ಡಿಸ್ಪ್ರಾಕ್ಸಿಯಾ

Q

ಡಿಸ್ಪ್ರಾಕ್ಸಿಯಾ ಎಂದರೇನು?

A

ಬೆಳವಣಿಗೆಗೆ ಸಂಬಂಧಿಸಿದ ಸಮನ್ವಯತೆಯ ನ್ಯೂನತೆಯ ಸಮಸ್ಯೆಯಿದು. ಇದು ಮಕ್ಕಳ ಒಟ್ಟು ಚಲನೆ ಮತ್ತು ಸ್ನಾಯುಗಳ ಚಲನಾ ಸಮನ್ವಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಡಿಸ್ಪ್ರಾಕ್ಸಿಯಾ ಸಮಸ್ಯೆಯಿರುವ ಮಕ್ಕಳು ಹಲ್ಲುಜ್ಜುವುದು, ಶೂ ಲೇಸ್ ಕಟ್ಟುವುದು, ವಸ್ತುಗಳನ್ನು ಹಿಡಿದುಕೊಳ್ಳುವುದು, ವಸ್ತುಗಳನ್ನು ಜೋಡಿಸುವುದು ಅಥವಾ ವಿವಿಧ ಭಂಗಿಗಳನ್ನು ಪ್ರದರ್ಶಿಸುವುದು ಮುಂತಾದ ಸ್ನಾಯುಗಳ ಚಲನಾ ಸಮನ್ವಯತೆ ಅಗತ್ಯವಿರುವ ಚಟುವಟಿಕೆಗಳನ್ನು ಮಾಡಲು ಕಷ್ಟ ಪಡುತ್ತಾರೆ.

ಈ ಸಮಸ್ಯೆಯು ಸಾಮಾನ್ಯವಾಗಿ ಡಿಸ್ಲೆಕ್ಸಿಯಾ, ಡಿಸ್ಕ್ಯಾಲ್ಕುಲಿಯ ಅಥವಾ ಎಡಿಎಚ್‌ಡಿ ಮುಂತಾದ ಸಮಸ್ಯೆಗಳ ಜೊತೆಗೆ ಕಾಣಿಸಿಕೊಳ್ಳುತ್ತದೆ.

 

Q

ಡಿಸ್ಪ್ರಾಕ್ಸಿಯಾ ಲಕ್ಷಣಗಳಾವುವು?

A

ಈ ಸಮಸ್ಯೆಯಿರುವ ಮಕ್ಕಳು ಈ ಕೆಳಗಿನ ಚಟುವಟಿಕೆಗಳನ್ನು ಮಾಡುವಾಗ ತೊಡಕುಗಳನ್ನು ಎದುರಿಸುತ್ತಾರೆ.

ಒಟ್ಟು ಚಲನಾ ಕೌಶಲ್ಯಗಳು

 • ವಸ್ತುಗಳು ಕೆಳಗೆ ಬೀಳದಂತೆ ಹಿಡಿದುಕೊಳ್ಳುವುದು.

 • ಆಟ ಆಡುವಾಗ ಅಥವಾ ವ್ಯಾಯಾಮ ಮಾಡುವಾಗ ದೈಹಿಕ ಚಲನೆಗಳನ್ನು ಮಾಡುವುದು.

 • ನಡೆಯುವುದು, ಜಿಗಿಯುವುದು, ಚೆಂಡನ್ನು ಎಸೆಯುವುದು ಅಥವಾ ಹಿಡಿದುಕೊಳ್ಳುವುದು ಅಥವಾ ಬೈಕ್ ಸವಾರಿ ಮಾಡುವುದು.

 • ವಸ್ತುಗಳಿಗೆ ಬಡಿಯದೆ ಅಥವಾ ಅವುಗಳನ್ನು ಎಡವದೆ ಚಲಿಸುವುದು.

 • ಕೈ ಮತ್ತು ಕಣ್ಣುಗಳ ಸಮನ್ವಯತೆ ಹೆಚ್ಚು ಬೇಕಿರುವ ಪಂದ್ಯಗಳು ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು.

