ತಿನ್ನುವ ಸಮಸ್ಯೆ

Q

ತಿನ್ನುವ ಸಮಸ್ಯೆಗಳು ಯಾವವು?

A

ಸಾಯಂಕಾಲ ಕೆಲಸ ಮುಗಿಸಿ ಕಛೇರಿಯಿಂದ ಮನೆಗೆ ಬರುತ್ತಿರುವಾಗಲೇ ನಿಮ್ಮ ಮನಸ್ಸು ರಾತ್ರಿಯ ಊಟದ ಬಗ್ಗೆ ಯೋಚಿಸಲು ಆರಂಭಿಸುತ್ತದೆ. ನಾನೇನು ತಿನ್ನಲು ಬಯಸುತ್ತೇನೆ? ಇಂದು ಅಡಿಗೆ ಮಾಡುವ ಮನಸ್ಸಿದೆಯೇ ಅಥವಾ ಹೊರಗಿನಿಂದ ತರಿಸುವುದೇ? ಇವೊತ್ತು ಚೈನೀಸ್ ಫುಡ್ ಆರ್ಡರ್ ಮಾಡುವುದೇ? ಮುಂತಾಗಿ ನಾವು ಯೋಚಿಸಲು ಶುರುಮಾಡುತ್ತೇವೆ.

ಆಹಾರವು ನಮ್ಮ ಜೀವನದ ಪ್ರಮುಖ ವಿಷಯವಾಗಿದೆ. ನಮಗೆಲ್ಲ ಬೇರೆ ಬೇರೆ ರುಚಿ ಮತ್ತು ಆಹಾರ ಪದ್ದತಿಯು ಅಭ್ಯಾಸವಿರುತ್ತದೆ. ಕಾಲ ಕಾಲಕ್ಕೆ ನಮ್ಮ ಆಹಾರಾಭಿರುಚಿಯು ಬದಲಾಗುತ್ತದೆ, ಕೆಲವೊಮ್ಮೆ ಡಯಟ್ ಪಾಲಿಸಿದರೆ ಕೆಲವೊಮ್ಮೆ ಬೇಕೆನಿಸಿದ್ದೆಲ್ಲಾ ತಿನ್ನುತ್ತೇವೆ. ಇವು ಆಹಾರಕ್ಕೆ ಸಂಬಂಧಿಸಿದ ಸಹಜ ಪ್ರವೃತ್ತಿಗಳು.

ಆದರೆ ಕೆಲವರ ಈ ಯೋಚನಾ ಲಹರಿ ಇಲ್ಲಿಗೆ ಮುಗಿಯುವುದಿಲ್ಲ. ಅವರು ಆಹಾರದ ಬಗ್ಗೆ ಅತಿಯಾಗಿ ಒಬ್ಸೆಸಿವ್ ಆಗಬಹುದು. ದೇಹದ ತೂಕ ಮತ್ತು ಸೌಂದರ್ಯದ ಬಗ್ಗೆ ಅತಿಯಾಗಿ ಚಿಂತೆ ಮಾಡಬಹುದು. ಇದರಿಂದ ಅವರು ತಮ್ಮ ಆಹಾರ ಪದ್ಧತಿಯನ್ನು ತೀವ್ರವಾಗಿ ಬದಲಾಯಿಸಿಕೊಳ್ಳಬಹುದು.. ಅವರು ದಿನನಿತ್ಯ ಅತಿ ಕಡಿಮೆ ಅಥವಾ ಅತಿ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸಲು ಆರಂಭಿಸಬಹುದು ಅಥವಾ ಹಲವು ಸಮಯದವರೆಗೆ ಆಹಾರ ಸೇವಿಸುವುದನ್ನೇ ನಿಲ್ಲಿಸಬಹುದು (ಧಾರ್ಮಿಕ, ಸಾಂಸ್ಕೃತಿಕ ಕಾರಣಗಳಿಗೆ ಉಪವಾಸ ಮಾಡುವುದನ್ನು ಹೊತುಪಡಿಸಿ).

