ನಿರೂಪಣೆ: ಸಹಜವಾದ ನಮ್ಮ ಕುಟುಂಬದಲ್ಲಿ ಒಬ್ಬರಿಗೆ ಹೆಚ್ಚಿನ ಪ್ರೀತಿಯ ಅಗತ್ಯವಿದೆ

ಸ್ಕಿಜೋಫ್ರೀನಿಯಾ ಹೊಂದಿರುವ ಕುಟುಂಬದ ಸದಸ್ಯರನ್ನು ಆರೈಕೆ ಮಾಡುವುದು ಸಾಧ್ಯವಿದೆ.

ನಮ್ಮ ಜೀವನ ಬದಲಾಗಿದ್ದು ನನ್ನ ಮಗಳಿಗೆ 20 ವರ್ಷ ತುಂಬಿದ ಸಂದರ್ಭದಲ್ಲಿ. ಬಾಲ್ಯದಲ್ಲೇನೂ ಸಮಸ್ಯೆಯಿರಲಿಲ್ಲ. ಶಾಲೆಯಲ್ಲಿ ಚಿನ್ನಾಗಿ ಓದುತ್ತಿದ್ದಳು, ಒಂದು ಸ್ನೇಹಿತರ ಗುಂಪಿತ್ತು. ಪಿ.ಯು.ಸಿ ಪರೀಕ್ಷೆಯಲ್ಲೂ ಆಕೆ ಉತ್ತಮ ಅಂಕಗಳನ್ನು ಪಡೆದು ವಿಜ್ಞಾನ ವಿಷಯವನ್ನು ಆಯ್ದುಕೊಂಡು ಪದವಿ ಕಾಲೇಜಿಗೆ ಸೇರಿದ್ದಳು.

ಆ ನಂತರವೇ ಎಲ್ಲ ಸಮಸ್ಯೆಗಳೂ ಆರಂಭವಾಗಿದ್ದು. ಆಕೆ ನೇರವಾಗಿ ಕಾಲೇಜಿಂದ ಬಂದು ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು, ರಾತ್ರಿ ಊಟದ ಸಮಯದವರೆಗೂ ಹೊರಗೇ ಬರುತ್ತಿರಲಿಲ್ಲ. ಮೊದಮೊದಲಿಗೆ ನಾವು ಆಕೆ ಓದಿಕೊಳ್ಳುತ್ತಿದ್ದಾಳೆ ಎಂದೇ ಅಂದುಕೊಂಡಿದ್ದೆವು. ಆದರೆ ಒಂದು ದಿನ ನಾನು ಅವಳ ರೂಮಿಗೆ ಹೋಗಿ ನೋಡಿ ಕಂಗಾಲಾದೆ. ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೀರು ಪೂರ್ತಿ ಖಾಲಿಯಾಗಿತ್ತು. ಇದಕ್ಕೆಲ್ಲಾ ಕಾರಣ ಕೇಳಿದಾಗ ಆಕೆ ತನ್ನ ಭಯದ ಬಗ್ಗೆ ಹೇಳಿಕೊಂಡಳು: ಆಕೆಯ ಕೋಣೆಯಲ್ಲಿ ಚಿಪ್‌ಗಳನ್ನು ಅಡಗಿಸಿ ಇಡಲಾಗಿದೆ ಎಂಬ ಭೀತಿ ಅವಳಿಗೆ ಇತ್ತು. ಒಂದು ಸರ್ಕಾರಿ ಏಜೆನ್ಸಿ ಅವಳ ಎಲ್ಲಾ ಚಲನ ವಲನಗಳನ್ನೂ ಗಮನಿಸುತ್ತಿದೆ ಎಂದು ನಂಬಿದ್ದಳು. ಹೀಗಾಗಿ ಆ ಚಿಪ್‌ ಹುಡುಕಿದರೆ ಅದನ್ನು ನಾಶ ಮಾಡಬಹುದು ಎಂಬುದು ಅವಳ ಯೋಚನೆಯಾಗಿತ್ತು.

ನನಗೆ ತುಂಬಾ ಚಿಂತೆಯಾಯ್ತು. ಆರಂಭದಲ್ಲಿ ನಾನವಳಿಗೆ ಬೈದೆ. ಹುಚ್ಚುಚ್ಚಾಗಿ ಏನೇನೋ ಮಾತನಾಡಬೇಡ ಎಂದೆ. ಮುಂದಿನ ಕೆಲವು ವಾರಗಳು ಮತ್ತು ತಿಂಗಳುಗಳಲ್ಲಿ ಅವಳು ಇನ್ನಷ್ಟು ಏಕಾಂಗಿಯಾದಳು. ತನ್ನಷ್ಟಕ್ಕೇ ಏನೇನೋ ಮಾತನಾಡುತ್ತಿದ್ದಳು. ತನ್ನ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಕೊನೆಗೆ ಕಾಲೇಜಿಗೆ ಹೋಗುವುದನ್ನೂ ನಿಲ್ಲಿಸಿದಳು. ಆಕೆಯ ತಂದೆ ಮಾತನಾಡಲು ಪ್ರಯತ್ನಿಸಿದರೂ, ಅವರ ಮಾತನ್ನು ಆಕೆ ಕೇಳಿಸಿಕೊಳ್ಳಲಿಲ್ಲ. ಆಕೆ ತನ್ನ ಸಂಭಾಷಣೆಯಲ್ಲೇ ಮುಳುಗಿದ್ದಳು.

