ಡಿಸ್ಲೆಕ್ಸಿಯಾ

Q

ಡಿಸ್ಲೆಕ್ಸಿಯಾ ಎಂದರೇನು?

A

ಇದು ಕೂಡಾ ಒಂದು ಕಲಿಕಾ ಅಸಾಮರ್ಥ್ಯವಾಗಿದ್ದು, ಓದುವ ಕೌಶಲ್ಯ ಮತ್ತು ಭಾಷಾ ಉಚ್ಛಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಡಿಸ್ಲೆಕ್ಸಿಯಾ ಸಮಸ್ಯೆಯಿರುವ ಮಕ್ಕಳಿಗೆ ಓದಲು, ಬರೆಯಲು ತೊಂದರೆಯಾಗುತ್ತದೆ, ಕಾಗುಣಿತ ದೋಷ ಕಂಡುಬರುತ್ತದೆ ಅಥವಾ ಮಾತನಾಡಲು ತುಂಬಾ ಕಷ್ಟವಾಗುತ್ತದೆ. ಈ ಸಮಸ್ಯೆಯು ಮಕ್ಕಳ ಕೆಲವು ಕೌಶಲ್ಯ ಮತ್ತು ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದಕ್ಕೂ ಮಗುವಿನ ಸಾಮಾನ್ಯ ಬುದ್ಧಿಶಕ್ತಿಗೂ ಯಾವುದೇ ಸಂಬಂಧವಿಲ್ಲ.

ಡಿಸ್ಲೆಕ್ಸಿಯಾ ಸಮಸ್ಯೆಯ ತೀವ್ರತೆ ಪ್ರತಿ ಮಕ್ಕಳಲ್ಲೂ ಭಿನ್ನವಾಗಿರುತ್ತದೆ. ಈ ಸಮಸ್ಯೆಯಲ್ಲಿ ಕೆಲವು ಮಕ್ಕಳಿಗೆ ಓದಲು ಮತ್ತು ಬರೆಯಲು ಕಷ್ಟವಾದರೆ, ಇನ್ನು ಕೆಲವರಿಗೆ ಹೊಸ ಶಬ್ದಗಳನ್ನು ಮತ್ತು ಅದರ ಅರ್ಥಗಳನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರಿಗೆ ಭಾಷಾ ಉಚ್ಚಾರದಲ್ಲಿ ತೊಡಕುಂಟಾಗುವ ಕಾರಣ ವ್ಯಾಕರಣ ಅಥವಾ ಹೊಸ ಭಾಷೆಗಳನ್ನು ಕಲಿಯುವುದು ಕಷ್ಟವಾಗುತ್ತದೆ. ಇವರು ಶೈಕ್ಷಣಿಕ ಸಾಧನೆಯಲ್ಲಿ ಹಿಂದಿರುತ್ತಾರೆ. ಈಸಮಸ್ಯೆಯು ಇನ್ನಿತರ ಕಲಿಕಾ ಅಸಾಮರ್ಥ್ಯಗಳಾದ ಎಡಿಎಚ್‌ಡಿ ಅಥವಾ ಆಟಿಸಂನೊಂದಿಗೂ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

Q

ಡಿಸ್ಲೆಕ್ಸಿಯಾದ ಲಕ್ಷಣಗಳಾವವು?

A

ಬಹುತೇಕ ಪೋಷಕರು ಈ ಸಮಸ್ಯೆಯ ಲಕ್ಷಣಗಳನ್ನು ತಮ್ಮ ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ ಮೇಲೆಯೇ ಗುರುತಿಸುತ್ತಾರೆ.

ಶಾಲಾಪೂರ್ವ ಹಂತ: ಈ ಹಂತದಲ್ಲಿ ಮಕ್ಕಳು ಈ ಕೆಳಗಿನ ವಿಷಯಗಳಲ್ಲಿ ಕಷ್ಟಪಡುತ್ತಾರೆ.

 • ಅಕ್ಷರ ಮತ್ತು ಪದಗಳನ್ನು ಗುರುತಿಸುವುದು.

