ವ್ಯಸನಕ್ಕೆ ಚಿಕಿತ್ಸೆ

ಮಾದಕ ವಸ್ತುಗಳಿಂದ ದೂರ ಉಳಿದು ಜೀವನವನ್ನು ರೂಪಿಸಿಕೊಳ್ಳಲು ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ

ವ್ಯಸನವು ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತೆ ನಿರಂತರವಾಗಿ ಕಾಡುವ, ಮತ್ತೆ ಮತ್ತೆ ಮರುಕಳಿಸಬಹುದಾದ ಅಸ್ವಸ್ಥತೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರ ಉಳಿದು ಜೀವನವನ್ನು ರೂಪಿಸಿಕೊಳ್ಳಲು ಸಹಾಯಕವಾಗುವಂತೆ ರೋಗಿಯು ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಸಾಮಾನ್ಯವಾಗಿ, ಒಮ್ಮೆ ಚಿಕಿತ್ಸೆ ಆರಂಭಗೊಂಡರೆ, ಕೆಲವೇ ದಿನಗಳಲ್ಲಿ ‘ಗುಣವಾಗುತ್ತದೆ’ ಎಂದು ಹೆಚ್ಚಿನ ಜನ ನಿರೀಕ್ಷಿಸುತ್ತಾರೆ. ವಿಥ್ಡ್ರಾವಲ್ ಸಿಂಪ್ಟಮ್ಸ್ (withdrawal symptoms), ಮಾದಕ ವಸ್ತುಗಳ ಅತಿಯಾದ ಬಯಕೆಯಿಂದಾಗಿ ಮತ್ತು ಅಸ್ವಸ್ಥತೆ ಮರುಕಳಿಸುವ ಕಾರಣದಿಂದಾಗಿ ಈ ಚಿಕಿತ್ಸಾ ವಿಧಾನದಲ್ಲಿ ಚೇತರಿಕೆಯು ಹೆಚ್ಚು ಕಷ್ಟಕರ. ಇದು ಕೇವಲ ಇಚ್ಛೆಯ ವಿಷಯ ಮಾತ್ರವಲ್ಲ. ಚಿಕಿತ್ಸಾ ವೇಳೆಯಲ್ಲಿ ಇನ್ನಿತರ ಅನೇಕ ಅಂಶಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ.

ಪ್ರಾಥಮಿಕವಾಗಿ ಚಿಕಿತ್ಸೆಯ ಚಕ್ರವು ಡಿಟಾಕ್ಸ್ ಅಂದರೆ, ರೋಗಿಯು ಮಾದಕ ವಸ್ತುಗಳನ್ನು ಸೇವಿಸುವುದನ್ನು ನಿಲ್ಲಿಸುವುದರಿಂದ ಪ್ರಾರಂಭಗೊಳ್ಳುತ್ತದೆ. ಈ ಹಂತದಲ್ಲಿ ರೋಗಿಯು ವಿಥ್ಡ್ರಾವಲ್ ಸಿಂಪ್ಟಮ್ಮುಗಳನ್ನು ಅನುಭವಿಸತೊಡಗುತ್ತಾನೆ. ವೈದ್ಯರು ವಿಥ್ಡ್ರಾವಲ್ ಸಿಂಪ್ಟಮ್ಸ್ ಎದುರಿಸಲು ಔಷಧಗಳನ್ನು ನೀಡುತ್ತಾರೆ. ಇದರಿಂದಾಗಿ ರೋಗಿಯು ಮತ್ತೆ ಮಾದಕ ವಸ್ತುವಿನ ಮೊರೆ ಹೋಗುವುದು ತಪ್ಪುತ್ತದೆ.

ವೈದ್ಯರು ರೋಗಿಯ ದೈಹಿಕ ಆರೋಗ್ಯದ ಪರಿಸ್ಥಿತಿ ಹೇಗಿದೆ? ಅವನ ಅಥವಾ ಅವಳ ದೇಹದಲ್ಲಿ ಯಾವುದಾದರೂ ಗಾಯಗಳಾಗಿವೆಯೆ? ಬೇರೆ ಏನಾದರೂ ಸಂಕೀರ್ಣವಾದ ಅಸ್ವಸ್ಥತೆಗಳಿವೆಯೆ? ಎಂದು ಸಂಪೂರ್ಣವಾಗಿ ಪರೀಕ್ಷಿಸುತ್ತಾರೆ. ಅಗತ್ಯವಿದ್ದರೆ ಉಳಿದ ವೈದ್ಯಕೀಯ ಪರೀಕ್ಷೆಗಳಾದ ಇಲೆಕ್ಟ್ರೋಎನ್ಸೆಫೆಲೊಗ್ರಫಿ (Electro Encephalography-EEG) ಅಥವಾ ಇಲೆಕ್ಟ್ರೊಕಾರ್ಡಿಯೋಗ್ರಫಿ (Electro Cardiography - ECG) ಮಾಡುತ್ತಾರೆ.

