ಡಿಮೆನ್ಶಿಯ

Q

ಡಿಮೆನ್ಶಿಯ ಎಂದರೇನು?

A

ಡಿಮೆನ್ಶಿಯ (ಮರೆಗುಳಿತನ) ಒಂದು ಪ್ರತ್ಯೇಕ ಖಾಯಿಲೆಯಲ್ಲ ಬದಲಿಗೆ ಮಿದುಳಿನ ಅಂಗಾಂಶಗಗಳಿಗೆ ಹಾಗೂ ಜೀವಕೋಶಗಳಿಗೆ ಆಗುವ ಹಾನಿಯಿಂದ ಕಾಣಿಸಿಕೊಳ್ಳುವ ಹಲವಾರು ರೋಗಲಕ್ಷಣದ ಸಮೂಹವಾಗಿದೆ. ಈ ಹಾನಿಯಿಂದಾಗಿ ಜನರು ವೃದ್ಧಿಸುವ  ಖಾಯಿಲೆಗಳಾದ ಆಲ್ಜೈಮರ್ಸ್‌ ಅಥವಾ ಪಾರ್ಕಿನ್‌ಸನ್ಸ್‌ ಖಾಯಿಲೆಗೆ ಒಳಗಾಗಬಹುದು. ಈ ಖಾಯಿಲೆಗಳ ಚಿಹ್ನೆ: ನೆನಪಿನ ಶಕ್ತಿ ನಷ್ಟ, ಮೂಡ್ ಬದಲಾವಣೆ, ತರ್ಕ ಮತ್ತು ಚಿಂತನೆಗೆ  ಕಷ್ಟಪಡುವುದು, ಸಮಸ್ಯೆ ಪರಿಹಾರ ಮತ್ತು ಭಾಷೆಯ ಬಳಕೆಗೆ ಕಷ್ಟಪಡುವುದು. ಈ ಸಮಸ್ಯೆಗಳು ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಧಕ್ಕೆಯನ್ನುಂಟುಮಾಡುತ್ತವೆ.

ಮರೆಗುಳಿತನ ಉಲ್ಬಣಗೊಳ್ಳುವ/ವೃದ್ಧಿಸುವ ಖಾಯಿಲೆ. ಅಂದರೆ ಸಮಯ ಕಳೆದಂತೆ ಪರಿಸ್ಥಿತಿ ಹದಗೆಡುತ್ತದೆ ಹಾಗೂ ಇದು ನಿಧಾನವಾಗಿ ಸಾವಿಗೂ ಕಾರಣವಾಗಬಹುದು.

ಸೂಚನೆ: 'ಭಾರತೀಯ ಮರೆಗುಳಿತನದ ವರದಿ' ಪ್ರಕಾರ ನಮ್ಮ ದೇಶದಲ್ಲಿ 37 ಲಕ್ಷ ಜನ ಮರೆಗುಳಿತನದಿಂದ ಬಾಧಿತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಸಂಖ್ಯೆ 2030ಕ್ಕೆ ಎರಡರಷ್ಟು ಆಗುವ ನಿರೀಕ್ಷೆಯಿದೆ. 

Q

ಯಾವುದು ಮರೆಗುಳಿತನವಲ್ಲ?

A

 • ವಯಸ್ಸಾದಂತೆ ಜನರು ಜ್ಞಾಪಕ ಶಕ್ತಿ ಸಮಸ್ಯೆಗಳನ್ನು ಹೊಂದಬಹುದು. ದೈಹಿಕ ಖಾಯಿಲೆ ಅಥವಾ ಖಿನ್ನತೆಯು ಜ್ಞಾಪಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಇದು ಮರೆಗುಳಿತನದ ಲಕ್ಷಣವಲ್ಲ.
 • ಮರೆಗುಳಿತನಕ್ಕೆ ಒಳಗಾಗಿರುವ ವ್ಯಕ್ತಿ ಮಿದುಳಿನ ಕನಿಷ್ಟ 2 ಪ್ರಕಾರದ ಕೆಲಸಗಳೊಂದಿಗೆ ತೊಂದರೆ ಹೊಂದಿರುತ್ತಾನೆ (ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು ಮತ್ತು ನಿರ್ಧಾರ ಮಾಡಲಾಗದಿರುವುದು ಅಥವಾ ಭಾಷೆ) ಮತ್ತು ಆತನಿಗೆ ನಿತ್ಯದ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿಭಾಯಿಸಲು ಸಾಧ್ಯವಾಗದಿರಬಹುದು.

