ಖಿನ್ನತೆ: ಕಲ್ಪನೆ ಮತ್ತು ವಾಸ್ತವ

ಕಲ್ಪನೆ: ಖಿನ್ನತೆ ಎನ್ನುವುದು ಸುಸ್ತು ಅಥವಾ ಬಳಲಿಕೆಯೇ ಹೊರತು ಇದೊಂದು ಖಾಯಿಲೆಯಲ್ಲ.

ವಾಸ್ತವ: ಖಿನ್ನತೆ ಸುಸ್ತು ಅಥವಾ ಸೋಮಾರಿತನವಲ್ಲ. ಬದಲಾಗಿ, ಇದೊಂದು ತೀವ್ರಸ್ವರೂಪದ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು ಅದು ವಿವಿಧ ಕಾರಣಗಳಿಂದ ಉಂಟಾಗುತ್ತದೆ. ಯಾರಿಗೇ ಆದರೂ, ಯಾವ ಸಮಯದಲ್ಲೇ ಆದರೂ ಖಿನ್ನತೆ ಕಾಣಿಸಿಕೊಂಡು ಪರಿಣಾಮ ಬೀರಬಹುದು.

ಕಲ್ಪನೆ: ಅಪೌಷ್ಠಿಕತೆ ಮತ್ತು ಬಡತನಗಳಿಗೂ ಖಿನ್ನತೆಗೂ ಸಂಬಂಧವಿಲ್ಲ.

ವಾಸ್ತವ: ಕಳಪೆ ಗುಣಮಟ್ಟದ ಪೌಷ್ಠಿಕಾಂಶ ಸಹ ಖಿನ್ನತೆಯುಂಟಾಗಲು ಒಂದು ಕಾರಣವಾಗಬಹುದು. ಕಾರ್ಬೊಹೈಡ್ರೇಟ್‌ ಅಂಶ ಹೆಚ್ಚಾಗಿರುವ ಆಹಾರಗಳು ಸದೃಢ ಆರೋಗ್ಯ ಭಾವನೆಯನ್ನು ಉತ್ತೇಜಿಸುವ ಸೆರಟೋನಿನ್‌ ಮತ್ತು ಟ್ರಿಪ್ಟೋಫಾನ್‌ನಂಥ ರಾಸಾಯನಿಕಗಳ ಉತ್ಪಾದನೆಗೆ ಸಹಾಯ ಮಾಡುತ್ತವೆ.

ಕಲ್ಪನೆ: ಖಿನ್ನತೆ ವಂಶಪಾರಂಪರ್ಯವಾಗಿ ಮುಂದುವರಿಯುತ್ತದೆ ಮತ್ತು ಖಿನ್ನತೆಗೆ ಒಳಗಾದವರು ಮದುವೆಯಾಗಬಾರದು.

ವಾಸ್ತವ: ಹಾಗೆಂದೇನೂ ಇಲ್ಲ. ಇಂತಹ ಹೇಳಿಕೆಯನ್ನು ಸಾಬೀತು ಪಡಿಸಲು ಯಾವುದೇ ಸಂಶೋಧನಾತ್ಮಕ ಪುರಾವೆಗಳಿಲ್ಲ. ಖಿನ್ನತೆಯಿಂದ ತೊಂದರೆಗೀಡಾದವರು ವಿವಾಹವಾಗಬಹುದು ಮತ್ತು ಆರೋಗ್ಯಯುತ ಜೀವನ ನಡೆಸಬಹುದು. ಹೀಗಿದ್ದಾಗ್ಯೂ, ತಮ್ಮ ಅನಾರೋಗ್ಯದ ಬಗ್ಗೆ ಸಂಗಾತಿಯ ಜೊತೆ ಮೊದಲೇ ಹೇಳಿಕೊಂಡಿರಬೇಕು.

ಕಲ್ಪನೆ: ಖಿನ್ನತೆ ಸದಾ ಜೀವನದ ಘಟನೆಗಳಿಗೆ ಸಂಬಂಧಿಸಿದ್ದಾಗಿರುತ್ತದೆ.

ವಾಸ್ತವ: ಜೀವನದ ಎಲ್ಲ ಘಟನೆಗಳೂ ಖಿನ್ನತೆಗೆ ಕಾರಣವಲ್ಲ. ಇದಕ್ಕೆ ಹಲವಾರು ಕಾರಣಗಳುಂಟು. ಸಾಮಾಜಿಕ ಪ್ರೋತ್ಸಾಹದ ಕೊರತೆ ಅಥವಾ ಹೃದ್ರೋಗ, ಕ್ಯಾನ್ಸರ್‌, ಹೆಎಚ್‌ಐವಿ,ಥೈರಾಡ್‌ ಇತ್ಯಾದಿ ಇನ್ನಿತರ ಆರೋಗ್ಯದ ಸಮಸ್ಯೆಗಳು ಮೊದಲಾದ ಕಾರಣಗಳಿಂದ ಖಿನ್ನತೆಯುಂಟಾಗಬಹುದು.

ಕಲ್ಪನೆ: ಶಮನಕಾರಕ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಮಾತ್ರ ಖಿನ್ನತೆಯನ್ನು ಗುಣಪಡಿಸಬಹುದು.