 • ಅಕ್ಷರಗಳನ್ನು ಧ್ವನಿಯೊಂದಿಗೆ ಸಂಯೋಜಿಸುವುದು (ಧ್ವನಿ).

 • ಹೊಸ ಪದಗಳ ಕಲಿಕೆ.

 • ಅಕ್ಷರಗಳು, ಸಂಖ್ಯೆಗಳು, ಪ್ರಾಸ ಮತ್ತು ಪ್ರಾಸಯುಕ್ತ ಪದಗಳನ್ನು ಕಲಿಯುವುದು.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಹಂತ

 • ವಿಷಯ ಮತ್ತು ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದು.

 • ಪೆನ್ಸಿಲನ್ನು ಹಿಡಿದು ನೀಟಾಗಿ ಬರೆಯುವುದು.

 • ಪದ್ಯಗಳನ್ನು ನೆನಪಿಟ್ಟುಕೊಳ್ಳುವುದು.

 • ಅಕ್ಷರಗಳ ನಡುವಿನ ವ್ಯತ್ಯಾಸ ಕಂಡು ಹಿಡಿಯುವುದು (b, d, m, w)

 • ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದು.

 • ಮಾತನಾಡಲು ಸೂಕ್ತ ಶಬ್ದಗಳನ್ನು ಕಂಡು ಹಿಡಿಯುವುದು.

 • ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ಪಾಲಿಸುವುದು.

 • ಗಣಿತದ ಒಗಟನ್ನು ಬಿಡಿಸುವುದು.

 • ಹೊಸ ಭಾಷೆಗಳನ್ನು ಕಲಿಯುವುದು.

ಹದಿಹರೆಯ ಮತ್ತು ಯೌವನದ ಹಂತ

 • ಸರಾಗವಾಗಿ ಓದುವುದು ಅಥವಾ ಗಟ್ಟಿ ಧ್ವನಿಯಲ್ಲಿ ಓದುವುದು.

 • ಹಾಸ್ಯ, ಪ್ರಾಸ, ಒಗಟು ಅಥವಾ ಗಾದೆಗಳನ್ನು ಅರ್ಥ ಮಾಡಿಕೊಳ್ಳುವುದು.

 • ಪದ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು.

 • ಕಥೆಯನ್ನು ಸಂಕ್ಷಿಪ್ತವಾಗಿ ಹೇಳುವುದು ಅಥವಾ ಅದರ ತಾತ್ಪರ್ಯವನ್ನು ಹೇಳುವುದು.

 • ಸೂಕ್ತವಾಗಿ ಸಮಯ ಪರಿಪಾಲಿಸುವುದು.

 • ಗಣಿತದ ಸಮಸ್ಯೆಗಳನ್ನು ಬಿಡಿಸುವುದು.

Q

ಡಿಸ್ಲೆಕ್ಸಿಯಾಗೆ ಕಾರಣಗಳೇನು?

A

ಈ ಸಮಸ್ಯೆಯ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಂಶೋಧಕರ ಪ್ರಕಾರ, ವಂಶವಾಹಿಗಳು ಮತ್ತು ಮೆದುಳಿನ ಅಸಮರ್ಪಕ ಕಾರ್ಯವೈಖರಿಯಿಂದ ಡಿಸ್ಲೆಕ್ಸಿಯಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

Q

ಡಿಸ್ಲೆಕ್ಸಿಯಾವನ್ನು ಪತ್ತೆ ಹಚ್ಚುವುದು ಹೇಗೆ?