ತಿನ್ನುವ ಸಮಸ್ಯೆಯು ಗಂಭೀರವಾದ ಮಾನಸಿಕ ಖಾಯಿಲೆಯಾಗಿದ್ದು, ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದರೆ, ಈ ಖಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದಷ್ಟು ಬೇಗ ವೈದ್ಯಕೀಯ ಸಹಾಯ ಪಡೆಯುವುದರಿಂದ ಶೀಘ್ರವಾಗಿ ಗುಣಮುಖ ಹೊಂದಲು ಸಾಧ್ಯವಿದೆ.

Q

ತಿನ್ನುವ ಸಮಸ್ಯೆಯ ಲಕ್ಷಣಗಳು ಯಾವವು?

A

ತಿನ್ನುವ ಸಮಸ್ಯೆಯ ಕೆಲವು ಲಕ್ಷಣಗಳೆಂದರೆ:

ನಡವಳಿಕೆಯಲ್ಲಿನ ಬದಲಾವಣೆಗಳು:

 • ವ್ಯಕ್ತಿಯು ಪದೇ ಪದೇ ಉಪವಾಸ ಮಾಡಬಹುದು ಮತ್ತು ಕ್ಯಾಲೋರಿಗಳ ಬಗ್ಗೆ ಅತಿಯಾಗಿ ಗಮನ ನೀಡಬಹುದು.
 • ಉಳಿದವರ ಜೊತೆ ಊಟ ಮಾಡುವುದನ್ನು ತಪ್ಪಿಸಿಕೊಳ್ಳಬಹುದು. ಊಟ ಮಾಡದೆ ಇದ್ದರೂ ಊಟವಾಗಿದೆಯೆಂದು ಸುಳ್ಳು ಹೇಳಬಹುದು. ಕೆಲವೊಮ್ಮೆ ಆಹಾರವನ್ನು ಗುಪ್ತವಾಗಿ ಒಬ್ಬಂಟಿಯಾಗಿ ತಿನ್ನಬಹುದು.
 • ಆಹಾರ ಸೇವಿಸಿದ ನಂತರ ಮತ್ತೆ ಮತ್ತೆ ಬಾತ್ ರೂಮಿಗೆ ಹೋಗಬಹುದು. ತಾವು ಸೇವಿಸಿದ ಆಹಾರವನ್ನು ಹೊರಹಾಕಲು ಅವರು ಈ ರೀತಿ ಮಾಡಬಹುದು.
 • ದಿನದಲ್ಲಿ ಹಲವಾರು ಬಾರಿ ತಮ್ಮ ತೂಕವನ್ನು ಪರೀಕ್ಷಿಸಿಕೊಳ್ಳಬಹುದು. ಪದೇ ಪದೇ ಕನ್ನಡಿಯಲ್ಲಿ ನೋಡಿಕೊಳ್ಳಬಹುದು.
 • ಅತಿಯಾಗಿ ವ್ಯಾಯಾಮದ ಗೀಳನ್ನು ಬೆಳೆಸಿಕೊಳ್ಳಬಹುದು. ಎಷ್ಟೆಂದರೆ, ಮಳೆ ಸುರಿಯುತ್ತಿರುವಾಗ ಅಥವಾ ಅನಾರೋಗ್ಯದಿಂದ ಬಳಲುತ್ತಿರುವಾಗಲೂ ಓಡಲು ಬಯಸಬಹುದು.

ದೈಹಿಕ ಲಕ್ಷಣಗಳು:

 • ತೂಕದಲ್ಲಿ ಶೀಘ್ರ ಬದಲಾವಣೆ ಅಥವಾ ಕಡಿಮೆ ಸಮಯದಲ್ಲಿ ತೂಕದಲ್ಲಿ ಗಣನೀಯ ಇಳಿಕೆ.
 • ಯಾವಾಗಲೂ ಆಯಾಸವೆನಿಸುವುದು, ಸರಿಯಾಗಿ ನಿದ್ರಿಸದಿರುವುದು, ಆಲಸ್ಯ ಮತ್ತು ದಿನನಿತ್ಯದ ಕೆಲಸವನ್ನು ಪೂರೈಸಲಾಗದಿರುವುದು.
 • ಬೆಚ್ಚಗಿನ ವಾತಾವಣದಲ್ಲೂ ಅತಿಯಾಗಿ ಚಳಿಯೆನಿಸುವುದು.
 • ವ್ಯಕ್ತಿಗೆ ತಲೆ ತಿರುಗಿದಂತೆ ಎನಿಸುವುದು.
 • ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ಅಥವಾ ಋತುಚಕ್ರವೇ ನಿಂತು ಹೋಗುವುದು

