ಸೆರೆಬ್ರಲ್ ಪಾಲ್ಸಿ

Q

ಸೆರೆಬ್ರಲ್ ಪಾಲ್ಸಿ ಎಂದರೇನು?

A

ಸೆರೆಬ್ರಲ್ ಪಾಲ್ಸಿ ನರಮಂಡಲಕ್ಕೆ ಸಂಬಂಧಿತ ಖಾಯಿಲೆಯಾಗಿದ್ದು, ಮಗುವಿನ ಮಿದಳು ಅಭಿವೃದ್ಧಿ ಹಂತದಲ್ಲಿರುವಾಗ ಆಗುವ ಗಾಯ ಅಥವಾ ಮಿದುಳಿನ ಅಸಮರ್ಪಕ ರಚನೆಯಿಂದ ಉಂಟಾಗುತ್ತದೆ. ದೇಹದ ಚಲನೆ, ಮಾಂಸಖಂಡದ ನಿಯಂತ್ರಣ ಮತ್ತು ಸಂರಚನೆ, ಮತ್ತು ದೇಹದ ಭಾಗಗಳ ಸಮತೋಲನದ ಮೇಲೆ ಇದು ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ದೀರ್ಘಕಾಲದ ಅಸ್ವಸ್ಥತೆಗಳಲ್ಲಿ ಇದೂ ಒಂದು.

ಸೆರೆಬ್ರಲ್ ಪಾಲ್ಸಿ ಈ ಕೆಳಗಿನ ಸ್ಪಷ್ಟ ಲಕ್ಷಣಗಳನ್ನು ಹೊಂದಿರುತ್ತದೆ:

 • ಮಿದುಳಿಗಾಗುವ ಗಾಯ ಹಾಗೂ ಹಾನಿ ಶಾಶ್ವತವಾಗಿದ್ದು ಇದನ್ನು ಗುಣಪಡಿಸಲಾಗುವುದಿಲ್ಲ. ದೇಹದ ಇತರ ಭಾಗಗಳಲ್ಲಾದ ಗಾಯಗಳು ಗುಣವಾದಂತೆ ಮಿದುಳಿನ ಗಾಯ ಗುಣವಾಗುವುದಿಲ್ಲ. ಆದಾಗ್ಯೂ ಸಮಯ ಕಳೆದಂತೆ ಇನ್ನಿತರ ಸಂಬಂಧಿತ ಅಸ್ವಸ್ಥತೆಗಳು ಸುಧಾರಿಸಬಹುದು ಅಥವಾ ಇನ್ನಷ್ಟು ಹದಗೆಡಬಹುದು.

 • ಈ ಖಾಯಿಲೆ ಬಳಿಕ ಮಿದುಳು ಮತ್ತಷ್ಟು ಅವನತಿ ಹೊಂದುವುದಿಲ್ಲ.

 • ಸೆರೆಬ್ರಲ್ ಪಾಲ್ಸಿ ಖಾಯಿಲೆಯಿದೆ ಎಂದು ಪತ್ತೆಮಾಡಲಾದ ವ್ಯಕ್ತಿಯು ಜೀವನಪೂರ್ತಿ ಇದರೊಂದಿಗೇ ಬದುಕಬೇಕಾಗುತ್ತದೆ.

ಸೆರೆಬ್ರಲ್ ಪಾಲ್ಸಿ ಖಾಯಿಲೆ ಕೆಳಗಿನ ನಾನಾ ರೀತಿಯ ಇತರ ಸಮಸ್ಯೆಗಳನ್ನು ತಂದೊಡ್ಡಬಹುದು:

 • ಚಲನೆಯಲ್ಲಿ ಸಮಸ್ಯೆ
 • ಇಂದ್ರಿಯಗಳ ದುರ್ಬಲತೆ
 • ಶ್ರವಣ ದೋಷ
 • ಗಮನದ ಕೊರತೆ
 • ಭಾಷೆ ಮತ್ತು ಗ್ರಹಿಕೆಯ ಕೊರತೆ
 • ಬುದ್ಧಿಮಾಂದ್ಯತೆ
 • ವರ್ತನೆಯಲ್ಲಿನ ಸಮಸ್ಯೆ
 • ಆರೋಗ್ಯದ ಸಮಸ್ಯೆ
 • ಪುನರಾವರ್ತಿತ ಮೂರ್ಛೆ ಅಥವಾ ಫಿಟ್ಸ್

ಪ್ರಮುಖ ಅಂಶಗಳು:

 • ಸೆರೆಬ್ರಲ್ ಪಾಲ್ಸಿ ಬಾಲ್ಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ದೀರ್ಘಕಾಲೀನ ಖಾಯಿಲೆಯಾಗಿದ್ದು ದೈಹಿಕ/ಚಲನೆ ವಿಕಲತೆಯನ್ನುಂಟು ಮಾಡುತ್ತದೆ.
 • ಜಾಗತಿಕವಾಗಿ ಸುಮಾರು 17 ಮಿಲಿಯನ್ ಜನರು ಸೆರೆಬ್ರಲ್ ಪಾಲ್ಸಿ ಖಾಯಿಲೆಗೆ ತುತ್ತಾಗಿದ್ದಾರೆ.

Q

ಸೆರೆಬ್ರಲ್ ಪಾಲ್ಸಿ ಲಕ್ಷಣಗಳೇನು?

A

ವೈದ್ಯಕೀಯ ಪರೀಕ್ಷಾ ಫಲಿತಾಂಶಗಳ ಮೂಲಕ ಮಿದುಳಿನ ಗಾಯ ಅಥವಾ ಅಸಮರ್ಪಕ ರಚನೆಗಳ ಲಕ್ಷಣಗಳನ್ನು ಗುರುತಿಸಬಹುದು.  ಮಕ್ಕಳು ಚಿಕ್ಕವರಾಗಿರುವುದರಿಂದ ಅವರಿಗಾಗುವ ತೊಂದರೆಯ ಬಗ್ಗೆ ಹೇಳಿಕೊಳ್ಳಲಾಗುವುದಿಲ್ಲ.

ಆದ್ದರಿಂದ ಪಾಲಕರು ಮಕ್ಕಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ, ಯಾವುದೇ ತೊಂದರೆ ಕಂಡುಬಂದರೆ  ತಕ್ಷಣ ವೈದ್ಯರ ಬಳಿ ಹೋಗಿ ವಿವರಿಸಬೇಕು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ವೈದ್ಯರು ಇತರ ಖಾಯಿಲೆಯ ಉಪಸ್ಥಿತಿಗಳನ್ನು ಅಲ್ಲಗಳೆದು ವೈದ್ಯಕೀಯ ಪರೀಕ್ಷೆಗಳ ಮೂಲಕ ಸೆರೆಬ್ರಲ್ ಪಾಲ್ಸೀ ಇದೆಯೇ ಇಲ್ಲವೇ ಎಂದು ಹೇಳುತ್ತಾರೆ.

ವೈದ್ಯರು  ಸೆರೆಬ್ರಲ್ ಪಾಲ್ಸೀ ವ್ಯಾಪಕತೆ, ತೀವ್ರತೆ ಮತ್ತು ಇತರ ಖಾಯಿಲೆಗಳಿರುವ ಪರಿಸ್ಥಿತಿಗಳನ್ನು ಗಮನಿಸಿ ಚಿಕಿತ್ಸೆ ನಿರ್ಧರಿಸುತ್ತಾರೆ. ಈ ಚಿಹ್ನೆಗಳು ಮಗುವಿನಿಂದ ಮಗುವಿಗೆ ಬೇರೆಯಾಗಿದ್ದು ಮತ್ತು ಮಿದುಳಿನ ಗಾಯದ ತೀವ್ರತೆಯ ಮೇಲೆ ಅವಲಂಬಿಸಿರುತ್ತದೆ.