Q

ಮರೆಗುಳಿತನದ ವಿಧಗಳು

A

ಮರೆಗುಳಿತನದಲ್ಲಿ ಹಲವು ಪ್ರಕಾರಗಳಿವೆ. ಪ್ರತಿಯೊಂದನ್ನು ಅವು ಸೃಷ್ಟಿಸುವ ಖಾಯಿಲೆ ಅಥವಾ ಪರಿಸ್ಥಿತಿಯಿಂದ ಹೆಸರಿಸಲಾಗುತ್ತದೆ.

)ಆಲ್ಜೈಮರ್ಸ್ಖಾಯಿಲೆ (Alzheimer's disease): ಇದು ಸಾಮಾನ್ಯವಾಗಿ ಕಂಡುಬರುವ ಮರೆಗುಳಿತನದ ಪ್ರಕಾರ. ಈ ಖಾಯಿಲೆ 7 ರಿಂದ 10 ವರ್ಷಗಳಲ್ಲಿ ನಿಧಾನವಾಗಿ ವೃದ್ಧಿಸುತ್ತದೆ. ಮೆದುಳಿನ ಬೌದ್ಧಿಕ ಸಾಮರ್ಥ್ಯಗಳು ನಿಧಾನವಾಗಿ ಕುಗ್ಗುತ್ತವೆ ಮತ್ತು ಜ್ಞಾಪಕ ಶಕ್ತಿ, ಭಾಷೆ, ನಿರ್ಧಾರ ಮತ್ತು ಆಕಾರ ಸಂಬಂಧಿತ ಸಾಮರ್ಥ್ಯಗಳನ್ನು ನಿಯಂತ್ರಿಸುವ ಮಿದುಳಿನ ಭಾಗಗಳು ಕ್ರಮೇಣವಾಗಿ ಕೆಲಸ ನಿಲ್ಲಿಸುತ್ತವೆ.

) ಲೆವಿ ಬಾಡಿ ಮರೆಗುಳಿತನ(Lewy body dementia): ಲೆವಿ ಬಾಡಿ ಎಂದರೆ ಮಿದುಳಿನಲ್ಲಿ ಕಂಡುಬರುವ ಅಸಹಜ ಪ್ರೋಟಿನ್‌  ಗುಂಪು. ಈ ಖಾಯಿಲೆಗೆ ಒಳಗಾದ ವ್ಯಕ್ತಿ ತ್ರೀವ್ರ ಕಣ್ಣುಗಳ ಚಲನೆ, ನಿದ್ರೆಯ ತೊಂದರೆಗೆ ಒಳಗಾಗಿ ಕನಸಲ್ಲಿ ಕಂಡದ್ದನ್ನು ನಟಿಸುತ್ತಾನೆ.

) ಫ್ರೊಂಟೊಟೆಂಪೊರಲ್ ಮರೆಗುಳಿತನ (frontotemporal dementia): ಈ ವಿಧದ ಮರೆಗುಳಿತನ ಇತರ ವಿಧಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ವಯಸ್ಸಿನಲ್ಲಿ(40-60 ವರ್ಷಗಳ ಒಳಗೆ) ಕಾಣಿಸಿಕೊಳ್ಳುತ್ತದೆ. ವ್ಯಕ್ತಿತ್ವ, ವರ್ತನೆ ಮತ್ತು ಭಾಷೆಯನ್ನು ನಿಯಂತ್ರಿಸುವ ಮಿದುಳಿನ ಫ್ರೊಂಟಲ್‌ ಮತ್ತು ಟೆಂಪೊರಲ್‌ ಲೊಬ್‌ನ ನರಕೋಶಗಳು ಕ್ಷೀಣಿಸುತ್ತವೆ. ಅಸಹಜ ವರ್ತನೆ, ಭಾಷೆ, ಏಕಾಗ್ರತೆ ಮತ್ತು ಚಲನೆ ಸಮಸ್ಯೆಗಳು ಈ ರೋಗದ ಲಕ್ಷಣಗಳು.

)ವ್ಯಾಸ್ಕುಲರ್(ರಕ್ತನಾಳ) ಮರೆಗುಳಿತನ (Vascular dementia): ರಕ್ತನಾಳದಲ್ಲಿ ರಕ್ತದ ಹರಿಯುವಿಕೆ ಕಡಿಮೆಯಾಗಿ ಅಥವಾ ನಿಂತು ಹೋದಾಗ ಮಿದುಳಿನಲ್ಲಿ ಉಂಟಾಗುವ ಹಾನಿಯಿಂದಾಗಿ ಈ ವಿಧದ ಮರೆಗುಳಿತನ ಕಾಣಿಸಿಕೊಳ್ಳುತ್ತದೆ. ಮಿದುಳಿನ ಈ ಹಾನಿಯು ಲಕ್ವ, ಹೃದಯನಾಳದಲ್ಲಿ ಸೋಂಕು ಅಥವಾ ಇತರೆ ನಾಳಗಳಲ್ಲಿನ (ರಕ್ತನಾಳಗಳು) ಸಮಸ್ಯೆಗಳಿಂದ ಕಾಣಿಸಿಕೊಳ್ಳಬಹುದು.

