ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್

Q

ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ ಎಂದರೇನು?

A

28 ವರ್ಷದ ರಾಜೇಶ್ ಒಂದು ಪ್ರಸಿದ್ಧ ಕಂಪೆನಿಯಲ್ಲಿ ಕೆಲಸ ಮಾಡುತ್ತಾನೆ. ಅವಿವಾಹಿತನಾಗಿರುವ ರಾಜೇಶನಿಗೆ ಒಬ್ಬ ಹಿರಿಯ ಸಹೋದರಿಯಿದ್ದಾಳೆ. ಉದ್ಯೋಗಿಗಳಾಗಿರುವ ಅವನ ಪಾಲಕರು ತಮ್ಮ ಮಕ್ಕಳಿಂದ ಯಾವಾಗಲೂ ಹೆಚ್ಚಿನ ಸಾಧನೆಯನ್ನು ನಿರೀಕ್ಷಿಸುತ್ತಾರೆ. ರಾಜೇಶ್ ತನ್ನ ಶಾಲೆ, ಕಾಲೇಜು ಮತ್ತು ಕಛೇರಿಗಳಲ್ಲಿ ಯಾವತ್ತೂ ಮೆಚ್ಚಿಗೆಯನ್ನು ಗಳಿಸಿದ್ದಾನೆ. ಆತನ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಎಲ್ಲರೂ ಹೊಗಳುತ್ತಾರೆ. ಆತನಿಗೂ ಆ ಬಗ್ಗೆ ಹೆಮ್ಮೆಯಿದೆ. ಆತನು ಓದಿನಲ್ಲಿ ಮುಂದಿದ್ದರೂ ಕೂಡಾ ಕ್ರೀಡಾ ಚಟುವಟಿಕೆಗಳಲ್ಲಿ ಹಿಂದುಳಿದಿದ್ದರಿಂದ ಎಲ್ಲರೂ ಆತನನ್ನು ಶಿಕ್ಷಕರ ಮೆಚ್ಚಿನವನೆಂದು ಮತ್ತು ಕೇವಲ ಪುಸ್ತಕ ಪಾಂಡಿತ್ಯದವನೆಂದು ಛೇಡಿಸುತ್ತಿದ್ದರು.

ತನ್ನ ಎತ್ತರದ, ತೆಳುವಾದ ಶರೀರದ ಬಗ್ಗೆ ಆತನು ಕೆಲವೊಮ್ಮೆ ಚಿಂತಿತನಾಗುತ್ತಿದ್ದನು. ಈಗೀಗ ಆತನಿಗೆ ತನ್ನ ಹಣೆ ಮತ್ತು ಕಿವಿಯ ಭಾಗದ ಆಕಾರ ಸರಿಯಿಲ್ಲವೆಂದೆನಿಸಿ ಆತ ಕನ್ನಡಿ ನೋಡುವುದರಲ್ಲಿಯೇ ಬಹಳ ಸಮಯ ಕಳೆಯುತ್ತಿದ್ದಾನೆ. ಕಛೇರಿಯಲ್ಲಿ ಕೂಡಾ ಆತ ಆಗಾಗ ವಿಶ್ರಾಂತಿ ಕೊಠಡಿಗೆ ತೆರಳಿ ತನ್ನ ಕೂದಲು ಹಣೆ ಮತ್ತು ಕಿವಿಯನ್ನು ಸರಿಯಾಗಿ ಮುಚ್ಚುತ್ತಿದೆಯೇ ಎಂದು ಪರೀಕ್ಷಿಸುತ್ತಿರುತ್ತಾನೆ. ಆತನು ಈ ಬಗ್ಗೆ ಹಲವು ಬಾರಿ ವೈದ್ಯರನ್ನು ಭೇಟಿಯಾಗಿದ್ದಾನೆ. ಯಾರೂ ತನ್ನ ವಿಚಾರವನ್ನು ಒಪ್ಪುತ್ತಿಲ್ಲ ಎಂದು ಆತ ಬಹಳ ಬೇಸರಗೊಂಡಿದ್ದಾನೆ. ಈ ಗೀಳು ಆತನ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ, ಆತ ಒತ್ತಾಯದಿಂದ ತನ್ನ ಕುಟುಂಬದವರನ್ನು ಒಬ್ಬ ಶಸ್ತ್ರಚಿಕಿತ್ಸಕರ ಬಳಿ ಕರೆದುಕೊಂಡು ಹೋಗಿದ್ದಾನೆ ಮತ್ತು ಅವರು ಮಾನಸಿಕ ತಜ್ಞರನ್ನು ಕಾಣಲು ಸಲಹೆ ಮಾಡಿದ್ದಾರೆ.