ಸ್ನಾಯುಗಳ ಸುಸ್ಥಿರತೆ:

ಸೋಲುವ ಕೈ-ಕಾಲುಗಳು, ತೀರಾ ಸಡಿಲುಗೊಂಡ ಅಥವಾ ತೀರಾ ಸೆಟೆದುಕೊಳ್ಳುವ ಅಂಗಗಳು, ಅನೈಚ್ಛಿಕವಾಗಿ ಸ್ನಾಯುಗಳ ಕುಗ್ಗುವಿಕೆ ಅಥವಾ ಕೀಲುಗಳು ಕೂಡಿಕೊಂಡು ಸೂಕ್ತ ಚಲನೆಗೆ ತಡೆಯೊಡ್ಡುವುದು ಮುಂತಾದವುಗಳಿಂದಾಗಿ ಯಾವುದೇ ಬೆಂಬಲವಿಲ್ಲದೇ ಕುಳಿತುಕೊಳ್ಳುವುದು, ನಿಂತುಕೊಳ್ಳುವುದು, ನಡೆಯುವುದು ಅಸಾಧ್ಯವಾಗಬಹುದು.

ಸ್ನಾಯಗಳ ಸೆಡೆತದ ಪರಿಣಾಮವಾಗಿ ಮಗುವಿನ ಕೈ-ಕಾಲುಗಳು, ದೇಹಚಲನೆ ಹಾಗೂ ನಿಯಂತ್ರಣಕ್ಕೆ ಅಡ್ಡಿಯಾಗಬಹುದು. ಸ್ನಾಯುಗಳಲ್ಲುಂಟಾದ ಹಾನಿಯಿಂದ ಕೈಕಾಲುಗಳು ಶಾಶ್ವತವಾಗಿ ಹೊರಚಾಚುವಂತಾಗಬಹುದು ಅಥವಾ ಸಂಕುಚಿತಗೊಳ್ಳಬಹುದು. ಅಥವಾ ಕೈ-ಕಾಲು ಜರುಗಿದಂತೆ ಕಾಣಿಸಬಹುದು. ಉದಾಹರಣೆಗೆ ಮಗುವಿಗೆ ಆರು ತಿಂಗಳ ನಂತರವೂ ಕುಳಿತುಕೊಳ್ಳಲು ಅಥವಾ ಸ್ವತಂತ್ರವಾಗಿ ಉರುಳಾಡಲು ಸಾಧ್ಯವಾಗದಿರುವುದು. 12 ರಿಂದ 18 ತಿಂಗಳಾದರೂ ನಡೆಯಲು ಬರದೇ ಇರುವುದು. ಅಥವಾ ಬರವಣಿಗೆ, ಹಲ್ಲುಜ್ಜುವುದು, ಶೂ ಧರಿಸುವುದು ಮುಂತಾದ ಕೆಲಸಗಳನ್ನು ಮಾಡಲು ಸಾಧ್ಯವಾಗದಿರುವುದು.

ಸೆರೆಬ್ರಲ್ ಪಾಲ್ಸಿ  ದೇಹದ ಭಂಗಿ ಮತ್ತು ಸಮತೋಲನಗಳ ಮೇಲೆ ಪರಿಣಾಮ ಬೀರುತ್ತದೆ. ಮಗುವನ್ನು ವಿವಿಧ ಭಂಗಿಗಳಲ್ಲಿ ಕುಳಿಸುವಾಗ  ಮಗುವಿನಿಂದ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳು ನಿರೀಕ್ಷಿತವಾಗಿರುತ್ತವೆ. ನೇರ ಭಂಗಿಯಲ್ಲಿ ಕುಳಿತುಕೊಂಡಾಗ ಮಗು ಸಹಜವಾಗಿ ಎರಡು ಕಾಲುಗಳನ್ನು ಮುಂದಕ್ಕೆ ಚಾಚುತ್ತದೆ. ಆದರೆ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಮಗುವಿನ ದೇಹದ ಭಂಗಿಯಲ್ಲಿ ಇದು ಸಹಜವಾಗಿ ಇರುವುದಿಲ್ಲ.

ಮಗು ಕುಳಿತುಕೊಳ್ಳಲು, ಕುಳಿತಲ್ಲಿಂದ ಏಳಲು ಕಲಿಯುತ್ತಿರುವಾಗ ಮತ್ತು ತೆವಳಲು ಹಾಗೂ ನಡೆಯಲು ಪ್ರಾರಂಭಿಸುವಾಗ ದೌರ್ಬಲ್ಯದ ಸಂಜ್ಞೆಗಳೇನಾದರೂ ಕಂಡುಬರುತ್ತವೆಯೇ ಎಂಬುದನ್ನು ಪಾಲಕರು ಗಮನಿಸಬೇಕು. ಸಾಮಾನ್ಯವಾದ ಬೆಳವಣಿಗೆಯ ಹಂತದಲ್ಲಿ ಮಕ್ಕಳು ನಡೆಯುವಾಗ ಅಥವಾ ಕುಳಿತುಕೊಳ್ಳುವಾಗ ತಮ್ಮ ಕೈಗಳ ಸಹಾಯ ಬಳಸುತ್ತಾರೆ. ಕಾಲಕ್ರಮೇಣ ಯಾವುದೇ ಬೆಂಬಲವಿಲ್ಲದೇ ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಕಲಿಯುತ್ತಾರೆ. ಒಂದು ವೇಳೆ ಯಾವುದೇ ಬೆಂಬಲವಿಲ್ಲದೇ ಕುಳಿತುಕೊಳ್ಳಲು ಅಥವಾ ನಿಂತುಕೊಳ್ಳಲು ಸಾಧ್ಯವಾಗದೇ ಇದ್ದರೆ ಅದು ಸೆರೆಬ್ರಲ್ ಪಾಲ್ಸಿಯ ಲಕ್ಷಣವಿರಬಹುದು.

ಸಮಗ್ರ ಚಲನವಲನ ಕಾರ್ಯ: ಅನೇಕ ಅಂಗಗಳು ಮತ್ತು ಸ್ನಾಯು ಸಮೂಹಗಳಿಂದಾಗುವ ಬೃಹತ್ ಪ್ರಮಾಣದ ಸಂಯೋಜಿತ ಚಲನೆಯನ್ನು ಸಮಗ್ರ ಚಲನೆ ಎನ್ನುತ್ತಾರೆ. ಮಗುವಿನ ಮೆದುಳು ಮತ್ತು ದೇಹದ ಬೆಳೆದಂತೆಲ್ಲ ಅವುಗಳ ಬೆಳವಣಿಗೆಯ ನಿರ್ದಿಷ್ಟ ಹಂತಗಳನ್ನು ನಿರೀಕ್ಷಿಸಲಾಗುತ್ತದೆ. ನಿಗದಿತ ಸಮಯಕ್ಕಿಂತ ತಡವಾಗಿ ನಿರೀಕ್ಷಿತ ಬೆಳವಣಿಗೆಯ ಹಂತವನ್ನು ತಲುಪುವುದು ಅಥವಾ ಕಡಿಮೆ ಪ್ರಮಾಣದ ಚಲನೆಯೊಂದಿಗೆ ನಿರೀಕ್ಷಿತ ಬೆಳವಣಿಗೆಯನ್ನು ಹೊಂದುವುದು (ಉದಾ: ತೆವಳುವಾಗ ಒಂದೇ ಕಡೆ ಹೊರಳಲು ಒಲವು ತೋರುವುದು, ಯಾವುದೇ ಬೆಂಬಲವಿಲ್ಲದೇ ನಡೆಯಲು ಸಾಧ್ಯವಾಗದಿರುವುದು) ಸೆರೆಬ್ರಲ್ ಪಾಲ್ಸಿ ಖಾಯಿಲೆಯ ಸಂಭವನೀಯ ಲಕ್ಷಣವಾಗಿರುತ್ತದೆ.

