ಆತಂಕ

Published on
Q

ಆತಂಕದ ಎಂದರೇನು?

A

ಪರೀಕ್ಷೆಗೆ ಮೊದಲು ನಡಗುವುದು ಅಥವಾ ಇಂಟರ್ವ್ಯೂ ಮೊದಲು ಅಂಗೈಗಳು ಬೆವರುವುದು ಏಕೆ ಎಂದು ಯೋಚಿಸಿದ್ದೀರೆ?  ಒಂದು ಮುಖ್ಯ ಕಾರ್ಯದ ಮೊದಲು ಆತಂಕ ಪಡುವುದು ಸಹಜ. ಒಮ್ಮೆ ಕೆಲಸ ಸುಗಮವಾಗಿ ಸಾಗುತ್ತಿದ್ದಂತೆ ಈ ಆತಂಕ ಕಡಿಮೆಯಾಗುತ್ತದೆ. ಇಂತಹ ಆತಂಕ, ನಾವು ಎಚ್ಚರಿಕೆಯಿಂದಿರಲು ಮತ್ತು ಕೆಲಸವನ್ನು ಉತ್ತಮವಾಗಿ ಮಾಡಲು ಸಹಾಯಕ.

ಆದರೆ, ಕೆಲವರು ಯಾವುದೇ ಸೂಕ್ತ ಕಾರಣವಿಲ್ಲದೆ ಅತೀವ ಆತಂಕ ಅನುಭವಿಸುತ್ತಾರೆ. ಒಂದು ವೇಳೆ ಇಂತಹ ಚಿಂತೆ ಮತ್ತು ಆತಂಕದ ಭಾವನೆಗಳನ್ನು ನಿಯಂತ್ರಿಸುವುದು ನಿಮಗೆ ಕಷ್ಟವೆನಿಸಿದರೆ ಮತ್ತು ಇದರಿಂದ ನಿಮ್ಮ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ತೊಂದರೆಯಾದರೆ, ಇದು ಆತಂಕದ ಸಮಸ್ಯೆ ಇರಬಹುದು.

 

Q

ಆತಂಕದ ಸಮಸ್ಯೆ ಮತ್ತು ಆತಂಕದ ಖಾಯಿಲೆಗಿರುವ ವ್ಯತ್ಯಾಸ

A

ನಿಮ್ಮ ಆತಂಕವು ಒಂದು ಮಾನಸಕ ಸಮಸ್ಯೆ ಎಂದು ಹೀಗೆ ಪತ್ತೆಮಾಡಿಕೊಳ್ಳಬಹುದು:

ಸಾಮಾನ್ಯ ಆತಂಕ

ಆತಂಕದ ಖಾಯಿಲೆ

ಖರ್ಚು, ಸಂದರ್ಶನ, ಪರೀಕ್ಷೆ ಅಥವಾ ಇತರ ಪ್ರಮುಖ ಘಟನೆಗಳ ಬಗ್ಗೆ ಚಿಂತೆ ಮಾಡುವುದು.

ಸೂಕ್ತ ಕಾರಣವೇ ಇಲ್ಲದೆ ಸದಾ ಚಿಂತೆ  ಮಾಡುವುದು. ಮತ್ತು ಇದರಿಂದ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಕಷ್ಟ ಪಡುವುದು.

ಸಾರ್ವಜನಿಕ ಕಾರ್ಯಕ್ರಮ ಅಥವಾ ದೊಡ್ಡ ಸಭೆಗೂ ಮುನ್ನ ಹೊಟ್ಟೆ ಕಿವುಚಿದಂಥ ಭಾವನೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರರು ಟೀಕೆ ಮಾಡಬಹುದು ಅಥವಾ ನಿಮ್ಮ ವರ್ತನೆಯಿಂದ ಮುಜುಗರವಾಗಬಹುದು ಎಂಬ ಅಳಕು.

ಅಪಾಯಕಾರಿ ವಸ್ತು, ಸ್ಥಳ ಅಥವಾ ಸನ್ನಿವೇಶದ ಬಗ್ಗೆ ಹೆದರಿಕೆ. ಉದಾಹರಣೆಗೆ ಒಂದು ಬೀದಿ ನಾಯಿ ಬೊಗಳಿದ್ದಕ್ಕೆ ಹೆದರುವುದು.

