ಗೀಳು ಬೇನೆ [ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್- (OCD)]
ಗೀಳು ಬೇನೆ (ಒಸಿಡಿ) ಎಂದರೇನು?
ದಿನವಿಡಿಯ ಬಳಲಿಕೆಯಿಂದ ರಾತ್ರಿ ವಿಶ್ರಾಂತಿ ಪಡೆಯಲು, ನಿದ್ರೆ ಮಾಡಲು ನೀವು ಹೊರಟಿರುತ್ತೀರಿ; ಆದರೆ ಮನೆಯ ಮುಂದಿನ ಬಾಗಿಲನ್ನು ಲಾಕ್ ಮಾಡಲು ಮರೆತಿದ್ದೀರಿ ಎಂದು ಆಗ ನೆನಪಾಗುತ್ತದೆ. ನೀವು ಆತಂಕಗೊಂಡು ಹೋಗಿ ನೋಡುತ್ತೀರಿ. ಬಾಗಿಲು ಲಾಕ್ ಆಗಿದೆ ಎಂದು ನಿಮಗೆ ಖಾತ್ರಿಯಾದ ನಂತರ ಆರಾಮವಾಗಿ ಮಲಗುತ್ತೀರಿ. ನೀವು ನಿಮ್ಮ ಸುತ್ತಮುತ್ತಲಿನ ಆಗುಹೋಗುಗಳ ಕುರಿತಾಗಿ ಎಚ್ಚರಿಕೆಯಿಂದ ಇರುತ್ತೀರಿ ಎನ್ನುವುದನ್ನು ಈ ಸಾಮಾನ್ಯ ಆತಂಕ ಬಿಂಬಿಸುತ್ತದೆ. ಆದ್ದರಿಂದ ಇದು ಒಳ್ಳೆಯದು.
ಆದರೆ ಕೆಲವು ಸಂದರ್ಭಗಳಲ್ಲಿ, ಈ ರೀತಿಯ ಕ್ರಿಯೆಗಳು ನಿಮ್ಮಲ್ಲಿ ಮತ್ತೆ ಮತ್ತೆ ಪುನರಾವರ್ತಿತವಾಗಬಹುದು ಹಾಗೂ ಗೊಂದಲ ಉಂಟುಮಾಡಬಹುದು. ಬಾಗಿಲನ್ನು ಲಾಕ್ ಮಾಡಿರುವುದನ್ನು ಖಚಿತಪಡಿಸಿಕೊಂಡು ಬಂದು ಮಲಗಿದ ಸ್ವಲ್ಪ ಸಮಯದಲ್ಲಿ ಮತ್ತೆ ನೀವು ಆ ಕುರಿತು ಸಂಶಯ ಬಂದು ತಳಮಳಗೊಳ್ಳಬಹುದು. ನಂತರ ಮತ್ತೆ ಎದ್ದು ಹೋಗಿ ಬಾಗಿಲು ಲಾಕ್ ಆಗಿರುವುದನ್ನು ಇನ್ನೊಮ್ಮೆ ಖಚಿತಪಡಿಸಿಕೊಂಡು ಬಂದು ಮಲಗಿದಾಗಲೂ ಅಭದ್ರತೆಯ ಚಿಂತೆ ನಿಮ್ಮನ್ನು ಕಾಡಬಹುದು. ಈ ರೀತಿಯ ಪುನರಾವರ್ತಿತ ವರ್ತನೆಗಳಿಂದ ನೀವು ಆತಂಕಗೊಳ್ಳಬಹುದು ಹಾಗೂ ಅದು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಈ ರೀತಿಯ ವರ್ತನೆಯನ್ನು ಗೀಳು ಮನೋಬೇನೆ ಎನ್ನುವರು. ಇದು ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿ ಇರಬಹುದು; ಕೆಲವು ಜನರು ಸ್ವಚ್ಛತೆಯ ಕುರಿತಾಗಿ ಒಬ್ಸೆಶನ್ ಹೊಂದಿರಬಹುದು. ಕೈಗಳನ್ನು ತೊಳೆದುಕೊಂಡು ಒಂದು ನಿಮಿಷ ಆಗುವ ಮೊದಲೇ ಅವರ ಕೈಗಳಲ್ಲಿ ರೋಗಾಣುಗಳು ಮತ್ತೆ ಅಂಟಿಕೊಂಡಿವೆ ಎಂದು ಅವರು ಚಿಂತಿತರಾಗಬಹುದು.