ಉತ್ತಮ ಚಲನವಲನ ಕಾರ್ಯ: ಕರಾರುವಕ್ಕಾದ ಮತ್ತು ಸುಸಂಘಟಿತವಾದ ಸ್ನಾಯಗಳ ಚಲನೆಯ ಸಾಮರ್ಥ್ಯವನ್ನು ಉತ್ತಮ ಚಲನವಲನ ಎಂದು ಕರೆಯುತ್ತಾರೆ. ಉತ್ತಮ ಚಲನವಲನ ನಿಯಂತ್ರಣವು ಕಲಿತುಕೊಂಡ ಹಲವಾರು ಚಟುವಟಿಕೆಗಳನ್ನು ಮತ್ತು ಮಾನಸಿಕ (ಯೋಜನೆ ಮತ್ತು ವಿಶ್ಲೇಷಣೆ) ಮತ್ತು ದೈಹಿಕ (ಸುಸಂಘಟನೆ ಮತ್ತು ಸಂವೇದನೆ) ಕೌಶಲ್ಯಗಳನ್ನು ಒಳಗೊಳ್ಳುತ್ತದೆ. ಮಗು ಬೆಳೆದಂತೆಲ್ಲ ನಿರ್ದಿಷ್ಟ ಪಡಿಸಿದ ಉತ್ತಮ ಚಲನವಲನದ ಬೆಳವಣಿಗೆಯ ಹಂತವನ್ನು ತಲುಬೇಕು. ಉತ್ತಮ ಚಲನವಲನ ಕಾರ್ಯದಲ್ಲಿ ದೌರ್ಬಲ್ಯ ಮತ್ತು ವಿಳಂಬ ಕಂಡುಬಂದರೆ, ಅದು ಸೆರೆಬ್ರಲ್ ಪಾಲ್ಸಿ ಖಾಯಿಲೆಯ ಸಂಭವನೀಯ ಲಕ್ಷಣವಾಗಿರುತ್ತದೆ.

ಮೌಖಿಕ ಚಲನಾ ಪ್ರಕ್ರಿಯೆ: ಮಾತನಾಡುವಾಗ ಅಥವಾ ಆಹಾರ ಸೇವಿಸುವಾಗ ಅಥವಾ ದ್ರವಪದಾರ್ಥಗಳನ್ನು ಕುಡಿಯುವಾಗ ತುಟಿಗಳು, ನಾಲಿಗೆ ಮತ್ತು ದವಡೆಗಳನ್ನು ಉಪಯೋಗಿಸುವ ಸಾಮರ್ಥ್ಯವು ಸೂಕ್ತ ಮೌಖಿಕ ಚಾಲನಾ ಕಾರ್ಯದ ಪರಿಣಾಮವಾಗಿರುತ್ತದೆ. ಸೆರೆಬ್ರಲ್ ಪಾಲ್ಸಿ ಹೊಂದಿರುವ ಮಗು ಅಸಮರ್ಪಕ ಮೌಖಿಕ ಚಲನಾ ಕೌಶಲ್ಯ ಹೊಂದಿರುತ್ತದೆ. ಇದರಿಂದ ಮಾತನಾಡುವುದು, ನುಂಗುವುದು, ಕುಡಿಯುವುದು ಮತ್ತು ಅಗೆಯುವುದು ಕಷ್ಟವಾಗಬಹುದು. ಮೌಖಿಕ ಚಲನೆಯ ದೌರ್ಬಲ್ಯದಿಂದಾಗಿ ಉಸಿರಾಟ, ಮಾತುಕತೆ ಮತ್ತು ಧ್ವನಿಯ ಮೇಲೆ ಪರಿಣಾಮ ಉಂಟಾಗಬಹುದು. ಅಪ್ರಾಕ್ಸಿಯಾ ಮತ್ತು ಡಯ್ಸಾರ್ಥಿಯಾ ಎನ್ನುವುದು ಸಂಬಂಧಿತ ನರರೋಗಳ ಪ್ರಕಾರವಾಗಿದ್ದು ಇವು ಸೆರೆಬ್ರಲ್ ಪಾಲ್ಸಿಯ ಪರಿಣಾಮವಾಗಿ ಉಂಟಾಗುತ್ತವೆ.

Q

ಸೆರೆಬ್ರಲ್ ಪಾಲ್ಸಿ ಖಾಯಿಲೆಯ ಲಕ್ಷಣಗಳು ಯಾವವು?

A

ಸೆರೆಬ್ರಲ್ ಪಾಲ್ಸಿ ಖಾಯಿಲೆ ಲಕ್ಷಣಗಳು ಮಗುವಿನ ಜೀವನದ ಮೊದಲ ಮೂರು ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸೆರೆಬ್ರಲ್ ಪಾಲ್ಸಿ ಖಾಯಿಲೆ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ತೀವ್ರತೆಯಲ್ಲಿ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ವ್ಯತ್ಯಾಸವಿರುತ್ತದೆ. ಕೆಲವು ಮಕ್ಕಳು ಬೆಳವಣಿಗೆಯ ಹಂತದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು. ಉಳಿದವರು ಗಂಭೀರವಾದ ವಿಕಲತೆಗೆ ಒಳಗಾಗಬಹುದು. ಮಗು ಹೊರಳಾಡುವುದು, ಕುಳಿತುಕೊಳ್ಳುವುದು,ಮಾತನಾಡುವುದು, ನಡೆಯುವುದು ಮೊದಲಾದ ಮಹತ್ವದ ಅಂಶಗಳನ್ನು ಸಾಧಿಸಲು ನಿಧಾನಿಸಬಹುದು.

ಉಸಿರಾಟದಲ್ಲಿ ತೊಂದರೆ, ವಿಷಯವನ್ನು ಅರ್ಥೈಸಿಕೊಳ್ಳುವುದು, ನುಂಗುವುದು ಮುಂತಾದ ಚಟುವಟಿಕೆಗಳಲ್ಲಿ ಕಷ್ಟಪಡುವುದು, ಆಯಾಸ, ಕುಳಿತುಕೊಳ್ಳಲು ಅಸಮರ್ಥರಾಗುವುದು ಅಥವಾ ಬೆಂಬಲವಿಲ್ಲದೇ ನಿಂತುಕೊಳ್ಳಲು ಆಗದಿರುವುದು, ಕೇಳಿಸಿಕೊಳ್ಳಲು ಪರದಾಡುವುದು ಅಥವಾ ದೇಹದ ವಿವಿಧ ಭಾಗಗಳಲ್ಲಿ ನೋವು ಮೊದಲಾದ ಲಕ್ಷಣಗಳನ್ನು ಪಾಲಕರು ತಮ್ಮ ಮಕ್ಕಳಲ್ಲಿ ಎಚ್ಚರಿಕೆಯಿಂದ ಗಮನಿಸಬೇಕು.

Q

ಸೆರೆಬ್ರಲ್ ಪಾಲ್ಸಿ ಖಾಯಿಲೆಗೆ ಕಾರಣಗಳೇನು?

A

ಸೆರೆಬ್ರಲ್ ಪಾಲ್ಸಿ ಖಾಯಿಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಗರ್ಭಧಾರಣೆಯ ಸಮಯದಲ್ಲಿ, ಮಗು ಜನಿಸುವಾಗ ಅಥವಾ ಜನನದ ಮೂರು ವರ್ಷದೊಳಗೆ ಮಿದುಳು ಹಾನಿಗೊಂಡರೆ ಸೆರೆಬ್ರಲ್ ಪಾಲ್ಸಿ ಕಾಣಿಸಿಕೊಳ್ಳಬಹುದು.

ಗರ್ಭಾವಸ್ಥೆಯ ಸಮಯದಲ್ಲಿ ಮಗುವಿನ ಮೆದುಳಿನಲ್ಲಾಗುವ ಗಾಯದ ಪ್ರಮುಖ ಕಾರಣದಿಂದಾಗಿ ಶೇ.70ರಷ್ಟು ಮಕ್ಕಳು ಸೆರೆಬ್ರಲ್ ಪಾಲ್ಸಿಗೆ ತುತ್ತಾಗುತ್ತಾರೆ ಎಂದು ವೈದ್ಯರು ಸೂಚಿಸುತ್ತಾರೆ. ಮಗುವಿನ ಚಲನವಲನ ಮತ್ತು ಬೌದ್ದಿಕ ಸಾಮರ್ಥ್ಯಗಳು ಎಷ್ಟರ ಮಟ್ಟಿಗೆ ಪ್ರಭಾವಿಸಲ್ಪಟ್ಟಿವೆ ಎಂಬುದರ ಮೇಲೆ ಮಿದುಳಿನಗಾಯದ ತೀವ್ರತೆಯನ್ನು ನಿರ್ಧರಿಸಲಾಗುತ್ತದೆ.

