ಚಂಚಲತೆ ಮತ್ತು ಅತಿ ಚಟುವಟಿಕೆಯ ಖಾಯಿಲೆ(ADHD)

Q

ಅತಿ ಚಟುವಟಿಕೆಯ ಸಮಸ್ಯೆ (Attention Deficit Hyperactivity Disorder) ಎಂದರೇನು?

A

ಹತ್ತು ವರ್ಷದ ಶೃತಿ ತುಂಬಾ ಚುರುಕಾಗಿರುವುದೇ ಆಕೆಯ ಸಮಸ್ಯೆ! ಶಾಲೆಯಲ್ಲಿ ಕುಳಿತಲ್ಲಿ ಕೂರೋದಿಲ್ಲ. ಕ್ಲಾಸಿನಲ್ಲಿರುವ ಇತರರಿಗೆಲ್ಲ ಕಿರಿಕಿರಿ ಮಾಡುತ್ತಾಳೆ. ಪಾಠದ ಮೇಲೂ ಅವಳು ಗಮನವಿರುವುದಿಲ್ಲ. ಇನ್ನು, ಆಟದಲ್ಲಂತೂ ಅತಿಯಾಗಿ ಕ್ರಿಯಾಶೀಲಳಾಗಿದ್ದಾಳೆ. ಇತರ ಮಕ್ಕಳು ಶೃತಿ ಜತೆ ಆಟಕ್ಕೆ ಹೋದರೆ, ಅವರನ್ನು ಬದಿಗೊತ್ತಿ ತಾನೇ ಆಟದ ಅಂಗಳದ ತುಂಬಾ ಆವರಿಸಿಕೊಳ್ಳುತ್ತಾಳೆ. ತನ್ನದೇ ನಿಯಮಗಳನ್ನು ಹೇರುತ್ತಾಳೆ. ಹೀಗಾಗಿ ಇವಳ ಜತೆ ಆಟಕ್ಕೆ ಹೋದವರಿಗೆ ಬೇಸರವೇ ಕಟ್ಟಿಟ್ಟ ಬುತ್ತಿ. ಇನ್ನು ಮನೆಯಲ್ಲಂತೂ, ತಂಗಿ ಅತಿರೇಕವಾಗಿ ವರ್ತಿಸುವುದು ಅವಳ ಸೋದರಿಯರಿಗೆ ಬೇಸರವನ್ನುಂಟುಮಾಡುತ್ತಿತ್ತು. ಶ್ರುತಿ ಬೇಗ ಕೋಪಿಸಿಕೊಳ್ಳುತ್ತಿದ್ದಳು. ಹಿಂದೆ ಮುಂದೆ ಆಲೋಚಿಸದೆ ತಂದೆತಾಯಿಗಳ ಮೇಲೆ ಸಹೋದರಿಯರ ಮೇಲೆ ಸಿಟ್ಟು ತೋರಿಸುತ್ತಿದ್ದಳು. ಆದರೆ ತನ್ನ ವರ್ತನೆಯಿಂದ ಇತರರಿಗೆ ಉಂಟಾಗುವ ಬೇಸರದ ಬಗ್ಗೆ ಅವಳಿಗೆ ಕಲ್ಪನೆಯೇ ಇಲ್ಲ!

ಇದೊಂದು ಕಾಲ್ಪನಿಕ ಕಥೆ. ನೀವು ಈ ತರಹದ ಮಕ್ಕಳನ್ನು ನಿಮ್ಮ ಸುತ್ತಮುತ್ತಲೂ ಕೂಡ ನೋಡಿರಬಹುದು. ಅಂತಹ ಮಕ್ಕಳಲ್ಲಿರುವ ತೊಂದರೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿ ಇದನ್ನು ಬರೆಯಲಾಗಿದೆ.

ಈ ಸ್ಥಿತಿಯನ್ನು ನಾವು ಅತಿ ಚಟುವಟಿಕೆಯ  ಸಮಸ್ಯೆ (ADHD) ಎಂದು ಕರೆಯುತ್ತೇವೆ. ಇದು ನರಗಳಿಗೆ ಸಂಬಂಧಿಸಿದ ಸಮಸ್ಯೆ. ಕಲಿಕೆ, ಏಕಾಗ್ರತೆ ಮತ್ತು ವರ್ತನೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಸಮಸ್ಯೆಯಿರುವ ಮಕ್ಕಳು ಶಾಲೆ ಹಾಗೂ ಮನೆಗಳಲ್ಲಿ ನಿತ್ಯದ ಕೆಲಸಗಳನ್ನು ನಿರ್ವಹಿಸಲು ಕಷ್ಟಪಡುತ್ತಾರೆ. ಸಾಮಾನ್ಯವಾಗಿ ಬಾಲ್ಯದಿಂದ ಆರಂಭವಾಗುವ ಈ ಸಮಸ್ಯೆ ಹದಿಹರೆಯ ಹಾಗೂ ಪ್ರೌಡಾವಸ್ಥೆಯವರೆಗೂ ಸಮಸ್ಯೆಗಳು ಉಳಿದುಕೊಳ್ಳಬಹುದು.

Q

ಯಾವುದನ್ನು ಎಡಿಎಚ್ ಡಿ ಎಂದು ಪರಿಗಣಿಸಲಾಗುವುದಿಲ್ಲ?

A

ದುಡುಕು ಪೃವ್ರತ್ತಿಯನ್ನು ಪ್ರದರ್ಶಿಸುವುದು, ಅತಿಯಾಗಿ ಕ್ರಿಯಾಶೀಲರಾಗಿರುವುದು, ಹೆಚ್ಚು ಮಾತನಾಡುವುದು, ಆಟವಾಡುವಾಗ ಸ್ನೇಹಿತರ ಜತೆ ಜಗಳಾಡುವುದು, ಪಾಠದ ಬಗ್ಗೆ ಹೆಚ್ಚು ಗಮನವಿಲ್ಲದಿರುವುದು, ಇವೆಲ್ಲವೂ ಎಲ್ಲ ಮಕ್ಕಳ ಸಹಜ ಪ್ರವೃತ್ತಿ. ಅವರ ದೈನಂದಿನ ಹಾಗೂ ಶಾಲೆಯ ಚಟುವಟಿಕೆಗಳಿಗೆ ಇವು ಗಮನಾರ್ಹ ಪ್ರಮಾಣದಲ್ಲಿ ಅಡ್ಡಿಯುಂಟುಮಾಡುವುದಿಲ್ಲ. ಹೀಗಾಗಿ ಇದನ್ನು ಎಡಿಎಚ್‌ಡಿ ಎಂದು ಪರಿಗಣಿಸಲಾಗದು.

ನರಶಾಸ್ತ್ರದ ಸಮಸ್ಯೆಯಾಗಿರುವ ನಿರ್ಧಿಷ್ಟ ಕಲಿಯುವ ತೊಂದರೆಗಳು (learning disability) ಓದುವುದು, ಬರೆಯುವುದು, ಮಾತನಾಡುವುದು ಹಾಗೂ ಗಣಿತ ಕೌಶಲ್ಯಗಳು ಇತ್ಯಾದಿ ಕಲಿಯುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ.   ಎಡಿಎಚ್‌ಡಿಯನ್ನು ಈ ತೊಂದರೆಯ ಲಕ್ಷಣಗಳೆಂದು ತಪ್ಪಾಗಿ ಭಾವಿಸಬಾರದು.

Q

ಎ.ಡಿ.ಎಚ್.ಡಿ ವಿಧಗಳು

A

ಸಾಮಾನ್ಯವಾಗಿ ಎ.ಡಿ.ಎಚ್‌.ಡಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಎರಡು ಪ್ರಮುಖವಾಗಿದ್ದು, ಮೂರನೆಯದು ಮೊದಲಿನೆರಡವುಗಳ ಸಮ್ಮಿಶ್ರಣವಾಗಿದೆ.

 • ಹಠಾತ್‌ ಪ್ರವೃತ್ತಿಯ, ಹೈಪರ್ ಆಕ್ಟಿವ್-ಇಂಪಲ್ಸಿವ್ ವಿಧದ ಎಡಿಎಚ್‌ಡಿ (Hyperactive-impulsive type): ತುಂಬಾ ಚಿಕ್ಕ ವಯಸ್ಸಿನಲ್ಲೇ ಈ ತೊಂದರೆಯನ್ನು ಗುರುತಿಸಲಾಗುತ್ತದೆ.

 • ನಿರ್ಲಕ್ಷ್ಯದ ಎಡಿಎಚ್‌ಡಿ (Inattentive type): ಈ ರೀತಿಯ ತೊಂದರೆಗೆ ಒಳಗಾಗುವ ಮಕ್ಕಳು ಏಕಾಗ್ರತೆ ಮತ್ತು ಒಂದೇ ಚಟುವಟಿಕೆಯನ್ನು ದೀರ್ಘಕಾಲದವರೆಗೆ ಮಾಡಲಾಗದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಸಣ್ಣ ವಯಸ್ಸಿನಲ್ಲಿ ಇಂತಹ ಸಮಸ್ಯೆಯನ್ನು ಪೋಷಕರು ಅಲಕ್ಷಿಸಬಹುದಾದ ಅಥವಾ ಗುರುತಿಸದೇ ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಕ್ಕಳು ಬೆಳೆದಂತೆಲ್ಲ ಸಮಸ್ಯೆಯೂ ಬೆಳೆಯುತ್ತದೆ. ದೊಡ್ಡವರಾಗುತ್ತಿದ್ದಂತೆ ಜವಾಬ್ದಾರಿ ಹೆಚ್ಚುವುದರಿಂದ ನಿತ್ಯದ ಕೆಲಸಗಳನ್ನು ನಿರ್ವಹಿಸುವಲ್ಲಿ ಮತ್ತು ಹೆಚ್ಚು ಸುಸಂಘಟಿತವಾಗಿ ಮಾಡುವಲ್ಲಿ ಅಂತಹ ಮಕ್ಕಳು ಕಷ್ಟಪಡುವುದು ಸ್ಪಷ್ಟವಾಗಿ ಕಾಣತೊಡಗುತ್ತದೆ.