ಡಿಟಾಕ್ಸಿಫಿಕೇಶನ್ (detoxification) ಮತ್ತು ಉಳಿದ ಪ್ರಾಥಮಿಕ ಪರೀಕ್ಷೆಗಳ ನಂತರ ವ್ಯಕ್ತಿಯನ್ನು ಆಪ್ತಸಮಾಲೋಚನೆಗೆ ಅಥವಾ ಸೂಚಿತ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ರೋಗಿಯು ಅವರ ವರ್ತನೆಯನ್ನು ಬದಲಿಸಿಕೊಳ್ಳುವಂತೆ ಪ್ರೇರೇಪಿಸುವುದು ಆಪ್ತಸಮಾಲೋಚನೆಯ ಪ್ರಮುಖ ಗುರಿ. ವ್ಯಕ್ತಿ ಏಕೆ ಮಾದಕ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ ಎಂಬುದನ್ನು ಆಪ್ತಸಮಾಲೋಚಕರು ತಿಳಿದು, ಅದರ ಸಾಧಕ-ಬಾಧಕಗಳನ್ನು ಅವರೊಂದಿಗೆ ಚರ್ಚಿಸುತ್ತಾರೆ.

ವ್ಯಕ್ತಿಗಳು ವ್ಯಸನವನ್ನು ಬಿಡಬೇಕೆಂದು ನಿರ್ಧರಿಸಲು ಬಯಸಿದರೆ ಅವರಿಗೆ ಸಹಾಯ ಮಾಡುತ್ತಾರೆ. ವ್ಯಕ್ತಿಗಳು ವ್ಯಸನವನ್ನು ನಿಲ್ಲಿಸಲು ಮುಂದಾದರೆ, ಅವರು ಯಾವ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಆಪ್ತಸಮಾಲೋಚಕರು ಅಂದಾಜು ಮಾಡುತ್ತಾರೆ (ಉದಾ: ವಿಥ್ ಡ್ರಾವಲ್ ಸಿಂಪ್ಟಮ್ಮುಗಳು, ಅವುಗಳನ್ನು ಹೇಗೆ ನಿರ್ವಹಿಸಬೇಕು, ಬೇರೆ ಯಾರಾದರು ಮದ್ಯಪಾನ ಅಥವಾ ಧೂಮಪಾನ ಮಾಡಲು ಕರೆದರೆ ಏನು ಮಾಡಬೇಕು ಇತ್ಯಾದಿ). ಮಾದಕ ವ್ಯಸನದಿಂದ ಉಂಟಾದ ಭಾವನಾತ್ಮಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಆಪ್ತಸಮಾಲೋಚಕರು ಸಹಾಯ ಮಾಡುತ್ತಾರೆ.

ಚಿಕಿತ್ಸೆಯ ನಂತರದಲ್ಲಿ ವ್ಯಸನ ಮರುಕಳಿಸುವುದನ್ನು ತಪ್ಪಿಸುವುದು ಹೇಗೆ? ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು? ಈ ನಿಟ್ಟಿನಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಹಾಯ ತೆಗೆದುಕೊಳ್ಳುವುದರ ಕುರಿತು ರೋಗಿಗಳಿಗೆ ಮಾಹಿತಿ ನೀಡಲಾಗುತ್ತದೆ. ವೈದ್ಯರೊಂದಿಗೆ ಫಾಲೊ ಅಪ್ ಭೇಟಿ, ಕುಟುಂಬದ ಸದಸ್ಯರೊಂದಿಗಿನ ಆಪ್ತ ಮಾತುಕತೆ, ಸಮೂಹ ಚಿಕಿತ್ಸೆ ಮಾಡುತ್ತಾರೆ. ವ್ಯಸನ ಮರುಕಳಿಸುವಿಕೆಯನ್ನು ತಡೆಯಲು ಔಷಧ ತೆಗೆದುಕೊಳ್ಳುವ ಮೂಲಕ ಪ್ರಯತ್ನಿಸುವ ಕುರಿತು ರೋಗಿಗಳಿಗೆ ತಿಳಿಸಿಕೊಡಲಾಗುತ್ತದೆ.

ವ್ಯಸನಕ್ಕೆ ಒಳಗಾದ ಪ್ರೀತಿ ಪಾತ್ರರ ಆರೈಕೆ

ನಿಮ್ಮ ಪ್ರೀತಿಪಾತ್ರರಾದವರೊಬ್ಬರು ವ್ಯಸನದಿಂದ ಮುಕ್ತಿ ಪಡೆಯಲು ನಡೆಸಿರುವ ಭಯಂಕರ ಯುದ್ಧಸ್ಥಿತಿಯನ್ನು ಕಣ್ಣಾರೆ ಕಾಣುವುದು ಕೂಡ ಆರೈಕೆ ಮಾಡುವವರಿಗೆ ಒಂದು ರೀತಿಯ ಹೋರಾಟ! ನಿಮ್ಮ ಪ್ರೀತಿಪಾತ್ರರ ವರ್ತನೆಯನ್ನು ಬದಲಾಯಿಸುವುದಕ್ಕೆ, ಅವರು ತಪ್ಪಿತಸ್ಥ ಭಾವನೆ, ನಾಚಿಕೆ ಹಾಗೂ ಭಯದಿಂದ ಹೊರಬರಲು, ಆರೈಕೆದಾರರಾಗಿ ನೀವು ಸಹಾಯ ಮಾಡಬೇಕು. ಸಾಮಾಜಿಕ ಕಳಂಕವು ರೋಗಿಗಳು ಇತರರೊಂದಿಗೆ ತಮ್ಮ ಸಮಸ್ಯೆಯ ಕುರಿತು ಮಾತನಾಡಲು ಹಿಂಜರಿಯುವಂತೆ ಮಾಡುತ್ತದೆ. ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೇ ಇರುವುದು ಕೂಡ ಪರಿಸ್ಥಿತಿಯನ್ನು ಹದಗೆಡಿಸುತ್ತದೆ.

