ಟೆಕ್ನಾಲಜಿ ಅಡಿಕ್ಶನ್

ಟೆಕ್ನಾಲಜಿ ಅಡಿಕ್ಶನ್

ಫೋನ್ ಅಥವಾ ಕಂಪ್ಯೂಟರಿನ ಅತಿಯಾದ ಬಳಕೆಯು ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಗಂಭೀರವಾಗಿರಬಹುದು.

ನಾವು ತಾಂತ್ರಿಕ ಯುಗದಲ್ಲಿದ್ದೇವೆ. ನಮ್ಮ ಜೀವನದ ಹೆಚ್ಚಿನ ಭಾಗವು ತಾಂತ್ರಿಕತೆಯ ಮೇಲೆ ಅವಲಂಬಿತವಾಗಿದೆ. ಉದ್ಯೋಗ, ಅಧ್ಯಯನ, ಪ್ರೀತಿಪಾತ್ರರ ಜೊತೆ ಮಾತು, ಶಾಪಿಂಗ್, ಬಿಲ್ ಪಾವತಿ ಸೇರಿದಂತೆ ಹಲವಾರು ಕಾರ್ಯಗಳನ್ನು ಮೌಸ್ ಕ್ಲಿಕ್ ಅಥವಾ ಫೋನ್ ಮೂಲಕ ಮುಗಿಸಬಹುದಾಗಿದೆ.

ತಾಂತ್ರಿಕತೆಯು ನಮ್ಮ ಜೀವನವನ್ನು ಸರಳಗೊಳಿಸಿದೆ ಮತ್ತು ಅದನ್ನು  ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಕೈಯಲ್ಲಿಯೇ ಇದೆ. ಆದರೆ ತಂತ್ರಜ್ಞಾನ ಬಳಕೆಯ ಮೇಲೆ ನಿಯಂತ್ರಣ ಕಳೆದುಕೊಂಡರೆ ಅದು ಟೆಕ್ನಾಲಜಿ ಅಡಿಕ್ಷನ್ ಆಗುತ್ತದೆ.

ಹತ್ತೊಂಬತ್ತು ವರ್ಷದ ರೋಹಿತ್, ತನ್ನ ಸ್ಮಾರ್ಟ್ ಫೋನನ್ನು ಬಹಳ ಇಷ್ಟಪಡುತ್ತಿದ್ದು, ಸದಾ ಫೋನನ್ನು ಬಳಸುತ್ತಿದ್ದನು. ಉಳಿದ ಹದಿಹರೆಯದವರಂತೆ, ರೋಹಿತ್ ತನ್ನ ಫೋನನ್ನು ಇಮೇಲ್ ಕಳುಹಿಸಲು, ಸ್ನೇಹಿತರೊಂದಿಗೆ ಚ್ಯಾಟ್ ಮಾಡಲು, ಇಂಟರ್ನೆಟ್ ಸರ್ಫ್ ಮಾಡಲು ಮತ್ತು ಗೇಮ್ಸ್ ಆಡಲು ಬಳಸುತ್ತಿದ್ದ. ರೋಹಿತ್ ದಿನದಲ್ಲಿ ಆರು ಗಂಟೆಗಳ ಕಾಲ ಸ್ಮಾರ್ಟ್ ಫೋನಿನ ಸ್ಕ್ರೀನ್ ಗೆ ಅಂಟಿಕೊಂಟಿರುತ್ತಿದ್ದ.

ಪ್ರತಿ ದಿನ ಅವನಿಗೆ 400 ಟೆಕ್ಸ್ಟ್ ಮೆಸೆಜುಗಳು ಬರುತ್ತಿದ್ದವು, ಅವನು ಸ್ವತಃ 200 ಮೆಸುಜುಗಳನ್ನು ಕಳಿಸುತ್ತಿದ್ದನು. ಹೆಚ್ಚಿನ ಸಮಯವನ್ನು ಆತ ಫೋನಿನೊಡನೆಯೇ ಕಳೆಯುತ್ತಿದ್ದರಿಂದ ಬೆರಳು ಮತ್ತು ಕಣ್ಣು ನೋವು ಆರಂಭವಾಯಿತು, ಮತ್ತೆ ಮತ್ತೆ ಮೆಸುಜುಗಳನ್ನು ನೋಡಲು ತವಕಿಸುತ್ತಿದ್ದರಿಂದ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ತರಗತಿಯ ಅವಧಿಯಲ್ಲಿ ನಿದ್ರಿಸುತ್ತಿದ್ದ. ಅವನು ಎಚ್ಚರವಿರುವ ವೇಳೆಯಲ್ಲಿ ಅವನ ಗಮನವೆಲ್ಲಾ ಟೆಕ್ಸ್ಟ್ ಮೆಸೇಜಿನ ಮೇಲೆ ಇರುತ್ತಿತ್ತು. ಇದರಿಂದ ಅವನು ಪರೀಕ್ಷೆಯಲ್ಲಿ ಉತ್ತಮವಾದ ಗ್ರೇಡ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವನ ನಡವಳಿಕೆಯಲ್ಲಿನ ಬದಲಾವಣೆಯನ್ನು ಗುರುತಿಸಿದ ಪಾಲಕರು ಚಿಂತಿತರಾದರು. ಈ ಬದಲಾವಣೆಗೆ ಕಾರಣ ಅಡಿಕ್ಷನ್ ಎಂದು ಅವರು ಬೇಗನೇ ಗುರುತಿಸಿದರು.

