ಹವ್ಯಾಸವು ಅಭ್ಯಾಸವಾಗಿ ಬದಲಾಗುವುದು ಹೇಗೆ ?

ಹವ್ಯಾಸವು ಅಭ್ಯಾಸವಾಗಿ ಬದಲಾಗುವುದು ಹೇಗೆ ?

ನೀವು ವ್ಯಾಯಾಮ ಶಾಲೆಯನ್ನು ಸೇರಿಕೊಂಡ ಪ್ರಾರಂಭದ ದಿನಗಳ ಬಗ್ಗೆ ಯೋಚಿಸಿ. ಪ್ರಾರಂಭದಲ್ಲಿ, ಮುಂಜಾನೆ ಬೇಗನೆ ಏಳುವುದು, ವ್ಯಾಯಾಮ ಶಾಲೆಗೆ ಹೋಗುವುದು ಮತ್ತು ಅಲ್ಲಿ ವ್ಯಾಯಾಮ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ಆದರೆ, ದಿನಕಳೆದಂತೆ ಅದು ದೈನಂದಿನ ಚಟುವಟಿಕೆಯಾಗಿ ಹೆಚ್ಚಿನ ಪರಿಶ್ರಮವಿಲ್ಲದೆ ನಿರಾಯಾಸವಾಗಿ ಸಾಗುತ್ತದೆ. ಜೂಜಾಡುವುದು, ಧೂಮಪಾನ, ಅತಿಯಾದ ಆಹಾರಸೇವನೆ, ಹಲ್ಲುಗಳನ್ನು (ಕಡ್ಡಿಯಿಂದ) ಸ್ವಚ್ಛಗೊಳಿಸುವುದು ಮುಂತಾದವುಗಳು ನಮ್ಮ ದೈನಂದಿನ ಚಟುವಟಿಕೆಗಳಾಗಿವೆ ಮತ್ತು ಕೆಟ್ಟ ಹವ್ಯಾಸಗಳೂ ಆಗಿವೆ.

ಈ ರೀತಿಯ ಹವ್ಯಾಸಗಳು ಬೆಳೆಯಲು ಕಾರಣವೇನು ? ಈ ಹವ್ಯಾಸಗಳು ಅಭ್ಯಾಸವಾಗಿ ಪರಿವರ್ತನೆಯಾಗುವುದು ಹೇಗೆ?

ಹವ್ಯಾಸಗಳು ಹೇಗೆ ರೂಪುಗೊಳ್ಳುತ್ತವೆ?

ಹವ್ಯಾಸಗಳು ಮೂರು ಸಂಗತಿಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತವೆ; ಪರಿಸ್ಥಿತಿಗೆ ಅನುಗುಣವಾಗಿ, ಪ್ರತಿಕ್ರಿಯೆಯಾಗಿ ಮತ್ತು ಪ್ರತಿಫಲವಾಗಿ. ಇವೆಲ್ಲದರ ಗುರಿ ಮಾತ್ರ ಒಂದೇ.

ನಮ್ಮ ಸುತ್ತಲಿನ ಪರಿಸ್ಥಿತಿಗಳು ನಮ್ಮನ್ನು ಪ್ರತಿಕ್ರಿಯಿಸುವಂತೆ ಮಾಡುತ್ತದೆ ಮತ್ತು ನಮ್ಮ ಮನಸ್ಸು ಸಂದರ್ಭಕ್ಕೆ ತಕ್ಕಂತೆ ಪ್ರತಿಫಲಿಸುತ್ತದೆ. ಇದು ನಮ್ಮ ಕ್ರಿಯೆಯನ್ನು ಮತ್ತೆಮತ್ತೆ ಪುನರಾವರ್ತಿಸುವಂತೆ ಮಾಡುತ್ತದೆ. ಆರಂಭದಲ್ಲಿ ಹವ್ಯಾಸಗಳು ನಮ್ಮ ಗುರಿಗೆ ಅನುಗುಣವಾಗಿ ರೂಪುಗೊಳ್ಳುತ್ತವೆ. ಆದರೆ ನಮ್ಮ ಗುರಿಗಳು ಸಮಯ – ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತ ಇರುತ್ತವೆ. ಆದರೆ ಹವ್ಯಾಸಗಳು ಮಾತ್ರ ಹಾಗೆಯೇ ಮುಂದುವರೆಯುತ್ತವೆ. ಅವೇನೂ ನಮ್ಮನ್ನು ಗುರಿ ತಲುಪಿಸುವುದಿಲ್ಲ; ಆದರೂ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತವೆ.