ಈ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗಲೆಂದು ಈ ಕಾಲ್ಪನಿಕ ದೃಷ್ಟಾಂತವನ್ನು ನೈಜ ಜೀವನದಲ್ಲಿ ಘಟಿಸುವ ರೀತಿಯಲ್ಲೇ ನೀಡಲಾಗಿದೆ.

ನಮ್ಮಲ್ಲಿ ಹೆಚ್ಚಿನವರಿಗೆ ನಮ್ಮ ದೇಹದ ಕುರಿತು ತೃಪ್ತಿ ಇರುವುದಿಲ್ಲ. ತಮ್ಮ ದೇಹ ಅಥವಾ ದೈಹಿಕ ಆಕೃತಿಯ ಬಗ್ಗೆ ಸಂತೃಪ್ತಿ ಇರುವವರು ಬಹಳ ಕಡಿಮೆ. ಕೆಲವರು ಎತ್ತರವಾಗಲು ಬಯಸಿದರೆ, ಕೆಲವರು ಗಿಡ್ಡವಾಗಲು ಬಯಸುತ್ತಾರೆ. ಇನ್ನು ಕೆಲವರಿಗೆ ಪುಷ್ಟವಾದ ಮೈಕಟ್ಟು ಮತ್ತು ದಪ್ಪ ಕೂದಲಿನ ಬಯಕೆಯಿರುತ್ತದೆ. ಆದರೆ ಕೆಲವರಲ್ಲಿ ಈ ಬಯಕೆಗಳು ಅತ್ಯಂತ ತೀವ್ರವಾಗಿ ಅದೊಂದು ಗೀಳಾಗಿ ಬದಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಶಾಲೆ, ಕಾಲೇಜು ಅಥವಾ ಕಛೇರಿಗೆ ಹೋಗುವುದನ್ನೇ ನಿಲ್ಲಿಸಬಹುದು.

ಬಾಡಿ ದಿಸ್ಮಾರ್ಫಿಕ್ ಡಿಸಾರ್ಡರ್ ಒಂದು ಕ್ಲಿನಿಕಲ್ ಪರಿಸ್ಥಿತಿಯಾಗಿದ್ದು, ಇದರಿಂದಾಗಿ ವ್ಯಕ್ತಿಯು ತನ್ನ ದೇಹದ ಆಕೃತಿ ಅಥವಾ ಮೂಗು, ಬಣ್ಣ, ಕಿವಿ, ತುಟಿಗಳಂತಹ ನಿರ್ದಿಷ್ಟ ಅಂಗಾಂಗಗಳ ಆಕಾರಗಳ ಬಗ್ಗೆ ಅತಿಯಾಗಿ ಮತ್ತೆ ಮತ್ತೆ ಚಿಂತೆ ಮಾಡುತ್ತಾರೆ.

ಅವರು ಕನ್ನಡಿಯಲ್ಲಿ ಮತ್ತೆ ಮತ್ತೆ ತಮ್ಮ ಅಪೂರ್ಣತೆಯನ್ನು ಪರೀಕ್ಷಿಸಿಕೊಳ್ಳಬಹುದು ಅಥವಾ ಕುಟುಂಬದವರು ಹಾಗೂ ಸ್ನೇಹಿತರನ್ನು ಈ ಬಗ್ಗೆ ಪದೇ ಪದೇ ಪ್ರಶ್ನಿಸಬಹುದು. ಅವರು ತಮ್ಮ ಅಪೂರ್ಣತೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆಂದರೆ, ಕೆಲವೊಮ್ಮೆ ಸಾಮಾಜಿಕವಾಗಿ ಬೆರೆಯುವುದರಿಂದಲೇ ದೂರವುಳಿಯಬಹುದು.

