ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡ ವ್ಯಕ್ತಿ ಕೆಲಸಕ್ಕೆ ಯಾವಾಗ ಹಿಂದಿರುಗಬಹುದು?

ಕೆಲವು ಸಲಹೆಗಳು:

ಮಾನಸಿಕ ಕಾಯಿಲೆಗೆ ಚಿಕಿತ್ಸೆಯನ್ನು ಪಡೆದ ನಂತರ  ವ್ಯಕ್ತಿಯು ತಮ್ಮ ಕೆಲಸಕ್ಕೆ ಹಿಂದಿರುಗಬಹುದೇ ಅಥವಾ ಇಲ್ಲವೇ? ಎಂದು ನಿರ್ಧರಿಸಲು ತಜ್ಞರು ಕೆಲವು ಅಂಶಗಳನ್ನು ಸೂಚಿಸುತ್ತಾರೆ.

  1. ರೋಗಲಕ್ಷಣದ ಸ್ಥಿತಿ: ವ್ಯಕ್ತಿಯಲ್ಲಿ ಕಾಯಿಲೆಯ ಲಕ್ಷಣಗಳು ಇನ್ನೂ ಕಾಣಿಸಿಕೊಳ್ಳುತ್ತಿವೆಯೇ ? ಎಂದು ಮನೋವೈದ್ಯರ ಸಹಾಯ ಪಡೆದು ಖಚಿತ ಪಡಿಸಿಕೊಳ್ಳಿ. ಈ ವಿಷಯದಲ್ಲಿ ಮಾನಸಿಕ ಕಾಯಿಲೆಯ ಸ್ವರೂಪವನ್ನು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಸಾಮಾನ್ಯ ಅಥವಾ ಮಿತವಾದ ಖಿನ್ನತೆಯಿದ್ದಲ್ಲಿ ಚಿಕಿತ್ಸೆ ಪಡೆದ ನಂತರ, ಬಹುಬೇಗ ಗುಣಮುಖ ಹೊಂದುತ್ತಾರೆ. ಆದರೆ ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ನಂತಹ ತೊಂದರೆಯಿದ್ದರೆ ಚಿಕಿತ್ಸೆ ಪಡೆದ ನಂತರವೂ ರೋಗಲಕ್ಷಣಗಳು ಉಳಿದಿರಬಹುದು.  
  2. ಅಭ್ಯಾಸದಲ್ಲಿ ಬದಲಾವಣೆಗಳು: ಅವರು ಸರಿಯಾಗಿ ಊಟ ಮಾಡುತ್ತಿದ್ದಾರಾ? ಸರಿಯಾಗಿ ನಿದ್ರಿಸುತ್ತಿದ್ದಾರಾ?  ಎಲ್ಲರೊಂದಿಗೆ ಸಹಜವಾಗಿ  ಮಾತನಾಡುತ್ತಾರಾ ? ತಮ್ಮ ಕೆಲಸಕ್ಕೆ ಹಿಂದಿರುಗಲು ಆಸಕ್ತಿ ತೋರಿಸುತ್ತಿದ್ದಾರಾ? ಎಂದು  ಸೂಕ್ಷ್ಮವಾಗಿ ಗಮನಿಸಿ.
  3. ದಿನನಿತ್ಯದ  ಕೆಲಸಗಳನ್ನು ನಿಭಾಯಿಸುವುದು: ತಮ್ಮ ದೈನಂದಿನ ಕೆಲಸವನ್ನು ನಿಭಾಯಿಸಲು ಶಕ್ತರಾಗಿದ್ದಾರಾ?  ಕೆಲವೊಮ್ಮೆ, ಚಿಕಿತ್ಸೆಯ ನಂತರ  ವ್ಯಕ್ತಿಯು ಕೆಲಸಕ್ಕೆ ಹಿಂದಿರುಗಲು ಆಸಕ್ತಿ ತೋರಿಸಿದಾಗ, ಆತನ ಆರೈಕೆದಾರರು ತಡೆಯುತ್ತಾರೆ. ಏಕೆಂದರೆ ಅವರಿಗೆ ವ್ಯಕ್ತಿಯ  ಸಾಮರ್ಥ್ಯದ ಮೇಲೆ ನಂಬಿಕೆ ಇರುವುದಿಲ್ಲ ಅಥವಾ ಒತ್ತಡ ಹೆಚ್ಚಾಗಬಹುದು ಎಂಬ ಕಾಳಜಿ  ಇರುತ್ತದೆ.

