ಆರೈಕೆದಾರರಿಗೆ ವಿರಾಮ

ಆರೈಕೆದಾರರಿಗೆ ವಿರಾಮ

ಮಾನಸಿಕ ಕಾಯಿಲೆಯಿರುವ ವ್ಯಕ್ತಿಯನ್ನು ನೋಡಿಕೊಳ್ಳುತ್ತಿರುವ ಆರೈಕೆದಾರರಿಗೆ ವಿಶ್ರಾಂತಿಯನ್ನು ನೀಡುವ ಹಲವಾರು ಸೌಲಭ್ಯಗಳಿವೆ.

ಸುಧಾ ಒಂದು ಕಾರ್ಪೋರೇಟ್ ಸಂಸ್ಥೆಯಲ್ಲಿ ಬಿಸ್ನೆಸ್ ಡೆವಲಪ್ಮೆಂಟ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದಾಳೆ. ಅವಳ ಕೆಲಸದ ಭಾಗವಾಗಿ ಬಹಳಷ್ಟು ಪ್ರಯಾಣಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ಆಕೆಯ ತಾಯಿಗೆ ಅಲ್ಜ಼ೈಮರ್ಸ್ ಖಾಯಿಲೆ ಇದೆ ಎಂದು ತಿಳಿಯಿತು. ತಾನು ಕೆಲಸದ ನಿಮಿತ್ತ ಪ್ರಯಾಣಿಸಬೇಕಾಗಿ ಬಂದಾಗ ತನ್ನ ತಾಯಿಯನ್ನು ನೋಡಿಕೊಳ್ಳುವವರು ಯಾರು ಎಂಬ ಸಮಸ್ಯೆ ಸುಧಾಳನ್ನು ಕಾಡುತ್ತದೆ.

ಮಾನಸಿಕ ಖಾಯಿಲೆಯಿರುವ ವ್ಯಕ್ತಿಯನ್ನು ನೋಡಿಕೊಳ್ಳುವುದು ಆರೈಕೆದಾರರಿಗೆ ಸವಾಲಿನ ಕೆಲಸ. ವ್ಯಕ್ತಿ ಸಹಜ ಜೀವನವನ್ನು ನಡೆಸಲು ಕುಟುಂಬದವರ ಸಹಾಯ ಪ್ರಮುಖವಾಗಿರುತ್ತದೆ. ಆದರೆ, ಆರೈಕೆದಾರರು ವೈಯಕ್ತಿಕ ಅಥವಾ ಔದ್ಯೋಗಿಕ ಕಾರಣಕ್ಕಾಗಿ ತಾತ್ಕಾಲಿಕವಾಗಿ ಆರೈಕೆಯ ಜವಾಬ್ಧಾರಿಯಿಂದ ಬಿಡುವನ್ನು ಬಯಸಿದರೆ ಅವರಿಗೆ ಹಲವಾರು ಆಯ್ಕೆಗಳಿವೆ. ವಿಶ್ರಾಂತಿ, ಆರೈಕೆಧಾಮಗಳು ಆರೈಕೆದಾರರಿಗೆ ತಮ್ಮ ಉದ್ಯೋಗ ಅಥವಾ ಇನ್ಯಾವುದೇ ಕೆಲಸವನ್ನು ಪೂರೈಸಲು ಬಿಡುವನ್ನು ಒದಗಿಸುತ್ತವೆ.

ವಿಶ್ರಾಂತಿ ಆರೈಕೆಧಾಮಗಳಲ್ಲಿ 2 ವಿಧ: ವಸತಿಯುಳ್ಳ ಕೇಂದ್ರಗಳು ಮತ್ತು ವಸತಿ ರಹಿತ ಆರೈಕೆ ಕೇಂದ್ರಗಳು.