Q

ಮರೆಗುಳಿತನದ ಲಕ್ಷಣಗಳೇನು?

A

ಮರೆಗುಳಿತನದ ಲಕ್ಷಣಗಳೇನು?

ಸಾಮಾನ್ಯವಾಗಿ ಅರಿವಿನ ಕೊರತೆಯಿಂದಾಗಿ ನಾವು ಹಿರಿಯರಲ್ಲಿನ ರೋಗ ಲಕ್ಷಣ ಗುರುತಿಸುವಲ್ಲಿ ಮತ್ತು ಚಿಕಿತ್ಸೆ ಪಡೆಯುವಲ್ಲಿ ತಡ ಮಾಡುತ್ತೇವೆ. ವೈದ್ಯರ ಬಳಿ ಹೋಗುವಷ್ಟರಲ್ಲಿ ಸಮಸ್ಯೆ ಬಹಳ ತೀವ್ರವಾಗಿರುತ್ತದೆ.

ಮರೆಗುಳಿತನದ ಲಕ್ಷಣಗಳು ರೋಗಕ್ಕೆ ಕಾರಣ ಮತ್ತು ಮಿದುಳಿನ ಯಾವ ಭಾಗದಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಆಧರಿಸಿದೆ. ಪ್ರತಿ ವ್ಯಕ್ತಿಯಲ್ಲಿ ವಿಭಿನ್ನ ಲಕ್ಷಣ ಕಾಣಿಸಬಹುದು ಮತ್ತು ಈ ಲಕ್ಷಣದಿಂದ ಉಂಟಾಗುವ ತೊಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

ಮರೆಗುಳಿತನ ಹೊಂದಿರುವ ವ್ಯಕ್ತಿ ಈ ಕೆಳಗಿನ ತೊಂದರೆ ಎದುರಿಸಬಹುದು:

 • ಮರೆವು: ವ್ಯಕ್ತಿಯು ಬಹಳ ವರ್ಷಗಳ ಹಿಂದಿನ ಘಟನೆ ನೆನಪಿಸಿಕೊಳ್ಳಬಹುದು. ಆದರೆ ಬೆಳಿಗ್ಗೆ ಎಲ್ಲಿಗೆ ಹೋಗಿದ್ದೆ ಎಂಬಂತಹ ಇತ್ತೀಚಿನ ಘಟನೆ ಅಥವಾ ಚಟುವಟಿಕೆಗಳನ್ನು ಮರೆಯುತ್ತಾರೆ. ಅವರ ಪ್ರೀತಿ ಪಾತ್ರರನ್ನು ಗುರುತಿಸದೆ ಇರಬಹುದು ಅಥವಾ ಸುತ್ತ ನಡೆಯುತ್ತಿರುವ ಸನ್ನಿವೇಶಗಳಿಂದ ಗೊಂದಲಗೊಂಡಿರಬಹುದು.

 • ಭಾಷೆ ಮತ್ತು ಮಾತು: ಯಾವುದೇ ವಿಷಯವನ್ನು ವಿವರಿಸಲು ಸರಿಯಾದ ಪದ ಜ್ಞಾಪಕಕ್ಕೆ ಬಾರದಿರುವುದು. ತಾವು ಕೇಳಿದ ಪದದ ಅರ್ಥ ಮರೆತುಹೋಗುವುದು.

 • ದಿಕ್ಕು ಮರೆಯುವುದು: ತಮಗೆ ಪರಿಚಯವಿದ್ದ ದಾರಿಯನ್ನು ಮರೆತು ಹೋಗುವುದು. ಉದಾಹರಣೆಗೆ ಪಾರ್ಕ್ಗೆ ಹೋಗಿ ಮನೆಗೆ ಮರಳಲು ದಾರಿ ಮರೆಯುವುದು.

