ಆಲ್ಜೈಮರ್ಸ್‌ ಖಾಯಿಲೆ

Q

ಆಲ್ಜೈಮರ್ಸ್‌ ಖಾಯಿಲೆ ಎಂದರೇನು?

A

59 ವರ್ಷದ ಪ್ರೇಮ ಅವರಿಗೆ ಜ್ಞಾಪಕ ಶಕ್ತಿ ಸಮಸ್ಯೆ ಆರಂಭವಾಯಿತು. ಹೆಸರುಗಳನ್ನು ಅಥವಾ ದೂರವಾಣಿ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಪ್ರತಿನಿತ್ಯದ ಹಲವು ಕೆಲಸಗಳನ್ನು ಮಾಡಿಲ್ಲ ಎಂದು ಭಾವಿಸಿ ಮತ್ತೆ ಮಾಡುತ್ತಿದ್ದರು. ಕೆಲವು ಸಲ ಅವರು ತಮ್ಮ ಪತಿಗೆ ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದರು. ಸ್ವಭಾವತಃ ಪ್ರೇಮ ಸ್ನೇಹಮಯಿ ಮತ್ತು ವಿನಯವಂತೆ. ಆದರೆ ಈ ನಡುವೆ ಅವರು ಇತರರೊಂದಿಗೆ ಜಗಳ ಮಾಡುತ್ತಿದ್ದರು. ಇವರ ವಿಚಿತ್ರವಾದ ವರ್ತನೆಯಿಂದ ಪತಿ ಚಿಂತಿತರಾಗಿ ವೈದ್ಯರನ್ನು ಸಂಪರ್ಕಿಸಿದರು. ವೈದ್ಯರು ಪ್ರೇಮಾರ ಕಥೆ ಕೇಳಿದ ನಂತರ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿ ಇದು ಆಲ್ಜೈಮರ್ಸ್‌ ಖಾಯಿಲೆ ಎಂದು ಗುರುತಿಸಿದರು. 

ನಿಜ ಜೀವನದಲ್ಲಿ ಈ ಖಾಯಿಲೆಯ ಸ್ವರೂಪ ತಿಳಿಸಲು ಈ ಕಥೆಯನ್ನು ನಿರೂಪಿಸಲಾಗಿದೆ.

ನೆನಪಿನ ಶಕ್ತಿ, ಯೋಚನಾ ಸಾಮರ್ಥ್ಯ ಹಾಗೂ ಇತರ ಪ್ರಮುಖ ಮಿದುಳಿನ ಕಾರ್ಯಗಳನ್ನು ಕುಗ್ಗಿಸುವ, ಸರಿಪಡಿಸಲಾಗದ ನರ ಕ್ಷೀಣಿಸುವ ಖಾಯಿಲೆ ಆಲ್ಜೈಮರ್ಸ್‌. ಆಲ್ಜೈಮರ್ಸ್‌ ಒಂದು ಬಗೆಯ ಡಿಮೆನ್ಶಿಯ ಖಾಯಿಲೆ. ಸಮಯ ಕಳೆದಂತೆ ಈ ಖಾಯಿಲೆಯ ಲಕ್ಷಣಗಳು ಗಂಭೀರವಾಗುತ್ತವೆ ಹಾಗೂ ವ್ಯಕ್ತಿಯ ನಿತ್ಯದ ಚಟುವಟಿಕೆಗಳನ್ನು ಪೂರೈಸುವ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ. 

Q

ಆಲ್ಜೈಮರ್ಸ್‌ ಖಾಯಿಲೆಯ ಲಕ್ಷಣಗಳೇನು?

