ನಿರೂಪಣೆ: ನಾನು ಹೇಗೆ ಖಿನ್ನತೆಯಿಂದ ಹೊರಬಂದೆ?

ನಮ್ಮ ನೋವನ್ನು ಮನಸ್ಸಿನಲ್ಲಿ ಸಂಕಟದಿಂದ ಬಳಲುವುದರಲ್ಲಿ ಏನೂ ಅರ್ಥವಿಲ್ಲ

16 ವರ್ಷದ ನಿತಿನ್, ಉತ್ಸಾಹಿ ಮತ್ತು ಬುದ್ಧಿವಂತ ಹುಡುಗ. ಕಠಿಣ ಪರಿಶ್ರಮದೊಂದಿಗೆ ತನ್ನೆಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸಬಲ್ಲವನಾದ ಈತ ತನ್ನ ಪಾಲಕರೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ನಿತಿನ್ ಕ್ರಿಕೆಟ್ ಆಟಗಾರ ಕೂಡ. ಅಂತರ ಶಾಲಾಮಟ್ಟದ ಹಲವು ಪಂದ್ಯಗಳಿಗೆ ತನ್ನ ಶಾಲೆಯನ್ನು ಪ್ರತಿನಿಧಿಸಿದ್ದ. ಹೀಗಿರಲು ಆತ 10ನೇ ತರಗತಿಯಲ್ಲಿರುವಾಗ ಖಿನ್ನತೆಯ ಖಾಯಿಲೆಗೆ ಒಳಗಾದ. ನಿತಿನ್ ಬದುಕು ಮುಂದೇನಾಯ್ತು ಎಂಬ ಕಥೆ ಇಲ್ಲಿದೆ...

‘ಇದೆಲ್ಲವೂ ಆರಂಭವಾಗಿದ್ದು ನನ್ನ ಹದಿವಯಸ್ಸಿನಲ್ಲಿ. ನನ್ನ ಮನೆಯವರಿಂದಾಗಲಿ, ಶಾಲೆ ಕಡೆಯಿಂದಾಗಲಿ ಯಾವುದೇ ಒತ್ತಡ ಇರಲಿಲ್ಲವಾದರೂ ಬರುಬರುತ್ತ ನನಗೆ ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಯಿತು. ಹೀಗಾಗಿ ನನಗೆ ಕಲಿಕೆಯತ್ತ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ. ಇದಲ್ಲದೇ ಹೆಚ್ಚಿನ ದಿನಗಳಲ್ಲಿ ನಾನು ತುಂಬ ಆಯಾಸಗೊಂಡಂತೆ, ದುರ್ಬಲಗೊಂಡಂತೆ ಕೂಡ ಅನ್ನಿಸತೊಡಗಿತ್ತು. ಇದು ಅತಿಯಾಗಿ ನಾನು ಶಾಲೆಗೆ ಹೋಗುವುದನ್ನು ನಿಲ್ಲಿಸಿದೆ. ಸುಮಾರು 7 ತಿಂಗಳ ಕಾಲ ಶಾಲೆಗೆ ಹೋಗಲಿಲ್ಲ. ಇದರಿಂದಾಗಿ ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಂಡೆ. ಆದಾಗ್ಯೂ ಕಲಿಕೆಯಲ್ಲಿ ನನ್ನ ಪ್ರಯತ್ನ ನಿಲ್ಲಿಸಲಿಲ್ಲ. ಪರಿಶ್ರಮದಿಂದ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆದೆ.

ನಾನು ಆವತ್ತು ಅನುಭವಿಸಿದ ಖಾಯಿಲೆ ಆಗಾಗ ಮರುಕಳಿಸುವ ಖಿನ್ನತೆ. ನನ್ನಲ್ಲಿ ಈ ಖಾಯಿಲೆಯಿರುವುದು ಪತ್ತೆಯಾಯಿತೇನೋ ನಿಜ. ಪ್ರತಿ ಬಾರಿ ಖಿನ್ನತೆ ನನ್ನನ್ನು ಆವರಿಸಿ ಕಡಿಮೆಯಾದ ನಂತರದಲ್ಲಿ ಪದೇಪದೇ ಔಷಧವನ್ನು ಬಿಟ್ಟಿದ್ದು ನಾನು ಮಾಡಿದ ದೊಡ್ಡ ತಪ್ಪಾಗಿತ್ತು. ಒಂದು ಹಂತದಲ್ಲಿ ಈ ಖಾಯಿಲೆ ನನ್ನ ಬದುಕನ್ನೇ ಬದಲಾಯಿಸಿತ್ತು. ಬೇರೆಯವರು ಏನು ಬೇಕಾದರೂ ಅಂದುಕೊಳ್ಳಲಿ, ಔಷಧಿಗಳ ಸಹಾಯವಿಲ್ಲದೇ ಖಿನ್ನತೆಯಿಂದ ಹೊರಬಂದು ಸಾಮಾನ್ಯರಂತೆ ಬದುಕಲು ಸಾಧ್ಯವಿಲ್ಲ ಎಂಬುದು ನನಗೆ ಅರಿವಾಗಿತ್ತು.