ನಿಮ್ಮ ಪ್ರೀತಿಪಾತ್ರರು ಚೇತರಿಸಿಕೊಳ್ಳಲು ನೀವು ಯಾವ ರೀತಿಯ ಸಹಾಯ ಮಾಡಬಹುದು ?

ಮೊಟ್ಟ ಮೊದಲನೆಯದಾಗಿ, ನಿಮ್ಮ ಪ್ರೀತಿಪಾತ್ರರಿಗೆ, ಅವರು ಕೆಲಸ ಮಾಡಲು ಶಕ್ತರು ಎಂಬ ಭರವಸೆ ನೀಡಿ.  ಕೆಲಸದ ಸ್ಥಳದಲ್ಲಿ ಅಗತ್ಯವಿರುವ ಸಹಾಯ ಪಡೆದುಕೊಳ್ಳಲು  ವ್ಯವಸ್ಥೆ ಮಾಡಿರಿ. ಸಾಧ್ಯವಾದರೆ ಅವರ ಬಗ್ಗೆ ಕಾಳಜಿ ತೋರಿಸುವ ಮತ್ತು ಅವರಿಗೆ ಭಾವನಾತ್ಮಕ ಬೆಂಬಲ ನೀಡುವ  ಸ್ಥಳದಲ್ಲಿ ಉದ್ಯೋಗ ಸಿಗುವಂತೆ ಸಹಾಯ ಮಾಡಿ. ಒಂದು ವೇಳೆ ಈ ಮೊದಲೇ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹಿಂದಿರುಗಲು ಬಯಸಿದರೆ, ಸಂಸ್ಥೆಯ ಮುಖ್ಯಸ್ಥರನ್ನು ( ಡೈರೆಕ್ಟರ್, ಮ್ಯಾನೇಜರ್)  ಭೇಟಿ ಮಾಡಿ  ವ್ಯಕ್ತಿಯ ಕಾಯಿಲೆಯ ಬಗ್ಗೆ, ಚಿಕಿತ್ಸೆ ಪಡೆದು ಗುಣಮುಖವಾಗಿರುವ ಬಗ್ಗೆ  ವಿವರವಾಗಿ ತಿಳಿಸಿ.

  • ಕೆಲವೊಮ್ಮೆ ಅವರಿಗೆ ಕೆಲಸ ಸಿಗದೇ ಇದ್ದಾಗ  ತಮ್ಮ ಸ್ಥೈರ್ಯ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಇಂತಹ ಸಮಯದಲ್ಲಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ. ಅವರ ಆಸಕ್ತಿ ಮತ್ತು ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಹುಡುಕಲು ಸಹಾಯ ಮಾಡಿ.  

  • ಅವರು ತಮ್ಮ ಕೆಲಸಕ್ಕೆ ಹಿಂದಿರುಗುವ ಮುನ್ನ ಕೆಲವೊಂದು ಜವಾಬ್ದಾರಿಗಳನ್ನು  ವಹಿಸಿ ಮತ್ತು ಸಾಧ್ಯವಾದಷ್ಟು ಹೆಚ್ಚು ಸಾಮಾಜಿಕ ಸಂವಹನಕ್ಕೆ ಅವಕಾಶ ಕಲ್ಪಿಸಿ. ಅವರನ್ನು ಮದುವೆ ಸಮಾರಂಭಗಳಿಗೆ, ಸಾಮಾಜಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ. ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವಾಗ, ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿ. ಶಾಪಿಂಗ್ ಮಾಡಲು, ಬಿಲ್ಲುಗಳನ್ನು ಪಾವತಿಸಲು, ಇತ್ಯಾದಿ  ಜವಾಬ್ದಾರಿ ನೀಡಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org