ನಿರ್ದಿಷ್ಟವಾಗಿ, ಕೆಲವು ಹವ್ಯಾಸಗಳು ನಮಗೆ ನೆಮ್ಮದಿ ನೀಡುವಂತೆ ಭಾಸವಾಗುತ್ತವೆ. ಅಥವಾ ನಮ್ಮ ಮನೋಲಹರಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ, ನಮ್ಮನ್ನು ಉಲ್ಲಸಿತಗೊಳಿಸುವಂತೆ ತೋರುತ್ತವೆ. ಅಂತಹಾ ಹವ್ಯಾಸಗಳು ನಮ್ಮ ಮೆದುಳಿನ ನರವ್ಯೂಹಗಳಲ್ಲಿ ಸಂಪರ್ಕ ಸಾಧಿಸಿದಂತಾಗಿ, ಶಾಶ್ವತವಾಗಿ ಉಳಿದು ಬಿಡುತ್ತವೆ. ಇದರಿಂದಾಗಿ, ಅವುಗಳಿಂದ ಹೊರಬರುವುದು ಕಷ್ಟವಾಗಿಬಿಡುತ್ತದೆ.

ಉದಾಹರಣೆಗೆ : ನಿಮಗೆ ಹಸಿವಾಗಿರುತ್ತದೆ ಮತ್ತು ಒಂದು ಅಂಗಡಿಯಲ್ಲಿ ಇರಿಸಿದ್ದ ಕೇಕನ್ನು ನೀವು ನೋಡುತ್ತೀರಿ. ಕೇಕ್ ಎಂಬುದು ಅವಶ್ಯಕತೆ, ಹಸಿವು ಎಂಬುದು ಪರಿಸ್ಥಿತಿ, ನೀವು ಕೇಕನ್ನು ತಿನ್ನುತ್ತೀರಿ. ಇದು ನಿಮ್ಮ ಪ್ರತಿಕ್ರಿಯೆ. ಈ ರೀತಿಯಾಗಿ ನೀವು ನಿಮ್ಮ ಹಸಿವನ್ನು ನೀಗಿಸಿಕೊಳ್ಳುತ್ತೀರಿ ಮತ್ತು ನಿಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತೀರಿ. ಈ ಪ್ರಸಂಗದಲ್ಲಿ ಒಂದು ಸಕಾರಾತ್ಮಕ ಪ್ರತಿಕ್ರಿಯೆಯಿದೆ. ಕೇಕನ್ನು ತಿಂದ ನಂತರ ನಿಮಗೆ ಸಮಾಧಾನವಾಗುತ್ತದೆ. ಇನ್ನೊಮ್ಮೆ, ಮತ್ತೊಮ್ಮೆ ಯಾವಾಗಲಾದರೂ ಆ ಕೇಕನ್ನು ಕಂಡಾಗ ನಿಮಗೆ ಅದು ಬೇಕೆನ್ನಿಸುತ್ತದೆ ಮತ್ತು ನಿಮ್ಮ ಮೆದುಳಿನಲ್ಲಿ ಅಚ್ಚಾಗಿ ಉಳಿದಿದ್ದ ಅದರ ರುಚಿ, ಅದನ್ನು ತಿನ್ನಲೇಬೇಕೆಂದು ಪ್ರೇರೇಪಿಸುತ್ತದೆ.