ಇದು ನಿಜ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿದೆ. ಅವರ ಗುರುತನ್ನು ಗುಪ್ತವಾಗಿಡಲು ಹೆಸರನ್ನು ಬದಲಾಯಿಸಲಾಗಿದೆ.

ಟೆಕ್ನಾಲಜಿ ಅಡಿಕ್ಷನ್ ಎಂದರೇನು?

ವೈದ್ಯಕೀಯವಾಗಿ, ಒಬ್ಬ ವ್ಯಕ್ತಿಯು ಒಂದು ವಸ್ತುವಿನ ಮೇಲೆ ಮಿತಿಮೀರಿ ಅವಲಂಬಿತನಾದಾಗ ಅವರು ತಮ್ಮ ಜೀವನದ ಇತರ ಅಂಶಗಳಾದ ಕುಟುಂಬ, ಸ್ನೇಹಿತರು ಮತ್ತು ವೃತ್ತಿ ಜೀವನದ ಜವಾಬ್ದಾರಿಗಳನ್ನು ನಿಭಾಯಿಸಲು ವಿಫಲರಾಗುತ್ತಾರೆ. ಇದರಿಂದ ಆ ವ್ಯಕ್ತಿಗೂ ಮತ್ತು ಸುತ್ತಲಿರುವವರಿಗೂ ತೊಂದರೆಯಾಗುತ್ತದೆ.

ಟೆಕ್ನಾಲಜಿ ಅಡಿಕ್ಷನ್  ಒಂದು ಸಮಸ್ಯೆ ಆಗಿದ್ದು ಇಲ್ಲಿ ವ್ಯಕ್ತಿಯು ಒಂದು ನಿರ್ದಿಷ್ಟ ತಾಂತ್ರಿಕ ಮಾಧ್ಯಮಕ್ಕೆ ಅತಿಯಾಗಿ ಅವಲಂಬಿತನಾಗುತ್ತಾನೆ. ಭಾರತದಲ್ಲಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ  ಹೆಚ್ಚಿನವರು 14-19 ವರ್ಷ ವಯೋಮಾನದವರಾಗಿದ್ದು ಅವರು ತಮ್ಮ ಮೊಬೈಲ್ ಫೋನ್/ಕಂಪ್ಯೂಟರುಗಳಿಗೆ ಸಂದೇಶ ಕಳುಹಿಸಲು, ವಿಡಿಯೋ ವೀಕ್ಷಿಸಲು ಅಥವಾ ಸೋಷಿಯಲ್ ನೆಟ್ ವರ್ಕಿಂಗ್ ವೆಬ್ಸೈಟ್ಗಳಿಗೆ ಅತಿಯಾಗಿ ಅಂಟಿಕೊಂಡಿರುತ್ತಾರೆ.

“ತಂತ್ರಜ್ಞಾನದ ಬಳಕೆಯ್ಶನ್ನು ಶಿಕ್ಷಣ, ಉದ್ಯೋಗ, ಇನ್ನಿತರ ಅವಶ್ಯಕತೆಗಳಿಗೆ ಮಾತ್ರ ಸೀಮಿತಗ್ನೊಳಿಸಿ, ನೀವು ಇನ್ನೊಂದು ಕಾರ್ಯ ಮಾಡಲು ಸಾಧ್ಯವಾದರೆ ನೀವು ತಂತ್ರಜ್ಞಾನವನ್ನು ಸಹಜವಾಗಿ ಬಳಸುತ್ತಿದ್ದೀರಿ ಎಂದರ್ಥ” ಎನ್ನುತ್ತಾರೆ ನಿಮ್ಹಾನ್ಸಿನ ಕ್ಲಿನಿಕಲ್ ಸೈಕಾಲಜಿ ವಿಭಾಗದಲ್ಲಿ ಹೆಚ್ಚುವರಿ ಪ್ರಾಧ್ಯಾಪಕರಾಗಿರುವ ಡಾ. ಮನೋಜ್ ಶರ್ಮಾ.

ಟೆಕ್ನಾಲಜಿ ಅಡಿಕ್ಷನ್: ಗಂಭೀರ ಸಮಸ್ಯೆಯಲ್ಲವೇ?

