ಬುದ್ಧಿಮಾಂದ್ಯತೆ: ಕಲ್ಪನೆ ಮತ್ತು ವಾಸ್ತವ

ಬುದ್ಧಿಮಾಂದ್ಯತೆ: ಕಲ್ಪನೆ ಮತ್ತು ವಾಸ್ತವ

ಕಲ್ಪನೆ: ಬುದ್ಧಿಮಾಂದ್ಯತೆ ಒಂದು ಆನುವಂಶೀಯ ತೊಂದರೆ.

ವಾಸ್ತವ: ಬುದ್ಧಿಮಾಂದ್ಯತೆ ಕೆಲವು ಬಾರಿ ಮಾತ್ರ ಆನುವಂಶೀಯವಾಗಿ ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚಾಗಿ ಬಾಹ್ಯ ಪ್ರಭಾವಗಳಿಂದ ಉಂಟಾಗುತ್ತದೆ. ಇದರಲ್ಲಿ ಕೆಲವನ್ನು ತಡೆಗಟ್ಟಬಹುದು.

ಕಲ್ಪನೆ: ಬುದ್ಧಿಮಾಂದ್ಯತೆ ಸಾಂಕ್ರಾಮಿಕ ಖಾಯಿಲೆ

ವಾಸ್ತವ: ಇದು ಸಂಪೂರ್ಣ ಸುಳ್ಳು. ಬುದ್ಧಿಮಾಂದ್ಯತೆ ಯಾವುದೇ ರೀತಿಯ ಸಂಪರ್ಕದಿಂದ ಹರಡುವಂತದ್ದಲ್ಲ.

ಕಲ್ಪನೆ:ಬುದ್ಧಿಮಾಂದ್ಯತೆ ಹೊಂದಿರುವ ಮಕ್ಕಳಿಗೆ ಶಿಸ್ತನ್ನು ಕಲಿಸುವಾಗ ಅವರನ್ನು ಗದರಿಸಿ ಅಳುವಂತೆ ಮಾಡಬಾರದು.

ವಾಸ್ತವ: ಬುದ್ಧಿಮಾಂದ್ಯತೆ ಹೊಂದಿರುವ ಮಕ್ಕಳು ಎಲ್ಲ ಸಾಮಾನ್ಯ ಮಕ್ಕಳಂತೆ ಇರುತ್ತಾರೆ. ಅವರಿಗೂ ಕೂಡ ಉತ್ತಮ ನಡುವಳಿಕೆ ಕಲಿಸಬೇಕು. ಆದಾಗ್ಯೂ ಅವರಿಗೆ ಶಿಸ್ತನ್ನು ಕಲಿಸುವ ಸಮಯದಲ್ಲಿ ಅವರ ಮಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅತಿಮುಖ್ಯ.

ಕಲ್ಪನೆ: ವಿವಾಹದಿಂದ ಬುದ್ಧಿಮಾಂದ್ಯತೆಯನ್ನು ಗುಣಪಡಿಸಬಹುದು

ವಾಸ್ತವ:ಇದು ಸಂಪೂರ್ಣ ಸುಳ್ಳು. ಬುದ್ದಿಮಾಂದ್ಯತೆ ಜೀವನಪರ್ಯಂತ ಇರುವ ಖಾಯಿಲೆ. ಇದು ಮದುವೆ ಮಾಡುವುದರಿಂದ ಗುಣವಾಗುವುದಿಲ್ಲ. ಹಾಗಾಗಿ ವ್ಯಕ್ತಿಯ ಮದುವೆ ಆತನ ಸಂಗಾತಿಯ ಸಂಪೂರ್ಣ ಒಪ್ಪಿಗೆಯೊಂದಿಗೆ ನಡೆಯಬೇಕು. ಆಕೆಗೆ ವ್ಯಕ್ತಿಯ ವೈದ್ಯಕೀಯ ಸ್ಥಿತಿಗಳ ಕುರಿತು ಮಾಹಿತಿ ನೀಡಿರಬೇಕು.

ಕಲ್ಪನೆ: ಔಷಧಿ ಮತ್ತು ಜೀವಸತ್ವಗಳಿಂದ(ವಿಟಮಿನ್‌) ಬುದ್ಧಿಮಾಂದ್ಯತೆಯನ್ನು ವಾಸಿ ಮಾಡಬಹುದು.

ವಾಸ್ತವ: ಗುಣಪಡಿಸಬಹುದಾದ ಪರಿಸ್ಥಿತಿಯಿಂದ ಬುದ್ಧಿಮಾಂದ್ಯತೆ ಉಂಟಾಗಿದ್ದರೆ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ಖಾಯಿಲೆಯನ್ನು ವಾಸಿ ಮಾಡಬಹುದು.ಆದಾಗ್ಯೂ ಯಾವುದೇ ಔ‍ಷಧಿಗಳು ಹಾನಿಗೊಳಗಾದ ಮಿದುಳನ್ನು ಸರಿಪಡಿಸುವುದಿಲ್ಲ.