ಒಂದು ಸ್ಥಳ ಅಥವಾ ವಸ್ತುವಿನ ಬಗ್ಗೆ ಕಾರಣವಿಲ್ಲದೆ ತೀವ್ರ ಭೀತಿ. ಉದಾಹರಣೆಗೆ, ಲಿಫ್ಟ್ನಲ್ಲಿ ಸಿಕ್ಕಿಕೊಂಡರೆ ತಪ್ಪಿಸಿಕೊಳ್ಳಲು ಅಸಾಧ್ಯ ಎಂಬ ಆತಂಕದಿಂದ ಲಿಫ್ಟ್ ಬಳಸದಿರುವುದು.

ಪ್ರೀತಿಪಾತ್ರರನ್ನು ಕಳೆದುಕೊಂಡ ಆಘಾತಕಾರಿ ಘಟನೆಯ ನಂತರದ ದುಃಖ ಅಥವಾ ಚಿಂತೆ.

ಪದೇ ಪದೇ ಹಳೆಯದೆಲ್ಲ ನೆನಪಿನಲ್ಲಿ, ಕನಸುಗಳಲ್ಲಿ ಮರುಕಳಿಸುವುದು ಮತ್ತು ಹಿಂದೆ ನಡೆದ ಆಘಾತಕಾರಿ ಘಟನೆಯ ಬಗ್ಗೆ ನಿರಂತರ ಚಿಂತೆ.

ವೈಯಕ್ತಿಕವಾಗಿ  ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು.

ಸುತ್ತಮುತ್ತಲಿನ ಸಾಮಗ್ರಿಗಳನ್ನು ಪದೇ ಪದೇ ಜೋಡಿಸಿಡುವುದು ಮತ್ತು  ಅತಿಯಾಗಿ ಸ್ವಚ್ಛಗೊಳಿಸುವುದು.

ದೊಡ್ಡ ಪಂದ್ಯಕ್ಕೂ ಮೊದಲು ಅತಿಯಾಗಿ ಬೆವರುವುದು.

ಸಹಜ ಸಂದರ್ಭದಲ್ಲೂ “ನಾನು ಸಾಯುತ್ತಿದ್ದೇನೆ”, “ನನಗೇನೋ ತೊಂದರೆ ಆಗುತ್ತದೆ” ಎಂದು ವಿಪರೀತ ಚಿಂತೆಯಿಂದ ತಳಮಳಗೊಳ್ಳುವುದು.

 

 

 

Q

ಆತಂಕದ ಖಾಯಿಲೆಯ ಕಾರಣಗಳು

A

ಖಾಯಿಲೆಗೆ ಕಾರಣವಾಗುವ ಸಾಮಾನ್ಯ ಅಂಶಗಳು:

  • ಕೌಟುಂಬಿಕ ಇತಿಹಾಸ: ಕುಟುಂಬದಲ್ಲಿ ಯಾರಿಗಾದರೂ ಮಾನಸಿಕ ತೊಂದರೆ ಇದ್ದರೆ ಇತರ ಸದಸ್ಯರಲ್ಲಿಯೂ ಆತಂಕದ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ಒಸಿಡಿ ಸಮಸ್ಯೆಯು ಕುಟುಂಬದ ಮುಂದಿನ ತಲೆಮಾರಿಗೂ ವರ್ಗಾವಣೆಯಾಗಬಹುದು.

  • ಒತ್ತಡ: ಕೆಲಸದಲ್ಲಿನ ಒತ್ತಡ, ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ದುಃಖ ಅಥವಾ ಬಿಕ್ಕಟ್ಟಿನ ಸಂಬಂಧಗಳು ಕೂಡ ಆತಂಕದ ಸಮಸ್ಯೆಗೆ ಕಾರಣವಾಗಬಹುದು.

