ಸನ್ನಿ (ಡೆಲಿರಿಯಂ)

Q

ಸನ್ನಿ (ಡೆಲಿರಿಯಂ) ಎಂದರೇನು?

A

ಸನ್ನಿ (ಭಾವೋದ್ರೇಕತೆ) ತಾತ್ಕಾಲಿಕ, ಆದರೆ ಗಂಭೀರವಾದ ಜೀವ ಬೆದರಿಕೆ ಸ್ಥಿತಿ. ಮಾನಸಿಕ ಸ್ಥಿರತೆ ಮತ್ತು ಜಾಗರೂಕತೆಯಲ್ಲಿ ಗಂಭೀರವಾದ ಏರಿಳಿತವನ್ನುಂಟು ಮಾಡಿ. ತನ್ನ ಸುತ್ತಲಿನ ಪರಿಸರದ ಬಗ್ಗೆ ಗೊಂದಲ ಉಂಟುಮಾಡುತ್ತದೆ. ಸನ್ನಿ ಉಂಟಾದ ವ್ಯಕ್ತಿಯ ಯೋಚನೆ ಮತ್ತು ವರ್ತನೆಯಲ್ಲಿ ಬಹಳ ಬೇಗ (ಕೆಲ ದಿನ/ಗಂಟೆಗಳಲ್ಲಿ) ಬದಲಾವಣೆ ಕಾಣಿಸುತ್ತದೆ. 

Q

ಡಿಮೆನ್ಶಿಯ ಮತ್ತು ಡೆಲಿರಿಯಂ ನಡುವೆ ವ್ಯತ್ಯಾಸ.

A

ಮರೆಗುಳಿತನ ಮತ್ತು ಭಾವೋದ್ರೇಕತೆ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿದ್ದು, ಎರಡೂ ಸ್ಥಿತಿಗಳು ಒಟ್ಟಾಗಿ ಕಾಣಿಸಿಕೊಳ್ಳಬಹುದು. ಹೀಗಾಗಿ ಇದರ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು ಅವಶ್ಯಕ.

ಭಾವೋದ್ರೇಕತೆ ತಾತ್ಕಾಲಿಕ ಸ್ಥಿತಿಯಾಗಿದ್ದು ಇದ್ದಕ್ಕಿದ್ದಂತೆ ಬಂದು, ಭ್ರಮೆಯನ್ನು ಹುಟ್ಟು ಹಾಕುತ್ತದೆ. ಲಕ್ಷಣಗಳು ಕೆಲ ಗಂಟೆ ಅಥವಾ ವಾರಗಳ ಕಾಲ ಇದ್ದು, ಕಡಿಮೆ ಅಥವಾ ಹೆಚ್ಚಾಗಬಹುದು.

ಡಿಮೆನ್ಷಿಯ ನರಕೋಶಕ್ಕೆ ಸಂಬಂಧಿಸಿದ ಖಾಯಿಲೆ. ನಿಧಾನವಾಗಿ ಹೆಚ್ಚಾಗುತ್ತಾ, ಸಮಯ ಕಳೆದಂತೆ ಮಿದುಳಿನ ಕೋಶಗಳು ಕ್ಷೀಣಿಸಿ, ಸಾವು ಸಂಭವಿಸುತ್ತದೆ. ಡಿಮೆನ್ಶಿಯ ಭ್ರಮೆ ಉಂಟು ಮಾಡುವುದಿಲ್ಲ. 

Q

ಸನ್ನಿಯ ಲಕ್ಷಣಗಳೇನು?

A

ಸನ್ನಿಯ ಲಕ್ಷಣಗಳು ಕೆಲ ಗಂಟೆಗಳು ಅಥವಾ ದಿನಗಳ ಕಾಲ ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ಮಾನಸಿಕ ಸ್ಥಿರತೆಯಲ್ಲಿ ಏರಿಳಿತವಿರುತ್ತದೆ. ವ್ಯಕ್ತಿಯು ಒಮ್ಮೆ ಖಾಯಿಲೆಯ ಲಕ್ಷಣಗಳನ್ನು ತೋರಿದರೆ, ಒಮ್ಮೆ ಸಹಜವಾಗಿ ವರ್ತಿಸಬಹುದು.

ಪ್ರಾಥಮಿಕ ಲಕ್ಷಣಗಳು:

ವಾತಾವರಣದ ಅರಿವು ಕಡಿಮೆಯಾಗುವುದು

·         ಸುಲಭವಾಗಿ ಸಣ್ಣ ಕಾರಣಗಳಿಗೂ ವಿಚಲಿತರಾಗುವುದು

·         ಒಂದು ವಿಷಯದ ಮೇಲೆ ಗಮನ ಹರಿಸಲು ಕಷ್ಟವಾಗುವುದು.