ವಾಸ್ತವ: ಗಂಭೀರವಾದ ಖಿನ್ನತೆಯನ್ನು ಹೊರತುಪಡಿಸಿದಂತೆ ಎಲ್ಲಾ ಸಮಯದಲ್ಲೂ ಔ‍‍‍‍ಷಧದ ಅಗತ್ಯವಿಲ್ಲ. ಚಿಕಿತ್ಸೆ ಸೈಕೊಥೆರಪಿಯನ್ನು ಸಹ ಒಳಗೊಂಡಿರುತ್ತದೆ. ಅಲ್ಪ ಅಥವಾ ಸಾಧಾರಣ ಖಿನ್ನತೆಗೆ ಸಲಹೆ ಮತ್ತು ಇತರೆ ಚಿಕಿತ್ಸೆಗಳು ಕೂಡಾ ಪರಿಣಾಮಕಾರಿಯಾಗಬಹುದು.

ಕಲ್ಪನೆ: ಖಿನ್ನತೆ ಆತ್ಮಹತ್ಯೆಗೆ ದಾರಿ ಮಾಡಿಕೊಡುವುದಿಲ್ಲ.

ವಾಸ್ತವ: ಆತ್ಮಹತ್ಯೆ ಕುರಿತಾದ ತಪ್ಪು ಕಲ್ಪನೆಗಳನ್ನು ಅರ್ಥೈಸಿಕೊಳ್ಳುವುದು ಕೂಡ ಮಹತ್ವದ್ದು. ಈ ಮೇಲಿನ ಕಲ್ಪನೆ ತರವಾದುದ್ದಲ್ಲ. ಯಾಕೆಂದರೆ, ತೀವ್ರ ಸ್ವರೂಪದ ಖಿನ್ನತೆ ಉಂಟಾದಾಗ ಮಾತ್ರ ಅಂತಹ ವ್ಯಕ್ತಿಗಳು ಆತ್ಮಹತ್ಯೆಯ ಆಲೋಚನೆಗಳನ್ನು ಮಾಡಬಹುದು. ಖಿನ್ನತೆ ಹೊಂದಿರುವ ವ್ಯಕ್ತಿಯ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಆ ವ್ಯಕ್ತಿಯ ವರ್ತನೆ ಮತ್ತು ಚಟುವಟಿಕೆಗಳನ್ನು ಜಾಗರೂಕರಾಗಿ ಗಮನಿಸುವುದು ಮತ್ತು ಪರಿಸ್ಥಿತಿ ಕೈಮೀರುವ ಮೊದಲೇ ಮುಂಜಾಗೃತೆ ತೆಗೆದುಕೊಳ್ಳುವುದು ಅತ್ಯಂತ ಮಹತ್ವದಾಗುತ್ತದೆ.

ಕಲ್ಪನೆ: ಖಿನ್ನತೆ ಹೊಂದಿರುವ ಹೆಚ್ಚಿನ ಜನರು ಮಾನಸಿಕ ತಜ್ಞರನ್ನು ಸಂಪರ್ಕಿಸುವುದಿಲ್ಲ.

ವಾಸ್ತವ: ಖಿನ್ನತೆಯಿಂದ ಬಳಲುತ್ತಿರುವ ಹೆಚ್ಚಿನ ಜನರು, ತೀವ್ರಸ್ವರೂಪದ ಖಿನ್ನತೆಗೆ ಒಳಗಾದವರು ಚಿಕಿತ್ಸೆಯಿಂದ ಉತ್ತಮ ಸ್ಥಿತಿ ಹೊಂದಬಹುದಾದರೂ, ಬೇರೆಯವರ ಸಹಾಯ ಕೇಳುವುದನ್ನು ಅವರು ಇಚ್ಛಿಸುವುದಿಲ್ಲ. ಖಿನ್ನತೆ ಹೊಂದಿರುವ ಕೇವಲ ಮೂರನೇ ಒಂದು ಭಾಗದಷ್ಟು ಜನ ಮಾತ್ರ ಚಿಕಿತ್ಸೆ ಪಡೆಯುತ್ತಾರೆ. ಹೆಚ್ಚಿನ ವೇಳೆ, ಇಂತಹ ತೊಂದರೆಗಳಿಂದ ಬಳಲುವ ಬಹುತೇಕ ಜನರು ಚಿಕಿತ್ಸೆಗಾಗಿ ಬರುವುದಕ್ಕೂ ಮೊದಲು ಹತ್ತು ವರ್ಷಗಳಿಗೂ ಮಿಕ್ಕಿ ಖಿನ್ನತೆಯೊಂದಿಗೆ ಬದುಕು ಸಾಗಿಸುತ್ತಿರುತ್ತಾರೆ. ಖಿನ್ನತೆಯ ಲಕ್ಷಣಗಳು ಗೋಚರಿಸಿದಾಕ್ಷಣ ಮಾನಸಿಕ ಚಿಕಿತ್ಸೆ, ಔಷಧ ಅಥವಾ ಇನ್ನಿತರೆ ನೆರವಿನ ಚಿಕಿತ್ಸೆ ಪಡೆದರೆ ಅದು ಹೆಚ್ಚು ಪರಿಣಾಮಕಾರಿಯಾಗಬಹುದು. ವಿವಿಧ ಥೆರಪಿಗಳ ಸಂಯೋಜನೆ ಕೂಡ ಈ ನಿಟ್ಟಿನಲ್ಲಿ ಸಹಕಾರಿಯಾಗಬಲ್ಲದು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org