ನಿಮ್ಮ ಪ್ರೀತಿ ಪಾತ್ರರು ವ್ಯಸನಕ್ಕೆ ಒಳಗಾಗಿದ್ದಾರೆ ಎಂದು ನಿಮಗೆ ಅನಿಸಿದರೆ ಅವರಿಗೆ ಈ ರೀತಿಯಾಗಿ ಸಹಾಯ ಮಾಡಬಹುದು:

  • ವ್ಯಸನದ ಲಕ್ಷಣಗಳನ್ನು ಗುರುತಿಸಿ, ಅವರ ವರ್ತನೆಯಲ್ಲಿ ಆದ ಬದಲಾವಣೆಗಳನ್ನು ಅವರಿಗೆ ತಿಳಿಸಿ. ವರ್ತನೆಯು ನಾಟಕೀಯವಾಗುವ ಅಥವಾ ಹಿಂಸಾತ್ಮಕ ಮಟ್ಟವನ್ನು ತಲುಪುವವರೆಗೆ ಕಾಯಬೇಡಿ.
  • ರೋಗಸಮಸ್ಯೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಿ. ಇದರಿಂದ ನಿಮ್ಮ ಪ್ರೀತಿ ಪಾತ್ರರು ಹೇಗೆ ವರ್ತಿಸುತ್ತಿದ್ದಾರೆ ಮತ್ತು ನೀವು ಅವರಿಗೆ ಹೇಗೆ ಸಹಾಯ ಮಾಡಬಹುದೆಂದು ತಿಳಿಯುತ್ತದೆ.
  • ವ್ಯಸನಮುಕ್ತವಾಗುವುದು ಒಂದು ಆಯ್ಕೆ ಎಂದು ನಿಮ್ಮ ಪ್ರೀತಿಪಾತ್ರರು ಅರಿತುಕೊಳ್ಳುವಂತೆ ಮಾಡಲು ಪ್ರಯತ್ನಿಸಿ. ಅವರು ವ್ಯಸನವನ್ನು ಬಿಟ್ಟುಬಿಡಲು ನೀವು ಅವರಿಗೆ ಸಹಾಯ ಮಾಡುತ್ತೀರಿ ಎನ್ನುವುದನ್ನು ತಿಳಿಸಿ.
  • ವ್ಯಕ್ತಿ ತೊಂದರೆಯನ್ನು ಒಪ್ಪಿಕೊಳ್ಳಲು ಹಾಗೂ ನಿಮ್ಮ ಸಹಕಾರದ ಅಗತ್ಯವಿದೆ ಎಂದು ತಿಳಿಸಲು ಸಮಯ ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ತಾಳ್ಮೆಯಿಂದಿರಿ.
  • ಪ್ರೀತಿಪಾತ್ರರನ್ನು ಅಥವಾ ನಿಮ್ಮನ್ನು ದೂಷಿಸಬೇಡಿ. ಉಳಿದೆಲ್ಲಾ ಮಾನಸಿಕ ತೊಂದರೆಗಳಂತೆ ಈ ಪರಿಸ್ಥಿಗೂ ಯಾವುದೊ ಒಂದು ಅಂಶ ಮಾತ್ರ ಕಾರಣವಲ್ಲ. ಇದು ಪರಿಸರ ಹಾಗೂ ವಂಶವಾಹಿಯ ಪರಿಸ್ಥಿತಿಯಿಂದ ಸಹ ಉಂಟಾಗಬಹುದು.
  • ವ್ಯಸನದಿಂದ ಹೊರ ಬರುವ ಅವರ ಪ್ರಯತ್ನವನ್ನು ಪ್ರೋತ್ಸಾಹಿಸಿ. ಆದರೆ, ಹೆಚ್ಚಿನ ಒತ್ತಡ ಹೇರಬೇಡಿ.
  • ಚಿಕಿತ್ಸೆಯಲ್ಲಿ ಅಥವಾ ಸಮೂಹ ಚರ್ಚೆಗಳಲ್ಲಿ ಅವರೊಂದಿಗೆ ಭಾಗವಹಿಸುವುದಾಗಿ ಹುರಿದುಂಬಿಸಿ.
  • ಪ್ರೀತಿಪಾತ್ರರ ಚೇತರಿಕೆಗೆ ನೀವು ಪ್ರೋತ್ಸಾಹ ನೀಡಿ. ಮನಸಿನ ಸಾಮರ್ಥ್ಯವು ವ್ಯಸನದಿಂದ ಹೊರಬರಲು ಸಹಾಯ ಮಾಡುತ್ತದೆ ಎನ್ನುವುದನ್ನು ನೆನಪಿಡಿ. 
  • ಹೆಚ್ಚು ಒತ್ತಡದಿಂದ ನಿಮಗೆ ಬೇಸರವಾದರೆ ಮಾನಸಿಕ ಸಲಹೆಗಾರರ ಸಹಾಯ ಪಡೆಯಿರಿ.

