ಅನೊರೆಕ್ಸಿಯಾ ನರ್ವೋಸಾ

Q

ಅನೊರೆಕ್ಸಿಯಾ ನರ್ವೋಸಾ ಎಂದರೇನು?

A

ಅನೊರೆಕ್ಸಿಯಾ ನರ್ವೋಸಾ ತಿನ್ನುವ ಸಮಸ್ಯೆ. ಈ ಸಮಸ್ಯೆಯಿರುವ ವ್ಯಕ್ತಿಯು, ಅತೀ ಕಡಿಮೆ ದೇಹದ ತೂಕ, ತೂಕ ಹೆಚ್ಚಾಗುವ ಬಗ್ಗೆ ವಿಪರೀತ ಭಯ, ಮತ್ತು ದೇಹ ಸೌಂದರ್ಯದ ತಪ್ಪಾದ ಗ್ರಹಿಕೆಯನ್ನು ಹೊಂದಿರುತ್ತಾರೆ. ವ್ಯಕ್ತಿಯು ತನ್ನ ಭಾವನಾತ್ಮಕ ಒತ್ತಡಗಳನ್ನು ಸರಿಯಾಗಿ ನಿರ್ವಹಿಸಲು ವಿಫಲವಾಗುವುದರೊಂದಿಗೆ ಇದು ಆರಂಭಗೊಳ್ಳುತ್ತದೆ. ಇವರು ದೇಹದ ತೂಕವನ್ನು ಇಳಿಸಿಕೊಂಡು ತೆಳ್ಳಗೆ ಕಾಣುವುದರಿಂದ ಆತ್ಮವಿಶ್ವಾಸ ಹೆಚ್ಚಿ ಸುಂದರವಾಗಿ ಕಾಣುತ್ತೇವೆ ಎಂದು ಭಾವಿಸುತ್ತಾರೆ. ಇದಕ್ಕಾಗಿ ಇವರು ತಮ್ಮ ಆಹಾರದ ಪ್ರಮಾಣವನ್ನು ಕಡಿಮೆ ಮಾಡಲು ಆರಂಭಿಸುತ್ತಾರೆ. ಇದನ್ನು ಸಾಧಿಸಲು ಅವರು ನಿಯಮಿತವಾಗಿ ಊಟವನ್ನು ತ್ಯಜಿಸಬಹುದು ಅಥವಾ ಕಾಲಕ್ರಮೇಣ ದಿನಗಟ್ಟಲೇ ಆಹಾರ ಸೇವಿಸುವುದನ್ನು ನಿಲ್ಲಿಸಬಹುದು. ತಿನ್ನುವಾಗಲೂ ಅತೀ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಹುದು ಮತ್ತು ಅದಕ್ಕೂ ಪಶ್ಚಾತ್ತಾಪ ಪಡಬಹುದು. ದಿನ ಕಳೆದಂತೆ ಈ ನಿಯಂತ್ರಿತ ನಡವಳಿಕೆ ಮತ್ತು ತೆಳ್ಳಗಿನ ದೇಹ ಅವರಿಗೆ ಗೀಳಾಗಿ ಪರಿಣಮಿಸಬಹುದು. ಅವರ ದೇಹದ ತೂಕವು ಅವರ ವಯಸ್ಸು ಮತ್ತು ಎತ್ತರಕ್ಕೆ ಇರಬೇಕಾದ ಸಾಮಾನ್ಯ ತೂಕಕ್ಕಿಂತ ಕಡಿಮೆಯಾಗಬಹುದು. ಇದಲ್ಲದೇ ಅವರು ತಮ್ಮ ದೇಹದ ಸೌಂದರ್ಯದ ಬಗ್ಗೆ ತಪ್ಪಾಗಿ ಪರಿಭಾವಿಸುತ್ತಾರೆ. ಅವರು ಅತ್ಯಂತ ತೆಳ್ಳಗಿನ ದೇಹವನ್ನು ಹೊಂದಿದ್ದಾಗಲೂ ತಾವಿನ್ನೂ ದಪ್ಪಗಿದ್ದೇವೆ ಎಂದು ತಿಳಿದಿರುತ್ತಾರೆ.

