ಆಟಿಸಂ (ಸ್ವಲೀನತೆ)

Published on
Q

ಆಟಿಸಂ ಎಂದರೇನು?

A

ಆಟಿಸಂ ನರವ್ಯೂಹಕ್ಕೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಮೆದುಳಿನ ಸಾಮಾನ್ಯ ಬೆಳವಣಿಗೆಯನ್ನು ಕುಂಠಿತಗೊಳಿಸಿ ವ್ಯಕ್ತಿಯ ಸಂವಹನ, ಸಾಮಾಜಿಕ ಒಡನಾಟ, ಗ್ರಹಿಕೆ ಮತ್ತು ವರ್ತನೆಗಳ ಮೇಲೆ ಪರಿಣಾಮ ಬೀರುತ್ತದೆ.

ಸ್ಪೆಕ್ಟ್ರಮ್ ಡಿಸಾರ್ಡರ್ ಎಂದು ಕೂಡ ಇದನ್ನು ಕರೆಯಲಾಗುತ್ತದೆ. ಯಾಕೆಂದರೆ ಇದರ ರೋಗಲಕ್ಷಣಗಳು ನಾನಾ ಬಗೆಯ ಮಿಶ್ರಣ ಸ್ವರೂಪಗಳಲ್ಲಿ ಕಾಣಿಸಿಕೊಂಡು ವಿವಿಧ ರೀತಿಯ ತೊಂದರೆಗಳನ್ನು ಉಂಟುಮಾಡುತ್ತದೆ.  ಆಟಿಸಂನಿಂದ ಬಳಲುವ ಕೆಲ ಮಕ್ಕಳು ಹಲವಾರು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆಟಿಸಂನಿಂದ ಬಳಲುವ ಮಕ್ಕಳಿಗೆ ತಮ್ಮ ಕೆಲಸಗಳನ್ನು ನಿರ್ವಹಿಸಲು ಇತರರ ಸಹಾಯದ ಅವಶ್ಯಕತೆಯಿರಬಹುದು.

ಮೊದಲೆಲ್ಲ ಆಟಿಸಂನ ಪ್ರತಿಯೊಂದೂ ಸ್ಥಿತಿಯನ್ನು ಬೇರೆಬೇರೆಯಾಗಿಯೇ ಪತ್ತೆಹಚ್ಚಲಾಗುತ್ತಿತ್ತು. ಆಟಿಸ್ಟಿಕ್ ಡಿಸಾರ್ಡರ್, ಪರ್ವೇಸಿವ್ ಡೆವಲಪ್ಮೆಂಟಲ್ ಡಿಸಾರ್ಡರ್-ನಾಟ್ ಅದರ್ ವೈಸ್ ಸ್ಪೆಸಿಫೈಡ್ (PDD-NOS) ಮತ್ತು ಆಸ್ಪೆರ್ಜೆರ್ಸ್ ಸಿಂಡ್ರೋಂ (Asperger's syndrome), ಆದರೆ, ಈಗ, ಈ ಎಲ್ಲ ಸ್ಥಿತಿಗಳನ್ನು ಒಟ್ಟಾಗಿ ಸೇರಿಸಿ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಎಂದು ಕರೆಯಲಾಗುತ್ತದೆ.

ವಾಸ್ತವಾಂಶ:

  • ಆಟಿಸಂ ಖಾಯಿಲೆಯು ಸಾಮಾನ್ಯವಾಗಿ ವಿಕಸನಗೊಳ್ಳುವ ಮೂರನೇ ಬೃಹತ್ ಖಾಯಿಲೆ.

  • ಆಕ್ಷನ್ ಫಾರ್ ಆಟಿಸಂ ಸಂಸ್ಥೆ ಕೈಗೊಂಡ ಸೋಂಕುಶಾಸ್ತ್ರ ಅಧ್ಯಯನವೊಂದರ ಪ್ರಕಾರ ಆಟಿಸಂನಿಂದ ಬಳಲುತ್ತಿರುವವರ ಪ್ರಮಾಣ 1.7 ಮಿಲಿಯನ್ ಎಂದು ಅಂದಾಜುಮಾಡಲಾಗಿದೆ. (250 ಮಕ್ಕಳಲ್ಲಿ ಒಬ್ಬರಿಗೆ ಬರುತ್ತದೆ ಎಂದು ಅಂದಾಜಿಸಲಾಗಿದೆ)

  • ಆಟಿಸಂ ಖಾಯಿಲೆಗೆ ಮದ್ದಿಲ್ಲ.

Q

ಆಟಿಸಂ ಗುಣಲಕ್ಷಣಗಳೇನು?

A

ಆಟಿಸಂ ಗುಣಲಕ್ಷಣಗಳನ್ನು ಸಾಮಾನ್ಯವಾಗಿ ಮಗುವಿನ ಮೊದಲ 3 ವರ್ಷಗಳಲ್ಲೇ ಗಮನಿಸಬಹುದು. ಈ ತೊಂದರೆಯ ಲಕ್ಷಣಗಳು ಸಾಧಾರಣ ಅಥವಾ ತೀವ್ರವಾಗಿರಬಹುದು. ಈ ತೊಂದರೆಗಳು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಭಿನ್ನವಾಗಿರಬಹುದು. ಮಗು ಬೆಳೆದಂತೆ ಈ ಗುಣಲಕ್ಷಣಗಳು ಸಹ ಬದಲಾಗಬಹುದು. ಗ್ರಹಣ ಸಾಮರ್ಥ್ಯದ ತೀವ್ರ ಕೊರತೆ ಮತ್ತು ಚಲನಾ ಕೌಶಲ್ಯದ ಕೊರತೆಯನ್ನು ಎದುರಿಸುತ್ತಿರುವ ಮಗುವೊಂದರಲ್ಲಿ ಮೂರ್ಛೆರೋಗ ಕೂಡ ಕಂಡುಬರಬಹುದು. ಆದಾಗ್ಯೂ ಕೆಲವು ನಿರ್ದಿಷ್ಟ ವರ್ತನೆಗಳು ಈ ಖಾಯಿಲೆಯ ಸ್ಥಿತಿಯ ಸೂಚಕಗಳಾಗಿರುತ್ತವೆ.

ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹಂತದಲ್ಲಿ ಈ ಕೆಳಗಿನ ಕೆಲ ಅಂಶಗಳನ್ನು ಗಮನಿಸಬಹುದು.

ಆಟಿಸಂನೊಂದಿಗೆ ಕಂಡುಬರುವ ಇತರ ಲಕ್ಷಣಗಳು: ಬುದ್ಧಿಮಾಂದ್ಯತೆ, ಅತಿಯಾದ ಕ್ರಿಯಾಶೀಲತೆ, ಚಲನವಲನದಲ್ಲಿನ ಅಡೆತಡೆಗಳು, ಮೂರ್ಛೆಹೊಂದುವುದು, ಕಲಿಯುವ ತೊಂದರೆ, ಶ್ರವಣ ಅಥವಾ ದೃಷ್ಟಿದೋಷ ಮುಂತಾದ ಇತರ ಸಮಸ್ಯೆಗಳು ಆಟಿಸಂನೊಂದಿಗೆ ಜೊತೆಯಾಗಿ ಕಾಣಿಸಿಕೊಳ್ಳಬಹುದು.