ಸೂಕ್ಷ್ಮ ಚಲನಾ ಕೌಶಲ್ಯಗಳು

 • ಸೂಕ್ಷ್ಮ ಚಲನಾ ಕೌಶಲ್ಯ ಅಗತ್ಯವಿರುವ ಕೆಲಸವನ್ನು ಮಾಡುವುದು. ಉದಾಹರಣೆಗೆ ಬಟನ್ ಹಾಕುವುದು, ಪೆನ್ಸಿಲ್ ಹಿಡಿಯುವುದು ಅಥವಾ ಕತ್ತರಿಯಿಂದ ಕತ್ತರಿಸುವುದು.

 • ಸಣ್ಣ ವಸ್ತುಗಳೊಂದಿಗೆ ಆಟವಾಡುವುದು. ಅಂದರೆ ಬ್ಲಾಕ್‌ಗಳನ್ನು ನಿರ್ಮಿಸುವುದು ಅಥವಾ ಒಗಟಿನ ತುಣುಕುಗಳನ್ನು ಜೋಡಿಸುವುದು ಇತ್ಯಾದಿ.

ಮಾತು

 • ಧ್ವನಿಯ ಏರಿಳಿತ (ಉಚ್ಛಾರ, ವೇಗ, ಲಯ, ಮಟ್ಟ)

 • ಸ್ಪಷ್ಟವಾಗಿ ಮಾತನಾಡುವುದು ಮತ್ತು ತುಂಬಾ ನಿಧಾನವಾಗಿ ಮಾತನಾಡದಿರುವುದು.

ಸಾಮಾಜಿಕ-ಭಾವನಾತ್ಮಕ

 • ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡುವುದು. ಹಾಗೂ ಆಟ ಅಥವಾ ಸಂವಹನದಲ್ಲೂ ಆತ್ಮವಿಶ್ವಾಸ ಪ್ರದರ್ಶಿಸುವುದು.

 • ಗುಂಪು ಪಂದ್ಯಗಳಲ್ಲಿ ನಿರತವಾಗಿರುವುದು.

 • ಮಕ್ಕಳೊಂದಿಗೆ ಮತ್ತು ದೊಡ್ಡವರೊಂದಿಗೆ ಸಂವಹನ ಮಾಡುವುದು.

ಜ್ಞಾಪಕ ಶಕ್ತಿ ಮತ್ತು ಗಮನ: ಶಾಲೆ ಅಥವಾ ಮನೆಯಲ್ಲಿ ಕೊಟ್ಟ ಕೆಲಸಗಳನ್ನು ಜ್ಞಾಪಿಸಿಕೊಂಡು ಅದನ್ನು ಪೂರ್ಣಗೊಳಿಸುವುದು (ಶಾಲೆಯ ಬ್ಯಾಗ್ ತುಂಬಿಸುವುದು, ಹೋಮ್‌ವರ್ಕ್ ಮಾಡುವುದು, ಊಟದ ಡಬ್ಬಿ ಕೊಂಡೊಯ್ಯುವುದು ಇತ್ಯಾದಿ).

ಅಂತರ ಕಾಯ್ದುಕೊಳ್ಳುವುದು: ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವುದು ಅಥವಾ ಸರಿಯಾದ ಸ್ಥಳದಲ್ಲಿ ಇಡುವುದು.

Q

ಡಿಸ್ಪ್ರಾಕ್ಸಿಯಾ ಸಮಸ್ಯೆಗೆ ಕಾರಣಗಳೇನು?

A

ಈ ಸಮಸ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಈ ಸಮಸ್ಯೆಯು ನರವ್ಯೂಹಗಳ ಅಸಮರ್ಪಕ ಕಾರ್ಯ ನಿರ್ವಹಣೆಯಿಂದ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಮೆದುಳಿನಿಂದ ಸ್ನಾಯುಗಳಿಗೆ ತಲುಪುವ ನರವ್ಯೂಹದಲ್ಲಿ ದೋಷವಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

Q

ಡಿಸ್ಪ್ರಾಕ್ಸಿಯಾ ಪತ್ತೆ ಹಚ್ಚುವುದು ಹೇಗೆ?