ಬಹಳ ಜನ ತಿಳಿದಿರುವಂತೆ ಅನೊರೆಕ್ಸಿಯಾ ವ್ಯಕ್ತಿಯು ಆಯ್ದುಕೊಂಡ ಜೀವನ ಶೈಲಿಯ ವಿಧಾನವಾಗಿರುವುದಿಲ್ಲ: ಬದಲಿಗೆ ಇದು ವ್ಯಕ್ತಿಯು ಭಾವನಾತ್ಮಕ ಒತ್ತಡದಿಂದ ಬಳಲಿದಾಗ, ತನ್ನ ಶರೀರದ ಬಗ್ಗೆ ಋಣಾತ್ಮಕ ಮತ್ತು ತಪ್ಪಾದ ಗ್ರಹಿಕೆ ಹೊಂದಿದ್ದಾಗ ಉಂಟಾಗುತ್ತದೆ. ಅವರು ತೂಕ ಹೆಚ್ಚುವ ಬಗ್ಗೆ ವಿಪರೀತವಾಗಿ ಭಯಭೀತರಾಗಿರುತ್ತಾರೆ. ಇದು ತೀವ್ರವಾದ ದೈಹಿಕ ಗುಣಲಕ್ಷಣಗಳನ್ನು ಹೊಂದಿರುವ ಗಂಭೀರ ಖಾಯಿಲೆಯಾಗಿದ್ದು ಸೂಕ್ತ ಚಿಕಿತ್ಸೆಯಿಂದ ಸಹಜ ಆರೋಗ್ಯವನ್ನು ಮರಳಿಪಡೆಯಬಹುದು.

Q

ಅನೊರೆಕ್ಸಿಯಾದ ಲಕ್ಷಣಗಳೇನು?

A

ಅನೊರೆಕ್ಸಿಯಾದಿಂದ ಬಳಲುತ್ತಿರುವವರು ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಂದ ತಮ್ಮ ನಡವಳಿಕೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಆದರೂ ಕೆಲವು ದೈಹಿಕ ಮತ್ತು ನಡವಳಿಕೆಯಲ್ಲಾಗುವ ಬದಲಾವಣೆಯಿಂದ ಈ ಸಮಸ್ಯೆಯನ್ನು ಪತ್ತೆಹಚ್ಚಬಹುದು.

ದೈಹಿಕ ಲಕ್ಷಣಗಳು:

  • ದೇಹದ ತೂಕ ತೀವ್ರವಾಗಿ ಕಡಿಮೆಯಾಗುವುದು ಮತ್ತು ಅತ್ಯಂತ ತೆಳ್ಳಗಾಗುವುದು.
  • ತಲೆ ತಿರುಗುವಂತಹ ಅನುಭವ ಮತ್ತು ಆಯಾಸವಾಗುವುದು.
  • ಅತಿಯಾಗಿ ಚಳಿಯೆನಿಸುವುದು.
  • ಕೂದಲು ತೆಳ್ಳಗಾಗುವುದು ಮತ್ತು ಉದುರುವಿಕೆ, ಚರ್ಮ ಅತಿಯಾಗಿ ಒಣಗುವುದು.
  • ಋತುಚಕ್ರದಲ್ಲಿ ಏರುಪೇರು, ಕೆಲವೊಮ್ಮೆ ಋತುಚಕ್ರವೇ ನಿಂತುಹೋಗುವುದು.