ಮಾನಸಿಕ ಲಕ್ಷಣಗಳು

 • ವ್ಯಕ್ತಿಗೆ ತೂಕ ಹೆಚ್ಚಾಗುವ ಕುರಿತು ಭಯ
 • ಆಹಾರದ ಕುರಿತು ಆತಂಕ
 • ತಮ್ಮ ಬಗ್ಗೆ ತಪ್ಪಾದ ತಿಳುವಳಿಕೆ. ತಾವು ಸರಿಯಾದ ತೂಕ ಹೊಂದಿರುವ ಕುರಿತು ಅಪನಂಬಿಕೆ.
 • ತಿನ್ನುವ ಸಮಸ್ಯೆ ಇರುವವರಲ್ಲಿ ಖಿನ್ನತೆ ಮತ್ತು ಆತಂಕವಿರುವುದು ಸಾಮಾನ್ಯ.

ನೀವು ಏನನ್ನು ತಿನ್ನುತೀರಿ ಎಂಬ ಬಗ್ಗೆ ಲಕ್ಷ್ಯ ವಹಿಸುವುದು ಮತ್ತು ಡಯಟ್ ಪಾಲಿಸುವುದು ಸಹಜ ನಡವಳಿಕೆಗಳು. ಡಯಟನ್ನು ಶಿಸ್ತಿನಿಂದ ಪಾಲಿಸುವುದು ತಿನ್ನುವ ಸಮಸ್ಯೆಯನ್ನು ಸೂಚಿಸುವುದಿಲ್ಲ. ಒಬ್ಬ ವ್ಯಕ್ತಿಗೆ ತಿನ್ನುವ ಸಮಸ್ಯೆಯುಂಟಾದಾಗ ಅವರು ಆಹಾರದೊಂದಿಗೆ ಅವೈಚಾರಿಕವಾಗಿ ವರ್ತಿಸುತ್ತಾರೆ ಮತ್ತು ತಮ್ಮ ದೇಹದ ಬಗ್ಗೆ ತಪ್ಪಾಗಿ ಭಾವಿಸುತ್ತಾರೆ. ಅಂತವರಿಗೆ ಡಯಟ್ ಮಾಡುವುದು ಗೀಳಾಗಿ ಬಿಡುತ್ತದೆ ಮತ್ತು ಡಯಟ್ ಯಾಕೆ ಮಾಡುತ್ತಿದ್ದೇನೆ ಎಂಬುದು ಮುಖ್ಯವೇ ಆಗುವುದಿಲ್ಲ. ಉದಾಹರಣೆಗೆ ಈಗಾಗಲೇ ಕಡಿಮೆ ತೂಕ ಹೊಂದಿರುವ ವ್ಯಕ್ತಿಯು ತಾನು ತೂಕ ಕಳೆದುಕೊಳ್ಳಬೇಕೆಂದು ಭಾವಿಸುವುದು.

Q

ತಿನ್ನುವ ಸಮಸ್ಯೆ ಹೇಗೆ ಉಂಟಾಗುತ್ತದೆ?

A

ಯಾವುದೇ ಒಂದು ನಿರ್ದಿಷ್ಟ ಕಾರಣದಿಂದ ತಿನ್ನುವ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುವುದಿಲ್ಲ. ಇದರ ಕಾರಣಗಳು ಸಂಕೀರ್ಣವಾಗಿರಬಹುದು.. ತಿನ್ನುವ ಸಮಸ್ಯೆಯು ಮಾನಸಿಕ, ಸಾಮಾಜಿಕ ಮತ್ತು ನಡವಳಿಕೆಯ ಪರಿಣಾಮವಾಗಿ ಉಂಟಾಗಬಹುದು. ಅಂತಹ ಕೆಲವು ಕಾರಣಗಳೆಂದರೆ.