ಆಟಿಸಂನಿಂದ ಬಳಲುತ್ತಿರುವ ಮಕ್ಕಳು ಈ ಕೆಳಗೆ ಹೇಳಲಾಗಿರುವ ಸಂವಹನದ ಕೆಲವು ತೊಂದರೆಗಳನ್ನು ಹೊಂದಿರಬಹುದು

  • ಸಾಕಷ್ಟು ಪದಗಳನ್ನು ಹೊಂದಿದ್ದರೂ ಕೂಡ ಅರ್ಥಪೂರ್ಣ ವಾಕ್ಯಗಳ ರಚನೆಗೆ ಗಣನೀಯವಾಗಿ ಕಷ್ಟಪಡುವುದು.

  • ಕೆಲವು ವೇಳೆ ಪದಗಳನ್ನು, ನುಡಿಗಟ್ಟುಗಳನ್ನು ಪದೆಪದೇ ಪುನರುಚ್ಚರಿಸಬಹುದು.

  • ಮತ್ತೆಮತ್ತೆ ಅದೇ ಹಾವಭಾವಗಳನ್ನು ಪ್ರದರ್ಶಿಸಬಹುದು.

  • ಮಾತನಾಡುವಾಗ ಸಂಜ್ಞೆಗಳನ್ನು ಬಳಸಬಹುದು.

  • ಸಂವಹನಕ್ಕೆ ಅಗತ್ಯವಾದ ಭಾಷೆಯನ್ನು ಕಲಿಯಬಹುದು ಅಥವಾ ಕಲಿಯದೆಯೂ ಇರಬಹುದು.

  • ತಮ್ಮ ಅಗತ್ಯ, ಅನಿಸಿಕೆ ಮತ್ತು ಭಾವನೆಗಳನ್ನು ಅಭಿವ್ಯಕ್ತಪಡಿಸಲು ಕಷ್ಟಪಡುವುದು.

  • ಸಂವಹನದ ನಡುವೆ ಮಾತನಾಡಲು, ಧ್ವನಿಗೂಡಿಸಲು, ಹಾವಭಾವ ಪ್ರದರ್ಶಿಸಲು ಅಸಮರ್ಥರಾಗಿರುವುದು.

  • ಬೇರೊಬ್ಬರು ಮಾತನಾಡುವಾಗ ಅವರತ್ತ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗದಿರುವುದು.

ಆಟಿಸಂನಿಂದ ಬಳಲುವ ಮಕ್ಕಳು ಸಾಮಾಜಿಕವಾಗಿ ಬೆರೆಯುವಾಗ ಈ ಕೆಳಗೆ ಹೇಳಲಾದ ಕೆಲವು ತೊಂದರೆಗಳನ್ನು ಅನುಭವಿಸಬಹುದು:

  • ನವಜಾತ ಶಿಶುವಾಗಿದ್ದಾಗ, ದೊಡ್ಡವರು ಯಾರಾದರೂ ಎತ್ತಿಕೊಂಡು ಆಡಿಸಿದಾಗ ನಗದೇ ಇರಬಹುದು ಅಥವಾ ಯಾವುದೇ ಹಾವಭಾವಗಳನ್ನು ತೋರದಿರಬಹುದು.

  • ಸಾಮಾಜಿಕ ಕೌಶಲ್ಯಗಳನ್ನು ಕಲಿಯಲು ಅಥವಾ ಜನರೊಂದಿಗೆ ಬೆರೆಯಲು ಕಷ್ಟಪಡುವುದು.

  • ಸ್ನೇಹಿತರನ್ನು ಮಾಡಿಕೊಳ್ಳಲು ಇಷ್ಟಪಡದಿರುವುದು ಮತ್ತು ಏಕಾಂಗಿಯಾಗಿ ಆಟ ಆಡುವುದು.

  • ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ತಪ್ಪಿಸಿಕೊಳ್ಳುವುದು.

  • ಪರಸ್ಪರ ಸೂಕ್ತ ಪ್ರತಿಕ್ರಿಯೆಯನ್ನು ನೀಡಲಾರದ್ದಕ್ಕಾಗಿ ಸುತ್ತಮುತ್ತಲಿರುವ ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಅಸಮರ್ಥರಾಗಿರುವುದು.

  • ದೈನಂದಿನ ಬದಲಾವಣೆಗಳನ್ನು ಒಪ್ಪಿಕೊಳ್ಳಲು ಪರದಾಡುವುದು.

  • ವಸ್ತುಗಳ ವಾಸನೆ, ರುಚಿ, ರೂಪ, ವಿನ್ಯಾಸ ಅಥವಾ ಧ್ವನಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು.

ಸಂವೇದನೆಗೆ ಸಂಬಂಧಿಸಿದ ತೊಂದರೆಗಳು:

  • ಶ್ರವಣದೋಷ.

  • ಸ್ಪರ್ಶ, ಶಬ್ಧ, ಬೆಳಕು, ಬಣ್ಣ, ರುಚಿ, ವಾಸನೆಗಳ ಕುರಿತು ಅತಿ ಸೂಕ್ಷ್ಮವಾಗಿರುವುದು.

  • ಕೆಲ ಆಹಾರಗಳ ಕುರಿತು ಸೂಕ್ಷ್ಮತೆ.

  • ಸ್ಪರ್ಶ ಅಥವಾ ದೈಹಿಕ ಸಂಪರ್ಕದಿಂದ ಅಸಹನೆಗೊಳ್ಳುವುದು.

ವರ್ತನೆಗೆ ಸಂಬಂಧಿಸಿದಂತೆ:

  • ಮಾರ್ಗದರ್ಶನ ಅಥವಾ ಸೂಚನೆಗಳನ್ನು ಪಾಲಿಸಲು ಕಷ್ಟಪಡುವುದು.

  • ಗೊಂಬೆ, ವಸ್ತುಗಳೊಂದಿಗೆ ಅಸಾಮಾನ್ಯ ಬಾಂಧವ್ಯ ತೋರಿಸುವುದು, ನಿರ್ದಿಷ್ಟ ಚಟುವಟಿಕೆ ಕುರಿತು ಅಸಾಮಾನ್ಯ ಆಸಕ್ತಿ ತೋರುವುದು.

  • ಚಟುವಟಿಕೆಗಳು ಮತ್ತು ಆಟದಲ್ಲಿ ಸಾಮಾನ್ಯವಾಗಿ ಆಲಸ್ಯ, ಪುನರಾವರ್ತನೆ ಮತ್ತು ಏಕತಾನತೆ.

  • ನಿಜವಾದ ಆಘಾತಗಳಿಗೆ ಭಯಪಡದೇ ಇರುವುದು ಆದರೆ ಅಹಿತಕರವಲ್ಲದ ವಸ್ತುಗಳ ಕುರಿತು ಭಯಗೊಳ್ಳುವುದು.

  • ತಕ್ಷಣದ ಮೂಡ್ ಬದಲಾವಣೆ; ಅತಿಯಾಗಿ ನಗುವುದು ಅಥವಾ ಕಾರಣವಿಲ್ಲದೆ ಅಳುವುದು. ಸ್ನಾಯುಗಳ ಚಟುವಟಿಕೆ ಹೆಚ್ಚಳದಿಂದ ಅವರ ಚಲನವಲನಗಳಲ್ಲಿ ಉಂಟಾಗುವ ಅಸ್ವಾಭಾವಿಕತೆಯು ಆಟಿಸಂನಿಂದ ಬಳಲುತ್ತಿರುವ ಮಗುವಿನಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್‌ಕೆನೆಸಿಸ್ (hyperkinesis) ಎನ್ನುತ್ತಾರೆ.