  • ಆರೋಗ್ಯ ಸಮಸ್ಯೆಗಳು: ಥೈರಾಯ್ಡ್, ಅಸ್ತಮಾ, ಡಯಾಬಿಟಿಸ್ ಅಥವಾ ಹೃದಯದ ಸಮಸ್ಯೆಗಳಿಂದಲೂ ಕೂಡ ಆತಂಕ ಉಂಟಾಗಬಹುದು. ಅಂತೆಯೇ ಖಿನ್ನತೆಯಿಂದ ಬಳಲುತ್ತಿರುವವರು ಆತಂಕದ ಲಕ್ಷಣಗಳನ್ನು ಎದುರಿಸಬಹುದು. ಉದಾಹರಣೆಗೆ, ಕೆಲವರು ದೀರ್ಘಾವಧಿಯಿಂದ ಖಿನ್ನತೆಯನ್ನು ಅನುಭವಿಸುತ್ತಿದ್ದರೆ, ಕೆಲಸದಲ್ಲಿನ ಕ್ಷಮತೆ ಕಡಿಮೆಯಾಗಬಹುದು. ಇದರಿಂದ ಕೂಡ ಒತ್ತಡ ಹೆಚ್ಚಾಗಿ ಆತಂಕ ಉಂಟಾಗಬಹುದು.

  • ಮಾದಕ ವಸ್ತುಗಳ ಬಳಕೆ: ಮದ್ಯಪಾನ, ತಂಬಾಕು ಮತ್ತಿತರ ಮಾದಕ ಪದಾರ್ಥಗಳನ್ನು ಅತಿಯಾಗಿ ಬಳಸುವವರಲ್ಲಿ ಆ ಪದಾರ್ಥದ ಪ್ರಭಾವ ಕಡಿಮೆಯಾಗುತ್ತಿದ್ದಂತೆ (ವಿಶೇಷವಾಗಿ ಅವುಗಳ ಸೇವನೆಯನ್ನು ತ್ಯಜಿಸುವ ಸಂದರ್ಭದಲ್ಲಿ) ಆತಂಕದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

  • ವ್ಯಕ್ತಿತ್ವದ ಕಾರಣಗಳು: ಪ್ರತಿಯೊಂದರಲ್ಲೂ ಪರ್ಫೆಕ್ಟ್ ಆಗಿರಲು ಬಯಸುವವರು ಅಥವಾ ಕಂಟ್ರೋಲ್ ಫ್ರೀಕ್ ವ್ಯಕ್ತಿತ್ವವನ್ನು ಹೊಂದಿರುವವರು ಆತಂಕದ ಸಮಸ್ಯೆಯಿಂದ ಬಳಲಬಹುದು.

Q

ಆತಂಕ ಖಾಯಿಲೆಯ ಗುಣಲಕ್ಷಣಗಳೇನು?

A

ನಾವೆಲ್ಲರೂ ಯಾವುದಾದರೂ ಒಂದು ಸಂದರ್ಭದಲ್ಲಿ ಆತಂಕವನ್ನು ಅನುಭವಿಸುತ್ತೇವೆ. ಹೀಗಾಗಿ ಯಾವಾಗ ಆತಂಕವು ಖಾಯಿಲೆಯಾಗುತ್ತದೆ ಎಂದು  ಪತ್ತೆಮಾಡುವುದು ಕಷ್ಟ. ಬಹಳ ದಿನಗಳ ಕಾಲ ಈ ರೀತಿಯ ಆತಂಕದಿಂದ ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗುತ್ತಿದ್ದರೆ ತಜ್ಞರ ಸಹಾಯ ಪಡೆಯುವುದು ಒಳ್ಳೆಯದು.

ಆತಂಕದ ಖಾಯಿಲೆಯ ಸಾಮಾನ್ಯ ಗುಣಲಕ್ಷಣಗಳು:

  • ಹೃದಯ ಬಡಿತ ಹೆಚ್ಚಾಗುವುದು ಮತ್ತು ವೇಗವಾದ ಉಸಿರಾಟ

  • ಮಾಂಸಖಂಡಗಳಲ್ಲಿ ಬಿಗಿತ

  • ಎದೆಯ ಭಾಗ ಬಿಗಿದಂತನಿಸುವುದು

  • ಅನಗತ್ಯ ವಿಷಯಗಳ ಬಗ್ಗೆ ಚಿಂತೆ, ಗೀಳು

  • ಉಸಿರಾಟದಲ್ಲಿ ಏರುಪೇರು

ನಿಮ್ಮಸ್ನೇಹಿತರು ಅಥವಾ ಕುಟುಂಬದ ಸದಸ್ಯರಲ್ಲಿ ಈ ರೀತಿಯ ವರ್ತನೆಯನ್ನು ಗಮನಿಸಿದರೆ, ಮಾನಸಿಕ ಆರೋಗ್ಯ ಪರಿಣಿತರನ್ನು ಭೇಟಿಯಾಗುವಂತೆ ಸಲಹೆ ನೀಡಿ.

