ಮಹಿಳೆಯರಲ್ಲಿ ಖಿನ್ನತೆ

ಮಹಿಳೆಯರಲ್ಲಿ ಖಿನ್ನತೆ

Q

ಮಹಿಳೆಯರಲ್ಲಿ ಖಿನ್ನತೆ ಎಂದರೇನು?

A

ಮಹಿಳೆಯರು ತಮ್ಮ ಜೀವನದಲ್ಲಿ ಪ್ರೌಢಾವಸ್ಥೆ, ಗರ್ಭಾವಸ್ಥೆ, ತಾಯ್ತನ, ಮುಟ್ಟಿನ ನಂತರದ ಹಂತ, ವೃದ್ಧಾಪ್ಯ ಸೇರಿದಂತೆ ಹಲವಾರು ಜೈವಿಕ ಹಂತಗಳನ್ನು ಅನುಭವಿಸುತ್ತಾರೆ. ಪ್ರತಿಯೊಂದು ಹಂತವೂ ಕೂಡ ತನ್ನದೇ ಆದ ಸಂಘರ್ಷಗೊಳೊಂದಿಗೆ ಕೂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಹಂತಗಳು ದೀರ್ಘ ಕಾಲ ಕಾಡುವ ದೈಹಿಕ ಅಸ್ವಸ್ಥತೆಗಳಿಗೂ ಕಾರಣವಾಗಬಹುದು. ಈ ಖಾಯಿಲೆಗಳು ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಮುಂದಿನ ಹಂತಗಳಲ್ಲಿ ಅದು ಬೆಳೆದು ದೊಡ್ಡದಾಗಿ ಖಿನ್ನತೆ ಅಥವಾ ತಲ್ಲಣಕ್ಕೆ ಕಾರಣವಾಗಬಹುದು. ಇಂದು, ಪ್ರತಿ ಐವರು ಮಹಿಳೆಯರಲ್ಲಿ ಒಬ್ಬರು ಜೀವನದ ಕೆಲವು ಹಂತಗಳಲ್ಲಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

Q

ಮಹಿಳೆಯರಲ್ಲಿ ಖಿನ್ನತೆಗೆ ಕಾರಣವಾಗಬಹುದಾದ ಕೆಲವು ಅಂಶಗಳು:

A

 • ಋತುಚಕ್ರದಲ್ಲಿನ ಬದಲಾವಣೆಗಳು ಮತ್ತು ಸಂಬಂಧಿತ ತೊಂದರೆಗಳು ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್ ( PMS), ಮುಟ್ಟುತೀರಿಕೆ

 • ಲೈಂಗಿಕತೆ ಸಮಸ್ಯೆಗಳು ಮತ್ತು ದೇಹದ ಆಕೃತಿಯ ಬಗ್ಗೆ ಚಿಂತೆ

 • ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಇರುವ ನಿರ್ಬಂಧನೆಗಳು.(ಪಾಲಕರಿಂದ, ಪತಿಯಿಂದ ಅಥವಾ ಪತಿಯ ಮನೆಯವರಿಂದ ನಿಗ್ರಹ)

 • ಕೆಲಸ, ಮದುವೆ ಅಥವಾ ವಲಸೆಗಳ ಕಾರಣಗಳಿಂದಾಗುವ ಜೀವನಶೈಲಿಯ ಬದಲಾವಣೆಗಳು

 • ದಾಂಪತ್ಯ ಜೀವನದ ಸಂಘರ್ಷಗಳು: ವಿಚ್ಚೇದನ, ವಿವಾಹೇತರ ಸಂಬಂಧ, ಪತಿ-ಪತ್ನಿಯರಲ್ಲಿ ಪರಸ್ಪರ ಸಾಮರಸ್ಯ ಇಲ್ಲದಿರುವುದು ಮುಂತಾದ ವೈವಾಹಿಕ ಸಮಸ್ಯೆಗಳು

 • ಈ ಮೊದಲು ಅನುಭವಿಸಿದ ಖಿನ್ನತೆ ಅಥವಾ ಪ್ರಸವಾನಂತರದ ಖಿನ್ನತೆ

 • ಸಾಮಾಜಿಕ ಬೆಂಬಲದ ಕೊರತೆ

 • ಬೇಡದ ಗರ್ಭಧಾರಣೆ, ಗರ್ಭಪಾತ ಅಥವಾ ಬಂಜೆತನ

 • ಹೊರೆಯಾಗುವ ಜವಬ್ದಾರಿಗಳು ಅಥವಾ ವಿವಾಹಿತವಾಗಿದ್ದರೂ ಒಂಟಿಯಾಗಿ ಮಗುವನ್ನು ಪೋಷಿಸುವ ಹೊಣೆ (single parenthood)

 • ಶಾರೀರಿಕ ಹಾಗೂ ಮಾನಸಿಕ ನಿಂದನೆಯಿಂದ ಉಂಟಾದ ಆಘಾತ.

