ಡಿಸ್ಕ್ಯಾಲ್ಕ್ಯುಲಿಯ

Q

ಡಿಸ್ಕ್ಯಾಲ್ಕ್ಯುಲಿಯ ಎಂದರೇನು?

A

ಇದೊಂದು ನಿರ್ದಿಷ್ಟ ರೀತಿಯ ಕಲಿಕಾ ನ್ಯೂನತೆಯಾಗಿದ್ದು, ಇದರಲ್ಲಿ ಮಕ್ಕಳು ಸಂಖ್ಯೆಗಳ ಕುರಿತಾದ ಪ್ರಾಥಮಿಕ ಅಂಶಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ನಿಧಾನವಾಗಿ ಮತ್ತು ತಪ್ಪುತಪ್ಪಾಗಿ ಲೆಕ್ಕಗಳನ್ನು ಮಾಡುತ್ತಾರೆ. ಡಿಸ್ಕ್ಯಾಲ್ಕ್ಯುಲಿಯಾದ ಲಕ್ಷಣಗಳು ಮಕ್ಕಳಿಂದ ಮಕ್ಕಳಿಗೆ ಭಿನ್ನವಾಗಿರುತ್ತವೆ. ಕೆಲವು ಮಕ್ಕಳು ಗಣಿತದ ಪದಸಮಸ್ಯೆಗಳನ್ನು ಬಿಡಿಸಲು ಕಷ್ಟಪಟ್ಟರೆ, ಇನ್ನು ಕೆಲವು ಮಕ್ಕಳಿಗೆ ಅಪೇಕ್ಷಿತ ಉತ್ತರವನ್ನು ಪಡೆಯಲು ಅವಶ್ಯಕವಿರುವ ಹಂತಗಳ ಕ್ರಮಾಗತಿ ಅರ್ಥವೇ ಆಗದಿರಬಹುದು. ಇನ್ನು ಕೆಲವರಿಗೆ ಗಣಿತದ ಕೆಲವು ನಿರ್ದಿಷ್ಟ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾಗಬಹುದು.

Q

ಯಾವುದು ಡಿಸ್ಕ್ಯಾಲ್ಕ್ಯುಲಿಯ ಅಲ್ಲ?

A

ಸಾಮಾನ್ಯವಾಗಿ, ಬಹುತೇಕ ಮಕ್ಕಳಿಗೆ ಗಣಿತ ಎಂದರೆ ಕಬ್ಬಿಣದ ಕಡಲೆಯೇ ಆಗಿರುತ್ತದೆ. ಇನ್ನು ಕೆಲವು ಮಕ್ಕಳು ನಿಧಾನಗತಿಯ ಕಲಿಕಾ ಸಾಮರ್ಥ್ಯವನ್ನು ಹೊಂದಿರಬಹುದು. ಆದರೆ, ಸತತ ಪುನರಾವರ್ತನೆ ಮತ್ತು ನಿಯಮಿತ ಅಭ್ಯಾಸದಿಂದ ಅವರು ಗಣಿತವನ್ನು ಕಲಿಯುತ್ತಾರೆ.

ಇನ್ನು ಕೆಲವು ಮಕ್ಕಳಿಗೆ ಗಣಿತವೆಂದರೆ ಸವಾಲು. ಲೆಕ್ಕವೆಂದರೆ ಅವರು ಹೆದರುತ್ತಾರೆ ಮತ್ತು ತುಂಬಾ ಒತ್ತಡಕ್ಕೊಳಗಾಗುತ್ತಾರೆ. ಇದರಿಂದಾಗಿ ಪರೀಕ್ಷೆಗಳಲ್ಲಿ ಕಳಪೆ ಸಾಧನೆ ತೋರಬಹುದು.

ಇವೆಲ್ಲ ಡಿಸ್ಕ್ಯಾಲ್ಕ್ಯುಲಿಯ ಕಾಯಿಲೆಯ ಲಕ್ಷಣಗಳಲ್ಲ ಎಂಬುದನ್ನು ನೆನಪಿಡಿ.

Q

ಡಿಸ್ಕ್ಯಾಲ್ಕ್ಯುಲಿಯಾದ ಲಕ್ಷಣಗಳಾವುವು?