A

ಇದನ್ನು ಪತ್ತೆ ಹಚ್ಚಲು ಯಾವುದೇ ವೈದ್ಯಕೀಯ ಪರೀಕ್ಷೆಗಳಿಲ್ಲ. ಆದರೆ ಕೆಲವು ತಜ್ಞರು ತಂಡವಾಗಿ ಕೆಲಸಮಾಡಿ ಮಕ್ಕಳಲ್ಲಿ ಈ ಸಮಸ್ಯೆಯ ಲಕ್ಷಣಗಳನ್ನು ಮೌಲ್ಯಮಾಪನ ಮಾಡಿ ಬಳಿಕ ಡಿಸ್ಲೆಕ್ಸಿಯಾ ಇರುವಿಕೆಯನ್ನು ಪತ್ತೆ ಹಚ್ಚುತ್ತಾರೆ. ಈ ಸಮಸ್ಯೆಯ ಜೊತೆಗೆ ಕಲಿಕಾ ಅಸಾಮರ್ಥ್ಯ, ಎಡಿಎಚ್‌ಡಿ ಅಥವಾ ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರುವ ಇನ್ನಿತರ ಬೇರೆ ವಿಷಯಗಳಿವೆಯೇ ಎಂಬುದನ್ನು ಪತ್ತೆ ಹಚ್ಚಲು ಕೂಡಾ ತಜ್ಞರು ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ. ಈ ಪರೀಕ್ಷೆಯ ಸಂದರ್ಭದಲ್ಲಿ ತಜ್ಞರು ಈ ಕೆಳಗಿನ ವಿಷಯಗಳನ್ನು ಪರಿಗಣಿಸುತ್ತಾರೆ:

 • ಕುಟುಂಬ ಮತ್ತು ವೈದ್ಯಕೀಯ ಹಿನ್ನೆಲೆ

 • ಓದು ಮತ್ತು ಬರವಣಿಗೆಯ ಕೌಶಲ್ಯ

 • ದೃಷ್ಟಿ ಮತ್ತು ಶ್ರವಣ ಸಾಮರ್ಥ್ಯ

 • ಶೈಕ್ಷಣಿಕ ಸಾಧನೆ

Q

ಡಿಸ್ಲೆಕ್ಸಿಯಾಗೆ ಚಿಕಿತ್ಸೆ

A

ಕೆಲವು ನಿರ್ದಿಷ್ಟ ರೀತಿಯ ಶೈಕ್ಷಣಿಕ ವಿಧಾನಗಳು ಮತ್ತು ತಂತ್ರಗಳ ಮೂಲಕ ಈ ಸಮಸ್ಯೆಗೆ ಚಿಕಿತ್ಸೆ ನೀಡಬಹುದು. ಆರಂಭದ ಹಂತದಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಮಕ್ಕಳು ಡಿಸ್ಲೆಕ್ಸಿಯಾದಿಂದ ಹೊರ ಬರಲು ಸಹಕಾರಿಯಾಗುತ್ತದೆ.

ಕೆಲವು ಚಿಕಿತ್ಸಾ ವಿಧಾನಗಳು ಹೀಗಿವೆ:

ಪರ್ಯಾಯ ಕಲಿಕಾ ವಿಧಾನಗಳು: ಈ ಸಮಸ್ಯೆಯಿರುವ ಮಕ್ಕಳಿಗೆ ಶಿಕ್ಷಕರು ಮತ್ತು ವಿಶೇಷ ಶಿಕ್ಷಣ ತಜ್ಞರು ಪರ್ಯಾಯ ಕಲಿಕಾ ವಿಧಾನಗಳನ್ನು ಹೇಳಿಕೊಡುತ್ತಾರೆ. ಉದಾಹರಣೆಗೆ, ಧ್ವನಿ ಗ್ರಹಿಕೆಯ ಮೂಲಕ ಪಾಠಗಳನ್ನು ಆಲಿಸುವುದು, ಓದುವಾಗ ಅಕ್ಷರಗಳನ್ನು ಸ್ಪರ್ಶಿಸಿ ಮತ್ತು ಅದರ ಆಕಾರಗಳನ್ನು ಗುರುತಿಸುವುದು. ಪದಗಳನ್ನು ಗುರುತಿಸಲು ಚಿತ್ರ ಮತ್ತು ಛಾಯಾಚಿತ್ರಗಳನ್ನು ಬಳಸಿದರೆ ಮಕ್ಕಳ ಶಬ್ದಕೋಶ ಬೆಳೆಯುತ್ತದೆ.