Q

ಪ್ರಸವಾನಂತರದ ಖಿನ್ನತೆ:

A

ಮೇಘಾ ಆಗಷ್ಟೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಳು. ಮನೆ ತುಂಬ ಸಂತಸವೋ ಸಂತಸ. ಆದರೆ, ಕೆಲ ದಿನಗಳಲ್ಲಿಯೇ ಮೇಘಾ ಮಾನಸಿಕ ಅಶಾಂತಿ, ಕಿರಿಕಿರಿಯನ್ನು ಅನುಭವಿಸ ತೊಡಗಿದಳು. ಮಗುವಿಗೆ ಅನಿಯಮಿತ ಹಾಲೂಡಿಸುವುದು ಮತ್ತು ಅದರ ಅನಿಯಮಿತ ನಿದ್ರಾಕ್ರಮಗಳು ಮೇಘಾಳ ಮೇಲೆ ತುಂಬ ಒತ್ತಡವನ್ನು ಉಂಟುಮಾಡತೊಡಗಿತು. ಅಳುವುದು, ದುಃಖಿಸುವುದು ಅವಳ ದಿನಚರಿಯಾಯಿತು. ಯಾವಾಗಲೂ ಚಿಂತೆ ಮಾಡುತ್ತಿದ್ದಳು. ತೀರಾ ಚಿಕ್ಕ ವಿಷಯಗಳಿಗೂ ಸಿಡಿಮಿಡಿಗೊಳ್ಳಲಾರಂಭಿಸಿದಳು. ತನ್ನ ದೇಹದ ಮೇಲೆಯೇ ಜಿಗುಪ್ಸೆಯ ಭಾವನೆ ಮೂಡುತ್ತಿತ್ತು.

ಮಗುವಿನ ಆರೈಕೆ, ಕಾಳಜಿಯ ಕುರಿತು ಆಕೆಗೆ ನಿರಾಸಕ್ತಿ ಉಂಟಾಗತೊಡಗಿತು. ಈ ಕಾರಣದಿಂದ ಮಗುವನ್ನು ಅಲಕ್ಷಿಸಲು ಆರಂಭಿಸಿದಳು. ಮೇಘಾಳಿಗೆ ಸರಿಯಾಗಿ ಹಸಿವಾಗುತ್ತಿರಲಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಇಲ್ಲದೇ ಯಾವಾಗ ಬೇಕೆಂದರಾವಾಗ ಆಹಾರ ಸೇವಿಸ ತೊಡಗಿದಳು. ಅವಳ ಈ ಅಸ್ವಾಭಾವಿಕ ವರ್ತನೆಯಿಂದ ಗೊಂದಲಕ್ಕೊಳಗಾದ ಅವಳ ಕುಟುಂಬದ ಸದಸ್ಯರು ವೈದ್ಯರನ್ನು ಭೇಟಿಮಾಡಲು ನಿರ್ಧರಿಸಿದರು. ಮೇಘಾಳನ್ನು ಪರೀಕ್ಷಿಸಿದ ವೈದ್ಯರು, ಮೇಘಾ ಪ್ರಸವಾನಂತರದ ಖಿನ್ನತೆಯಿಂದ ಬಳಲುತ್ತಿದ್ದಾಳೆಂದು ತಿಳಿಸಿದರು.

ನೈಜ ಬದುಕಿನ ಘಟನೆಯನ್ನಾಧರಿಸಿ ಪ್ರಸವಾನಂತರದ ಖಿನ್ನತೆಯ ಸಮಸ್ಯೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಈ ಕಾಲ್ಪನಿಕ ಕಥೆಯನ್ನು ಬರೆಯಲಾಗಿದೆ.