ತಂತ್ರಜ್ಞಾನವು ಎಲ್ಲ ಕ್ಷೇತ್ರದಲ್ಲೂ ಬಳಕೆಯಲ್ಲಿರುವುದರಿಂದ ಆರೋಗ್ಯಕರ ಮತ್ತು ಅನಾರೋಗ್ಯಕರ ಬಳಕೆಯ ನಡುವಿನ ವ್ಯತ್ಯಾಸವು ಬಹಳ ತೆಳುವಾಗಿದ್ದು, ವ್ಯಕ್ತಿಯು ಯಾವಾಗ ಆರೋಗ್ಯಕರ ಬಳಕೆಯ ಗಡಿಯನ್ನು ದಾಟುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಈ ನಡವಳಿಕೆಯನ್ನು ಪರಿಮಾಣಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಆದರೆ ದೀರ್ಘಕಾಲದಲ್ಲಿ ಅದರ ಪರಿಣಾಮಗಳು ಅರಿವಿಗೆ ಬರುತ್ತವೆ. ಆದ್ದರಿಂದಲೇ ಬಹುಶಃ ನಾವು ಟೆಕ್ನಾಲಜಿ ಅಡಿಕ್ಷನ್ ಉಳಿದ ವ್ಯಸನಗಳಷ್ಟು ಗಂಭೀರ ಎಂದು ಪರಿಗಣಿಸುವುದಿಲ್ಲ.

ನಾವು ಟೆಕ್ನಾಲಜಿ ಅಡಿಕ್ಷನ್ ಕುರಿತ ಕರಾಳ ಸುದ್ಧಿ  ಓದಿರುತ್ತೇವೆ– ಆನ್ಲೈನ್ ಶಾಪಿಂಗಿನ ಮೋಹದಿಂದ ಸಾಲದಲ್ಲಿ ಮುಳುಗಿದವರು ಅಥವಾ ಪಾಲಕರ ವಿಡಿಯೋ ಗೇಮ್ ಹುಚ್ಚಿನಿಂದ ಮಕ್ಕಳು ಹಸಿವಿನಿಂದ ಸಾವಿಗೀಡಾಗುವುದು. ನಮಗೆ ಅಷ್ಟೇನೂ ಗಂಭೀರವೆಂದೆನಿಸದ ಟೆಕ್ನಾಲಜಿ ಅಡಿಕ್ಷನ್ ಹಲವು ಅಡ್ಡಪರಿಣಾಮಗಳನ್ನುಂಟು ಮಾಡುತ್ತದೆ.

ಟೆಕ್ನಾಲಜಿ ಅಡಿಕ್ಷನ್ ಸಮಸ್ಯೆಯನ್ನು ಉಳಿದ ವ್ಯಸನಗಳ (ಡ್ರಗ್ ಅಡಿಕ್ಷನ್) ರೀತಿಯಲ್ಲಿಯೇ ಹವ್ಯಾಸದಂತೆ ಆರಂಭವಾಗಿ ಅನಿಯಂತ್ರಿತ ಸ್ಥಿತಿಯನ್ನು ತಲುಪಿದಾಗ ನಮ್ಮ ಜೀವನದ ಉಳಿದ ಅಂಶಗಳಾದ ಆರೋಗ್ಯ, ಸಂಬಂಧಗಳು, ದೈನಂದಿನ ಕೆಲಸಗಳ ಮೇಲೂ ಅಡ್ಡ ಪರಿಣಾಮ ಬೀರುತ್ತದೆ.

ನನಗೆ ಟೆಕ್ನಾಲಜಿ ಅಡಿಕ್ಷನ್ ಸಮಸ್ಯೆಯಿದೆಯೆ ಎಂದು ತಿಳಿಯಲು ಪರೀಕ್ಷೆಗೆ ಒಳಗಾಗಬೇಕೆ?

ಈ ಕೆಳಗಿನ ಯಾವುದೇ ಎರಡು ಲಕ್ಷಣಗಳು ಕಂಡುಬಂದಲ್ಲಿ, ವ್ಯಕ್ತಿಯು ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು:

  • ಕಡುಬಯಕೆ: ಯಾವಾಗಲೂ ಇಂಟರ್ನೆಟ್/ತಾಂತ್ರಿಕ ಮಾಧ್ಯಮದಲ್ಲಿ ಮುಳುಗಿರುವುದು. ಕಂಪ್ಯೂಟರ್ ಅಥವಾ ಫೋನಿನಿಂದ ದೂರವಿದ್ದಾಗ ಚಡಪಡಿಸುವುದು.

  • ನಿಯಂತ್ರಣ ಕಳೆದುಕೊಳ್ಳುವುದು:  ಹೆಚ್ಚು ಸಮಯ ಇಂಟರ್ನೆಟ್‌ನಲ್ಲಿ ಕಳೆಯುವುದು ಮತ್ತು ಅದನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು.

  • ಕಡ್ಡಾಯದ ಅಭ್ಯಾಸ: ಎಚ್ಚರವಿರುವ ಹೆಚ್ಚಿನ ಸಮಯ ಕಂಪ್ಯೂಟರ್ ಮುಂದೆ ಕುಳಿತಿರುವುದು.