A

ಆಲ್ಜೈಮರ್ಸ್‌ ಮೊದಲ ಹಂತಗಳಲ್ಲಿ, ವ್ಯಕ್ತಿ ನೆನಪಿನ ಶಕ್ತಿ ಕಳೆದುಕೊಳ್ಳಬಹುದು. ಖಾಯಿಲೆ ಬೆಳವಣಿಗೆಯಾದಂತೆ ರೋಗ ಲಕ್ಷಣಗಳೂ ಗಂಭೀರವಾಗುತ್ತವೆ. ಕೆಲ ಲಕ್ಷಣಗಳು ಸಾಮಾನ್ಯವಾಗಿದ್ದರೂ, ಅದರ ಗಂಭೀರತೆ ಮತ್ತು ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

 • ನೆನಪಿನ ಶಕ್ತಿ: ನೆನಪಿನ ಶಕ್ತಿ ನಿಧಾನವಾಗಿ ಕುಗ್ಗುತ್ತದೆ. ವ್ಯಕ್ತಿಗೆ ಸನ್ನಿವೇಶಗಳನ್ನು, ಸಂಭಾಷಣೆಗಳನ್ನು, ಕುಟುಂಬ ಸದಸ್ಯರ ಮತ್ತು ಇತರರ ಹೆಸರನ್ನು ಮರೆಸಬಹುದು. ವ್ಯಕ್ತಿ ವಸ್ತುಗಳ ಜಾಗ ಬದಲಿಸಬಹುದು ಮತ್ತು ಆ ದಿನದ ಘಟನೆಗಳನ್ನು ನೆನಪಿಸಿಕೊಳ್ಳಲು ಕಷ್ಟಪಡಬಹುದು.

 • ತಾನಿರುವ ಪ್ರದೇಶ ಮತ್ತು ಹಾದಿಯ ಬಗ್ಗೆ ಗೊಂದಲ: ವ್ಯಕ್ತಿ ಋತು, ವಾರ, ಸಮಯ ಮತ್ತು ಪ್ರಸ್ತುತ ಬದುಕಿನ ಸ್ಥಿತಿಯನ್ನು ಗ್ರಹಿಸಲು ವಿಫಲವಾಗಬಹುದು. ವ್ಯಕ್ತಿ ಏನು ನೋಡುತ್ತಿದ್ದಾನೆ ಎಂದು ಮಿದುಳು ಅರ್ಥೈಸಿಕೊಳ್ಳುವುದಿಲ್ಲ. ಸುತ್ತಲಿನ ಪರಿಸರ ಗೊಂದಲಮಯ ಇನಿಸಬಹುದು. ಹಾಗಾಗಿ ವ್ಯಕ್ತಿಯು ಗೊತ್ತಿರುವ ಜಾಗಗಳಲ್ಲಿಯೂ ಕಳೆದುಹೋಗಬಹುದು.

 • ಮಾತನಾಡುವುದು ಮತ್ತು ಬರೆಯುವುದು: ವಸ್ತುಗಳನ್ನು ಗುರುತಿಸಲು ಸೂಕ್ತ ಪದ ಬಳಸಲು, ಯೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಸಂಭಾಷಣೆಗಳಲ್ಲಿ ಭಾಗವಹಿಸಲು ಕಷ್ಟ. ಕೆಲ ಸಮಯದ ನಂತರ ಓದುವ ಹಾಗೂ ಬರೆಯುವ ಸಾಮರ್ಥ್ಯವು ಕುಗ್ಗುತ್ತದೆ.

 • ಯೋಚನೆ ಮತ್ತು ವಿಶ್ಲೇಷಣೆ: ಸಂಖ್ಯೆಗಳಂತಹ ಕಣ್ಣಿಗೆ ಕಾಣದ ಸಂಗತಿಗಳನ್ನು  ಅರ್ಥಮಾಡಿಕೊಳ್ಳಲು ಕಷ್ಟಪಡುವುದು. ಇದು ಬ್ಯಾಂಕ್‌ ವ್ಯವಹಾರ, ತನ್ನ ಖರ್ಚು ವೆಚ್ಚದ ಲೆಕ್ಕ ಇಡಲು ತೊಂದರೆಯುಂಟು ಮಾಡಬಹುದು.  