·         ಸುತ್ತಲಿನ ವಾತಾವರಣಕ್ಕೆ ಪ್ರತಿಕ್ರಿಯೆ ನೀಡದಿರುವುದು ಅಥವಾ ಆಸಕ್ತಿ ಕಳೆದುಕೊಳ್ಳುವುದು

·         ಪ್ರಶ್ನೆಗಳಿಗೆ ಅಥವಾ ಮಾತಿಗೆ ಪ್ರತಿಕ್ರಯಿಸಲು ಕಷ್ಟಪಡುವುದು

ಅರಿವಿನ ಕೊರತೆ:

·         ಇತ್ತೀಚಿನ ಘಟನೆಗಳ ಬಗ್ಗೆ ಮರೆವು.

·         ತಾನು ಯಾರು, ಎಲ್ಲಿದ್ದೇನೆ ಎಂಬ ಗೊಂದಲ.

·         ಸಮಯ ಅಥವಾ ದಿನದ ಕುರಿತು ಅರಿವು ಕಳೆದುಕೊಳ್ಳುವುದು

·         ಮಾತನಾಡಲು ಅಥವಾ ಪದಗಳನ್ನು ನೆನಪಿಸಿಕೊಳ್ಳಲು ಕಷ್ಟಪಡುವುದು

·         ಅಸಂಬದ್ಧ ಮಾತು

·         ಓದುವುದಕ್ಕೆ ಮತ್ತು ಬರೆಯುವುದಕ್ಕೆ ಕಷ್ಟಪಡುವುದು

ವರ್ತನೆ ಬದಲಾವಣೆ:

·         ಇಲ್ಲದ ವಸ್ತುಗಳನ್ನು ನೋಡುವುದು(ಭ್ರಮೆ)

·         ಅಶಾಂತಿ, ತಳಮಳ, ಕಿರಿಕಿರಿ ಮತ್ತು ಜಗಳದ ಮನೋಭಾವ

·         ನಿರಂತರವಾಗಿ ತೂಕಡಿಕೆ ಅಥವಾ ನಿದ್ರಾಹೀನತೆಯ ಭಾವ

·         ಮೂಡ್ ಬದಲಾವಣೆ ಅಥವಾ ವಿನಾಕಾರಣ ಭಯ, ಆತಂಕ, ಸಿಟ್ಟು ಮೊದಲಾದ ಅತಿಯಾದ ಭಾವೋದ್ರೇಕತೆ.

·         ಹೃದಯ ಬಡಿತ, ನಡುಕ, ತಳಮಳ ಅಥವಾ ನಿದ್ರಾ ಪ್ರಕ್ರಿಯೆ ಬದಲಾವಣೆಯಂತಹ ದೈಹಿಕ ಲಕ್ಷಣಗಳನ್ನು ಕಾಣಬಹುದು.

Q

ಸನ್ನಿಗೆ ಕಾರಣಗಳೇನು?

A

  • ದೀರ್ಘಕಾಲದ ವೈದ್ಯಕೀಯ ಖಾಯಿಲೆ, ಅಧಿಕ ಡೋಸೇಜ್ ಇರುವ ಔಷಧ, ಸೋಂಕು(ಮೂತ್ರ, ಚರ್ಮ ಮತ್ತು ಕಿಬ್ಬೊಟ್ಟೆ ಸೋಂಕು), ನ್ಯೂಮೇನಿಯಾ, ಡ್ರಗ್‌ ಅಥವಾ ಮದ್ಯ ವ್ಯಸನ ಸಾಮಾನ್ಯ ಕಾರಣಗಳು.

    ಸನ್ನಿಯ ಅಪಾಯವನ್ನು ಹೆಚ್ಚಿಸುವ ಇತರೆ ಸ್ಥಿತಿಗಳು:

    ·         ಜ್ವರ ಮತ್ತು ಸೋಂಕು, ವಿಶೇಷವಾಗಿ ಮಕ್ಕಳಲ್ಲಿ

    ·         ಒಂದು ಖಾಯಿಲೆಗೆ ಬಹು ವಿಧದ ಔಷಧಿ ಸೇವನೆ

    ·         ಬಹುವಿಧವಾದ ವೈದ್ಯಕೀಯ ಸಮಸ್ಯೆ ಅಥವಾ ಶಸ್ತ್ರಚಿಕಿತ್ಸೆಗಳು

    ·         ಮದ್ಯ, ಡ್ರಗ್‌ ವ್ಯಸನ ಮತ್ತು ವಿತ್ಡ್ರಾಯಲ್

    ಆತಂಕ, ಖಿನ್ನತೆ, ಪಾರ್ಕಿನ್ಸನ್ಸ್ ಖಾಯಿಲೆ, ಅಸ್ತಮಾ ಅಥವಾ ನಿದ್ರಾ ಔಷಧಿಗಳು ಭಾವೋದ್ರೇಕತೆಗೆ ಕಾರಣವಾಗಬಹುದು.