  • ಸ್ವಭಾವದಲ್ಲಿ ಆಕ್ರಮಣಶೀಲತೆ ಮತ್ತು ಉದ್ವೇಗ ಕಾಣಿಸಿಕೊಳ್ಳುತ್ತದೆ. ಇದು ಅತಿಯಾದಾಗ ಬದಲಾವಣೆ ಅಥವಾ ಬೇಡಿಕೆಗಳಿಂದ ಪ್ರೇರಿತವಾಗಿರುತ್ತದೆ.

  • ಯಾವುದಾದರೊಂದು ವಿಷಯವನ್ನು ಗ್ರಹಿಸಲು ಸಮಯ ತೆಗೆದುಕೊಳ್ಳುವುದು, ಯಾವುದೇ ವಿಷಯದ ಮೇಲೆ ಗಮನವಿಡುವ ಅವಧಿ ಕಡಿಮೆಯಾಗಿರುತ್ತದೆ.

  • ಆಹಾರಗಳು ಮತ್ತು ಅವುಗಳ ಸೇವನೆಯಲ್ಲಿ ಸಮಸ್ಯೆ.

  • ಅನೈಚ್ಛಿಕ ಮೂತ್ರಸ್ರಾವ.

Q

ಲಭ್ಯವಿರುವ ಸಾಂದರ್ಭಿಕ ಚಿಕಿತ್ಸೆಗಳು

A

ಕೆಲ ಇತರ ರೋಗಗಳ ಅಸ್ತಿತ್ವವನ್ನು ಅಲ್ಲಗಳೆಯಲು ಸಾಂದರ್ಭಿಕ ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಅವುಗಳೆಂದರೆ:

  • ಬಾಲ್ಯದಲ್ಲಿನ ಮನೋವ್ಯಾಧಿ

  • ಜನ್ಮಜಾತ ಕಿವುಡು, ತೀವ್ರ ಕಿವುಡತನ

  • ತೀವ್ರ ಬುದ್ಧಿಮಾಂದ್ಯತೆ. ಆಟಿಸಂ ಮತ್ತು ಬುದ್ಧಿಮಾಂದ್ಯತೆಗೆ ಇರುವ ಪ್ರಮುಖ ವ್ಯತ್ಯಾಸವೆಂದರೆ, ಬುದ್ಧಿಮಾಂದ್ಯತೆ ಹೊಂದಿರುವ ಮಗು ಮಾನಸಿಕವಾಗಿ ತರುಣ ವಯಸ್ಕರಂತೆ ವರ್ತಿಸುತ್ತದೆ ಮತ್ತು ಇತರರೊಂದಿಗೆ ಸಂವಹನ ಮಾಡಲು ದೊಡ್ಡವರು ಉಪಯೋಗಿಸುವ ಭಾಷೆಯನ್ನು ಬಳಸುತ್ತದೆ.

  • ಮನೋಸಾಮಾಜಿಕ ಅಂಶಗಳ ಕೊರತೆಯಿಂದಾಗಿ ಇಂತಹ ಮಕ್ಕಳಲ್ಲಿ ಉದಾಸೀತೆ, ಹಿಂಜರಿಕೆ ಮತ್ತು ಪರಕೀಯ ಭಾವನೆಗಳುಂಟಾಗಬಹುದು.

ಗಮನಿಸಿ: ಆಟಿಸಂನಿಂದ ಬಳಲುವ ಮಗು ಅವನ/ಅವಳದೇ ಆದ ಸ್ವಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಹೊಂದಿರುತ್ತದೆ. ಪಾಲಕರು ಮತ್ತು ಶಿಕ್ಷಕರು ಈ ರೀತಿಯ ಧನಾತ್ಮಕ ಅಂಶಗಳ ಕುರಿತು ಗಮನ ಹರಿಸಿ ಮಗುವಿನ ಪ್ರತಿಭೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪೂರಕವಾಗಿ ಕೆಲಸ ನಿರ್ವಹಿಸುವುದು ಅವಶ್ಯಕ.

Q

ಶಕ್ತಿ ಮತ್ತು ಸಾಮರ್ಥ್ಯಗಳು

A

  • ಸ್ಥಳಗಳು ಮತ್ತು ದೃಶ್ಯಗಳಿಗೆ ಸಂಬಂಧಿಸಿದಂತೆ ಅನುಪಮ ನೆನಪು

  • ಕ್ರಮಬದ್ಧವಾಗಿ ಮತ್ತು ಸಂಘಟಿತ ಸ್ವರೂಪದಲ್ಲಿ ಕೆಲಸಗಳ ನಿರ್ವಹಣೆ

  • ಅಮೂರ್ತವಾದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ

  • ತಮಗೆ ಇಷ್ಟವಿರುವ ವಿಷಯ ಅಥವಾ ಚಟುವಟಿಕೆಯಲ್ಲಿ ಅತ್ಯುತ್ತಮ ಪ್ರತಿಭೆ

  • (ಚೆನ್ನಾಗಿ ಮಾತನಾಡುವ ಮಕ್ಕಳಲ್ಲಿ) ವಿವಿಧ ಭಾಷೆಗಳ ಕುರಿತು ಆಸಕ್ತಿ

Q

ಆಟಿಸಂ ಉಂಟಾಗಲು ಕಾರಣವೇನು?

A

ಆಟಿಸಂ ಹೇಗೆ ಉಂಟಾಗುತ್ತದೆ ಎಂಬುದರ ಕುರಿತು ನಿರ್ದಿಷ್ಟ ಕಾರಣ ಈವರೆಗೆ ತಿಳಿದಿಲ್ಲ. ಆದರೆ ಇದು ವಂಶವಾಹಿ ಮತ್ತು ಪ್ರಾಕೃತಿಕ ಅಂಶಗಳಿಂದ ಉಂಟಾಗಬಹುದು ಎಂದು ಸಂಶೋಧನೆಗಳು ಅಂದಾಜಿಸುತ್ತವೆ. ಪ್ರಾಕೃತಿಕ ಅಂಶಗಳು ನಾನಾ ವಿಧಗಳಾಗಿದ್ದು ಮೆದುಳಿನ ಬೆಳವಣಿಗೆಯಲ್ಲಿ ಪರಿಣಾಮ ಬೀರಬಹುದು. ಇದು ಹುಟ್ಟಿಗೆ ಮೊದಲು ಅಥವಾ ಹುಟ್ಟಿದ ತಕ್ಷಣ ಕಾಣಿಸಿಕೊಳ್ಳಬಹುದು. ನವಜಾತ ಶಿಶುವಿನಲ್ಲಿ ಕೇಂದ್ರ ನರಮಂಡಲ ವ್ಯವಸ್ಥೆಯಲ್ಲಾಗುವ ಯಾವುದೇ ಹಾನಿಯಿಂದಲೂ ಆಟಿಸಂ ಉಂಟಾಗಬಹುದು.