 • ನಿರ್ಧಾರ ತೆಗೆದುಕೊಳ್ಳುವಿಕೆ: ವಸ್ತುಗಳನ್ನು, ಚಟುವಟಿಕೆಗಳನ್ನು ಗಮನಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಕಷ್ಟಪಡುವುದು. ಉದಾಹರಣೆಗೆ ಲೈಟ್‌ ಸ್ವಿಚ್‌ ಆಫ್‌ ಮಾಡುವುದು, ನೀರು ತುಂಬಿ ಹರಿಯುತ್ತಿರುವಾಗ ನಲ್ಲಿ ನಿಲ್ಲಿಸುವುದು, ಟ್ರಾಫಿಕ್‌ನಲ್ಲಿ ನಿಧಾನವಾಗಿ ವಾಹನ ಚಾಲನೆ ಮಾಡುವುದು ಇತ್ಯಾದಿ.

 • ನಿತ್ಯದ ಚಟುವಟಿಕೆಗಳನ್ನು ಮಾಡುವುದು: ನಿತ್ಯದ ಚಟುವಟಿಕೆಗಳಾದ ಸ್ನಾನ, ಬಟ್ಟೆ ಧರಿಸುವುದು, ಅಡುಗೆ ಅಥವಾ ನೆಚ್ಚಿನ ಆಟಗಳನ್ನು ಆಡಲು ಕಷ್ಟ ಪಡುವುದು. ಕ್ರಮೇಣ ವ್ಯಕ್ತಿ ಈ ಎಲ್ಲ ಸಂಗತಿಗಳನ್ನು ಮರೆತು ಇದಕ್ಕೆ ಬೇರೆಯವರ ಸಹಾಯ ಬೇಕಾಗಬಹುದು.

 • ವ್ಯಕ್ತಿತ್ವ ಮತ್ತು ವರ್ತನೆ: ಮಿದುಳಿನಲ್ಲಿ ಆದ ಬದಲಾವಣೆ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು. ವ್ಯಕ್ತಿ ಇತರ ಸಮಸ್ಯೆಗಳಾದ ಖಿನ್ನತೆ, ಆತಂಕ, ಸಮಾಜದಿಂದ ದೂರವಿರುವುದು, ಮೂಡ್ ಬದಲಾವಣೆ, ಇತರರಲ್ಲಿ ಅಪನಂಬಿಕೆ, ನಿದ್ದೆ ಮಾಡಲು ತೊಂದರೆ, ಕಿರಿಕಿರಿ ಅಥವಾ ಅಲೆಯುವಿಕೆಗೆ ಒಳಗಾಗಬಹುದು.  

Q

ಆಲ್ಜೈಮರ್ಸ್‌ಗೆ ಕಾರಣವೇನು?

A

ವೈದ್ಯರು ಮತ್ತು ವಿಜ್ಞಾನಿಗಳು ಆಲ್ಜೈಮರ್ಸ್‌ ಖಾಯಿಲೆಗೆ ಸೂಕ್ತ ಕಾರಣವನ್ನು ಅರಿತಿಲ್ಲ. ವಯಸ್ಸು, ವಂಶವಾಹಿತ್ವ, ಪರಿಸರ, ಜೀವನಶೈಲಿ ಅಥವಾ ಒಟ್ಟಾರೆಯಾಗಿ ಸಾಮಾನ್ಯ ಆರೋಗ್ಯಗಳಲ್ಲಿ ಯಾವುದೇ ಅಂಶವು ಈ ಖಾಯಿಲೆಗೆ ಕಾರಣವಾಗಬಹುದು. ಕೆಲವು ವ್ಯಕ್ತಿಗಳಲ್ಲಿ ರೋಗಲಕ್ಷಣ ಕಾಣುವ ಹಲವು ವರ್ಷಗಳ ಮೊದಲೇ ಖಾಯಿಲೆ ಸದ್ದಿಲ್ಲದೆ ಬೆಳೆದಿರಬಹುದು.