 

Q

ಆತಂಕದ ವಿಧಗಳು

A

ಆತಂಕದ ಸಮಸ್ಯೆ ವಿವಿಧ ರೀತಿಯದ್ದಾಗಿರುತ್ತದೆ:

ಸಾಮಾನ್ಯ ಆತಂಕದ ಖಾಯಿಲೆ (Generalized Anxiety Disorder-GAD)

ಇದರಿಂದ ಬಳಲುತ್ತಿರುವ ವ್ಯಕ್ತಿ ಹಲವು ಘಟನೆಗಳು ಮತ್ತು ಸನ್ನಿವೇಶಗಳಲ್ಲಿ ಅತಿಯಾದ ಆತಂಕ ಮತ್ತು ಚಿಂತೆಯನ್ನು ಅನುಭವಿಸುತ್ತಾರೆ. ಇದನ್ನು ನಿಯಂತ್ರಿಸಲು ಆಗದೇ ಸದಾ ತುದಿಗಾಲ ಮೇಲೆ ನಿಂತಂತೆ ಇರುತ್ತಾರೆ. ಇವರಿಗೆ ಯಾವುದೇ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಚಿಂತೆ ಇರುವುದಿಲ್ಲ ಅಥವಾ ನಿರ್ದಿಷ್ಟ ಪ್ರಚೋದನೆಯೂ ಇರುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಸಣ್ಣ ವಿಷಯಗಳಿಗೂ ಆತಂಕ ಪಡುತ್ತಾರೆ.

ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (Obsessive Compulsive Disorder-OCD)

ಈ ಸಮಸ್ಯೆ ಇರುವ ವ್ಯಕ್ತಿ ಕಾರಣವಿಲ್ಲದೆ ಹಲವು ವಿಷಯಗಳಿಗೆ ಆತಂಕ ಪಡುತ್ತಾರೆ. ನಿರ್ದಿಷ್ಟ ಕೆಲಸವನ್ನು ಪದೇ ಪದೇ ಮಾಡಿದರೆ ಆತಂಕ ಕಡಿಮೆಯಾಗಬಹುದೆಂದು ತಿಳಿದಿರುತ್ತಾರೆ. ಹಾಗಾಗಿ ಅದು ಸರಿಯಲ್ಲ ಎಂದು ಗೊತ್ತಿದ್ದರೂ ಪದೇ ಪದೇ ಮಾಡಿದ್ದನ್ನೇ ಮಾಡುತ್ತಾರೆ. ಉದಾಹರಣೆಗೆ, ಕೀಟಾಣು ಮತ್ತು ಕೊಳೆಯ ಬಗ್ಗೆ ಭಯವಿರುವ ವ್ಯಕ್ತಿ ಪದೇ ಪದೇ ಕೈಗಳನ್ನು ಅಥವಾ ಪಾತ್ರೆಗಳನ್ನು ತೊಳೆಯುತ್ತಿರುತ್ತಾರೆ.