ಇನ್ನು ಕೆಲವು ವ್ಯಕ್ತಿಗಳು ಅತಿಯಾದ ಒತ್ತಡದಿಂದಾಗಿ ಶಸ್ತ್ರಚಿಕಿತ್ಸೆಯ ಮೊರೆ ಹೋಗಬಹುದು. ಆದರೆ ಶಸ್ತ್ರ ಚಿಕಿತ್ಸೆಯ ನಂತರವೂ ಅವರ ಭಾವನೆಗಳು ಬದಲಾಗುವುದಿಲ್ಲ. ಕೆಲವರಲ್ಲಿ ನಿಜವಾಗಿಯೂ ಅಂಗಗಳಲ್ಲಿ ವಿರೂಪತೆಯಿರಬಹುದು, ಆದರೆ ಕೆಲವರು ಯಾವುದೇ ವಿರೂಪವಿಲ್ಲದೆಯೂ ತಮ್ಮ ದೇಹದ ಯಾವುದಾದರೂ ನಿರ್ದಿಷ್ಟ ಅಂಗದ ಬಗ್ಗೆ ಅಸಂತೃಪ್ತರಾಗಿರುತ್ತಾರೆ.

Q

ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ ನ ಲಕ್ಷಣಗಳೇನು?

A

  • ದೇಹ ವಿರೂಪಗೊಂಡಿರುವ ಬಗ್ಗೆ ಅತಿಯಾಗಿ ಮತ್ತೆ ಮತ್ತೆ ಆಲೋಚಿಸುವುದು.
  • ವಿರೂಪದ ಬಗ್ಗೆಯೆ ಯಾವಾಗಲೂ ಯೋಚಿಸುವುದು
  • ಕನ್ನಡಿಯಲ್ಲಿ ಆಗಾಗ ಪರೀಕ್ಷಿಸಿಕೊಳ್ಳುವುದು.
  • ಪ್ರೀತಿಪಾತ್ರರು ಮತ್ತೆ ಮತ್ತೆ ವಿರೂಪದ ಬಗ್ಗೆ ಭರವಸೆ ನೀಡಬೇಕಾಗುತ್ತದೆ. ಉದಾಹರಣೆಗೆ, ಅವರು ಚೆನ್ನಾಗಿಯೇ ಇದ್ದಾರೆ.
  • ತಮ್ಮ ಬಗ್ಗೆಯೆ ಖಿನ್ನರಾಗುವುದು.
  • ಮತ್ತೆ ಮತ್ತೆ ಸಿಂಗಾರ ಮಾಡಿಕೊಳ್ಳುವುದು.
  • ಹೆಚ್ಚಾಗಿ ಕೋಪ ಗೊಳ್ಳುವುದು, ಹತಾಶಗೊಳ್ಳುವುದು.
  • ದೇಹದ ಬಗ್ಗೆ ಋಣಾತ್ಮಕ ಯೋಚನೆಗಳು.
  • ಶಾಲೆ, ಕಾಲೇಜು ಮತ್ತು ಕಛೇರಿಯ ಕೆಲಸಗಳಲ್ಲಿ ಗಮನ ಕೇಂದ್ರಿಕರಿಸಲು ವಿಫಲರಾಗುವುದು.
  • ತಮ್ಮ ವಿರೂಪದ ಕುರಿತ ಯೋಚನೆಯಿಂದಾಗಿ ಸಾರ್ವಜನಿಕ ಸ್ಥಳಗಳಿಗೆ ಹೋಗಲು ನಾಚಿಕೆ ಅಥವಾ ಭಯ.
  • ಕೆಲವು ಗಂಭೀರ ಸನ್ನಿವೇಶಗಳಲ್ಲಿ, ತನ್ನ ರೂಪದ ಕುರಿತ ಅತೃಪ್ತಿಯಿಂದ ವ್ಯಕ್ತಿಗೆ ಆತ್ಮಹತ್ಯೆಯ ಯೋಚನೆ ಕೂಡಾ ಸುಳಿಯಬಹುದು.