ಗೀಳು ಬೇನೆಯಿಂದ ಬಳಲುತ್ತಿರುವ ವ್ಯಕ್ತಿಗಳು ತೀವ್ರವಾದ ಆತಂಕ ಮತ್ತು ಒತ್ತಡವನ್ನು ಎದುರಿಸುತ್ತಾರೆ. ಈ ಆತಂಕದಿಂದ ಹೊರಬರಲು, ಅವರು ತಮ್ಮ ಕ್ರಿಯೆಗಳನ್ನು, ವರ್ತನೆಗಳನ್ನು ಪುನರಾವರ್ತಿಸಬಹುದು. ಇದನ್ನು ಕಂಪಲ್‌ಶನ್ (ಪ್ರಚೊದನೆ) ಎನ್ನಲಾಗುತ್ತದೆ.
ಗೀಳು ಬೇನೆ ತೊಂದರೆ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಕಂಪಲ್‌ಶನ್ ತಾತ್ಕಾಲಿಕ ನೆಮ್ಮದಿಯನ್ನು ನೀಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಪುನರಾವರ್ತಿತ ಕ್ರಿಯೆಗಳ ಬಯಕೆಯು ಅವರ ದೈನಂದಿನ ಚಟುವಟಿಕೆಗಳನ್ನು ಕುಂಠಿತಗೊಳಿಸಬಹುದು. ಪ್ರಚೋದನೆಯಿಂದ ಪ್ರೇರಿತ ನಡುವಳಿಕೆ ಪುನರಾವರ್ತಿತವಾಗುತ್ತ ಹೊದಂತೆಲ್ಲ ಗೀಳು ಅಧಿಕವಾಗತೊಡಗುತ್ತದೆ. ಆಗ ವ್ಯಕ್ತಿಗಳ ದೈನಂದಿನ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಉಂಟಾಗತೊಡಗುತ್ತದೆ. ಇದನ್ನು OCDಎಂದು ಪರಿಗಣಿಸಬಹುದು.
ಗೀಳು ಬೇನೆಯ ಲಕ್ಷಣಗಳೇನು?
ವ್ಯಕ್ತಿಯೋರ್ವನ ಕಂಪಲ್ಸಿವ್ ವರ್ತನೆಗಳನ್ನು ಗಮನಿಸುವ ಮೂಲಕ ಒಸಿಡಿಯನ್ನು ಪತ್ತೆಹಚ್ಚಬಹುದು. ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳೆಂದರೆ:
-
ಸ್ವಚ್ಛತೆ: ಕೆಲವು ವ್ಯಕ್ತಿಗಳು ನಿರಂತರವಾಗಿ ಮಾಲಿನ್ಯದ ಕುರಿತಾಗಿ ಭಯ ಹೊಂದಿರುತ್ತಾರೆ; ಅವರು ಪದೆಪದೆ ಕೈಗಳನ್ನು ತೊಳೆಯುತ್ತಿರುತ್ತಾರೆ ಹಾಗೂ ಮನೆಯನ್ನು ಸ್ವಚ್ಛಗೊಳಿಸುತ್ತಿರುತ್ತಾರೆ.
-
ಅನುಕ್ರಮ : ಕೆಲವರು ಸಮರೂಪತೆ ಹಾಗೂ ಅನುಕ್ರಮ ಜೋಡಣೆಯ ಕುರಿತಾದ ಗೀಳು ಹೊಂದಿರುತ್ತಾರೆ. ಅವರು ತಮ್ಮ ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಪುಸ್ತಕಗಳನ್ನು ಮತ್ತೆ ಮತ್ತೆ ಜೋಡಿಸುವುದು, ಅಡಿಗೆ ಮನೆಯ ಚಾಕು ಇತ್ಯಾದಿ ಉಪಕರಣಗಳು ಅಥವಾ ಕಾರ್ಪೆಟ್, ದಿಂಬು ಮತ್ತು ಕುಶನ್‌ಗಳನ್ನು ಪದೆಪದೆ ಜೋಡಿಸುತ್ತಿರುತ್ತಾರೆ.