ಖಾಯಿಲೆಯ ತೀವ್ರತೆ, ಕುಟುಂಬದವರ ಆರ್ಥಿಕ ಸ್ಥಿತಿ ಮತ್ತು ಸೌಲಭ್ಯದ ಲಭ್ಯತೆಯನ್ನು ಆಧರಿಸಿ ಇವುಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಖಾಯಿಲೆಯು ತೀವ್ರವಾಗಿದ್ದು ವ್ಯಕ್ತಿಯು ತನ್ನ ವೈಯಕ್ತಿಕ ಮತ್ತು ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಅಸಮರ್ಥನಾಗಿದ್ದಲ್ಲಿ ವಸತಿಯುಳ್ಳ ಸೌಲಭ್ಯವನ್ನು ಒದಗಿಸುವುದು ಉತ್ತಮ. ವ್ಯಕ್ತಿಯು ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಲು ಶಕ್ತನಾಗಿದ್ದು, ವೃತ್ತಿಪರ ಕೌಶಲ್ಯ ಅಥವಾ ಯಾವುದಾದರೂ ಕೆಲಸದ ಹವ್ಯಾಸವನ್ನು ಬೆಳೆಸಿಕೊಳ್ಳಲು ಇಚ್ಛಿಸಿದರೆ ವಸತಿ ರಹಿತ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ವಸತಿಯುಳ್ಳ ಆರೈಕೆಧಾಮ: ಈ ಸೌಲಭ್ಯದಲ್ಲಿ ಖಾಯಿಲೆಯಿರುವ ವ್ಯಕ್ತಿಯು ಒಂದು ನಿಗದಿತ ಅವಧಿಯವರೆಗೆ ಆಶ್ರಯ ಪಡೆಯಬಹುದು. ಅವರಿಗೆ ಆಹಾರ, ವಸತಿಯ ಜೊತೆಗೆ ನಿಯಮಿತ ವೈದ್ಯಕೀಯ ಪರೀಕ್ಷೆ ಹಾಗೂ ಪುನಃಶ್ಚೇತನ ಒದಗಿಸಲಾಗುತ್ತದೆ. 

ವಸತಿಯುಳ್ಳ ಆರೈಕೆಧಾಮಗಳು ಈ ರೀತಿ ಇರಬಹುದು:

  • ಅರ್ಧವಾರ್ಷಿಕ ನಿಲಯಗಳು: ಈ ವಸತಿಯಲ್ಲಿ ತೀವ್ರ ಖಾಯಿಲೆಗೆ ಚಿಕಿತ್ಸೆಗೆ ಪಡೆದು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯು ವೃತ್ತಿಪರ, ಸಾಮಾಜಿಕ ಮತ್ತು ಸಂವಹನ ಕೌಶಲ್ಯಗಳು ಸೇರಿದಂತೆ ಅಗತ್ಯವಾದ ತರಬೇತಿಯನ್ನು ಪಡೆಯುತ್ತಾರೆ. ಇಲ್ಲಿ ವ್ಯಕ್ತಿಯು ಕನಿಷ್ಟ 6 ತಿಂಗಳವರೆಗೆ ಇರಬೇಕಾಗುತ್ತದೆ.

  • ತ್ರೈಮಾಸಿಕ ನಿಲಯಗಳು: ಇಲ್ಲಿ ತೀವ್ರ ಖಾಯಿಲೆಯಿರುವ ವ್ಯಕ್ತಿಯು ಕನಿಷ್ಟ 3 ತಿಂಗಳವರೆಗೆ ಇರಬೇಕಾಗುತ್ತದೆ.

ಅರ್ಧವಾರ್ಷಿಕ/ತ್ರೈಮಾಸಿಕ ನಿಲಯಗಳಲ್ಲಿ ವೈದ್ಯರು ಮನಃಶಾಸ್ತ್ರಜ್ಞರು ಮನೋಸಾಮಾಜಿಕ ಕಾರ್ಯಕರ್ತರು ಮತ್ತು ಸೈಕಿಯಾಟ್ರಿಕ್ ನರ್ಸ್ ಲಭ್ಯವಿರುತ್ತಾರೆ. ಇಲ್ಲಿ ತುರ್ತು ವೈದ್ಯಕೀಯ ಸೌಲಭ್ಯಗಳೂ ದೊರೆಯುತ್ತವೆ.