ವ್ಯಸನವನ್ನು ನಿಭಾಯಿಸುವುದು

ಒಂದೊಮ್ಮೆ ನೀವು ವ್ಯಸನಕ್ಕೊಳಗಾಗಿರುವುದನ್ನು ಗುರುತಿಸಿಕೊಂಡು, ಅದರಿಂದ ಹೊರಬರಲು ನಿರ್ಧರಿಸಿ ಸಹಾಯ ಪಡೆಯಲು ಇಚ್ಛಿಸಿದರೆ, ನೀವು ಚೇತರಿಕೆಯ ಮೊದಲ ಹಂತದಲ್ಲಿದ್ದೀರಿ ಎಂದರ್ಥ. ಮಾದಕವಸ್ತುವನ್ನು ಉಪಯೋಗಿಸದೇ ಇರುವ ಆಲೋಚನೆಯೇ ನಿಮ್ಮನ್ನು ಭಯಕ್ಕೆ ತಳ್ಳಬಹುದು. ನಿಮಗೆ ನೀವೆ ಸಹಾಯ ಮಾಡಿಕೊಳ್ಳಲು ಸಾಧ್ಯವಾಗುವ ಹಲವು ಅವಕಾಶಗಳು ತೆರೆದುಕೊಳ್ಳುತ್ತವೆ.

ಯಾವ ರೀತಿಯಲ್ಲಿ ನಿಮ್ಮ ಚೇತರಿಕೆ ಸಾಧ್ಯವಾಗಬಹುದು ಎಂಬುದು ವೈದ್ಯರಿಗೆ ಅರಿವಾಗಲು ಅವರೊಂದಿಗೆ ಚರ್ಚಿಸಿ. ನಿಮ್ಮ ವ್ಯಸನ ಅಥವಾ ಹವ್ಯಾಸದ ಕುರಿತು ವೈದ್ಯರಲ್ಲಿ ಯಾವ ವಿಷಯವನ್ನೂ ಮುಚ್ಚಿಡಬೇಡಿ. ವೈದ್ಯರು ವ್ಯಸನ ಗುರುತಿಸಿ ಚಿಕಿತ್ಸೆ ನೀಡಲು ಸೂಕ್ತವೆಂದು ನಿಮಗೆ ಅನಿಸುವ, ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ತಿಳಿಸಿ.

ನಿಮ್ಮ ನಿರೀಕ್ಷೆಗಳು ನೈಜವಾಗಿರಲಿ. ದಿನ ಒಪ್ಪತ್ತಿನಲ್ಲಿ ಪರಿಣಾಮ ಬೇಕೆಂದು ನಿರೀಕ್ಷಿಸಬೇಡಿ. ವ್ಯಸನದಿಂದ ಮುಕ್ತನಾಗಿ ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ. ಆರಂಭದಲ್ಲಿ ನಿಮಗೆ ಕಷ್ಟವೆನ್ನಿಸಬಹುದು ಆದರೆ ಭರವಸೆ ಕಳೆದುಕೊಳ್ಳಬೇಡಿ.

ಚೇತರಿಕೆಗೆ ಯಾವುದೇ ಒಂದು ನಿರ್ದಿಷ್ಟ ಕಾಲಮಿತಿಯಿಲ್ಲ. ಅದು ನಿಮ್ಮೊಳಗೇ ಇರುವ ಕೆಲವು ವಿಶೇಷ ಅಂಶಗಳನ್ನು ಅವಲಂಬಿಸಿದೆ: ನೀವು ಬಳಸುತ್ತಿರುವ ಮಾದಕ ವಸ್ತು, ಎಷ್ಟು ಕಾಲದಿಂದ ಬಳಸುತ್ತಿದ್ದೀರಿ, ನೀವು ಚಿಕಿತ್ಸೆಯನ್ನು ಹೇಗೆ ಅನುಸರಿಸುತ್ತೀರಿ, ನಿಮ್ಮ ದೈಹಿಕ ಹಾಗೂ ಭಾವನಾತ್ಮಕ ಆರೋಗ್ಯ ಇತ್ಯಾದಿ ಹಲವು ಅಂಶಗಳನ್ನು ನಿಮ್ಮ ಚೇತರಿಕೆಯು ಅವಲಂಬಿಸಿದೆ.

ವಿಥ್ಡ್ರಾವಲ್ ಸಿಂಪ್ಟಮ್ಸ್ ನಿರ್ವಹಣೆ

ಬರಬಹುದಾದ ವಿಥ್ಡ್ರಾವಲ್ ಸಿಂಪ್ಟಮ್ಸ್ ಬಗ್ಗೆ ಹಾಗೂ ಅವುಗಳನ್ನು ನಿಭಾಯಿಸುವ ಕುರಿತಾಗಿ ವೈದ್ಯರೊಂದಿಗೆ ಸಮಾಲೋಚಿಸಿ. ಅದರ ಪರಿಣಾಮವನ್ನು ಶಮನಗೊಳಿಸಲು ನಿಮ್ಮ ವೈದ್ಯರು ಯಾವುದಾದರೂ ನಿರ್ದಿಷ್ಟ ಔಷಧಗಳನ್ನು ಶಿಫಾರಸ್ಸು ಮಾಡಬಹುದೇ? ನೀವು ಬಳಸಬಹುದಾದ ಬೇರೆ ಯಾವುದಾದರೂ ಸಾಧನಗಳಿವೆಯೇ? ಎಂಬುದನ್ನು ತಿಳಿದುಕೊಳ್ಳಿ.