Q

ಭಾವೋದ್ರೆಕತೆಯಿಂದ ಉಂಟಾಗುವ ಕ್ಲಿಷ್ಟ ಸಮಸ್ಯೆಗಳು

A

ಭಾವೋದ್ರೇಕತೆ ಕೆಲ ಗಂಟೆ, ವಾರ ಅಥವಾ ತಿಂಗಳುಗಳ ಕಾಲ ಇರಬಹುದು. ದೀರ್ಘಕಾಲದ ಅಥವಾ ಕೆಲ ಅವಧಿಯ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ, ಸನ್ನಿಗೆ ಒಳಗಾಗುವ ಮೊದಲೇ ಯೋಚನೆ ಮತ್ತು ತರ್ಕದ ಶಕ್ತಿ ಕಳೆದುಕೊಂಡಿರಬಹುದು. ಸನ್ನಿಗೆ ಚಿಕಿತ್ಸೆ ನೀಡದಿದ್ದರೆ ಅಥವಾ ಸನ್ನಿ ಉಂಟು ಮಾಡುವ ಕಾರಣಗಳಿಗೆ ಸ್ಪಂದಿಸದಿದ್ದರೆ ವ್ಯಕ್ತಿಗೆ ಈ ಕೆಳಗಿನ ಅನುಭವಗಳಾಗಬಹುದು:

·         ಆರೋಗ್ಯ ಕೆಡುವಿಕೆ

·         ಶಸ್ತ್ರಚಿಕಿತ್ಸೆಯಿಂದ ನಿಧಾನ ಚೇತರಿಕೆ 

·         ಸಾವಿನ ಸಾಧ್ಯತೆ ಏರಿಕೆ

Q

ಸನ್ನಿಗೆ ಚಿಕಿತ್ಸೆ

A

ವ್ಯಕ್ತಿಯ ವೈದ್ಯಕೀಯ ಹಿನ್ನಲೆ, ಮಾನಸಿಕ ಸ್ಥಿತಿ, ದೈಹಿಕ, ನರವೈಜ್ಞಾನಿಕ ಮುಂತಾದ ತಪಾಸಣೆಗಳ ಮೂಲಕ ಸನ್ನಿಯನ್ನು ಪತ್ತೆ ಮಾಡಬಹುದು.

ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಸನ್ನಿಯ ಯಾವುದೇ ಲಕ್ಷಣಗಳನ್ನು ತೋರಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ವ್ಯಕ್ತಿ ಡಿಮೆನ್ಶಿಯ ಹೊಂದಿದ್ದರೆ, ಆವರ ಒಟ್ಟಾರೆ ಅರಿವು ಮತ್ತು ಚಿಂತನೆಯಲ್ಲಿ ಆಗುವ ತಕ್ಷಣದ ಬದಲಾವಣೆ ಗಮನಿಸಿ. ಇದು ಸನ್ನಿ ಉಂಟುಮಾಡಬಹುದು. ವ್ಯಕ್ತಿಯ ನಡವಳಿಕೆ, ಚಿಂತನೆ, ನಿತ್ಯದ ಹವ್ಯಾಸ ಮತ್ತು ಚಟುವಟಿಕೆ ಗಮನಿಸುವುದು ತಪಾಸಣೆಗೆ ಉಪಯೋಗವಾಗುತ್ತದೆ.

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಅಥವಾ ಬಹಳ ಸಮಯದಿಂದ ಆರೈಕೆಯಲ್ಲಿರುವ ವಯಸ್ಸಾದ ವ್ಯಕ್ತಿಗಳಲ್ಲಿ ಸನ್ನಿಯ ಅಪಾಯವಿರುತ್ತದೆ. ಖಾಯಿಲೆಯ ಲಕ್ಷಣಗಳು ಏರಿಳಿತಗೊಳ್ಳಬಹುದು ಅಥವಾ ಸುಮ್ಮನಿರುವುದು, ಎಲ್ಲರಿಂದ ದೂರವಿರುವುದು ಮುಂತಾದ ಲಕ್ಷಣಗಳನ್ನು ನಾವು ಗಮನಿಸದೆ ಇರಬಹುದು. ಆಸ್ಪತ್ರೆಯಲ್ಲಿ ಅಥವಾ ನರ್ಸಿಂಗ್‌ ಹೋಂನಲ್ಲಿ ಇರುವವರಲ್ಲಿ ನೀವು ಸನ್ನಿಯ ಲಕ್ಷಣ ಕಂಡರೆ ತಕ್ಷಣ ಸಂಬಂಧಿತ ವೈದ್ಯರಿಗೆ ವರದಿ ನೀಡಿ.