A

ಪ್ರತಿ ಮಗುವಿನ ಕಲಿಕೆಯ ರೀತಿಯು ಬೇರೆ ಬೇರೆ ಹಂತಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಬುದ್ಧಿಶಕ್ತಿಯಿರುವ ಮಗುವೊಂದಕ್ಕೆ ಗಣಿತದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ನಿರ್ದಿಷ್ಟ ಸಮಯ ಮತ್ತು ನಿಯಮಿತ ಅಭ್ಯಾಸದ ಅಗತ್ಯವಿರುತ್ತದೆ. ಆದರೆ ಈ ಸಮಯದ ಅಂತರ ಹೆಚ್ಚಿದರೆ ಮತ್ತು ಕಲಿಕೆಯಲ್ಲಿ ನಿಧಾನಗತಿಯನ್ನು ಪ್ರದರ್ಶಿಸಿದರೆ ಹಾಗೂ ಹೆಚ್ಚಿನ ಕೋಚಿಂಗ್ ಮತ್ತು ತರಬೇತಿಗಳನ್ನು ನೀಡಿಯೂ ಮಕ್ಕಳಿಗೆ ಗಣಿತ ಕಷ್ಟವಾಗುತ್ತಿದ್ದರೆ, ಅವರಿಗೆ ಡಿಸ್ಕ್ಯಾಲ್ಕ್ಯುಲಿಯ ಸಮಸ್ಯೆ ಇದೆ ಎಂದರ್ಥ. ಇದರ ಲಕ್ಷಣಗಳು ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಬೇರೆ ಬೇರೆಯಾಗಿರುತ್ತವೆ ಮತ್ತು ಮಕ್ಕಳಿಂದ ಮಕ್ಕಳಿಗೆ ಭಿನ್ನವಾಗಿರುತ್ತವೆ.

ಹಂತ

ಕಷ್ಟಕರವಾದ ಚಟುವಟಿಕೆಗಳು

ಶಾಲಾಪೂರ್ವ ಹಂತ

 

 • ಸಂಖ್ಯೆಗಳನ್ನು ಎಣಿಸಲು ಕಲಿಯುವುದು.

 • ಮುದ್ರಿತ ಸಂಖ್ಯೆಗಳನ್ನು ಗುರುತಿಸುವುದು.

 • ಸಂಖ್ಯೆಗಳನ್ನು ನಿಜ ಜೀವನದ ವಸ್ತುಗಳೊಂದಿಗೆ ಜೋಡಿಸುವುದು (3 ಕುದುರೆಗಳು, 5 ಪೆನ್ಸಿಲ್‌ಗಳು ಇತ್ಯಾದಿ)

 • ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದು.

 • ಚಿಹ್ನೆ, ಮಾದರಿ, ಆಕಾರಗಳನ್ನು ಗುರುತಿಸುವುದು ಮತ್ತು ವಸ್ತುಗಳನ್ನು ಜೋಡಿಸುವುದು (ದುಂಡಗಿನ ಚೆಂಡುಗಳನ್ನು ಒಂದು ಜಾಗದಲ್ಲಿ ಜೋಡಿಸುವುದು, ಚೌಕಾಕಾರದ ಬೋರ್ಡುಗಳನ್ನು ಇನ್ನೊಂದು ಪೆಟ್ಟಿಗೆಯಲ್ಲಿ ಜೋಡಿಸುವುದು ಇತ್ಯಾದಿ.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಹಂತ

 

 • ಸಂಖ್ಯೆಗಳು ಮತ್ತು ಚಿಹ್ನೆಗಳನ್ನು ಗುರುತಿಸುವುದು.

 • ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಮುಂತಾದವನ್ನು ಕಲಿಯುವುದು.

 • ಗಣಿತದಲ್ಲಿ ಪದಸಮಸ್ಯೆಗಳನ್ನು ಬಿಡಿಸುವುದು.

 • ವಸ್ತುಗಳನ್ನು ಅಳೆಯುವುದು.

 • ಮನಸ್ಸಿನಲ್ಲಿಯೇ ಲೆಕ್ಕ ಮಾಡುವುದು.

 • ದೂರವಾಣಿ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು.

 • ಸಂಖ್ಯೆಗಳಿರುವ ಅಥವಾ ಯೋಜನೆ ಹಾಗೂ ತರ್ಕಗಳು ಅಗತ್ಯವಿರುವ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು.