ನೀವು ಮತ್ತೆ ಮಾದಕ ವಸ್ತುಗಳನ್ನು ಬಳಸುವಂತೆ ಉತ್ತೇಜಿಸಿ ನಿಮ್ಮಲ್ಲಿ ಒತ್ತಡ ಮತ್ತು ಆತಂಕವನ್ನು ಉಂಟುಮಾಡುವ ಪರಿಸ್ಥಿತಿಗಳನ್ನು ಗುರುತಿಸಲು ಪ್ರಯತ್ನಿಸಿ. ಕೆಲವರು, ಸಭೆ ಸಮಾರಂಭಗಳಿಗೆ ಹೋದಾಗ ಅಲ್ಲಿನ ವಾತಾವರಣವು ಮದ್ಯಪಾನ ಹಾಗೂ ಧೂಮಪಾನ ಮಾಡಲು ಪ್ರೇರಣೆ ನೀಡಬಹುದು. ಇದರಿಂದಾಗಿ ಮಾದಕವ್ಯಸನವನ್ನು ತ್ಯಜಿಸುವ ಯೋಚನೆಯನ್ನು ನೀವು ಬಿಟ್ಟುಬಿಡಬಹುದು. ಅಂತಹ ಸಂದರ್ಭವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿ.

ಯಾವಾಗ ನೀವು ಧೂಮಪಾನ, ಮದ್ಯ ಸೇವನೆ ಅಥವಾ ಡ್ರಗ್ ಬಳಕೆಯನ್ನು ನಿಲ್ಲಿಸುತ್ತೀರೊ ಆಗ ಒಂದೇ ಒಂದು ಡೋಸ್ ತೆಗೆದುಕೊಂಡರೆ ಏನೂ ಆಗುವುದಿಲ್ಲ ಎಂದು ಅನಿಸುವ ಪ್ರಸಂಗಗಳೂ ಉಂಟು. ಈ ರೀತಿ ಅನಿಸಿದಾಗ ಯಾವದೇ ಪ್ರಮಾಣದಲ್ಲಿಯೂ ಅವನ್ನು ತೆಗೆದುಕೊಳ್ಳುವುದಿಲ್ಲ ಎನ್ನುವ ದೃಢ ನಿರ್ಧಾರ ಮಾಡಿ. ಈ ರೀತಿಯ ಕ್ರಮಗಳಿಂದ ನೀವು ವ್ಯಸನ ಮರುಕಳಿಸುವುದನ್ನು ತಡೆಯಬಹುದು. ಹೆಚ್ಚಾಗಿ ಇಂತಹ ಬಯಕೆಗಳು 15 ರಿಂದ 30 ನಿಮಿಷಗಳವರೆಗೆ ಕಾಡಬಹುದು. ಅರ್ಧ ಗಂಟೆಯನ್ನು ತಾಳ್ಮೆಯಿಂದ ಕಳೆಯಿರಿ. ಆಗ ನೀವು ಬಯಕೆಯನ್ನು ಮರೆಯಲು ಸಾಧ್ಯವಾಗುತ್ತದೆ. ಆದರೂ ಬಯಕೆ ಕಾಡುತ್ತಿದೆಯಾದರೆ, ಚಿಕಿತ್ಸೆಯಲ್ಲಿ ಸಹಕರಿಸುತ್ತಿರುವ ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಫೋನ್ ಮಾಡಿ.

ಹೊಸ ಹವ್ಯಾಸಗಳಲ್ಲಿ ಅಥವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇದು ಮಾದಕ ವಸ್ತುಗಳೆಡೆಗೆ ಮನಸ್ಸು ಹರಿಯದಂತೆ ಸಹಾಯ ಮಾಡುತ್ತದೆ.

