ಆರೈಕೆ: ನನ್ನ ನಂತರ ಮುಂದೇನು?
ಮಾನಸಿಕ ಆರೋಗ್ಯ ಸಮಸ್ಯೆಯಿರುವ ಮಕ್ಕಳ ಪಾಲಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರ ಜೊತೆಗೆ ‘ನಮ್ಮ ನಂತರ ಮುಂದೇನು?’ ಎಂಬ ಪ್ರಶ್ನೆ ವಯಸ್ಸಾದ ಪಾಲಕರನ್ನು ಕಾಡುತ್ತಿರುತ್ತದೆ. ತಮ್ಮ ಜೀವನದ ಬಹುಭಾಗವನ್ನು ಮಗುವಿನ ಆರೈಕೆಯಲ್ಲೇ ಕಳೆದ ಅವರಿಗೆ ತಮ್ಮ ನಂತರ ಮಗುವಿನ ಗತಿಯೇನು ಎಂಬುದು ಬಹುವಾಗಿ ಕಾಡುತ್ತದೆ. ಅವರು ತಮ್ಮ ಮರಣದ ನಂತರವೂ ಮಕ್ಕಳಿಗೆ ಅಗತ್ಯ ಆರೈಕೆ, ಪ್ರೀತಿ ದೊರೆಯಬೇಕು ಎಂದು ಬಯಸುತ್ತಾರೆ ಮತ್ತು ಅವರ ಅವಶ್ಯಕತೆಗಳು ಈಡೇರಬೇಕು ಹಾಗೂ ಆಹಾರ, ವಸತಿ, ಬಟ್ಟೆಯಂತಹ ಪ್ರಾಥಮಿಕ ಅಗತ್ಯಗಳ ಜೊತೆಗೆ ವೈದ್ಯಕೀಯ ಅಗತ್ಯಗಳಾದ ಔಷಧಗಳು, ಆರೈಕೆ, ಮಾನಸಿಕ ತಜ್ಞರ ನಿಯಮಿತ ಭೇಟಿ ಮುಂತಾದ ಎಲ್ಲಾ ತರಹದ ಅನುಕೂಲಗಳಿರಬೇಕು ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಬಯಸುತ್ತಾರೆ.
ಹಣ ಮತ್ತು ಆಸ್ತಿಯ ಸರಿಯಾದ ಹಂಚಿಕೆಯ ಯೋಜನೆಯ ಜೊತೆಗೆ ನಿಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಲು ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪನ್ನು ನಿಯಮಿಸುವುದನ್ನು ಇದು ಒಳಗೊಂಡಿರುತ್ತದೆ. ನಿಮ್ಮ ನಂತರ ನಿಮ್ಮ ಪ್ರೀತಿಪಾತ್ರರಿಗೆ ಹಣದ ಅಡಚಣೆಯಾಗದಂತೆ ಎರಡು ರೀತಿಗಳಲ್ಲಿ ನೋಡಿಕೊಳ್ಳಬಹುದು.
- ನಿಮ್ಮ ಆಸ್ತಿಯನ್ನು ನಿಮ್ಮ ಮಗುವಿನ ಹೆಸರಿಗೆ ಮರಣ ಪತ್ರ ಬರೆಯುವ ಮೂಲಕ.
- ನಿಮ್ಮ ಜೀವನದ ನಂತರ ನಿಮ್ಮ ಮಗುವನ್ನು ನೋಡಿಕೊಳ್ಳಲು ಒಂದು ಟ್ರಸ್ಟ್ ನಿಯಮಿಸಿ, ನಿಮ್ಮ ಮಗುವನ್ನು ಫಲಾನುಭವಿಯನ್ನಾಗಿ ಮಾಡುವ ಮೂಲಕ.
ಮೃತ್ಯುಪತ್ರ ಮಾಡುವುದು
ಮೃತ್ಯುಪತ್ರವನ್ನು ಯಾರು ಮಾಡಬಹುದು?