ಇಂತಹ ನಡವಳಿಕೆಗಳು ಸಹಜ. ಅದರಲ್ಲಿ ತಪ್ಪೇನಿಲ್ಲ. ಆದರೆ ಮುಂದುವರೆದು, ಇದು ಮಿತಿಮೀರಿದರೆ ದುರಭ್ಯಾಸವಾಗಿ ಬದಲಾಗುತ್ತದೆ. ಬಹಳಷ್ಟು ಮಂದಿ ತಾವು ಖಿನ್ನತೆಗೆ ಒಳಗಾದಾಗ, ಒತ್ತಡಕ್ಕೆ ಒಳಗಾದಾಗ ಸಿಹಿ ಪದಾರ್ಥಗಳನ್ನು ಸೇವಿಸಲು ಬಯಸುತ್ತಾರೆ. ನಾವು ಯಾವಾಗ ಸಿಹಿತಿಂಡಿಯನ್ನು ಸೇವಿಸುತ್ತೇವೋ, ನಮ್ಮ ದೇಹವು ನಾವು ಏನು ಸೇವಿಸಿದ್ದೆವು, ಎಲ್ಲಿ ಸೇವಿಸಿದ್ದೆವು ಎಂಬ ಸಂದೇಶವನ್ನು ಮೆದುಳಿಗೆ ರವಾನಿಸುತ್ತದೆ ಮತ್ತು ಮೆದುಳಿನಲ್ಲಿ ಅದರ ನೆನಪು ಉಳಿದಿರುತ್ತದೆ. ಆದ್ದರಿಂದ ಪ್ರತಿಬಾರಿ ನೀವು ಒತ್ತಡಕ್ಕೊಳಗಾದಾಗ ಕೇಕ್ ಅಥವಾ ಐಸ್ ಕ್ರೀಮ್ ಮುಂತಾದ ತಿನಿಸುಗಳನ್ನು ಸೇವಿಸುವಂತೆ ನಿಮ್ಮ ಮೆದಳು ಪ್ರೇರೇಪಿಸುತ್ತದೆ. ಇದಕ್ಕೆ ಕಾರಣ, ಈ ಹಿಂದೆ ಸವಿದಿದ್ದ ಪದಾರ್ಥದ ಸ್ವಾದ ಮನಸ್ಸಿನಲ್ಲಿ ಅಚ್ಚೊತ್ತಿರುವುದು. ಇದು ಅದೇ ತಿನಿಸನ್ನು ಇನ್ನೊಮ್ಮೆ… ಮತ್ತೊಮ್ಮೆ ಸೇವಿಸಬೇಕೆಂದು ಬಯಸುವಂತೆ ಮಾಡುತ್ತದೆ. ಈ ಬಯಕೆ ಎಷ್ಟು ತೀವ್ರವಾಗಿರುತ್ತದೆ ಅಂದರೆ, ಅದನ್ನು ನಿಯಂತ್ರಿಸಿಕೊಳ್ಳುವ ಮನೋಬಲವೇ ನಿಮ್ಮ ಕೈತಪ್ಪಿಹೋಗುತ್ತದೆ!

ಇನ್ನೊಂದು ಉದಾಹರಣೆಯಾಗಿ ಧೂಮಪಾನವನ್ನು ತೆಗೆದುಕೊಳ್ಳೋಣ. ತಮ್ಮನ್ನು ತಾವು ‘ಕೂಲ್’ ಎಂದು ತೋರಿಸಿಕೊಳ್ಳಲು ಸಿಗರೇಟ್ ಸೇದಲು ಪ್ರಾರಂಭಿಸುವ ಹಲವರು ನಮ್ಮ ಗೆಳೆಯರ ಬಳಗದಲ್ಲಿರುತ್ತಾರೆ. ಕೈಯಲ್ಲಿ ಸಿಗರೇಟ್ ಹಿಡಿದು, ಸ್ಟೈಲಾಗಿ ಹೊಗೆ ಬಿಡುತ್ತಾ ಕಾರು ಚಲಾಯಿಸುವವರನ್ನು ನಾವು ನೋಡಿದ್ದೇವೆ. ಆ ಸಂದರ್ಭದಲ್ಲಿ ಅವು ಚೆನ್ನಾಗಿ ಕಾಣಬಹುದು. ಅವರಲ್ಲಿಯೂ ಅದು ತಮ್ಮನ್ನು ತಾವು ಕೂಲ್ ಎಂದು ಭಾವಿಸುವಂತೆ ಮಾಡಬಹುದು. ಆದರೆ ಕಾಲೇಜು ಮುಗಿಸಿ, ವರ್ಷಗಳ ನಂತರ ಅವರು ಧೂಮಪಾನವನ್ನು ಬಿಟ್ಟುಬಿಡಬೇಕೆಂದು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. 15 ವರ್ಷಗಳ ನಂತರವೂ ಅವರು ಸಿಗರೇಟ್ ಸೇದುತ್ತಲೇ ಇರುತ್ತಾರೆ. ಅಂಥವರಲ್ಲಿ ಕೆಲವರು ತಕ್ಕಮಟ್ಟಿಗೆ ಆರೋಗ್ಯದಿಂದಿರಬಹುದು; ಆದರೆ ಅತಿ ಹೆಚ್ಚಿನ ಒತ್ತಡಕ್ಕೊಳಗಾದವರು, ಅತಿಯಾಗಿ ಧೂಮಪಾನ ಮಾಡುವವರು ಹಾಸಿಗೆ ಹಿಡಿದಿದ್ದಾರೆ.

ಒತ್ತಡವು ನಮ್ಮ ಮೆದುಳಿನ ಮೇಲೆ ಯಾವ ಪರಿಣಾಮ ಉಂಟುಮಾಡುತ್ತದೆ?