ಕಲ್ಪನೆ: ಬುದ್ಧಿಮಾಂದ್ಯತೆ ಹೊಂದಿರುವ ವಯಸ್ಕರು ಲೈಂಗಿಕತೆಯಲ್ಲಿ ನಿಯಂತ್ರಣ ಹೊಂದಿರುವುದಿಲ್ಲ. ಹೀಗಾಗಿ ಇತರರ ಮೇಲೆ ಲೈಂಗಿಕ ದೌಜರ್ನ್ಯ ಮಾಡಬಹುದು.

ವಾಸ್ತವ: ಬುದ್ಧಿಮಾಂದ್ಯತೆ ಹೊಂದಿರುವ ವಯಸ್ಕರು ಸುಲಭವಾಗಿ ಲೈಂಗಿಕತೆ ಹೊಂದಲು ಸಾಧ್ಯವಿಲ್ಲ. ಅವರಲ್ಲಿನ ಲೈಂಗಿಕತೆ ಪ್ರತಿಬಂಧಿತವಾಗಿರುತ್ತದೆ.

ಕಲ್ಪನೆ: ಪಾಪ ಕೃತ್ಯಗಳು /ಹಿಂದಿನ ಜನ್ಮದಲ್ಲಿ ಪಾಲಕರು ಮಾಡಿದ ಕರ್ಮದಿಂದ ಬುದ್ಧಿಮಾಂದ್ಯತೆ ಉಂಟಾಗುತ್ತದೆ.

ವಾಸ್ತವ: ಇದು ಸಂಪೂರ್ಣ ಸುಳ್ಳು. ಇಂಥ ನಂಬಿಕೆಗಳು ಪೋಷಕರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಒಂದು ವೈದ್ಯಕೀಯ ಪರಿಸ್ಥಿತಿಯಾಗಿದ್ದು, ಪಾಲಕರಿಗೆ ಮತ್ತು ಆರೈಕೆದಾರರಿಗೆ ಸಮಾಜದ ಬೆಂಬಲ ಅಗತ್ಯ. ಕುಟುಂಬ ಮತ್ತು ಸಮಾಜದಿಂದ ಪ್ರೋತ್ಸಾಹ, ಬೆಂಬಲ ದೊರೆತರೆ ಬುದ್ಧಿಮಾಂದ್ಯತೆ ಹೊಂದಿರುವ ವ್ಯಕ್ತಿ ಉತ್ತಮವಾಗಿ ಬದುಕಬಹುದು.

ಕಲ್ಪನೆ: ಮಂತ್ರವಾದಿಗಳು ಬುದ್ಧಿಮಾಂದ್ಯತೆಯನ್ನು ಮಾಡುತ್ತಾರೆ.

ವಾಸ್ತವ: ಇದು ಸಂಪೂರ್ಣ ಸುಳ್ಳು. ಮಂತ್ರವಾದಿಗಳು ತಾವು ಬುದ್ಧಿಮಾಂದ್ಯತೆಯನ್ನು ಗುಣಪಡಿಸತ್ತೇವೆಂದು ಪಾಲಕರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಅವರು ವಾಸಿ ಮಾಡುತ್ತಾರೆ ಎಂಬುದಕ್ಕೆ ಯಾವುದೇ ರೀತಿಯ ಆಧಾರಗಳಿಲ್ಲ ಅಥವಾ ಈ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಅಂಗೀಕೃತ ಸಂಶೋಧನಾತ್ಮಕ ಸಾಕ್ಷಿಗಳಿಲ್ಲ.

ಈ ಪಟ್ಟಿಯನ್ನು ಬುದ್ಧಿಮಾಂದ್ಯತೆಗೆ ಸಂಬಂಧಿಸಿದ ವಿಶ್ವ ಆರೋಗ್ಯ ಸಂಸ್ಥೆ(WHO) ದಾಖಲೆಯನ್ನು ಆಧರಿಸಿ ರಚಿಸಲಾಗಿದೆ. ಮೂಲ ದಾಖಲೆ ಲೇಖಕರು ಬೆಂಗಳೂರಿನ ನಿಮ್ಹಾನ್ಸ್‌ನ ಡಾ.ಸತೀಶ್ ಗಿರಿಮಾಜಿ, ಬಾಂಗ್ಲಾದೇಶದ ಪ್ರೊಟೊಬೋಂದಿ ಫೌಂಢೇಶನ್ನ ಡಾ.ಸುಲ್ತಾನ ಎಸ್ ಜಮಾನ್, ಶ್ರೀಲಂಕಾದ ಸುಸಿತ ಸುವಸೇಥಾ ಪೇರೆಂಟ್ಸ್ ಅಸೋಸಿಯೇಷನ್ ಡಾ.ಪಿ.ಎಂ ವಿಜೇತುಂಗ,ಮತ್ತು ಬ್ಯಾಕಾಂಕ್‌ನ ರಾಜಾನುಕಲ್ ಆಸ್ಪತ್ರೆಯ ಡಾ.ಉದೋಮ್‌ ಪೆಜರಸಂಗ್ರಹನ್.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org