವು ಪ್ರೀತಿಸುವ ಅಥವಾ ನಾವು ಕಾಳಜಿ ಮಾಡುವ ವ್ಯಕ್ತಿಯ ಮಾನಸಿಕ ಅನಾರೋಗ್ಯದಿಂದಾಗಿ ಅವರ ಶಿಕ್ಷಣ, ಹಣಕಾಸು, ಮದುವೆ ಈ ವಿಷಯಗಳು ನಮ್ಮನ್ನು ಚಿಂತೆಗೀಡು ಮಾಡುತ್ತವೆ. “ನನ್ನ ಮರಣದ ನಂತರ ಮುಂದೇನು?” ಇಂತಹ ಯೋಚನೆಗಳು ನಮ್ಮ ಮನಸ್ಸಿನಲ್ಲಿ ಆಗಾಗ ಮೂಡುತ್ತಿರುತ್ತವೆ. ಕಾಳಜಿ ಮಾಡುವುದು ಒಳ್ಳೆಯದು, ಆದರೆ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿತರಾಗುವುದು ನಿಮ್ಮ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ, ನಿಮ್ಮ ನಿದ್ರೆಯನ್ನು ಹಾಳುಮಾಡುತ್ತದೆ, ತಲೆನೋವು ಮತ್ತು ದೇಹದ ಇತರ ನೋವು, ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು.
ಒಂದುವೇಳೆ ನಿಮ್ಮ ಚಿಂತೆಯು ನಿಮ್ಮ ಆರೋಗ್ಯ ಮತ್ತು ದೈನಂದಿನ ಚಟುವಟಿಕೆಗಳನ್ನು (ಕೆಲಸ, ಆಹಾರಾಭ್ಯಾಸ, ನಿದ್ರೆ) ಬಾಧಿಸುತ್ತಿದ್ದಲ್ಲಿ ನೀವು ಇದರಿಂದ ಹೊರಬರಲು ಪ್ರಯತ್ನಿಸಬೇಕಾಗುತ್ತದೆ. ನಿಮ್ಮ ಭಾವನೆಗಳನ್ನು ಇತರರಲ್ಲಿ ಹಂಚಿಕೊಂಡು ನಿಮ್ಮ ಯೋಚನೆಯನ್ನು ರಚನಾತ್ಮಕ ವಿಷಯಗಳೆಡೆ ತಿರುಗಿಸಲು ಆಪ್ತಸಮಾಲೋಚಕರ ಅಥವಾ ಚಿಕಿತ್ಸಕರ ನೆರವನ್ನು ಪಡೆಯಬಹುದು.
ನಿರಾಶೆ/ನಾಚಿಕೆ
ಈ ಭಾವನೆಗಳು ಆರೈಕೆದಾರ ಮತ್ತು ಮಾನಸಿಕ ಅನಾರೋಗ್ಯವಿರುವ ವ್ಯಕ್ತಿಗಳಿಬ್ಬರಿಗೂ ಅನುಭವವಾಗಿರುತ್ತದೆ. ಮಾನಸಿಕ ಅನಾರೋಗ್ಯ ಕುರಿತು ನಮ್ಮ ಸಮಾಜದಲ್ಲಿರುವ ಕಳಂಕದಿಂದಾಗಿ ಕುಟುಂಬದವರು ತಮ್ಮ ಪ್ರೀತಿಪಾತ್ರರ ಅನಾರೋಗ್ಯದ ಕುರಿತು ಲಜ್ಜಿತರಾಗಿರುತ್ತಾರೆ. ತಾವು ಸಾಮಾಜಿಕವಾಗಿ ಪ್ರತ್ಯೇಕಗೊಳ್ಳಬಹುದೆಂಬ ಭಯದಿಂದ ತಮ್ಮ ಸಂಬಂಧಿಗಳು ಮತ್ತು ಸ್ನೇಹಿತರ ಎದುರು ಸಮಸ್ಯೆಯ ಬಗ್ಗೆ ಹೇಳುವುದಿಲ್ಲ.
ಇದರಿಂದ ಆರೈಕೆದಾರರ ಜೊತೆಗೆ ರೋಗಿಯೂ ಕೂಡ ತೊಂದರೆಯನ್ನು ಅನುಭವಿಸುತ್ತಾನೆ. ಅವರು ಕೂಡ ನಾಚಿಕೆ, ಕಳಂಕ, ತಾರತಮ್ಯ ಮತ್ತು ಸಾಮಾಜಿಕ ಪ್ರತ್ಯೇಕತೆಯ ಭಯದಿಂದ ಯಾರೊಂದಿಗೂ ತಮ್ಮ ಸಮಸ್ಯೆಯ ಬಗ್ಗೆ ಹೇಳುವುದಿಲ್ಲ. “ಜನರು ನಮ್ಮ ಮನೆಗೆ ಬರುವುದನ್ನು ನಿಲ್ಲಿಸಿದ್ದಾರೆ. ಮದುವೆ ಅಥವಾ ಸಾಮಾಜಿಕ ಕಾರ್ಯಕ್ರಮಗಳಿಗೆ ನಮ್ಮನ್ನು ಆಹ್ವಾನಿಸುವುದಿಲ್ಲ,” ಎಂದು ಮಾನಸಿಕ ಕಾಯಿಲೆ ಹೊಂದಿರುವ ಒಬ್ಬ ಹದಿಹರೆಯದ ಹುಡುಗನ ತಂದೆ ಹೇಳುತ್ತಾರೆ.