 • ವಯಸ್ಸು: ವಯಸ್ಸಾದಂತೆ ಡಿಮೆನ್ಷಿಯ ಖಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಾಗಿ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಈ ಖಾಯಿಲೆ ಬರುವ ಸಂಭವ ಹೆಚ್ಚಾಗಿರುತ್ತದೆ.
 • ಆನುವಂಶಿಕ ಲಕ್ಷಣ: ವಿಜ್ಞಾನಿಗಳು ಆಲ್ಜೈಮರ್ಸ್‌ ವಂಶವಾಹಿಯಾಗಿ ಬರಬಹುದು ಎಂದು ಹೇಳಿದರೂ, ಇದು ಪೂರ್ತಿಯಾಗಿ ಸಾಬೀತಾಗಿಲ್ಲ.
 • ಇತರ ಅಂಶಗಳು: ಡೌನ್‌ ಸಿಂಡ್ರೋಮ್‌ನಿಂದ ಬಳಲುತ್ತಿರುವ 50 ಅಥವಾ 60 ವರ್ಷ ವಯಸ್ಸಾದ ವ್ಯಕ್ತಿಗಳಲ್ಲಿ ಆಲ್ಜೈಮರ್ಸ್‌ ಕಾಣಿಸಿಕೊಳ್ಳಬಹುದು.

ವಿಶ್ವ ಆಲ್ಜೈಮರ್ಸ್‌ ವರದಿ ಪ್ರಕಾರ, ವಯಸ್ಸಾದವರು ವಿವಿಧ ರೀತಿಯ ದೈಹಿಕ ಆರೋಗ್ಯ ಸಮಸ್ಯೆಯನ್ನು ಹೊಂದಿರಬಹುದು. ಈ ಸಮಸ್ಯೆಗಳು ವ್ಯಕ್ತಿಯ ನಿತ್ಯದ ಚಟುವಟಿಕೆಗಳನ್ನು ಕಷ್ಟವಾಗಿಸುತ್ತದೆ. ಅವರ ಎಲ್ಲಾ ಅಗತ್ಯಗಳಿಗೆ ಆರೈಕೆದಾರರನ್ನು ಅವಲಂಬಿಸುವಂತಾಗಬಹುದು.

ಆಲ್ಜೈಮರ್ಸ್‌ ಖಾಯಿಲೆ ಹಿಂದಿರುವ ವಿಜ್ಞಾನ: ಆಲ್ಜೈಮರ್ಸ್‌ನ ಕಾರಣ ತಿಳಿಯಲು ಈಗಲೂ ಸಂಶೋಧನೆಗಳು ನಡೆಯುತ್ತಿವೆ.

ಆಲ್ಜೈಮರ್ಸ್‌ ಖಾಯಿಲೆಗೆ ಕಾರಣವಾದ ಒಂದು ಪ್ರೋಟಿನ್‌ ಅಂಶವೆಂದರೆ ಅಪೋಲಿಪೋಪ್ರೊಟೀನ್ ಇ(ಅಪೊಇ).

ಪ್ರತಿಯೊಬ್ಬರು ಅಪೊಇ ಹೊಂದಿರುತ್ತಾರೆ. ಇದು ರಕ್ತದಲ್ಲಿನ ಕೊಬ್ಬಿನಾಂಶ ಒಯ್ಯುಲು ಸಹಕಾರಿ. ಅಪೊಇ 3 ವಿಧದಲ್ಲಿರುತ್ತದೆ. ಒಂದು ವ್ಯಕ್ತಿಯನ್ನು ಆಲ್ಜೈಮರ್ಸ್‌ನಿಂದ ರಕ್ಷಿಸುತ್ತದೆ. ಮತ್ತೊಂದು ಖಾಯಿಲೆಯನ್ನು ಹೆಚ್ಚಿಸುತ್ತದೆ. ಇನ್ನೊಂದು ಖಾಯಿಲೆಯಿಂದ ರಕ್ಷಿಸುತ್ತದೆಯಾ ಅಥವಾ ಖಾಯಿಲೆ ಹೆಚ್ಚಿಸುತ್ತದೆಯಾ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಬೇಕಿದೆ. 