 • ದಿನನಿತ್ಯದ ಕೆಲಸಗಳು: ಯಾವುದೇ ಕೆಲಸವನ್ನು ಕ್ರಮಬದ್ಧವಾಗಿ ಮಾಡಲು ಆಗದೇ ಇರುವುದು ( ಹಣಕಾಸಿನ ವ್ಯವಹಾರ, ಅಡುಗೆಯ ಕೆಲಸ, ಮನೆಯ ಕೆಲಸ, ನಿತ್ಯದ ಚಟುವಟಿಕೆಗಳು). ವೈಯಕ್ತಿಕ ಆರೈಕೆ (ಸ್ನಾನ, ಅಲಂಕಾರ) ಮಾಡಿಕೊಳ್ಳಲು ಪ್ರಯಾಸ ಪಡುವುದು.

 • ತಾರ್ಕಿಕ ಆಲೋಚನೆ: ತಾರ್ಕಿಕವಾಗಿ ಆಲೋಚಿಸಿ ಪ್ರತಿಕ್ರಿಯೆ ತೋರಿಸಲು ಕಷ್ಟಪಡುತ್ತಾರೆ. ತಿಂಡಿ ಆಯಿತೇ ಎಂದು ಕೇಳಿದರೆ, ಮತ್ತೇನನ್ನೋ ಮಾತನಾಡುತ್ತಾರೆ.

 • ಆಸಕ್ತಿ ಕಳೆದುಕೊಳ್ಳುವುದು: ತಮ್ಮ ಇಷ್ಟದ ಹವ್ಯಾಸಗಳಲ್ಲಿ ತೊಡಗಲು ಆಸಕ್ತಿ ತೋರಿಸದೇ ಇರುವುದು. ಜನರ ಜೊತೆ ಬೆರೆಯದೆ, ಸಭೆ ಸಮಾರಂಭಗಳಿಗೆ ಹೋಗದೆ ಮನೆಯಲ್ಲಿಯೇ ಇರಲು ಇಚ್ಛಿಸುವುದು. 

 • ಪುನರಾವರ್ತನೆ: ಮಾಡಿದ ಕೆಲಸ ಮರೆತು ಪುನಃ ಮಾಡುವುದು (ಔಷಧಿ ತೆಗೆದುಕೊಳ್ಳುವುದು, ತಿಂಡಿ ತಿಂದ ಬಳಿಕ ಮತ್ತೊಮ್ಮೆ ತಿಂಡಿ ಕೇಳುವುದು) ಕೇಳಿದ ಪ್ರಶ್ನೆಗಳಿಗೆ ನೀವು ಉತ್ತರಿಸಿದರೂ ಪದೇ ಪದೇ ಕೇಳುವುದು.

 • ಬದಲಾಗುವ ಮೂಡ್: ವರ್ತನೆಯನ್ನು ನಿಯಂತ್ರಣದಲ್ಲಿಡಲು ಆಗದೆ ಇರುವುದು. ಈ ತೊಂದರೆಯಿಂದ ಉದ್ವೇಗಕ್ಕೊಳಗಾಗಿ ಜಗಳ ಮಾಡಬಹುದು.

 • ಹೊಂದಿಕೊಳ್ಳುವುದು: ಮರೆವು ಮತ್ತು ನಿತ್ಯದ ಕೆಲಸ ಮಾಡಲು ಕಷ್ಟವಾಗುವುದರಿಂದ ಅವರು ಹೆಚ್ಚು ಬದಲಾವಣೆಯಿಲ್ಲದ ದಿನಚರಿ ಬಯಸುತ್ತಾರೆ.

ಕೆಲ ಪ್ರಕಾರದ ಮರೆಗುಳಿತನ ನಿರ್ದಿಷ್ಟ ಲಕ್ಷಣ ತೋರುತ್ತವೆ:

ಲೆವಿ ಬಾಡಿ ಮರೆಗುಳಿತನ: ಈ ಖಾಯಿಲೆ ಇರುವ ವ್ಯಕ್ತಿಗೆ ಕಣ್ಣಿಗೆ ಕಾಣಿಸಿದಂತಾಗುವ ಭ್ರಾಂತಿ ಇರುತ್ತದೆ ಹಾಗೂ ವ್ಯಕ್ತಿ ಪದೆ ಪದೆ ಕೆಳಗೆ ಬೀಳಬಹುದು.