ಮಹಿಳೆಯರನ್ನು ಕಾಡುವ ಅನೇಕ ಸಮಸ್ಯೆಗಳಲ್ಲಿ ಪ್ರಸವಾನಂತರದ ಖಿನ್ನತೆಯೂ ಒಂದು. ತಾಯಿ ಹಾಗೂ ಮಗುವಿನ ಮೇಲೆ ಅನಾರೋಗ್ಯಕರ ಪರಿಣಾಮ ಉಂಟು ಮಾಡುವ ಈ ಖಿನ್ನತೆಯಿಂದ ಅನೇಕ ಸ್ತ್ರೀಯರು ತೊಂದರೆ ಅನುಭವಿಸುತ್ತಾರೆ. ಹೆರಿಗೆಯ ನೋವು, ಮಗು ಜನಿಸುವಾಗಿನ ಒತ್ತಡ, ಆತಂಕ, ಭಯ, ಉದ್ವೇಗ ಮತ್ತು ಬದುಕಿನ ಹೊಂದಾಣಿಕೆಗಳು ತಾಯಿಯನ್ನು ದುರ್ಬಲಗೊಳಿಸಬಹುದು. ಕ್ರಮೇಣವಾಗಿ ಇದು ತಾಯಿಯ ಮನಸ್ಥಿತಿಯನ್ನು ಕುಗ್ಗಿಸುತ್ತದೆ. ಈ ರೀತಿಯ ಭಾವನೆಗಳು, ವರ್ತನೆಗಳು ದೀರ್ಘ ಸಮಯದವರೆಗೆ (ಒಂದು ತಿಂಗಳಿಗಿಂತಲೂ ಹೆಚ್ಚು) ಕಂಡು ಬಂದರೆ, ಅದು ಪ್ರಸವಾನಂತರದ ಖಿನ್ನತೆ ಆಗಿರಬಹುದು. ಇದರಿಂದ ಹೊರಬರಲು ಚಿಕಿತ್ಸೆಯ ಅಗತ್ಯವಿರುತ್ತದೆ.

ಹೆರಿಗೆಯ ನಂತರದ ಖಿನ್ನತೆಗೆ ನಿಖರವಾದ ಕಾರಣ ತಿಳಿದಿಲ್ಲ. ಹಾರ್ಮೋನು ಹಾಗೂ ದೇಹದಲ್ಲಿನ ಇದ್ದಕ್ಕಿದ್ದ ಬದಲಾವಣೆ ಮತ್ತು ನವಜಾತ ಶಿಶುವಿನ ಆರೈಕೆಯ ಒತ್ತಡಗಳು ಈ ಖಿನ್ನತೆಗೆ ಕಾರಣವಿರಬಹುದು ಎನ್ನುವುದು ವೈದ್ಯರ ಅಭಿಪ್ರಾಯ.

ಪ್ರಮುಖವಾಗಿ ಗಮನಿಸಬೇಕಾದ ಸಂಗತಿ: ಮಹಿಳೆಯರು ಹೆರಿಗೆಯ ನಂತರದ ಖಿನ್ನತೆಯಿಂದ ಬಳಲುವಂತೆ, ಕೆಲವು ಸಂದರ್ಭಗಳಲ್ಲಿ ಸ್ತ್ರೀಯರು ಗರ್ಭಿಣಿಯಾಗಿರುವ ಸಮಯದಲ್ಲಿಯೂ ಕೂಡ ಖಿನ್ನತೆಗೆ ಒಳಗಾಗಬಹುದು. ಅಂತಹ ಸಮಯದಲ್ಲಿ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

ಗರ್ಭಿಣಿಯರು ಖಿನ್ನತೆ ಶಮನಗೊಳಿಸುವ ಔಷಧ ಸೇವನೆಯ ಮೊದಲು ಅದರ ಅಪಾಯ ಮತ್ತು ತಾಯಿ ಹಾಗೂ ಮಗುವಿನ ಮೇಲೆ ಅದರಿಂದುಂಟಾಗುವ ಪರಿಣಾಮದ ಬಗ್ಗೆ ವೈದ್ಯರಿಂದ ತಿಳಿದುಕೊಳ್ಳಬೇಕು. ಗರ್ಭಧಾರಣೆಯ ಸಮಯದಲ್ಲಿ ತೆಗೆದುಕೊಳ್ಳುವ ಕೆಲವು ಔಷಧಗಳು ಬೆಳೆಯುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ಅದೇ ರೀತಿ ಔಷಧ ತೆಗೆದುಕೊಳ್ಳದೇ ಇರುವುದು ಕೂಡ ನಿಮಗೆ ಮತ್ತು ನಿಮ್ಮ ಮಗುವಿಗೆ ತೊಂದರೆ ಉಂಟುಮಾಡಬಹುದು. ಔಷಧದ ಪರಿಣಾಮವು ಮಹಿಳೆಯ ಪರಿಸ್ಥಿತಿ ಮತ್ತು ಖಿನ್ನತೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ.