ಡುವಳಿಕೆಯಲ್ಲಾಗುವ ಬದಲಾವಣೆಗಳು

  • ತೂಕ ಹೆಚ್ಚುವುದು ಮತ್ತು ಆಹಾರದಲ್ಲಿನ ಕ್ಯಾಲೋರಿ ಮಟ್ಟದ ಕುರಿತು ಚಿಂತಿತರಾಗುವುದು. ಮತ್ತೆ ಮತ್ತೆ ತೂಕವನ್ನು ನೋಡಿಕೊಳ್ಳುವುದು ಮತ್ತು ದೇಹದ ಆಕೃತಿಯನ್ನು ಕನ್ನಡಿಯಲ್ಲಿ ಪರೀಕ್ಷಿಸಿಕೊಳ್ಳುವುದು.
  • ಮನೆಯವರು ಮತ್ತು ಸ್ನೇಹಿತರೊಂದಿಗೆ ಊಟಮಾಡುವುದನ್ನು ತಪ್ಪಿಸಿಕೊಳ್ಳುವುದು, ತಮ್ಮ ಊಟವಾಗಿದೆ ಎಂದು ಅಥವಾ ಹಸಿವಿಲ್ಲವೆಂದು ಹೇಳುವುದು.
  • ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯದಿರುವುದು ಮತ್ತು ಕಿರಿಕಿರಿಗೊಳ್ಳುವುದು.
  • ಅತಿಯಾಗಿ ವ್ಯಾಯಾಮ ಮಾಡುವುದು ಮತ್ತು ತೂಕ ಕಳೆದುಕೊಳ್ಳಲು ಲ್ಯಾಕ್ಸೆಟಿವ್ ಗಳನ್ನು ಬಳಸುವುದು.

Q

ಅನೊರೆಕ್ಸಿಯಾ ಉಂಟಾಗಲು ಕಾರಣವೇನು?

A

ಅನೊರೆಕ್ಸಿಯಾ ಏಕೆ ಉಂಟಾಗುತ್ತದೆ ಎಂಬುದಕ್ಕೆ ಸರಿಯಾದ ಕಾರಣವು ತಿಳಿದಿಲ್ಲ. ಇದು ಮಾನಸಿಕ, ಜೈವಿಕ ಮತ್ತು ಪರಿಸರದ ಅಂಶಗಳಿಂದ ಉಂಟಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವ ವ್ಯಕ್ತಿ ತಮ್ಮ ಸಮಸ್ಯೆಯನ್ನು ನಿಭಾಯಿಸುವ ಹಂತದಲ್ಲಿ ಈ ಖಾಯಿಲೆಗೆ ಒಳಗಾಗಬಹುದು. ಆಹಾರಕ್ಕೆ ಸಂಬಂಧಿಸಿದಂತೆ ಕಂಪಲ್ಸಿವ್ ನಡವಳಿಕೆಯನ್ನು ಅಂದರೆ ಆಹಾರವನ್ನು ಪ್ರತಿ ಬಾರಿ ಅಳೆಯುವುದು, ಅವನ್ನು ಸಣ್ಣ ಭಾಗಗಳನ್ನಾಗಿ ಮಾಡುವುದು ಮುಂತಾದ ನಡವಳಿಕೆಯನ್ನು ಬೆಳೆಸಿಕೊಳ್ಳಬಹುದು. ಕೆಲವು ವೇಳೆ ಪರಿಪೂರ್ಣತ್ವ ಅಥವಾ ಅತಿಯಾದ ಸೂಕ್ಷ್ಮ ಮನೋಭಾವವು ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು. ಇದರಲ್ಲಿ ಜೀನುಗಳ ಪಾತ್ರವೇನು ಎಂದು ಖಚಿತವಾಗಿ ತಿಳಿದುಬಂದಿಲ್ಲವಾದರೂ ಕೆಲವು ಸಂಶೋಧನೆಗಳ ಪ್ರಕಾರ ಮೆದುಳಿನಲ್ಲಿನ ಸೆರೆಟೊನಿನ್ ಅಂಶದ ಮಟ್ಟವು ಈ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಯಾರಾದರೂ ಅವರ ತೂಕದ ಬಗ್ಗೆ ಹೀಯಾಳಿಸಿದ್ದರೆ ತೆಳ್ಳಗಾಗುವ ಗೀಳನ್ನು ಬೆಳೆಸಿಕೊಳ್ಳಬಹುದು. ಹರೆಯದ ಹೆಣ್ಣುಮಕ್ಕಳಲ್ಲಿ ಪಿಯರ್ ಪ್ರೆಶರ್ ಕೂಡ ಈ ಸಮಸ್ಯೆ ಉಂಟಾಗಲು ಕಾರಣವಾಗಬಹುದು. ಮಾಧ್ಯಮ ಮತ್ತು ಸಮಾಜ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಸೌಂದರ್ಯ ಮತ್ತು ತೆಳ್ಳಗಿರುವುದು ಅನುರೂಪ ಪ್ರಕ್ರಿಯೆಗಳು ಎಂಬ ತಪ್ಪು ಗ್ರಹಿಕೆಯು ಕೆಲವೊಮ್ಮೆ ಪ್ರಭಾವ ಬೀರುತ್ತದೆ.