ಫ್ರೊಂಟೊಟೆಂಪೊರಲ್ ಮರೆಗುಳಿತನ: ವ್ಯಕ್ತಿತ್ವದ ಬದಲಾವಣೆ ಅಥವಾ ಅಸಹಜ ವರ್ತನೆ. ವ್ಯಕ್ತಿ ಇತರರ ಕುರಿತು ಯಾವುದೇ ಕಾಳಜಿ ತೋರಿಸುವುದಿಲ್ಲ ಮತ್ತು ಅಸಭ್ಯವಾಗಿ ಮಾತನಾಡಬಹುದು, ಒರಟಾಗಿ ಉತ್ತರಿಸಬಹುದು

ವ್ಯಾಸ್ಕುಲರ್(ರಕ್ತನಾಳ) ಮರೆಗುಳಿತನ: ವ್ಯಕ್ತಿ ಸನ್ನಿಗೆ ಒಳಗಾಗಿರಬಹುದು. ಹೊಸ ಅಥವಾ ಹದಗೆಡುತ್ತಿರುವ ಖಾಯಿಲೆಯಿಂದಾಗಿ ಗೊಂದಲ ಉಂಟಾಗಬಹುದು.

Q

ಮರೆಗುಳಿತವನ್ನು ಹೇಗೆ ಪತ್ತೆ ಮಾಡುವುದು?

A

ಮರೆಗುಳಿತನದ ತಪಾಸಣೆಗೆ ಯಾವುದೇ ಒಂದು ನಿರ್ದಿಷ್ಟವಾದ ಪರೀಕ್ಷೆಯಿಲ್ಲ. ವೈದ್ಯರು ವೈದ್ಯಕೀಯ ಇತಿಹಾಸ, ವರ್ತನೆಯ ಬದಲಾವಣೆ ಮತ್ತು ಇತರ ಪರೀಕ್ಷೆಗಳಿಂದ ಖಾಯಿಲೆಯನ್ನು ಪತ್ತೆ ಮಾಡುತ್ತಾರೆ.

ಪ್ರಾರಂಭದ ಹಂತದಲ್ಲೇ ಖಾಯಿಲೆ ಪತ್ತೆ ಹಚ್ಚುವುದರಿಂದ ವ್ಯಕ್ತಿಗೆ ಈ ಖಾಯಿಲೆ ಬಗ್ಗೆ ತಿಳಿದು, ತನ್ನ ಕುಟುಂಬದೊಂದಿಗೆ ಭವಿಷ್ಯದ ಆಲೋಚನೆ ಮಾಡಲು ಹಾಗೂ ಸಾಧ್ಯವಾದಷ್ಟು ದಿನನಿತ್ಯದ ಚಟುವಟಿಕೆಗಳನ್ನು ನಿಭಾಯಿಸಲು ಸಹಾಯವಾಗಬಹುದು.

ಖಾಯಿಲೆಯನ್ನು ಪತ್ತೆ ಹಚ್ಚಲು ಮಾಡಲಾಗುವ ಕೆಲ ಪರೀಕ್ಷೆಗಳು

ಬೌದ್ಧಿಕ ಮತ್ತು ಭೌತಿಕ ನರ ಪರೀಕ್ಷೆಗಳು: ಜ್ಞಾಪಕ, ಪ್ರಜ್ಞೆ ಮತ್ತು ಅರಿವು, ತರ್ಕ/ಗ್ರಹಿಸುವಿಕೆ, ನಿರ್ಧಾರ ಮತ್ತು ಭಾಷೆಯ ಮೇಲೆ ಪರೀಕ್ಷೆ ನಡೆಸಿ ಬೌದ್ಧಿಕ ಸಾಮರ್ಥ್ಯಗಳನ್ನು ತಪಾಸಣೆ ಮಾಡಲಾಗುತ್ತದೆ.

ನರವೈಜ್ಞಾನಿಕ ಪರೀಕ್ಷೆ: ವೈದ್ಯರು ಚಲನೆ, ಗ್ರಹಿಕೆ, ಸಮತೋಲನ ಮತ್ತು ನಿರಿಚ್ಛಾ ಪ್ರತಿಕ್ರಿಯೆಯನ್ನು ಪರೀಕ್ಷಿಸುತ್ತಾರೆ.

ಮಿದುಳಿನ ಸ್ಕ್ಯಾನ್: ವ್ಯಕ್ತಿಗೆ ಲಕ್ವ ಹೊಡೆದಿದೆಯೇ ಅಥವಾ ಯಾವುದೇ ಬಗೆಯ ಹುಣ್ಣಿನಿಂದಾಗಿ ಮಿದುಳಿನ ಒಳಗೆ ರಕ್ತಸ್ರಾವ ಆಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಲು ವೈದ್ಯರು ಸಿ.ಟಿ. ಸ್ಕ್ಯಾನ್ (CT Scan) ಅಥವಾ ಎಂ.ಆರ್.ಐ. ಸ್ಕ್ಯಾನ್ (MRI Scan) ಮಾಡುತ್ತಾರೆ.