ಇದರ ಜೊತೆಗೆ ಈ ಕೆಳಗಿನ ಯಾವುದೇ 4 ಲಕ್ಷಣಗಳು ಕಂಡುಬಂದರೆ:

  • ಉಳಿದ ಚಟುವಟಿಕೆಗಳಲ್ಲಿ ನಿರಾಸಕ್ತಿ.

  • ಇಂಟರ್ನೆಟ್ನಲ್ಲಿ ಕಳೆದ ಸಮಯದ ಬಗ್ಗೆ ಸುಳ್ಳು ಹೇಳುವುದು.

  • ಕಂಪ್ಯೂಟರ್ ಮುಂದೆ ಸಮಯ ವ್ಯರ್ಥ ಮಾಡುವುದರಿಂದ ತಡವಾಗಿ ಮಲಗುವುದು ಆಥವಾ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗದಿರುವುದು.

  • ಮಧ್ಯರಾತ್ರಿ ಎದ್ದು ಇಮೇಲ್ ಅಥವಾ ಸಂದೇಶಗಳನ್ನು ಚೆಕ್ ಮಾಡುವುದು.

  • ಶಾಲೆ ಅಥವಾ ಉದ್ಯೋಗದಲ್ಲಿ ಹಾಜರಾತಿ ಅಥವಾ ಉತ್ಪಾದಕತೆ ಕಡಿಮೆಯಾಗುವುದು.

  • ಕುಟುಂಬದವರು ಮತ್ತು ಸ್ನೇಹಿತರನ್ನು ನಿರ್ಲಕ್ಷಿಸುವುದು.

  • ಉಳಿದ ಕೆಲಸ ಮಾಡುವಾಗಲೂ ಸಹ ಫೋನ್ ಅಥವಾ ಈಮೇಲ್ ಚೆಕ್ ಮಾಡಬೇಕೆಂಬ ತುಡಿತ

  • ವೈಯಕ್ತಿಕ ಸ್ವಚ್ಛತೆ ಮತ್ತು ಆರೈಕೆಯ ಬಗ್ಗೆ ಗಮನ ನೀಡದಿರುವುದು.

  • ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ತಂತ್ರಜ್ಞಾನ ಬಳಸುವುದು ಮತ್ತು ಒಮ್ಮೆ ಲಾಗಿನ್ ಆದ ಮೆಲೆ ಲಾಗ್ ಆಫ್ ಆಗಲು ಸಾಧ್ಯವಾಗದಿರುವುದು.

  • ಸ್ನೇಹಿತರು, ಕುಟುಂಬದವರು, ಸಹದ್ಯೋಗಿಗಳು- ಅವರೊಂದಿಗೆ ಮಾತನಾಡುವಾಗಲೂ ಫೋನನ್ನು ಬಳಸುತ್ತಿರಬಹುದು.

  • ವ್ಯಕ್ತಿಯು ಮುಂಗೈ ನೋವು, ಬೆರಳು ನೋವು, ಕಣ್ಣಿನ ನೋವು, ಬೆನ್ನು ನೋವು, ಬಳಲಿಕೆ ಕಂಡುಬರಬಹುದು.

  • ವ್ಯಕ್ತಿಯು ಹೊರಗಡೆ ಹೋಗಲು ಇಷ್ಟಪಡುವುದಿಲ್ಲ, ಅಥವಾ ತಮ್ಮ ರೂಮಿನಲ್ಲಿಯೇ ಇರಲು ಬಯಸಬಹುದು. ಸಾಮಾಜಿಕ ಸಂದರ್ಭಗಳಲ್ಲಿ ಯಾರೊಂದಿಗೂ ಸಂವಹಿಸದೇ ತಮ್ಮ ಫೋನಿಗೆ ಅಂಟಿಕೊಂಡು ಕೂರಬಹುದು.

ಮೇಲೆ ತಿಳಿಸಿದ ರೋಹಿತನ ಕಥೆಯು ಕಳೆದ ವರ್ಷ SHUT ಕ್ಲಿನಿಕ್ ನಿರ್ವಹಿಸಿದ ಹಲವು ಕೇಸುಗಳಲ್ಲಿ ಒಂದಾಗಿದೆ. ಪಾಲಕರು ಈ ಕ್ಲಿನಿಕ್ಕಿಗೆ ಕರೆತರುವ ಹೆಚ್ಚಿನ ಹದಿಹರೆಯದವರು ಮೆಸೇಜ್ ಕಳಿಸುವುದು, ವಿಡಿಯೋ ಗೇಮ್ ಆಡುವುದು, ಸೋಷಿಯಲ್ ನೆಟ್ವರ್ಕಿಂಗ್ ಅಥವಾ ಆನ್ಲೈನ್ ಪೊರ್ನೊಗ್ರಫಿ ನೋಡುವುದು, ಇದರಿಂದ ತಮ್ಮ ಶೈಕ್ಷಣಿಕ ಚಟುವಟಿಕೆ, ದೈನಂದಿನ ಕಾರ್ಯಗಳು ಮತ್ತು ಆರೋಗ್ಯವನ್ನು ನಿರ್ಲಕ್ಷಿಸುತ್ತಿರುವುದು ಕಂಡುಬಂದಿದೆ ಎಂದು SHUT ಕ್ಲಿನಿಕ್ ನಡೆಸುತ್ತಿರುವ ಡಾ. ಶರ್ಮಾರವರು ತಿಳಿಸುತ್ತಾರೆ.

