ಸಾಮಾನ್ಯೀಕರಣಗೊಂಡ ಆತಂಕದ ಖಾಯಿಲೆ (GAD)

Q

ಗ್ಯಾಡ್‌ ಎಂದರೇನು?

A

ಸಾಮಾನ್ಯವಾಗಿ ನಾವೆಲ್ಲರೂ ಯಾವುದೇ ಪರೀಕ್ಷೆ, ಸಂದರ್ಶನಕ್ಕೂ ಮೊದಲು ಆತಂಕಪಡುತ್ತೇವೆ, ನಮ್ಮ ಹಣಕಾಸಿನ ಪರಿಸ್ಥಿತಿಯ ಕುರಿತು ಚಿಂತಿಸುತ್ತೇವೆ ಅಥವಾ ಕೆಲಸದ ಗಡುವಿನಿಂದ ಒತ್ತಡಕ್ಕೆ ಒಳಗಾಗುತ್ತೇವೆ. ನಿತ್ಯಜೀವನದಲ್ಲಿ ನಾವು ಅನುಭವಿಸುವ ಇಂಥ ಆತಂಕಗಳು ಸ್ವಾಭಾವಿಕ. ನಿಜವಾಗಿ ಹೇಳಬೇಕೆಂದರೆ, ಇಂತಹ ಸ್ಥಿತಿ ನಮ್ಮನ್ನು ಉತ್ತಮವಾಗಿ ಕಾರ್ಯನಿರ್ವಸುವಂತೆ ಮಾಡುವಲ್ಲಿ ನೆರವಾಗುತ್ತದೆ.

ಸಾಮಾನ್ಯ ಆತಂಕದ ಖಾಯಿಲೆಯಿಂದ (GAD), ಬಳಲುತ್ತಿರುವ ವ್ಯಕ್ತಿಗೆ ಬಹುತೇಕ ಸಾರಿ ತನ್ನ ಆತಂಕವು ಅನವಶ್ಯಕವಾಗಿದೆ ಎಂಬುದು ತಿಳಿದಿರುತ್ತದೆಯಾದರೂ, ದೀರ್ಘಕಾಲದವರೆಗೆ, ವಿನಾಕಾರಣ, ಹೆಚ್ಚಿನದಾಗಿ ಚಿಂತೆ ಅಥವಾ ಆತಂಕಕ್ಕೆ ಒಳಗಾದವನಂತೆ ಕಾಣುತ್ತಾನೆ. ಅಂತಹವರಲ್ಲಿ ಈ ಭಾವನೆಗಳ ನಿಯಂತ್ರಣ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ದೈನಂದಿನ ಕೆಲಸವನ್ನು ಪೂರೈಸಬೇಕೆಂಬ ಯೋಚನೆ ಕೂಡಾ ಅಂತವರನ್ನು ಆತಂಕಕ್ಕೆ ತಳ್ಳಬಹುದು.

Q

ಗ್ಯಾಡ್‌ನ ಲಕ್ಷಣಗಳೇನು?

A

ಇತರೆ ಆತಂಕದ ಖಾಯಿಲೆಗಳಲ್ಲಿರುವಂತೆ ಗ್ಯಾಡ್‌ನ ಗುಣಲಕ್ಷಣಗಳು ಇರುತ್ತವೆ. ಬಹುತೇಕವಾಗಿ ಸಾಮಾನ್ಯವಾಗಿರುವ ಲಕ್ಷಣಗಳೆಂದರೆ:

  • ನಡುವಳಿಕೆಯಲ್ಲಿ ಕಂಡುಬರುವ ಲಕ್ಷಣಗಳು: ವ್ಯಕ್ತಿ ಕಿರಿಕಿರಿಗೊಳ್ಳುವುದು, ಸುಲಭವಾಗಿ ಬೆಚ್ಚಿ ಬೀಳುವುದು ಮತ್ತು ಏಕಾಗ್ರತೆಗೆ ಪರದಾಡುವುದು.