Q

ಅನೊರೆಕ್ಸಿಯಾಕ್ಕೆ ಚಿಕಿತ್ಸೆ

A

ಅನೊರೆಕ್ಸಿಯಾವು ದೇಹ ಮತ್ತು ಮನಸ್ಸು ಎರಡನ್ನೂ ಬಾಧಿಸುವುದರಿಂದ ಇದಕ್ಕೆ ಹಲವು ರೀತಿಯ ಚಿಕಿತ್ಸೆಗಳು ಅಗತ್ಯವಾಗಿದೆ. ಅನೊರೆಕ್ಸಿಯಾದಿಂದ ಬಳಲುವ ವ್ಯಕ್ತಿಯು ಅತಿಯಾದ ಅಪೌಷ್ಠಿಕತೆಗೆ ಗುರಿಯಾಗಿದ್ದರೆ ಆಗ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಅವರ ದೇಹದ ತೂಕವು ಅತಿಯಾಗಿ ಕಡಿಮೆಯಾಗಿರದೇ ಮತ್ತು ವೈದ್ಯಕೀಯವಾಗಿ ಅಪಾಯದ ಸ್ಥಿತಿಯಲ್ಲಿಲ್ಲದಿದ್ದರೆ ಅವರು ಹೊರರೋಗಿಯಾಗಿ ಚಿಕಿತ್ಸೆಪಡೆಯಬಹುದು.

ಅನೊರೆಕ್ಸಿಯಾದ ಚಿಕಿತ್ಸೆಯು 3 ವಿಭಾಗಗಳನ್ನು ಹೊಂದಿದೆ.

  • ಮೊದಲನೆಯದಾಗಿ ತಿನ್ನುವ ಸಮಸ್ಯೆಯ ಕಾರಣದಿಂದ ವ್ಯಕ್ತಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಉಂಟಾಗಿದ್ದರೆ ಅದಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ.
  • ಆಮೇಲೆ ಅವರಿಗೆ ಪೌಷ್ಠಿಕಾಂಶಗಳ ಚಿಕಿತ್ಸೆಯನ್ನು ನೀಡಿ ಅವರು ಆರೋಗ್ಯವಂತ ತೂಕಕ್ಕೆ ಮರಳುವಂತೆ ಮಾಡಲಾಗುತ್ತದೆ. ತೂಕವನ್ನು ನಿಭಾಯಿಸಲು ಪೌಷ್ಠಿಕಾಂಶಗಳ ಕುರಿತು ಮಾಹಿತಿ ನೀಡಲಾಗುತ್ತದೆ.
  • ನಂತರ ಅವರಿಗೆ ಆಪ್ತ ಸಮಾಲೋಚನೆ ಮತ್ತು ತೂಕ ಹೆಚ್ಚಿಸುವುದರ ಬಗ್ಗೆ ಮತ್ತು ಅವರು ಹೊಂದಿರುವ ಭಯಕ್ಕೆ ಚಿಕಿತ್ಸೆ ನೀಡಲಾಗುತ್ತದೆ.