 

ಹದಿಹರೆಯ ಮತ್ತು ಯೌವನದ ಹಂತ

 

 • ಬೆಲೆಯನ್ನು ಲೆಕ್ಕ ಮಾಡುವುದು ಮತ್ತು ಕೂಡಿಸುವುದು.

 • ಗಣಿತದ ಮೂಲ ಪರಿಕಲ್ಪನೆಗಿಂತ ಹೆಚ್ಚಿನದ್ದನ್ನು ಕಲಿಯುವುದು.

 • ಲೆಕ್ಕಾಚಾರ ನಿರ್ವಹಿಸುವುದು.

 • ವಸ್ತು ಮತ್ತು ವಿಷಯಗಳನ್ನು ಅಳತೆ ಮಾಡುವುದು.

 • ಸಮಯ, ಸ್ಥಳ ಮತ್ತು ದೂರದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು.

 • ಮನಸ್ಸಿನಲ್ಲಿಯೇ ಲೆಕ್ಕ ಮಾಡುವುದು.

 • ಒಂದೇ ಲೆಕ್ಕವನ್ನು ಬಿಡಿಸಲು ಬೇರೆ ಬೇರೆ ವಿಧಾನಗಳನ್ನು ಹುಡುಕುವುದು.

 • ಕ್ರೀಡೆಗಳಲ್ಲಿ ಭಾಗವಹಿಸುವುದು ಮತ್ತು ವಾಹನ ಚಾಲನೆಯನ್ನು ಕಲಿಯುವುದು ಮುಂತಾಗಿ ವೇಗ ಮತ್ತು ಅಂತರದ ಲೆಕ್ಕಾಚಾರ ಅಗತ್ಯವಿರುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು. ಡಿಸ್ಕ್ಯಾಲ್ಕ್ಯುಲಿಯ ಸಮಸ್ಯೆಯಿರುವ ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆಯಿರುತ್ತದೆ ಮತ್ತು ಅವರು ಈ ಎಲ್ಲಾ ಚಟುವಟಿಕೆಗಳಿಂದ ತಪ್ಪಿಸಿಕೊಳ್ಳಲು ನೋಡುತ್ತಾರೆ.


 

Q

ಡಿಸ್ಕ್ಯಾಲ್ಕ್ಯುಲಿಯ ಸಮಸ್ಯೆಗೆ ಕಾರಣಗಳೇನು?

A

ಈ ಸಮಸ್ಯೆಯ ನಿಖರ ಕಾರಣವನ್ನು ಪತ್ತೆ ಹಚ್ಚುವಲ್ಲಿ ಸಂಶೋಧಕರು ಇನ್ನೂ ನಿರತರಾಗಿದ್ದಾರೆ. ಅವರ ಪ್ರಕಾರ, ಡಿಸ್ಕ್ಯಾಲ್ಕ್ಯುಲಿಯ ಸಮಸ್ಯೆ ಕಾಣಿಸಿಕೊಳ್ಳಲು ವರ್ಣತಂತುಗಳು ಮತ್ತು ಅನುವಂಶಿಕತೆಯೂ ಪ್ರಮುಖ ಅಂಶಗಳಾಗಿವೆ.

Q

ಡಿಸ್ಕ್ಯಾಲ್ಕ್ಯುಲಿಯವನ್ನು ಪತ್ತೆ ಮಾಡುವುದು ಹೇಗೆ?

A

ಈ ಸಮಸ್ಯೆಯನ್ನು ಪತ್ತೆ ಹಚ್ಚಲು ನಿರ್ದಿಷ್ಟ ಪರೀಕ್ಷೆಗಳಿಲ್ಲ. ಮಕ್ಕಳ ತಜ್ಞರು ಅಥವಾ ಮನಃಶಾಸ್ತ್ರಜ್ಞರು ಕೆಲವು ಮೌಲ್ಯಮಾಪನ ಮತ್ತು ಪರೀಕ್ಷೆಗಳನ್ನು ನಡೆಸಿ ಸಮಸ್ಯೆಯನ್ನು ಪತ್ತೆ ಹಚ್ಚುತ್ತಾರೆ.

