ನಾರ್ಕೋಲೆಪ್ಸಿ

Q

ನಾರ್ಕೋಲೆಪ್ಸಿ ಎಂದರೇನು?

A

ನಾರ್ಕೋಲೆಪ್ಸಿ ನರವೈಜ್ಞಾನಿಕ ಖಾಯಿಲೆಯಾಗಿದ್ದು ನಿದ್ದೆ ಮತ್ತು ಎಚ್ಚರಗೊಳ್ಳುವಿಕೆಯನ್ನು ನಿಭಾಯಿಸುವ ಮಿದುಳಿನ ಭಾಗಕ್ಕೆ ಪರಿಣಾಮ ಬೀರುತ್ತದೆ. ಈ ಖಾಯಿಲೆ ಹೊಂದಿರುವವರು ಹಗಲಿನಲ್ಲಿ ಅತಿಯಾದ ನಿದ್ದೆಯ ಅನುಭವ ಹೊಂದುತ್ತಾರೆ ಮತ್ತು ಕೆಲವು ವೇಳೆ ತಡೆಯಲಾಗದಷ್ಟು ನಿದ್ದೆಯ ದಾಳಿಗೆ ಒಳಗಾಗುತ್ತಾರೆ. ಹಗಲಿನಲ್ಲಿ ವ್ಯಕ್ತಿ ಏನು ಕೆಲಸ ಮಾಡುತ್ತಿದ್ದಾನೆ ಎಂಬುದರ ಪರಿವಿಲ್ಲದೆ ಈ ಅನುಭವಗಳು ಆಗುತ್ತವೆ. ಅವರು ಮಾತನಾಡುತ್ತಿರಬಹುದು, ಆಹಾರ ಸೇವಿಸುತ್ತಿರಬಹುದು ಅಥವಾ ಚಾಲನೆ ಮಾಡುತ್ತಿರಬಹುದು. ಆಗಲೂ ನಿದ್ದೆ ಅವರನ್ನು ಆವರಿಸುತ್ತದೆ. ನ್ಯಾರ್ಕೊಲೆಪ್ಸಿಗೆ ತುತ್ತಾದ ಸಾಕಷ್ಟು ವ್ಯಕ್ತಿಗಳಿಗೆ ಈ ಖಾಯಿಲೆಯಿಂದ ಬಳಲುತ್ತಿದ್ದೇವೆ ಎಂದು ತಿಳಿದುರುವುದಿಲ್ಲ. ಇದೊಂದು ಅತ್ಯಂತ ಗಂಭೀರವಾದ ಸ್ಥಿತಿಯಾಗಿದ್ದು ವೈದ್ಯಕೀಯ ಉಪಚಾರ ಮತ್ತು ಜೀವನಶೈಲಿಯಲ್ಲಿನ ಕೆಲ ಬದಲಾವಣೆಯಿಂದ ಈ ಖಾಯಿಲೆಯ ಲಕ್ಷಣಗಳನ್ನು ನಿಭಾಯಿಸಬಹುದು.

ಹಗಲಿನಲ್ಲಿ ಆಯಾಸ ಅಥವಾ ದಿನಿವಿಡಿ ನಿದ್ದೆ ಮಾಡಬೇಕೆಂಬ ಅನುಭವವಾದರೆ ನೀವು ನಾರ್ಕೋಲೆಪ್ಸಿ ಹೊಂದಿರುವಿರಿ ಎಂದರ್ಥವಲ್ಲ. ಈ ಭಾವನೆಗಳು ಬೇರೆ ಕೆಲ ನಿದ್ದೆಯ ಖಾಯಿಲೆಗಳ ಫಲಿತಾಂಶವಾಗಿರಬಹುದು ಅಥವಾ ಮಾನಸಿಕ ಆರೋಗ್ಯದ ಸಮಸ್ಯೆ ಅಥವಾ ಕಳಪೆ ನಿದ್ರಾ ದಿನಚರಿಯಿಂದಾಗಿರಬಹುದು.ನೀವು ಕೆಲ ಸಮಯದಿಂದ ಹಗಲಿನಲ್ಲಿ ಅತಿಯಾದ ನಿದ್ದೆಯಿಂದ ಬಳಲುತ್ತಿದ್ದರೆ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡುವುದು ಉತ್ತಮ.  

Q

ನಾರ್ಕೋಲೆಪ್ಸಿ ಲಕ್ಷಣಗಳೇನು?