Q

ಆಟಿಸಂಗೆ ಚಿಕಿತ್ಸೆ

A

ಆಟಿಸಂ ಜೀವನಪರ್ಯಂತ ಉಳಿದುಕೊಳ್ಳುತ್ತದೆ. ಇದನ್ನು ಪೂರ್ತಿ ಗುಣಮುಖವಾಗಿಸುವ ಯಾವುದೇ ಸೂಕ್ತ ಚಿಕಿತ್ಸೆಯಿಲ್ಲ. ಆದರೆ ಸರಿಯಾದ ಥೆರಪಿ ಅಥವಾ ಮಧ್ಯಸ್ಥಿಕೆಯಿಂದ (intervention) ಮಗು ಗುಣಮಟ್ಟದ ಜೀವನ ನಡೆಸಲು ಬೇಕಾದ ಕೌಶಲ್ಯಗಳ ಅಭಿವೃದ್ಧಿ ಸಾಧ್ಯ. 18 ತಿಂಗಳು ಅಥವಾ ಅದಕ್ಕಿಂತ ಮೊದಲು ಮಗುವಿನಲ್ಲಿ ಆಟಿಸಂ ಪತ್ತೆ ಮಾಡಿದರೆ, ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಪೂರಕ ಬೆಂಬಲವನ್ನು ಮುಂಚಿತವಾಗಿ ನೀಡಿ ಅಪೇಕ್ಷಿತ ಪರಿಣಾಮವನ್ನು ಪಡೆಯಬಹುದು.

ಪಾಲಕರಿಗೆ ಮಹತ್ವದ ಸೂಚನೆ: ಮುಂಜಾಗ್ರತಾ ಕ್ರಮವಾಗಿ ಮಗುವಿನಲ್ಲಾಗುವ ಯಾವುದೇ ವಿಕಾಸ ಮತ್ತು ಭಾಷಾ ಸಾಮರ್ಥ್ಯ ಬೆಳವಣಿಗೆಯ ಕುರಿತಾಗಿ ಪರೀಕ್ಷಿಸಲು ಕಾಲಕಾಲಕ್ಕೆ ನಿಯಮಿತವಾಗಿ ವಿಕಸನ ಪರೀಕ್ಷೆಗಳನ್ನು ಮಾಡುವಂತೆ ಪಾಲಕರು  ಶಿಶುವೈದ್ಯರನ್ನು ಕೇಳಬಹುದು.

Q

ಆಟಿಸಂ ಪತ್ತೆ ಹಚ್ಚುವದು ಹೇಗೆ?

A

ಆಟಿಸಂ ಖಚಿತಪಡಿಸಲು ಯಾವುದೇ ಒಂದು ನಿರ್ದಿಷ್ಟ ವೈದ್ಯಕೀಯ ಪರೀಕ್ಷೆಯಿಲ್ಲ. ಆದರೆ ಒಂದಷ್ಟು ವಿಧದ ನಿರ್ದಿಷ್ಟ ಮೌಲ್ಯಮಾಪನಗಳು ಮತ್ತು ತಪಾಸಣೆಯಿಂದ ಪರಿಸ್ಥಿತಿಯನ್ನು ಖಚಿತಗೊಳಿಸಬಹುದು. ಅವುಗಳಲ್ಲಿ ಕೆಲವೆಂದರೆ:

  • ದೈಹಿಕ ಮತ್ತು ನರವ್ಯೂಹ (ನರವೈಜ್ಞಾನಿಕ) ಪರೀಕ್ಷೆ [Physical and nervous system (neurological) test]
  • ಪರಿಷ್ಕೃತ ಆಟಿಸಂ ರೋಗನಿರ್ಣಯ ಸಂದರ್ಶನ- [Autism Diagnostic Interview - Revised (ADI-R)]
  • ಆಟಿಸಂ ರೋಗನಿರ್ಣಯ ಅವಲೋಕನ [Autism Diagnostic Observation Schedule (ADOS)]
  • ಬಾಲ್ಯಾವಸ್ಥೆಯ ಆಟಿಸಂ ಪ್ರಮಾಣ ಮಾಪಕ [Childhood Autism Rating Scale (CARS)]
  • ಗಿಲಿಯಂ ಆಟಿಸಂ ಪ್ರಮಾಣ ಮಾಪಕ [Gilliam Autism Rating Scale (GARS)]
  • ರೋಗವಿಕಸನ ಅಭಿವೃದ್ಧಿ ಪತ್ತೆ ಪರೀಕ್ಷೆ [ Pervasive Developmental Disorders Screening Test (PDDST)]
  • ವರ್ಣತಂತುವಿನಲ್ಲಿರುವ ಅಸಹಜತೆಗಳ ಪತ್ತೆಗಾಗಿ ವಂಶವಾಹಿ ಪರೀಕ್ಷೆ [Genetic testing to check for chromosomal abnormalities]
  • ಸಂವಹನ, ಭಾಷೆ, ಮಾತು, ಚಲನಾ ಕೌಶಲ್ಯ, ಶೈಕ್ಷಣಿಕ ಸಾಮರ್ಥ್ಯ ಮತ್ತು ಬೆಳವಣಿಗೆ, ಜ್ಞಾಪನ ಪರೀಕ್ಷೆಗಳು

Q

ಆಟಿಸಂ ಚಿಕಿತ್ಸೆಯ ಪ್ರಕಾರಗಳು

A

ಶಾಲೆಯ ವಾತಾವರಣಕ್ಕೆ ಮಗು ಹೊಂದಿಕೊಳ್ಳಲು, ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಿಕೊಳ್ಳಲು ಹಾಗೂ ತಾರುಣ್ಯದಲ್ಲಿ ಸ್ವತಂತ್ರವಾಗಿ ಬದುಕುವ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯಕವಾಗುವಂತೆ ಮಗುವಿನ ವರ್ತನೆಯನ್ನು ಸುಧಾರಿಸಲು ಪ್ರಯತ್ನಿಸುವುದು ಚಿಕಿತ್ಸೆಯ ಗುರಿಯಾಗಿರುತ್ತದೆ.

ಅಸಹಜವಾದ ವರ್ತನೆಗಳನ್ನು ಕಡಿಮೆ ಮಾಡಿ ಸಹಜತೆ ಹೆಚ್ಚಿಸುವುದು ಮತ್ತು ಆಟಿಸಂನಿಂದ ಬಳಲುತ್ತಿರುವವರನ್ನು ಸಮಾಜವು ಸ್ವೀಕರಿಸುವಂತೆ ಮಾಡುವುದು, ಮಗು ಬಳಸುವ ಹಾವಭಾವ ಮತ್ತು ಸಂಜ್ಞಾರೂಪಕ ಸಂವಹನಗಳ ಅಭಿವೃದ್ಧಿ ಮೊದಲಾದವು ಚಿಕಿತ್ಸೆಯ ಉದ್ದೇಶಗಳಾಗಿವೆ.

ರಚನಾತ್ಮಕವಾದ ಮತ್ತು ಸುಸ್ಥಿರ ಮಾನಸಿಕ ಮಾರ್ಗದರ್ಶನ ಸಿಕ್ಕರೆ ಆಟಿಸಂನಿಂದ ಬಳಲುತ್ತಿರುವ ಮಕ್ಕಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಾಣಬಹುದು.