ಕಲಿಯುವ ತೊಂದರೆ ಮತ್ತು ಎಡಿಎಚ್‌ಡಿ ನಡುವಣ ಸಾಮ್ಯತೆ ಮತ್ತು ಭಿನ್ನತೆಗಳು

ತಾಂತ್ರಿಕವಾಗಿ ಎಡಿಎಚ್‌ಡಿ ಕಲಿಯುವ ತೊಂದರೆಯಲ್ಲ (learning disability-LD). ಆದರೆ ಕಲಿಕೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಶೇ. 15-20 ರಷ್ಟು ಮಕ್ಕಳಲ್ಲಿ ಕಲಿಯುವ ತೊಂದರೆ ಮತ್ತು ಎಡಿಎಚ್‌ಡಿ ಎರಡೂ ಇರುವುದು ಕಂಡುಬಂದಿದೆ. ಹೀಗಾಗಿ ಎರಡೂ ಸ್ಥಿತಿಗಳಲ್ಲಿನ ವ್ಯತ್ಯಾಸ ಮತ್ತು ಹೋಲಿಕೆ ಇವೆರಡನ್ನೂ ಪೋಷಕರು ತಿಳಿದುಕೊಳ್ಳಬೇಕಿರುವುದು ಅತ್ಯವಶ್ಯ. ಮಾನಸಿಕ ಆರೋಗ್ಯ ಪರಿಣಿತರು ಇವುಗಳ ಗುಣಲಕ್ಷಣಗಳು, ವೈದ್ಯಕೀಯ ಇತಿಹಾಸ ಮುಂತಾದವುಗಳನ್ನು ಪರೀಕ್ಷಿಸುತ್ತಾರೆ ಮತ್ತು ಇತರ ಸಂಯುಕ್ತ ರೋಗಸೂಚಕಗಳ ಇರುವಿಕೆಯನ್ನು ಅಲ್ಲಗಳೆಯಲು ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸುತ್ತಾರೆ.

ಎ.ಡಿ.ಎಚ್.ಡಿ

ಕಲಿಯುವ ತೊಂದರೆ (LD)

ಸಾಮ್ಯತೆಗಳು

ಮೆದುಳು ಯಾವರೀತಿ ಮಾಹಿತಿಯನ್ನು ಸ್ವೀಕರಿಸುತ್ತದೆ, ಅವುಗಳನ್ನು ಗ್ರಹಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ ಎಂಬ ಅಂಶಗಳನ್ನು ಪ್ರಭಾವಿಸುವ ನರವೈದ್ಯಕೀಯ ಸ್ಥಿತಿ.

ಮೆದುಳು ಯಾವರೀತಿ ಮಾಹಿತಿಯನ್ನು ಸ್ವೀಕರಿಸುತ್ತದೆ, ಅವುಗಳನ್ನು ಗ್ರಹಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ ಎಂಬ ಅಂಶಗಳನ್ನು ಪ್ರಭಾವಿಸುವ ನರವೈದ್ಯಕೀಯ ಸ್ಥಿತಿ.

ಭಿನ್ನತೆಗಳು

ನಿರಂತರವಾಗಿ ಕಂಡುಬರುವ ಅತಿಯಾದ ಕ್ರಿಯಾಶೀಲತೆ, ಹಠಾತ್ ಪ್ರವೃತ್ತಿ ಮತ್ತು ನಿರ್ಲಕ್ಷತೆ ಮುಂತಾದ ಲಕ್ಷಣಗಳನ್ನು ನಡುವಳಿಕೆಯಲ್ಲಿ ತೋರ್ಪಡಿಸುವ ತೀವ್ರ ಸ್ವರೂಪದ ತೊಂದರೆ.

ಮಾಹಿತಿಯನ್ನು ಸ್ವೀಕರಿಸುವ, ಸಂಗ್ರಹಿಸುವ ಮತ್ತು ಬಳಸುವ ವಿಧಾನವನ್ನು ಪ್ರಭಾವಿಸಿ ಆ ಮೂಲಕ ಕಲಿಯುವ ಸಾಮರ್ಥ್ಯವನ್ನು ಅಡ್ಡಿಮಾಡುವ ತೊಂದರೆಗಳ ಒಂದು ಗುಂಪು.

ವಸ್ತುಗಳನ್ನು ಕ್ರಮವಾಗಿ ಜೋಡಿಸಿಡುವುದು, ಹೊಸ ವಿಷಯಗಳನ್ನು ಕಲಿಯುವುದು, ಲಕ್ಷ್ಯವಹಿಸುವುದು, ವಿವರಗಳ ಮೇಲೆ ಗಮನವಿಡುವುದು, ಕೆಲಸ ಮಾಡುವಾಗ ಸೂಚನೆಗಳು ಅಥವಾ ನಿಯಮಗಳನ್ನು ಪಾಲಿಸುವುದು, ನಿಯಂತ್ರಣವಿಲ್ಲದ ನಡುವಳಿಕೆ, ಮುಂತಾದ ಕಾರ್ಯಗಳಲ್ಲಿ ಸಮಸ್ಯೆ ಕಂಡುಬರುವುದು.

ಕೇಳುವುದು, ಓದುವುದು, ಬರೆಯುವುದು, ಕಾಗುಣಿತ, ಗಣಿತ ಮುಂತಾದ ವಿಷಯಗಳನ್ನು ಕಲಿಯಲು ಕಷ್ಟಪಡುವುದು. ಇದರ ಪರಿಣಾಮವಾಗಿ ಡಿಸ್ಗ್ರಾಫಿಯಾ, ಡಿಸ್ಪ್ರಾಕ್ಸಿಯಾ ಮತ್ತು ಡಿಸ್ಕ್ಯಾಲ್ಕುಲಿಯಾ ಎಂದು ಕರೆಯಲ್ಪಡುವ ಸಮಸ್ಯೆಗಳುಂಟಾಗುತ್ತವೆ.

ಈ ತೊಂದರೆಯನ್ನು ನಿವಾರಿಸಲು ಸಾಮಾನ್ಯವಾಗಿ ಔಷಧಗಳು ನೀಡಲಾಗುತ್ತದೆ ಅಥವಾ ತಜ್ಞರು ಸೂಕ್ತವಾದ ಥೆರಪಿಯನ್ನು ಅನುಸರಿಸುತ್ತಾರೆ. ಮಧ್ಯಸ್ಥಿಕೆಯ ತರಬೇತಿ ವಿಧಾನಗಳು (early intervention) ಅಥವಾ ಪರಿಹಾರೋಪಾಯ ಶಿಕ್ಷಣ ವಿಧಾನಗಳನ್ನು (remedial education) ಇದು ಒಳಗೊಳ್ಳಬಹುದು.

ಕಲಿಕೆಯ ಪರ್ಯಾಯ ವಿಧಾನಗಳಾದ ಪರಿಹಾರೋಪಾಯ ಶಿಕ್ಷಣ, ಮಧ್ಯಸ್ಥಿಕೆಯ ತರಬೇತಿ  ವಿಧಾನಗಳ (IEP) ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ.

Q

ಎ.ಡಿ.ಎಚ್‌.ಡಿ ಉಂಟಾಗಲು ಕಾರಣವೇನು?

A

ಈ ತೊಂದರೆಯು ಯಾಕೆ ಕಾಣಿಸಿಕೊಳ್ಳುತ್ತದೆ ಎಂಬ ಬಗ್ಗೆ ವೈದ್ಯರಲ್ಲಿ ನಿರ್ದಿಷ್ಟ ಅಭಿಪ್ರಾಯಗಳಿಲ್ಲ. ಅನುವಂಶೀಯತೆ ಹಾಗೂ ಸಣ್ಣ ಪ್ರಮಾಣದ ಹಾನಿ ಇದಕ್ಕೆ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಏಕಾಗ್ರತೆ, ಸಂಘಟನೆ ಮತ್ತು ಸಂವೇದನೆಗಳನ್ನು ನಿರ್ವಹಿಸುವ ನ್ಯುರೋಟ್ರಾನ್ಸ್ಮಿಟರ್ ಸರಿಯಾಗಿ ಕೆಲಸ ಮಾಡುವುದಿಲ್ಲ.

ಎಡಿಎಚ್ ಡಿ ಉಂಟಾಗಲು ಕೆಲವು ಕಾರಣಗಳು :

 • ವಂಶವಾಹಿಗಳು: ಮೆದುಳಿನಲ್ಲಿರುವ ನರಸಂದೇಶವಾಹಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಈ ಸಮಸ್ಯೆ ಶೇ.80ರಷ್ಟು ಆನುವಂಶಿಕವಾಗಿದೆ ಎಂದು ಹಲವಾರು ಅಧ್ಯಯನಗಳಿಂದ ತೀರ್ಮಾನಿಸಲಾಗಿದೆ.