ವಯಸ್ಕರು (18 ವರ್ಷಮೇಲ್ಪಟ್ಟವರು) ಮತ್ತು ಮಾನಸಿಕವಾಗಿ ಸ್ವಸ್ಥವಾಗಿರುವವರು ಮೃತ್ಯಪತ್ರವನ್ನು ಮಾಡಬಹುದು. ಗಂಭೀರವಾದ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಕೂಡ ಮೃತ್ಯುಪತ್ರವನ್ನು ಮಾಡಬಹುದು ಆದರೆ ಮೃತ್ಯು ಪತ್ರವನ್ನು ಮಾಡುವ ಸಂದರ್ಭದಲ್ಲಿ ಅವರು ಮಾನಸಿಕವಾಗಿ ಸ್ವಸ್ಥರಾಗಿರಬೇಕು (ಮೃತ್ಯುಪತ್ರವನ್ನು ಮಾಡುವಾಗ ಅವರು ಸ್ವಸ್ಥರಾಗಿರುವರೆಂದು ಮನೋವೈದ್ಯರು ಪ್ರಮಾಣೀಕರಿಸಬೇಕು.). ಕೂಡು ಕುಟುಂಬ ಅಥವಾ ಪತಿ ಮತ್ತು ಪತ್ನಿ ಒಟ್ಟಾಗಿ ಜಾಯಿಂಟ್ ವಿಲ್ ಕೂಡಾ ಮಾಡಬಹುದು.
ಮೃತ್ಯುಪತ್ರವನ್ನು ಮಾಡುವ ವಿಧಿವಿಧಾನಗಳೇನು?:
ಮೃತ್ಯುಪತ್ರವನ್ನು ಮಾಡಲು ಯಾವುದೇ ನಿರ್ದಿಷ್ಟವಾದ ಕ್ರಮವಿರುವುದಿಲ್ಲ. ಇದನ್ನು ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ಮರಣಪತ್ರ ರಚಿಸುವ ವ್ಯಕ್ತಿಯ ಉಪಸ್ಥಿತಿಯಲ್ಲಿ, ಒಂದು ಸಾಧಾರಣ ಕಾಗದದ ಮೇಲೆಯೂ ಬರೆಯಬಹುದು. ಸಾಕ್ಷಿಗಳು ಯಾವುದೇ ರೀತಿಯಲ್ಲಿ ಮರಣಪತ್ರದ ಫಲಾನುಭವಿಗಳಾಗಿರಬಾರದು. ಯಾವಾಗಲೂ ಮರಣಪತ್ರವನ್ನು ಬರೆಯುವಾಗ ಒಬ್ಬ ವಕೀಲರನ್ನು ಸಂಪರ್ಕಿಸುವುದು ಸೂಕ್ತವಾಗಿರುತ್ತದೆ.
ಮರಣಪತ್ರದ ನೋಂದಣಿ:
ನಿಮ್ಮ ಮರಣಪತ್ರವನ್ನು ನೋಂದಣಿ ಮಾಡಿಸುವುದು ಕಡ್ಡಾಯವಲ್ಲದಿದ್ದರೂ, ಕೋರ್ಟಿನಲ್ಲಿ ಸಲ್ಲಿಸಿದಾಗ ನೋಂದಣಿ ಮಾಡಿದ ಮರಣಪತ್ರಕ್ಕೆ ಹೆಚ್ಚು ಮೌಲ್ಯವಿರುತ್ತದೆ. ನೋಂದಣಿ ದುಬಾರಿಯಲ್ಲ. ಇದಕ್ಕೆ ಯಾವುದೇ ಸ್ಟ್ಯಾಂಪ್ ಡ್ಯೂಟಿಯನ್ನು ವಿಧಿಸುವುದಿಲ್ಲ ಮತ್ತು ನೋಂದಣಿಯಾದ ಮರಣಪತ್ರವನ್ನು ಅಟಾರ್ನಿ ಅಥವಾ ಉಪನೋಂದಣಾಧಿಕಾರಿಗಳ ಬಳಿ ಸುರಕ್ಷಿತವಾಗಿ ಇರಿಸಬಹುದು. ಮರಣಪತ್ರವನ್ನು ನೋಂದಣಿ ಮಾಡಿಸಲು ನೀವು ನೋಂದಣಾಧಿಕಾರಿಗಳ ಅಥವಾ ಉಪನೋಂದಣಾಧಿಕಾರಿಗಳ ಬಳಿ ತೆರಳಬೇಕಾಗುತ್ತದೆ. ನೋಂದಣಿಯಾದ ಬಳಿಕ ಅದನ್ನು ಕಾರ್ಯರೂಪಕ್ಕೆ ತರುವವರೆಗೆ ನೋಂದಣಾಧಿಕಾರಿಗಳು ಅಥವಾ ಉಪನೋಂದಣಾಧಿಕಾರಿಗಳ ಬಳಿಯಲ್ಲೇ ಇರಿಸಬಹುದು.