ಪುನಶ್ಚೇತನದ ಪ್ರಾಮುಖ್ಯತೆ

ವ್ಯಸನವು ದೀರ್ಘಕಾಲ ಅಂಟಿಕೊಳ್ಳುವ ಹಾಗೂ ಮತ್ತೆ ಮತ್ತೆ ಮರುಕಳಿಸಬಹುದಾದ ಅಸ್ವಸ್ಥತೆ. ವ್ಯಕ್ತಿ ವ್ಯಸನಕ್ಕೆ ಅಂಟಿಕೊಂಡಾಗ, ಆತ ತೆಗೆದುಕೊಂಡ ಮಾದಕ ಪದಾರ್ಥಗಳಿಂದಾಗಿ ಮಿದುಳಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕುಂಠಿತವಾಗುತ್ತದೆ. ಔಷಧೋಪಚಾರವು ಮಾದಕ ದ್ರವ್ಯದ ಬಯಕೆ ಮತ್ತು ವಿಥ್ಡ್ರಾವಲ್ ಸಿಂಪ್ಟಮ್ ಗಳಿಗೆ ಚೇತರಿಕೆ ನೀಡುತ್ತದೆ. ಆದರೆ, ವ್ಯಕ್ತಿಗಳು ವ್ಯಸನ ನಿಲ್ಲಿಸಲು ಇಷ್ಟು ಮಾತ್ರವೇ ಸಾಲದು. ಭವಿಷ್ಯದ ಜೀವನದಲ್ಲಿಯೂ ಅವರು ಮಾದಕ ವಸ್ತುಗಳನ್ನು ಬಳಸಬಾರದು. ಇದಕ್ಕಾಗಿ ಪುನಶ್ಚೇತನದ ಅಗತ್ಯವಿದೆ.

ಯಾರಿಗೆ ವ್ಯಸನವೇ ಮೊದಲ ಆದ್ಯತೆ ಆಗಿದೆಯೋ, ಅಂಥವರು ಸಂದರ್ಭಗಳನ್ನು ನಿಭಾಯಿಸಲು ಪುನಶ್ಚೇತನ ಸಹಕಾರಿ. 

ಅವರು ಮತ್ತೆ ಮಾದಕ ವಸ್ತುಗಳನ್ನು ಬಳಸುವಂತೆ ಪ್ರೇರೇಪಿಸುವ ಒತ್ತಡವನ್ನು ಇದು ತಡೆಯುತ್ತದೆ. ಇವು ಆಂತರಿಕ ಒತ್ತಡಗಳಾಗಿರಬಹುದು (ಕುಡಿಯುವಂತೆ, ಧೂಮಪಾನ ಮಾಡುವಂತೆ ಅಥವಾ ಡ್ರಗ್ ಬಳಸುವಂತೆ ಪ್ರೇರೇಪಿಸಬಹುದಾದ ಭಾವನಾತ್ಮಕ ವಿಷಯಗಳು.) ಅಥವಾ ಬಾಹ್ಯ ಒತ್ತಡಗಳಾಗಿರಬಹುದು. (ಪರಸ್ಪರ ಸಂಬಂಧಗಳಿಗೆ ಸಂಬಂಧಿಸಿದ, ಸಾಮಾಜಿಕ ಅಥವಾ ಕೆಲಸಕ್ಕೆ ಸಂಬಂಧಿಸಿದ ವಿಷಯಗಳು).

ವ್ಯಸನವು ಜವಾಬ್ದಾರಿಗಳ ಕುರಿತಾಗಿ ನಿರ್ಲಕ್ಷ, ಅಧ್ಯಯನ ಅಥವಾ ಕೆಲಸದಲ್ಲಿ ಹಾಜರಾಗದೇ ಇರುವುದು, ಒತ್ತಡ, ಕಳಂಕ ಮತ್ತು ಚಿಂತೆ ಮುಂತಾದ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಆರ್ಥಿಕ ನಿರ್ವಹಣೆಯ ಅರಿವಿಲ್ಲದಿರುವುದು, ಜೂಜು, ಬೇಸರ ಅಥವಾ ಉದ್ದೇಶರಹಿತ ಸ್ಥಿತಿಗಳು ವ್ಯಕ್ತಿ ಮತ್ತೆ ಮಾದಕ ವಸ್ತುಗಳನ್ನು ಸೇವಿಸುವಂತೆ ಮಾಡಬಹುದು.

ಸಮಸ್ಯೆಗಳಿಗೆ ಮಾದಕ ವಸ್ತುಗಳು ಪರಿಹಾರವಲ್ಲ ಎಂದು ಮನವರಿಕೆ ಮಾಡಿ, ವ್ಯಕ್ತಿಯು ಈ ಎಲ್ಲಾ ತೊಂದರೆಗಳನ್ನು ನಿರ್ವಹಿಸಿಕೊಂಡು, ಹೊಸ ಜೀವನವನ್ನು ರೂಪಿಸಿಕೊಳ್ಳುವಂತೆ ಮಾಡುವುದು, ವ್ಯಸನ ಪೂರ್ವ ಆರೋಗ್ಯವಂತ ಜೀವನಶೈಲಿಯನ್ನು ಮರಳಿ ಪಡೆಯುವಂತೆ ಮಾಡುವುದು ಪುನಶ್ಚೇತನದ ಗುರಿಯಾಗಿದೆ.

ಸಪೋರ್ಟ್ ಗ್ರೂಪ್ ನೆರವಿಗೆ ಬರಬಹುದೇ?

ವ್ಯಕ್ತಿಗಳು ವ್ಯಸನದಿಂದ ಮುಕ್ತನಾಗಲು ಸಪೋರ್ಟ್ ಗ್ರೂಪ್ಗಳು ಖಂಡಿತವಾಗಿಯೂ ನೆರವಿಗೆ ಬರುತ್ತವೆ. ಭಾರತದಲ್ಲಿ ವ್ಯಸನಕ್ಕೆ ಒಳಗಾದ ವ್ಯಕ್ತಿ ಸಾಮಾಜಿಕ ಕಳಂಕವನ್ನು ಎದುರಿಸಿ, ಇದರ ವಿರುದ್ಧದ ಹೋರಾಟವನ್ನು ತನ್ನ ಸಮಾಜದಲ್ಲಿ ಹೇಳಿಕೊಳ್ಳಲು ಸಾಧ್ಯವಾಗದೇ ಇರಬಹುದು.