ಮಿದುಳಿನಲ್ಲಿ ಗಾಯವಾಗಲು ಕೆಲವು ಸಂಭವನೀಯ ಕಾರಣಗಳು:

 • ಗರ್ಭಾವಸ್ಥೆಯಲ್ಲಿ ಸೋಂಕು: ಇದು ಗರ್ಭಾವಸ್ಥೆಯಲ್ಲಿರುವಾಗ ಭ್ರೂಣದ ನರಮಂಡಲದ ಬೆಳವಣಿಗೆಯನ್ನು ಹಾನಿಗೊಳಿಸಬಹುದು. ಅನುವಂಶೀಯ ಸಮಸ್ಯೆಗಳು, ಸೋಂಕುಗಳು ಅಥವಾ ಹೆರಿಗೆ ಸಮಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಸಹ ಸೆರೆಬ್ರಲ್ ಪಾಲ್ಸಿ ಖಾಯಿಲೆಗೆ ಕಾರಣವಾಗಬಹುದು.

 • ಅವಧಿಪೂರ್ವ ಜನನ: ಒಂದೊಮ್ಮೆ ಅವಧಿಪೂರ್ವ ಜನನದ ಸಂದರ್ಭದಲ್ಲಿ ಆಂತರಿಕ ರಕ್ತಸ್ರಾವದಿಂದ ಮೆದುಳಿಗೆ ಹಾನಿಯಾಗಬಹುದು. ಇನ್ನೊಂದು ಕಾರಣವೆಂದರೆ ಕಾಮಾಲೆರೋಗ. ರಕ್ತದಲ್ಲಿನ ಮಿತಿ ಮೀರಿದ ಪ್ರಮಾಣದಲ್ಲಿ ಬಿಲಿರುಬಿನ್ ಇದ್ದಲ್ಲಿ ಕಾಮಾಲೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಬಿಲಿರುಬಿನ್ನನ್ನು ಜಠರದಿಂದ ಶೋಧಿಸಲಾಗುತ್ತದೆ. ನವಜಾತ ಶಿಶುವಿನಲ್ಲಿ ಪರಿಣಾಮಕಾರಿಯಾಗಿ ಬಿಲಿರುಬಿನ್ ಶೋಧನೆ ಆರಂಭಗೊಳ್ಳಲು ಕೆಲವು ದಿನ ಹಿಡಿಯುತ್ತದೆ. ಆದ್ದರಿಂದ ನವಜಾತ ಮಕ್ಕಳು ಹುಟ್ಟಿದ ಕೆಲ ದಿನಗಳ ನಂತರ ಕಾಮಾಲೆರೋಗಕ್ಕೆ ಒಳಗಾಗುತ್ತವೆ. ಕಾಮಾಲೆ ರೋಗಕ್ಕೆ ಚಿಕಿತ್ಸೆ ನೀಡಲು ಫೋಟೋ ಥೆರಫಿ(ಬೆಳಕಿನ ಚಿಕಿತ್ಸೆ) ವಿಧಾನವನ್ನು ಬಳಕೆಮಾಡಲಾಗುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ತೀವ್ರಸ್ವರೂಪದ, ಚಿಕಿತ್ಸೆನೀಡಲಾಗದ ಕಾಮಾಲೆಯಿಂದ ಮೆದುಳಿನ ಕೋಶಗಳು ಹಾನಿಗೊಳಗಾಗಬಹುದು.

 • ನವಜಾತ ಶಿಶುವಿನ ಆರಂಭದ ವರ್ಷದಲ್ಲಿ: ಗಂಭೀರ ಖಾಯಿಲೆ, ಗಾಯ, ಮಿದುಳಿಗೆ ಆಮ್ಲಜನಕದ ಕೊರತೆಯಿಂದ ಮಿದುಳಿನ ಕೋಶಗಳಿಗೆ ಹಾನಿಯಾಗಬಹುದು.

Q

ಸೆರೆಬ್ರಲ್ ಪಾಲ್ಸಿ ಪತ್ತೆಮಾಡುವುದು ಹೇಗೆ?

A

ಸೆರೆಬ್ರಲ್ ಪಾಲ್ಸಿ ನಿರ್ಣಯಿಸಲು ಯಾವುದೇ ನಿರ್ದಿಷ್ಟ ಪರೀಕ್ಷೆಗಳು ಇಲ್ಲ. ಪ್ರಮುಖವಾಗಿ ಮಗುವಿನ ವೈದ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆಗಳನ್ನು ಆಧರಿಸಿ ಈ ರೋಗವನ್ನು ನಿರ್ಣಯಿಸಬಹುದು. ಆದಾಗ್ಯೂ ಆರಂಭಿಕ ಹಂತದಲ್ಲಿಯೇ ರೋಗಪತ್ತೆಮಾಡುವುದನ್ನು ಶಿಫಾರಸುಮಾಡಲಾಗುವುದು. ಇದರಿಂದ ಮಗುವಿಗೆ ಅಗತ್ಯವಾದ ಚಿಕಿತ್ಸೆ, ಥೆರಫಿ ಅಥವಾ ಮಾರ್ಗದರ್ಶನಗಳನ್ನು ಪಾಲಕರು ಕೊಡಿಸಬಹುದು. ಖಾಯಿಲೆಯ ಸ್ವರೂಪವನ್ನು ಪತ್ತೆಹಚ್ಚುವದು ಕಷ್ಟದಾಯಕವಾದ್ದರಿಂದ ಚಿಕಿತ್ಸೆ ಆರಂಭಿಸುವುದು ಕೆಲವೊಮ್ಮೆ ವಿಳಂಬವಾಗುತ್ತದೆ. ಆರಂಭದ ವರ್ಷಗಳಲ್ಲಿ ಮಗುವಿನಲ್ಲಿ ದೈಹಿಕ ಅನಾರೋಗ್ಯ ಲಕ್ಷಣಗಳಿದ್ದರೆ ಸೆರೆಬ್ರಲ್ ಪಾಲ್ಸಿಯ ಲಕ್ಷಣಗಳು ಬದಲಾಗಬಹುದು. ಇದರಿಂದಾಗಿ ಚಿಕಿತ್ಸೆಗೆ ಇನ್ನಷ್ಟು ಸಮಯಾವಕಾಶ ಹಿಡಿಯುತ್ತದೆ. ತೀವ್ರಸ್ವರೂಪದ ಸೆರೆಬ್ರಲ್ ಪಾಲ್ಸಿ ಖಾಯಿಲೆಯಿಂದ ಬಳಲುತ್ತಿರುವ ಮಗುವನ್ನು ಗುರುತಿಸಿಸುವುದು ಸುಲಭ. ತಪಾಸಣೆಯನ್ನು ಮೊದಲ ತಿಂಗಳಿನಲ್ಲೆ ಮಾಡಲಾಗುತ್ತದೆ. ಕೆಲವು ಮಕ್ಕಳಲ್ಲಿ ಮೊದಲ ವರ್ಷ ತುಂಬುವುದರೊಳಗೆ ಖಾಯಿಲೆಯನ್ನು ಪತ್ತೆಹಚ್ಚಲಾಗುತ್ತದೆ. ಅಲ್ಪ ಪ್ರಮಾಣದಲ್ಲಿ ಖಾಯಿಲೆ ಹೊಂದಿರುವ ಮಗುವಿನಲ್ಲಿ ರೋಗಪತ್ತೆ ಮಾಡಲು 3-4 ವರ್ಷಗಳವರೆಗೆ ಸಾಧ್ಯವವಾಗದೇ ಹೋಗಬಹುದು.

ಹಲವು ತಿಂಗಳುಗಳಲ್ಲಿ ಅಥವಾ ವರ್ಷಗಳ ಕಾಲದಲ್ಲಿ ಕೂಡ ಮಗುವಿನಲ್ಲಿ ಕಂಡುಬರಬಹುದಾದ ಅನೈಚ್ಛಿಕ ಪ್ರತಿಕ್ರಿಯೆಗಳು, ಸ್ನಾಯುಸೆಡೆತ, ದೇಹದಭಂಗಿ, ಸ್ನಾಯು ಹೊಂದಾಣಿಕೆ ಮತ್ತು ಇತರ ಅಂಶಗಳನ್ನು ವೈದ್ಯರು ಪರೀಕ್ಷಿಸುತ್ತಾರೆ. ಪ್ರಾಥಮಿಕ ಆರೈಕೆ ವೈದ್ಯರು ವೈದ್ಯಕೀಯ ತಜ್ಞರನ್ನು ಭೇಟಿಯಾಗಲು ಶಿಫಾರಸ್ಸು ಮಾಡಬಹುದು ಅಥವಾ ಮಿದುಳಿನಚಿತ್ರಣ ತೆಗೆಯಲು ಎಂಆರ್ಐ(ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್), ಕ್ರೇನಿಯಲ್ ಅಲ್ಟ್ರಾಸೌಂಡ್ ಅಥವಾ ಸಿಟಿ ಸ್ಕ್ಯಾನ್(ಕಂಪ್ಯೂಟರ್ ಟೊಮೋಗ್ರಫಿ ಸ್ಯ್ಕಾನ್) ಪರೀಕ್ಷೆಗೆ ಶಿಫಾರಸ್ಸು ಮಾಡಬಹುದು.