ಅಪರಾಧಿ ಪ್ರಜ್ಞೆ
ಆರೈಕೆದಾರರು ಅಪರಾಧಿ ಪ್ರಜ್ಞೆಯನ್ನು ಹೊಂದಿರುತ್ತಾರೆ. ತಾವು ಈ ವಿಷಯದಲ್ಲಿ ತಕ್ಕಷ್ಟು ಪ್ರಯತ್ನವನ್ನು ಮಾಡಲಿಲ್ಲ, ತಾವು ಸರಿಯಾಗಿ ನಡೆದುಕೊಂಡಿಲ್ಲ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ, ಮಾನಸಿಕ ಅನಾರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿಲ್ಲ, ಮುಂತಾದ ಯೋಚನೆಗೆ ಒಳಗಾಗುತ್ತಾರೆ. “ನಾನು ಈ ರೀತಿಯಾಗಿ ಮಾಡಿದ್ದಿದ್ದರೆ” ಎಂಬ ಭಾವನೆಯಿಂದ ತಮ್ಮ ಹೊರೆಯನ್ನು ಜಾಸ್ತಿ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ, “ನಾನು ನನ್ನ ಮಗನನ್ನು ಇನ್ನೂ ಮುಂಚೆಯೆ ಚಿಕಿತ್ಸೆಗೆ ಕರೆದುಕೊಂಡು ಹೋಗಬಹುದಿತ್ತು”, “ನಾನು ಇನ್ನಷ್ಟು ಸಹನೆಯಿಂದ ವರ್ತಿಸಬಹುದಾಗಿತ್ತು”, “ನಾನು ಇನ್ನಷ್ಟು ಸಮಯ ನನ್ನ ಮಗಳ ಜೊತೆ ಕಳೆದಿದ್ದರೆ ಅವಳಿಗೆ ತಿನ್ನುವ ಸಮಸ್ಯೆಯುಂಟಾಗುವುದನ್ನು ತಪ್ಪಿಸಬಹುದಾಗಿತ್ತು” ಇತ್ಯಾದಿ.
ಪಶ್ಚಾತ್ತಾಪದ ಭಾವನೆಯನ್ನು ತಪ್ಪಿಸುವುದು ಸಾಧ್ಯವಾಗುವುದಿಲ್ಲ ಮತ್ತು ಅವರು ಅನುಭವಿಸುತ್ತಿರುವ ನಿರಾಶೆಯ ಪರಿಸ್ಥಿತಿಯಿಂದಾಗಿ ಈ ಭಾವನೆಗಳು ಉಂಟಾಗುತ್ತವೆ. ಮತ್ತೆ ಮತ್ತೆ ಭಾದಿಸುವ ಈ ಯೋಚನೆಗಳಿಂದಾಗಿ ಕೆಲವೊಮ್ಮೆ ಆರೈಕೆದಾರರಲ್ಲಿ ಖಿನ್ನತೆಯುಂಟಾಗಬಹುದು ಮತ್ತು ಚಿಕಿತ್ಸೆಯ ಅಗತ್ಯವುಂಟಾಗಬಹುದು.
ನೀವು ಅತ್ಯಂತ ಪರಿಪೂರ್ಣತೆಯ ಯೋಚನೆ ಮತ್ತ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ನೈಜತೆಯನ್ನು ಅದರ ಎಲ್ಲಾ ಮಿತಿಗಳೊಂದಿಗೆ ಒಪ್ಪಿಕೊಳ್ಳುವುದರಿಂದ ಸಂದರ್ಭವನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದು. ನಿಮ್ಮನ್ನು ನೀವು ಶಿಕ್ಷಿಸಿಕೊಳ್ಳುವ ಬದಲು ಸಂದರ್ಭವನ್ನು ಒಪ್ಪಿಕೊಂಡು ಮುನ್ನಡೆಯಿರಿ.