 • ಪರಿಸರಕ್ಕೆ ಸಂಬಂಧಿಸಿದ ಅಂಶಗಳು: ಬಸಿರಿನ ವೇಳೆ ತಾಯಿ ಮದ್ಯ ಹಾಗೂ ತಂಬಾಕು ಸೇವನೆ ಮಾಡಿದ್ದರೆ ಮಗುವಿಗೆ ಎಡಿಎಚ್‌ಡಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದನ್ನು ಪತ್ತೆಮಾಡಲಾಗಿದೆ. ಅಷ್ಟೇ ಅಲ್ಲ, ಭ್ರೂಣ ಅಥವಾ ಶಿಶುವಿಗೆ ಸೀಸದಿಂದ (lead)  ಸುರಕ್ಷಣೆ ಇಲ್ಲದಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯ ಹೆಚ್ಚು ಎಂಬ ಸಂಗತಿಯನ್ನು ಕೂಡ ಗುರುತಿಸಲಾಗಿದೆ.

 • ಇನ್ನು ಇದೆಲ್ಲದರ ಜತೆಗೆ ಮಾನಸಿಕ ಸಮಸ್ಯೆಯೂ ಎಡಿಎಚ್‌ಡಿಗೆ ಕಾರಣವಾಗಬಹುದು. ಕುಟುಂಬದಲ್ಲಿ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುವುದರಿಂದ ಮತ್ತು ಕೌಟುಂಬಿಕ ಕಲಹ ಮತ್ತು ಹಿಂಸೆಗಳ ಕಾರಣಕ್ಕಾಗಿ ಮಕ್ಕಳಲ್ಲಿ ಎಡಿಎಎಚ್‌ಡಿ ಕಾಣಿಸಿಕೊಳ್ಳಬಹುದು.

 • ನಡುವಳಿಕೆಯ ಸ್ವಭಾವಗಳು: ಇನ್ನು ಕೆಲವು ಪ್ರಕರಣಗಳಲ್ಲಿ ಮಗುವಿನ ಕ್ಲಿಷ್ಟಕರವಾದ ವರ್ತನೆಯು ಎಡಿಎಚ್‌ಡಿಗೆ ಕಾರಣವಾಗಬಹುದು.

Q

ಎ.ಡಿ.ಎಚ್‌.ಡಿ ಗುಣಲಕ್ಷಣಗಳು

A

ಶಿಕ್ಷಕರು ಹಾಗೂ ಪೋಷಕರು ಶಾಲೆ ಹಾಗೂ ಮನೆಯಲ್ಲಿ ಮಗುವಿನ ವರ್ತನೆಯಲ್ಲಾಗುವ ಬದಲಾವಣೆಗಳನ್ನು ಮೊದಲು ಗುರುತಿಸಬಲ್ಲರು.

ಎಡಿಎಚ್‌ಡಿ ಸಮಸ್ಯೆಗೆ ಚಿಕಿತ್ಸೆ ನೀಡುವುದಕ್ಕೆ ಮಗುವಿಗೆ ಏಳು ವರ್ಷವಾಗುವ ಮೊದಲೇ ಈ ಗುಣಲಕ್ಷಣ ಪತ್ತೆಮಾಡಿರಬೇಕು. ಶಾಲೆ, ಮನೆ ಮತ್ತು ಸಾಮಾಜಿಕ ಸಂದರ್ಭ ಹೀಗೆ ವಿವಿಧ ಪರಿಸರಗಳಲ್ಲಿ ಮೇಲೆ ವಿವರಿಸಿರುವ ಗುಣಲಕ್ಷಣಗಳಲ್ಲಿ ಏಳಕ್ಕಿಂತ ಹೆಚ್ಚು ಗುಣಲಕ್ಷಣಗಳು ಕಾಣಿಸಿದರೆ ಮಾತ್ರ ಇದನ್ನು ಎಡಿಎಚ್‌ಡಿ ಎಂದು ಪರಿಗಣಿಸಲಾಗುತ್ತದೆ.

ಕಲಿಕೆ, ನಡುವಳಿಕೆಗಳಲ್ಲಿ ಗಮನಾರ್ಹವಾಗಿ ತೊಂದರೆ ಕಂಡುಬಂದು ಅವು ಮಗುವಿನ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ತೊಂದರೆಯಾದರೆ ಮಾತ್ರ ಅಂತಹ ಪರಿಸ್ಥಿತಿಯನ್ನು ಎಡಿಡಚ್ ಡಿ ಎಂದು ಪರಿಗಣಿಸಲಾಗುವದು.

ಸೂಚನೆ: ಕೆಲವು ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಹಲವು ಗುಣಲಕ್ಷಣಗಳು ಮಾಯವಾಗಬಹುದು. ಆದರೂ ಅವರಲ್ಲಿ ಏಕಾಗ್ರತೆಯ ಕೊರತೆ ಮತ್ತು ದುಡುಕು ಸ್ವಭಾವವು ಹಾಗೆಯೇ ಮುಂದುವರೆದು ಸಮಾಜಿಕ ಹಾಗೂ ವೃತ್ತಿ ಬದುಕಿನಲ್ಲಿ ಪ್ರಭಾವ ಬೀರಬಹುದು.

ಇದೇ ವೇಳೆ, ಮಗು ಶೈಕ್ಷಣಿಕ ವಿಷಯಗಳಲ್ಲಿ ಕಷ್ಟಪಡುತ್ತಿದ್ದರೂ, ತಮಗೆ ಆಸಕ್ತಿಯಿರುವ ಚಟುವಟಿಕೆಯಲ್ಲಿ ಅತ್ಯಂತ ಸಾಮರ್ಥ್ಯವನ್ನು ಹೊಂದಿರಬಹುದು. ಇದನ್ನು ತಂದೆತಾಯಿಗಳು ಅರಿಯುವುದು ಅತ್ಯಂತ ಮುಖ್ಯವಾದ ಸಂಗತಿಯಾಗಿರುತ್ತದೆ.

ನಿರ್ಲಕ್ಷತೆಯ ಲಕ್ಷಣಗಳು

ಅತಿಯಾದ ಕ್ರಿಯಾಶೀಲತೆ/ಹಠಾತ್ ಪ್ರವೃತ್ತಿಯ ಲಕ್ಷಣಗಳು

ಪಾಠ ಹೇಳಿಕೊಡುವಾಗ ಗಮನ ಕೊಡದೆ ಇರುವುದು ಮತ್ತು ಸೂಚನೆಗಳನ್ನು ಅನುಸರಿಸಲು ಕಷ್ಟಪಡುವುದು.

ವಿಶ್ರಾಂತಿ ಇಲ್ಲದಿರುವುದು, ಕೈ ಕಾಲು ಚಡಪಡಿಸುವುದು, ಕೆಲವು ನಿಮಿಷ ಕೂಡ ಸುಮ್ಮನೆ ಕುಳಿತುಕೊಳ್ಳಲಾಗದಿರುವುದು.

ಓದುವುದು, ಬರೆಯುವುದು ಅಥವಾ ಕಾಗುಣಿತದಲ್ಲಿ ಆಸಕ್ತಿ ತೋರಿಸುವುದಿಲ್ಲ ಹಾಗೂ ತಪ್ಪುಗಳನ್ನು ಮಾಡುವುದು.

ತರಗತಿಯ ಕೋಣೆಯಲ್ಲಿ ಕುಳಿತುಕೊಳ್ಳಲು ನಿರಾಕರಿಸುವುದು. ತರಗತಿಯಲ್ಲಿ ಎದ್ದುನಿಲ್ಲುವುದು, ನಡೆದಾಡುವುದು ಅಥವಾ ಓಡಾಡುವ ಮೂಲಕ ಇತರರಿಗೆ ಅಡ್ಡಿಪಡಿಸುವುದು.

ಪುಸ್ತಕಗಳನ್ನು ಜೋಡಿಸುವುದು ಹಾಗೂ ಹೋಂವರ್ಕ್ ನಿತ್ಯವೂ ಮಾಡುವ ಸಾಮಾನ್ಯ ಕೆಲಸಗಳನ್ನು ಪೂರೈಸಲು ಕಷ್ಟಪಡುವುದು.

ನಡೆಯುವುದರ ಬದಲಿಗೆ ಓಡುವುದು, ಹತ್ತುವುದು, ಇಳಿಯುವುದು ಮಾಡುವುದು, ರಸ್ತೆಯ ನಿಯಮಗಳನ್ನು ಪಾಲಿಸದಿರುವುದು, ಇತ್ಯಾದಿ. ಇದರಿಂದ ಪಾಲಕರಲ್ಲಿ ಮಕ್ಕಳಿಗೆ ಅಪಘಾತ ಅಥವಾ ಗಾಯಗಳುಂಟಾಗುವ ಸಾಧ್ಯತೆಯ ಕುರಿತಾಗಿ ಭಯ ಹಾಗೂ ಆತಂಕ ಉಂಟಾಗುತ್ತದೆ.

ಹೋಂವರ್ಕ್ ಅಥವಾ ಶಾಲೆಯ ಚಟುವಟಿಕೆಗಳು ಮುಂತಾದ ದಿನನಿತ್ಯದ ಕೆಲಸಗಳನ್ನು ಮಾಡಲು ಇಷ್ಟಪಡದಿರುವುದು. ಇತರ ದೈನಂದಿನ ಚಟುವಟಿಕೆಗಳಲ್ಲಿ ಬಲುಬೇಗನೆ ಬೇಸರಗೊಳ್ಳುವುದು.

ಸ್ನೇಹಿತರ ಜತೆ ಜಗಳ/ಹೊಡೆದಾಟ, ತನ್ನ ತಪ್ಪನ್ನು ಒಪ್ಪಿಕೊಳ್ಳದಿರುವುದು.

ಗದ್ದಲ, ಚಲನೆ ಅಥವಾ ಇತರ ಬಾಹ್ಯ ಅಂಶಗಳಿಂದ ಶೀಘ್ರವಾಗಿ ಚಂಚಲತೆಗೆ ಒಳಗಾಗುವುದು.