A

ನಾರ್ಕೋಲೆಪ್ಸಿಯ ಮುಖ್ಯ ಲಕ್ಷಗಳು ಕೆಳಗಿನಂತಿವೆ:

ಹಗಲಿನಲ್ಲಿ ಅತಿಯಾದ ನಿದ್ದೆ: ನೀವು ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದರೂ ದಿನವಿಡಿ ನಿಮಗೆ ಆಯಾಸವಾದಂತೆ ಅನ್ನಿಸುತ್ತದೆ. ನೀವು ಚಿಕ್ಕ ನಿದ್ದೆಗ ಜಾರಿದಾಗ ಇದು ಸರಿ ಹೋದಂತೆ ಅನ್ನಿಸಬಹುದು. ಆದರೆ ಕೆಲ ಗಂಟೆಗಳ ಬಳಿಕ ಮತ್ತೆ ನಿಮಗೆ ಆಯಾಸದ ಅನುಭವವಾಗುತ್ತದೆ.

ಸ್ನಾಯುಘಾತ(Cataplexy): ನಿಮ್ಮ ಸ್ನಾಯುಗಳ ನಿಯಂತ್ರಣ ಕಳೆದುಕೊಂಡ ಸ್ಥಿತಿ. ಯಾವ ಸ್ನಾಯುವಿಗೆ ಪರಿಣಾಮ ಬೀರಿದೆ ಎಂಬುದನ್ನು ಆಧರಿಸಿ ನಿಮ್ಮ ಮಾತು ಅಸ್ಪಷ್ಟವಾಗಬಹುದು ಹಾಗೂ ಮಂಡಿ ಬಾಗಿದ ಅನುಭವ ಹೊಂದಬಹುದು. ಇದು ನಿಮ್ಮನ್ನು ಕುಗ್ಗಿಸಬಹುದು. ನ್ಯಾರ್ಕೊಲೆಪ್ಸಿ ಹೊಂದಿದವರೆಲ್ಲ ಅವರ ಜೀವಿತ ಅವಧಿಯಲ್ಲಿ ಸ್ನಾಯುಘಾತಕ್ಕೆ ಒಳಗಾಗಬೇಕು ಎಂದೇನಿಲ್ಲ.

ಭ್ರಮೆ: ನೀವು ನಿದ್ದೆಗೆ ಜಾರಿದಾಗ ನಾನಾ ಬಗೆಯ ಭ್ರಮೆಗೆ ತುತ್ತಾಗಬಹುದು. ನೀವು ಎಚ್ಚರವಿದ್ದಾಗಲೂ ಕೆಲವು ವೇಳೆ ಈ ದೃಶ್ಯಗಳು ಗೋಚರವಾಗಿ ನೀವು ಇನ್ನಷ್ಟು ಭ್ರಮೆಗೆ ಒಳಗಾಗಬಹುದು. ಹಲವು ಸಂದರ್ಭಗಳಲ್ಲಿ ಈ ಭ್ರಮೆಗಳು ಭಯ ಮತ್ತು ದಿಗಿಲನ್ನು ಹುಟ್ಟಿಸುತ್ತವೆ.

ಜ್ಞಾಪಕ ಶಕ್ತಿ ನಷ್ಟ: ನೀವು ವಸ್ತುಗಳನ್ನು ನೆನಪಿಟ್ಟುಕೊಳ್ಳಲು, ಅವುಗಳನ್ನು ಮೊದಲು ನೋಡಿದಾಗ ಅರೆ ಎಚ್ಚರದ ಸ್ಥಿತಿ ಹೊಂದಲು ಕಷ್ಟಪಡಬಹುದು.

ನಿದ್ದೆಯ ಪಾಶ್ವರ್ವಾಯು (Sleep paralysis): ಕೆಲವು ಸಲ ನೀವು ನಿದ್ದೆ ಮಾಡುವಾಗ ಅಥವಾ ಎಚ್ಚರಗೊಳ್ಳುವಾಗ ಮಾತನಾಡಲು ಅಥವಾ ಚಲಿಸಲು ಅಸಮರ್ಥರಾದ ಅನುಭವ ಹೊಂದಬಹುದು. ಇದು ಒಂದು ಅಥವಾ ಎರಡು ನಿಮಿಷವಿರಬಹುದು ಮತ್ತು ನಿಮ್ಮ ಉಸಿರಾಟಕ್ಕೆ ಧಕ್ಕೆ ಮಾಡುವುದಿಲ್ಲ. ಆದಾಗ್ಯೂ ಈ ಅನುಭವ ಅತ್ಯಂತ ಭಯಾನಕವಾಗಿರಬಹುದು. 

ಈ ಲಕ್ಷಣಗಳಿಂದ ಬಳಲುತ್ತಿರುವ ಯಾರಾದರು ನಿಮಗೆ ತಿಳಿದಿದ್ದರೆ ನೀವು ಅವರ ಸಂಭವನೀಯ ಸ್ಥಿತಿಗಳ ಕುರಿತು ಮಾತನಾಡಿ ಮತ್ತು ಅವರಿಗೆ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಲು ಸಲಹೆ ನೀಡಿ.

Q

ನಾರ್ಕೋಲೆಪ್ಸಿಗೆ ಕಾರಣಗಳೇನು?

