ಕಾಳಜಿ ವಹಿಸುವುದು

ಆರೈಕೆ ಸಲಹೆಗಳು

ಉತ್ತಮ ಆರೈಕೆ ಮಾಡಲು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ

ವೈಟ್ ಸ್ವಾನ್ ಫೌಂಡೇಶನ್

ಹಲವು ಬಾರಿ ಅನಿರೀಕ್ಷಿತ ಸಂದರ್ಭಗಳಲ್ಲಿ  ನಮ್ಮ ಪ್ರೀತಿಪಾತ್ರರಿಗೆ ನಾವು ಆರೈಕೆದಾರರಾಗುತ್ತೇವೆ. ಅಂಥ ಸಮಯ ಬಂದಾಗ ನಾವು ಹೆಚ್ಚಾಗಿ ಆರೈಕೆ ಅಥವಾ ಪಾಲನೆ ಮಾಡಲು ಪೂರ್ವಸಿದ್ಧತೆ ಹೊಂದಿರುವುದಿಲ್ಲ. ಮಾನಸಿಕ ಆರೋಗ್ಯ ಸಮಸ್ಯೆಯಿರುವ ವ್ಯಕ್ತಿಗೆ ಆರೈಕೆ ನೀಡಲು ಅಪಾರ ಪ್ರಮಾಣದ ಮಾನಸಿಕ ಮತ್ತು ದೈಹಿಕ ಬಲ ಹೊಂದಿರಬೇಕು. ಸಮಸ್ಯೆ ಗಂಭೀರವಾಗಿದ್ದರೆ ಆರೈಕೆದಾರ ವ್ಯಕ್ತಿಯ ಆರೈಕೆಯಲ್ಲಿ ಸಂಪೂರ್ಣವಾಗಿ ಭಾಗಿಯಾಗಬೇಕಾಗಬಹುದು. ನೀವು ಆರೈಕೆ ಪ್ರಕ್ರಿಯೆಯಲ್ಲಿ ಪೂರ್ತಿಯಾಗಿ ಮುಳುಗಿ ಹೋಗಿದ್ದರೂ ಕೂಡ ಸ್ವಲ್ಪ ಸಮಯ ಸುಧಾರಿಸಿಕೊಂಡು ನಿಮ್ಮ ಆರೈಕೆಯಲ್ಲಿ ಏನಾದರು ಕೊರತೆಯಿದೆಯಾ ಎಂದು ಯೋಚಿಸಬೇಕಾಗುತ್ತದೆ.

ಆರೈಕೆದಾರರಿಗೆ ಬೇಕಾಗಿರುವ ಒಂದಷ್ಟು ಮಾಹಿತಿಯನ್ನು ವೃತ್ತಿಪರರು ಇಲ್ಲಿ ನೀಡಿದ್ದಾರೆ:

ನಿಮ್ಮ ಮಿತಿ ತಿಳಿದಿರಲಿ

ದೈಹಿಕವಾಗಿ ಮತ್ತು ಮಾನಸಿಕವಾಗಿ ನಾವೆಲ್ಲರು ನಮ್ಮ ಮಿತಿ ಹೊಂದಿರುತ್ತೇವೆ ಮತ್ತು ನಾವು ಇದನ್ನು ಚೆನ್ನಾಗಿ ಅರಿತಿರಬೇಕು.  ನಮ್ಮ ಮಿತಿಗಿಂತ ಹೆಚ್ಚು ಪ್ರಯಾಸ ಪಟ್ಟರೆ ತೀವ್ರವಾಗಿ ಬಳಲಿ ಹೋಗುತ್ತೇವೆ. ನೀವು ಪಾಲಕರಾಗಿ ನಿಮ್ಮ ಮಿತಿಯನ್ನು ಅರಿತು ಈ ಒಂದು ಸತ್ಯಾಂಶವನ್ನು ಸ್ವೀಕರಿಸುವುದು ಒಳ್ಳೆಯದು.

ಆಸ್ವಾದಿಸಿ

ಇದು ಹೇಳಲು ಸುಲಭ. ಆದಾಗ್ಯೂ ಇದೊಂದು ಅತ್ಯಂತ ಪ್ರಾಮುಖ್ಯವಾದ ಅಂಶ. ನೀವು ಆಸ್ವಾದಿಸಿದರೆ ಆರೈಕೆಯ ಕೆಲಸ ಕಡಿಮೆ ಒತ್ತಡದಿಂದ ಕೂಡಿರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆರೈಕೆ ಮಾಡುವಾಗ ಹಲವಾರು ಸಮಸ್ಯೆಗಳಿರುತ್ತವೆ. ಪ್ರತಿನಿತ್ಯ ಅದೇ ಕೆಲಸ ಮಾಡುವುದರಿಂದ ವಿಶ್ರಮಿಸಲು ಸಮಯವಿರುವುದಿಲ್ಲ ಅಥವ ನಿಮಗಾಗಿ ಸ್ವಲ್ಪ ಸಮಯ ಮುಡಿಪಾಗಿಡಲು ಸಾಧ್ಯವಿರುವುದಿಲ್ಲ.