ಒಂದು ವೇಳೆ ಮಗು ಅವಧಿ ಪೂರ್ವದಲ್ಲಿ ಜನಿಸಿದರೆ ತಕ್ಷಣ ಎಂಆರ್ ಐ ಸ್ಕ್ಯಾನ್ ಮಾಡಿದರೆ ಮಿದುಳಿನ ಗಾಯದ ಬಗ್ಗೆ ತಿಳಿಯುತ್ತದೆ. ಆದರೆ ಇದು ತೀರಾ ಮುಂಚಿತವಾಗುವುದರಿಂದ ಇದರ ಪರಿಣಾಮವನ್ನು ಊಹಿಸಲು ಕಷ್ಟವಾಗುತ್ತದೆ. ಒಂದು ವೇಳೆ ವೈದ್ಯರು ಮಗುವಿನಲ್ಲಿ ಸೆರೆಬ್ರಲ್ ಪಾಲ್ಸಿ ಅಪಾಯ ಗುರುತಿಸಿದರೆ ನಂತರ ಚಿಕಿತ್ಸೆಯನ್ನು ಜನನದ ಒಂದು ತಿಂಗಳದಲ್ಲಿ ಆರಂಭಿಸಬೇಕು.

ಪರೀಕ್ಷೆಗಳು ಮತ್ತು ಸ್ಕ್ಯಾನ್ ಗಳು

ಸೆರೆಬ್ರಲ್ ಪಾಲ್ಸಿಯಂತೆ ರೋಗ ಲಕ್ಷಣಗಳನ್ನು ಹೊಂದಿರುವ ಇತರ ರೋಗದ ಸಮಸ್ಯೆಗಳನ್ನು ಅಲ್ಲಗಳೆಯಲು ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಬೇಕಾಗಬಹುದು.

 • ಎಂಆರ್ ಸ್ಕ್ಯಾನ್: ಕ್ಷಕಿರಣ ಮತ್ತು ಅಯಸ್ಕಾಂತೀಯ ಅಲೆಗಳನ್ನು ಉಪಯೋಗಿಸುವ ಮೂಲಕ ಮಿದುಳಿನ ಅಧ್ಯಯನ ಮಾಡಲಾಗುತ್ತದೆ.
 • ಆಲ್ಟ್ರಾಸೌಂಡ್ ಸ್ಕ್ಯಾನ್: ಶಬ್ದ ತರಂಗದ ಅಲೆಗಳನ್ನು ಬಳಸಿ ಮಗುವಿನ ಮಿದುಳಿನ ಅಂಗಾಂಶದ ಚಿತ್ರಣ ತೆಗೆಯಲಾಗುತ್ತದೆ.
 • ಸಿಟಿ ಸ್ಕ್ಯಾನ್: ಕಂಪ್ಯೂಟರ್ ಉಪಯೋಗಿಸಿ ಕ್ಷ-ಕಿರಣಗಳನ್ನು ಬಳಸಿ ಮಿದುಳಿನ ತ್ರಿ-ಡಿ ಚಿತ್ರಣ ಸೃಷ್ಟಿಸಲಾಗುತ್ತದೆ.
 • ಎಲೆಕ್ಟ್ರೋಎನ್ಸೆಫೆಲೋಗ್ರಾಮ್(ಇಇಜಿ): ಚಿಕ್ಕದಾದ ಎಲೆಕ್ಟ್ರೋಡುಗಳನ್ನು ನೆತ್ತಿಯ ಮೇಲಿಟ್ಟು ಮಿದುಳಿನ ಚಟುವಟಿಕೆಯನ್ನು ಗಮನಿಸಲಾಗುವುದು.
 • ಎಲೆಕ್ಟ್ರೋಮಿಯೋಗ್ರಾಮ್ (ಇಎಂಜಿ): ಸ್ನಾಯು ಚಲನೆ ಮತ್ತು ಬಾಹ್ಯ ನರಮಂಡಲಗಳ (ದೇಹದ ಇತರೆ ಭಾಗಗಳಿಗೆ ಮೆದಳು ಮತ್ತು ಬೆನ್ನು ಹುರಿಗೆ ನರಗಳ ಕಾರ್ಯಾಚರಣೆಯ ಮೂಲಕ) ಪರೀಕ್ಷೆ ಮಾಡಲಾಗುತ್ತದೆ.
 • ರಕ್ತ ಪರೀಕ್ಷೆ

Q

ಸೆರೆಬ್ರಲ್ ಪಾಲ್ಸಿ ಖಾಯಿಲೆಗೆ ಚಿಕಿತ್ಸೆ ಪಡೆಯುವುದು ಹೇಗೆ?

A

ತಮ್ಮ ಮಗು ಬೆಳವಣಿಗೆಯ ಹಂತವೊಂದನ್ನು ತಪ್ಪಿಸಿಕೊಂಡಿದೆಯೇ ಎಂಬುದರತ್ತ ಪಾಲಕರು ಮೊದಲು ಗಮನ ಹರಿಸಬೇಕು. ಒಂದು ವೇಳೆ ಬೆಳವಣಿಗೆಯ ಹಾದಿ ತಡವಾದರೆ, ತಮ್ಮ ಮಗು ನಿಧಾನಗತಿಯ ಕಲಿಕೆಯನ್ನು ಹೊಂದಿದ್ದು ನಂತರದಲ್ಲಿ ಕ್ರಮೇಣ ವಿಷಯಗಳನ್ನು ಕಲಿತುಕೊಳ್ಳುತ್ತದೆ ಎಂದು ಪಾಲಕರು ಯೋಚಿಸಬೇಕಾಗುತ್ತದೆ. ಆದರೆ ಮಗುವಿನ ನಿಧಾನಗತಿಯ ಬೆಳವಣಿಗೆಯ ಕುರಿತು ಶಿಶುವೈದ್ಯರಿಗೆ ಮಾಹಿತಿ ನೀಡಬೇಕು.

ಸೆರೆಬ್ರಲ್ ಪಾಲ್ಸಿ ಖಾಯಿಲೆ ಗುಣಪಡಿಸುವ ಚಿಕಿತ್ಸೆಯಿಲ್ಲ. ಆದರೆ ರೋಗ ಲಕ್ಷಣಗಳನ್ನು ಗುಣಪಡಿಸಲು ವಿವಿಧ ರೀತಿಯ ಚಿಕಿತ್ಸೆಗಳು ಲಭ್ಯವಿವೆ.. ಸೆರೆಬ್ರಲ್ ಪಾಲ್ಸಿ ಖಾಯಿಲೆಯಲ್ಲಿ ಹಲವು ಪ್ರಕಾರಗಳಿವೆ. ನ್ಯೂನ್ಯತೆಯ ಸ್ಥಳ ಮತ್ತು ತೀವ್ರತೆಯ ಸ್ವರೂಪ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯೇ ಆಗಿರುತ್ತದೆ. ಈ ಎಲ್ಲ ಕಾರಣಗಳಿಂದ ಸೆರೆಬ್ರೆಲ್ ಪಾಲ್ಸಿಯ ಕಾಯಿಲೆಗೆ ಒಳಗಾದ ಮಗುವಿನ ಸಂಕೀರ್ಣ ಚಿಕಿತ್ಸೆಗೆ ಸಮಗ್ರ ಚಿಕಿತ್ಸಾ ಯೋಜನೆ ರೂಪಿಸಲು ತಜ್ಞ ವೈದ್ಯರ ವಿಶೇಷ ತಂಡ ಒಟ್ಟಾಗಿ ಕೆಲಸ ಮಾಡುತ್ತದೆ. ಮಕ್ಕಳ ತಜ್ಞರು, ಫಿಸಿಯೋಥೆರಪಿಸ್ಟ್, ಮೂಳೆತಜ್ಞರು(ವಿರೂಪಗೊಂಡ ಮತ್ತು ದುರ್ಬಲಗೊಂಡ ಕೀಲುಗಳು) ಮಾತು ಮತ್ತು ಭಾಷಾ ತಜ್ಞ ಚಿಕಿತ್ಸಕರು, ವೃತ್ತಿಪರ ಚಿಕಿತ್ಸಕರು, ವಿಶೇಷ ಶಿಕ್ಷಣ ಶಿಕ್ಷಕರು, ಮತ್ತು ಮನಃಶಾಸ್ತ್ರಜ್ಞರು ಸಮನ್ವಯತೆಯಿಂದ ಕೆಲಸ ಮಾಡಿ ಮಗುವಿನ ರೋಗ ಲಕ್ಷಣಗಳನ್ನು ನಿಭಾಯಿಸಲು ಮತ್ತು ಮಗುವನ್ನು ಸಾಧ್ಯವಾದಷ್ಟು ಸ್ವತಂತ್ರವಾಗಿಸಲು ಸಹಾಯ ಮಾಡುತ್ತಾರೆ.