ತನ್ನ ಆರನೆಯ ವಯಸ್ಸಿನಿಂದಲೇ ವಿಡಿಯೋಗೇಮ್ ವ್ಯಸನಕ್ಕೆ ತುತ್ತಾಗಿದ್ದ 14 ವರ್ಷದ ಹುಡುಗನಿಗೆ  SHUT ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಯಿತು. ಆತನು ತನ್ನ ಶಾಲೆಯ ನಂತರದ ಸಮಯದಲ್ಲಿ ಮತ್ತು ವಾರಾಂತ್ಯದಲ್ಲಿ ವಿಡಿಯೋಗೇಮ್ ಆಡುತ್ತಿದ್ದಆರಂಭದಲ್ಲಿ ಪಾಲಕರು ಇದೊಂದು ಗಂಭೀರ ಸಮಸ್ಯೆಯೆಂದು ಪರಿಗಣಿಸಲಿಲ್ಲಆಹಾರ ಅಥವಾ ನೀರಿಗಾಗಿ ಕೂಡ ತನ್ನ ಕೋಣೆಯಿಂದ ಹೊರಬರುತ್ತಿರಲಿಲ್ಲಆತನು ತನ್ನ ಪಾಲಕರು ಅಥವಾ ಉಳಿದ ಕುಟುಂಬದವರೊಂದಿಗೆ ಸರಿಯಾಗಿ ಸಂವಹಿಸುತ್ತಿರಲಿಲ್ಲಪಾಲಕರು ಇದು ಬೆಳವಣಿಗೆಯ ಒಂದು ಹಂತ ಎಂದು ಭಾವಿಸಿದ್ದರು.

ಆದರೆ ಆತನ ಶಾಲೆಯವರು ಪಾಲಕರಿಗೆ ಆತನ ಚಂಚಲ ಮನಸ್ಥಿತಿತರಗತಿಯ ವೇಳೆಯಲ್ಲಿ ನಿದ್ರಿಸುತ್ತಿರುವುದುಅಸೈನ್ಮೆಂಟ್ ಮುಗಿಸದೆ ಇರುವುದರ ಬಗ್ಗೆ ತಿಳಿಸಿದಾಗ ಅವರು ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸಹಾಯಕ್ಕಾಗಿ SHUT ಕ್ಲಿನಿಕ್ಕಿಗೆ ಬಂದರುಅವರಿಗೆ ತಮ್ಮ ಮಗನ ಮೇಲೆ ಅಸಮಾಧಾನ ಮತ್ತು ಸಿಟ್ಟು ಉಂಟಾಗಿತ್ತು. ಅವರು ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡ ನಂತರ ಅವರಿಗೆ ಸಂದರ್ಭವನ್ನು ಸಮಾಧಾನದಿಂದ ನಿಭಾಯಿಸುವುದು ಸಾಧ್ಯವಾಯಿತುಅವರು ತಮ್ಮ ಮಗನ ಮಾನಸಿಕ ಪರಿಸ್ಥಿತಿಯನ್ನು ಅರಿತುಕೊಂಡರು.  ಅವರ ಮಗನು ಆಪ್ತಸಮಾಲೋಚನೆಯನ್ನು ಪಡೆದುತಮ್ಮ ಮಗನ ಇಂಟರ್ನೆಟ್ ಬಳಕೆಯ ಮೇಲೆ ನಿಗಾ ಇರಿಸಿಆತನು ತನ್ನ ಶೈಕ್ಷಣಿಕ ಚಟುವಟಿಕೆ ಮತ್ತು ಪಠ್ಯೇತರ ಚಟುವಟಿಕೆಗಳಿಗೂ ಗಮನ ಕೊಡುವಂತೆ ನೋಡಿಕೊಂಡರುಕೆಲವೇ ತಿಂಗಳುಗಳಲ್ಲಿ ಅವರ ಮಗ ತನ್ನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸುಧಾರಿಸಿಕೊಂಡಹಾಗೂ ಆತನ ಅನಪೇಕ್ಷಿತ ನಡವಳಿಕೆಗಳೂ ಕೂಡಾ ಬಹಳ ಮಟ್ಟಿಗೆ ಕಡಿಮೆಯಾಯಿತು.