ಅನ್ವಯಿಕ ವರ್ತನೆಯ ವಿಶ್ಲೇಷಣೆ (Applied Behavior Analysis): ಮಗುವಿನ ಗ್ರಹಣ ಶಕ್ತಿ, ಸಾಮಾಜಿಕ ವರ್ತನೆ, ಚಲನವಲನ, ಆಟಪಾಠ ಮತ್ತು ಸ್ವಸಹಾಯ ಕೌಶಲ್ಯ ವೃದ್ಧಿಗೆ ಸಹಾಯ ಮಾಡಲು ಮುಖಾಮುಖಿ ಸಂದರ್ಶನಗಳನ್ನು ಆಯೋಜಿಸಲಾಗುತ್ತದೆ. ಸುಲಭಸಾಧ್ಯ ಕೆಲಸಗಳಿಂದ ಹಿಡಿದು ಸಂಕೀರ್ಣ ಸ್ವರೂಪದ ಚಟುವಟಿಕೆಗಳನ್ನು ಮಾಡುವವರೆಗೆ ಮಗುವಿಗೆ ತರಬೇತಿ ನೀಡಿ ಕಲಿಸಲಾಗುತ್ತದೆ. ಕಲಿಸಲಾಗುವ ಪ್ರತಿಯೊಂದೂ ಕೆಲಸಗಳನ್ನೂ ಉಪವಿಭಾಗಗಳಾಗಿ ವಿಂಗಡಿಸಿ ಮಗು ನಿಗದಿತ ಸಮಯದಲ್ಲಿ ಅವುಗಳನ್ನು ಪೂರೈಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ನಿರೀಕ್ಷಿತ ನಡುವಳಿಕೆಗಳು ಮತ್ತು ಕೌಶಲ್ಯಗಳನ್ನು ಮಗು ಕಲಿಯಲು ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವಂತಾಗಲು ಬಹುಮಾನ ನೀಡುವ ಅಥವಾ ಬಲವರ್ಧನಾ ವಿಧಾನಗಳನ್ನು ಇಲ್ಲಿ ಬಳಸಲಾಗುತ್ತದೆ. ಮಗುವಿನ ಪ್ರಗತಿಯನ್ನು ದಾಖಲಿಸುತ್ತ ಮೌಲ್ಯಮಾಪನಕ್ಕೊಳಪಡಿಸಲಾಗುತ್ತದೆ. ಅಪ್ಲೈಡ್ ಬಿಹೇವಿಯರ್ ಅನಾಲಿಸಿಸ್ (ಎಬಿಎ) ಪ್ರಕಾರಗಳು ಹೀಗಿವೆ:

ಡಿಸ್ಕ್ರೀಟ್ ಟ್ರೈಯಲ್ ಟ್ರೇನಿಂಗ್ (DTT): ಈ ವಿಧಾನದಲ್ಲಿ ನಿರೀಕ್ಷಿತ ವರ್ತನೆ ಅಥವಾ ಪ್ರತಿಕ್ರಿಯೆಗಳನ್ನು ಪಡೆಯಲು ಅಗತ್ಯವಾಗಿರುವ ಪ್ರತಿಯೊಂದು ಹಂತದ ಪರೀಕ್ಷಾ ವಿಧಾನಗಳ ಸರಣಿಯನ್ನು ಕಲಿಸಲಾಗುತ್ತದೆ. ಪಾಠಗಳನ್ನು ಸುಲಭವಾದ ಕಂತುಗಳಾಗಿಸಿ ಸೂಕ್ತ ಉತ್ತರ ಮತ್ತು ವರ್ತನೆಗಳನ್ನು ಪಡೆಯಲು ಗುಣಾತ್ಮಕವಾಗಿ ಬಲಪಡಿಸುವ ವಿಧಾನವನ್ನು ಅಳವಡಿಸಲಾಗುತ್ತದೆ. ತಪ್ಪು ಉತ್ತರವನ್ನು ಇಲ್ಲಿ ಕಡೆಗಣಿಸಲಾಗುತ್ತದೆ.

ಆರಂಭ ಹಂತದ ಭಾವೋತ್ಕಟ ವರ್ತನೆಯ ಮಾರ್ಗದರ್ಶನ (Early Intensive Behavioral Intervention -EIBI): ಇದು 3 ಅಥವಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಉಪಯೋಗಿಸುವ ಚಿಕಿತ್ಸಾ ವಿಧಾನ.

ಪಿವೋಟಲ್ ರೆಸ್ಪಾನ್ಸ್ ಟ್ರೇನಿಂಗ್ (PRT): ಮಗುವು ಕಲಿಯುವುದನ್ನು  ಉತ್ತೇಜಿಸಲು, ತನ್ನ ವರ್ತನೆಗಳನ್ನು ಸ್ವಯಂನಿಯಂತ್ರಿಸಲು ಮತ್ತು ಇತರರೊಂದಿಗೆ ಸಂವಹನವನ್ನು ಆರಂಭಿಸುವಂತೆ ಮಾಡಲು ಈ ವಿಧಾನವು ಸಹಾಯಕ್ಕೆ ಬರುತ್ತದೆ. ಈ ವರ್ತನೆಗಳಲ್ಲಿ ಉಂಟಾಗುವ ಧನಾತ್ಮಕ ಬದಲಾವಣೆಯು ಇತರ ವರ್ತನೆಗಳ ಮೇಲೆ ವ್ಯಾಪಕ ಪರಿಣಾಮವನ್ನು ಬೀರುತ್ತದೆ.

ವರ್ಬಲ್ ಬಿಹೇವಿಯರ್ ಇಂಟರ್ವೆನ್ಷನ್ (VBI): ಭಾಷೆ ಕಲಿಯುವುದರಲ್ಲಿ ಪ್ರತಿಯೊಂದೂ ಅಂಶಗಳನ್ನು ಉಪ ಅಂಶಗಳನ್ನಾಗಿಸಿ ವಿಂಗಡಿಸಿ ಮನನ ಮಾಡಿಸುವತ್ತ ಈ ವಿಧಾನವನ್ನು ಉಪಯೋಗಿಸುತ್ತಾರೆ.

ಆಟಿಸಂ ಮತ್ತು ಸಂಬಂಧಿತ ಸಂವಹನ- ವಿಶೇಷ ಸಾಮರ್ಥ್ಯ ಮಕ್ಕಳ ವಿಧಾನ (TEACCH): ಈ ಮಾದರಿಯಲ್ಲಿ ಮಗು ಈಗಾಗಲೇ ಸ್ವತಂತ್ರವಾಗಲು ಉಪಯೋಗಿಸುವ ಕೌಶಲ್ಯಗಳನ್ನು ಬಳಸಲಾಗುತ್ತದೆ. ಈ ವಿಧಾನದಿಂದ ಕಲಿಸಲಾಗುವ ದೈಹಿಕ ಕಾರ್ಯನಿರ್ವಹಣೆ, ದೈನಂದಿನ ದಿನಚರಿಯನ್ನು ಯೋಜಿಸುವುದು, ನಿರ್ದಿಷ್ಟವಾದ ನಿರೀಕ್ಷೆಗಳನ್ನು ಮೂಡಿಸುವುದು, ಸಂವಹನಕ್ಕೆ ದೃಶ್ಯ-ಶ್ರಾವ್ಯ ಸಾಧನಗಳ ಬಳಕೆ ಮೊದಲಾದ ಚಟುವಟಿಕೆಗಳಿಂದಾಗಿ ಮಗು ದೈನಂದಿನ ಕೆಲಸಗಳನ್ನು ಸ್ವತಂತ್ರವಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವುದು ಸಾಧ್ಯವಾಗುತ್ತದೆ.