Q

ಆಲ್ಜೈಮರ್ಸ್‌ ಚಿಕಿತ್ಸೆ

A

ವ್ಯಕ್ತಿ ನಿಖರವಾಗಿ ಆಲ್ಜೈಮರ್ಸ್‌ ಖಾಯಿಲೆಯನ್ನೇ ಹೊಂದಿರುವನೆ ಅಥವಾ ಅದರ ಲಕ್ಷಣಗಳು ಇತರ ದೈಹಿಕ ಅಥವಾ ಮಾನಸಿಕ ಸಮಸ್ಯೆಯಿಂದ ಕಾಣಿಸಿಕೊಂಡಿರುವುದೇ ಎಂಬುದನ್ನು ಪತ್ತೆ ಮಾಡಲು ವೈದ್ಯರು ಹಲವು ಪರೀಕ್ಷೆಗಳನ್ನು ಮಾಡುತ್ತಾರೆ.

ತಪಾಸಣೆ ವೇಳೆ ವೈದ್ಯರು ಅನುಸರಿಸುವ ಮಾರ್ಗಗಳು:

 • ಒಟ್ಟಾರೆ ಆರೋಗ್ಯ, ಹಿಂದಿನ ವೈದ್ಯಕೀಯ ಸಮಸ್ಯೆ, ನಿತ್ಯದ ಚಟುವಟಿಕೆ, ವರ್ತನೆ ಬದಲಾವಣೆ ಮತ್ತು ಮನಸ್ಥಿತಿ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುತ್ತಾರೆ.

 • ಜ್ಞಾಪಕ ಶಕ್ತಿ, ಸಮಸ್ಯೆ ಬಗೆಹರಿಸುವ ಸಾಮರ್ಥ್ಯ, ಗಮನ, ಎಣಿಕೆ ಮತ್ತು ಭಾಷೆ ಕುರಿತು ಪರೀಕ್ಷೆ ಮಾಡಬಹುದು.

 • ಇದೇ ಲಕ್ಷಣ ತೋರುವ ಬೇರೆ ಸಮಸ್ಯೆಗಳನ್ನು ಪರೀಕ್ಷಿಸಲು ರಕ್ತ, ಮೂತ್ರ ಮೊದಲಾದ ಪರೀಕ್ಷೆ ನಡೆಸಬಹುದು. ಉದಾಹರಣೆಗೆ ಥೈರಾಡ್‌ ಸಮಸ್ಯೆ, ಔಷಧದ ಅಡ್ಡ ಪರಿಣಾಮ, ಖಿನ್ನತೆ, ಬ್ರೇನ್ ಟ್ಯೂಮರ್‌ ಮತ್ತು ಮಿದುಳಿನಲ್ಲಿ ರಕ್ತನಾಳಗಳ ಒಡೆಯುವಿಕೆ ಮೊದಲಾದವು ಆಲ್ಜೈಮರ್ಸ್‌ನ ಲಕ್ಷಣಗಳನ್ನೇ ಹೊಂದಿರಬಹುದು ಮತ್ತು ಈ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು.

 • ಸಿ.ಟಿ (CT scan) ಅಥವಾ ಎಂ.ಆರ್‌.ಐ. (MRI) ಸ್ಕ್ಯಾನ್‌ ನಡೆಸಬಹುದು.

ಸೂಚನೆ: ವ್ಯಕ್ತಿಯ ಜ್ಞಾಪಕ ಶಕ್ತಿ ಮತ್ತು ಆರೋಗ್ಯ ಬದಲಾವಣೆ ಗಮನಿಸಲು ಈ ಪರೀಕ್ಷೆಗಳನ್ನು ಪುನರಾವರ್ತಿಸಬಹುದು.

ಬೇಗ ರೋಗ ಪತ್ತೆ ಮಾಡುವುದು ಸಹಕಾರಿ:

ಬೇಗ ರೋಗ ಪತ್ತೆ ಮಾಡುವುದರಿಂದ ವ್ಯಕ್ತಿ ಮತ್ತು ಕುಟುಂಬ ಭವಿಷ್ಯದ ಬಗ್ಗೆ ನಿರ್ಧರಿಸಬಹುದು. ವ್ಯಕ್ತಿ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿರುವಾಗಲೇ ಬೇಕಾದ ಆರೈಕೆಯ ಬಗ್ಗೆ ಅವರು ನಿರ್ಧರಿಸಬಹುದು. ಬೇಗ ರೋಗ ಪತ್ತೆ ಮಾಡುವುದು ರೋಗದ ಲಕ್ಷಣಕ್ಕೆ ಚಿಕಿತ್ಸೆ ನೀಡಲು ಸಹಕಾರಿ.