ಸಪೋರ್ಟ್ ಗ್ರೂಪ್ ನಿಮ್ಮ ಸಮಸ್ಯೆಯನ್ನು ಅರಿತುಕೊಂಡು ನಿಮಗೆ ಸಹಾಯ ಮಾಡಬಹುದು. ಉಳಿದ ಜನರು ನೀವು ‘ದುರ್ಬಲ’ ಅಥವಾ ‘ಕೆಟ್ಟ’ವರೆಂದು ಹೇಳಿದರೂ, ಸಪೋರ್ಟ್ ಗ್ರೂಪ್ ನಿಮ್ಮ ಭಯವನ್ನು ಹೋಗಲಾಡಿಸಿ ಇತರರಂತೆ ಸಮಾಜದಲ್ಲಿ ಜೀವಿಸಲು ಸಹಾಯ ಮಾಡುತ್ತದೆ. ಇತರರಿಗಿಂತಲೂ ನಿಮ್ಮಂತೆಯೇ ಸಮಸ್ಯೆಗಳನ್ನು ಎದುರಿಸಿರುವ ಸಪೋರ್ಟ್ ಗ್ರೂಪ್ ನ ಸದಸ್ಯರು ನಿಮ್ಮ ಸಮಸ್ಯೆಯನ್ನು ಅರಿತು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತಾರೆ.

ಉಳಿದವರ ಕಷ್ಟ, ಸವಾಲುಗಳನ್ನು ಆಲಿಸಿದಾಗ ನೀವು ಏಕಾಂಗಿಯಲ್ಲ ಎಂದನಿಸುತ್ತದೆ ಮತ್ತು ವಿಶ್ವಾಸ ಹೆಚ್ಚುತ್ತದೆ. ನಿಮ್ಮಿಂದ ಇದು ಅಸಾಧ್ಯವೆನಿಸಿದಾಗ ಒಬ್ಬ ಗೆಳೆಯನನ್ನು ಅಥವಾ ಮಾರ್ಗದರ್ಶಿಯನ್ನು ನಿಮಗೆ ಒದಗಿಸುವ ಮೂಲಕ ಸಪೋರ್ಟ್ ಗ್ರೂಪ್ ನಿಮ್ಮ ಸಹಾಯಕ್ಕೆ ಬರಬಹುದು.

ವ್ಯಸನ: ಕಲ್ಪನೆಗಳು ಮತ್ತು ವಾಸ್ತವ

ಕಲ್ಪನೆ: ಡ್ರಗ್ ಸೇವನೆಯನ್ನು ನಿಲ್ಲಿಸುವುದು ಕಠಿಣವೇನೂ ಅಲ್ಲ. ‘ಇನ್ನು ಸೇವಿಸುವುದಿಲ್ಲಎಂದು ದೃಢವಾಗಿ ನಿರ್ಧಾರ ಮಾಡಿದರೆ ಸುಲಭವಾಗಿ ಡ್ರಗ್ ಸೇವನೆಯನ್ನು ಬಿಡಬಹುದು  

ಅಥವಾ 

ಬಿಡುವುದು ಕಷ್ಟವೆಂದೇನಲ್ಲ, ಆದರೆ ವ್ಯಕ್ತಿಯಲ್ಲಿ​ ಆ ಇಚ್ಛಾಶಕ್ತಿ ಇರುವುದಿಲ್ಲ.

ವಾಸ್ತವ: 'ಮಾದಕ ದ್ರವ್ಯಗಳನ್ನು ಇನ್ನು ಸೇವಿಸುವುದಿಲ್ಲ’ ಎಂದು ಹೇಳುವುದರ ಮೂಲಕ ವ್ಯಸನದಿಂದ ಹೊರಬರಬಹುದು ಎಂಬ ನಂಬಿಕೆ ಹೆಚ್ಚಿನ ಜನರಲ್ಲಿದೆ. ವ್ಯಸನವು ಕೇವಲ ವ್ಯಕ್ತಿಯ ದುರ್ಬಲ ಮನೋಸಾಮರ್ಥ್ಯದಿಂದ ಅಂಟಿಕೊಳ್ಳುವುದಿಲ್ಲ. ಮಾದಕ ವಸ್ತುಗಳು ಮಿದುಳಿನ ನಿರ್ಧಾರ ತೆಗೆದುಕೊಳ್ಳುವ ಭಾಗದಲ್ಲಿ ಬದಲಾವಣೆ ಉಂಟುಮಾಡುತ್ತವೆ. ಹಾಗಿದ್ದಾಗ ಮಾದಕ ದ್ರವ್ಯ ‘ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದರೂ, ಅದನ್ನು ಮಾಡುವುದು ಕಷ್ಟ. ಅವರು ತ್ಯಜಿಸಲು ಮುಂದಾದರೂ ಡ್ರಗ್ ಸೇವನೆಯ ಭಯಂಕರವಾದ ಬಯಕೆಯು ಅವರ ನಿರ್ಧಾರ ಬದಲಿಸಿ, ಅವರು ಮತ್ತೆ ಅದನ್ನು ಬಳಸಬಹುದು. ಈ ವ್ಯಕ್ತಿಯು ಚಟವನ್ನು ತ್ಯಜಿಸಲು ಹೆಚ್ಚಿನ ಸಹಾಯ ಪಡೆಯಬೇಕಾಗುತ್ತದೆ. ಔಷಧೋಪಚಾರ ಮತ್ತು ಚಿಕಿತ್ಸೆ ವ್ಯಸನದಿಂದ ಗುಣಮುಖರಾಗಲು ಇರುವ ಪರಿಣಾಮಕಾರಿ ವಿಧಾನ.