ಸಾಮಾಜಿಕ ಭಯ/ಸಾಮಾಜಿಕ ಆತಂಕದ ಖಾಯಿಲೆ (Social Anxiety Disorder - SAD)

ಸಾಮಾಜಿಕ ಆತಂಕ ಸಮಸ್ಯೆ ಇರುವವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಮದುವೆ, ಮುಂಜಿ ಇನ್ನಿತರ ಸಮಾರಂಭಗಳಲ್ಲಿ ಬಾಗವಹಿಸಲು ಆತಂಕ ಪಡುತ್ತಾರೆ. ತನ್ನ ವರ್ತನೆಯಿಂದ, ಮಾತಿನಿಂದ ಮುಜುಗರಕ್ಕೀಡಾಗಬಹುದು ಅಥವಾ ಇನ್ನೊಬ್ಬರ ಮಾತಿನಿಂದ ಅವಮಾನ ಆಗಬಹುದೆಂದು ಭಯ ಪಡುತ್ತಾರೆ. ಸಣ್ಣದೊಂದು ಭಾಷಣ ಮಾಡುವುದು ಅಥವಾ ಜನರ ಜೊತೆ ಊಟ ಮಾಡಲೂ ಸಹ ಹಿಂಜರಿಯುತ್ತಾರೆ.

ನಿರ್ದಿಷ್ಟ ಭೀತಿಗಳು

ಒಂದು ವಿಷಯ ಅಥವಾ ವಸ್ತುವಿನ ಬಗ್ಗೆ ವಿವರಿಸಲಾಗದಷ್ಟು ಭಯವನ್ನು ಫೋಬಿಯಾ ಎನ್ನಬಹುದು. ಫೋಬಿಯಾ ಇರುವವರು ತಮಗೆ ಭಯ ಮತ್ತು ಆತಂಕವನ್ನುಂಟುಮಾಡುವ ವಸ್ತು ಅಥವಾ ಸನ್ನಿವೇಶದಿಂದ ತಪ್ಪಿಸಿಕೊಂಡು ದೂರ ಹೋಗಲು ಬಯಸುತ್ತಾರೆ. ವಿಮಾನದಲ್ಲಿ ಹಾರುವುದಕ್ಕೆ, ಜನಜಂಗುಳಿಯಲ್ಲಿ ಇರುವುದಕ್ಕೆ ಮತ್ತು ಅಪಾಯಕಾರಿಯಲ್ಲದ ಜೇಡ ಮತ್ತು ಅತಿ ಎತ್ತರದ ಕಟ್ಟಡಗಳನ್ನು ನೋಡಿದರೂ ಅವರು ಭಯಬೀಳುತ್ತಾರೆ.

 

ಆಘಾತ ನಂತರದ ಆತಂಕ (Post Traumatic Stress Disorder - PTSD)

ಅಪಘಾತ,  ಪ್ರಕೃತಿ ವಿಕೋಪ, ದೌರ್ಜನ್ಯ ಮುಂತಾದ ತೀವ್ರ ಆಘಾತಕಾರಿ ಘಟನೆಗೆ ಸಾಕ್ಷಿಯಾದರೆ ಅಥವಾ ಅಂತಹ ಘಟನೆಗಳ ಭಾಗವಾಗಿದ್ದರೆ ಅದನ್ನು ಪದೇ ಪದೇ ನೆನಪಿಸಿಕೊಂಡು ವ್ಯಕ್ತಿ ತೀವ್ರ ಭಯ ಮತ್ತು ಆತಂಕ ಅನುಭವಿಸುತ್ತಾರೆ. ವ್ಯಕ್ತಿಯು ನಿದ್ರೆ ಮಾಡಲು ಅಥವಾ ವಿಶ್ರಾಂತಿ ಪಡೆಯಲೂ ಕೂಡ ತೊಂದರೆ ಪಡುತ್ತಾರೆ.

ಪ್ಯಾನಿಕ್ ಡಿಸಾರ್ಡರ್ (Panic Disorder)

ಪ್ಯಾನಿಕ್ ಡಿಸಾರ್ಡರ್ ಇರುವವರು ತಲೆತಿರುಗುವಿಕೆ, ಉಸಿರು ಕಟ್ಟುವುದು ಮತ್ತು ಅತಿಯಾಗಿ ಬೆವರುವುದು ಇನ್ನಿತರ ಗುಣಲಕ್ಷಣಗಳನ್ನು ಅನುಭವಿಸುತ್ತಾರೆ. 'ನಾನು ಸಾಯುತ್ತಿದ್ದೇನೆ', ’ನನಗೆ ಏನು ಮಾಡಲೂ ತೋಚುತ್ತಿಲ್ಲ’,  ಎಂಬ ಭಾವನೆಗಳನ್ನು ಅನುಭವಿಸುತ್ತಾರೆ. ಮತ್ತೊಂದು ಪ್ಯಾನಿಕ್ ಅಟ್ಯಾಕ್ ಆಗಬಹುದೆಂಬ ಭಯ ಇವರಿಗಿರುತ್ತದೆ.