ಮನೊವೈದ್ಯಕೀಯ ಪರೀಕ್ಷೆ: ಖಿನ್ನತೆ ಅಥವಾ ಇತರ ಯಾವುದೇ ಮನೊವೈದ್ಯಕೀಯ ಸ್ಥಿತಿಗಳು ಮರೆಗುಳಿತನದ ರೋಗ ಲಕ್ಷಣಗಳನ್ನು ತೋರಿಸುತ್ತಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮಾನಸಿಕ ಆರೋಗ್ಯ ತಜ್ಞರು ಈ ಪರೀಕ್ಷೆಯನ್ನು ಮಾಡುತ್ತಾರೆ.

Q

ಮರೆಗುಳಿತನಕ್ಕೆ ಚಿಕಿತ್ಸೆ

A

ಮರೆಗುಳಿತನ ಒಂದು ಉಲ್ಬಣಗೊಳ್ಳುವ ಖಾಯಿಲೆಯಾಗಿದ್ದು ಸಮಯ ಕಳೆದಂತೆ ಸ್ಥಿತಿ ಹದಗೆಡುತ್ತದೆ. ಹೀಗಾಗಿ ಮರೆಗುಳಿತನ ಗುಣಪಡಿಸಲು ಚಿಕಿತ್ಸೆಯಿಲ್ಲ. ವೈದ್ಯರು ವ್ಯಕ್ತಿಗೆ ಅವರ ರೋಗ ಲಕ್ಷಣಗಳನ್ನು ನಿಯಂತ್ರಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಖಿನ್ನತೆ ಅಥವಾ ಆತಂಕ ಮೊದಲಾದ ಸ್ಥಿತಿಗಳು ಮರೆಗುಳಿತನದೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅದಕ್ಕೂ ಚಿಕಿತ್ಸೆ ಅಗತ್ಯವಾಗಬಹುದು.

ವ್ಯಕ್ತಿ ಖಾಯಿಲೆಯ ನಡುವೆಯೂ ಮಾಡಲು ಸಾಧ್ಯವಾಗುವ ಕೆಲಸಗಳನ್ನು ಮುಂದುವರಿಸಲು ವೈದ್ಯರು ಮತ್ತು ಕುಟುಂಬದ ಸದಸ್ಯರು ಪ್ರೋತ್ಸಾಹ ನೀಡಬೇಕು. ಅತ್ಯಂತ ಪ್ರಮುಖವಾದ ಚಿಕಿತ್ಸೆಯ ವಿಧವೆಂದರೆ ಪ್ರೀತಿ, ಬೆಂಬಲ ಮತ್ತು ಕುಟುಂಬದ ಸದಸ್ಯರಿಂದ ಆರೈಕೆ.

Q

ಮರೆಗುಳಿತನವನ್ನು ತಡೆಗಟ್ಟಬಹುದೆ?

A

ಮರೆಗುಳಿತನ ಬರದಂತೆ ತಡೆಗಟ್ಟಲು ಸಾಧ್ಯವಿಲ್ಲ. ಮರೆಗುಳಿತನ ಬರುವುದನ್ನು ಆದಷ್ಟು ನಿಧಾನವಾಗಿಸಲು ಕೆಲವು ಮಾರ್ಗಗಳು ಸಹಕಾರಿಯಾಗಬಹುದು. ಈ ವಿಷಯದಲ್ಲಿ ಸಂಶೋಧನೆಗಳು ನಡೆಯುತ್ತಿವೆ.

ಆರೋಗ್ಯಕರ ಜೀವನಶೈಲಿ ನಿಭಾಯಿಸಲು ಸಹಾಯಕವಾಗುವ ಕೆಲವು ಮಾರ್ಗಗಳು:

 • ಮಿದುಳಿನ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಪದಬಂಧ, ಸುಡೋಕು, ಒಗಟು ಮತ್ತು ಸಮಸ್ಯೆಗಳನ್ನು ಬಿಡಿಸುವುದು, ಜ್ಞಾಪಕ ಶಕ್ತಿ ಪರೀಕ್ಷೆ ಅಥವಾ ಹೊಸ ಭಾಷೆ ಕಲಿಕೆಯಂತಹ ಚಟುವಟಿಕೆ ಮಾಡಬಹುದು.

 • ನಿತ್ಯ ವ್ಯಾಯಾಮ ಮಾಡಿ ಮತ್ತು ಆರೋಗ್ಯಯುತ ಆಹಾರ ಸೇವನೆಯೊಂದಿಗೆ ದೈಹಿಕವಾಗಿ ಸಕ್ರಿಯರಾಗಿರಿ.

 • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕಾರಾಗುವುದು, ಹವ್ಯಾಸಿ ತರಗತಿಗಳಿಗೆ ಸೇರುವುದು, ಸ್ನೇಹಿತರೊಂದಿಗೆ ಅಥವಾ ಸಮಾನ ಮನಸ್ಕರೊಂದಿಗೆ ಬೆರೆಯುವುದು ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ.

 • ನಿತ್ಯದ ಚಟುವಟಿಕೆಗಳಿಗೆ ವ್ಯವಸ್ಥಿತ ದಿನಚರಿ ಹಾಕಿಕೊಳ್ಳಿ.

 • ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ.

Q

ಮರೆಗುಳಿತನ ಹೊಂದಿರುವವರ ಆರೈಕೆ

A

ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಮರೆಗುಳಿತನವಿದೆ ಎಂದು ಗೊತ್ತಾದಾಗ ವ್ಯಕ್ತಿ ಅಥವಾ ಆತನ ಕುಟುಂಬದ ಸದಸ್ಯರು ಕುಗ್ಗಬಹುದು. ಆರಂಭದ ಹಂತದಲ್ಲೇ ಮರೆಗುಳಿತನ ಹೊಂದಿರುವ ವ್ಯಕ್ತಿಗಳಿಗೆ ಬೆಂಬಲ ಮತ್ತು ಭರವಸೆ ಬೇಕು. ಆಗ ಮಾತ್ರ ಅವರ ಬದುಕನ್ನು ನಿಭಾಯಿಸಬಹುದಾದಷ್ಟು ಸುಲಭ ಮಾಡಲು ಸಾಧ್ಯ.

ನೀವು ನಿಮ್ಮ ಕುಟುಂಬದ ಸದಸ್ಯರ ಕುರಿತು ಕಾಳಜಿ ವಹಿಸಲು ಸಮರ್ಥರಾಗಿದ್ದರೆ, ಕೆಳಗಿನ ಸಲಹೆಗಳನ್ನು ಅನುಸರಿಸಬಹುದು. ಈ ಸಲಹೆಗಳನ್ನು ವ್ಯಕ್ತಿಯ ಪರಿಸ್ಥಿತಿಗೆ ಅನುಗುಣವಾಗಿ ಅನುಸರಿಸಿ. ಮರೆಗುಳಿತನ ಸಮಯ ಕಳೆದಂತೆ  ಹದಗೆಡುವ ಸಮಸ್ಯೆ ಎಂದು ಅರ್ಥಮಾಡಿಕೊಳ್ಳಬೇಕು.

ಸಂವಾದ: ನಿಮ್ಮ ಪ್ರೀತಿಪಾತ್ರರ ಜೊತೆ ಮಾತನಾಡುವಾಗ ಅವರ ಕಣ್ಣಿನಲ್ಲಿ ಕಣ್ಣಿಟ್ಟು, ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿ. ಒಂದು ಸಲಕ್ಕೆ ಒಂದು ವಿಷಯ ಮಾತ್ರ ಸರಳವಾದ ವಾಕ್ಯಗಳಲ್ಲಿ ವಿವರಿಸಿ.

ವ್ಯಾಯಾಮ: ವ್ಯಕ್ತಿಗೆ ಸುಲಭವಾದ ವ್ಯಾಯಾಮದ ಮೂಲಕ ದೈಹಿಕ ಯೋಗಕ್ಷೇಮ ಕಾಪಾಡಿಕೊಳ್ಳಲು ಉತ್ತೇಜಿಸಿ. ದಿನನಿತ್ಯ ವ್ಯಾಯಾಮ ಮಾಡುವುದರಿಂದ ವ್ಯಕ್ತಿಯು ಖಿನ್ನತೆಯ ರೋಗ ಲಕ್ಷಣಗಳನ್ನು ತಡೆಯಬಹುದು, ಸ್ವತಂತ್ರವಾಗಿ ಓಡಾಡುವಷ್ಟು ಶಕ್ತರಾಗಿರಬಹುದು ಹಾಗೂ ಶಾಂತ ಮನೋಭಾವ ಹೊಂದಬಹುದು.

ಆಟ ಮತ್ತು ಚಟುವಟಿಕೆಗಳು: ವ್ಯಕ್ತಿಗೆ ಆಟ ಮತ್ತು ಆಲೋಚನೆ ಮಾಡುವ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಈ ಚಟುವಟಿಕೆಗಳು ಮಿದುಳಿನ ಜೀವಕೋಶಗಳ ನಶಿಸುವಿಕೆಯನ್ನು ನಿಧಾನವಾಗಿಸುತ್ತವೆ.