Q

ಆಟಿಸಂ ಚಿಕಿತ್ಸೆಯ ವಿಧಗಳು

A

ಸೂಚನೆ: ಆಟಿಸಂ ಹೊಂದಿರುವ ಮಗು ಎದುರಿಸುವ ವಿಕಸನಶೀಲ ತೊಡಕುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಕಿತ್ಸೆ ಅಥವಾ ಮಾರ್ಗದರ್ಶನ ತಂತ್ರಗಳನ್ನು ರೂಪಿಸಲಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ, ಪ್ರತಿ ಮಗು ಕೂಡಾ ವಿಭಿನ್ನ ಸಮಸ್ಯೆಯನ್ನು ಹೊಂದಿರಬಹುದು. ಆದ್ದರಿಂದ ಪಾಲಕರು ಮತ್ತು ತಜ್ಞರು ಒಟ್ಟಾಗಿ ಕೆಲಸ ಮಾಡಿ ಯಾವ ಚಿಕಿತ್ಸೆ ಮಗುವಿಗೆ ಅತ್ಯುತ್ತಮವಾದುದು ಎಂದು ನಿರ್ಧರಿಸಬೇಕು ಮತ್ತು ಮುಂದುವರಿಸಬೇಕು. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಒಂದು ಮಗುವಿಗೆ ಚೆನ್ನಾಗಿ ಸರಿಹೊಂದಿದ ಚಿಕಿತ್ಸೆ ಮತ್ತೊಂದು ಮಗುವಿನಲ್ಲಿ ಕೆಲಸ ಮಾಡುತ್ತದೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಆಟಿಸಂ ಪ್ರತಿ ವ್ಯಕ್ತಿಯಲ್ಲಿಯೂ ಭಿನ್ನವಾಗಿ ಕಂಡುಬಂದು ತನ್ನ ಪ್ರಭಾವವನ್ನು ಬೀರುತ್ತದೆ.

ಆಟಿಸಂನಿಂದ ಬಳಲುತ್ತಿರುವ ಮಗುವೊಂದರ ಸಂಪೂರ್ಣ ಚಿಕಿತ್ಸಾ ಕಾರ್ಯಕ್ರಮದ ಭಾಗವಾಗಿ ಕೆಲ ಚಿಕಿತ್ಸೆಗಳನ್ನು ಆಯ್ದುಕೊಳ್ಳಲಾಗುತ್ತದೆ.

ವಿಕಸನಶೀಲತೆ, ವೈಯಕ್ತಿಕ ಭಿನ್ನತೆಗಳು, ಸಂಬಂಧ ಆಧಾರಿತ ವಿಧಾನ (DIR – ಇದನ್ನು ‘ಫ್ಲೋರ್ ಟೈಮ್’ ಎಂದೂ ಕರೆಯಲಾಗುವುದು): ಈ ಕ್ರಮವು ಭಾವನಾತ್ಮಕ ಮತ್ತು ಸಂಬಂಧಗಳ (ಭಾವನೆಗಳು, ಆರೈಕೆದಾರರೊಂದಿಗಿನ ಸಂಬಂಧ ಇತ್ಯಾದಿ) ವರ್ಧನೆಯತ್ತ ಗಮನವನ್ನು ಕೇಂದ್ರೀಕರಿಸುತ್ತದೆ. ದೃಶ್ಯ, ಧ್ವನಿ ಮತ್ತು ವಾಸನೆಗಳೊಂದಿಗೆ ಮಗು ಹೇಗೆ ವ್ಯವಹರಿಸುತ್ತದೆ ಎಂಬುದರ ಕುರಿತು ಕೂಡ ಇದು ಗಮನಹರಿಸುತ್ತದೆ.

ವೃತ್ತಿ ಚಿಕಿತ್ಸೆ (occupational therapy): ಇದು ಮಗು ಸಾಧ್ಯವಾದಷ್ಟು ಸ್ವತಂತ್ರವಾಗಿ ಬದುಕುವ ಕೌಶಲ್ಯವನ್ನು ಕಲಿಸುತ್ತದೆ. ಅಲಂಕಾರ ಮಾಡಿಕೊಳ್ಳುವುದು, ಆಹಾರ ಸೇವನೆ, ಸ್ನಾನ ಮಾಡುವುದು ಮತ್ತು ಜನರೊಂದಿಗಿನ ಒಡನಾಟಕ್ಕೆ ಅಗತ್ಯ ವ್ಯವಹಾರಗಳನ್ನು ಕಲಿಸುವ ಕೌಶಲಗಳನ್ನು ಇದು ಒಳಗೊಂಡಿರುತ್ತದೆ.

ಸಂವೇದನೆ ಸಮನ್ವಯತಾ ಚಿಕಿತ್ಸೆ (SIT): ದೃಶ್ಯ, ಧ್ವನಿ ಮತ್ತು ವಾಸನೆಗಳಂತ ಸಂವೇದನಾ ವಿಚಾರಗಳಲ್ಲಿ ವ್ಯವಹರಿಸಲು ಮಗುವಿಗೆ ಈ ವಿಧಾನವು ಸಹಾಯ ಮಾಡುತ್ತದೆ. ಕೆಲವೊಂದು ಧ್ವನಿಗಳಿಂದ ವಿಚಲಿತಗೊಳ್ಳುವ ಅಥವಾ ಯಾವುದೇ ಬಗೆಯ ಸ್ಪರ್ಶದಿಂದ ಕಿರಿಕಿರಿಗೊಳಗಾಗುವ ಮಗುವಿನ ಶುಶ್ರೂಷೆಗೆ ಸಂವೇದನೆ ಸಮನ್ವಯತಾ ಚಿಕಿತ್ಸೆ ಸಹಕಾರಿಯಾಗಬಹುದು.

ಸ್ಪೀಚ್ ಥೆರಪಿ (Speech Therapy): ಚಿಕಿತ್ಸಕರು ಮಗುವಿನೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಮಗುವಿನ ಸಂವಹನ ಸಾಮರ್ಥ್ಯ ಉತ್ತಮಗೊಳಿಸಲು ಸಹಾಯ ಮಾಡುತ್ತಾರೆ. ಮಗುವಿಗೆ ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವುದು ಹೇಗೆ ಎನ್ನುವುದನ್ನು ಕಲಿಸಲು ಸನ್ನೆಗಳು, ಚಿತ್ರದ ಬೋರ್ಡ್‌ಗಳು ಇತ್ಯಾದಿ ಪರ್ಯಾಯ ಮಾದರಿಗಳನ್ನು ಬಳಸುತ್ತಾರೆ.

ಸಂಗೀತ ಚಿಕಿತ್ಸೆ (Music Therapy): ಹಾಡುವುದು, ರಾಗಸಂಯೋಜನೆ ಮತ್ತು ನೇರ ಸಂಗೀತ ಕಛೇರಿ ಮೊದಲಾದವುಗಳನ್ನು ಈ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಪಿಕ್ಟರ್ ಎಕ್ಸ್ ಚೇಂಜ್ ಕಮ್ಯುನಿಕೇಶನ್ ಸಿಸ್ಟಮ್ - PECS): ಸಂವಹನ ಕಲಿಕೆಯಲ್ಲಿ ಚಿತ್ರದ ಸಂಜ್ಞೆ ಅಥವಾ ಕಾರ್ಡ್‌ಗಳನ್ನು ಬಳಸಲಾಗುತ್ತದೆ.