ಕಲ್ಪನೆ: ನಾನು ವ್ಯಸನವನ್ನು ಹೊಂದಿದ್ದೇನೆ ಮತ್ತು ನನಗೆ ಇದನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ಸಾಧ್ಯವಿಲ್ಲ.

ವಾಸ್ತವ: ನಿಮಗೆ ವ್ಯಸನದಿಂದ ತೊಂದರೆಯಾಗುತ್ತಿದೆ ಎನ್ನುವುದನ್ನು ನೀವು ಗುರುತಿಸಿದರೆ, ವ್ಯಸನವನ್ನು ಬಿಡುವ ಮೊದಲ ಹಂತದಲ್ಲಿದ್ದೀರಿ ಎಂದರ್ಥ. ಬಿಡುವುದು ಅಸಾಧ್ಯವೇನಲ್ಲ. ಆದರೆ ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸೂಕ್ತವಾದ ವೈದ್ಯಕೀಯ ಸಹಾಯ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಸಹಕಾರದಿಂದ ಖಂಡಿತವಾಗಿಯೂ ವ್ಯಸನದಿಂದ ಹೊರಬರಬಹುದು. ನಿಮ್ಮ ಚಟದಿಂದ ತೊಂದರೆ ಉಂಟಾಗಿದೆ ಎಂದು ತಿಳಿದರೆ, ನೀವು ವ್ಯಸನಮುಕ್ತ ಜೀವನಕ್ಕಾಗಿ ಸಹಾಯ ಪಡೆದುಕೊಳ್ಳಿ.

ಬೆಂಗಳೂರಿನಲ್ಲಿರುವ ವ್ಯಸನ ವರ್ಜನ ಚಿಕಿತ್ಸಾ ಕೇಂದ್ರಗಳು

ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯದ ಅಡಿಯಲ್ಲಿನ ಸರಕಾರಿ ಸಂಸ್ಥೆಗಳು

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS)

ವಿಕ್ಟೋರಿಯ ಆಸ್ಪತ್ರೆ

ಸಾಮಾನ್ಯ ಆಸ್ಪತ್ರೆಗಳಲ್ಲಿರುವ ಮನೋವೈದ್ಯಶಾಸ್ತ್ರ ವಿಭಾಗಗಳು

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ

ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ

ಎಮ್. ಎಸ್. ರಾಮಯ್ಯ ಆಸ್ಪತ್ರೆ

ಮಣಿಪಾಲ್ ಆಸ್ಪತ್ರೆ

ಸ್ವಯಂ ಸೇವಾ ಸಂಸ್ಥೆಗಳು

ಕೆಮಿಕಲ್ ಅಡಿಕ್ಷನ್ ಇನ್ಫಾರ್ಮೇಶನ್ ಆಂಡ್ ಮೊನಿಟರಿಂಗ್ (CAIM)

ಕೇರ್

ಸಂಶೋಧನೆ, ಶಿಕ್ಷಣ, ಸೇವೆ ಹಾಗೂ ತರಬೇತಿ ಕೇಂದ್ರ (CREST)

ದಿವ್ಯಶ್ರೀ

ಫ್ರೀಡಮ್ ಫೌಂಡೇಶನ್

ಟೋಟಲ್ ರೆಸ್ಪೊನ್ಸ್ ಟು ಅಲ್ಕೊಹಾಲ್ ಆಂಡ್ ಡ್ರಗ್ ಅಬ್ಯೂಸ್ (TRADA)

ನರ್ಸಿಂಗ್ ಹೋಮ್ಸ್/ ಸೆಂಟರ್ ವಿಥ್ ಐಡೆಂಟಿಫೈಡ್ ಇಂಟರೆಸ್ಟ್ ಇನ್ ಡ್ರಗ್ ಅಬ್ಯೂಸ್ ಮಾನೇಜ್ ಮೆಂಟ್

ಸ್ಪಂದನ ಮೈಂಡ್ ಮೆಡಿಕಲ್ ಸೆಂಟರ್

*ಮೂಲ: ಡ್ರಗ್ ಅಬ್ಯೂಸ್ ಇನ್ ಬೆಂಗಳೂರು ಸಿಟಿ, ಕಾರ್ಯಯೋಜನೆಯ ವರದಿ ಪ್ರಕಟಣೆ: ನಿಮ್ಹಾನ್ಸ್ ಬೆಂಗಳೂರು (2003)

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org