ಚಿಪ್‌ಗಳನ್ನು ಹುಡುಕುತ್ತಾ ಎರಡು ರಾತ್ರಿ ನಿದ್ದೆಯಿಲ್ಲದೇ ಕಳೆದಳು. ಏನನ್ನೂ ತಿನ್ನಲಿಲ್ಲ, ವಿಶ್ರಾಂತಿಯನ್ನೂ ಪಡೆಯಲಿಲ್ಲ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಸೂರಿ ಎನಿಸಿತು. ಆಸ್ಪತ್ರೆಯಲ್ಲಿ ಆಕೆಗೆ ಸ್ಕಿಜ಼ೋಫ್ರೀನಿಯಾ ಇದೆ ಎಂದು ತಿಳಿದು ನಮಗೆ ಆಘಾತವಾಯಿತು.

ಮನೆಗೆ ಹೋಗುತ್ತಿದ್ದಂತೆಯೇ ಖಾಯಿಲೆಯ ಬಗ್ಗೆ ನಾನು ಮತ್ತು ನನ್ನ ಪತಿ ಓದಿಕೊಂಡೆವು. ಒಂದು ತಿಂಗಳವರೆಗೆ ನನ್ನ ಮಗಳು ಆಸ್ಪತ್ರೆಯಲ್ಲಿ ಇದ್ದಳು. ಆಸ್ಪತ್ರೆಯಿಂದ ಮನೆಗೆ ಬರುವ ಹೊತ್ತಿಗೆ ಬಹುತೇಕ ಸರಿಯಾಗಿದ್ದಳು. ಆದರೆ ಸ್ವಲ್ಪ ಡಲ್‌ ಆಗಿದ್ದಳು. ಔಷಧಗಳನ್ನು ತೆಗೆದುಕೊಳ್ಳುವುದಕ್ಕೆ ಆಕೆಗೆ ನೆನಪಿಸಬೇಕಾಗುತ್ತಿತ್ತು. ಮೊದಲಿನಷ್ಟು ಹೊರಗೆ ಓಡಾಡುತ್ತಿರಲಿಲ್ಲ. ಹೆಚ್ಚು ಸಮಯ ಮನೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದಳು.

ಮುಂದಿನ ಮೂರು ವರ್ಷಗಳವರೆಗೆ ನನ್ನ ಮಗಳು ಆಗಾಗ್ಗೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದಳು. ಆಕೆಯ ಖಾಯಿಲೆ ಪತ್ತೆಯಾದ ನಂತರದ ಹತ್ತು ವರ್ಷಗಳಲ್ಲಿ ಮಾನಸಿಕ ಖಾಯಿಲೆಯ ಬಗ್ಗೆ ನಮ್ಮ ಚಿಂತನೆಯೇ ಬದಲಾಯಿತು. ನಮ್ಮ ಮಗಳು ಜೀವನವಿಡೀ ನಿರ್ವಹಿಸಬೇಕಾದ ರೋಗ ಹೊಂದಿದ್ದಾಳೆ ಎಂಬ ಸತ್ಯವನ್ನು ಒಪ್ಪಿಕೊಂಡೆವು.

ಆಕೆ ಕಾಲೇಜು ಮುಗಿಸಲು ಸಾಧ್ಯವಿಲ್ಲ ಎಂಬುದನ್ನೂ ತಿಳಿದೆವು. (ಆಕೆ ತರಗತಿಗೆ ಹೋಗಲು ಮತ್ತೆ ಪ್ರಯತ್ನಿಸಿದಳಾದರೂ, ಅಲ್ಲಿನ ಒತ್ತಡವನ್ನು ಆಕೆಗೆ ನಿರ್ವಹಿಸಲು ಸಾಧ್ಯವಾಗಿಲ್ಲ) (ಸ್ಕಿಜ಼ೋಫ್ರೀನಿಯಾ ಹೊಂದಿದ ಎಲ್ಲರೂ ಶಾಲೆ/ಕಾಲೇಜು ಬಿಡಬೇಕಾಗುತ್ತದೆ ಎಂದೇನೂ ಇಲ್ಲ) 

ನನ್ನ ಪತಿಯಲ್ಲಿ ಖಿನ್ನತೆ ಕಾಣಿಸಿಕೊಂಡಿದೆ. ಅವರು ಔಷಧ ತೆಗೆದುಕೊಳ್ಳುತ್ತಿದ್ದಾರೆ. ಮಾನಸಿಕ ಸಮಸ್ಯೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಲಾಗದು ಎಂದು ನಾವು ಅರಿತಿದ್ದೇವೆ.