Q

ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ಗೆ ಕಾರಣವೇನು

A

ಹಲವು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಂತೆಯೆ, ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ಗೂ ಸಹ ಒಂದೇ ನಿರ್ದಿಷ್ಟ ಕಾರಣವನ್ನು ಗುರುತಿಸುವುದು ಸಾಧ್ಯವಿಲ್ಲ. ಆದರೆ ಕೆಲವು ಅಂಶಗಳು ವ್ಯಕ್ತಿಗೆ ಈ ಸಮಸ್ಯೆಯುಂಟಾಗಲು ಕಾರಣವಾಗಬಲ್ಲವು.

  • ಜನರು ಛೇಡಿಸುವುದು: ದೈಹಿಕ ಆಕೃತಿಯ ಕಾರಣಕ್ಕೆ ಕುಟುಂಬದವರು ಅಥವಾ ಸ್ನೇಹಿತರು ಛೇಡಿಸುವುದು ಅಥವಾ ಅಡ್ಡ ಹೆಸರಿನಿಂದ ಕರೆಯುವುದು ನಮ್ಮ ಸಮಾಜದಲ್ಲಿ ಸಾಮಾನ್ಯ. ಕೆಲವರನ್ನು ‘ಲಂಬು’ (ಹಿಂದಿಯಲ್ಲಿ ಎತ್ತರ ಎಂದರ್ಥ) ಅಥವಾ ಡುಮ್ಮಾ ಎಂದು ಕರೆಯುವುದು ದುರದೃಷ್ಟವಶಾತ್ ತಮಾಶೆಯೆಂದು ಭಾವಿಸಲಾಗುತ್ತದೆ. ಆದರೆ ಒಬ್ಬರ ಆಕೃತಿಯ ಬಗ್ಗೆ ಕುಟುಂಬದವರ ಮತ್ತು ಸ್ನೇಹಿತರ ಛೇಡಿಸುವಿಕೆಯಿಂದ ಅವರಿಗೆ ತಮ್ಮ ದೇಹದ ಬಗ್ಗೆ ಋಣಾತ್ಮಕ ಭಾವನೆಗಳು ಉಂಟಾಗಬಹುದು.

  • ದೇಹದ ಬಗ್ಗೆ ಋಣಾತ್ಮಕ ಯೋಚನೆ ಮತ್ತು ಅಲ್ಪ ಆತ್ಮ ಗೌರವ: ಇದರಿಂದ ಅವರು ಅತಿಯಾಗಿ ಸಿಂಗಾರ ಮಾಡಿಕೊಳ್ಳಬಹುದು, ಜಿಮ್ನಲ್ಲಿ ಅತಿಯಾಗಿ ವ್ಯಾಯಾಮ ಮಾಡಬಹುದು, ಅತಿಯಾದ ಅಥವಾ ಅತೀ ಕಡಿಮೆ ಆಹಾರ ಸೇವನೆಯಲ್ಲಿ ತೊಡಗಬಹುದು.

  • ಅತಿಯಾದ ಪರಿಪೂರ್ಣತೆಯನ್ನು ಬಯಸುವ ವ್ಯಕ್ತಿತ್ವವೂ ಕೂಡಾ ಹಲವು ಆತಂಕದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ ಕೆಲವೊಮ್ಮೆ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರಿನಂತಹ ಸಂಕೀರ್ಣ ಮಾನಸಿಕ ಸಮಸ್ಯೆಯ ಭಾಗವೂ ಆಗಿರಬಹುದೆಂದು ಸಂಶೋಧನೆಗಳು ತಿಳಿಸುತ್ತವೆ. ಆದ್ದರಿಂದ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರಿಗೆ ಕಾರಣವಾಗಬಹುದಾದ ವಂಶವಾಹಿ ಅಥವಾ ಇತರ ಜೈವಿಕ ಕಾರಣಗಳು ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರಿಗೂ ಕಾರಣವಾಗುವ ಸಂಭವವಿರುತ್ತದೆ.