ಆದ್ದರಿಂದ ಆರೈಕೆ ಮಾಡುವ ಕೆಲಸದಲ್ಲಿ ಸಂತೋಷ ಹುಡುಕುವ ಮನೋಭಾವ ಹೊಂದಿರಬೇಕು. ಅದಕ್ಕೆ ಹಲವಾರು ಮಾರ್ಗಗಳಿವೆ. ಒಂದೇ ಕೆಲಸ ಮಾಡಲು ಹಲವು ಹೊಸ ಮಾರ್ಗಗಳನ್ನು ಹುಡುಕುವುದು, ನಿಮ್ಮ ಬಿಡುವಿನ ಸಮಯದಲ್ಲಿ ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡಿಕೊಳ್ಳುವುದು ಇಲ್ಲಿರುವ ಕೆಲ ಸಾಧ್ಯತೆಗಳು.

ತಿಳುವಳಿಕೆ ಹೊಂದಿರಿ

ಆರೈಕೆದಾರರಾಗಿ ಒಂದಷ್ಟು ಸಮಸ್ಯೆಗಳನ್ನು ಬಗೆಹರಿಸಲು ಆತ್ಮವಿಶ್ವಾಸ ಹೊಂದಿರಬೇಕು. ಅದಕ್ಕೆ ತಿಳುವಳಿಕೆ ಅತ್ಯಗತ್ಯ. ನಿಮ್ಮ ಪ್ರೀತಿ ಪಾತ್ರರ ಆರೋಗ್ಯದ ಬಗ್ಗೆ ಹೆಚ್ಚು ಮಾಹಿತಿ ಪಡೆಯಿರಿ. ನಿಮ್ಮ ಆರೈಕೆ ಕೆಲಸ ಮತ್ತು ನಿತ್ಯದ ಚಟುವಟಿಕೆಗಳನ್ನು ಹೇಗೆ ಸಮತೋಲನ ಮಾಡಬಹುದು ಎಂದು ತಜ್ಞರ ಬಳಿ ಸಲಹೆ ಕೇಳಿ. ಹೊಸ ಕೌಶಲ್ಯಗಳನ್ನು ಕಲಿಯುವ ಅವಕಾಶದತ್ತ ನೋಡಿ. ಇತ್ತೀಚಿನ ಮಾಹಿತಿ ಮತ್ತು ಜ್ಞಾನದೊಂದಿಗೆ ನಿಮ್ಮನ್ನು ನೀವು ಸಶಸ್ತ್ರಗೊಳಿಸಿಕೊಳ್ಳಿ. ನಿಮ್ಮ ಜೀವನದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಲು ಪ್ರಯತ್ನಿಸಿ.

ನೆರವಿನ ಹಸ್ತ ಚಾಚಿ

ಕೆಲವು ವೇಳೆ ಆರೈಕೆ ನೀಡುವುದು ನಿಮ್ಮ ಜವಬ್ದಾರಿ ಮಾತ್ರ ಎಂದು ತಿಳಿದು ಆ ನಿಟ್ಟಿನಲ್ಲಿ ಇತರರಿಗೆ ತೊಂದರೆ ಕೊಡಬಾರದೆಂದು ನೀವು ಭಾವಿಸಬಹುದು. ವಿಶೇಷವಾಗಿ ಮಾನಸಿಕ ಅನಾರೋಗ್ಯದ ಬಗ್ಗೆ ಸಮಾಜದಲ್ಲಿರುವ ನಿರಾಕರಣೆ, ವ್ಯಾಧಿಯ ನಿರ್ದಿಷ್ಟ ಲಕ್ಷಣ ನಿಮ್ಮನ್ನು ಏಕಾಂಗಿಯಾಗಿ ಕಣದಲ್ಲಿ ಹೋರಾಡುವಂತೆ ಮಾಡುತ್ತದೆ. ಆದಾಗ್ಯೂ ಕುಟುಂಬದವರಿಂದ ಮತ್ತು ಸ್ನೇಹಿತರಿಂದ ಸಹಾಯ ಪಡೆಯಲು ಹಿಂಜರಿಯಬೇಡಿ.

ಪರಿಶ್ರಮವನ್ನು ಹಂಚಿಕೊಳ್ಳಿ

ನೀವು ಆರೈಕೆ ಮಾಡುವಾಗ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವಂತೆ ನಿರೀಕ್ಷಿಸುವುದು ನಿಮಗೆ ಸೂಕ್ತವಲ್ಲ. ಸಾಧ್ಯವಾದಷ್ಟು ನಿಮ್ಮ ಪರಿಶ್ರಮವನ್ನು ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿ. ಇದರಿಂದ ಪ್ರಾಥಮಿಕ ಆರೈಕೆದಾರನ ಒತ್ತಡ ಕಡಿಮೆಯಾಗುತ್ತದೆ.