ಅತಿಯಾಗಿ ಮಾತನಾಡುವುದು, ಇತರರ ಮಾತಿನ ಮಧ್ಯೆ ಮಧ್ಯದಲ್ಲಿ ಮಾತನಾಡುವುದು, ಬೇಗನೆ ಕೋಪಿಸಿಕೊಳ್ಳುವುದು, ತಾಳ್ಮೆಯಿಲ್ಲದೆ ಇರುವುದು, ಮತ್ತು ಇತರರು ಮಾತನಾಡಿ ಮುಗಿಸುವ ಮೊದಲೇ ಪ್ರತಿಕ್ರಿಯೆ ನೀಡುವುದು.

ತನ್ನ ವಸ್ತುಗಳನ್ನು, ಆಟದ ವಸ್ತುಗಳನ್ನು, ಶಾಲೆಯ ಪುಸ್ತಕಗಳನ್ನು ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವಾಗದಿರುವುದು.

ಭಾವನೆಗಳನ್ನು ಯಾವುದೇ ಮುಜುಗರವಿಲ್ಲದೇ ತೋರುವುದು ಮತ್ತು ಅತಿಯಾದ ಸಂವೇದನೆಗಳನ್ನು ನಿಯಂತ್ರಿಸಲು ಅಸಾಧ್ಯವಾಗುವುದು.

ಹಲ್ಲುಜ್ಜುವುದು, ಶೂ ಧರಿಸುವುದು, ಕೈ ತೊಳೆಯುವಂತ ದಿನನಿತ್ಯದ ಸಾಮಾನ್ಯ ಕೆಲಸಗಳನ್ನು ಮತ್ತು ಸೂಚನೆಗಳನ್ನು ಸುಲಭವಾಗಿ ಮರೆಯುವುದು.

ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳದೇ, ಆಗಬಹುದಾದ ಪರಿಣಾಮಗಳನ್ನು ಲೆಕ್ಕಿಸದೇ ದುಡುಕಿನಿಂದ ಪ್ರತಿಕ್ರಿಯಿಸುವುದು.

 

Q

ಎ.ಡಿ.ಎಚ್.ಡಿ ಪತ್ತೆಮಾಡುವುದು ಹೇಗೆ?

A

ಎ.ಡಿ.ಎಚ್‌.ಡಿ ಚಿಕಿತ್ಸೆಗಾಗಿ ಯಾವುದೇ ನಿರ್ದಿಷ್ಟ ವೈದ್ಯಕೀಯ, ದೈಹಿಕ ಅಥವಾ ಆನುವಂಶಿಕ ಪರೀಕ್ಷೆ ಲಭ್ಯವಿಲ್ಲ.

ಪೋಷಕರಾಗಿ ನೀವು ನಿಮ್ಮ ಮಗುವಿನ ವೈದ್ಯರು ಅಥವಾ ಮಾನಸಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಬೇಕು. ಎ.ಡಿ.ಎಚ್‌.ಡಿ ಗುಣಲಕ್ಷಣಗಳು, ವರ್ತನೆಯ ಬಗ್ಗೆ ತಜ್ಞರು ವಿವಿಧ ಪರೀಕ್ಷೆಗಳನ್ನು ನಡೆಸುತ್ತಾರೆ.

ಎ.ಡಿ.ಎಚ್‌.ಡಿ ಗುಣಲಕ್ಷಣಗಳನ್ನೇ ಹೋಲುವ ಇತರ ಸಮಸ್ಯೆಗಳು ಅಥವಾ ದೈಹಿಕ ಸಮಸ್ಯೆಗಳು (ಉದಾಹರಣೆಗೆ, ಹೆಚ್ಚಿನ ಪ್ರಮಾಣದ ಜ್ವರ, ಕಲಿಕೆಯ ಅಸಾಮರ್ಥ್ಯ, ಅನುವಂಶಿಕ ಸಮಸ್ಯೆ) ಮೇಲೆ ಹೇಳಲಾದ ಯಾವುದೇ ಲಕ್ಷಣಗಳನ್ನು ಪ್ರಚೋದಿಸುತ್ತಿವೆಯೇ ಎಂದು ತಜ್ಞರು ತಪಾಸಣೆ ನಡೆಸಬಹುದು.

ಕೆಲವು ಬಾರಿ ಇತರ ಸಮಸ್ಯೆಗಳಾದ ಆತಂಕ, ಡಿಸ್ಲೆಕ್ಸಿಯಾ, ನಿರ್ದಿಷ್ಟ ಕಲಿಕೆ ಅಸಾಮರ್ಥ್ಯ ಅಥವಾ ಆಟಿಸಂ ಕೂಡ ಎ.ಡಿ.ಎಚ್‌.ಡಿ ಜೊತೆ ಕಾಣಿಸಿಕೊಳ್ಳಬಹುದು. ಹೀಗಾಗಿ, ಇಂತಹ ಪರಿಸ್ಥಿತಿಗಳಲ್ಲಿ ಕಾಳಜಿಯಿಂದ ಕೂಡಿದ ಮತ್ತು ಸಮಗ್ರವಾದ ವೈದ್ಯಕೀಯ ವಿಶ್ಲೇಷಣೆಯ ಅಗತ್ಯವಿರುತ್ತದೆ. ಒಂದು ವೇಳೆ ಇತರ ಯಾವುದೇ ಸಮಸ್ಯೆ ಕಂಡುಬಂದರೆ ಇವುಗಳ ಮೌಲ್ಯಮಾಪನ ಮತ್ತು ಚಿಕಿತ್ಸೆಯನ್ನು ಎ.ಡಿ.ಎಚ್‌.ಡಿ ಚಿಕಿತ್ಸೆಯ ಜೊತೆಗೇ ನಡೆಸುವುದು ಅತ್ಯಂತ ಅಗತ್ಯವಿರುತ್ತದೆ.

ಸೂಚನೆ: ಸಾಮಾನ್ಯವಾಗಿ  ಏಕಾಗ್ರತೆಯ ಕೊರತೆಯಿರುವ ಮಕ್ಕಳಿಗಿಂತಲೂ ಅತಿ ಚಟುವಟಿಕೆಯುಳ್ಳ ಮಗುವಿಗೆ ಚಿಕಿತ್ಸೆ ಕೊಡುವ ಸಾಧ್ಯತೆ ಹೆಚ್ಚು.

Q

ಎ.ಡಿ.ಎಚ್.ಡಿ ಚಿಕಿತ್ಸೆ

A

ಆಪ್ತ ಸಲಹೆ, ಕಾಗ್ನಿಟಿವ್ ಬೇಹೇವಿಯರ್ ಥೆರಪಿ ಮುಂತಾದ ಸಮ್ಮಿಶ್ರಣ ರೂಪದ ಚಿಕಿತ್ಸಾ ವಿಧಾನವನ್ನು ಅನುಸರಿಸಬಹುದು. ಮಗುವಿನ ಆರೋಗ್ಯ ಸ್ಥಿತಿ, ವ್ಯಕ್ತಿತ್ವ ಮತ್ತು ಸಮಸ್ಯೆಯ ಗುಣಲಕ್ಷಣಗಳ ತೀವ್ರತೆಯನ್ನು ಆಧರಿಸಿ ತಜ್ಞರು ಚಿಕಿತ್ಸೆಯ ವಿಧವನ್ನು ಆಯ್ಕೆ ಮಾಡುತ್ತಾರೆ. ಬಹುತೇಕ ಮಕ್ಕಳು ಸಮಸ್ಯೆಯನ್ನು ನಿಭಾಯಿಸಲು ಕಲಿಯುತ್ತಾರೆ ಮತ್ತು ಸಹಜವಾಗಿ ಜೀವನ ನಡೆಸಲು ತೊಡಗುತ್ತಾರೆ.

 • ಫಾರ್ಮಾಕೋಥೆರಪಿ (Pharmacotherapy): ಈ ಥೆರಪಿಯಲ್ಲಿ ಔಷಧಗಳನ್ನು ಬಳಸಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತದೆ.

 • ಸೈಕೋಥೆರಪಿ (Psychotherapy): ಇದರಲ್ಲಿ ತಜ್ಞರು (ಮನೋವೈದ್ಯರು ಅಥವಾ ಮನಃಶಾಸ್ತ್ರಜ್ಞರು) ವೈಜ್ಞಾನಿಕವಾಗಿ ನಿರ್ಧಿಷ್ಟ ವಿಧಾನಗಳನ್ನು ಬಳಸಿಕೊಂಡು ಮಕ್ಕಳು ಆರೋಗ್ಯಕರ ಮತ್ತು ಪರಿಣಾಮಕಾರಿ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತಾರೆ. ಮಗುವಿನಲ್ಲಿ ಕಂಡುಬರುವ ನಕಾರಾತ್ಮಕ ನಡವಳಿಕೆಯನ್ನು ಗುರುತಿಸಿ ಅದನ್ನು ಒಳ್ಳೆಯ ನಡವಳಿಕೆಯಾಗಿ ಬದಲಾಗುವಂತೆ ಮಾಡಲು ತಜ್ಞರು ಕೆಲಸ ಮಾಡುತ್ತಾರೆ. ಈ ಬದಲಾದ ನಡವಳಿಕೆಯನ್ನು ಮುಂದುವರೆಸಲು ಪ್ರೋತ್ಸಾಹಿಸುತ್ತಾರೆ.