ಖಿನ್ನತೆ ನನ್ನನ್ನು ಎಡೆಬಿಡದೇ ಕಾಡುತ್ತಿತ್ತು. ಪ್ರತಿ 7-10 ದಿನಗಳ ಅವಧಿಯಲ್ಲಿ ಇದು ಮರುಕಳಿಸುತ್ತ ಹೆಚ್ಚಾಗುತ್ತಲೇ ಹೋಗಿತ್ತು. ಈ ಅವಧಿಯಲ್ಲಿ ಎಲ್ಲವೂ ಮಬ್ಬಾದಂತೆ ಕಾಣುತ್ತಿತ್ತು. ಈ ಅವಧಿಗಳಲ್ಲಿ ನಾನು ಎಂದೂ ನಗಲಿಲ್ಲ ಅಥವಾ ಸಂತೋಷದಿಂದಲೂ ಇರಲಿಲ್ಲ. ನನ್ನ ಮನಸ್ಥಿತಿ ಒಂದಿಷ್ಟೂ ಬದಲಾಗಲಿಲ್ಲ. ನನಗೆ ತಿನ್ನಬೇಕು ಅನ್ನಿಸುತ್ತಿರಲಿಲ್ಲ. ರಾತ್ರಿಯಿಡಿ ಎಚ್ಚರಿರುತ್ತಿದ್ದೆ. ಆ ಹದಿನೈದು ದಿನಗಳಲ್ಲಿ ನನ್ನ ತೂಕ 4-6 ಕೆಜಿಯಷ್ಟು ಇಳಿಯಿತು. ನಿಧಾನವಾಗಿ ನನ್ನ ಎಲ್ಲ ಚಟುವಟಿಕೆಗಳೂ ಮಂಕಾಗತೊಡಗಿದವು. ಬದುಕು ಅರ್ಥಹೀನ ಎನ್ನಿಸಹತ್ತಿತು. ನನಗೆ ಯಾವುದರಲ್ಲೂ ಆಸಕ್ತಿ ಮೂಡಲಿಲ್ಲ. ಈ ಹಿಂದೆ ನಾನು ಆಸಕ್ತಿವಹಿಸಿ ಮಾಡುತ್ತಿದ್ದ ಯಾವ ಕಾರ್ಯಗಳಲ್ಲೂ ಈಗ ಮನಸ್ಸು ತೊಡಗುತ್ತಿರಲಿಲ್ಲ. ಭವಿಷ್ಯದಲ್ಲಿ ಭರವಸೆಯಿಲ್ಲ ಎಂಬಂತೆ ಭಾಸವಾಯ್ತು. ಈ ಬದುಕು ಸಾಕೆನಿಸಿತ್ತು.

ಕೊನೆಗೆ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿದ ಬಳಿಕ ನನಗೆ ‘ವಿದ್ಯುತ್ಕಂಪನ ಚಿಕಿತ್ಸೆ(Electroconvulsive Therapy)’ ನೀಡಲಾಯ್ತು. ನಂತರದ ಕೆಲ ಕಾಲ ನಾನು ನೆನಪಿನ ಶಕ್ತಿಯನ್ನು ಕಳೆದುಕೊಂಡಂತಾಗಿತ್ತು. ಆದಾಗ್ಯೂ ಬೇಗ ನನ್ನ ನೆನಪು ವಾಪಾಸ್ ಬಂತು. ಯಾರೂ ಕೂಡ ನಾನು ಜ್ಞಾಪಕ ಶಕ್ತಿ ಅಥವಾ ಪ್ರಜ್ಞೆ ಕಳೆದುಕೊಂಡಿದ್ದೆ ಎಂದು ಹೇಳಲೂ ಸಾಧ್ಯವಿರಲಿಲ್ಲ!

ನೋವನ್ನು ಅನುಭವಿಸುತ್ತ, ಔಷಧವಿಲ್ಲದೆ ಒತ್ತಡ ನಿಭಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ಒಂದು ದೊಡ್ಡ ಪಾಠವನ್ನು ನಾನಿದರಿಂದ ಕಲಿತುಕೊಂಡಿದ್ದೆ. ಈ ವಿಧಾನದಲ್ಲಿ ಅಡ್ಡ ಪರಿಣಾಮಗಳಿರಬಹುದು. ಆದರೆ ಅವುಗಳನ್ನು ನಿಭಾಯಿಸಲು ನಾನು ನನ್ನದೇ ಆದ ಮಾರ್ಗ ಕಂಡುಕೊಂಡೆ. ಖಿನ್ನತೆಯಿಂದ ಬಳಲುವುದಕ್ಕಿಂತಲೂ ಒಂದಷ್ಟು ನೋವು ಅನುಭವಿಸುವುದು ಉತ್ತಮ. ನಾನು ಪೂರ್ಣವಾಗಿ ಖಿನ್ನತೆಯಿಂದ ಹೊರರಬರುವವರೆಗೂ ಔಷಧವನ್ನು ನಿಲ್ಲಿಸುವುದಿಲ್ಲ ಎಂದು ಅಂದೇ ನಿರ್ಧಾರ ಮಾಡಿಬಿಟ್ಟೆ.

ಈ ಕಥೆಯನ್ನು ಖಾಯಿಲೆಯ ಲಕ್ಷಣ, ಒಂದಷ್ಟು ಮಾಹಿತಿಯೊಂದಿಗೆ ಮತ್ತು ಮಾನಸಿಕ ಆರೋಗ್ಯ ತಜ್ಞರ ಸಹಾಯದೊಂದಿಗೆ ಸಿದ್ಧಪಡಿಸಲಾಗಿದೆ. ಈ ಕಥೆ ಯಾವುದೋ ಒಂದು ವ್ಯಕ್ತಿಯ ನಿರ್ದಿಷ್ಟ ಒಂದು ಪ್ರಕರಣದ ಅಧ್ಯಯನವಲ್ಲ. ಈ ರೀತಿ ಖಿನ್ನತೆಗೆ ಒಳಗಾಗಿ ವೇದನೆ ಅನುಭವಿಸುವ ಎಲ್ಲರ ಕಥೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org