ಆಲ್ಜೈಮರ್ಸ್‌ಗೆ ಚಿಕಿತ್ಸೆ:

ಆಲ್ಜೈಮರ್ಸ್‌ ಖಾಯಿಲೆಯನ್ನು ವಾಸಿಮಾಡುವ ಯಾವುದೇ  ಚಿಕಿತ್ಸೆಯಿಲ್ಲ ಮತ್ತು ಮಿದುಳಿನ ಕೋಶಗಳು ಕ್ಷೀಣಿಸುವುದನ್ನು ನಿಧಾನಿಸುವ ಯಾವುದೇ ಮಾರ್ಗವಿಲ್ಲ. ಪ್ರಾರಂಭದಲ್ಲೇ ಚಿಕಿತ್ಸೆ ನೀಡಿದರೆ ವ್ಯಕ್ತಿ ಸ್ವತಂತ್ರವಾಗಿ ಜೀವನ ನಡೆಸಬಹುದು ಮತ್ತು ದೀರ್ಘಕಾಲ ತಮ್ಮ ದಿನನಿತ್ಯದ ಕಾರ್ಯಗಳನ್ನು ತಾವೇ ನಿಭಾಯಿಸಬಹುದು.

ಆಲ್ಜೈಮರ್ಸ್‌ ಹೆಚ್ಚಾಗುವ ಖಾಯಿಲೆಯಾಗಿದ್ದು ಇದರ ಅವಧಿ 5-20 ವರ್ಷದವರೆಗೆ ವ್ಯತ್ಯಾಸವಾಗಬಹುದು. ಸಾವಿಗೆ ಅತ್ಯಂತ ಸಾಮಾನ್ಯ ಕಾರಣ ಸೋಂಕು, ವಿಶೇಷವಾಗಿ ನ್ಯೂಮೇನಿಯಾ.

Q

ಆಲ್ಜೈಮರ್ಸ್‌ ಹೊಂದಿರುವವರ ಆರೈಕೆ

A

ಆಲ್ಜೈಮರ್ಸ್‌ನಿಂದ ಬಳಲುತ್ತಿರುವ ವ್ಯಕ್ತಿ ಹತಾಶೆ, ಅಸಹಾಯಕತೆ, ಗೊಂದಲ, ಸಿಟ್ಟು, ಭಯ, ಅಸ್ಥಿರತೆ, ಆತಂಕ, ದುಃಖ ಮುಂತಾದ ಭಾವನೆಗಳನ್ನು ಹೊಂದಿರಬಹುದು.

ನೀವು ಆಲ್ಜೈಮರ್ಸ್‌ ಹೊಂದಿರುವವರ ಆರೈಕೆದಾರರಾಗಿದ್ದರೆ, ನೀವು ಅವರನ್ನು ಆಲಿಸುವುದು, ಬದುಕನ್ನು ಈಗಲೂ ಸವಿಯಬಹುದೆಂಬ ಭರವಸೆ ನೀಡುವುದು, ಬೆಂಬಲ ನೀಡಿ, ವ್ಯಕ್ತಿಯು ಗೌರವ, ಘನತೆ ಉಳಿಸಿಕೊಳ್ಳಲು ಸಹಾಯ ಮಾಡಬಹುದು.

ಮನೆಯ ಪ್ರಶಾಂತ ವಾತಾವರಣ ಅವರ ವರ್ತನೆಯ ಸಮಸ್ಯೆಗಳನ್ನು ಕುಗ್ಗಿಸಲು ಸಹಕಾರಿಯಾಗುತ್ತದೆ. ಹೊಸ ಸನ್ನಿವೇಶ, ಗದ್ದಲ, ಜನರ ಗುಂಪು, ಯಾವುದಾದರೂ ಕೆಲಸ ಮಾಡಲು ಒತ್ತಡ, ಇದರಿಂದ ವ್ಯಕ್ತಿಯು ಬೇಸರಗೊಂಡು ಅವರ ಆತಂಕ ಅಥವಾ ಒತ್ತಡ ಹೆಚ್ಚಿಸಬಹುದು. ಆಗ ಯೋಚಿಸುವ ಸಾಮರ್ಥ್ಯ ಇನ್ನೂ ಕುಗ್ಗುತ್ತದೆ. 