ಫಿಸಿಯೋಥೆರಫಿ: ಮಗುವಿನಲ್ಲಿ ಸೆರೆಬ್ರಲ್ ಪಾಲ್ಸಿ ರೋಗ ನಿರ್ಣಯವಾದ ಬಳಿಕ ಫಿಸಿಯೋಥೆರಫಿ ಚಿಕಿತ್ಸೆ ಆರಂಭಗೊಳ್ಳುತ್ತದೆ. ಸ್ನಾಯುಗಳು ದುರ್ಬಲವಾಗುವುದನ್ನು ತಡೆಯುವುದು ಮತ್ತು ಚಿಕ್ಕದಾದ ಸ್ನಾಯು ಮತ್ತು ದುರ್ಬಲಗೊಂಡ ಸ್ನಾಯುಗಳ ಚಲನೆಯನ್ನು ಯಥಾಸ್ಥಿತಿಗೆ ತರುವುದು ಇದರ ಮುಖ್ಯ ಉದ್ದೇಶ. ಸ್ನಾಯಗಳನ್ನು ಬಲಪಡಿಸಲು ಮತ್ತು ಹಿಗ್ಗಿಸಲು ನಿಮ್ಮ ಮಗುವಿಗೆ ಅನೇಕ ರೀತಿಯ ದೈಹಿಕ ವ್ಯಾಯಾಮಗಳನ್ನು ಫಿಸಿಯೋಥೆರಫಿಸ್ಟ್ ಕಲಿಸುತ್ತಾರೆ. ದೇಹದ ನಿಲುವು ಮತ್ತು ಸ್ನಾಯುಗಳನ್ನು ಹಿಗ್ಗಿಸಲು ವಿಶೇಷವಾಗಿ ಕೈ ಮತ್ತು ಕಾಲಿಗೆ ಬಿಗಿಯುವ ಪಟ್ಟಿ ಬಳಕೆ ಸಹಕಾರಿ.

ಮಾತಿನ ಚಿಕಿತ್ಸೆ: ಮಗುವಿನ ಸಂಹವನ ಕ್ರಿಯೆ ಸುಧಾರಿಸಲು ಇದು ಸಹಕಾರಿ. ಇಲ್ಲಿನ ಸರಣಿ ವ್ಯಾಯಾಮಗಳು ಮಗು ಸ್ಪಷ್ಟವಾಗಿ ಮಾತನಾಡಲು ಸಹಾಯ ಮಾಡುತ್ತವೆ. ಒಂದು ವೇಳೆ ಮಾತಿನ ಚಿಕಿತ್ಸೆ ಕಷ್ಟವೆನಿಸಿದರೆ ಮಗುವಿಗೆ ಕೆಲವು ಸಂಜ್ಞೆ/ಸಂಕೇತಗಳ ಮೂಲಕ ಪರ್ಯಾಯವಾದ ಸಂವಹನ ವಿಧಾನ ಹೇಳಿಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಕಂಪ್ಯೂಟರ್ ಸಂಪರ್ಕಿತ ಧ್ವನಿ ಸಂಯೋಜಕದಂತಹ ವಿಶೇಷ ಸಾಧನಗಳು ಲಭ್ಯವಿದ್ದು ಮಗು ಸಂವಹನವನ್ನು ಕೈಗೊಳ್ಳಲು ಸಹಾಯಮಾಡುತ್ತವೆ.

ಔದ್ಯೋಗಿಕ ಚಿಕಿತ್ಸೆ: ವೈದ್ಯರು ಮಗುವಿನ ದಿನನಿತ್ಯದ ಚಟುವಟಿಕೆಯಲ್ಲಿರುವ ಸಮಸ್ಯೆಗಳನ್ನು ಗುರುತಿಸುತ್ತಾರೆ ಮತ್ತು ಕೆಲಸಗಳನ್ನು ನಿಭಾಯಿಸುವಲ್ಲಿ ಅತ್ಯುತ್ತಮವೆನಿಸುವ, ಚಲನೆಗೆ ಅಗತ್ಯವಾದ ಸೂಕ್ತ ಮಾರ್ಗಗಳನ್ನು ಸೂಚಿಸುತ್ತಾರೆ. ಉದಾ: ಟಾಯ್ಲೆಟ್ ಹೋಗುವುದು, ಬಟ್ಟೆಯನ್ನು ಧರಿಸುವುದು ಮತ್ತು ಆಹಾರ ಸೇವಿಸುವುದು ಇತ್ಯಾದಿ. ಔದ್ಯೋಗಿಕ ಚಿಕಿತ್ಸೆಯು ವಿಶೇಷವಾಗಿ, ಮಗು ಬೆಳೆದಂತೆಲ್ಲ ಅದರ ಆತ್ಮಗೌರವವನ್ನು ಹೆಚ್ಚಿಸಲು ಮತ್ತು ಸ್ವಾವಲಂಬಿಯಾಗಲು ಸಹಕಾರಿಯಾಗಿದೆ.

ಆಟದ ಚಿಕಿತ್ಸೆ: ಇದೊಂದು ಸೃಜನಾತ್ಮಕ ಪ್ರಕ್ರಿಯೆಯಾಗಿದ್ದು ಮಕ್ಕಳು ಆಟದ ಜೊತೆ ಮೋಜನನ್ನು ಅನುಭವಿಸುತ್ತಾರೆ. ಇದು ಅವರ ಭಾವನಾತ್ಮಕ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ಥೆರಪಿ ಮತ್ತು ಮಾನಸಿಕ ಸ್ವರೂಪದ ವಿಧಾನವಾಗಿದ್ದು ಇತರರ ಜೊತೆ ಹೇಗೆ ಸಂವಹನ ಕೈಗೊಳ್ಳಬೇಕು ಮತ್ತು ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಮಕ್ಕಳು ಕಲಿಯುವಂತೆ ಮಾಡುತ್ತದೆ. ಈ ಚಿಕಿತ್ಸೆಯು ಮಗುವಿನ ದೈಹಿಕ ಸಾಮರ್ಥ್ಯ, ಗ್ರಹಣಶಕ್ತಿಯ ಕಾರ್ಯಕ್ಷಮತೆ ಮತ್ತು ಭಾವನಾತ್ಮಕ ಅವಶ್ಯಕತೆಗಳನ್ನು ಸುರಕ್ಷಿತ ಹಾಗೂ ಪ್ರೋತ್ಸಾಹದಾಯಕ ವಾತಾವರಣದಲ್ಲಿ ಸಂಯೋಜಿಸುವಂತೆ ಮಾಡುತ್ತದೆ. ಈ ಥೆರಫಿಯನ್ನು ಸಾಮಾನ್ಯವಾಗಿ ಮಗುವಿನ ಶೈಶವಾವಸ್ಥೆಯಲ್ಲಿ (0-2 ವರ್ಷವಿದ್ದಾಗ) ಕೈಗೊಳ್ಳಲಾಗುತ್ತದೆ. ಸ್ನೇಹಿತರಿಂದಾಗುವ ಒತ್ತಡ ಹಾಗೂ ಸಹಿಷ್ಣುತಾ ಗುಣ ನಿರ್ಣಾಯಕವಾಗಿದ್ದಲ್ಲಿ ಹದಿವಯಸ್ಸಿನ ಆರಂಭಕ್ಕೂ ಮುನ್ನ ಕೂಡ ಈ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಆದಷ್ಟೂ ಮುಂಚಿತವಾಗಿ ಆಟದ ಚಿಕಿತ್ಸೆಯನ್ನು ಸೂಚಿಸುವದರಿಂದ ಮಗು ಹೆಚ್ಚುಬೇಗನೆ ಪ್ರಯೋಜನ ಹೊಂದುವುದು ಸಾಧ್ಯವಾಗುತ್ತದೆ. ಆರಂಭದ ಹಂತದಲ್ಲಿಯೇ ಈ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಮಗು ತನ್ನ ಸ್ನೇಹಿತರು, ಕುಟುಂಬದವರು ಮತ್ತು ಇತರ ಮಕ್ಕಳೊಂದಿಗೆ ತಾನು ಕಲಿತ ವರ್ತನಾಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಾಣಬಹುದು.