ಅದಕ್ಕಿಂತ ಹೆಚ್ಚಾಗಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಚೆನ್ನಾಗಿ ಆರೈಕೆ ಮಾಡಲು ಸಾಧ್ಯವಾಗುತ್ತದೆ. ಸಣ್ಣ-ಸಣ್ಣ ಕೆಲಸಗಳನ್ನು ಹಂಚಿಕೊಳ್ಳುವ ಮೂಲಕ ಕುಟುಂಬದವರಿಗೆ ವ್ಯಕ್ತಿಯ ಸೂಕ್ಷ್ಮತೆ ಮತ್ತು ಆರೈಕೆದಾರನ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ನಿಮ್ಮ ಕುರಿತು ಕಾಳಜಿವಹಿಸಿ

ಆರೈಕೆದಾರರ ಬದುಕು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಒತ್ತಡದಲ್ಲಿರುತ್ತದೆ. ಆರೈಕೆದಾರರಾಗಿ ನಾವು ನಮ್ಮ ಸ್ವಂತ ಬದುಕಿನಲ್ಲಿ ಸಾಕಷ್ಟು ರಾಜಿ ಮಾಡಿಕೊಳ್ಳಬೇಕಾಗುತ್ತದೆ ಮತ್ತು ನಮ್ಮ ಪ್ರೀತಿಪಾತ್ರರಿಗೆ ಸ್ವಾರ್ಥರಹಿತ ಸೇವೆ ನೀಡಲು ಆದ್ಯತೆ ನೀಡಬೇಕಾಗುತ್ತದೆ.

ಸಮಾಜದ ಬೆಂಬಲವಿಲ್ಲದ ಕಾರಣ ನಮ್ಮ ಶ್ರಮ ಕಷ್ಟಕರವಾಗಿರುತ್ತದೆ. ಇದಕ್ಕಿಂತ ಮಿಗಿಲಾಗಿ ನಾವು ನಮ್ಮ ಬಗ್ಗೆ ಕಾಳಜಿವಹಿಸಬೇಕು ಎಂಬುದನ್ನು ಮರೆತುಬಿಡುತ್ತೇವೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಮನಸ್ಸಿಗೆ ಹಾಗು ದೇಹಕ್ಕೆ ವಿಶ್ರಾಂತಿ ನೀಡುವ ಮಾರ್ಗಗಳನ್ನು ನೋಡುವುದು ಯಾವಾಗಲೂ ಸಹಕಾರಿ. ಇಷ್ಟಾಗಿಯೂ ಓರ್ವ ಆರೋಗ್ಯಯುತ ಆರೈಕೆದಾರ ಮಾತ್ರ ರೋಗಿಗೆ ಉತ್ತಮ ಗುಣಮಟ್ಟದ ಸೇವೆ ನೀಡಬಲ್ಲ.

ನಿಮ್ಮ ಅನುಭವ ಹಂಚಿಕೊಳ್ಳಿ

ನಾವು ಆರೈಕೆದಾರರಾಗಿ ಮಾತನಾಡಲು ಬಯಸುವ ಸಾಕಷ್ಟು ಸ್ವಾರಸ್ಯಗಳು, ದೃಷ್ಟಿಕೋನ, ಅನುಭವ ಮತ್ತು ಅಭಿಪ್ರಾಯ ಹೊಂದಿರುತ್ತೇವೆ. ನಮ್ಮ ಚಿಂತನೆ ಹಂಚಿಕೊಳ್ಳಲು ಅವಕಾಶವಿದ್ದರೆ ನಮ್ಮ ಒತ್ತಡ ಕಡಿಮೆಯಾಗುತ್ತದೆ. ಅದನ್ನು ಅಭಿವ್ಯಕ್ತಗೊಳಿಸುವುದು ಕೂಡ ಒಂದು ಬಗೆಯ ಶುಶ್ರೂಷೆ. ಇದು ನಾವು ಹಂಚಿಕೊಳ್ಳುವ ಜನರಿಗೆ, ಸಮಾಜಕ್ಕೆ ಅಥವಾ ಇತರ ವೇದಿಕೆಗೆ ಸಹಾಯವಾಗುತ್ತದೆ. ಇಂತ ಅವಕಾಶ ಹುಡುಕಿ ಇತರರೊಂದಿಗೆ ಸಂಪರ್ಕಿಸಿ. ನೀವು ಹೀಗೆ ಮಾಡುವುದರಲ್ಲಿ ನಿಮ್ಮದೆ ಚಿಂತನೆ, ಹಾದಿಯಲ್ಲಿರುವ ಹೊಸ ಸ್ನೇಹಿತರನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ.

ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org