SHUT ಕ್ಲಿನಿಕ್ಕಿನಲ್ಲಿ ಜನರನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ:

  1. ಮುಂಚಿನಿಂದಲೂ ಮಾನಸಿಕ ಸಮಸ್ಯೆಗಳಿರುವ ಹದಿಹರೆಯದವರು- ಅತಿಯಾದ ನಾಚಿಕೆ ಸ್ವಭಾವದವರು, ಸವಾಲುಗಳನ್ನು ಎದುರಿಸಲು ಅಸಮರ್ಥರಾದವರು, ಆತಂಕದ ಸಮಸ್ಯೆಗಳನ್ನು ಹೊಂದಿರುವವರು. ನಿರಾಕರಣೆಗೆ ಒಳಗಾಗುವ ಸಂದರ್ಭ ಕಡಿಮೆ ಎಂದು ಭಾವಿಸಿ ಹೆಚ್ಚಾಗಿ ಕಂಪ್ಯೂಟರ್ ಮುಂದೆ ಕಾಲ ಕಳೆಯಲು ಇಚ್ಛಿಸುತ್ತಾರೆ.
  2. ಹೊಸ ಪ್ರಯತ್ನಗಳಲ್ಲಿರುವ ರೋಚಕತೆಯನ್ನು ಅನುಭವಿಸಲು ಬಯಸುವ ಪ್ರಯೋಗಾತ್ಮಕ ಮನಸ್ಸಿನ ಹದಿಹರೆಯದವರು. ಸೋಶಿಯಲ್ ನೆಟ್ವರ್ಕಿಂಗ್ ಅಥವಾ ವಿಡಿಯೋ ಗೇಮ್ಸ್  ನೀಡುವ ತಕ್ಷಣದ ತೃಪ್ತಿಗಾಗಿ ಕಂಪ್ಯೂಟರ್ ಬಳಸುತ್ತಾರೆ.

“ಸಾಮಾನ್ಯವಾಗಿ, ಪಾಲಕರು ತಮ್ಮ ಮಕ್ಕಳು ತೀವ್ರವಾದ ಹತಾಶೆ ಅಥವಾ ಅನಪೇಕ್ಷಿತ ನಡವಳಿಕೆಯನ್ನು ತೋರಿಸಿದಾಗ ನಮ್ಮ ಬಳಿ ಕರೆತರುತ್ತಾರೆ. ಆ ವೇಳೆಗೆ ತಮ್ಮ ಮಕ್ಕಳ ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸಲು ಎಲ್ಲಾ ತಂತ್ರಗಳನ್ನು ಬಳಸಿ ವಿಫಲರಾಗಿರುತ್ತಾರೆ. ಪಾಲಕರು ತಾಂತ್ರಿಕತೆಯನ್ನು ವಿರೋಧಿಸುವುದಿಲ್ಲ- ಬದಲಿಗೆ ತಮ್ಮ ಮಕ್ಕಳು ಇತರ ಚಟುವಟಿಕೆಗಳನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಆತಂಕಗೊಳ್ಳುತ್ತಾರೆ. ನಮ್ಮ ಬಳಿ ಬಂದಾಗ ಆರಂಭದಲ್ಲಿ ಅವರು ಗಾಬರಿಯಾಗಿರುತ್ತಾರೆ. ಆದರೆ ಅವರ ಬಳಿ ಮಾತನಾಡಿದ ನಂತರ ಅವರು ತಂತ್ರಜ್ಞಾನದ ಬಳಕೆ ಹಾಗೂ ಇತರ ಚಟುವಟಿಕೆಗಳ ನಡುವೆ ಸಮತೋಲನವನ್ನು ಬಯಸುತ್ತಿದ್ದಾರೆ ಎಂದು ತಿಳಿಯುತ್ತದೆ,” ಎನ್ನುತ್ತಾರೆ, ಡಾ. ಶರ್ಮಾ.

SHUT ಕ್ಲಿನಿಕ್ಕಿಗೆ ಭೇಟಿ ನೀಡುವ ಹೆಚ್ಚಿನವರು ಮೇಲು-ಮಧ್ಯಮ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದ ಹದಿಹರೆಯದ ಹುಡುಗರಾಗಿರುತ್ತಾರೆ. ಅವರಲ್ಲಿ ಹೆಚ್ಚಿನವರು ಕುಟುಂಬದ ಒಂದೇ ಮಗುವಾಗಿರುತ್ತಾರೆ. ವಯಸ್ಕರ ಮೇಲ್ವಿಚಾರಣೆಯ ಹಾಗೂ ಬಾಹ್ಯ ಚಟುವಟಿಕೆಗಳ ಕೊರತೆ ಮತ್ತು ತಂತ್ರಜ್ಞಾನದ ಸುಲಭ ಲಭ್ಯತೆಯಿಂದ ಅಡಿಕ್ಷನ್ಗೆ ಒಳಗಾಗಿರುತ್ತಾರೆ.