A

ಈ ಸಮಸ್ಯೆಯನ್ನು ಪತ್ತೆ ಹಚ್ಚಲು ಯಾವುದೇ ವೈದ್ಯಕೀಯ ಪರೀಕ್ಷೆಗಳಿಲ್ಲ. ವೃತ್ತಿಪರ ಥೆರಪಿಸ್ಟ್‌ಗಳಂತಹ ವಿಶೇಷ ತಜ್ಞರು ಈ ಕೆಳಗಿನ ಮಾನದಂಡಗಳ ಮೂಲಕ ಸಮಸ್ಯೆಯನ್ನು ಪತ್ತೆ ಹಚ್ಚುತ್ತಾರೆ.

 • ಚಲನಾ ಕೌಶಲ್ಯ ಬೆಳವಣಿಗೆ ನಿಧಾನಗೊಳ್ಳುವುದು.

 • ದೌರ್ಬಲ್ಯವಾಗಿರುವ ಸ್ನಾಯುಗಳ ಚಲನಾ ಕೌಶಲ್ಯ. ಇದು ಸೆರೆಬ್ರಲ್ ಪಾಲ್ಸಿ ಮುಂತಾದ ನರ ಸಂಬಂಧಿತ ಸಮಸ್ಯೆಯಿಂದ ಬಂದಿರುವ ಲಕ್ಷಣವಲ್ಲ.

Q

ಡಿಸ್ಪ್ರಾಕ್ಸಿಯಾ ಚಿಕಿತ್ಸೆ

A

ಈ ಸಮಸ್ಯೆಯಿರುವ ಮಕ್ಕಳ ಪೋಷಕರು ವೃತ್ತಿಪರ ಥೆರಪಿ ತಜ್ಞರು, ವಾಕ್ ಚಿಕಿತ್ಸಕರು, ವಿಶೇಷ ಶಿಕ್ಷಣ ತಜ್ಞರು ಅಥವಾ ಮಕ್ಕಳ ಮನೋವೈದ್ಯರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರ ನೆರವನ್ನು ಪಡೆಯಬೇಕು.

Q

ಡಿಸ್ಪ್ರಾಕ್ಸಿಯಾ ಸಮಸ್ಯೆಯಿರುವ ಮಕ್ಕಳ ಆರೈಕೆ ಹೇಗಿರಬೇಕು?

A

ಈ ಸಮಸ್ಯೆಯಿರುವ ಮಕ್ಕಳಿಗೆ ತಮ್ಮ ಮಾತುಗಳನ್ನು, ಭಾವನೆಗಳನ್ನು ಅಥವಾ ಸಮಸ್ಯೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಪೋಷಕರು ಸೂಕ್ತ ಪ್ರೋತ್ಸಾಹ ನೀಡುವ ಮೂಲಕ ತಮ್ಮ ಮಕ್ಕಳು ಸಮಸ್ಯೆಗಳನ್ನು ಹೇಳಿಕೊಳ್ಳುವಂತೆ ಮಾಡಬೇಕು. ಇದಲ್ಲದೆ ಪೋಷಕರು ತಮ್ಮ ಮಕ್ಕಳು ಸುಲಭವಾದ ದೈಹಿಕ ಚಟುವಟಿಕೆಗಳನ್ನು ಮಾಡಲು ಉತ್ತೇಜಿಸಬೇಕು. ಇದರಿಂದ ಅವರಲ್ಲಿ ಸಮನ್ವಯತೆ ಸಾಮರ್ಥ್ಯ ಹೆಚ್ಚುತ್ತದೆ. ಈ ಮೂಲಕ ಅವರಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ.

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org