ಆದ್ದರಿಂದ ಪ್ರಸವದ ಮೊದಲ ಖಿನ್ನತೆ ಮತ್ತು ಪ್ರಸವಾನಂತರದ ಖಿನ್ನತೆ ಎರಡು ಕೂಡ ತಾಯಿ ಮತ್ತು ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು. ಆದ ಕಾರಣ ಇವುಗಳ ಕುರಿತಾಗಿ ಎಚ್ಚರಿಕೆಯಿಂದ ಇರಬೇಕು. ಅಗತ್ಯ ಸಮಯದಲ್ಲಿ ಸೂಕ್ತವಾದ ಕಾಳಜಿ, ಆರೈಕೆ ಮತ್ತು ಚಿಕಿತ್ಸೆಯನ್ನು ತೆಗೆದುಕೊಂಡರೆ ತಾಯಿ-ಮಗು ಹಾಗೂ ಕುಟುಂಬ ಆನಂದವಾಗಿ ಇರಲು ಸಾಧ್ಯ.

Q

ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು:

A

 • ಆತ್ಮವಿಶ್ವಾಸದ ಕೊರತೆ ಹಾಗೂ ಮಗುವಿನ ಪಾಲನೆಯ ಸಾಮರ್ಥ್ಯದ ಕುರಿತು ಸಂಶಯ.

 • ಸಾಮಾಜಿಕ ಹಾಗೂ ಭಾವನಾತ್ಮಕ ಬೆಂಬಲದ ಕೊರತೆಯಿಂದಾಗಿ ಅಸಹಾಯಕ ಭಾವ ಮತ್ತು ಕಿರಿಕಿರಿ ಅನುಭವಿಸುತ್ತಿರುವುದು

 • ಮಗುವಿನ ಬಗ್ಗೆ ನಿರಂತರವಾಗಿ ಚಿಂತಿಸುವುದು ಅಥವಾ ಮಗುವಿನ ಆರೈಕೆಯ ಬಗ್ಗೆ ನಿರಾಸಕ್ತಿಯನ್ನು ತೋರಿಸುವುದು.

 • ಮನೆ ಮತ್ತು ಕಚೇರಿಯ ದೈನಂದಿನ ಚಟುವಟಿಕೆಗಳಲ್ಲಿ ಉಂಟಾಗುವ ಬದಲಾವಣೆಗಳಿಂದ ಒತ್ತಡ ಹಾಗೂ ಆಯಾಸ.

 • ದೈಹಿಕ ಬದಲಾವಣೆಯ ಕುರಿತಾಗಿ ಬೇಸರ

 • ಮಗುವಿನ ಅನಿಯಮಿತ ಹಾಲುಣಿಸುವ ಕ್ರಮ ಹಾಗೂ ನಿದ್ರೆಯ ಕಾರಣದಿಂದ ತಾಯಿ ಸರಿಯಾಗಿ ನಿದ್ರೆ ಮಾಡದಿರುವುದು.

 • ಈ ಹಿಂದೆ ಅನುಭವಿಸಿದ ಖಿನ್ನತೆ ಅಥವಾ ಬೈಪೋಲಾರ್ ತೊಂದರೆಯ ಪರಿಣಾಮ

ತಾಯಿಯು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರೆ, ಆತ್ಮಹತ್ಯೆ ಬಗ್ಗೆ ಯೋಚಿಸಬಹುದು ಅಥವಾ ಮಗುವಿಗೆ ತೊಂದರೆ ಉಂಟು ಮಾಡಬಹುದು. ಅಂತಹ ಸಮಯದಲ್ಲಿ ತಾಯಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಗಬಹುದು. ತಾಯಿಯು ಚಿಕಿತ್ಸೆ ಪಡೆದುಕೊಳ್ಳಲು ಹಾಗೂ ಗುಣಮುಖವಾಗಲು ಕುಟುಂಬದವರ ಸಹಕಾರ ಮತ್ತು ಪ್ರೋತ್ಸಾಹ ಅತಿ ಅವಶ್ಯಕ.