ಟೆಕ್ನಾಲಜಿ ಅಡಿಕ್ಷನ್ ಮತ್ತು ಡ್ರಗ್ ಅಡಿಕ್ಷನ್

ಡ್ರಗ್ ಅಡಿಕ್ಷನ್ ಗೆ ಹೋಲಿಸಿದಾಗ ಟೆಕ್ನಾಲಜಿ ಅಡಿಕ್ಷನ್ ಅಪಾಯಕಾರಿಯಲ್ಲವೆಂದು ಅನಿಸಬಹುದು. ಆದರೆ ತಜ್ಞರು ಟೆಕ್ನಾಲಜಿ ಅಡಿಕ್ಷನ್ ಮದ್ಯ, ತಂಬಾಕು ಅಥವಾ ಮಾದಕ ವಸ್ತುಗಳ ವ್ಯಸನದಂತೆಯೇ ಪರಿಗಣಿಸಲು ಆರಂಭಿಸಿದ್ದಾರೆ. ಈ ಹವ್ಯಾಸವೂ ಕೂಡಾ ಉಳಿದೆಲ್ಲಾ ವ್ಯಸನದಂತೆಯೇ ಒಂದು ದುಶ್ಚಟ.

 ಡ್ರಗ್ ಸೇವನೆ ನಿಲ್ಲಿಸಲು ಪ್ರಯತ್ನಿಸಿದಾಗ ವಿತ್ಡ್ರಾವಲ್ ಸಿಂಪ್ಟಮ್ಸ್ ಕಂಡುಬರುತ್ತವೆ. ಟೆಕ್ನಾಲಜಿ ಅಡಿಕ್ಷನ್ ನಿಲ್ಲಿಸಲು ಪ್ರಯತ್ನಿಸಿದರೆ ನಡವಳಿಕೆಯ ಸಮಸ್ಯೆಗಳು ಕಂಡುಬರುತ್ತವೆ. ಈ ಎಲ್ಲಾ ವ್ಯಸನಗಳೂ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. 

ಟೆಕ್ನಾಲಜಿ ಅಡಿಕ್ಷನ್ ನಿಯಂತ್ರಿಸುವುದು

ಡ್ರಗ್ ಅಡಿಕ್ಷನ್ ಚಿಕಿತ್ಸೆಯನ್ನೇ ಆಧರಿಸಿ ಟೆಕ್ನಾಲಜಿ ಅಡಿಕ್ಷನ್ಗೆ ಮನೋವೈಜ್ಞಾನಿಕ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯು ವ್ಯಕ್ತಿಗೆ ತಮ್ಮ ಸ್ವಪ್ರೇರಣೆಯಿಂದ ಇಂಟರ್ನೆಟ್ ಅಥವಾ ಫೋನ್ ಅತಿಯಾಗಿ ಉಪಯೋಗಿಸದೆ ಸಹಜ ಜೀವನಕ್ಕೆ ಮರಳಲು ಸಹಾಯ ಮಾಡುತ್ತದೆ.

ಚಿಕಿತ್ಸೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

ವ್ಯಕ್ತಿಯನ್ನು ಆಪ್ತ ಸಮಾಲೋಚಕರು ಅಥವಾ ಮನಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಲಾಗುತ್ತದೆ. ತಜ್ಞರು ಈ ಕೆಳಗಿನ ವಿಷಯಗಳನ್ನು ಅರಿತುಕೊಳ್ಳಲು ಪರೀಕ್ಷೆಯನ್ನು ಕೈಗೊಳ್ಳುತ್ತಾರೆ:

  • ವ್ಯಕ್ತಿಯು ತಂತ್ರಜ್ಞಾನದ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿತನಾಗಿದ್ದಾನೆ?

  • ಅತಿಯಾದ ಬಳಕೆಯಿಂದಾಗಿ ಏನಾಗುತ್ತಿದೆ?

  • ಬಳಕೆಯಿಂದ ಮನಸ್ಸಿನ ಮೇಲೆ ಯಾವ ಅಡ್ಡ ಪರಿಣಾಮವಾಗಿದೆ?

  • ವ್ಯಕ್ತಿಗೆ ಕೌಟುಂಬಿಕ ಸಮಸ್ಯೆಗಳೇನಾದರೂ ಇದೆಯೇ?

ಈ ಪರೀಕ್ಷೆಗಳಿಂದ ವೈದ್ಯರು ವ್ಯಕ್ತಿಯ ವ್ಯಸನದ ಗಂಭೀರತೆಯನ್ನು ಅಳೆಯುತ್ತಾರೆ. ನಂತರ ಮನೋ-ಶಿಕ್ಷಣವನ್ನು ನೀಡುತ್ತಾರೆ. ಇದು ವ್ಯಕ್ತಿ ಮತ್ತು ಅವರ ಮನೆಯವರಿಗೆ ಅತಿಯಾದ ಇಂಟರ್ನೆಟ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸುತ್ತಾರೆ. ಅನಪೇಕ್ಷಿತ ನಡವಳಿಕೆ, ಆಹಾರ ಸೇವನೆ, ನಿದ್ರೆ ಸಮಸ್ಯೆಗಳಿಗೆ ಆಪ್ತ ಸಮಾಲೋಚನೆಯ ಮೂಲಕ ಪರಿಹಾರ ಒದಗಿಸುತ್ತಾರೆ.