ಆರಂಭದ ಹಂತದ ಮಧ್ಯಸ್ಥಿಕೆ (Early Intervention): ಆರಂಭದ ಹಂತದಲ್ಲಿಯೇ ಚಿಕಿತ್ಸೆ ಒದಗಿಸುವುದು ಮಗುವಿನ ಬೆಳವಣಿಗೆಯನ್ನು ಗಮನಾರ್ಹವಾಗಿ ಸುಧಾರಿಸಲು ಅತ್ಯಂತ ಸಹಕಾರಿ ಎಂದು ಸಂಶೋಧನೆಗಳು ಹೇಳುತ್ತವೆ.

ಮಗುವಿನಲ್ಲಿ ಆಟಿಸಂ ಲಕ್ಷಣಗಳು ಪತ್ತೆಯಾದ ತಕ್ಷಣ ಸಾಧ್ಯವಾದಷ್ಟು ಬೇಗ ಈ ವಿಧಾನವನ್ನು ಆರಂಭಿಸಬೇಕು. ಮಗು 6 ತಿಂಗಳ ಕೂಸಾಗಿದ್ದರೂ ಕೂಡ ಚಿಕಿತ್ಸೆ ಆರಂಭಿಸುವುದು ಉತ್ತಮ. ಆಟಿಸಂನಿಂದಾಗಿ ಪ್ರಭಾವಕ್ಕೆ ಒಳಗಾಗುವ ಪ್ರಮುಖ ಅಂಶಗಳಾದ ಸಾಮಾಜಿಕ ಕೌಶಲ್ಯ, ಭಾಷೆ ಮತ್ತು ಸಂವಹನ, ಅನುಕರಣೆ, ಕ್ರೀಡಾಕೌಶಲ್ಯ, ದಿನನಿತ್ಯದ ಚಟುವಟಿಕೆ, ಚಲನವಲನ ಮೊದಲಾದವುಗಳತ್ತ ಈ ಚಿಕಿತ್ಸೆಯು ಗಮನ ನೀಡುತ್ತದೆ.

ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಮತ್ತು ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಮಗುವಿನ ಪಾಲಕರು ಸಕ್ರಿಯವಾಗಿ ಭಾಗವಹಿಸಲು ಈ ವಿಧಾನವು ಅವಕಾಶ ಕಲ್ಪಿಸುತ್ತದೆ.

ಹೀಗಾಗಿ ನಿಮ್ಮ ಮಗು ಒಂದೊಮ್ಮೆ ಆಟಿಸಂ ಅಥವಾ ಬೇರೆ ಯಾವುದೇ ಬಗೆಯ ಬೆಳವಣಿಗೆಯ ಸಮಸ್ಯೆ ಹೊಂದಿದೆ ಎಂಬುದು ನಿಮ್ಮ ಗಮನಕ್ಕೆ ಬಂದಾಗ ಆದಷ್ಟು ಬೇಗ ವೈದ್ಯರ ಬಳಿ ಚರ್ಚಿಸಿ ಕ್ರಮಕೈಗೊಳ್ಳುವುದು ಅವಶ್ಯ.

ಪಾಲಕರಿಗೆ ತರಬೇತಿ (Parental Training): ಇದು ಪಾಲಕರಿಗೆ ಮೀಸಲಾಗಿರುವ ಕಾರ್ಯಕ್ರಮ. ತಲ್ಲಣಗೊಂಡು ಬೆಂಬಲ ಮತ್ತು ಸಲಹೆ ಬಯಸುವ ಪಾಲಕರಿಗೆ ಇದು ಸಹಕಾರಿ. ವರ್ತನೆಯ ಬದಲಾವಣೆಯ ಪರಿಕಲ್ಪನೆ ಮತ್ತು ಕೌಶಲ್ಯದ ಕುರಿತು ಪಾಲಕರಿಗೆ ನೀಡುವ ಈ ತರಬೇತಿ, ಚಿಕಿತ್ಸಕರೊಂದಿಗೆ ಮಕ್ಕಳಿಗೆ ನೆರವು ನೀಡಲು ಸಹಾಯ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಮಗುವಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪಾಲಕರು ಕೈಗೊಳ್ಳುವ ನಿರ್ಣಯ ಮಗುವಿನ ಭಾಷೆ, ಗ್ರಹಣ ಸಾಮರ್ಥ್ಯ ಮತ್ತು ಸಾಮಾಜಿಕ ವರ್ತನೆಯ ಸುಧಾರಣೆಯಲ್ಲಿ ಗಮನಾರ್ಹ ಫಲಿತಾಂಶವನ್ನು ಹೊಂದಲು ಸಹಾಯಕಾರಿಯಾಗಬಹುದು.

Q

ಆಟಿಸಂನಿಂದ ಬಳಲುತ್ತಿರುವವರ ಆರೈಕೆ

A

ತಮ್ಮ ಮಗು ಆಟಿಸಂನಿಂದ ಬಳಲುತ್ತಿದೆ ಎಂದು ತಿಳಿದಾಗ ಪಾಲಕರು ಅಥವಾ ಪೋಷಕರು ಅಗಾಧ ಒತ್ತಡಕ್ಕೆ ಒಳಗಾಗುತ್ತಾರೆ ತಲ್ಲಣವನ್ನೂ ಅನುಭವಿಸಬಹುದು. ಮಗುವಿನ ತಪಾಸಣೆ, ಚಿಕಿತ್ಸೆ, ಮಧ್ಯಸ್ಥಿಕಾ ಅವಧಿ ಮತ್ತು ಶಾಲೆಯ ಅವಧಿ ಹೀಗೆ ಪಾಲಕರು ಹೆಚ್ಚಿನ ಸಮಯ ಮಗುವಿನ ಜೊತೆ ಕಳೆಯುತ್ತಾರೆ. ಸಾಕಷ್ಟು ಪಾಲಕರು, ಅದರಲ್ಲೂ ವಿಶೇಷವಾಗಿ ತಾಯಂದಿರು ತಮ್ಮ ಕೆಲಸ ಬಿಟ್ಟು ಸಂಪೂರ್ಣ ಸಮಯವನ್ನು ಮಗುವಿನ ಆರೈಕೆಗೆ ಮುಡಿಪಾಗಿಡುತ್ತಾರೆ.  ಮನೆಯಲ್ಲಿ ಅನೇಕ ರೀತಿಯ ಹೊಂದಾಣಿಕೆ ಕಂಡುಬರುತ್ತದೆ.