ಮಾನಸಿಕ ಕಾರಣಗಳು: ನೀವು ಆತಂಕ, ಖಿನ್ನತೆ ಅಥವಾ ಒತ್ತಡದಿಂದ ಬಳಲುತ್ತಿದ್ದರೆ ಅಥವಾ ಕೆಲವು ವಿಷಯಗಳ ನಿಯಂತ್ರಣವು ಕೈತಪ್ಪಿ ಹೋಗುತ್ತಿವೆಯೆಂದು ಭಾವಿಸಿದರೆ ಅತಿಯಾಗಿ ತಿನ್ನುವುದು ಮತ್ತು ವ್ಯಾಯಾಮ ಮಾಡುವುದರಿಂದ ಭಾವನಾತ್ಮಕವಾಗಿ ನಿಮ್ಮ ಸಮಸ್ಯೆಯನ್ನು ಎದುರಿಸಲು ಬಯಸಬಹುದು.

ಸಾಮಾಜಿಕ ಕಾರಣಗಳು: ಸಮಾಜ ಮತ್ತು ಮಾಧ್ಯಮಗಳು (ಟಿವಿ, ಜಾಹೀರಾತು, ಚಲನ ಚಿತ್ರ) ಕೆಲವೊಮ್ಮೆ ದೇಹಾರೋಗ್ಯ ಮತ್ತು ಆಕಾರದ ಬಗ್ಗೆ ಕೃತಕವಾಗಿ ಹಾಗೂ ಅನಾವಶ್ಯಕವಾಗಿ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತದೆ. ಉದಾಹರಣೆಗೆ ತೆಳ್ಳಗಿರುವುದು ಮಾತ್ರ ಸೌಂದರ್ಯದ ಸಂಕೇತ ಎಂದು. ಅಂತಹ ಒತ್ತಡಕ್ಕೆ ಒಳಗಾಗುವುದರಿಂದ ಸ್ವಂತ ರೂಪದ ಕುರಿತು ಕೀಳರಿಮೆ ಮೂಡಬಹುದು. ಈ ಕಾರಣದಿಂದ ವ್ಯಕ್ತಿಯು ತೆಳ್ಳಗಾಗಲು ಉಪವಾಸ ಮಾಡಬಹುದು, ಕಡಿಮೆ ತಿನ್ನಬಹುದು, ಅಥವಾ ಅತಿಯಾಗಿ ವ್ಯಾಯಾಮ ಮಾಡಬಹುದು.

ನಡವಳಿಕೆ ಅಂಶಗಳು: ಕೆಲವು ನಿರ್ದಿಷ್ಟ ವ್ಯಕ್ತಿತ್ವವನ್ನು ಹೊಂದಿರುವವರು ಈ ಸಮಸ್ಯೆಗೆ ಒಳಗಾಗುವ ಸಂದರ್ಭವು ಹೆಚ್ಚಿರುತ್ತದೆ. ಒಬ್ಸೆಸಿವ್ ನಡವಳಿಕೆ ಹೊಂದಿರುವವರು, ಪರಿಪೂರ್ಣತೆಯ ಗೀಳಿನವರು ಮತ್ತು ತಮ್ಮನ್ನು ತಾವು ಅತಿಯಾಗಿ ವಿಮರ್ಶಿಸಿಕೊಳ್ಳುವವರು ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಜೀವನದಲ್ಲಿ ಸಂಭವಿಸುವ ಘಟನೆಗಳು: ತೂಕದ ಕುರಿತು ಹೀಯಾಳಿಕೆಗೆ ಒಳಗಾದವರು, ದೈಹಿಕ ಅಥವಾ ಲೈಂಗಿಕ ಶೋಷಣೆಗೆ ಒಳಗಾದವರು ತಮ್ಮ ಭಾವನಾತ್ಮಕ ಒತ್ತಡದಿಂದಾಗಿ ಈ ಸಮಸ್ಯೆಗೆ ಒಳಗಾಗಬಹುದು.