ಮನೋ-ಶೈಕ್ಷಣಿಕ ಹಂತದಲ್ಲಿ ವ್ಯಕ್ತಿಯ ಸ್ವಪ್ರೇರಣೆಯನ್ನು ಹೆಚ್ಚಿಸುವುದು ಕೂಡ ಒಂದು ಪ್ರಮುಖ ಭಾಗ. ಇಂಟರ್ನೆಟ್ ಬಳಕೆ ಕಡಿಮೆ ಮಾಡುವಂತೆ ಆತನಿಗೆ ಉತ್ತೇಜನ ನೀಡಲಾಗುತ್ತದೆ. ವ್ಯಕ್ತಿಗೆ ಒಂದೇ ಬಾರಿಗೆ ಇಂಟರ್ನೆಟ್ ಉಪಯೋಗಿಸದೆ ಇರಲು ಕಷ್ಟವಾಗಬಹುದು.

ಹೆಚ್ಚಿನ ವೇಳೆ ಇನ್ನೊಬ್ಬರು ನಿಯಂತ್ರಿಸುವುದು ಅವರಿಗೆ ಸರಿಯೆನಿಸುವುದಿಲ್ಲ. ಆದ್ದರಿಂದ ವ್ಯಕ್ತಿಯು ತನ್ನ ಮೊಬೈಲ್ ಅಥವಾ ಇಂಟರ್ನೆಟ್ ಅನ್ನು ಪ್ರತಿದಿನವೂ ಒಂದು ಪೂರ್ವ ನಿಗದಿತ ಅವಧಿಯವರೆಗೆ ಮಾತ್ರ ಬಳಸುವಂತೆ ಒಪ್ಪಂದ ಮಾಡಬೇಕು. ಈ ಒಪ್ಪಂದಗಳು ಅಲ್ಪಾವಧಿಯಾಗಿದ್ದು (ಕೆಲವು ದಿನ, ನಂತರ ವಾರ) ಆಗಾಗ ಕುಟುಂಬದವರು ಪರಿಶೀಲಿಸಬೇಕು. ಈ ಒಪ್ಪಂದಗಳಲ್ಲಿ ವ್ಯಕ್ತಿಯ ಅಭಿಪ್ರಾಯಗಳಿಗೂ ಮನ್ನಣೆ ನೀಡಲಾಗುತ್ತದೆ.

ಸಮಸ್ಯೆಯನ್ನು ದೃಢೀಕರಿಸುವುದು:

ಟೆಕ್ನಾಲಜಿ ಅಡಿಕ್ಷನ್ಗೆ ಒಳಗಾದ ಹೆಚ್ಚಿನ ವ್ಯಕ್ತಿಗಳು ತಮ್ಮ ಬಳಕೆಯು ಯಾವುದೇ ರೀತಿಯಲ್ಲಿ ಹಾನಿಕಾರಕ ಎಂದು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಅವರಿಗೆ ತಮ್ಮ ಬಳಕೆಯನ್ನು ಸಂಪೂರ್ಣವಾಗಿ ನಿಗ್ರಹಿಸಲು ತಿಳಿಸುವ ಬದಲು ಮಾನಸಿಕ ಆರೋಗ್ಯ ತಜ್ಞರು ಅದರಿಂದಾಗುವ ಹಾನಿಯನ್ನು ಕಡಿಮೆ ಮಾಡಲು ಗಮನ ನೀಡುತ್ತಾರೆ.

ಇಂಟರ್ನೆಟ್ ಬಳಕೆಯು ಅನಾರೋಗ್ಯಕರ, ಅದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ವ್ಯಕ್ತಿಗೆ ಅರ್ಥಮಾಡಿಸಿದಾಗ ಮಾತ್ರ ಅವರು ಇಂಟರ್ನೆಟ್ ಬಳಕೆಯನ್ನು ನಿಯಂತ್ರಿಸಲು ಒಪ್ಪುತ್ತಾರೆ.

ಉಳಿದ ಚಟುವಟಿಕೆಗಳಿಗೆ ಬೆಂಬಲ:

ಮಾನಸಿಕ ಆರೋಗ್ಯ ತಜ್ಞರು ವ್ಯಕ್ತಿಗಳಿಗೆ ಸ್ವ- ಆರೈಕೆಯನ್ನೊಳಗೊಂಡ ನೂತನ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ. ಹೊರಾಂಗಣ ಚಟುವಟಿಕೆ, ಅಧ್ಯಯನ/ಉದ್ಯೋಗ ಮತ್ತು ಸಾಮಾಜಿಕವಾಗಿ ಬೆರೆಯಲು ಆದ್ಯತೆ ನೀಡುವಂತೆ ಸಲಹೆ ಕೊಡುತ್ತಾರೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org