ಅರ್ಧವಾರ್ಷಿಕ/ತ್ರೈಮಾಸಿಕ ನಿಲಯಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

ಒಮ್ಮೆ ಸೌಲಭ್ಯವನ್ನು ಆರಿಸಿಕೊಂಡ ಮೇಲೆ ವ್ಯಕ್ತಿಯು ಅಲ್ಪಾವಧಿಗೆ ಇಲ್ಲಿ ಉಳಿಯಬೇಕಾಗುತ್ತದೆ. ವ್ಯಕ್ತಿಗೆ ವಾತಾವರಣವು ಹೊಂದಿಕೆಯಾದರೆ ಹಾಗೂ ಕುಟುಂಬದವರೂ ಒಪ್ಪಿದರೆ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತದೆ.

ಅರ್ಧವಾರ್ಷಿಕ/ತ್ರೈಮಾಸಿಕ ನಿಲಯಗಳಲ್ಲಿ ಅವರು ಏನು ಮಾಡುತ್ತಾರೆ?

ತೀವ್ರ ಮಾನಸಿಕ ಖಾಯಿಲೆಯಿರುವ ವ್ಯಕ್ತಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ; ಅವರು ಬ್ರಶ್ ಮಾಡುವುದು, ಸ್ನಾನ ಮಾಡುವುದು ಮುಂತಾದ ದೈನಂದಿನ ಸರಳ ಕೆಲಸಗಳನ್ನು ಕೂಡಾ ಮಾಡಿಕೊಳ್ಳಲಾರರು. ಅವರಿಗೆ ನಿಯಮಿತವಾದ ಆರೈಕೆ ಮತ್ತು ಮೇಲ್ವಿಚಾರಣೆಯ ಅಗತ್ಯವಿರುತ್ತದೆ.

ಅರ್ಧವಾರ್ಷಿಕ ನಿಲಯಗಳಲ್ಲಿ ವ್ಯಕ್ತಿಗಳಿಗೆ ದೈನಂದಿನ ವೇಳಾಪಟ್ಟಿಯಿದ್ದು, ಪ್ರತಿ ದಿನವೂ ಬಟ್ಟೆ ತೊಳೆಯುವುದು, ಅವರ ಕೋಣೆಯನ್ನು ಒಪ್ಪವಾಗಿ ಇರಿಸುವುದು, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಂತಾದ ಕಾರ್ಯಗಳಿಗೆ ತರಬೇತಿ ನೀಡಲಾಗುತ್ತದೆ. ಈ ರೀತಿ ವ್ಯಕ್ತಿಯನ್ನು ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳಲಾಗುತ್ತದೆ. ಹೊರಾಂಗಣ, ಒಳಾಂಗಣ ಆಟಗಳ ಜೊತೆಗೆ ಕಲೆ, ಕರಕೌಶಲದಂತಹ ಹವ್ಯಾಸಗಳನ್ನೂ ಕಲಿಸಲಾಗುತ್ತದೆ.

ವಸತಿ-ರಹಿತ ಆರೈಕೆಧಾಮಗಳು: ಒಂದು ವೇಳೆ ಮಾನಸಿಕ ಕಾಯಿಲೆಯಿರುವ ವ್ಯಕ್ತಿಯು ಚೇತರಿಸಿಕೊಳ್ಳುತ್ತಿದ್ದು, ತಮ್ಮ ದೈನಂದಿನ ಕಾರ್ಯಗಳನ್ನು ಪೂರೈಸಿಕೊಳ್ಳಲು ಶಕ್ತನಾಗಿದ್ದಲ್ಲಿ, ವಸತಿ-ರಹಿತ ಆರೈಕೆಧಾಮವನ್ನು ಆಯ್ದುಕೊಳ್ಳಬಹುದು. ಇಲ್ಲಿ ವ್ಯಕ್ತಿಯಲ್ಲಿ ಅಡಕವಾಗಿರುವ ಕೌಶಲದ ವೃದ್ಧಿಗೆ ಆದ್ಯತೆ ನೀಡಲಾಗುತ್ತದೆ.