ಇನ್ನಿತರ ಒತ್ತಡದ ಅಂಶಗಳೆಂದರೆ ಪ್ರೀತಿ ಪಾತ್ರರ ಅಗಲುವಿಕೆ, ವಿದ್ಯಾಭ್ಯಾಸದಲ್ಲಿ ತೊಂದರೆಯನ್ನು ಅನುಭವಿಸುವುದು ಮುಂತಾದ ಕಾರಣಗಳು.

Q

ವಿವಿಧ ರೀತಿಯ ತಿನ್ನುವ ಸಮಸ್ಯೆಗಳು

A

ಸಾಮಾನ್ಯವಾದ ತಿನ್ನುವ ಸಮಸ್ಯೆಗಳೆಂದರೆ

 • ಅನೊರೆಕ್ಸಿಯಾ ನರ್ವೋಸಾ: ಇದರಿಂದ ಬಳಲುತ್ತಿರುವವರು ನಿರಂತರವಾಗಿ ಹಸಿವೆಯನ್ನು ಸಹಿಸುತ್ತಾರೆ ಮತ್ತು ತೂಕ ಹೆಚ್ಚಾಗುವ ಕುರಿತು ತೀವ್ರ ಭಯಹೊಂದಿರುತ್ತಾರೆ. ಅವರು ಸಾಮಾನ್ಯ ತೂಕಕ್ಕಿಂತ ಅತಿ ಕಡಿಮೆ ತೂಕ ಹೊಂದಿದ್ದರೂ ತಾವು ಅತಿ ಹೆಚ್ಚು ತೂಕ ಹೊಂದಿದ್ದೇವೆ ಎಂದು ತಿಳಿದಿರುತ್ತಾರೆ. ಅವರ ಆತ್ಮಗೌರವವು ದೈಹಿಕ ಆಕಾರವನ್ನು ಅವಲಂಬಿಸಿರುತ್ತದೆ.
 • ಬಿಲಿಮಿಯಾ ನರ್ವೋಸಾ: ಈ ಸಮಸ್ಯೆಯಿಂದ ಬಳಲುತ್ತಿರುವವರು ಒಮ್ಮೊಮ್ಮೆ ಬಿಂಜ್ ಈಟಿಂಗ್ (binge eating) ನಲ್ಲಿ ತೊಡಗುತ್ತಾರೆ ನಂತರ ತಿಂದ ಆಹಾರವನ್ನು ಬಲವಂತವಾಗಿ ಹೊರಹಾಕುತ್ತಾರೆ (ಒತ್ತಾಯದಿಂದ ವಾಂತಿ ಮಾಡುವುದು) ಅತಿಯಾದ ವ್ಯಾಯಾಮ ಮಾಡುವುದು, ಲ್ಯಾಕ್ಸಟಿವ್, ಡಿಯುರೆಟಿಕ್ ಗಳನ್ನು ಬಳಸುವುದು ಮತ್ತು ದೀರ್ಘ ವಾದ ಉಪವಾಸದ ಅವಧಿ ಇದರ ಇತರ ಲಕ್ಷಣಗಳು. ಅವರ ಆತ್ಮಗೌರವವು ಅವರಿಗೆ ಆಹಾರದ ಮೇಲೆ ಇರುವ ನಿಯಂತ್ರಣದ ಜೊತೆಗೆ ಕೂಡಿಕೊಂಡಿರುವುದರಿಂದ ವ್ಯಕ್ತಿಗಳು ಈ ರೀತಿ ನಡೆದುಕೊಳ್ಳುತ್ತಾರೆ.
 • ಬಿಂಜ್ ಈಟಿಂಗ್ ಸಮಸ್ಯೆ: ಈ ತೊಂದರೆಯಿರುವವರು ಕೆಲವು ಸಲ ನಿಯಂತ್ರಣ ಮೀರಿ ತಿನ್ನುತ್ತಾರೆ. ಇವರಿಗೆ ತೂಕ ಹೆಚ್ಚಾಗುವ ಭಯವಿರುವುದಿಲ್ಲ ಅಥವಾ ತಿಂದಿದ್ದನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸುವುದಿಲ್ಲ. ಆದರೆ ಅವರು ತಮ್ಮ ಆಹಾರಾಭ್ಯಾಸದ ಬಗ್ಗೆ ನಾಚಿಕೆ ಹೊಂದಿರುತ್ತಾರೆ. ಇದರಿಂದಾಗಿ ಇವರು ಕೆಲವೊಮ್ಮೆ ಹಸಿವಿದ್ದಾಗಲೂ ಗುಪ್ತವಾಗಿ ತಿನ್ನಲು ಬಯಸುತ್ತಾರೆ.
 • ನಿರ್ದಿಷ್ಟಪಡಿಸಲಾಗದ ತಿನ್ನುವ ಸಮಸ್ಯೆ (EDNOS): ಈ ತೊಂದರೆಯಿರುವವರು ಮೇಲೆ ತಿಳಿಸಿದ ಸಮಸ್ಯೆಗಳಲ್ಲಿರುವ ಲಕ್ಷಣಗಳನ್ನೇ ತೋರ್ಪಡಿಸಿದರೂ ಕೂಡ ಅದನ್ನು ಮೇಲಿನ ಯಾವುದೇ ಒಂದು ತೊಂದರೆಗೆ ಸೀಮಿತಗೊಳಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ಎಟಿಪಿಕಲ್ ಅನೊರೆಕ್ಸಿಯಾದಿಂದ ಬಳಲುತ್ತಿರುವ ವ್ಯಕ್ತಿ ಬಹಳ ದಿನಗಳ ಕಾಲ ಆಹಾರವನ್ನು ಬಿಟ್ಟಿದ್ದರೂ ಕೂಡ ಅತೀ ಕಡಿಮೆ ತೂಕದ ಸಮಸ್ಯೆಗೆ ಒಳಗಾಗುವುದಿಲ್ಲ. ಇನ್ನೊಂದು ಉದಾಹರಣೆ, ವ್ಯಕ್ತಿಯು ಆರೋಗ್ಯಕರ ತೂಕವನ್ನು ಉಳಿಸಿಕೊಳ್ಳಲು ಸ್ವಲ್ಪವೇ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದರೂ ತದನಂತರದಲ್ಲಿ ವಾಂತಿಮಾಡಿ ಹೊಟ್ಟೆ ಖಾಲಿಮಾಡಿಕೊಳ್ಳುವುದು.