ವಿಶೇಷ ಪಾಠ: ಇದರಲ್ಲಿ ವಿಶೇಷ ತಜ್ಞರು ಧ್ವನಿಗಳು ಮತ್ತು ಇತರ ಪರ್ಯಾಯ ವಿಧಾನಗಳ ಮೂಲಕ ಪಾಠ ಹೇಳಿ ಕೊಡುತ್ತಾರೆ. ಇದರಿಂದ ಡಿಸ್ಲೆಕ್ಸಿಯಾ ಸಮಸ್ಯೆಯಿರುವ ಮಕ್ಕಳಲ್ಲಿ ಓದುವ ಕೌಶಲ್ಯ ಬೆಳೆಯುತ್ತದೆ.

ವೈಯಕ್ತಿಕ ಶಿಕ್ಷಣ ಯೋಜನೆ (ಐಇಪಿ): ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಿ ನಿರ್ದಿಷ್ಟ ಉದ್ದೇಶದಿಂದ ಕೂಡಿದ ಒಂದು ರಚನಾತ್ಮಕ ಕಲಿಕಾ ಯೋಜನೆಯು ಮಕ್ಕಳ ಕಲಿಕೆಗೆ ನೆರವಾಗುತ್ತದೆ.

ಗಮನಿಸಿ:

 • ಡಿಸ್ಲೆಕ್ಸಿಯಾ ಸಮಸ್ಯೆಯಿರುವ ಮಕ್ಕಳಲ್ಲಿ ಕ್ರಮೇಣ ಎಡಿಎಚ್‌ಡಿ ಮತ್ತು ಆ ಸಂಬಂಧಿತ ಇತರ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯವಿರುತ್ತದೆ. ಎಡಿಎಚ್‌ಡಿ ಲಕ್ಷಣಗಳಿದ್ದರೆ ಡಿಸ್ಲೆಕ್ಸಿಯಾ ಸಮಸ್ಯೆಗೆ ಚಿಕಿತ್ಸೆ ಕೊಡಲು ಕಷ್ಟವಾಗುತ್ತದೆ.

 • ಡಿಸ್ಲೆಕ್ಸಿಯಾ ಸಮಸ್ಯೆಯಿರುವ ಮಕ್ಕಳು ಅತ್ಯಂತ ಪ್ರತಿಭಾನಿತ್ವರು ಮತ್ತು ಸೃಜನಶೀಲರಾಗಿರುತ್ತಾರೆ. ಸೂಕ್ತ ಬೆಂಬಲ, ಪ್ರೋತ್ಸಾಹ ಮತ್ತು ಸೂಕ್ತ ಸಂಪನ್ಮೂಲಗಳು ದೊರೆತರೆ ಇಂಥ ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಅತ್ಯದ್ಭುತವೆನಿಸುವ ಸಾಧನೆ ಮಾಡುತ್ತಾರೆ.

Q

ಡಿಸ್ಲೆಕ್ಸಿಯಾಗೆ ಚಿಕಿತ್ಸೆ ನೀಡದಿದ್ದರೆ ಏನಾಗುತ್ತದೆ?

A

ಬಾಲ್ಯದಲ್ಲಿಯೇ ಈ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಮುಂದೆ ಅದರ ತೀವ್ರತೆ ಹೆಚ್ಚುತ್ತದೆ ಮತ್ತು ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಾಗ ಅವರ ಕಲಿಕಾ ಪ್ರಕ್ರಿಯೆ ಮತ್ತು ಭಾಷಾ ಕೌಶಲ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಈ ಕೆಳಗಿನ ಸಮಸ್ಯೆಗಳು ಕಂಡು ಬರಬಹುದು:

 • ಶೈಕ್ಷಣಿಕವಾಗಿ: ಡಿಸ್ಲೆಕ್ಸಿಯಾ ಸಮಸ್ಯೆಯಿರುವ ಮಕ್ಕಳಿಗೆ ಓದಲು ಮತ್ತು ಬರೆಯಲು ಕಷ್ಟವಾಗುವುದರಿಂದ ಅವರು ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಾರೆ. ಇದರಿಂದ ಅವರು ದೀರ್ಘ ಅವಧಿಯವರೆಗೂ ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