ನಮ್ಮ ಮನೆಯ ಬಳಿ ಇರುವ ಮನೋರೋಗ ಆಸ್ಪತ್ರೆಯಲ್ಲಿ ನಾನು ಸ್ವಯಂಸೇವಕಿಯಾಗಿ ಸೇವೆ ಮಾಡುವ ಮೂಲಕ ಇದನ್ನು ಎದುರಿಸಲು ಕಲಿತಿದ್ದೇನೆ. ಇದೇ ರೀತಿಯ ಮಾನಸಿಕ ಸಮಸ್ಯೆಯನ್ನು ಹೊಂದಿರುವ ಮಕ್ಕಳ ಪೋಷಕರಿಗೆ ನಾನು ನೆರವಾಗುತ್ತೇನೆ. ತೀವ್ರ, ದೀರ್ಘಾವಧಿ ಮಾನಸಿಕ ಖಾಯಿಲೆಯನ್ನು ಹೊಂದಿರುವ ಕುಟುಂಬದ ಸದಸ್ಯರು ತಮ್ಮನ್ನು ಅರ್ಥ ಮಾಡಿಕೊಳ್ಳುವವರಿದ್ದಾರೆ ಎಂಬ ನಿರಾಳತೆಯನ್ನು ಇಲ್ಲಿ ಕಂಡುಕೊಳ್ಳುತ್ತಾರೆ.

ನನ್ನ ಮಗಳು ಮನೆಯ ಬಳಿಯಲ್ಲಿರುವ ಸಣ್ಣ ಅಂಗಡಿಯಲ್ಲಿ ಕೆಲಸ ಮಾಡಿ ಸ್ವಲ್ಪ ಸಂಪಾದಿಸುತ್ತಾಳೆ. ಕೆಲ ದಿನಗಳು ಸರಿ ಇದ್ದರೆ, ಕೆಲ ದಿನಗಳು ಅಷ್ಟು ಒಳ್ಳೆಯ ದಿನ ಆಗಿರುವುದಿಲ್ಲ. ಆಕೆಯ ಜೊತೆ ಯಾವಾಗ ಮಾತನಾಡಬೇಕು ಮತ್ತು ಯಾವಾಗ ಆಕೆಯನ್ನು ಒಂಟಿಯಾಗಿ ಬಿಡಬೇಕು ಎಂಬುದನ್ನು ನಾವು ಅರಿತಿದ್ದೇವೆ.

ಆಕೆ ನಿತ್ಯದ ಕೆಲಸ ಮಾಡುವ ಮಟ್ಟಿಗೆ ಚಿಕಿತ್ಸೆ ಪಡೆದಳು ಎಂಬುದೇ ನನಗೆ ನೆಮ್ಮದಿ. ಔಷಧಗಳಿಲ್ಲದೇ ಆಕೆ ಬದುಕುವುದೇ ಕಷ್ಟವಾಗುತ್ತಿತ್ತು. ಹಲವು ವರ್ಷಗಳಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯ ಬೀಳಲಿಲ್ಲ.

ನಾನು ಮತ್ತು ನನ್ನ ಮಗಳು ವಾಕ್‌ ಹೋಗುತ್ತೇವೆ. ಆಕೆಗೆ ವ್ಯಾಯಾಮ ಬೇಕಿದೆ ಆದರೆ ತಾನಾಗಿ ಹೊರಡುವಷ್ಟು ಸ್ಫೂರ್ತಿ ಅವಳಿಗಿರುವುದಿಲ್ಲ ಎಂದು ನನಗೆ ಅರ್ಥವಾಗಿದೆ. ಆಕೆಯ ಸಹೋದರರು ಆಗಾಗ ಮನೆಗೆ ಬಂದು, ಅವಳನ್ನು ಮಾತನಾಡಿಸಿ, ಶಾಪಿಂಗ್‌ ಅಥವಾ ಸಿನಿಮಾಗೆ ಕರೆದೊಯ್ಯುತ್ತಾರೆ. ನಮ್ಮೆಲ್ಲರಿಗಿಂತ ಹೆಚ್ಚು ಪ್ರೀತಿಯನ್ನು ಬಯಸುವ ಓರ್ವ ಸದಸ್ಯೆಯನ್ನು ಹೊಂದಿರುವ ನಮ್ಮದು ಸಾಮಾನ್ಯ ಕುಟುಂಬವಾಗಿದೆ.

ನಿಮ್ಹಾನ್ಸ್‌ನ ವಿಶೇಷ ಶ್ರೇಣಿಯ ಮನೋವೈದ್ಯೆ ಡಾ. ಸಬೀನಾ ರಾವ್‌, ನಿರೂಪಕರ ನೆರವಿನಿಂದ ದಾಖಲಿಸಿದ ಈ ಪ್ರಕರಣ ನೈಜವಾದುದು. ಗೌಪ್ಯತೆಯ ದೃಷ್ಟಿಯಿಂದ ಹೆಸರುಗಳನ್ನು ಬದಲಿಸಲಾಗಿದೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org