ನಿಮ್ಮ ಪ್ರೀತಿಪಾತ್ರರು ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿರುವಾಗಲೇ ವಕೀಲರನ್ನು ಕರೆಸಿ ಅವರ ಹಣಕಾಸು, ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಕಾನೂನು ವಿಷಯಗಳ ನಿರ್ಧಾರ ತೆಗೆದುಕೊಳ್ಳಲು ಹೇಳಿ. ವ್ಯಕ್ತಿಯು ತಮ್ಮ ಆರೋಗ್ಯ ರಕ್ಷಣೆ ಮತ್ತು ವ್ಯವಹಾರಗಳನ್ನು ನೋಡಿಕೊಳ್ಳಲು ಯಾರನ್ನಾದರು ನೇಮಿಸಬಹುದು. ವ್ಯಕ್ತಿಯ ಖಾಯಿಲೆ ತೀವ್ರವಾಗಿ  ಅವರ ಆಶಯಗಳನ್ನು ತಿಳಿಸಲು ಆಗದಾಗ ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಕಾರಿಯಾಗುತ್ತದೆ. 

Q

ಆರೈಕೆದಾರರಿಗೆ ಆರೈಕೆ

A

ಆಲ್ಜೈಮರ್ಸ್‌ ಹೊಂದಿರುವವರಿಗೆ ಆರೈಕೆ ಮಾಡುವವರು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗುತ್ತಾರೆ. ಸಿಟ್ಟು, ತಪ್ಪಿತಸ್ಥ ಭಾವ, ಒತ್ತಡ, ನಿರುತ್ಸಾಹ, ತಲ್ಲಣಗಳು, ದುಃಖ, ಸಾಮಾಜಿಕ ಪ್ರತ್ಯೇಕತೆಗಳನ್ನು ಎದುರಿಸುವುದು ಸಾಮಾನ್ಯ. ಆರೈಕೆದಾರರು ಈ ಎಲ್ಲ ಸ್ಥಿತಿಗಳೊಂದಿಗೂ ಆರೈಕೆ ನೀಡಬೇಕಾಗುತ್ತದೆ.

ನೀವು ಆಲ್ಜೈಮರ್ಸ್‌ ಹೊಂದಿರುವವರಿಗೆ ಆರೈಕೆದಾರರಾಗಿದ್ದರೆ, ಈ ಕೆಳಗಿನ ಸಲಹೆಗಳು ನಿಮಗೆ ಉಪಯೋಗವಾಗಬಹುದು:

 • ಸಾಧ್ಯವಾದಷ್ಟು ಖಾಯಿಲೆ ಕುರಿತು ಹೆಚ್ಚು ತಿಳಿದುಕೊಳ್ಳಿ. 
 • ನಿಮ್ಮ ಪ್ರೀತಿಪಾತ್ರರ ಆರೈಕೆಯಲ್ಲಿ ಭಾಗಿಯಾಗಿರುವ ವೈದ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಿರಿ.
 • ನಿಮಗೆ ಅಗತ್ಯವಿದ್ದಾಗ ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಸಹಾಯ ಕೇಳಿ.
 • ನಿಮಗಾಗಿ ಕೆಲ ಸಮಯ ವ್ಯಯಿಸುವುದು, ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವುದು.
 • ನಿಮ್ಮ ವೈದ್ಯರನ್ನು ಕಾಲ ಕಾಲಕ್ಕೆ ಭೇಟಿ ಮಾಡಿ, ಆರೋಗ್ಯಯುತ ಊಟ ಮತ್ತು ವ್ಯಾಯಾಮದ ಮೂಲಕ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸುವುದು.
 • ಬೆಂಬಲ ನೀಡುವ ಸಮೂಹ ಸೇರುವುದು.
 • ಸಾಧ್ಯವಾದರೆ ವಯಸ್ಕರ ಹಗಲು ಆರೈಕೆ ಕೇಂದ್ರದ (Adult day care centre) ಸಹಾಯ ಪಡೆಯುವುದು.
 • ಆಲ್ಜೈಮರ್ಸ್‌ ಹೊಂದಿರುವವರು ಮತ್ತು ಅವರ ಕುಟುಂಬದವರ ಸಲಹೆ ಉಪಯೋಗವಾಗಬಹುದು. ನಿಮ್ಮ ಸ್ಥಳೀಯ ಆಲ್ಜೈಮರ್ಸ್‌ ಒಕ್ಕೂಟವನ್ನು ಸಂಪರ್ಕಿಸಿ ಅವರ ಮೂಲಕ, ವೈದ್ಯರ ಮತ್ತು ಸಂಪನ್ಮೂಲಗಳ ಸಂಪರ್ಕ ಪಡೆಯಿರಿ.