ಸಮಾಜದ  ಸಂಸ್ಕೃತಿ ಮತ್ತು ಮಾಧ್ಯಮಗಳೂ ಕೂಡಾ ದೇಹದ ಆಕೃತಿ ಮತ್ತು ಆ ಕುರಿತ ಗ್ರಹಿಕೆಗೆ ಅನಾವಶ್ಯಕವಾಗಿ ಅತಿಯಾದ ಪ್ರಾಮುಖ್ಯತೆಯನ್ನು ನೀಡುತ್ತದೆ. ಇದರಿಂದ ಬಹುತೇಕ ತರುಣ ತರುಣಿಯರ ಮೇಲೆ ತಪ್ಪಾದ ಪ್ರಭಾವ ಬೀರುತ್ತದೆ.

Q

ಬಾಡೀ ಡಿಸ್ಮಾರ್ಫಿಕ್ ಡಿಸಾರ್ಡರ್ಗೆ ಚಿಕಿತ್ಸೆ

A

ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ಗೆ ಹಲವು ರೀತಿಯ ಚಿಕಿತ್ಸೆ ಲಭ್ಯವಿದೆ. ವ್ಯಕ್ತಿಯಲ್ಲಿ ಖಿನ್ನತೆಯ ಲಕ್ಷಣಗಳು ಅಥವಾ ಆತ್ಮಹತ್ಯೆಯ ಯೋಚನೆ ಕಂಡುಬರುತ್ತಿದ್ದರೆ ವೈದ್ಯರ ಬಳಿ ಸೂಕ್ತ ಸಲಹೆ ಪಡೆಯುವುದು ಅವಶ್ಯ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಕೂಡಾ ಇನ್ನೊಂದು ಪರಿಣಾಮಕಾರಿ ಚಿಕಿತ್ಸೆ. ಇದು ವ್ಯಕ್ತಿಗೆ ತನ್ನ ಹಾಗೂ ದೇಹದ ಆಕೃತಿಯ ಕುರಿತು ಇರುವ ಅನಗತ್ಯ ಯೋಚನೆಗಳನ್ನು ಬದಲಾಯಿಸುವ ವಿಧಾನಗಳನ್ನು ಒಳಗೊಂಡಿರುತ್ತದೆ. ಈ ಎರಡೂ ಚಿಕಿತ್ಸಾ ವಿಧಾನಗಳು ವ್ಯಕ್ತಿಯ ತ್ತು ಸಮಗ್ರ ಜೀವನವನ್ನು ಬದಲಾಯಿಸಲು ನೆರವಾಗುತ್ತವೆ.

ಕೆಲವೊಮ್ಮೆ ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರಿನ ಚಿಕಿತ್ಸೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಸಂಪೂರ್ಣ ಸಹಕರಿಸಿ ಮತ್ತು ಥೆರಪಿಯನ್ನು ನಿಲ್ಲಿಸದೆ ಮುಂದುವರಿಸಿ. 

Q

ಆರೈಕೆದಾರರಿಗೆ ಸಲಹೆ

A

ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ಬಗ್ಗೆ ಅತಿಯಾದ ನಿರೀಕ್ಷೆಯನ್ನು ಹೊಂದಿರುತ್ತಾರೆ ಅಥವಾ ತಮ್ಮನ್ನು ತಾವು ಪರಿಪೂರ್ಣರಾಗಿಸಲು ಪ್ರಯತ್ನಿಸುತ್ತಾರೆ. ಇದರಿಂದ ತಮ್ಮ ತಪ್ಪುಗಳ ಬಗ್ಗೆ ಇತರರಿಂದ ಮತ್ತೆ ಮತ್ತೆ ಅಭಿಪ್ರಾಯಗಳನ್ನು ಪಡೆಯಬಹುದು. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿಯಾಗುವಂತೆ ಮಾಡುವಲ್ಲಿ ಕುಟುಂಬದ ಪಾತ್ರ ಪ್ರಮುಖವಾಗಿರುತ್ತದೆ. ವ್ಯಕ್ತಿಯು ಚಿಕಿತ್ಸೆ ಪಡೆಯುತ್ತಿರುವಾಗ ಕುಟುಂಬದವರು ಅವರನ್ನು ಅರ್ಥಮಾಡಿಕೊಂಡು ಅಗತ್ಯ ಬೆಂಬಲ ನೀಡಬೇಕು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org