ಬೈಪೋಲಾರ್ ಡಿಸಾರ್ಡರ್: ಕಲ್ಪನೆಗಳು ಮತ್ತು ವಾಸ್ತವಗಳು

ಬೈಪೋಲಾರ್ ತೊಂದರೆಯ ಕುರಿತಾದ ವಾಸ್ತವ ಅಂಶಗಳ ಸರಿಯಾದ ತಿಳುವಳಿಕೆಗೆ ಈ ಲೇಖನವನ್ನು ಓದಿ..

ಕಲ್ಪನೆ: ಮನಸ್ಸಿನ ಹೊಯ್ದಾಟದ ಇನ್ನೊಂದು ಹೆಸರು ಬೈಪೋಲಾರ್ ಡಿಸಾರ್ಡರ್

ವಾಸ್ತವ: ಅಸಮಾಧಾನ, ಸಿಟ್ಟು, ಕಿರಿಕಿರಿ ಅಥವಾ ಹತಾಶೆಗಳಂತಹ ಸನ್ನಿವೇಶಗಳಿಂದ ವ್ಯಕ್ತಿಯ ಮನಸ್ಥಿತಿಯಲ್ಲಾಗುವ ಬದಲಾವಣೆಯನ್ನು ಮನಸ್ಸಿನ ಹೊಯ್ದಾಟ ಎನ್ನಲಾಗುತ್ತದೆ. ಇದು ಅವರಲ್ಲಿ ಕೆಲ ಸಮಯದವರೆಗೆ ಮಾತ್ರ ಕಂಡುಬರುತ್ತದೆ. ಬೈಪೋಲಾರ್ ಡಿಸಾರ್ಡರ್ ಖಾಯಿಲೆಯಿರುವವರಲ್ಲಿ ಮನಸ್ಸಿನ ಹೊಯ್ದಾಟವು ವಿಭಿನ್ನ ಹಾಗೂ ಹೆಚ್ಚು ತೀವ್ರವಾಗಿರುತ್ತದೆ ಮತ್ತು ವ್ಯಕ್ತಿಯ ಜೀವನದ ಪ್ರತಿಯೊಂದು ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಕಲ್ಪನೆ: ಬೈಪೋಲಾರ್ ಡಿಸಾರ್ಡರ್ ಒಂದು ಅಪರೂಪದ ಖಾಯಿಲೆ.

ವಾಸ್ತವ: ಬೈಪೋಲಾರ್ ಡಿಸಾರ್ಡರ್ ಅಪರೂಪದ ಮಾನಸಿಕ ಅಸ್ವಸ್ಥತೆಯಲ್ಲ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಕಿ-ಅಂಶ ಹಾಗೂ ಸಂಶೋಧನೆಯ ಪ್ರಕಾರ, ಪ್ರಪಂಚದಾದ್ಯಂತ 60 ಮಿಲಿಯನ್ ಜನರು ಬೈಪೋಲಾರ್ ಡಿಸಾರ್ಡರ್ ಗೆ ಒಳಗಾಗಿದ್ದಾರೆ ಮತ್ತು ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ. ಮೂರರಷ್ಟು ಜನರು ಬೈಪೋಲಾರ್ ಡಿಸಾರ್ಡರ್ ಪರಿಣಾಮ ಎದುರಿಸುತ್ತಿದ್ದಾರೆ.

ಕಲ್ಪನೆ: ಔಷಧೋಪಚಾರದಿಂದ ಮಾತ್ರ ಬೈಪೋಲಾರ್ ಡಿಸಾರ್ಡರ್‌ನ್ನು ಗುಣಪಡಿಸಬಹುದು.

ವಾಸ್ತವ: ಬೈಪೋಲಾರ್ ಡಿಸಾರ್ಡರ್ ಲಕ್ಷಣಗಳನ್ನು ನಿಯಂತ್ರಣ ಮಾಡಲು ಔಷಧೋಪಚಾರ ಅಗತ್ಯ, ಆದರೆ ರೋಗ ಗುಣಪಡಿಸಲು ಅದೊಂದೇ ಚಿಕಿತ್ಸೆಯಲ್ಲ. ಮದ್ಯ ಮತ್ತು ಡ್ರಗ್ ಚಟಗಳಿಂದ ದೂರವಿರುವುದು, ಒಳ್ಳೆಯ ಹಾಗೂ ಸಮಯಕ್ಕೆ ಸರಿಯಾಗಿ ಆಹಾರ-ನಿದ್ರೆಯ ಹವ್ಯಾಸ ರೂಢಿಸಿಕೊಳ್ಳುವುದು, ವ್ಯಾಯಾಮ ಮತ್ತು ಸರಿಯಾದ ಸಂಯೋಜನೆಯ ಔಷಧಗಳನ್ನು ತೆಗೆದುಕೊಳ್ಳುವುದರ ಮೂಲಕ ಆರೋಗ್ಯಕರ ಜೀವನಶೈಲಿಯಿಂದ ಬದುಕು ಸಾಗಿಸುವುದು ಮುಖ್ಯ ಎಂಬುದನ್ನು ವೈದ್ಯರು ಕೂಡ ಒತ್ತಿ ಹೇಳುತ್ತಾರೆ.