ತಜ್ಞ ವೈದ್ಯರುಗಳ ತಂಡವು ಸಕಾಲಿಕವಾಗಿ ಚಿಕಿತ್ಸೆಯನ್ನು ನೀಡುತ್ತದೆ. ಕೆಲವು ಸಂದರ್ಭದಲ್ಲಿ ಮನೆಯವರನ್ನು ಚಿಕಿತ್ಸಾ ಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

Q

ಅನೊರೆಕ್ಸಿಯಾದಿಂದ ಬಳಲುತ್ತಿರುವವರ ಆರೈಕೆ

A

ನಿಮಗೆ ತಿಳಿದಿರುವವರಲ್ಲಿ ಅನೊರೆಕ್ಸಿಯಾ ಕಂಡುಬಂದರೆ ಅವರನ್ನು ಚಿಕಿತ್ಸೆ ಪಡೆಯಲು ಒಪ್ಪಿಸಿ. ಈ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಬಗ್ಗೆ ರಕ್ಷಣಾತ್ಮಕವಾಗಿ ವರ್ತಿಸಬಹುದು ಅಥವಾ ಈ ತೊಂದರೆಯಿಲ್ಲ ಎಂದು ಹೇಳಬಹುದು. ಆ ಕಾರಣ ನೀವು ಸಹನೆಯಿಂದ ವರ್ತಿಸಬೇಕಾಗುತ್ತದೆ. ಅವರಿಗೆ ತಿನ್ನಲು ಒತ್ತಾಯಿಸಬೇಡಿ. ನಿಮ್ಮ ಕಾಳಜಿಯನ್ನು ಪ್ರೀತಿಯಿಂದ ತಿಳಿಸಿ ಮತ್ತು ನೀವು ಅವರ ಜೊತೆ ಇರುವುದಾಗಿ ಭರವಸೆ ನೀಡಿ. ನಿಮ್ಮ ಮನೆಯಲ್ಲಿ ಯಾರಾದರೂ ಅನೊರೆಕ್ಸಿಯಾದಿಂದ ಬಳಲುತ್ತಿದ್ದರೆ, ಉಳಿದ ಸದಸ್ಯರು ಉತ್ತಮ ಪೌಷ್ಠಿಕ ಆಹಾರ ಸೇವಿಸುವಂತೆ ನೋಡಿಕೊಳ್ಳಿ. ಇದರಿಂದ ಸಮಸ್ಯೆಯಿರುವವರಿಗೆ ಒಳ್ಳೆಯ ಉದಾಹರಣೆ ದೊರೆಯುತ್ತದೆ.

Q

ಅನೊರೆಕ್ಸಿಯಾವನ್ನು ನಿಭಾಯಿಸುವುದು

A

ಅನೊರೆಕ್ಸಿಯಾದ ಚಿಕಿತ್ಸೆಯು ಬಹಳ ಕಾಲದವರೆಗೆ ನಡೆಯಬಹುದು ಮತ್ತು ನಿಮಗಾಗಿ ಸರಿಯಾದ ಡಯಟ್ ಮತ್ತು ಪೌಷ್ಠಿಕತೆಯ ಪ್ಲ್ಯಾನ್ ನೀಡಿರಬಹುದು. ಆದ್ದರಿಂದ ಮನೆಯವರು ಮತ್ತು ಸ್ನೇಹಿತರಿಂದ ದೂರವಿರಬೇಡಿ. ನಿಮ್ಮನ್ನು ಬೆಂಬಲಿಸುವವರ ಜೊತೆ ಸಮಯ ಕಳೆಯುವುದರಿಂದ ನಿಮಗೆ ಸಮಾಧಾನವಾಗುತ್ತದೆ. ಅನೊರೆಕ್ಸಿಯಾದ ಬಗ್ಗೆ ಓದಿ ತಿಳಿದುಕೊಳ್ಳಿ. ಇದರಿಂದ ತೂಕ ಹೆಚ್ಚಾಗುವ ಬಗ್ಗೆ ನಿಮಗಿರುವ ಭಯವು ಕೇವಲ ಒಂದು ಸಮಸ್ಯೆಯ ಲಕ್ಷಣವೆಂದು ತಿಳಿಯುತ್ತದೆ. ಸಪೋರ್ಟ್ ಗ್ರೂಪುಗಳನ್ನು ಸೇರುವುದರಿಂದಲೂ ನಿಮ್ಮ ಭಯವು ಕಡಿಮೆಯಾಗಬಹುದು. ನಿಮ್ಮ ಆತ್ಮೀಯರನ್ನು ನಂಬಿ ಮತ್ತು ಅವರೊಂದಿಗೆ ನಿಮ್ಮ ತೊಂದರೆಗಳನ್ನು ಹಂಚಿಕೊಳ್ಳಿ. ಇದು ನಿಮ್ಮ ಚಿಕಿತ್ಸೆಯ ಅವಧಿಯಲ್ಲಿ ಬಹಳ ಉಪಯೋಗಕರ.