Q

ಪ್ರಸವಾನಂತರದ ಖಿನ್ನತೆಯುಂಟಾಗುವ ಸಂಭವನೀಯ ಅಂಶಗಳು:

A

ಈ ಕೆಳಗೆ ಹೇಳಲಾದ ಯಾವುದೇ ಒಂದು ಅಂಶವು ಕೂಡ ಪ್ರಸವಾನಂತರದ ಖಿನ್ನತೆಯನ್ನು ಉಂಟು ಮಾಡಬಹುದು:

 • ಈ ಹಿಂದೆ ಅನುಭವಿಸಿದ ಪ್ರಸವಾನಂತರದ ಖಿನ್ನತೆ

 • ಗರ್ಭಧಾರಣೆಗಿಂತ ಮುಂಚೆ ಖಿನ್ನತೆಯಿಂದ ಭಾದಿತರಾಗಿರುವುದು

 • ವೈವಾಹಿಕ ಜೀವನದ ಸಮಸ್ಯೆಗಳು ಅಥವಾ ನಿಭಾಯಿಸಲು ಕಷ್ಟಕರವಾದದ ಸಂಬಂಧ

 • ಗರ್ಭಿಣಿಯಾಗಿರುವಾಗ ಅಥವಾ ಹೆರಿಗೆಯ ನಂತರ ಒತ್ತಡದಿಂದ ಕೂಡಿದ ಜೀವನದ ಘಟನೆಗಳು ( ಗರ್ಭಿಣಿಯಾಗಿರುವಾಗ ತೀವ್ರ ಅನಾರೋಗ್ಯ, ಅಕಾಲಿಕ ಜನನ, ಕಷ್ಟದ ಹೆರಿಗೆ ಮುಂತಾದವು)

 • ಕುಟುಂಬ ಹಾಗೂ ಸ್ನೇಹಿತರ ಸಹಕಾರದ ಕೊರತೆ

 • ತೀವ್ರ ಸ್ವರೂಪದ ಪ್ರಿ ಮೆನೆಸ್ಟ್ರುವಲ್ ಸಿಂಡ್ರೋಮ್ (PMS)

 • ಬೈಪೋಲಾರ್ ಡಿಸಾರ್ಡರ್

Q

ಪ್ರಸವಾನಂತರದ ಖಿನ್ನತೆಯನ್ನು ಹೇಗೆ ತಡೆಗಟ್ಟಬಹುದು?

A

 • ತಾಯಿಯಾದ ಹೊಸತರಲ್ಲಿ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇದರಿಂದ ಪ್ರಸವಾನಂತರದ ಖಿನ್ನತೆಯನ್ನು ತಡೆಯಬಹುದು.

 • ಮಗುವಿನ ಆರೈಕೆಗೆ ಎಷ್ಟು ಸಾಧ್ಯವೋ ಅಷ್ಟು ಇತರರ ಸಹಾಯ ಪಡೆಯಲು ಪ್ರಯತ್ನಿಸಿ. ಆಗ ನಿಮಗೆ ನಿದ್ರೆ ಮತ್ತು ವಿಶ್ರಾಂತಿಗೆ ಸಮಯ ದೊರೆಯುತ್ತದೆ.

 • ಪ್ರತಿನಿತ್ಯವು ನಿಯಮಿತವಾದ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ನಿಮ್ಮ ಸ್ತ್ರೀರೋಗ ತಜ್ಞರು ಸೂಚಿಸಿದ ಪ್ರಕಾರ ನಿತ್ಯ ಲಘು ವ್ಯಾಯಾಮ ಮಾಡಿ.

 • ನಿಮಗೆ ಹೆರಿಗೆಯ ನಂತರದ ಖಿನ್ನತೆಯ ಬಗ್ಗೆ ಚಿಂತೆಯಿದ್ದರೆ, ಮಗು ಜನಿಸಿದ ನಂತರದ ತಪಾಸಣೆಯ ಸಂದರ್ಭದಲ್ಲಿ ನಿಮ್ಮ ಸ್ತ್ರೀರೋಗ ತಜ್ಞರೊಂದಿಗೆ ಸಮಾಲೋಚಿಸಿ.

 • ಮದ್ಯ ಹಾಗೂ ಇನ್ನಿತರ ಮಾದಕ ದ್ರವ್ಯಗಳ ವ್ಯಸನದಿಂದ ದೂರವಿರಿ.