ದಿನಚರಿ: ನಿತ್ಯದ ಚಟುವಟಿಕೆಗಳಿಗೆ ವ್ಯವಸ್ಥಿತ ದಿನಚರಿ ಅಭ್ಯಾಸ ಮಾಡಿಸಿ. ಆಗ ವ್ಯಕ್ತಿಯ ನಿದ್ದೆ, ಊಟಕ್ಕೆ ತೊಂದರೆಯಾಗುವುದಿಲ್ಲ. ಸಮಯ ಕಳೆದಂತೆ ವ್ಯಕ್ತಿ ಹವ್ಯಾಸಗಳನ್ನು ಬದಲಿಸಬಹುದು. ಹೀಗಾಗಿ ವರ್ತನೆ ಬದಲಾವಣೆಗಳನ್ನು ಸರಿಪಡಿಸಲು ಪ್ರಯತ್ನಿಸಿ.

ಭವಿಷ್ಯ: ಮರೆಗುಳಿತನದ ಮೊದಲ ಹಂತಗಳಲ್ಲಿ ವ್ಯಕ್ತಿಗೆ ಹಣಕಾಸು, ಆಸ್ತಿ, ದೀರ್ಘಾವಧಿಯ ಆರೈಕೆ ಯೋಜನೆ, ಸುರಕ್ಷತೆ ಮತ್ತು ನಿತ್ಯದ ಸಂಗತಿಗಳ ಕುರಿತು ಯೋಜನೆ ರೂಪಿಸಲು ಉತ್ತೇಜಿಸಿ.

Q

ಆರೈಕೆದಾರರಿಗೆ ಆರೈಕೆ

A

ಮರೆಗುಳಿತನದವರ ಆರೈಕೆ ಮಾಡುವುದು ದೈಹಿಕ ಮತ್ತು ಭಾವನಾತ್ಮಕ ಒತ್ತಡ, ಕಿರಿಕಿರಿಯಿಂದ ಕೂಡಿರುತ್ತದೆ. ನೀವು ಸಿಟ್ಟು, ಅಳಕು, ದುಃಖ, ಆತಂಕ, ಸ್ವಾನುಕಂಪ, ಅಸಹಾಯಕತೆಗಳ ಮಿಶ್ರಿತ ಭಾವನೆಯನ್ನು ಹೊಂದಿರಬಹುದು. ಆದರೆ ಈ ಎಲ್ಲ ಕಷ್ಟದ ಹಂತಗಳನ್ನು ದಾಟಲು ನೀವು ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಕುರಿತು ಕಾಳಜಿ ವಹಿಸುವುದು ಅತಿ ಅವಶ್ಯ.

 • ಖಾಯಿಲೆ ಕುರಿತು ಸಾಧ್ಯವಾದಷ್ಟು ತಿಳಿದುಕೊಳ್ಳಿ. ಇದರಿಂದ ರೋಗಿಯ ಸಮಸ್ಯೆ ಅರ್ಥಮಾಡಿಕೊಳ್ಳಲು, ಪರಿಸ್ಥಿತಿಗಳನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

 • ನಿಮ್ಮ ಕಾಳಜಿ ಕುರಿತು ವೈದ್ಯರೊಂದಿಗೆ, ಆಪ್ತಸಲಹೆಗಾರರೊಂದಿಗೆ ಮಾತನಾಡಿ.

 • ಅಗತ್ಯವಿದ್ದಾಗ ಸ್ನೇಹಿತರು, ಕುಟುಂಬದ ಸದಸ್ಯರ ಸಹಾಯ ತೆಗೆದುಕೊಳ್ಳಿ.

 • ನಿಮ್ಮ ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಕಾಳಜಿವಹಿಸಿ.

 • ನಿಮಗಾಗಿ ನಿಮ್ಮ ಆಸಕ್ತಿಯ ಸಂಗತಿಗಳಿಗಾಗಿ ಸಮಯ ತೆಗೆದುಕೊಳ್ಳಿ.

 • ಆರೈಕೆದಾರರ ಬೆಂಬಲದ ಗುಂಪುಗಳನ್ನು ಸೇರಿ ನಿಮ್ಮ ಅನುಭವ ಹಂಚಿಕೊಳ್ಳಿ ಮತ್ತು ಇದೇ ಸ್ಥಿತಿ ನಿಭಾಯಿಸುತ್ತಿರುವ ಇತರ ಆರೈಕೆದಾರರಿಂದ ಸಹಾಯ ಪಡೆಯಿರಿ. ನೀವು ಕೂಡ ಬೇರೆ ಆರೈಕೆದಾರರಿಗೆ ಬೆಂಬಲ ನೀಡಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org