Q

ತಿನ್ನುವ ಸಮಸ್ಯೆಗೆ ಚಿಕಿತ್ಸೆ

A

ತಿನ್ನುವ ಸಮಸ್ಯೆಗಳು ಸಂಕೀರ್ಣವಾದ ಮಾನಸಿಕ ಸಮಸ್ಯೆಯಾಗಿದ್ದು, ನಿಮ್ಮ ದೈಹಿಕ ಆರೋಗ್ಯದ ಮೇಲೂ ಹಾನಿಕಾರಕ ಪರಿಣಾಮ ಬೀರುತ್ತದೆ. ಅದಾಗ್ಯೂ ಸೂಕ್ತವಾದ ಚಿಕಿತ್ಸೆ ಪಡೆದು ಈ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು. ಆದಷ್ಟು ಬೇಗ ಚಿಕಿತ್ಸೆ ಪಡೆದರೆ ಚೇತರಿಸಿಕೊಳ್ಳುವ ಪ್ರಮಾಣ ಹೆಚ್ಚಿರುತ್ತದೆ.

ಚಿಕಿತ್ಸೆಯನ್ನು ಸಾಮಾನ್ಯವಾಗಿ ತಜ್ಞರ ತಂಡವು ಕೈಗೊಳ್ಳುತ್ತದೆ. ಚಿಕಿತ್ಸೆಯು ನಿಮ್ಮ ದೈಹಿಕ, ಮಾನಸಿಕ ಆರೋಗ್ಯ ರಕ್ಷಣೆ, ಪೋಷಕಾಂಶಗಳ ಬಳಕೆ ಮತ್ತು ಸರಿಯಾದ ಆಹಾರಾಭ್ಯಾಸವನ್ನು ಬೆಳೆಸಿಕೊಳ್ಳುವುದರ ಕುರಿತು ಮಾಹಿತಿಯನ್ನು ಒಳಗೊಂಡಿರುತ್ತದೆ.

ಮುಂದಿನ ಹಂತವು ನೀವು ಸರಿಯಾದ ತೂಕ ಹೊಂದುವುದನ್ನು ಖಚಿತಪಡಿಸುವುದಾಗಿದೆ. ನಿಮಗೆ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿ ನೀವು ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಲು ನೆರವು ನೀಡುತ್ತಾರೆ. ನಿಮ್ಮ ಸಮಸ್ಯೆಯ ಗಂಭೀರತೆಯ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಿಸ ಬೇಕೆ ಬೇಡವೇ ಎಂದು ನಿರ್ಧರಿಸಲಾಗುತ್ತದೆ ಮೊದಲಿಗೆ ನಿಮ್ಮ ಪರಿಸ್ಥಿತಿಯನ್ನು ಸಹಜಗೊಳಿಸಿ ನಂತರ ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯಾಗದಂತೆ ಚಿಕಿತ್ಸೆ ನೀಡಲಾಗುತ್ತದೆ.