ಸನ್ನಿಯಲ್ಲಿ ಸಮಸ್ಯೆಯ ಬೇರಿಗೆ ಚಿಕಿತ್ಸೆ ನೀಡುವ ಅವಶ್ಯಕತೆಯಿದೆ. ಉದಾಹರಣೆಗೆ ಸೋಂಕಿನಂತಹ ದೈಹಿಕ ಅನಾರೋಗ್ಯವನ್ನು ಆಂಟಿಬಯೋಟಿಕ್ಸ್‌ನಿಂದ ಗುಣಪಡಿಸಿದರೆ ವ್ಯಕ್ತಿ ಸನ್ನಿಯಿಂದ ಚೇತರಿಸಿಕೊಳ್ಳುವ ಸಾಧ್ಯತೆಯಿದೆ.

ಸಹಕಾರ ಮತ್ತು ಬೆಂಬಲ

ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಸನ್ನಿಯಿಂದ ಚೇತರಿಸಿಕೊಳ್ಳುತ್ತಿದ್ದರೆ, ಅವರಿಗೆ ನೀವು ಭಾವನಾತ್ಮಕ ಬೆಂಬಲ ನೀಡುವ ಮೂಲಕ ಸಹಾಯ ಮಾಡಬಹುದು.

ವ್ಯಕ್ತಿ ಸನ್ನಿಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡುವ ಒಂದಷ್ಟು ಸಲಹೆಗಳು ಇಲ್ಲಿವೆ:

·         ನಿತ್ಯದ ಚಟುವಟಿಕೆ, ಪರಿಸ್ಥಿತಿಗಳನ್ನು ನಿಭಾಯಿಸಲು ನಿರ್ದಿಷ್ಟ ದಿನಚರಿ ರೂಪಿಸಿ

·         ಹಗಲಿನಲ್ಲಿ ವ್ಯಕ್ತಿಗೆ ವ್ಯಾಯಾಮ ಮಾಡಲು ಅಥವಾ ದೈಹಿಕ ಚಟುವಟಿಕೆಗಳನ್ನು ನಡೆಸಲು ಉತ್ತೇಜಿಸಿ

·         ಒಳ್ಳೆಯ ನಿದ್ದೆಗಾಗಿ ಬೆಚ್ಚಗಿರುವ ಕೆಫಿನ್‌ ರಹಿತ, ಮದ್ಯರಹಿತ ಪಾನೀಯವನ್ನು ಮಲಗುವ ಮೊದಲು ನೀಡಿ.

·         ಎಲ್ಲ ಚಟುವಟಿಕೆಗೆ ಗಡಿಯಾರ ಮತ್ತು ಕ್ಯಾಲೆಂಡರ್‌ ಬಳಸಲು ಉತ್ತೇಜಿಸಿ

·         ಸುತ್ತಲೂ ನೆಚ್ಚಿನ ವಸ್ತುಗಳನ್ನಿಡಿ. ಆದರೆ ಅಸ್ತವ್ಯಸ್ತ ಪರಿಸರ ಬೇಡ.

·         ಗದ್ದಲ ಮತ್ತು ವಿಚಲತೆಗೆ ಕಾರಣವಾಗುವ ವಾತಾವರಣ ಕಡಿಮೆಗೊಳಿಸಿ.

·         ವ್ಯಕ್ತಿ ನಿತ್ಯವೂ ಔಷಧ ತೆಗೆದುಕೊಳ್ಳುವಂತೆ ನೋಡಿಕೊಳ್ಳಿ. 

Q

ಆರೈಕೆದಾರರ ಆರೈಕೆ

A

ಸನ್ನಿ ಹೊಂದಿರುವ ವ್ಯಕ್ತಿಯ ಆರೈಕೆ ಮಾಡುವಾಗ, ಆರೈಕೆದಾರರಿಗೆ ಒತ್ತಡ ಹೆಚ್ಚು. ಹೀಗಾಗಿ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಗಮನಹರಿಸುವುದು ಅವಶ್ಯ. ಸಾಕಷ್ಟು ನಿದ್ದೆಮಾಡಿ, ಪೌಷ್ಟಿಕ ಆಹಾರ ಸೇವಿಸಿ, ನಿಮ್ಮ ಯೋಗಕ್ಷೇಮಕ್ಕಾಗಿ ಸಮಯ ಕಳೆಯಿರಿ. ಇದು ಪರಿಸ್ಥಿತಿ ನಿಭಾಯಿಸಲು ಸಹಾಯಕವಾಗುವುದು. ಖಾಯಿಲೆಯ ಬಗ್ಗೆ ಮಾಹಿತಿ ಪಡೆಯಿರಿ. ಇದು ಆರೈಕೆ ಮಾಡುವಲ್ಲಿ, ಚಿಕಿತ್ಸೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹಾಯಕವಾಗುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org