 • ಸಮಯ ನಿರ್ವಹಣೆ: ಇಂಥ ಮಕ್ಕಳು ಶಾಲಾ ಕೆಲಸ, ಪರೀಕ್ಷೆಗಳನ್ನು ಒಳಗೊಂಡಂತೆ ತಮ್ಮ ದಿನನಿತ್ಯದ ಕೆಲಸಗಳಿಗೂ ಸೂಕ್ತ ಸಮಯ ನಿರ್ವಹಣೆ ಮಾಡಲು ಕಷ್ಟಪಡುತ್ತಾರೆ.

 • ಸಾಮಾಜಿಕ ಕೌಶಲ್ಯಗಳು: ಈ ಸಮಸ್ಯೆಯಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ಕಡಿಮೆಯಿರುತ್ತದೆ ಹಾಗೂ ಅವರು ಆತಂಕ ಮತ್ತು ಭಾವನಾತ್ಮಕ ಸಮಸ್ಯೆಯಿಂದ ಬಳಲುತ್ತಾರೆ. ಇವರಿಗೆ ಸ್ನೇಹಿತರನ್ನು ಹೊಂದಲು ಸಾಧ್ಯವಾಗುವುದಿಲ್ಲ ಮತ್ತು ಇವರು ಇತರ ಮಕ್ಕಳೊಂದಿಗೆ ಬೆರೆಯುವುದಿಲ್ಲ.

Q

ಡಿಸ್ಲೆಕ್ಸಿಯಾದಿಂದ ಬಳಲುವ ಮಕ್ಕಳ ಕಾಳಜಿ ವಹಿಸುವುದು ಹೇಗೆ?

A

ಇಂಥ ಮಕ್ಕಳನ್ನು ಆರೈಕೆ ಮಾಡುವುದು ಪೋಷಕರಿಗೆ ಕೊಂಚ ಕಷ್ಟ. ಆದರೆ ಡಿಸ್ಲೆಕ್ಸಿಯಾ ಕುರಿತ ಸೂಕ್ತ ಅರಿವು ಮತ್ತು ತಿಳುವಳಿಕೆಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಮೂಲಕ ಮಕ್ಕಳು ಈ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುತ್ತದೆ.

ಇಂಥ ಮಕ್ಕಳಿಗೆ ಸಹಕಾರಿಯಾಗಿರುವ ಕೆಲವು ವಿಧಾನಗಳು ಇಲ್ಲಿವೆ:

 • ನಿಮ್ಮ ಮಕ್ಕಳಲ್ಲಿ ಈ ಮೇಲಿನ ಯಾವುದಾದರೂ ಲಕ್ಷಣಗಳು ಕಂಡು ಬಂದರೆ ನಿಮ್ಮ ಮಕ್ಕಳ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

 • ತಜ್ಞರು ನೀಡಿರುವ ಕಲಿಕಾ ವಿಧಾನವನ್ನು ಪಾಲಿಸಲು ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡಿ.

 • ಮಕ್ಕಳ ಮುಂದೆ ಕಥೆಗಳನ್ನು ಗಟ್ಟಿಯಾಗಿ ಓದಿ. ಆಡಿಯೋ ಪುಸ್ತಕಗಳನ್ನು ಆಲಿಸಲು ಅವರನ್ನು ಉತ್ತೇಜಿಸಿ.

 • ಮಕ್ಕಳು ದೊಡ್ಡವರಾದಾಗ ಇಬ್ಬರು ಒಟ್ಟಿಗೆ ಕಥೆಗಳನ್ನು ಓದಿ. ಪುಸ್ತಕ ಮತ್ತು ದಿನ ಪತ್ರಿಕೆಗಳನ್ನು ಓದುವಂತೆ ಅವರನ್ನು ಪ್ರೇರೇಪಿಸಿ. ಮಕ್ಕಳು ಪೋಷಕರಿಂದ ಸಾಕಷ್ಟು ವಿಷಯಗಳನ್ನು ಕಲಿಯುತ್ತಾರೆ. ಆದ್ದರಿಂದ ನೀವು ಓದುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮ್ಮ ಮಕ್ಕಳಿಗೆ ಮಾದರಿಯಾಗಿ.