ನೀವು ಸರಿಯಾದ ತೂಕ ಹೊಂದಿರುವುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ನೀವು ಆರೋಗ್ಯಯುತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ನೆರವು ನೀಡಲಾಗುತ್ತದೆ. ಚೇತರಿಕೆಯಲ್ಲಿ ಆಪ್ತ ಸಮಾಲೋಚನೆ (counseling) ಮತ್ತು ಥೆರಪಿಗಳೂ ಕೂಡ ಅಗತ್ಯವಾಗಿದೆ. ಇವು ತೂಕದ ಕುರಿತ ಭಯವನ್ನು ನಿವಾರಿಸಲು ಮತ್ತು ಆಹಾರ, ತೂಕ ಮತ್ತು ದೇಹದ ಕುರಿತು ಸರಿಯಾದ ಯೋಚನೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

Q

ತಿನ್ನುವ ಸಮಸ್ಯೆಯಿರುವವರ ಆರೈಕೆ

A

ತಿನ್ನುವ ಸಮಸ್ಯೆಯಿರುವ ವ್ಯಕ್ತಿಯ ಆರೈಕೆ ಮಾಡುವುದು ಕಷ್ಟದ ಕೆಲಸವಾದರೂ ಸಹ ನಿಮ್ಮ ಬೆಂಬಲದಿಂದ ಅವರು ಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಈ ಸಮಸ್ಯೆಯಿರುವವರು ತಮ್ಮ ತೊಂದರೆಯ ಕುರಿತು ವಿಪರೀತ ನಾಚಿಕೆ ಹೊಂದಿರುತ್ತಾರೆ. ಕೆಲವೊಮ್ಮೆ ಅವರಿಗೆ ತಮಗೆ ಸಮಸ್ಯೆಯಿರುವುದೇ ತಿಳಿದಿರುವುದಿಲ್ಲ. ಅಥವಾ ಸಮಸ್ಯೆಯಿರುವುದನ್ನು ಒಪ್ಪುವುದಿಲ್ಲ ಆದರೂ ಅವರು ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ. ಅವರ ಬಳಿ ಈ ಸಮಸ್ಯೆಯ ಕುರಿತು ಚರ್ಚಿಸಿ, ಆದರೆ ಅವರನ್ನು ಒತ್ತಾಯಿಸಬೇಡಿ. ಅಥವಾ ಶೀಘ್ರ ನಿರ್ಣಯಕ್ಕೆ ಬರಬೇಡಿ. ಅವರಾಗಿಯೇ ತಮ್ಮ ಸಮಸ್ಯೆಯ ಬಗ್ಗೆ ಮಾತನಾಡಲು ಅವಕಾಶ ನೀಡಿ. ತಿನ್ನುವ ಸಮಸ್ಯೆಯು ಕೇವಲ ಆಹಾರ ಮತ್ತು ತೂಕಕ್ಕೆ ಮಾತ್ರ ಸಂಬಂಧಿಸಿರುವುದಿಲ್ಲ. ಬದಲಿಗೆ ಅವರಲ್ಲಿರುವ ಬಗೆಹರಿಸಿಕೊಳ್ಳಲಾರದ ಭಾವನಾತ್ಮಕ ಸಮಸ್ಯೆಗಳಿಗೂ ಸಂಬಂಧಪಟ್ಟಿರುತ್ತದೆ. ಆದ್ದರಿಂದ ಚಿಕಿತ್ಸೆಯ ಸಮಯದಲ್ಲಿ ಹಾಗೂ ಚೇತರಿಸಿಕೊಳ್ಳುವ ಹಂತದಲ್ಲಿ ಬೆಂಬಲದ ಅವಶ್ಯಕತೆಯಿರುತ್ತದೆ.