ಒಡಹುಟ್ಟಿದವರು, ಆಟಿಸಂನಿಂದ ಬಳಲುತ್ತಿರುವ ತಮ್ಮ ಸಹೋದರ/ಸಹೋದರಿಯೊಂದಿಗೆ ಬದುಕಲು ಕಲಿಯುತ್ತಾರೆ, ಕುಟುಂಬದ ಇತರ ಸದಸ್ಯರು ಹೆಚ್ಚಿನ ಸಹಾಯ ಮಾಡುತ್ತಾರೆ, ಮನೆಯ ಎಲ್ಲ ಕೆಲಸ ಕಾರ್ಯಗಳನ್ನೂ ಮಗುವಿನ ಆಸಕ್ತಿಗೆ ಅನುಗುಣವಾಗಿ ಯೋಜಿಸಬೇಕಾಗುತ್ತದೆ. ಆಟಿಸಂನಿಂದ ಬಳಲುತ್ತಿರುವ ಮಗುವನ್ನು ಪೋಷಿಸುವುದು ಸವಾಲಿನ ಸಂಗತಿಯೇ ಸರಿ. ಆದಾಗ್ಯೂ, ಸೂಕ್ತ ತಿಳುವಳಿಕೆಯನ್ನು ಹೊಂದುವ ಮೂಲಕ ಪೋಷಕರು ಮಗುವಿಗೆ ಉತ್ತಮ ಆಯ್ಕೆಗಳನ್ನು ಒದಗಿಸುವುದು ಸಾಧ್ಯವಿದೆ.

ನೀವು ಆರೈಕೆದಾರರು ಮತ್ತು ಪಾಲಕರಾಗಿ ಇಂಥ ಸನ್ನಿವೇಶದಲ್ಲಿ  ಹೀಗೆ ಮಾಡಬಹುದು:

  • ಆಟಿಸಂ ಕುರಿತು ಸಾಧ್ಯವಾದಷ್ಟು ಮಾಹಿತಿ ಪಡೆಯಿರಿ.

  • ಪ್ರತಿನಿತ್ಯದ ಚಟುವಟಿಕೆಗಳಿಗೆ ನಿಯಮಿತ ಯೋಜನೆ ಸಿದ್ಧಪಡಿಸಿ ಅದರಂತೆ ಅನುಸರಿಸಿ.

  • ಪರಿಸ್ಥಿತಿಯೊಂದಿಗೆ ಸಹಕರಿಸುವಂತಾಗಲು ನಿಮಗೂ ಆಪ್ತಸಲಹೆಯ ಅವಶ್ಯಕತೆಯುಂಟಾಗಬಹುದು.

  • ಸಪೋರ್ಟ್ ಗ್ರೂಪ್ ಗಳನ್ನು ಸೇರಿರಿ ಮತ್ತು ಆಟಿಸಂನಿಂದ ಬಳಲುತ್ತಿರುವ ಇತರ ಮಕ್ಕಳ ಪಾಲಕರೊಂದಿಗೆ ಸಂಪರ್ಕದಲ್ಲಿರಿ ಏಕೆಂದರೆ ಈ ಪಾಲಕರು ಇತರ ಜನರಿಗಿಂತ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.

  • ವೃತ್ತಿಪರರ ಸಹಾಯ ಪಡೆಯಿರಿ.

  • ವರ್ತನೆಯಲ್ಲಿನ ಮಾರ್ಪಾಟು ವಿಧಾನಗಳನ್ನು ಕಲಿತುಕೊಳ್ಳುವಂತಹ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ. ಅಲ್ಲಿ ಕಲಿತಂತಹ ಸಂಗತಿಗಳನ್ನು ನಿಮ್ಮ ಮಗುವಿಗೆ ಸಹಾಯವಾಗುವ ರೀತಿಯಲ್ಲಿ ಉಪಯೋಗಿಸಬಹುದು.

  • ನಿಮ್ಮ ಸ್ವಂತ ಚಟುವಟಿಕೆಗಾಗಿ ಸಮಯವನ್ನು ಮೀಸಲಿಡಿ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಆಟಿಸಂ ಹೊಂದಿರುವ ಮಗುವಿನ ತಾಯಿಯೊಬ್ಬಳು ಹೇಳುತ್ತಾಳೆ: “ನನ್ನ ಮಗ ಆಟಿಸಂನಿಂದ ಬಳಲುತ್ತಿದ್ದರೂ ತುಂಬ ಉತ್ತಮ ಮಗುವೇ ಆಗಿದ್ದಾನೆ. ಹಾಗಾಗಿ ಸ್ವಾಭಾವಿಕವಾಗಿ ಇರುವುದೆಂದರೇನು ಎಂಬುದರ ವ್ಯತ್ಯಾಸ ನನಗೆ ತಿಳಿದಿಲ್ಲ. ನಾನು ಸದಾ ಆತನ ಸಂತೋಷವನ್ನೇ ಬಯಸುತ್ತೇನೆ. ಆತನ ಸಾಧನೆ ಕುರಿತು ಹೆಮ್ಮೆ ಪಡುತ್ತೇನೆ ಮತ್ತು ಅನುಕ್ಷಣವೂ ನಗುನಗುತ್ತಾ ಸಂತೋಷದಿಂದ ಇರುವುದು ನನಗೆ ಸಾಧ್ಯವಾಗಿದೆ.”

Q

ವಿಶೇಷ ಅಗತ್ಯವಿರುವ ಮಕ್ಕಳನ್ನೂ ಒಳಗೊಳ್ಳಬೇಕಾದ ಶಿಕ್ಷಣ ವ್ಯವಸ್ಥೆ

A

ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ವಿಶೇಷ ಅಗತ್ಯವಿರುವ ಮಕ್ಕಳಿಗೆ ಶಿಕ್ಷಣದ ಸಮಾನ ಅವಕಾಶ ಮತ್ತು ವ್ಯವಸ್ಥೆಗಳನ್ನು ಕಲ್ಪಿಸಿಕೊಡುವುದು ಅತ್ಯವಶ್ಯ.

ಕಾನೂನಿನ ಪ್ರಕಾರದ ಹಕ್ಕಿನ ಹೊರತಾಗಿ ಮತ್ತು ಈ ಮಕ್ಕಳಿಗಾಗಿ ಮೀಸಲಿರುವ ಸರ್ಕಾರಿ ಕಾರ್ಯಕ್ರಮಗಳ ಆಚೆಗೆ ಶಿಕ್ಷಣ ಸಂಸ್ಥೆಗಳು ಇಂಥ ಮಕ್ಕಳನ್ನು ಹೆಚ್ಚಾಗಿ ಸಂಸ್ಥೆಗೆ ಸೇರಿಸಿಕೊಳ್ಳಲು ಬಯಸುವುದಿಲ್ಲ ಮತ್ತು ವೈಯಕ್ತಿಕ ಶಿಕ್ಷಣ ಯೋಜನೆ, ಪರ್ಯಾಯ ಕಲಿಕೆ ವಿಧಾನ ಇತ್ಯಾದಿಗಳನ್ನು ಒದಗಿಸುವುದಿಲ್ಲ.

Q

ಆಧಾರ:

A

  • ನಿಮ್ಹಾನ್ಸ್, ದ ನ್ಯಾಶನಲ್ ಆಟಿಸ್ಟಿಕ್ ಸೊಸೈಟಿ, ಆಟಿಸ್ಟಿಕ್ ಸೊಸೈಟಿ ಆಫ್ ಇಂಡಿಯಾ http://autismsocietyofindia.org/
  • ದ ನ್ಯಾಶನಲ್ ಸೆಂಟರ್ ಫಾರ್ ಲರನಿಂಗ್ ಡಿಸ್ ಎಬಿಲಿಟೀಸ್, ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಶನ್ http://www.cdc.gov/
  • ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org