 • ಕಾಗ್ನಿಟಿವ್ ಬೇಹೇವಿಯರ್ ಥೆರಪಿ (Cognitive Behavior Therapy): ಈ ಥೆರಪಿಯಲ್ಲಿ ಶಿಕ್ಷ್ಶಕರು ಹಾಗೂ ಪೋಷಕರು ಮಕ್ಕಳ ನಡವಳಿಕೆಯನ್ನು ನಿಭಾಯಿಸಲು ಹಲವಾರು ವಿಧಾನಗಳನ್ನು ಒಳಗೊಂಡಿರುತ್ತದೆ. ಮಕ್ಕಳು ಉತ್ತಮ ವರ್ತನೆಗಳನ್ನು ತೋರಿದಾಗ ಪ್ರೋತ್ಸಾಹಿಸುವುದು, ಪ್ರತಿ ಚಟುವಟಿಕೆಗೂ ಸಮಯ ನಿಗದಿಗೊಳಿಸುವುದು ಮತ್ತು ನಿತ್ಯದ ಚಟುವಟಿಕೆಗಳಿಗೆ ವೇಳಾಪಟ್ಟಿಯನ್ನು ನಿರ್ದಿಷ್ಟಪಡಿಸುವುದನ್ನು ಈ ಚಿಕಿತ್ಸಾ ವಿಧಾನದಲ್ಲಿ ಸೂಚಿಸಲಾಗುತ್ತದೆ. ಇದರಿಂದಾಗಿ ಮಕ್ಕಳ ವರ್ತನೆಯಲ್ಲಿ ಸುಧಾರಣೆ ಕಾಣಬಹುದು.

 • ಕುಟುಂಬ ಚಿಕಿತ್ಸೆ ಅಥವಾ ಪಾಲಕರ ತರಬೇತಿ: ಎ.ಡಿ.ಎಚ್‌.ಡಿ ಬಾಧಿತ ಮಗುವಿನ ಆರೈಕೆ ಮಾಡುವಲ್ಲಿ ಪೋಷಕರು ಹಾಗೂ ಸಹೋದರ/ಸಹೋದರಿಯರು ತುಂಬಾ ಆತಂಕ ಹಾಗೂ ಒತ್ತಡಕ್ಕೆ ಒಳಗಾಗಬಹುದು. ಹೀಗಾಗಿ ಇಂತಹ ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು, ಯಾವ ರೀತಿ ಅವರನ್ನು ಪಾಲಿಸುವುದು ಎಂಬ ವಿಷಯದ ಕುರಿತಾಗಿ ತರಬೇತಿ ನೀಡಲಾಗುತ್ತದೆ. ಸನ್ನಿವೇಶವನ್ನು ಎದುರಿಸಲು ಪರ್ಯಾಯ ವವಿಧಾನಗಳನ್ನು ಪೋಷಕರಿಗೆ ಸೂಚಿಸಲಾಗುತ್ತದೆ. ಕುಟುಂಬ ಚಿಕಿತ್ಸೆಯಿಂದ ಮಕ್ಕಳನ್ನು ನಿರ್ವಹಿಸುವ ಉತ್ತಮ ವಿಧಾನಗಳು ಪೋಷಕರಿಗೆ ಲಭ್ಯವಾಗುತ್ತವೆ.

ಸಾಮಾಜಿಕ ಕೌಶಲ್ಯ ತರಬೇತಿ (social skills training): ಈ ತರಬೇತಿಯಲ್ಲಿ ಮಕ್ಕಳಿಗೆ ಸೂಕ್ತ ಸಾಮಾಜಿಕ ವರ್ತನೆಗಳನ್ನು ಕಲಿಸಲಾಗುತ್ತದೆ. ಶಾಲೆಗಳಲ್ಲಿ ನಡೆಸಲಾಗುವ ಸಮೂಹ ಥೆರಪಿ ವಿಧಾನದಿಂದ ಮಕ್ಕಳು ಸಾಮಾಜಿಕ ಕೌಶಲ್ಯಗಳನ್ನು ಕಲಿತು ತಮ್ಮ ಆತ್ಮವಿಶ್ವಾಸ ಹಾಗೂ ಆತ್ಮಗೌರವ ಹೆಚ್ಚಾಗಿಸಲು ಸಹಾಯವಾಗುತ್ತದೆ.

ಸೂಚನೆ: ಅಂದಹಾಗೆ ಈ ಎಲ್ಲ ಚಿಕಿತ್ಸೆಗಳಲ್ಲಿ ಮಗುವಿಗೆ ಸಹಾಯ ಮಾಡಲು ಸಾಮೂಹಿಕ ಪ್ರಯತ್ನದ ಅವಶ್ಯಕತೆಯಿದೆ. ಇದಕ್ಕೆ ಪಾಲಕರು, ಶಿಕ್ಷಕರು, ಮಾನಸಿಕ ಆರೋಗ್ಯ ತಜ್ಞರು ಮತ್ತು ಚಿಕಿತ್ಸಕರ ನೆರವು ಅತ್ಯಂತ ಅಗತ್ಯ.

Q

ಎ.ಡಿ.ಎಚ್‌.ಡಿ ಪರಿಹಾರ ವಿಧಾನಗಳು

A

ಎ.ಡಿ.ಎಚ್‌.ಡಿ ಹೊಂದಿರುವ ವ್ಯಕ್ತಿಗಳು ಸಾಮಾನ್ಯರಂತೆಯೇ ಕೆಲಸ ಮಾಡಲು ಸಾಮರ್ಥ್ಯ ಹೊಂದಿರುತ್ತಾರೆ. ಆದರೆ ಇತರರೊಂದಿಗೆ ಹೋಲಿಸಿದಲ್ಲಿ, ಈ ನಿಟ್ಟಿನಲ್ಲಿ ಅವರು ಹೆಚ್ಚಿನ ಪ್ರಯತ್ನ ಮತ್ತು ಶಕ್ತಿಯನ್ನು ವ್ಯಯಿಸಬೇಕಾಗಿರುವುದು ಅವಶ್ಯಕವಾಗಿರುತ್ತದೆ. ಇದು ನಿರಾಸೆಗೆ ಕಾರಣವಾಗಬಹುದು. ಎ.ಡಿ.ಎಚ್‌.ಡಿಯ ಸ್ವರೂಪವನ್ನು ಅರಿತುಕೊಳ್ಳುವುದು ಈ ಅಂತರವನ್ನು ನಿಭಾಯಿಸುವಲ್ಲಿ ಮತ್ತು ಸಾಮಾನ್ಯ ರೀತಿಯ ಜೀವನ ಸಾಗಿಸುವಲ್ಲಿ ಅವಶ್ಯಕವಾಗಿರುವ ಸಂಗತಿಗಳನ್ನು ಕಲಿಯಲು ನಿಮಗೆ ಸಹಾಯ ಮಾಡುತ್ತದೆ.

 • ಎ.ಡಿ.ಎಚ್‌.ಡಿ ಕುರಿತು ತಿಳಿದುಕೊಳ್ಳಿ. ಉತ್ತಮ ತಿಳುವಳಿಕೆಗಾಗಿ ಪರಿಣತ ತಜ್ಞರನ್ನು ಭೇಟಿಯಾಗಿ.

 • ಈ ವಿಷಯಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಹೊಂದಿದ ಗ್ರಾಹಕರಾಗಿ ಮತ್ತು ನಿಮ್ಮಷ್ಟಕ್ಕೇ ನೀವು ಪರಿಣತ ಸಲಹೆಗಾರರಾಗಿ.

 • ನಿಮ್ಮ ಜೀವನ,ಕೆಲಸಗಳ ಕುರಿತು ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ವ್ಯಕ್ತಿತ್ವ ಮತ್ತು ಜೀವನಶೈಲಿಗೆ ಸರಿಹೊಂದುವ ಹಾಗೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ.

 • ಆಸಕ್ತಿಕರ ಮತ್ತು ಅರ್ಥಪೂರ್ಣವಾದ ಚಟುವಟಿಕೆಗಳಲ್ಲಿ ನಿಮ್ಮನ್ನು ಸದಾ ತೊಡಗಿಸಿಕೊಳ್ಳಿ.

ಇದೊಂದು ಸಾಮಾನ್ಯ ಸ್ಥಿತಿ. ವಿಶ್ರಾಂತಿರಹಿತ ಅಥವಾ ಕಡಿಮೆ ಮಟ್ಟದ ಬುದ್ಧಿವಂತಿಕೆಯ ಲಕ್ಷಣವಲ್ಲ ಎಂಬುದನ್ನು ಬಾಲ್ಯದಿಂದಲೂ ಎ.ಡಿ.ಎಚ್‌.ಡಿಯನ್ನು ನಿಭಾಯಿಸುತ್ತ ಬಂದಿರುವ ಹಲವು ಜನರು ಹೇಳುತ್ತಾರೆ. ವಾಸ್ತವಿಕವಾಗಿ ಹೇಳುವುದಾದರೆ, ತಮ್ಮ ಶಕ್ತಿ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಶೋಧಿಸಿಕೊಳ್ಳಲು ವ್ಯಕ್ತಿಗಳಿಗೆ ಎ.ಡಿ.ಎಚ್‌.ಡಿ ನೆರವಾಗುತ್ತದೆ. ಅವರು ತಮ್ಮ ಅಸ್ವಸ್ಥತೆಯ ಕುರಿತು ಚಿಂತಿಸುವುದನ್ನು ಬಿಟ್ಟು ಈ ಗುಣಾತ್ಮಕ ಅಂಶಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿಕೊಳ್ಳಬಹುದು.