ಆದ್ದರಿಂದ ಕುಟುಂಬದವರು ಆರೋಗ್ಯಕರ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ದೇಹದ ತೂಕ ಮತ್ತು ಆಕೃತಿಯ ಬಗ್ಗೆ ಚರ್ಚಿಸುವುದನ್ನು ಆದಷ್ಟು ಕಡಿಮೆಮಾಡಬೇಕು. ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಸಮಯವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟು ವೈದ್ಯರೊಂದಿಗೆ ಸಹಕರಿಸಿ.

Q

ತಿನ್ನುವ ಸಮಸ್ಯೆಯನ್ನು ನಿಭಾಯಿಸುವ ಬಗೆ

A

ಕೆಲವೊಮ್ಮೆ ಸಮಸ್ಯೆಯಿಂದ ಹೊರಬರುವುದು ದೀರ್ಘವಾಗಿದ್ದರೂ ಸಹ ನೀವು ತಾಳ್ಮೆಯಿಂದ ಚಿಕಿತ್ಸೆಯನ್ನು ಮುಂದುವರಿಸಬೇಕು. ಕೆಲವು ವ್ಯಕ್ತಿಗಳು ತಮ್ಮ ಸಮಸ್ಯೆಗಳನ್ನು ನಿಭಾಯಿಸಲು ತಿಳಿಯದೆ ತಿನ್ನುವ ಸಮಸ್ಯೆಗಳನ್ನು ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ಸಮಸ್ಯೆಗಳನ್ನು ನಿಭಾಯಿಸುವ ಸೂಕ್ತ ಮಾರ್ಗವನ್ನು ಹುಡುಕಿಕೊಳ್ಳುವುದು ಪ್ರಮುಖವಾಗುತ್ತದೆ. ಹಾಗೆ ಮಾಡಲು ಆಹಾರದ ಮೇಲೆ (ಅದನ್ನು ನಿರಾಕರಿಸುವ ಅಥವಾ ಅತಿಯಾಗಿ ತಿನ್ನುವ ಮೂಲಕ) ನಿಯಂತ್ರಣ ಸಾಧಿಸಿ ಸಮಾಧಾನ ಪಟ್ಟುಕೊಳ್ಳಬಹುದು. ಆದಷ್ಟು ಒಬ್ಬಂಟಿಯಾಗಿರುವುದನ್ನು ಕಡಿಮೆ ಮಾಡಿ. ಒಬ್ಬರೇ ಇರುವಾಗ ನಿಮ್ಮ ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸುವುದು ಕಷ್ಟವಾಗಬಹುದು. ನಿಮಗೆ ಏನಾದರೂ ಸಮಸ್ಯೆಯಿರುವಾಗ ಯಾರ ಬಳಿಯಾದರೂ ಹಂಚಿಕೊಂಡು ಹಗುರಾಗಿ.

Related Stories

No stories found.