 • ಮಕ್ಕಳು ತಮಗೆ ಆಸಕ್ತಿಯಿರುವ ಚಟುವಟಿಕೆಗಳು ಅಥವಾ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿ.

 • ಶಿಕ್ಷಕರೊಂದಿಗೆ ಮಾತನಾಡಿ ಅವರಿಗೆ ಸಮಸ್ಯೆಯನ್ನು ವಿವರಿಸಿ. ಶಿಕ್ಷಕರು, ಥೆರಪಿ ತಜ್ಞರು ಮತ್ತು ವಿಶೇಷ ಶಿಕ್ಷಣ ತಜ್ಞರೊಂದಿಗೆ ಮಾತನಾಡಿ ಕಲಿಕೆಯ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳಿ ಅಥವಾ ಮಗುವಿಗೆ ವೈಯಕ್ತಿಕ ಶಿಕ್ಷಣ ಯೋಜನೆಯನ್ನು ರೂಪಿಸಿ.

 • ಈ ಕುರಿತು ಸಹಾಯ ಮಾಡುವ ಸಪೋರ್ಟ್ ಗ್ರುಪ್ ಗಳಿಗೆ ಸೇರಿ. ಹಾಗೂ ಇದೇ ಸಮಸ್ಯೆಯನ್ನು ಎದುರಿಸುತ್ತಿರುವ ಇತರ ಪೋಷಕರಿಂದಲೂ ಸೂಕ್ತ ಬೆಂಬಲವನ್ನು ಪಡೆಯಿರಿ.

ಪ್ರೀತಿ ಮತ್ತು ಮಮತೆಯ ವಾತಾವರಣದಲ್ಲಿ ಮಕ್ಕಳು ಹೆಚ್ಚು ಸುರಕ್ಷೆಯ ಭಾವವನ್ನು ಹೊಂದುತ್ತಾರೆ. ಇಂಥ ಮಕ್ಕಳಿಗೆ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಅತ್ಯಗತ್ಯ. ಅವರ ಪ್ರಯತ್ನಗಳನ್ನು ಶ್ಲಾಘಿಸಿ. ಹಾಗೂ ಅವರಿಗೆ ತಮ್ಮ ದೌರ್ಬಲ್ಯಗಳ ಬಗ್ಗೆ ಗಮನ ನೀಡುವುದಕ್ಕಿಂತ ತಮಗಿರುವ ಸಾಮರ್ಥ್ಯದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಕೊಳ್ಳುವಂತೆ ಹುರಿದುಂಬಿಸಿ.

Q

ವಯಸ್ಕರಲ್ಲಿ ಡಿಸ್ಲೆಕ್ಸಿಯಾ

A

ನಿಮ್ಮಲ್ಲಿ ಡಿಸ್ಲೆಕ್ಸಿಯಾ ಲಕ್ಷಣಗಳಿರುವುದು ಕಂಡು ಬಂದರೆ ಅಥವಾ ಬಾಲ್ಯದಿಂದಲೂ ಈ ಸಮಸ್ಯೆಯಿಂದ ಹೊರಗೆ ಬರಲು ಸಾಧ್ಯವಾಗದಿದ್ದರೆ ಚಿಂತೆ ಮಾಡಬೇಡಿ. ಈ ಸಮಸ್ಯೆಯನ್ನು ದೊಡ್ಡವರಾದ ಮೇಲೂ ವಾಸಿ ಮಾಡಬಹುದು. ನಿಮಗೆ ಡಿಸ್ಲೆಕ್ಸಿಯಾ ಸಮಸ್ಯೆಯಿದ್ದರೆ ನೀವು ತಜ್ಞರ ನೆರವನ್ನು ಪಡೆಯಿರಿ. ಇದಲ್ಲದೆ ನೀವು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದಲೂ ನೆರವನ್ನು ಪಡೆಯಬಹುದು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org