A

ನ್ಯಾರ್ಕೊಲೆಪ್ಸಿಗೆ ನಿರ್ದಿಷ್ಟ ಕಾರಣ ತಿಳಿದಲ್ಲ. ಮಿದುಳಿನಲ್ಲಿ ನಮ್ಮ ನಿದ್ದೆ ಮತ್ತು ಎಚ್ಚರದ ಸ್ಥಿತಿಗಳನ್ನು ನಿಯಂತ್ರಿಸುವ ಕೆಮಿಕಲ್‌ ಹೈಪೊಸರ್ಟಿನ್‌ ಉತ್ಪಾದಿಸುವಾಗ ವಂಶವಾಹಿ ಅಂಶಗಳಿಂದಾಗುವ ಕೊರತೆಯಿಂದ ನ್ಯಾರ್ಕೊಲೆಪ್ಸಿ ಉಂಟಾಗಬಹುದೆಂದು ಸಂಶೋಧನೆಗಳು ಹೇಳುತ್ತವೆ. ನರಮಂಡಲದಲ್ಲಿನ ಈ ಕೊರತೆ ತತಕ್ಷಣ ಎಚ್ಚರಗೊಳ್ಳುವುದು ಅಥವಾ ನಿದ್ದೆಗೆ ಜಾರುವುದಕ್ಕೆ ಕಾರಣವಾಗಬಹುದು. 

Q

ನಾರ್ಕೋಲೆಪ್ಸಿ ಚಿಕಿತ್ಸೆ

A

ನಾರ್ಕೋಲೆಪ್ಸಿಯನ್ನು ಗುಣಪಡಿಸುವ ನಿರ್ದಿಷ್ಟವಾದ ಒಂದು ಚಿಕಿತ್ಸೆಯಿಲ್ಲ. ಆದರೆ ಔಷಧ ಮತ್ತು ಜೀವನಶೈಲಿಯಲ್ಲಿನ ಕೆಲ ಬದಲಾವಣೆಗಳಿಂದ ನೀವು ಈ ಖಾಯಿಲೆಯ ಲಕ್ಷಣಗಳನ್ನು ನಿಭಾಯಿಸಬಹುದು. ನಿಮಗೆ ಹಗಲಿನಲ್ಲಿ ಎಚ್ಚರವಾಗಿರಲು ಕೆಲ ಉತ್ತೇಜಕಗಳನ್ನು ಸೂಚಿಸಬಹುದು. ವೈದ್ಯರು ಖಿನ್ನತೆ ವಿರೋಧಕಗಳನ್ನು ಸೂಚಿಸಬಹುದು. ಇದು ಸ್ನಾಯುಘಾತ. ಭ್ರಮೆ ಮತ್ತು ನಿದ್ದೆ ಪಾಶ್ವರ್ವಾಯುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಜೀವನಶೈಲಿಯಲ್ಲಿನ ಬದಲಾವಣೆ ಕೂಡ ನ್ಯಾರ್ಕೊಲೆಪ್ಸಿಯ ಲಕ್ಷಣಗಳನ್ನು ನಿಯಂತ್ರಿಸುತ್ತದೆ. ನಿರ್ದಿಷ್ಟವಾದ ದಿನಚರಿ ಅನುಸರಿಸಿ ಮತ್ತು ಹಗಲಿನಲ್ಲಿ ಕಿರು ನಿದ್ರೆ ಮಾಡಿ. ಇದು ಹಗಲಿನಲ್ಲಿನ ನಿದ್ದೆಯನ್ನು ತಪ್ಪಿಸುತ್ತದೆ. ನಿಮ್ಮ ಶಕ್ತಿಯ ಮಟ್ಟ ಹೆಚ್ಚಿಸಲು ನಿತ್ಯ ವ್ಯಾಯಾಮ ಮಾಡಿ. ಮದ್ಯಪಾನ, ತಂಬಾಕು ಮತ್ತು ಕೆಫಿನೆಗಳಿಂದ ದೂರ ಉಳಿಯಿರಿ. 