Q

ಡಿಸ್ಕ್ಯಾಲ್ಕ್ಯುಲಿಯ ಖಾಯಿಲೆಗೆ ಚಿಕಿತ್ಸೆ ಏನಿದೆ?

A

ವೈದ್ಯಕೀಯ ಹಿನ್ನೆಲೆ: ಡಿಸ್ಕ್ಯಾಲ್ಕ್ಯುಲಿಯವು ಇನ್ನಿತರ ಕಲಿಕಾ ನ್ಯೂನತೆಗಳು ಅಥವಾ ಎಡಿಎಚ್‌ಡಿಯೊಂದಿಗೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ತಜ್ಞರು ಈ ಸಮಸ್ಯೆಯನ್ನು ಪತ್ತೆ ಹಚ್ಚುವ ಅಥವಾ ಚಿಕಿತ್ಸೆ ನೀಡುವ ಮೊದಲು ಮಕ್ಕಳ ಸಂಪೂರ್ಣ ವೈದ್ಯಕೀಯ ಹಿನ್ನೆಲೆಯನ್ನು ಪರಿಶೀಲನೆ ಮಾಡುತ್ತಾರೆ.

ರೋಗಪತ್ತೆ: ಈ ಸಮಸ್ಯೆಯನ್ನು ಕಂಡು ಹಿಡಿಯಲು ವಿಶೇಷ ಶಿಕ್ಷಣ ತಜ್ಞರು ಕೆಲವು ನಿರ್ದಿಷ್ಟ ಪರೀಕ್ಷೆಗಳನ್ನು ಮಾಡುತ್ತಾರೆ. ಇದರಲ್ಲಿ ಮಕ್ಕಳ ಶೈಕ್ಷಣಿಕ ಸಾಧನೆಗಳನ್ನೂ ಪರಿಗಣಿಸಲಾಗುತ್ತದೆ. ಮಕ್ಕಳು ಈ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುವಂತೆ ಅವರಿಗೆ ಕಲಿಕೆಯ ಕೆಲವು ಪರ್ಯಾಯ ವಿಧಾನಗಳನ್ನು ಮತ್ತು ತಂತ್ರಗಳನ್ನು ಹೇಳಿಕೊಡಲಾಗುತ್ತದೆ.

ಶಾಲೆಯಲ್ಲಿ ಸಿಗುವ ಸಹಕಾರ: ಇಂಥ ಸಮಸ್ಯೆಯಿರುವ ಮಕ್ಕಳ ಪಾಲಕರು ತಮ್ಮ ಮಗುವಿಗೆ ಈ ಸಮಸ್ಯೆ ಇರುವುದರ ಕುರಿತು ಮೊದಲೇ ಶಿಕ್ಷಕರಿಗೆ ವಿವರಿಸಿ ಹೇಳಿ ಅವರ ಸಹಕಾರವನ್ನು ಕೋರಬೇಕು. ಇದರಿಂದ ಶಿಕ್ಷಕರು ಗಣಿತವನ್ನು ಕಲಿಸಲು ವೈಯಕ್ತಿಕ ಶಿಕ್ಷಣ ಯೋಜನೆಯನ್ನು ಅನುಸರಿಸುತ್ತಾರೆ. ಇದರಲ್ಲಿ ಮಕ್ಕಳಿಗೆ ಹೆಚ್ಚಿನ ನೆರವನ್ನು ನೀಡಲಾಗುತ್ತದೆ. ಅಂದರೆ ಪರೀಕ್ಷೆಗಳಲ್ಲಿ ಹೆಚ್ಚುವರಿ ಸಮಯ ಕೊಡುವುದು ಅಥವಾ ಗಣಕಯಂತ್ರವನ್ನು ಬಳಸಲು ಅನುಮತಿ ನೀಡುವುದು ಇತ್ಯಾದಿ. ಶಿಕ್ಷಕರು ಇಂಥ ಮಕ್ಕಳ ಪ್ರಗತಿಯನ್ನು ದಾಖಲೆ ಮಾಡಿಕೊಳ್ಳುತ್ತಾರೆ ಮತ್ತು ಈ ಮೊದಲಿನ ವಿಧಾನ ಪರಿಣಾಮಕಾರಿಯಾಗದಿದ್ದರೆ ತರಬೇತಿ ವಿಧಾನವನ್ನು ಬದಲಾಯಿಸುತ್ತಾರೆ.