  • ದೈಹಿಕ ಲಕ್ಷಣಗಳು: ನಿಶ್ಯಕ್ತಿ, ಹೊಟ್ಟೆತೊಳೆಸುವಿಕೆ, ತಲೆ ಮತ್ತು ದೇಹದ ನೋವು, ಬೆವರು, ಉಸಿರಾಟದ ತೊಂದರೆ ಹಾಗೂ ತಲೆತಿರುಗುವಿಕೆ ಮುಂತಾದ ದೈಹಿಕ ತೊಂದರೆಗಳು ಕಂಡುಬರುತ್ತವೆ.

ನಿಮಗೆ ಪರಿಚಯವಿರುವ ಯಾವುದೇ ವ್ಯಕ್ತಿಗಳಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ, ನೀವು ಅವರೊಂದಿಗೆ ಮಾತನಾಡಿ ವೃತ್ತಿಪರರ ಸಹಾಯ ಪಡೆಯುವಂತೆ ತಿಳಿಹೇಳಲು ಪ್ರಯತ್ನಿಸಬೇಕು.

Q

ಗ್ಯಾಡ್‌ಗೆ ಕಾರಣಗಳೇನು?

A

ಇತರ ಹಲವು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಂತೆಯೇ ಈ ಖಾಯಿಲೆಯ ನಿರ್ದಿಷ್ಟ ಕಾರಣ ತಿಳಿದಿಲ್ಲ. ಮೆದುಳಿನ ಮತ್ತು ನರವ್ಯೂಹದ ಭಾಗಗಳು ಭಯ ಅಥವಾ ಆತಂಕ ಸೃಷ್ಟಿಯಲ್ಲಿ ಪಾತ್ರ ವಹಿಸುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಕೆಲ ವೇಳೆ, ರೋಗಿ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರ ಮಕ್ಕಳಲ್ಲಿ ಆತಂಕದ ಖಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಮನೋಸಾಮಾಜಿಕ ಅಂಶಗಳಾದ ದೈನಂದಿನ ಒತ್ತಡ, ಕೆಲಸದ ಒತ್ತಡ, ಹಣಕಾಸಿನ ಸಮಸ್ಯೆಗಳು ಇತ್ಯಾದಿಗಳು ಗ್ಯಾಡ್‌ಗೆ ಕಾರಣವಾಗಬಹುದು. 

Q

ಗ್ಯಾಡ್‌ಗೆ ಚಿಕಿತ್ಸೆ

A

ಈ ಖಾಯಿಲೆಯಿಂದ ವ್ಯಕ್ತಿಯೊಬ್ಬನಿಗೆ ಸಾಕಷ್ಟು ಆಯಾಸವಾಗಬಹುದು. ಆದರೆ ಇದನ್ನು ಚಿಕಿತ್ಸೆಗೊಳಪಡಿಸಬಹುದು. ಈ ಆತಂಕ ಸಮಸ್ಯೆಗೆ ಔಷಧ ಅಥವಾ ಮಾನಸಿಕ ಚಿಕಿತ್ಸೆ ಅಥವಾ ಇವೆರೆಡರ ಸಮ್ಮಿಶ್ರಣದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ), ಗ್ಯಾಡ್‌ಗೆ ವಿಶೇಷವಾಗಿ ಪರಿಣಾಮಕಾರಿಯಾಗಿರುವ ಚಿಕಿತ್ಸೆ ಎಂದು ಸಾಬೀತಾಗಿದೆ. ಆತಂಕದಿಂದ ಉಂಟಾಗುವ ಮನೋವೇದನೆಗಳನ್ನು ಶಮನಗೊಳಿಸಲು ಔಷಧಗಳು ಸಹಾಯಮಾಡುತ್ತವೆ.