Q

ನಾರ್ಕೋಲೆಪ್ಸಿ ಹೊಂದಿರುವವರ ಆರೈಕೆ

A

ಸಾವರ್ಜನಿಕರಿಗೆ ನಾರ್ಕೋಲೆಪ್ಸಿ ಕುರಿತು ತಿಳಿದಿಲ್ಲ ಮತ್ತು ಅವರು ಈ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಗಾಗಿ ಎದುರು ನೋಡಬಹುದು. ಉದಾಹರಣೆಗೆ ಕಚೇರಿ ಪರಿಸರದಲ್ಲಿ ಅತಿಯಾದ ನಿದ್ರಾ ವರ್ತನೆ ಅಥವಾ ನಿದ್ದೆ ಅಪ್ಪಳಿಸಿದಂತೆ ವರ್ತಿಸುವುದು ಹಲವು ಋಣಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಆರೈಕೆದಾರರಾಗಿ ಈ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ಬೆಂಬಲ ನೀಡುವುದು ಅತ್ಯಂತ ಮಹತ್ವದ್ದು. ಅವರ ಸ್ಥಿತಿಯ ಕುರಿತು ಮಾತನಾಡಿ ಮತ್ತು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಲು ಸಲಹೆ ನೀಡಿ. ಮದ್ಯಪಾನ, ತಂಬಾಕು ಮತ್ತು ಕೆಫಿನೆಗಳಿಂದ ದೂರ ಉಳಿಯಲು ಪ್ರೋತ್ಸಾಹಿಸಿ. ನೀವು ಯಾವಾಗಲೂ ಅವರ ಸಮಸ್ಯೆಗಳನ್ನು ಕೇಳಲು ಮತ್ತು ಅರ್ಥೈಸಿಕೊಳ್ಳಲು ಬದ್ಧರಾಗಿರುವಿರಿ ಎಂಬ ಭರವಸೆ ಮೂಡಿಸಿ. ಔಷಧ, ಚಿಕಿತ್ಸೆ ಜೊತೆಗೆ ಕುಟುಂಬ, ಸ್ನೇಹಿತರ ಬೆಂಬಲ ಕೂಡ ಈ ಖಾಯಿಲೆಗಳ ಲಕ್ಷಣಗಳನ್ನು ನಿಭಾಯಿಸಲುವಲ್ಲಿ ಪ್ರಮುಖವಾಗುತ್ತದೆ.

Q

ನಾರ್ಕೋಲೆಪ್ಸಿಯೊಂದಿಗೆ ಜೀವನ

A

ನಾರ್ಕೋಲೆಪ್ಸಿಯೊಂದಿಗೆ ಬದುಕುವುದು ಸವಾಲು. ಆದರೆ ಕೆಲ ಹೊಂದಾಣಿಕೆಗಳೊಂದಿಗೆ ನೀವು ಸಾಮಾನ್ಯ ಬದುಕನ್ನು ನಿಭಾಯಿಸಬಹುದು. ಮೊದಲನೆಯದಾಗಿ ನೀವು ಕೆಲಸ ಮಾಡುವ ವ್ಯಕ್ತಿಗಳು ಅಥವಾ ಶಾಲಾ ಸಿಬ್ಬಂದಿಯಲ್ಲಿ ನಿಮ್ಮ ಸಮಸ್ಯೆ ಕುರಿತು ಮಾತನಾಡುವುದು ಮಹತ್ವದ್ದು. ಆಗ ನೀವು ವಿಶ್ರಾಂತಿ ಬೇಕಾದಾಗ ತೆಗೆದುಕೊಳ್ಳುವಂತೆ ನಿಮ್ಮ ಕೆಲಸವನ್ನು ಹೊಂದಿಸಿಕೊಳ್ಳಬಹುದು. ನಿಮಗೆ ನಿದ್ದೆಯ ಸೂಚನೆ ಸಿಕ್ಕರೆ ವಾಹನ ಚಾಲನೆ ಅಥವಾ ಇತರೆ ಯಾವುದೇ ಅಪಾಯರಕಾರಿ ಕೆಲಸಗಳನ್ನು ಮಾಡಬೇಡಿ. ಚಾಲನೆ ಮಾಡುವಾಗ ನಿದ್ದೆ ಆರಂಭವಾದರೆ, ವಾಹನ ಬದಿಗೆ ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳಿ. ದಿನಚರಿಯಲ್ಲಿ ವ್ಯಾಯಾಮ ಅಳವಡಿಕೆ ನಿಮ್ಮ ಸಾಮಾನ್ಯ ಶಕ್ತಿಯ ಮಟ್ಟ ಹೆಚ್ಚಿಸಿಕೊಳ್ಳಲು ಸಹಕಾರಿ. ಮದ್ಯಪಾನ, ತಂಬಾಕು ಮತ್ತು ನಿಕೊಟಿನ್‌ ಸೇವನೆ ತ್ಯಜಿಸಿ. ವೈದ್ಯರು ಚಿಕಿತ್ಸೆ ಯೋಜನೆ ಸೂಚಿಸಿದ್ದರೆ, ಅದನ್ನು ಕಡ್ಡಾಯವಾಗಿ ಅನುಸರಿಸುವುದು ಅತ್ಯವಶ್ಯ ಹಾಗೂ ಅವರಿಗೆ ಯಾವುದೇ ಅಡ್ಡಪರಿಣಾಮ ಅಥವಾ ಲಕ್ಷಣದಲ್ಲಿನ ಬದಲಾವಣೆ ಕುರಿತು ತಿಳಿಸಿ. 

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org