ಮೆದುಳಿನ ಒಂದು ಭಾಗವಾದ “ಪ್ರಿಫ್ರಂಟಲ್ ಕಾರ್ಟೆಕ್ಸ್”, ನಿರ್ಧಾರಗಳನ್ನು ಕೈಗೊಳ್ಳುವ, ಸೃಜನಶೀಲ ಚಿಂತನೆಗಳನ್ನು ನಿರ್ವಹಿಸುವ, ತಾರ್ಕಿಕವಾಗಿ ಆಲೋಚಿಸುವ, ವಿವೇಚಿಸುವಂತಹ ಕಾರ್ಯಗಳನ್ನು ಮಾಡುತ್ತವೆ. ಆದ್ದರಿಂದ, ವಿವರಣೆಗೆ ಅದನ್ನೇ ತೆಗೆದುಕೊಳ್ಳುವುದು ಸೂಕ್ತ. ಮಿತಿಮೀರಿದ ಆಹಾರಸೇವನೆ ಅಥವಾ ಧೂಮಪಾನ ಅಪಾಯಕಾರಿಯೆಂದು ನಿಮ್ಮ ಪ್ರಿಫ್ರಂಟಲ್ ಕಾರ್ಟೆಕ್ಸ್ ಗೆ ತಿಳಿದಿರುತ್ತದೆ.

ಒತ್ತಡದ ಸಂದರ್ಭದಲ್ಲಿ ಮೆದುಳಿನ ಭಾಗವಾದ ಪ್ರಿಫ್ರಂಟಲ್ ಕಾರ್ಟೆಕ್ಸ್ ತನ್ನ ಕೆಲಸವನ್ನು ಸ್ಥಗಿತಗೊಳಿಸುತ್ತದೆ. ಇದರ ಪರಿಣಾಮವಾಗಿ ನಾವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಮತ್ತು ಸರಿ ತಪ್ಪುಗಳನ್ನು ವಿವೇಚಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಸಂದರ್ಭದಲ್ಲೇ ನಾವು ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹವ್ಯಾಸಗಳಿಗೆ ಕಾರಣವಾಗುವ ಅಂಶಗಳನ್ನು ಕಂಡುಕೊಳ್ಳಲು ಪ್ರತಿಫಲನ ಪರಿಣಾಮ ಚಿಂತನೆ ಸಹಾಯ ಮಾಡಬಲ್ಲದು. ಇದು ನಮ್ಮ ಅಳಿವು - ಉಳಿವನ್ನು ನಿರ್ಧರಿಸುತ್ತದೆ; ಅತಿಯಾದ ಆಹಾರ ಸೇವನೆ ಮತ್ತು ತಂಬಾಕು ಸೇವನೆಯಿಂದ ವಿಶ್ವಾದ್ಯಂತ ಹೆಚ್ಚಿನ ಸಾವುನೋವುಗಳು ಸಂಭವಿಸುತ್ತಿವೆ. ಇಂತಹ ದುರಭ್ಯಾಸಗಳನ್ನು ಮುಂದುವರಿಸುವುದು ಅಥವಾ ತ್ಯಜಿಸುವುದು ಮೆದುಳಿನ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ದುರಭ್ಯಾಸಗಳನ್ನು ಪುನರಾವರ್ತಿಸಬೇಕೇ, ಬೇಡವೇ ಎಂಬುದನ್ನು ಮೆದುಳು ನಿರ್ಧರಿಸುತ್ತದೆ.

ಜೂಜಿನಂತಹ ದುಶ್ಚಟಕ್ಕೆ ಬಲಿಯಾಗುವುದರ ಪರಿಣಾಮಗಳೇನು?