ಎ.ಡಿ.ಎಚ್‌.ಡಿಯು ವಯಸ್ಕರಲ್ಲಿಯೂ ಮುಂದುವರೆಯುವುದರಿಂದ, ಭರವಸೆಯನ್ನು ಕಳೆದುಕೊಳ್ಳದೇ ಅದರ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡು ನಿಭಾಯಿಸುವುದು ಉತ್ತಮ.

Q

ಎ.ಡಿ.ಎಚ್.ಡಿ ಹೊಂದಿರುವ ಮಗುವಿನ ಆರೈಕೆ

A

ನಮ್ಮ ದೇಶದಲ್ಲಿ ಶಾಲೆಯಲ್ಲಿ ಉತ್ತಮ ಅಂಕ ತೆಗೆದರೆ ಮಾತ್ರ ಮಕ್ಕಳು ಬುದ್ಧಿವಂತರು ಎಂಬ ಭಾವನೆ ಹಾಗೂ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.  ಈ ಒಂದು ತಪ್ಪು ಅಭಿಪ್ರಾಯದಿಂದ ಎ.ಡಿ.ಎಚ್‌.ಡಿ ಬಾಧಿತ ಮಕ್ಕಳ ಪಾಲಕರು 

ತಮ್ಮ ಮಗುವಿನ ಶೈಕ್ಷಣಿಕ ಅಥವಾ ಶಾಲಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು  ತುಂಬಾ ಚಿಂತಿಸುತ್ತಿರುತ್ತಾರೆ. ಆದರೆ ಎ.ಡಿ.ಎಚ್‌.ಡಿ ಬಗ್ಗೆ ಪೋಷಕರು ಅರಿತು, ಅದರ ಗುಣಲಕ್ಷಣಗಳನ್ನು ತಿಳಿದುಕೊಂಡು ಅದು ತಮ್ಮ ಮಗುವನ್ನು ಯಾವ ಪ್ರಮಾಣದಲ್ಲಿ ಬಾಧಿಸುತ್ತಿದೆ ಎಂಬುದನ್ನು ಅರಿತುಕೊಂಡರೆ, ಆಗ ಇದನ್ನು ನಿರ್ವಹಿಸುವ ಕಲೆಯನ್ನೂ ಅವರು ತಿಳಿದುಕೊಳ್ಳುತ್ತಾರೆ.

ಗಮನಿಸಿ: ಎ.ಡಿ.ಎಚ್‌.ಡಿ ಬಾಧಿತ ಮಗುವಿನ ಪಾಲನೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಅತ್ಯಂತ ಪ್ರಮುಖವಾದದ್ದು.

ಈ ಕೆಳಗೆ ಹೇಳಲಾದ ಕೆಲವು ಸಲಹೆಗಳು ಸಹಾಯಮಾಡಬಹುದು:

 • ಜ್ಞಾನ ಮತ್ತು ಮಾಹಿತಿ: ಎ.ಡಿ.ಎಚ್‌.ಡಿ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆದು ಈ ಸಮಸ್ಯೆಯನ್ನು ನಿಭಾಯಿಸುವ ಮಾರ್ಗವನ್ನು ತಿಳಿದುಕೊಂಡರೆ ಸನ್ನಿವೇಶವನ್ನು ಸುಲಭವಾಗಿ ನಿರ್ವಹಿಸಬಹುದು.

 • ಬೆಂಬಲ ಮತ್ತು ಪ್ರೋತ್ಸಾಹ: ಎ.ಡಿ.ಎಚ್‌.ಡಿ ಸಮಸ್ಯೆಯನ್ನು ಹೊಂದಿರುವ ಮಕ್ಕಳು ಶೈಕ್ಷಣಿಕವಾಗಿ ಕಷ್ಟ ಅನುಭವಿಸುವುದರಿಂದ ತುಂಬಾ ಒತ್ತಡ ಅನುಭವಿಸುತ್ತಾರೆ. ಪಾಲಕರಾಗಿ ನೀವು ನೀಡುವ ಪ್ರೀತಿ ಮತ್ತು ಬೆಂಬಲ ಮಗುವಿನಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುತ್ತದೆ. ಮಗು ಸೂಚನೆಗಳನ್ನು ಅನುಸರಿಸಿದಾಗ ಹಾಗೂ ಯಾವುದಾದರೊಂದು ಚಟುವಟಿಕೆಯನ್ನು ಮುಗಿಸಿದಾಗ ಮುಕ್ತಕಂಠದಿಂದ ಹೊಗಳಿ. ಮನೆ ಹಾಗೂ ಶಾಲೆಗಳ ಪರಿಸರದಲ್ಲಿ ಪ್ರೋತ್ಸಾಹದಾಯಕ ಬೆಂಬಲದ ವಾತಾವರಣವಿಲ್ಲದಿದ್ದರೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸಾ ವಿಧಾನಗಳೂ ಯಶಸ್ವಿಯಾಗುವುದಿಲ್ಲ ಎಂಬ ಸಂಗತಿ ಈಗಾಗಲೇ ಸಾಬೀತಾಗಿದೆ.

 • ಚಟುವಟಿಕೆಗಳು: ಇನ್ನು ವರ್ತನೆಯಲ್ಲಿನ ಮಾರ್ಪಾಡಿಗೆ ಕೆಲವು ಅತ್ಯಂತ ಸರಳ ತಂತ್ರಗಳು ನೆರವಾಗಬಲ್ಲವು.

  • ಸೂಕ್ತ ಬಹುಮಾನಯುಕ್ತ ಪ್ರೋತ್ಸಾಹ

  • ಅಗತ್ಯ ವರ್ತನೆಗೆ ಪ್ರೋತ್ಸಾಹ, ಸರಿ ಇಲ್ಲದ ವರ್ತನೆ ಯಾವುದು ಎಂದು ಅರ್ಥವಾಗುವಂತೆ ಪ್ರೀತಿಯಿಂದ ಹೇಳಿ ಆ ವರ್ತನೆಯನ್ನು ಕಡಿಮೆ ಮಾಡಿಸುವುದು. 

  • ಏಕಾಗ್ರತೆ ವೃದ್ಧಿಸುವ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು, ಸಾಮಗ್ರಿಗಳನ್ನು ಜೋಡಿಸುವುದು, ಪದಬಂಧ ಇತ್ಯಾದಿ ಚಟುವಟಿಕೆಗಳು ಮಕ್ಕಳ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಗೆ ಸಹಾಯವಾಗುತ್ತವೆ ಮತ್ತು ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಸಹಾಯಮಾಡುತ್ತವೆ.

 • ದಿನಚರಿ: ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗಿನ ನಿತ್ಯದ ಚಟುವಟಿಕೆಗಳ ವೇಳಾಪಟ್ಟಿ ತಯಾರಿಸಿ. ಹೋಮ್‌ವರ್ಕ್, ಆಟ ಹಾಗೂ ಒಳಾಂಗಣ ಚಟುವಟಿಕೆಗಳು ಸೇರಿದಂತೆ ಪ್ರತಿಯೊಂದು ಚಟುವಟಿಕೆಗೂ ಇದರಲ್ಲಿ ಸಮಯ ನಿಗದಿಪಡಿಸಿ. ಇದನ್ನು ಅನುಸರಿಸಲು ಮಗುವನ್ನು ಪ್ರೋತ್ಸಾಹಿಸಿ.

 • ವಸ್ತುಗಳ ಜೋಡಣೆ: ಮಗುವಿನ ಎಲ್ಲ ವಸ್ತುಗಳಿಗೆ ಸ್ಥಳ ನಿಗದಿಪಡಿಸಿ, ಎಲ್ಲವೂ ಅದೇ ಸ್ಥಳದಲ್ಲಿಯೇ ಇಡುವಂತೆ ಸೂಚಿಸಿ. ಪುಸ್ತಕಗಳು, ಬಟ್ಟೆಗಳು ಮತ್ತು ಆಟಿಕೆಗಳೂ ಇದರಲ್ಲಿ ಒಳಗೊಂಡಿರಬೇಕು.

 • ಹೋಂವರ್ಕ್ ಮತ್ತು ಶಾಲಾ ಚಟುವಟಿಕೆಗಳು: ಅಸೈನ್‌ಮೆಂಟ್‌ಗಳು, ನೋಟ್‌ಗಳನ್ನು ಮಾಡುವಂತೆ ಮಗುವಿಗೆ ಪ್ರೋತ್ಸಾಹಿಸಿ. ಡೈರಿಯೊಂದನ್ನು ನೀಡಿ ಅದರಲ್ಲಿ ನಿತ್ಯದ ಚಟುವಟಿಕೆಗಳನ್ನು ದಾಖಲಿಸುವಂತೆ ಪ್ರೋತ್ಸಾಹಿಸಿ.

 • ಸ್ವಸಹಾಯ: ನೀವು ಎ.ಡಿ.ಎಚ್‌.ಡಿ ಕುರಿತ ಕಾರ್ಯಾಗಾರಗಳಿಗೆ ಹೋಗಬಹುದು ಅಥವಾ ಸಪೋರ್ಟ್ ಗ್ರುಪ್ ಗಳನ್ನು ಸೇರಬಹುದು. ಇಂಥದ್ದೇ ಸಮಸ್ಯೆಯನ್ನು ಎದುರಿಸುವ ಮಕ್ಕಳ ಪೋಷಕರ ಜೊತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು. ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಎದುರಿಸಲು ಇಂತಹ ಸಪೋರ್ಟ್ ಗ್ರುಪ್  ಪೋಷಕರಿಗೆ ನೆರವಾಗುತ್ತದೆ.