ಕಲ್ಪನೆ: ಬೈಪೋಲಾರ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಗಳು ಗುಣಮುಖರಾಗಲು ಸಾಕಷ್ಟು ಪ್ರಯತ್ನ ಮಾಡುವುದಿಲ್ಲ.

ವಾಸ್ತವ: ಮನಸ್ಸಿನ ಹೊಯ್ದಾಟದ ಅನುಭವವನ್ನು ಎದುರಿಸುವ ಜನರಿಗೆ ಬೈಪೋಲಾರ್ ಡಿಸಾರ್ಡರ್‌ನ್ನು ಏಕೆ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅನೇಕರು ಆಶ್ಚರ್ಯಗೊಳ್ಳುತ್ತಾರೆ. ಆದರೆ ಹೆಚ್ಚಿನ ಜನರಿಗೆ ಬೈಪೋಲಾರ್ ಡಿಸಾರ್ಡರ್ ಒಂದು ಮಾನಸಿಕ ಅಸ್ವಸ್ಥತೆ ಹಾಗೂ ಇದರಿಂದ ಹೊರಬರಲು ವೈದ್ಯಕೀಯ ಚಿಕಿತ್ಸೆ ಅಗತ್ಯ ಎನ್ನುವುದು ತಿಳಿದಿಲ್ಲ.

ಕಲ್ಪನೆ: ಬೈಪೋಲಾರ್ ಡಿಸಾರ್ಡರ್ ಅನುಭವಿಸುತ್ತಿರುವವರು ಯಾವಾಗಲು ಉನ್ಮಾದ ಸ್ಥಿತಿ ಹಾಗೂ ಖಿನ್ನತೆಯಿಂದ ಕೂಡಿರುತ್ತಾರೆ.

ವಾಸ್ತವ: ಹೆಚ್ಚಿನ ಜನರು ದೀರ್ಘ ಸಮಯ ಅಸ್ವಸ್ಥತೆಯ ಲಕ್ಷಣಗಳನ್ನು ಅನುಭವಿಸುವುದಿಲ್ಲ ಮತ್ತು ಅವರು ಎಲ್ಲರಂತೆ ಸಾಮಾನ್ಯ ಜೀವನವನ್ನು ನಡೆಸುತ್ತಾರೆ. ಅನೇಕರು ನಿಯಮಿತವಾಗಿ ಔಷಧ ಹಾಗೂ ಚಿಕಿತ್ಸೆ ತೆಗೆದುಕೊಳ್ಳುವುದರ ಮೂಲಕ ಅಸ್ವಸ್ಥತೆಯಿಂದ ಚೇತರಿಸಿಕೊಂಡಿದ್ದಾರೆ.

ಕಲ್ಪನೆ: ಬೈಪೋಲಾರ್ ಡಿಸಾರ್ಡರ್ ಕೇವಲ ಮನಸ್ಥಿತಿಯ ಮೇಲೆ ಮಾತ್ರ ಪರಿಣಾಮ ಉಂಟುಮಾಡುತ್ತದೆ.

ವಾಸ್ತವ: ಬೈಪೋಲಾರ್ ಡಿಸಾರ್ಡರ್ ಮನಸ್ಥಿತಿಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಅದು ವ್ಯಕ್ತಿಯ ತಾರ್ಕಿಕ ಸಾಮರ್ಥ್ಯ, ಬಲ, ಏಕಾಗ್ರತೆ, ಆರೋಗ್ಯ, ನಿದ್ರೆ, ಊಟೋಪಚಾರ, ಲೈಂಗಿಕ ಕ್ರಿಯೆ, ಆತ್ಮಾಭಿಮಾನ ಹಾಗೂ ಪರಸ್ಪರ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org