Q

ಆಲ್ಜೈಮರ್ಸ್‌ನ್ನು ಹೇಗೆ ತಡೆಗಟ್ಟಬಹುದು?

A

ಜೀವನಶೈಲಿಯಲ್ಲಿನ ಬದಲಾವಣೆ ಹೇಗೆ ಆಲ್ಜೈಮರ್ಸ್‌ನ್ನು ತಡೆಗಟ್ಟಲು ಸಹಕಾರಿ ಎಂದು ಸಾಕಷ್ಟು ಅಧ್ಯಯನಗಳು ನಡೆದಿವೆ.

ಪಥ್ಯ, ವ್ಯಾಯಾಮ ಅಥವಾ ಆರೋಗ್ಯಯುತ ಜೀವನಶೈಲಿಯಿಂದ ಆಲ್ಜೈಮರ್ಸ್‌ನ್ನು ತಡೆಗಟ್ಟಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಆರೋಗ್ಯಯುತ ಆಯ್ಕೆಗಳು ಒಟ್ಟಾರೆ ಉತ್ತಮ ಆರೋಗ್ಯವನ್ನು ಉತ್ತೇಜಿಸುವುದರಿಂದ ಒಂದು ಯೋಗಕ್ಷೇಮದ ಯೋಜನೆ ಪಾಲಿಸುವುದು ಸೂಕ್ತ. 

ನಿಮ್ಮ ಯೋಗಕ್ಷೇಮಕ್ಕೆ ಕೆಳಗಿನ ಅಂಶಗಳು ಸಹಾಯವಾಗಬಹುದು:

 • ಹೃದಯದ ಆರೋಗ್ಯಕ್ಕೆ ಮತ್ತು ಜ್ಞಾಪಕ ಶಕ್ತಿ ಕಡಿಮೆಯಾಗುವುದನ್ನು ತಡೆಯುವುದಕ್ಕೆ ನಿರಂತರ ವ್ಯಾಯಾಮ ಒಳ್ಳೆಯದು. ವ್ಯಾಯಾಮ ನಿಮ್ಮ ಮೂಡನ್ನು ಉತ್ತಮವಾಗಿಸುತ್ತದೆ.
 • ಪೌಷ್ಠಿಕಾಂಶಯುಕ್ತ ಆಹಾರ, ಹಣ್ಣು, ತರಕಾರಿ ಮತ್ತು ಪ್ರೋಟಿನ್‌ ಸೇವನೆಯಿಂದ ನಿಮ್ಮ ಅರಿವಿನ ಆರೋಗ್ಯ ಉತ್ತಮವಾಗುತ್ತದೆ.
 • ಮೀನಿನಲ್ಲಿ ಸಿಗುವ ಒಮೆಗಾ-3 ಫ್ಯಾಟಿ ಆಸಿಡ್‌ ಅರಿವಿನ ಆರೋಗ್ಯಕ್ಕೆ ಉತ್ತಮ.
 • ಅರ್ಥಪೂರ್ಣ ಚಟುವಟಿಕೆಗಳೊಂದಿಗೆ ಸಕ್ರಿಯ ಜೀವನಶೈಲಿ ನಿರ್ವಹಿಸಬಹುದು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org