ಖಿನ್ನತೆ
ದೀರ್ಘಕಾಲದವರೆಗೆ ಆರೈಕೆಮಾಡುವುದು ಒಂದು ಸಾಹಸವೇ ಸರಿ. ಇದು ಆರೈಕೆದಾರರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಒತ್ತಡ, ಆತಂಕ ಅವರನ್ನು ಭಾವನಾತ್ಮಕವಾಗಿ ಬಳಲುವಂತೆ ಮಾಡುತ್ತವೆ. ಇದರಿಂದ ಅವರು ಖಿನ್ನತೆಗೆ ಒಳಗಾಗಬಹುದು. ವೈದ್ಯರು ಆರೈಕೆದಾರರಿಗೆ ಚಿಕಿತ್ಸೆ ನೀಡುವುದರಿಂದ ಅವರು ಬೇಗ ಸುಧಾರಿಸಿಕೊಂಡು ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಆರೈಕೆ ಮುಂದುವರಿಸಬಹುದು.
ಸ್ವೀಕರಣೆ
ಕೆಲವು ಸಮಯದ ನಂತರ, ಸಂದರ್ಭವನ್ನು ನಿಭಾಯಿಸುವ ಸಾಮರ್ಥ್ಯದ ಮೇಲೆ ಆರೈಕೆದಾರರು ಖಾಯಿಲೆಯನ್ನು ಒಪ್ಪಿಕೊಂಡು ತಜ್ಞರ ಸಹಾಯ ಪಡೆಯಲು ನಿರ್ಧರಿಸುತ್ತಾರೆ. ತಿಳಿಸಿರುವ ಚಿಕಿತ್ಸೆಯನ್ನು ಪಡೆಯುವಂತೆ ತಮ್ಮ ಕುಟುಂಬದ ಸದಸ್ಯರಿಗೆ ಬೆಂಬಲ ನೀಡುತ್ತಾರೆ.
ಚಿಕಿತ್ಸೆಯ ಜೊತೆಗೆ ತಮ್ಮ ನೆಮ್ಮದಿಗಾಗಿ ಕೆಲವು ಧಾರ್ಮಿಕ ವಿಧಿಗಳನ್ನು ನಡೆಸಬಹುದು. ಎಲ್ಲಿಯವರೆಗೆ ಅವರ ನಂಬಿಕೆಯು ವ್ಯಕ್ತಿಗೆ ತೊಂದರೆ ನೀಡುವುದಿಲ್ಲವೋ ಮತ್ತು ಚಿಕಿತ್ಸೆಯನ್ನು ನಿಲ್ಲಿಸುವುದಿಲ್ಲವೋ, ವೈದ್ಯರು ಅವರ ನಂಬಿಕೆಗಳ ವಿರುದ್ಧ ಏನನ್ನೂ ಹೇಳುವುದಿಲ್ಲ.
ಒಂದು ವೇಳೆ ಧಾರ್ಮಿಕ ವಿಧಿಗಳಿಂದ ವ್ಯಕ್ತಿಗೆ ದೈಹಿಕ ಹಾನಿಯುಂಟಾಗುತ್ತಿದ್ದರೆ, (ಹೊಡೆಯುವುದು, ಕೈ ಮೇಲೆ ಕರ್ಪೂರ ಉರಿಸುವುದು, ವ್ಯಕ್ತಿಯನ್ನು ಕಟ್ಟಿಹಾಕುವುದು) ವೈದ್ಯರು ಅಂತಹ ವಿಧಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸುತ್ತಾರೆ.
ಆರೈಕೆದಾರರು ಅಂತಹ ವಿಧಿಗಳು ಮತ್ತು ಮೂಢನಂಬಿಕೆಗಳ ಮೇಲೆ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಾರೆ. ಇದರಿಂದ ಅವರು ವೈದ್ಯರನ್ನು ಬೇಟಿ ಮಾಡುವ ವೇಳೆಗೆ ಚಿಕಿತ್ಸೆಗೆ ಹಣದ ಕೊರತೆಯುಂಟಾಗಬಹುದು. ಆರೈಕೆದಾರರಿಗೆ ಇವೆಲ್ಲವುಗಳಿಂದ ಹೊರಬರಲು ಸಮಯ ಹಿಡಿಯುತ್ತದೆ. ಸಂದರ್ಭವನ್ನು ನಿಭಾಯಿಸಲು ಅವರಿಗೆ ಕುಟುಂಬದ ಸದಸ್ಯರ, ಸ್ನೇಹಿತರ ಮತ್ತು ಸಮುದಾಯದ ಬೆಂಬಲ, ಪ್ರೀತಿ ಮತ್ತು ಕಾಳಜಿಯ ಅಗತ್ಯವಿರುತ್ತದೆ.