ಮಧ್ಯಸ್ಥಿಕೆಗೆ ಸ್ಪಂದನ (ಆರ್ ಟಿಐ): ಕೆಲವು ಶಾಲೆಗಳು ನಿಧಾನಗತಿಯ ಕಲಿಕಾ ಸಾಮರ್ಥ್ಯವಿರುವ ಮಕ್ಕಳಿಗೆ ಈ ಯೋಜನೆಯನ್ನು ಹಮ್ಮಿಕೊಳ್ಳುತ್ತವೆ. ಇದರಲ್ಲಿ ಈ ಸಮಸ್ಯೆಯಿರುವ ಮಕ್ಕಳ ಸಣ್ಣ ಗುಂಪಿಗೆ ಅಥವಾ ಅಗತ್ಯವಿದ್ದರೆ ಕೆಲವೊಮ್ಮೆ ವೈಯಕ್ತಿಕವಾಗಿ ಮಗುವಿಗೆ ಹೆಚ್ಚುವರಿ ತರಬೇತಿಯನ್ನು ನೀಡಲಾಗುತ್ತದೆ.

ಮನಃಶಾಸ್ತ್ರಜ್ಞರು/ಆಪ್ತಸಮಾಲೋಚಕರು: ಯಾವುದೇ ರೀತಿಯ ಕಲಿಕಾ ನ್ಯೂನತೆಗಳು ಮಕ್ಕಳ ಆತ್ಮಗೌರವ ಮತ್ತು ಆತ್ಮವಿಶ್ವಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಅವರಲ್ಲಿ ಕ್ರಮೇಣ ಅತಿಒತ್ತಡ ಮತ್ತು ಆತಂಕ ಉಂಟಾಗತೊಡಗುತ್ತದೆ. ಮಕ್ಕಳು ಈ ಸಮಸ್ಯೆಯಿಂದ ಹೊರಬರಲು ಮನಃಶಾಸ್ತ್ರಜ್ಞರು ಅಥವಾ ಆಪ್ತ ಸಮಾಲೋಚಕರು ನೆರವು ನೀಡಬಲ್ಲರು.

Q

ಡಿಸ್ಕ್ಯಾಲ್ಕ್ಯುಲಿಯ ಸಮಸ್ಯೆಯಿದ್ದವರ ಆರೈಕೆ ಮಾಡುವುದು ಹೇಗೆ?

A

ಇಂಥ ಸಮಸ್ಯೆಯಿರುವ ಮಕ್ಕಳ ಪೋಷಕರು ತಮ್ಮ ಮಕ್ಕಳು ಈ ಪರಿಸ್ಥಿತಿಯಿಂದ ಹೊರ ಬರುವಂತಾಗಲು ಸಾಕಷ್ಟು ಪ್ರೀತಿ ಮತ್ತು ನೆರವು ನೀಡುವುದು ಅತ್ಯಗತ್ಯ.

ಪ್ರತಿಯೊಂದು ಮಗುವು ವಿಶಿಷ್ಟವಾಗಿರುತ್ತದೆ ಹಾಗೂ ಆತ ಅಥವಾ ಆಕೆ ತಮ್ಮದೇ ಆದ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಹೊಂದಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕೂಡಾ ಮುಖ್ಯವಾಗಿದೆ. ಇದಕ್ಕಾಗಿ ವಿವಿಧ ರೀತಿಯ ಕಲಿಕಾ ವಿಧಾನಗಳನ್ನು ಪ್ರಯೋಗಿಸಿ ನೋಡಿ. ಹಾಗೂ ಅವರ ಗಣಿತದ ಕೌಶಲ್ಯವನ್ನು ಹೆಚ್ಚಿಸಲು ಯಾವ ವಿಧಾನ ಸಹಕಾರಿಯಾಗುತ್ತದೆ ಎಂಬುದನ್ನು ಪರಿಶೀಲಿಸಿ.