Q

ಪ್ರಸವಾನಂತರದ ಖಿನ್ನತೆಗೆ ಚಿಕಿತ್ಸೆ:

A

ಪ್ರಸವಾನಂತರದ ಖಿನ್ನತೆಯ ಚಿಕಿತ್ಸೆಯು ಖಾಯಿಲೆಯ ಸ್ಥಿತಿ-ಗತಿ ಹಾಗೂ ಖಾಯಿಲೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಕುಟುಂಬ ಸದಸ್ಯರ ಭಾವನಾತ್ಮಕ ಸಹಕಾರ ಮತ್ತು ಆರೈಕೆಯು ತಾಯಿ ಬೇಗ ಗುಣಮುಖಹೊಂದಿ, ತನ್ನ ತಾಯ್ತನವನ್ನು ಆನಂದಿಸಲು ಸಹಾಯ ಮಾಡುತ್ತದೆ.

Q

ಪ್ರಸವಾನಂತರದ ಖಿನ್ನತೆಯನ್ನು ನಿಭಾಯಿಸುವ ಮಾರ್ಗಗಳು

A

ಚಿಕಿತ್ಸೆಯನ್ನು ಪ್ರಾರಂಭಿಸುತ್ತಿದ್ದಂತೆ, ನೀವು, ಕ್ರಮೇಣ ಸುಧಾರಣೆ ಹೊಂದುವಿರಿ. ನಿಮ್ಮ ಖಿನ್ನತೆಯನ್ನು ನಿಭಾಯಿಸುವಲ್ಲಿ ಸಹಾಯ ಮಾಡುವ ಕೆಲವು ಸಲಹಾಸೂತ್ರಗಳು ಇಲ್ಲಿವೆ:

 • ಮಗು ಹುಟ್ಟುವ ಮೊದಲು ಯಾವ ಕೆಲಸಗಳು ಸಂತೋಷ ನೀಡುತ್ತಿದ್ದವೋ ಅದನ್ನು ಈಗ ಕೂಡ ಮಾಡಲು ಪ್ರಯತ್ನಿಸಿ.

 • ಮಿತಿ ಮೀರಿದ ಕೆಲಸ, ಜವಾಬ್ದಾರಿಗಳನ್ನು ನಿಮ್ಮ ಮೇಲೆ ಹೇರಿಕೊಳ್ಳಬೇಡಿ; ಅಂತೆಯೇ ಸೋಮಾರಿಗಳಾಗಿ ಕೂಡ ಇರಬೇಡಿ.

 • ಒಂದು ಸಲಕ್ಕೆ ಒಂದು ಕೆಲಸ ಮಾತ್ರ ಮಾಡಿ. ಕೆಲಸಗಳನ್ನು ನಿಯಮಿತವಾಗಿ ಮಾಡಿ ಮತ್ತು ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಮಾಡಿ. ದೊಡ್ಡ ಕೆಲಸವನ್ನು ಹಂತ ಹಂತವಾಗಿ ಮಾಡಿ. ಅನಾವಶ್ಯಕ ಒತ್ತಡ ಹೇರಿಕೊಳ್ಳಬೇಡಿ.

 • ನಿಮ್ಮ ಪ್ರೀತಿ ಪಾತ್ರರೊಂದಿಗೆ, ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಸ್ನೇಹಿತರಲ್ಲಿ ಅಥವಾ ಬಂಧುಗಳಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.

 • ಮಗುವಿನ ಆರೈಕೆಗೆ ಕುಟುಂಬದವರ ಅಥವಾ ನರ್ಸ್ ಸಹಾಯ ತೆಗೆದುಕೊಳ್ಳಿ.

 • ನೀವು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ನಿಮ್ಮ ಜೀವನದಲ್ಲಿನ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಬೇಡ. ಉದಾ: ಹಣಕಾಸು, ಕೆಲಸ ಇತ್ಯಾದಿ.

ಈ ರೀತಿ ಖಿನ್ನತೆಯನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯವಾದರೆ, ಚಿಕಿತ್ಸೆಯ ಸಮಯದಲ್ಲಿ ಗುಣಮುಖರಾಗುತ್ತಿದ್ದೇವೆ ಎನ್ನುವ ಸಮಾಧಾನದ ಭಾವನೆಯನ್ನು ಕಾಣಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org