ಗಾರ್ಡಿಯನ್, ಕಾರ್ಯನಿರ್ವಾಹಕ ಮತ್ತು ಆಢಳಿತಾಧಿಕಾರಿ:
ಕಾರ್ಯನಿರ್ವಾಹಕನು ವ್ಯಕ್ತಿಯ ಮರಣದ ನಂತರ ಆತನ ಮರಣಪತ್ರವನ್ನು ಜಾರಿಗೆ ತರುತ್ತಾನೆ. ಗಾರ್ಡಿಯನ್ ಆಸ್ತಿಯ ಮೇಲ್ವಿಚಾರಣೆಯನ್ನು ಮಾಡುತ್ತಾನೆ. ಒಂದು ವೇಳೆ ಆಸ್ತಿಯ ಫಲಾನುಭವಿಯು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು, ಮರಣಪತ್ರ ಬರೆಯುವ ವ್ಯಕ್ತಿಗೆ ಆತ ಆಸ್ತಿಯನ್ನು ನೋಡಿಕೊಳ್ಳಲು ಸಮರ್ಥನಲ್ಲ ಎಂದೆನಿಸಿದರೆ, ಆತ ಫಲಾನುಭವಿಗಾಗಿ ಆಸ್ತಿಯನ್ನು ನೋಡಿಕೊಳ್ಳಲು ಗಾರ್ಡಿಯನ್ ಒಬ್ಬನನ್ನು ನೇಮಿಸಬಹುದು. ಸ್ನೇಹಿತ, ಸಂಬಂಧಿ, ಸ್ವಯಂ ಸೇವಾ ಸಂಸ್ಥೆ ಅಥವಾ ಟ್ರಸ್ಟ್ ಗಳಂತಹ ಸಂಸ್ಥೆಗಳನ್ನು ಕೂಡಾ ಫಲಾನುಭವಿಯ ಆಸ್ತಿಯ ಮೇಲ್ವಿಚಾರಣೆಗೆ ನೇಮಿಸಹುದು.
ಒಂದು ವೇಳೆ ಸೂಕ್ತಗಾರ್ಡಿಯನ್ ದೊರೆಯದಿದ್ದಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಬಹುದು. ಅವರಿಗಾಗಿ ನ್ಯಾಯಾಲಯವೇ ಸೂಕ್ತ ಗಾರ್ಡಿಯನ್ ಅಥವಾ ಆಢಳಿತಾಧಿಕಾರಿಯನ್ನು ನೇಮಿಸಬಹುದು.
ಮರಣಪತ್ರವನ್ನು ಸರಿಯಾಗಿ ಜಾರಿಗೊಳಿಸಲಾಗುತ್ತದೆಯೇ ಎಂದು ಖಾತ್ರಿಪಡಿಸಿಕೊಳ್ಳುವುದು ಹೇಗೆ?
ಮರಣಪತ್ರದಲ್ಲಿರುವ ಅಂಶಗಳನ್ನು ಸರಿಯಾಗಿ ಜಾರಿಗೊಳಿಸಲಾಗಿದೆಯೆ ಎಂದು ಖಾತ್ರಿಪಡಿಸುವುದು ಎಕ್ಸಿಕ್ಯೂಟರ್ ನ ಜವಾಬ್ದಾರಿ. ಒಂದುವೇಳೆ ಎಕ್ಸಿಕ್ಯೂಟರ್ ಸರಿಯಾಗಿ ಕರ್ತವ್ಯ ನಿಭಾಯಿಸದಿದ್ದಲ್ಲಿ, ಗಾರ್ಡಿಯನ್ ಅಥವಾ ಆಢಳಿತಾಧಿಕಾರಿ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಬಹುದು. ಒಂದುವೇಳೆ ಎಕ್ಸಿಕ್ಯೂಟರ್ ಸರಿಯಾಗಿ ಕರ್ತವ್ಯ ನಿಭಾಯಿಸದಿರುವುದು ಕಂಡುಬಂದಲ್ಲಿ, ನ್ಯಾಯಾಲಯವು ಆಢಳಿತಾಧಿಕಾರಿಯನ್ನು ನೇಮಿಸಬಹುದು.
ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು ಆಸ್ತಿ ಅನುಭವಿಸಲು ಭಾಜನರೇ?
ಹೌದು.ಮಾನಸಿಕ ಅನಾರೋಗ್ಯ ಪೀಡಿತರು ಆಸ್ತಿಯ ಹಕ್ಕನ್ನು ಹೊಂದಿರುತ್ತಾರೆ. ಒಂದುವೇಳೆ ಮರಣಪತ್ರ ರಚಿಸುವವರಿಗೆ ಫಲಾನುಭವಿಯು ಆಸ್ತಿಯನ್ನು ನಿರ್ವಹಿಸಲು ಅಸಮರ್ಥರೆನಿಸಿದರೆ, ಫಲಾನುಭವಿಯ ಸಹಾಯಕ್ಕಾಗಿ ಒಬ್ಬಗಾರ್ಡಿಯನ್ ನೇಮಿಸಬಹುದು.
ನಾನು ಮರಣಪತ್ರ ಮಾಡದಿದ್ದರೆ, ಮಾನಸಿಕ ಅನಾರೋಗ್ಯ ಪೀಡಿತ ಸಂಬಂಧಿಗೆ ಆಸ್ತಿಯು ದೊರಕುವುದೇ?
ಮರಣಪತ್ರದ ಅನುಪಸ್ಥಿತಿಯಲ್ಲಿ, ಆಸ್ತಿಯು ಈ ರೀತಿಯಲ್ಲಿ ಹಂಚಿಕೆಯಾಗುತ್ತದೆ:
- ನಿಮ್ಮ ಪತ್ನಿ/ಪತಿಯು ಜೀವಂತವಾಗಿದ್ದಲ್ಲಿ, ಆಸ್ತಿಯು ಅವರಿಗೆ ದೊರೆಯುತ್ತದೆ
- ನಿಮ್ಮ ಪತ್ನಿ/ಪತಿಯು ಜೀವಂತವಾಗಿರದಿದ್ದಲ್ಲಿ, ಆಸ್ತಿಯು ನಿಮ್ಮ ಮಕ್ಕಳಿಗೆ ವಿಕ್ರಯವಾಗುತ್ತದೆ.
- ನಿಮಗೆ ಮಕ್ಕಳಿಲ್ಲದೇ ಇದ್ದಲ್ಲಿ, ಆಸ್ತಿಯು ನಿಮ್ಮ ತಾಯಿಗೆ ವಿಕ್ರಯಗೊಳ್ಳುತ್ತದೆ.
- ಮೇಲೆ ತಿಳಿಸಿದ ಉತ್ತರಾಧಿಕಾರಿಗಳು (ಕ್ಲಾಸ್ 1) ಜೀವಂತವಿರದಿದ್ದಲ್ಲಿ, ಆಸ್ತಿಯು ನಿಮ್ಮ ಒಡಹುಟ್ಟಿದವರಿಗೆ (ಕ್ಲಾಸ್ 2) ದೊರೆಯುತ್ತದೆ.