Q

ಅಟಿಪಿಕಲ್ ಅನೊರೆಕ್ಸಿಯಾ

A

ಅಧ್ಯಯನದ ಪ್ರಕಾರ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದು ಬೇರೆ ಸಂಸ್ಕೃತಿಯಲ್ಲೂ ಇದೆ. ಆದರೆ ಇದರ ಲಕ್ಷಣಗಳು ಬೇರೆ ಬೇರೆಯಾಗಿರಬಹುದು. ಭಾರತ ಮತ್ತು ದಕ್ಷಿಣ ಏಶಿಯಾ ದೇಶಗಳಲ್ಲಿ ಈ ಸಮಸ್ಯೆ ಹೊಂದಿದವರಲ್ಲಿ ದೇಹದ ಸೌಂದರ್ಯದ ಕುರಿತಾಗಿ ತಪ್ಪು ಗ್ರಹಿಕೆ ಅಥವಾ ತೂಕ ಹೆಚ್ಚಾಗುವ ಭಯ ಕಂಡುಬರದಿರಬಹುದು (ನಾನ್ ಫ್ಯಾಟ್ ಫೋಬಿಕ್ ಅನೊರೆಕ್ಸಿಯಾ. ಅವರು ತಿನ್ನಲು ನಿರಾಕರಿಸುವಂತಹ ಇತರ ಲಕ್ಷಣಗಳನ್ನು ತೋರಿಸಬಹುದು. ಆದರೆ ಈ ನಡುವಳಿಕೆಗೆ ಕಾರಣವು ದೇಹಸೌಂದರ್ಯಕ್ಕೆ ಸಂಬಂಧಿಸಿದ್ದೇ ಆಗಿರಬೇಕೇಂದೇನೂ ಇಲ್ಲ. ಸಂಸ್ಕೃತಿಗೆ ಸಂಬಂಧಿಸಿದ ಅಂಶಗಳಿಂದಲೂ ಈ ಸಮಸ್ಯೆ ಉದ್ಭವಿಸಿರಬಹುದು. ಭಾರತದಲ್ಲಿ ಪಾಲಕರ ಒತ್ತಡ ಮತ್ತು ನಿರೀಕ್ಷೆಯನ್ನು ಪೂರೈಸಲಾಗದೇ ಮಕ್ಕಳು ತಮಗೆ ತಾವೇ ಶಿಕ್ಷೆ ನೀಡಿಕೊಳ್ಳುವ ಉದ್ದೇಶದಿಂದ ಊಟವನ್ನು ತ್ಯಜಿಸಬಹುದು. ಕೆಲ ದಿನಗಳಲ್ಲಿಯೇ ಇದು ಖಾಯಿಲೆಯಾಗಿ ಪರಿಣಮಿಸಬಹುದು. ಇದನ್ನು ಅಟಿಪಿಕಲ್ ಅನೊರೆಕ್ಸಿಯಾ ಎನ್ನುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org