ವಸತಿ-ರಹಿತ ಆರೈಕೆ ಧಾಮ ಡೇ ಕೇರ್ ಸೆಂಟರ್ ನಂತೆ. ವ್ಯಕ್ತಿಯು ಬೆಳಿಗ್ಗೆ ಬಂದು, ದಿನದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಯಂಕಾಲ ಮನೆಗೆ ತೆರಳಬಹುದು. ಇಲ್ಲಿ ಆಟ, ಒಗಟುಗಳು, ಸಾಮಾಜಿಕ ಕೌಶಲ್ಯವನ್ನು ಕಲಿಸಲಾಗುತ್ತದೆ. ಆರ್ಟ್ಥೆರಪಿ, ಯೋಗಾ ಮತ್ತು ಮ್ಯೂಸಿಕ್ ಥೆರಪಿ ನೀಡಲಾಗುತ್ತದೆ. ಕ್ಯಾಂಡಲ್ ತಯಾರಿಕೆ, ಹೊಲಿಗೆ, ಪ್ರಿಂಟಿಂಗ್, ಬುಟ್ಟಿ ನೇಯುವುದು, ಬೇಕಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣದಂತಹ ವೃತ್ತಿಪರ ತರಬೇತಿಯನ್ನು ನೀಡಲಾಗುತ್ತದೆ.

ಕುಟುಂಬದ ಪಾತ್ರ

ವ್ಯಕ್ತಿಯು ವಸತಿಯುಳ್ಳ ಅಥವಾ ವಸತಿ-ರಹಿತ ಆರೈಕೆಧಾಮಗಳಲ್ಲಿ ಇರುವಾಗ, ಮಾನಸಿಕ ಪುನಶ್ಚೇತನ ಕಾರ್ಯಕ್ರಮದಂತೆ ಇಲ್ಲಿಯೂ ಕುಟುಂಬದವರ ಪಾತ್ರ ಬಹುಮುಖ್ಯವಾಗಿರುತ್ತದೆ. ಕೆಲವೊಮ್ಮೆ ವಸತಿಯುಳ್ಳ ಆರೈಕೆಧಾಮಗಳಲ್ಲಿರುವಾಗ ವ್ಯಕ್ತಿಗಳಲ್ಲಿ ಸುಧಾರಣೆ ಕಂಡುಬಂದರೂ, ಮನೆಗೆ ಮರಳಿದಾಗ ಮತ್ತೆ ಅವರ ಕೌಶಲದಲ್ಲಿ ಕುಸಿತ ಕಾಣಿಸಬಹುದು. ಆದ್ದರಿಂದ ಕುಟುಂಬದವರು ತಜ್ಞರ ಜೊತೆಗೂಡಿ ಮನೆಯ ವಾತಾವರಣವೂ ಕೂಡಾ ಅವರಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳಬೇಕು.

ವಿರಾಮದ ಆರೈಕೆ ಧಾಮಗಳನ್ನು ಹೇಗೆ ಆರಿಸಿಕೊಳ್ಳಬೇಕು?

ಮೊದಲಿಗೆ ಆರೈಕೆದಾರರು ತಮ್ಮ ಪರಿಚಿತ ವರ್ಗದಲ್ಲಿ, ಅವರ ಸ್ನೇಹಿತರು ಅಥವಾ ಕುಟುಂಬದವರು ಆರೈಕೆಯ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಿದ್ದಾರೆಯೇ ಎಂದು ತಿಳಿದುಕೊಳ್ಳಬೇಕು. ಅದು ಸಾಧ್ಯವಿಲ್ಲದಿದ್ದರೆ, ಚಿಕಿತ್ಸೆ ನೀಡುತ್ತಿರುವ ಮನೋವೈದ್ಯರು ಅಥವಾ ಯಾವುದೇ ಮಾನಸಿಕ ಆರೋಗ್ಯ ತಜ್ಞರ ಬಳಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬೇಕು. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org