Q

ಗ್ಯಾಡ್‌ನಿಂದ ಬಳಲುತ್ತಿರುವವರ ಆರೈಕೆ

A

ಯಾರಾದರು ಗ್ಯಾಡ್‌ನ ಗುಣಲಕ್ಷಣ ಹೊಂದಿದ್ದರೆ ಅವರ ಚೇತರಿಕೆಗೆ ಸಹಾಯ ಮಾಡುವಲ್ಲಿ ನೀವು ಪ್ರಮುಖ ಪಾತ್ರ ವಹಿಸಬಹುದು. ಮೊಟ್ಟಮೊದಲು, ನೀವು ಈ ಖಾಯಿಲೆ ಕುರಿತು ತಿಳಿದುಕೊಳ್ಳಬೇಕು. ಆಗ ಮಾತ್ರ ವ್ಯಕ್ತಿಯ ಸಮಸ್ಯೆಯನ್ನು ಅರ್ಥೈಸಿಕೊಳ್ಳಲು ಸಾಧ್ಯ. ಅವರಿಗೆ ವೃತ್ತಿಪರ ಸಹಾಯ ಪಡೆಯಲು ಉತ್ತೇಜಿಸಿ. ಚಿಕಿತ್ಸೆಯ ಪರಿಣಾಮದ ಕುರಿತು ಅವರಿಗೆ ತಿಳಿಹೇಳಿ. ವೈದ್ಯರನ್ನು ಭೇಟಿಮಾಡುವ ಸಂದರ್ಭದಲ್ಲಿ ಅವರೊಂದಿಗೆ ನೀವೂ ಹೋಗಿ.

Q

ನಿಮ್ಮನ್ನು ನೀವೇ ನೋಡಿಕೊಳ್ಳಿ

A

ಗ್ಯಾಡ್‌ ಸಮಸ್ಯೆಯನ್ನು ನಿಭಾಯಿಸಲು ಹಲವು ಸ್ವಯಂ ತಂತ್ರಗಳಿವೆಯಾದರೂ, ರೋಗಪತ್ತೆ, ಅದಕ್ಕನುಗುಣವಾದ ಚಿಕಿತ್ಸೆ ಮತ್ತು ಔಷಧದ ಯೋಜನೆಗಾಗಿ ನೀವು ಮೊದಲು ಮನೋವೈದ್ಯರನ್ನು ಸಂಪರ್ಕಿಸಬೇಕು. ಚಿಕಿತ್ಸೆಯೊಂದಿಗೆ ಸ್ವಯಂ ತಂತ್ರಗಳನ್ನು ಅನುಸರಿಸಬಹುದೇ ವಿನಃ ಸ್ವಯಂ ತತಂತ್ರಗಳೇ ಚಿಕಿತ್ಸೆಗೆ ಪರ್ಯಾಯ ಮಾರ್ಗ ಅಲ್ಲ ಎಂಬುದನ್ನು ತಿಳಿದಿರಬೇಕು. ಧ್ಯಾನ ಮತ್ತು ವಿಶ್ರಾಂತಿಯಂತಹ ತಂತ್ರಗಳು ಆತಂಕದಿಂದ ಮುಕ್ತಿ ಹೊಂದಲು ಪರಿಣಾಮಕಾರಿ ಮಾರ್ಗಗಳು. ಬಹುಕಾಲದವರೆಗೆ ಇವುಗಳನ್ನು ಅಭ್ಯಾಸ ಮಾಡುವುದರಿಂದ ಒಟ್ಟಾರೆ ಆತಂಕದ ಮಟ್ಟವನ್ನು ಕಡಿಮೆಗೊಳಿಸುವಲ್ಲಿ ನೆರವಿಗೆ ಬರುತ್ತವೆ. ಆರೋಗ್ಯಯುತ ಆಹಾರ ಸೇವನೆ, ನಿತ್ಯ ವ್ಯಾಯಾಮ ಮಾಡುವುದು, ಅಗತ್ಯದಷ್ಟು ನಿದ್ದೆ ಮುಂತಾಗಿ ನಿಮ್ಮ ಜೀವನಶೈಲಿಯಲ್ಲಿ ಸುಧಾರಣೆ ಮಾಡಿಕೊಳ್ಳುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org