ಮಹಿಳೆಯು ಮಾನಸಿಕ ಸಮಸ್ಯೆಗೆ ಗುರಿಯಾದಾಗ ಆರೈಕೆದಾರರಲ್ಲಿ ಉಂಟಾಗುವ ಭಾವನೆಗಳು
ಒಬ್ಬ ಮಹಿಳೆಯು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಆ ಸಂಧರ್ಭದಲ್ಲಿ ಆರೈಕೆದಾರರು ಬಹುವಾಗಿ ಚಿಂತಿತರಾಗಿರುತ್ತಾರೆ. ಮಹಿಳೆಯು ಮದುವೆಯಾದಾಗ ಮಾತ್ರ ಉತ್ತಮ ಜೀವನವನ್ನು ನಡೆಸಲು ಸಾಧ್ಯ ಎಂದು ಸಮಾಜ, ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿನ ಜನರು ಯೋಚಿಸುತ್ತಾರೆ. ಮಹಿಳೆಯೊಬ್ಬಳು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದರೆ ಆಕೆಯ ಕುಟುಂಬದ ಸದಸ್ಯರು ಆಕೆ ಒಬ್ಬಂಟಿಯಾಗಿ ಹೇಗೆ ಜೀವನವನ್ನು ನಡೆಸುತ್ತಾಳೆ? ಅಥವಾ ಯಾರು ಆಕೆಯನ್ನು ಮದುವೆಯಾಗುತ್ತಾರೆ? ಎಂದೇ ಯೋಚಿಸುತ್ತಾರೆ. ಅವಿವಾಹಿತ ಮಗಳ ತಾಯಿಯೊಬ್ಬಳು “ನನ್ನ ಮಗಳು ಅವಿವಾಹಿತಳಾಗಿರುವುದರಿಂದ ಆಕೆಯ ಅನಾರೋಗ್ಯವನ್ನು ಮಚ್ಚಿಟ್ಟಿದ್ದೇವೆ, ಇದನ್ನು ನಾವು ಯಾರಿಗಾದರೂ ಹೇಳಿದರೆ ಆಕೆಗೆ ಸರಿಯಾದ ಸಂಗಾತಿಯನ್ನು ಹುಡುಕುವಲ್ಲಿ ತೊಂದರೆಯಾಗುತ್ತದೆ.” ಎಂದು ಹೇಳುತ್ತಾರೆ.
ನಮ್ಮ ಸಮಾಜದಲ್ಲಿ, ಪುರುಷನು ವಿವಾಹದ ನಂತರವೂ ತನ್ನ ಪಾಲಕರೊಂದಿಗೆ ವಾಸಿಸುವುದರಿಂದ ಅವನ ಪರಿಸ್ಥಿತಿಯು ಬೇರೆಯಾಗಿರುತ್ತದೆ. ವಿವಾಹದ ನಂತರ ಮಹಿಳೆಯು ತನ್ನ ಗಂಡನ ಮನೆಗೆ ತೆರಳುವುದರಿಂದ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇದರಿಂದ ಆಕೆಯು ತಾನು ಮೊದಲಿದ್ದ ಕುಟುಂಬದ ಬೆಂಬಲವನ್ನು ಕಳೆದುಕೊಳ್ಳುತ್ತಾಳೆ. ಇದರಿಂದ ಆಕೆಯ ಮನೆಯವರು, ಪತಿ ಅಥವಾ ಅತ್ತೆ/ ಮಾವಂದಿರು ಅವಳ ಸಮಸ್ಯೆಯನ್ನು ಅರ್ಥಮಾಡಿಕೊಂಡು ಬೆಂಬಲಿಸುವರೇ ಎಂಬ ಬಗ್ಗೆ ಚಿಂತೆ ಮಾಡುತ್ತಾಳೆ.
ಸಮಾಜವು ಮಾನಸಿಕ ಆರೋಗ್ಯದ ವಿಷಯದಲ್ಲಿ ಮಹಿಳೆಯರ ಬಗ್ಗೆ ಹೆಚ್ಚು ಸಾಂಪ್ರದಾಯಿಕವಾಗಿ ವರ್ತಿಸುವುದರಿಂದ ಮಹಿಳೆಯರ ಸಮಸ್ಯೆಗಳು ಅಧಿಕವಾಗಿದೆ. ಈ ಕಾರಣದಿಂದ ಮಹಿಳೆಯರು ಒಳ್ಳೆಯ ಜೀವನ ನಡೆಸಲು ಪರದಾಡಬೇಕಾಗುತ್ತದೆ.
ಈ ಲೇಖನವನ್ನು ನಿಮ್ಹಾನ್ಸ್ ಸೈಕಿಯಾಟ್ರಿ ಪ್ರಾಧ್ಯಾಪಕರಾಗಿರುವ ಡಾ. ಜಗದೀಶ್ ತೀರ್ಥಹಳ್ಳಿಯವರು ಒದಗಿಸಿದ ಮಾಹಿತಿಯನ್ನು ಆಧರಿಸಿ ರಚಿಸಲಾಗಿದೆ.