ಹವ್ಯಾಸಗಳು ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ ಮನಶ್ಶಾಸ್ತ್ರಜ್ಞರಾದ ಸ್ಟೀಫನ್ ಕೆಂಡಲ್ ವಿಸ್ತೃತ ಅಧ್ಯಯನ ನಡೆಸಿದ್ದಾರೆ. ಅವರು ನಡೆಸಿರುವ ಪ್ರಯೋಗವು ಹವ್ಯಾಸಗಳ ರೂಪುಗೊಳ್ಳುವಿಕೆ ಮತ್ತು ಪ್ರತಿಫಲಗಳ ಬಗ್ಗೆ ವಿವರಿಸುತ್ತದೆ. ಅವರು ನಡೆಸಿದ ಪ್ರಯೋಗದಲ್ಲಿ ಪಾರಿವಾಳವಿರುವ ಎರಡು ಪಂಜರಗಳನ್ನು ಬಳಸಲಾಗಿತ್ತು. ಎರಡು ಪಂಜರಗಳಿಗೂ ಒಂದು ಲೀವರನ್ನು ಅಳವಡಿಸಲಾಗಿತ್ತು. ಒಂದು ಪಂಜರದಲ್ಲಿ ಲೀವರನ್ನು ಪ್ರೆಸ್ ಮಾಡಿದ ಕೂಡಲೇ ಆಹಾರ ನೀಡಲಾಗುತ್ತಿತ್ತು. ಇನ್ನೊಂದರಲ್ಲಿ ಒಟ್ಟಾರೆಯಾಗಿ ಆಹಾರವನ್ನು ಇರಿಸಲಾಗಿತ್ತು. ಯಥೇಚ್ಛವಾಗಿ ಆಹಾರವನ್ನು ಇರಿಸಲಾಗಿದ್ದ ಪಂಜರದಲ್ಲಿದ್ದ ಪಾರಿವಾಳ ನೆಮ್ಮದಿಯಿಂದಿತ್ತು ಹಾಗೂ ಆಗಾಗ್ಗೆ ಆಹಾರ ನೀಡಲಾಗುತ್ತಿದ್ದ ಪಂಜರದಲ್ಲಿದ್ದ ಪಾರಿವಾಳ ಪರಿತಪಿಸುತ್ತಿದ್ದುದನ್ನು ಕೆಂಡಲ್ ಗಮನಿಸಿದ್ದರು.

ಜೂಜಿನಲ್ಲಿ ಕೂಡಾ ಹೀಗೇ ಇರುತ್ತದೆ. ನಿಮಗೆ ಏನು ಲಭಿಸುತ್ತದೆಯೆಂದು ತಿಳಿಯುವವರೆಗೂ ನೀವು ಅದರ ಹಿಂದಿರುತ್ತೀರಿ. ಸ್ಲಾಟ್ ಮೆಷಿನ್ನಿನಲ್ಲಿ ಆಟವಾಡುವ ಮಕ್ಕಳಿಗೂ ಇದು ಅನ್ವಯಿಸುತ್ತದೆ. ಕೆಂಡಲ್ ರ ಪ್ರಯೋಗದಿಂದ, ಯಾವಾಗಲೂ ಸಿಗುವ ಪ್ರತಿಫಲಕ್ಕಿಂತ ಯಾವಾಗಲೋ ಒಮ್ಮೆ ಸಿಗುವ ಪ್ರತಿಫಲದಬಗ್ಗೆ ಒಲವು ಹೆಚ್ಚಾಗಿರುತ್ತದೆ ಎಂಬ ಅಂಶವು ತಿಳಿದು ಬರುತ್ತದೆ.

ನಮ್ಮ ದುಶ್ಚಟಗಳಿಂದ ನಾವು ಸಾಮಾಜಿಕವಾಗಿ, ವೈಯಕ್ತಿಕವಾಗಿ ಮತ್ತು ಔದ್ಯೋಗಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಿಗರೇಟ್ ಇಲ್ಲದೇ ಯಾವ ರೀತಿ ನೀವು ನಿಮ್ಮ ಕಾರ್ಯವನ್ನು ನಿರ್ವಹಿಸಲಾಗುವುದಿಲ್ಲವೋ, ಅಥವಾ ಸಣ್ಣಪುಟ್ಟ ಒತ್ತಡಕ್ಕೊಳಗಾದಾಗ ನೀವು ಚಾಕಲೇಟನ್ನು ಸೇವಿಸುತ್ತಿರುತ್ತೀರೋ ಆ ಸಂದರ್ಭದಲ್ಲಿ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಬೇಕು. ಪ್ರತಿಯೊಂದು ದುಶ್ಚಟಗಳಿಗೂ ನಿಮ್ಮ ಹವ್ಯಾಸ ಮೂಲ ಕಾರಣವಾಗಿದೆ. ದುಶ್ಚಟಗಳಿಗೆ ನಮ್ಮ ಗುರಿ, ಉದ್ದೇಶ, ಸಮಸ್ಯೆಗಳು, ಮನಸ್ಸಿನ ಉದ್ವೇಗ ಮತ್ತು ಬೇಡಿಕೆಗಳು ಕಾರಣವಾಗಿದ್ದರೂ; ಅವು ಆರಂಭದಲ್ಲಿ ಇತರ ಹವ್ಯಾಸಗಳಂತೆಯೇ ರೂಪುಗೊಂಡಿರುತ್ತವೆ ಎನ್ನುವುದನ್ನು ನಾವು ಗಮನಿಸಬೇಕು.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org