ಆಪ್ತಸಮಾಲೋಚನೆ: ಆಪ್ತಸಲಹೆಗಾರರು ಅಥವಾ ಮನಃಶಾಸ್ತ್ರಜ್ಞರು ಮಗುವಿನ ಕುಟುಂಬದ ಪರಿಸ್ಥಿತಿ ನಿಭಾಯಿಸಲು ಮತ್ತು ಅಗತ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಸಹಾಯ ಮಾಡುತ್ತಾರೆ.

ವಿಶೇಷವಾಗಿ ವಿನ್ಯಾಸಗೊಳಿಸಿದ ಶೈಕ್ಷಣಿಕ ಕಾರ್ಯಕ್ರಮ: ಕಲಿಕೆಯ ಅಸಾಮರ್ಥ್ಯ ಹೊಂದಿದ ಮತ್ತು ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳಿಗೆ ತರಬೇತಿ ಮತ್ತು ಶಿಕ್ಷಣ ನೀಡಲು ಈ ವಿಧಾನವನ್ನು ಬಳಸಲಾಗುತ್ತದೆ.

Q

ಸೆರೆಬ್ರಲ್ ಪಾಲ್ಸಿ ಖಾಯಿಲೆ ಹೊಂದಿದ ಮಗುವಿನ ಆರೈಕೆ:

A

ಮಗುವಿನ ಜನನ ಸಂಭಧಿಸಿದವರಲ್ಲಿ ಭರವಸೆ, ಸಂಭ್ರಮ, ಸಂತೋಷ, ಆನಂದಗಳನ್ನು ತುಂಬುತ್ತದೆ. ಆದರೆ ಮಗು ಸೆರೆಬ್ರಲ್ ಪಾಲ್ಸಿ ಖಾಯಿಲೆಯಿಂದ ಬಳಲುತ್ತಿರುವುದನ್ನು ಪತ್ತೆಹಚ್ಚಿದಾಗ ಪಾಲಕರು ಆಘಾತಗೊಳ್ಳಬಹುದು ಮತ್ತು ಅವರ ಭವಿಷ್ಯದ ಬದುಕಿನ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗಬಹುದು. ಇದನ್ನು ಒಪ್ಪಿಕೊಳ್ಳಲು ಕೆಲವು ಸಮಯ ಬೇಕಾಗಬಹುದು. ಆದರೆ ಈ ಅನಿರೀಕ್ಷಿತ ಪರಿಸ್ಥಿತಿಯೊಂದಿಗೆ ಸಹಕರಿಸುವುದು ಮತ್ತು ಮುಂದಿನ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿತುಕೊಳ್ಳುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಮೊದಲು ಮಾಡಬೇಕಾಗಿರುವುದೆಂದರೆ ಮಗುವಿನ ಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು. ಆರಂಭದ ಹಂತದ ಮದ್ಯಸ್ಥಿಕೆ ಮತ್ತು ಅಗತ್ಯ ಚಿಕಿತ್ಸೆ ಅಥವಾ ಥೆರಫಿಯನ್ನು ಪಡದುಕೊಳ್ಳುವದು ಈ ನಿಟ್ಟಿನಲ್ಲಿ ಸಹಾಯವಾಗುತ್ತದೆ.

ಸೆರೆಬ್ರಲ್ ಪಾಲ್ಸಿ ಹೊಂದಿರುವ ಮಗುವಿನ ಪಾಲನೆ ಮತ್ತು ಪೋಷಣೆ ಕಠಿಣವೆನಿಸಬಹುದು ಮತ್ತು ಮಾನಸಿಕಸ್ವಾಸ್ಥ್ಯವನ್ನು ಕುಂದಿಸಬಹುದು. ಆದರೆ ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ. ನೀವು ನಿಮ್ಮ ಮಗುಗೆ ಉತ್ತಮ ಆಪ್ತಸಲಹೆಗಾರರಾಗಬಹುದು ಮತ್ತು ಬೆಂಬಲವನ್ನು ಸೂಚಿಸಬಹುದು. ಸೆರೆಬ್ರಲ್ ಪಾಲ್ಸಿ ಕುರಿತು ಇರುವ ತಿಳುವಳಿಕೆಯಿಂದಾಗಿ ನೀವು ಮಗುವಿಗೆ ಎಲ್ಲಾರೀತಿಯಲ್ಲೂ ಸಹಾಯ ಮಾಡುವುದಕ್ಕೆ ನಿಮ್ಮನ್ನು ಅಣಿಗೊಳಿಸುವಂತಾಗುತ್ತದೆ. ಸಪೋರ್ಟ್ ಗ್ರುಪ್ ಸೇರುವ ಮೂಲಕ ನಿಮ್ಮ ಕಲಿಕೆ ಮತ್ತು ಅನುಭವಗಳನ್ನು ಹಂಚಿಕೊಳ್ಳಬಹುದು. ಅಲ್ಲದೇ ಇಂತಹ ತೊಂದರೆಯುಳ್ಳ ಮಕ್ಕಳ ಇತರ ಪೋಷಕರಿಂದ ಕೂಡ ನೀವು ಸಾಕಷ್ಟು ಕಲಿಯುತ್ತೀರಿ. ಇದು ನಿಮ್ಮ ಮಗುವಿನ ನಿರ್ವಹಣೆಯಲ್ಲಿ ನಿಮಗೆ ಸಹಕಾರಿಯಾಗುಬಹುದು.

ಸೆರೆಬ್ರಲ್ ಪಾಲ್ಸಿ ಖಾಯಿಲೆಯಿಂದ ಬಳಲುತ್ತಿರುವ ಮಗುವಿನ ಸಾಮರ್ಥ್ಯವನ್ನು ಸಾಧ್ಯವಾದಷ್ಟು ಹೆಚ್ಚಿಸಿ:

ಸೆರೆಬ್ರಲ್ ಪಾಲ್ಸಿ ಖಾಯಿಲೆ ಪ್ರಗತಿ ಕಾಣದ ಸ್ಥಿತಿ. ಪ್ರಸ್ತುತ ಅದನ್ನು ಗುಣಪಡಿಸುವ ಯಾವುದೇ ರೀತಿಯ ಚಿಕಿತ್ಸೆ ಇಲ್ಲ. ಆದಾಗ್ಯೂ ಸೆರೆಬ್ರಲ್ ಪಾಲ್ಸಿ ಹೊಂದಿರುವ ವ್ಯಕ್ತಿಗಳು ಅಪಾರ ಸವಾಲುಗಳನ್ನು ಎದುರಿಸಿದ್ದಾರೆ ಮತ್ತು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಸ್ವಸಾಮರ್ಥ್ಯಗಳನ್ನು ಬಳಸಿಕೊಳ್ಳುವುದನ್ನು ಕಲಿತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಸೆರೆಬ್ರಲ್ ಪಾಲ್ಸಿ ಖಾಯಿಲೆಗೆ ಒಳಗಾದ ವ್ಯಕ್ತಿಗಳಿಗೆ ಶಿಕ್ಷಣ ಪೂರೈಸಲು, ಆಸಕ್ತಿ ಮತ್ತು ಹವ್ಯಾಸಗಳನ್ನು ಬೆಳೆಸಿಕೊಳ್ಳಲು, ಕ್ರೀಡೆಗಳಲ್ಲಿ ಮತ್ತು ಮನರಂಜನಾ ಚಟುವಟಿಕೆಯಲ್ಲಿ ಭಾಗವಹಿಸಲು ನೆರವಾಗುವ ಅನೇಕ ರೀತಿಯ ಪರ್ಯಾಯ ಮಾರ್ಗಗಳು ಮತ್ತು ಸಹಾಯಕ ಉಪಕರಣಗಳು ಲಭ್ಯವಿವೆ.
ಸೆಲೆಬ್ರಲ್ ಪಾಲ್ಸಿ ಹೊಂದಿರುವ ಮಕ್ಕಳು ಆರಂಭಿಕ ಪರೀಕ್ಷಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಸಫಲರಾಗಿರುವ ಸಾಕ್ಷಿಗಳಿವೆ. ನಡೆಯಲು ಸಾಧ್ಯವಿಲ್ಲ ಎಂದು ಪತ್ತೆಹಚ್ಚಲಾದ ಮಗು ಅಥವಾ ನಡೆಯಲು ಕಲಿಯದೇ ಇರುವ ಮಗು ಪರ್ವತಗಳನ್ನು ಏರುವಷ್ಟರ ಮಟ್ಟಿಗೆ ಸಮರ್ಥವಾದ ಉದಾಹರಣೆಗಳಿವೆ. ಮಾತನಾಡಲು ಸಾಧ್ಯವೇ ಇಲ್ಲ ಎಂದು ನಿರೀಕ್ಷಿಸಲಾದ ಮಕ್ಕಳು ಅಸ್ಖಲಿತವಾಗಿ ಮಾತನಾಡಿದ, ಪುಸ್ತಕಗಳನ್ನು ಬರೆದು, ತಮ್ಮ ಪ್ರತಿಭೆಯಿಂದ ಇತರರಿಗೆ ಸ್ಪೂರ್ತಿಯಾದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ.

ಮಗು ತನ್ನ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಂಡು ಪ್ರಾಥಮಿಕ ಜೀವನ ಕೌಶಲ್ಯಗಳನ್ನು ಕರಗತಮಾಡಿಕೊಳ್ಳುವ ನಿಟ್ಟಿನಲ್ಲಿ ಪಾಲಕರು ನಿರ್ಣಾಯಕ ಪಾತ್ರವಹಿಸುತ್ತಾರೆ. ಪಾಲಕರ ಸಹಕಾರದಿಂದ ಮಗು ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುತ್ತದೆ.

ಸೆರೆಬ್ರಲ್ ಪಾಲ್ಸಿ ವಿಧಗಳು:

ಸೆರೆಬ್ರಲ್ ಪಾಲ್ಸಿಯಲ್ಲಿ ನಾಲ್ಕು ವಿಧಗಳಿವೆ.

ಸ್ಪಾಸ್ಟಿಕ್ ಸೆರೆಬ್ರಲ್ ಪಾಲ್ಸಿ: ಇದು ಬಹುತೇಕ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವಿಧಗಳಲ್ಲಿ ಒಂದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಪ್ರಭಾವಿಸುತ್ತದೆ. ಸಾಧಾರಣ ಅಥವಾ ತೀವ್ರಸ್ವರೂಪದಲ್ಲಿ ಇದು ಮಕ್ಕಳನ್ನು ಬಾಧಿಸಬಹುದು. ಸ್ಪಾಸ್ಟಿಕ್ ಸೆರೆಬ್ರಲ್ ಪಾಲ್ಸಿ ತೊಂದರೆಯಲ್ಲಿ ನಾಲ್ಕು ರೀತಿಯ ಉಪ ಗುಂಪುಗಳನ್ನು ಗುರುತಿಸಲಾಗುತ್ತದೆ.

 • ಹೆಮಿಪ್ಲೇಗಿಯಾ :ಎರಡೂ ಅವಯವಗಳು ಒಂದೇ ಬದಿಯಲ್ಲಿ ಇರುತ್ತವೆ. ಸಾಮಾನ್ಯವಾಗಿ ಭುಜದ ಭಾಗ ಹೆಚ್ಚು ಪ್ರಭಾವಕ್ಕೊಳಗಾಗುತ್ತದೆ.

 • ಪ್ಯಾರಾಪ್ಲೇಗಿಯಾ: ಎರಡೂ ಕಾಲುಗಳನ್ನು ಒಳಗೊಂಡಿರುತ್ತದೆ. ಭುಜಗಳಲ್ಲಿ ಅಷ್ಟಾಗಿ ಬಾಧಿಸುವುದಿಲ್ಲ ಅಥವಾ ಇರುವುದಿಲ್ಲ.

 • ಕ್ವಾಡ್ರಾಪ್ಲೇಗಿಯಾ ಅಥವಾ ಟೆಟ್ರಾಪ್ಲೇಗಿಯಾ: ಎಲ್ಲ ಅವಯವಗಳನ್ನು ಒಳಗೊಳ್ಳುತ್ತದೆ.ಸಾಮಾನ್ಯವಾಗಿ ಎಲ್ಲ ಅವಯವಗಳೂ ಒಂದೇ ಕೋನದಲ್ಲಿರುತ್ತವೆ.

 • ಡಿಪ್ಲೇಗಿಯಾ: ಪ್ಯಾರಾಪ್ಲೇಗಿಯಾ ಮತ್ತು ಕ್ವಾಡ್ರಾಪ್ಲೇಗಿಯಾಗಳ ನಡುವಣ ಸ್ಥಿತಿ; ಎರಡೂ ಕಾಲುಗಳನ್ನು ಒಳಗೊಂಡಿರುತ್ತದೆ.

 • ಅಥೆಟಾಯ್ಡ್ ಅಥವಾ ಡಿಸ್ಕೈನೆಟಿಕ್ ಸೆರೆಬ್ರೆಲ್ ಪ್ಲಾಸಿ: ಕಡಿಮೆ ಮಟ್ಟದಲ್ಲಿರುವ ಸ್ನಾಯುಸಾಮರ್ಥ್ಯ, ನಿಧಾನಗತಿಯ ಚಲನೆಯ ವಿನ್ಯಾಸಗಳು ತಲೆ, ಭುಜಗಳು ಹಾಗೂ ಕಾಲುಗಳಲ್ಲಿ ಅನೈಚ್ಛಿಕವಾಗಿ ಕಂಡುಬರುವ ಸೆಳೆತ ಮುಂತಾದ ಲಕ್ಷಣಗಳಿಂದ ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಭಾವನಾತ್ಮಕವಾಗಿ ಒತ್ತಡದಲ್ಲಿರುವಾಗ ಚಲನೆ ತೀವ್ರಗತಿಯನ್ನು ಪಡೆದುಕೊಳ್ಳುತ್ತದೆ ಮತ್ತು ವ್ಯಕ್ತಿ ವಿಶ್ರಾಂತ ಸ್ಥಿತಿಯಲ್ಲಿರುವಾಗ ನಿಧಾನಗೊಳ್ಳುತ್ತದೆ.

 • ಅಟಾಕ್ಸಿಕ್ ಸೆರೆಬ್ರೆಲ್ ಪ್ಲಾಸಿ: ಇದು ತುಂಬ ಅಪರೂಪವಾಗಿ ಕಂಡುಬರುವ ಸ್ಥಿತಿ. ಅಶಕ್ತತೆ, ಅಸಂಘಟಿತ ಚಲನೆ ಮತ್ತು ಅಸ್ಥಿರತೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಉದ್ದುದ್ದ ಹೆಜ್ಜೆಹಾಕುವುದು ಮತ್ತು ಉತ್ತಮ ಚಲನಾ ಕೌಶಲ್ಯಗಳಲ್ಲಿ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ.

 • ಸೆರೆಬ್ರೆಲ್ ಪ್ಲಾಸಿಯ ಸಮ್ಮಿಶ್ರ ರೂಪಗಳು: ಸೆರೆಬ್ರೆಲ್ ಪ್ಲಾಸಿಯ ವಿಧಗಳ ಸಂಯೋಜನೆಯಾಗಿದ್ದರೂ ಸಹ ಸಾಮಾನ್ಯವಾಗಿ ಸ್ಪಾಸ್ಟಿಸಿಟಿ ಮತ್ತು ಅಥೆಟೋಸಿಸ್ ಸಮ್ಮಿಶ್ರಣ ಕಂಡುಬರುತ್ತದೆ.

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org