Q

ವಯಸ್ಕರಲ್ಲಿ ಎ.ಡಿ.ಎಚ್‌.ಡಿ

A

ತಜ್ಞರ ಪ್ರಕಾರ ಎ.ಡಿ.ಎಚ್‌.ಡಿ ಒಂದು ದೀರ್ಘಕಾಲೀನ ಸಮಸ್ಯೆ. ಎ.ಡಿ.ಎಚ್‌.ಡಿ ಕಾಣಿಸಿಕೊಂಡ ಮೂರರಲ್ಲಿ ಎರಡರಷ್ಟು ಮಕ್ಕಳಲ್ಲಿ ಇದು ಮುಂದುವರಿದು ವಯಸ್ಕರಾಗುವವರೆಗೂ ಉಳಿದುಕೊಳ್ಳುವ ಸಾಧ್ಯತೆಯಿದೆ.

ಇದು ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮನೆ ಮತ್ತು ಕಚೇರಿಯಲ್ಲಿ ಕರ್ತವ್ಯಗಳನ್ನು ಬೇಕಾಬಿಟ್ಟಿಯಾಗಿ ಮಾಡುವುದು, ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರೈಸದಿರುವುದು, ಸೂಚನೆಗಳನ್ನು ಪಾಲಿಸುವಲ್ಲಿ ಸಹನೆ ಇಲ್ಲದಿರುವುದು ಹಾಗೂ ಕಿರಿಕಿರಿಯನ್ನು ಅನುಭವಿಸುವುದು, ನಿತ್ಯದ ಕೆಲಸಗಳ ಬಗ್ಗೆ ನಿರ್ಲಕ್ಷ್ಯ, ಬೇಸರ ಹಾಗೂ ಸಂಬಂಧಗಳಲ್ಲಿ ತೊಡಕು, ಮುಂತಾದ ಹಲವು ಸಮಸ್ಯೆಗಳು ಎದುರಾಗಬಹುದು.

ಸಾಮಾನ್ಯವಾಗಿ ವಯಸ್ಕರ ಕಾರ್ಯನಿರ್ವಹಣೆಯ ವಿಧಾನದ ಮೌಲ್ಯಮಾಪನವನ್ನು ಅಷ್ಟಾಗಿ ಮಾಡದೇ ಇರುವುದರಿಂದ ವಯಸ್ಕರಲ್ಲಿ ಕಂಡುಬರುವ ಎ.ಡಿ.ಎಚ್‌.ಡಿ.ಯನ್ನು ನಿರ್ಲಕ್ಷಿಸಲಾಗುತ್ತದೆ. ಇದು ಒಂದು ಪ್ರಮುಖ ಸಮಸ್ಯೆ ಎಂದು ಪರಿಗಣಿಸಲಾಗಿಲ್ಲ. ಯಾಕೆಂದರೆ ಸಾಮಾಜಿಕ ಆತಂಕ, ಸಾಮಾಜಿಕ ಭಯ, ಮೂಡ್ ಸಮಸ್ಯೆಗಳು, ಮಾದಕ ದ್ರವ್ಯ ಸೇವನೆ, ಅಥವಾ ಇನ್ನಿತರ ಅಂಶಗಳು, ತೊಂದರೆಯನ್ನು ಮರೆಮಾಚಬಹುದು. ಇಂತಹ ಸಂಧರ್ಭಗಳಲ್ಲಿ, ಎ.ಡಿ.ಎಚ್.ಡಿ ಯನ್ನು ಪತ್ತೆಹಚ್ಚಿ ಚಿಕಿತ್ಸೆಗೊಳಪಡಿಸದೇ ಇರುವುದರಿಂದ ಅದು ಬಹುಕಾಲದವರೆಗೂ ಭಾದಿಸಬಹುದು.

ಸೂಚನೆ:ಸಮಾಜದಲ್ಲಿ ಎ.ಡಿ.ಎಚ್‌.ಡಿಯ ಬಗ್ಗೆ ಅರಿವಿಲ್ಲದಿರುವುದು ಮತ್ತು ಅದರ ಕುರಿತಾಗಿರುವ ಅಪವಾದಗಳು ಎ.ಡಿ.ಎಚ್‌.ಡಿ ಲಕ್ಷಣಗಳನ್ನು ಉಲ್ಬಣಗೊಳಿಸಬಹುದು.

ವಯಸ್ಕರಲ್ಲಿ ಎ.ಡಿ.ಎಚ್‌.ಡಿ ಲಕ್ಷಣಗಳು:

ಎ.ಡಿ.ಎಚ್.ಡಿ ಹೊಂದಿರುವ ವಯಸ್ಕರಲ್ಲಿ ಈ ಕೆಳಗಿನ ಸಂಗತಿಗಳು ಕಂಡುಬರಬಹುದು. 

 • ಗಮನಹರಿಸಿ ಕೆಲಸ ಮಾಡಲು ಕಷ್ಟಪಡುವುದು.

 • ಲೌಕಿಕ ಮತ್ತು ದೈನಂದಿನ ಕೆಲಸಗಳು ಮಾಡಲು ಕ್ರಮೇಣವಾಗಿ ಬೇಸರವಾಗುವುದು.

 • ಬಾಹ್ಯ ಕಾರಣಗಳಿಗೆ ಪ್ರತಿಯಾಗಿ ದುಡುಕುತನದ ವರ್ತನೆ, ದುಡುಕು ನಿರ್ಧಾರ.

 • ಅಪಾಯ ಅಥವಾ ಅಪಘಾತಕ್ಕೆ ಕಾರಣವಾಗುವಂತೆ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದು

 • ಇತರರ ಮಾತುಗಳನ್ನು ಸರಿಯಾಗಿ ಕೇಳದಿರುವುದು ಹಾಗೂ ಮಧ್ಯೆ ಬಾಯಿಹಾಕುವುದು.

 • ವಸ್ತುಗಳನ್ನು ಜೋಡಿಸಿ ಇಡಲು ವಿಫಲವಾಗುವುದರ ಜತೆಗೆ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸದಿರುವುದು.

 • ಕೆಲಸ ಪೂರೈಸುವಲ್ಲಿ ಕಷ್ಟಪಡುವುದು. ಇದು ಒತ್ತಡ ಮತ್ತು ಉದ್ವೇಗವನ್ನುಂಟುಮಾಡಬಹುದು.

 • ಸ್ನೇಹಿತರು ಹಾಗೂ ಕುಟುಂಬದವರಿಂದ ಸರಿಯಾದ ಪ್ರೊತ್ಸಾಹ ಸಿಗದಿದ್ದಲ್ಲಿ ಆತ್ಮವಿಶ್ವಾಸ ಹಾಗೂ ಆತ್ಮಗೌರವಗಳನ್ನು ಕಳೆದುಕೊಳ್ಳುವುದು.

Q

ವಯಸ್ಕರಲ್ಲಿ ಎ.ಡಿ.ಎಚ್‌.ಡಿ ಗುಣಲಕ್ಷಣಗಳನ್ನು ಕಂಡುಹಿಡಿಯುವುದು ಮತ್ತು ಚಿಕಿತ್ಸೆ

A

ವಯಸ್ಕರಲ್ಲಿ ಸಮಸ್ಯೆಯ ಗುಣಲಕ್ಷಣಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಹೀಗಾಗಿ ವೈದ್ಯರು ಇದು ಎ.ಡಿ.ಎಚ್‌.ಡಿ ಲಕ್ಷಣ ಎಂದು ಪತ್ತೆಹಚ್ಚುವುದು ಅತ್ಯಂತ ಕಷ್ಟಕರವಾಗುತ್ತದೆ. ಮಹಿಳೆಯರು ಇಂತಹ ಸಮಸ್ಯೆಯನ್ನು ಗೊಂದಲ ಹಾಗೂ ಮೂಡಿನ ಸಮಸ್ಯೆ ಎಂಬ ರೀತಿಯಲ್ಲಿ ವ್ಯಕ್ತಪಡಿಸಬಹುದು. ಹೀಗಾಗಿ ಬಹಳಷ್ಟು ಬಾರಿ ಇದು ಎ.ಡಿ.ಎಚ್‌.ಡಿ ಗುಣಲಕ್ಷಣ ಎಂಬುದಾಗಿ ಗುರುತಿಸುವಲ್ಲಿ ವೈದ್ಯರು ವಿಫಲರಾಗಬಹುದು.

ಮಾನಸಿಕ ಆರೋಗ್ಯ ವೈದ್ಯರು ವ್ಯಕ್ತಿಯ ಬಾಲ್ಯದಿಂದಾರಂಭಿಸಿ ಇಂದಿನವರೆಗಿನ ಇತಿಹಾಸ, ಹಿಂದಿನ ವೈದ್ಯಕೀಯ ಇತಿಹಾಸ, ಮತ್ತು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರೊಡನೆ ನಡೆಸುವ ಚರ್ಚೆಗಳು ಮುಂತಾಗಿ ಹಲವು ಸುತ್ತಿನ ದೀರ್ಘ ಪರೀಕ್ಷೆಗಳನ್ನು ನಡೆಸುತ್ತಾರೆ. ಎ.ಡಿ.ಎಚ್‌.ಡಿಯಂತೆಯೇ ಕಾಣುವ ಅಥವಾ ಅದನ್ನು ಮರೆಮಾಡುವ ಇತರ ಮಾನಸಿಕ ಅಥವಾ ದೈಹಿಕ ಅನಾರೋಗ್ಯಗಳಿವೆಯೇ ಎಂದೂ ತಪಾಸಣೆ ಮಾಡಲಾಗುತ್ತದೆ.

ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯರು ವ್ಯಕ್ತಿಯ ವ್ಯಕ್ತಿತ್ವವನ್ನು (ಶಕ್ತಿ, ಸಾಮರ್ಥ್ಯ, ಕೌಶಲಗಳು)  ಮೊದಲು ತಪಾಸಣೆ ನಡೆಸಿ, ನಂತರ ಸಮಸ್ಯೆಗಿಂತ ಹೆಚ್ಚಾಗಿ ಸಾಧ್ಯವಾಗುವ ಹಾಗೂ ವಾಸ್ತವಿಕ ಅಂಶಗಳ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ.

ಸೂಚನೆ: ಎ.ಡಿ.ಎಚ್‌.ಡಿ ತೊಂದರೆಗಾಗಿ ಯಾವುದೇ ಚಿಕಿತ್ಸೆ ಅಥವಾ ಔಷಧವನ್ನು ಆರಂಭಿಸುವ ಹಾಗೂ ಶಿಫಾರಸು ಮಾಡುವ ಮುನ್ನ ವೈದ್ಯಕೀಯ ಇತಿಹಾಸದ ವಿಶ್ಲೇಷಣೆ ಅತ್ಯಂತ ಪ್ರಮುಖವಾಗಿದೆ.

Q

ಎ.ಡಿ.ಎಚ್‌.ಡಿ ಹೊಂದಿದವರು ಹೀಗೆ ಹೇಳುತ್ತಾರೆ...

A

 ಎ.ಡಿ.ಎಚ್‌.ಡಿ ಸಮಸ್ಯೆಯನ್ನು ನಿಭಾಯಿಸುವ ಕೆಲವು ವ್ಯಕ್ತಿಗಳು ಇತರರಿಗೆ ಹೀಗೆ ಸಲಹೆ ನೀಡುತ್ತಾರೆ.

 • ಇದು ಸಾಮಾನ್ಯ ಸ್ಥಿತಿ. ದುರ್ಬಲತೆ ಅಥವಾ ಬುದ್ಧಿಮಾಂದ್ಯತೆಯಲ್ಲ. ಭರವಸೆ ಕಳೆದುಕೊಳ್ಳದೇ ಆಶಾವಾದಿಗಳಾಗಿ.

 • ನಿಮ್ಮ ಸಾಮರ್ಥ್ಯ, ಬುದ್ಧಿಮತ್ತೆ ಮತ್ತು ಕೌಶಲ್ಯವನ್ನು ನೀವು ಅರಿತುಕೊಳ್ಳಲು ಎ.ಡಿ.ಎಚ್‌.ಡಿ ಅವಕಾಶ ಕಲ್ಪಿಸುತ್ತದೆ.

 • ಸ್ನೇಹಿತರು ಕುಟುಂಬದವರ ಸಹಾಯ ಪಡೆದುಕೊಳ್ಳಿ.

 • ಸ್ಥಿತಿಯನ್ನು ಧನಾತ್ಮಕವಾಗಿ ಸ್ವೀಕರಿಸಿ, ಎದುರಿಸಿ. ಸಮಸ್ಯೆಯನ್ನು ಯಾವ ರೀತಿಯಲ್ಲಿ ಪರಿಹರಿಸಬಹುದು, ಏನು ಮಾಡಬಹುದು ಎಂಬ ಬಗ್ಗೆ ಆಲೋಚಿಸಿ.

 • ಜೀವನದ ಹಲವು ಅಂಶಗಳಲ್ಲಿ ಎ.ಡಿ.ಎಚ್‌.ಡಿ ಬಾಧಿಸಬಹುದು. ಆದರೆ ನಿರಾಶರಾಗದೆ ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿ ಜೀವಿಸಿರಿ.

Q

ಎ.ಡಿ.ಎಚ್‌.ಡಿ ಚಿಕಿತ್ಸೆ ನೀಡುವ ತಜ್ಞರು

A

ಎ.ಡಿ.ಎಚ್‌.ಡಿ ಹೊಂದಿರುವ ಮಕ್ಕಳನ್ನು ಅವರ ಸಮಸ್ಯೆಯ ತೀವ್ರತೆಯನ್ನು ಆಧರಿಸಿ ಈ ಕೆಳಗೆ ಹೇಳಲಾದ ತಜ್ಞರ ಬಳಿ ಕರೆದುಕೊಂಡು ಹೋಗಿ ಸಲಹೆ ಪಡೆಯುವುದು ಅವಶ್ಯಕ.

 • ಕ್ಲಿನಿಕಲ್ ಸೈಕಾಲಜಿಸ್ಟ್: ಬೌದ್ಧಿಕ ಮತ್ತು ಭಾವನಾತ್ಮಕ ಕಾರ್ಯನಿರ್ವಹಣೆಯನ್ನು ಪರೀಕ್ಷಿಸುತ್ತಾರೆ ಮತ್ತು ಸೈಕೋಥೆರಪಿಯನ್ನು ನೀಡುತ್ತಾರೆ.

 • ಶೈಕ್ಷಣಿಕ ಮನೋರೋಗಶಾಸ್ತ್ರಜ್ಞರು: ಮಕ್ಕಳಲ್ಲಿ ಕಲಿಕೆ ಮತ್ತು ವರ್ತನೆಯನ್ನು ವಿಶ್ಲೇಷಿಸುತ್ತಾರೆ ಮತ್ತು ಅವರ ಶೈಕ್ಷಣಿಕ ಸಂಯೋಜನೆ, ಗ್ರಹಣಸಾಮರ್ಥ್ಯ ಹಾಗೂ ಬೌದ್ಧಿಕ ಕಾರ್ಯನಿರ್ವಹಣೆಯನ್ನು ಪರೀಕ್ಷಿಸುತ್ತಾರೆ.

 • ಭಾಷೆ ಮತ್ತು ಮಾತು ತಜ್ಞರು: ಹೆಚ್ಚಿನ ಕಲಿಕೆಯ ಅಸಾಮರ್ಥ್ಯಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿರುವ ಮಾತು ಮತ್ತು ಭಾಷಾ ಸಮಸ್ಯೆಯ ಪತ್ತೆ ಹಾಗೂ ವಿಶ್ಲೇಷಣೆ ಮಾಡುತ್ತಾರೆ.

 • ಔದ್ಯೋಗಿಕ ಚಿಕಿತ್ಸಕರು: ಮಗುವಿನ ಚಲನೆ, ದೃಷ್ಟಿಯ ಚಲನೆ, ಗ್ರಹಿಕೆ ಮತ್ತು ಪರಿಕಲ್ಪನೆ, ಸಂವೇದನೆ ಮತ್ತು ದಿನನಿತ್ಯದ ಕಾರ್ಯನಿರ್ವಹಣಾ ಕೌಶಲ್ಯಗಳನ್ನು ವಿಶ್ಲೇಷಿಸುತ್ತಾರೆ. ಈ ಎಲ್ಲ ಕಾರ್ಯಗಳು ಮಗುವಿನ ಕಲಿಕೆಯ ಪ್ರಕ್ರಿಯೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವಿಸುತ್ತವೆ.

 • ನರರೋಗಶಾಸ್ತ್ರಜ್ಞರು: ಮಿದುಳಿನ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯಿದೆಯೇ ಎಂದು ತಪಾಸಣೆ ನಡೆಸುತ್ತಾರೆ.

 • ಮನೋರೋಗ ಚಿಕಿತ್ಸಕರು: ತೀವ್ರ ವರ್ತನೆ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಗುರುತಿಸುತ್ತಾರೆ ಮತ್ತು ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತಾರೆ.

 • ಶಿಶುವೈದ್ಯರು: ಶಿಶುಗಳು, ಮಕ್ಕಳು ಹಾಗೂ ಹದಿವಯಸ್ಕರಿಗೆ ವೈದ್ಯಕೀಯ ಸೇವೆ ನೀಡುತ್ತಾರೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ತರಬೇತಿಪಡೆದವರಾಗಿರುತ್ತಾರೆ.

 • ವಿಶೇಷ ಶಿಕ್ಷಕರು:  ಎ.ಡಿ.ಎಚ್‌.ಡಿ ಸಮಸ್ಯೆಯಿರುವ ಮಕ್ಕಳು ಸಾಂಪ್ರದಾಯಿಕ ಶಿಕ್ಷಣ ಪದ್ದತಿಗೆ ಹೊಂದಿಕೊಳ್ಳಲು ಕಷ್ಟಪಡಬಹುದು.  ಮತ್ತು ಶಿಕ್ಷಕರು ಈ ಮಕ್ಕಳಿಗೆ ಭೋಧಿಸುವ ಕೌಶಲ್ಯವನ್ನು ಹೊಂದಿರುವುದಿಲ್ಲ. ಆದ್ದರಿಂದ ಇದಕ್ಕೆ ವಿವಿಧ ರೀತಿಯ ಪರ್ಯಾಯ ಬೋಧನಾ ಸಂಪನ್ಮೂಲಗಳಿಂದ ಕೂಡಿದ (ಉದಾ: ಕಲಿಕೆಯ ಸಾಧನಗಳು, ಸೂಚನೆಯನ್ನೊದಗಿಸುವ ಸಲಕರಣೆಗಳು, ದೃಶ್ಯ-ಶ್ರವಣ ಮೂಲಗಳು, ತಾಂತ್ರಿಕತೆ ಇತ್ಯಾದಿ) ವಿಶೇಷ ಶಿಕ್ಷಣವು ಅಗತ್ಯವಿದೆ. ಆ ನಿಟ್ಟಿನಲ್ಲಿ ನಿರ್ಧಿಷ್ಟ ತರಬೇತಿ ಪಡೆದ ಶಿಕ್ಷಕರು ಈ ಅಗತ್ಯವನ್ನು ಪೂರೈಸುತ್ತಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org