ಈ ರೀತಿಯಲ್ಲಿಯೂ ನೀವು ನಿಮ್ಮ ಮಕ್ಕಳಿಗೆ ನೆರವು ನೀಡಬಹುದು

 • ಡಿಸ್ಕ್ಯಾಲ್ಕ್ಯುಲಿಯವನ್ನು ಅರ್ಥ ಮಾಡಿಕೊಳ್ಳಿ: ಈ ಕುರಿತಾದ ಬರಹಗಳನ್ನು ಓದಿ ತಿಳಿದುಕೊಳ್ಳಿ. ಈ ನಿಟ್ಟಿನಲ್ಲಿ ಚೇತರಿಸಿಕೊಳ್ಳಲು ಇರುವ ಮೊದಲ ಹೆಜ್ಜೆಯೇ ಸೂಕ್ತ ಅರಿವನ್ನು ಹೊಂದುವುದು ಮತ್ತು ಅರ್ಥ ಮಾಡಿಕೊಳ್ಳುವುದು. ಮಕ್ಕಳ ಮೇಲೆ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಪ್ರದರ್ಶಿಸಿ. ಮಕ್ಕಳೊಂದಿಗೆ ಮಾತನಾಡಿ ಮತ್ತು ಅವರ ಕಷ್ಟಗಳ ಬಗ್ಗೆ ನಿಮಗೆ ಅರಿವಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿ.

 • ಗಣಿತವನ್ನೊಳಗೊಂಡ ಸಂಖ್ಯೆಯಾಟಗಳನ್ನು ಆಡಿ: ಪ್ರತಿದಿನದ ಚಟುವಟಿಕೆಗಳಿಗೆ ಸಂಖ್ಯೆಗಳ ಸಂಪರ್ಕವನ್ನು ಕಲ್ಪಿಸಲು ಆಟಿಕೆ, ಪಾತ್ರೆ, ಕಿರಾಣಿ ವಸ್ತು, ತರಕಾರಿ ಮತ್ತು ಹಣ್ಣು ಮುಂತಾದ ಗೃಹಬಳಕೆಯ ವಸ್ತುಗಳನ್ನು ಉಪಯೋಗಿಸಿ. ಮಕ್ಕಳು ಗಣಕಯಂತ್ರವನ್ನು ಬಳಸಲು ಅವಕಾಶ ಕೊಡಿ. ಕಲಿಕೆಯ ವಿವಿಧ ವಿಧಾನಗಳನ್ನು ಪ್ರಯತ್ನಿಸಿ ನೋಡಿ. ಹಾಗೂ ಇದರಲ್ಲಿ ನಿಮ್ಮ ಮಗುವಿಗೆ ಯಾವುದು ಅನುಕೂಲಕರವಾಗಿರುವ ವಿಧಾನ ಎಂಬುದನ್ನು ಪರಿಶೀಲಿಸಿ. ದಿನಿನಿತ್ಯದ ಜೀವನದಲ್ಲಿ ಗಣಿತ ಅತ್ಯಗತ್ಯವಾಗಿರುವುದರಿಂದ ಮಕ್ಕಳಿಗೆ ಹಣ ಮತ್ತು ಸಮಯದ ನಿರ್ವಹಣೆಯನ್ನು ಕಲಿಸಿ.

 • ಪ್ರೋತ್ಸಾಹ ಮತ್ತು ಸಹಕಾರ: ನಿಮ್ಮ ಮಗುವಿನ ಸಾಮರ್ಥ್ಯಗಳನ್ನು ಗುರುತಿಸಿ ಹಾಗೂ ಅವರಿಗೆ ಆಸಕ್ತಿಯಿರುವ ಯಾವುದೇ ಚಟುವಟಿಕೆಯನ್ನು ಮಾಡಲು ಸೂಕ್ತ ಪ್ರೋತ್ಸಾಹ ನೀಡಿ. ಇದರಿಂದ ಮಗುವಿನ ಆತ್ಮಗೌರವ ಮತ್ತು ಆತ್ಮವಿಶ್ವಾಸವೂ ಹೆಚ್ಚುತ್ತದೆ. ಮುಕ್ತ ಹೊಗಳಿಕೆ ಮತ್ತು ಪ್ರೀತಿಯಿಂದ ನಿಮ್ಮ ಮಕ್ಕಳಲ್ಲಿ ಪ್ರೀತಿ ಮತ್ತು ಸುರಕ್ಷತೆಯ ಭಾವನೆಗಳು ಮೂಡುತ್ತವೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org