ಮೇಲೆತಿಳಿಸಿದ ಉತ್ತರಾಧಿಕಾರಿಗಳಲ್ಲಿ (ಕ್ಲಾಸ್ 1 ಮತ್ತು 2) ಯಾರಾದರೂ ಮಾನಸಿಕ ಅನಾರೋಗ್ಯ ಪೀಡಿತರಿದ್ದಲ್ಲಿ ಆಗಲೂ ಆಸ್ತಿಯು ಇದೇ ಕ್ರಮದಲ್ಲಿ ಹಂಚಿಕೆಯಾಗುತ್ತದೆ. ಒಂದುವೇಳೆ ಮಾನಸಿಕ ಅನಾರೋಗ್ಯ ಪೀಡಿತವ್ಯಕ್ತಿಯು ಆಸ್ತಿಯನ್ನು ನೋಡಿಕೊಳ್ಳಲು ಅಸಮರ್ಥರೆಂದೆನಿಸಿದರೆ ನ್ಯಾಯಾಲಯವು ಆಢಳಿತಾಧಿಕಾರಿಯನ್ನು ನೇಮಿಸುತ್ತದೆ. ಆದ್ದರಿಂದ ನೀವು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಆರೈಕೆಮಾಡುತ್ತಿದ್ದು, ನಿಮ್ಮ ನಂತರವೂ ಅವರಿಗೆ ಸರಿಯಾದ ಆರೈಕೆ ದೊರೆಯಬೇಕು ಎಂದು ಬಯಸುತ್ತಿದ್ದಲ್ಲಿ ಸೂಕ್ತವಾದ ವಕೀಲರೊಂದಿಗೆ ಚರ್ಚಿಸಿ, ಮರಣಪತ್ರವನ್ನು ಬರೆಯಿರಿ.
ಟ್ರಸ್ಟಿನ ರಚನೆ
ಟ್ರಸ್ಟ್ ಎಂದರೇನು?
ಆಸ್ತಿಯನ್ನು ಮೂರನೆಯ ವ್ಯಕ್ತಿಯ ಪ್ರಯೋಜನಗಳಿಗಾಗಿ ಮಾಲಿಕನಿಂದ ಇನ್ನೊಬ್ಬನಿಗೆ ವರ್ಗಾಯಿಸುವ ಸಂಬಂಧ ಏರ್ಪಡಿಸುವುದನ್ನು ಟ್ರಸ್ಟ್ ಎನ್ನುತ್ತಾರೆ. ಉದಾಹರಣೆ; ಗೌರವನು ಸೌರಭನ ಮಗನಾಗಿದ್ದು, ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಸೌರಭನು ತನ್ನ ಮರಣದ ನಂತರ ಮಗನ ಕ್ಷೇಮಕ್ಕಾಗಿ ‘X’ಟ್ರಸ್ಟ್ ರಚಿಸಿದನು. ಇದರಂತೆ ಸೌರಭನು ತನ್ನ ಆಸ್ತಿಯನ್ನು ‘X’ ಎಂಬ ಟ್ರಸ್ಟಿಗೆ ವರ್ಗಾಯಿಸುತ್ತಾನೆ ಮತ್ತು ಈ ಟ್ರಸ್ಟ್ ಗೌರವನ ಪರವಾಗಿ ಆಸ್ತಿಯನ್ನು ನಿರ್ವಹಿಸುತ್ತದೆ. ಗೌರವನ ಆಶೋತ್ತರಗಳಿಗನುಗುಣವಾಗಿ ಆಸ್ತಿಯನ್ನು ನಿರ್ವಹಿಸುವ ಬಗ್ಗೆ ಸೌರಭನ ನ್ಯಾಸಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಟ್ರಸ್ಟ್ ರಚಿಸಲು ಇರುವ ನಿಯಮಗಳೇನು?
ಪ್ರತಿಯೊಂದು ಟ್ರಸ್ಟ್ ಒಬ್ಬ ಬರಹಗಾರ ಮತ್ತು ಕನಿಷ್ಟ ಇಬ್ಬರು ಟ್ರಸ್ಟೀಗಳು, ನ್ಯಾಸಪತ್ರ, ಭೊಗಸ್ಥ; ಮತ್ತು ಆಸ್ತಿಯನ್ನು ಒಳಗೊಂಡಿರುತ್ತದೆ. ಟ್ರಸ್ಟ್ ರಚಿಸಲು ಬಯಸುವ ವ್ಯಕ್ತಿಗಳು– ಆಸ್ತಿ ಅಥವಾ ಹಣವನ್ನು ಟ್ರಸ್ಟಿಗೆ ವರ್ಗಾಯಿಸುತ್ತಾರೆ ಮತ್ತು ನ್ಯಾಸಪತ್ರವನ್ನು ರಚಿಸುತ್ತಾರೆ. ಟ್ರಸ್ಟಿನ ಜವಾಬ್ದಾರಿಯನ್ನು ನಿರ್ವಹಿಸುವ ವ್ಯಕ್ತಿಗಳನ್ನು ಟ್ರಸ್ಟೀಗಳೆನ್ನುತ್ತಾರೆ ಮತ್ತು ಅವರು ಟ್ರಸ್ಟಿನ ಉದ್ದೇಶವು ನೆರವೇರುತ್ತಿದೆಯೇ ಎಂಬುದನ್ನು ಖಾತ್ರಿಪಡಿಸುತ್ತಾರೆ.