 

Q

ಆತಂಕ ಖಾಯಿಲೆಗೆ ಚಿಕಿತ್ಸೆ

A

ಆತಂಕದ ಖಾಯಿಲೆ ಗುಣವಾಗುತ್ತದೆಯಾದರೂ, ಈ ಸಮಸ್ಯೆಯ ಗಂಭೀರತೆಯನ್ನು ಕಡೆಗಣಿಸುವಂತಿಲ್ಲ. ಈ ಮೇಲಿನ ಗುಣಲಕ್ಷಣದಿಂದ ಬಳಲುತ್ತಿದ್ದರೆ, ವೃತ್ತಿಪರರಿಂದ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯಬೇಕು. ಔಷಧಗಳು, ಆಪ್ತಸಲಹೆ ಅಥವಾ ಇವೆರಡನ್ನೂ ಒಟ್ಟಿಗೆ ನೀಡಿ ಆತಂಕವನ್ನು ಗುಣಪಡಿಸಬಹುದು..

 

Q

ಆತಂಕದಿಂದ ಬಳಲುತ್ತಿರುವವರ ಆರೈಕೆ

A

ಯಾವುದೇ ರೀತಿಯ ಅನಾರೋಗ್ಯ ಉಂಟಾದಾಗ ಸಮಸ್ಯೆಯನ್ನು ತಿಳಿದು ಸೂಕ್ತ ಚಿಕಿತ್ಸೆ ಪಡೆಯುವ ಹಾಗೆ ಇದರಲ್ಲೂ ವ್ಯಕ್ತಿಯ ಸಮಸ್ಯೆ ಏನೆಂಬುದನ್ನು ತಿಳಿಯಬೇಕು. ಇದರಿಂದ ಅವರ ಸ್ಥಿತಿಯ ಬಗ್ಗೆ ನೀವು ಅರಿತು ಅದಕ್ಕೆ ತಕ್ಕ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತದೆ. ಆತಂಕದ ಖಾಯಿಲೆಯಿಂದ ಬಳಲುತ್ತಿರುವವರೊಂದಿಗೆ ತಾಳ್ಮೆಯಿಂದ ಮಾತನಾಡಬೇಕು. ಹಾಗೆಯೇ, ಅವರಿಗೆ ಒತ್ತಡ ಅಥವಾ ಭಯದಿಂದ ಹೊರಗೆ ಬರಲು ಪ್ರೋತ್ಸಾಹ ನೀಡಬೇಕು. ನೀವು ಹೇಗೆ ಸಹಾಯ ಮಾಡಬಹುದೆಂದು ತಜ್ಞರಿಂದ ತಿಳಿಯಿರಿ.

 

Q

ಆತಂಕದ ಖಾಯಿಲೆಯನ್ನು ನಿಭಾಯಿಸುವುದು

A

ನಿಮ್ಮ ಆತಂಕವನ್ನು ಎದುರಿಸಲು ಹೀಗೆ ಮಾಡಿ: ಧನಾತ್ಮಕ ಚಿಂತನೆ ಮಾಡುವುದು, ಒತ್ತಡ ನಿಭಾಯಿಸುವ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು, ಆರೋಗ್ಯಕರ ಊಟ, ನಿದ್ದೆ ಮಾಡುವುದು ಮತ್ತು ವಿಶ್ರಾಂತಿ ಪಡೆಯುವುದು ಇತ್ಯಾದಿ. ನೀವಾಗೇ ಆತಂಕವನ್ನು ನಿರ್ವಹಿಸುವುದು ಒಂದು ಸವಾಲಿನ ಕೆಲಸವಾಗಿರಬಹುದು. ಅದರಲ್ಲೂ ತೀವ್ರ ಆತಂಕವಿದ್ದರೆ ತಜ್ಞರ ಸಹಾಯ ಪಡೆಯುವುದು ಉತ್ತಮ.

 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org