ನ್ಯಾಸಪತ್ರ ಎಂದರೇನು?
ನ್ಯಾಸಪತ್ರ ಟ್ರಸ್ಟಿಗೆ ಸಂಬಂಧಿಸಿದ ಈ ಕೆಳಗಿನ ಸಂಗತಿಗಳನ್ನು ನಿರ್ದೇಶಿಸುತ್ತದೆ:
- ಇದು ಟ್ರಸ್ಟಿನ ಉದ್ದೇಶವನ್ನು ತಿಳಿಸುತ್ತದೆ.
- ಇದು ಟ್ರಸ್ಟಿನ ಫಲಾನುಭವಿಗಳನ್ನು (ಈ ಕೇಸಿನಲ್ಲಿ ಯಾವ ಮಾನಸಿಕ ಅನಾರೋಗ್ಯ ಪೀಡಿತ ವ್ಯಕ್ತಿಯ ಸಲುವಾಗಿ ಟ್ರಸ್ಟನ್ನು ರಚಿಸಲಾಗಿದೆಯೋ, ಆ ವ್ಯಕ್ತಿ)
- ಇದು ಟ್ಟಸ್ಟೀಗಳ ವಿವರವನ್ನೊಳಗೊಂಡಿರುತ್ತದೆ – ಅವರನೇಮಕಾತಿ, ಅವಧಿ, ಯಾವ ರೀತಿಯಲ್ಲಿ ಹೊಸ ಟ್ರಸ್ಟೀಗಳನ್ನು ಸೇರಿಸಿಕೊಳ್ಳಬೇಕು, ಇತ್ಯಾದಿ.
- ಟ್ರಸ್ಟಿನ ಆಸ್ತಿಯನ್ನು ಯಾವ ರೀತಿ ನಿರ್ವಹಿಸಬೇಕು ಅಥವಾ ವಿನಿಯೋಗಿಸಬೇಕು ಎಂಬುದನ್ನು ಇದು ತಿಳಿಸುತ್ತದೆ.
ನಾನು ಟ್ರಸ್ಟಿನ ಆಸ್ತಿಯ ದುರುಪಯೋಗವನ್ನು ಹೇಗೆ ತಪ್ಪಿಸಬಹುದು?
ಹಲವಾರು ಟ್ರಸ್ಟೀಗಳ ಮೇಲ್ವಿಚಾರಣೆಯಿರುವುದರಿಂದ ಟ್ರಸ್ಟಿನ ದುರುಪಯೋಗ ಬಹಳ ಅಪರೂಪ. ಒಂದು ವೇಳೆ ಟ್ರಸ್ಟೀಗಳು ಒಂದಾಗಿ ಆಸ್ತಿಯನ್ನು ದುರುಪಯೋಗಪಡಿಸಲು ನೋಡಿದರೆ, ಯಾವುದೇ ವ್ಯಕ್ತಿ ಅವರ ವಿರುದ್ಧ, ಪೊಲೀಸ್, ಆದಾಯಕರ ಇಲಾಖೆ ಅಥವಾ ನ್ಯಾಯಾಲಯದಲ್ಲಿ ದೂರು ನೀಡಬಹುದು. ಟ್ರಸ್ಟನ್ನು ರಚಿಸುವಾಗ ನಿಮ್ಮ ವಕೀಲರ ಸಲಹೆ ಪಡೆಯಿರಿ. ಅವರು ನಿಮಗೆ ಎಲ್ಲಾ ಅಗತ್ಯ ಪ್ರಕ್ರಿಯೆಗಳ ಬಗ್ಗೆ ತಿಳಿಸುತ್ತಾರೆ.