-
ಕೂಡಿಡುವಿಕೆ: ಕೆಲವರು ಎಲ್ಲವನ್ನೂ ಕೂಡಿಡುವ ಪ್ರವೃತ್ತಿ ಹೊಂದಿರುತ್ತಾರೆ. ಅವರಿಂದ ಏನನ್ನೂ ಎಸೆಯಲು ಸಾಧ್ಯವಾಗದು. ಅವರು ಸಾಮಾನ್ಯವಾಗಿ ದಿನಪತ್ರಿಕೆಗಳನ್ನು, ಹಳೆಯ ಬಟ್ಟೆಗಳನ್ನು, ಪತ್ರಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಕೂಡಿಡುತ್ತಾರೆ. ಆದರೆ ಹಾಗೆ ಸಂಗ್ರಹಿಸಿಡಲು ಅವರಿಗೆ ಯಾವುದೇ ನಿರ್ದಿಷ್ಟ ಕಾರಣಗಳಿರುವುದಿಲ್ಲ.
-
ಎಣಿಕೆ: ಈ ತೆರನಾದ ವ್ಯಕ್ತಿಗಳು ಅವರ ವಸ್ತುಗಳನ್ನು ಪದೆಪದೆ ಎಣಿಕೆ ಮಾಡುತ್ತಿರುತ್ತಾರೆ. ದಿನನಿತ್ಯ ಬಳಕೆಮಾಡುವ ಕೆಲವು ವಸ್ತುಗಳ ಕುರಿತಾಗಿಯೂ ಅದೇ ರೀತಿ ವರ್ತಿಸುತ್ತಿರುತ್ತಾರೆ. ಉದಾಹರಣೆಗೆ ಮಹಡಿ ಏರುವಾಗ ಮೆಟ್ಟಿಲುಗಳನ್ನು ಎಣಿಸುವುದು, ದಾರಿಯಲ್ಲಿ ಬೀದಿ ದೀಪಗಳನ್ನು ಎಣಿಸುವುದು ಇತ್ಯಾದಿ. ಒಂದು ವೇಳೆ ಎಣಿಕೆ ಮಾಡುವಾಗ ಲೆಕ್ಕ ತಪ್ಪಿ ಹೋದರೆ ಅವರು ಮತ್ತೆ ಮೊದಲಿನಿಂದ ಎಣಿಸುತ್ತಾರೆ.
-
ಭದ್ರತೆ: ಕೆಲವು ಜನರು ಭದ್ರತೆಯ ಕುರಿತಾಗಿ ಅನಗತ್ಯ ಭಯ ಹೊಂದಿರುತ್ತಾರೆ. ಅವರು ನಿರಂತರವಾಗಿ ಮನೆಯ ಬಾಗಿಲು ಹಾಗೂ ಕಿಟಕಿಗಳು ಭದ್ರವಾಗಿವೆಯೇ ಎಂದು, ಗ್ಯಾಸ್ ಅಥವಾ ಒಲೆಯ ಬೆಂಕಿಯನ್ನು ಆರಿಸಿದ್ದೇವೆಯೇ ಎನ್ನುವುದನ್ನು ಪರೀಕ್ಷಿಸುತ್ತಿರುತ್ತಾರೆ.
ಈ ರೀತಿಯಾಗಿ ವರ್ತಿಸುವ ವ್ಯಕ್ತಿಗಳು ನಿಮ್ಮ ಗಮನಕ್ಕೆ ಬಂದರೆ, ಅವರೊಂದಿಗೆ ವಿಷಯದ ಕುರಿತಾಗಿ ಮಾತನಾಡಲು ಪ್ರಯತ್ನಿಸಿ ಹಾಗೂ ಮಾನಸಿಕ ಆರೋಗ್ಯ ವೃತ್ತಿಪರರ ಸಲಹೆ ತೆಗೆದುಕೊಳ್ಳಲು ಅವರನ್ನು ಪ್ರೋತ್ಸಾಹಿಸಿ.
ಗೀಳು ಬೇನೆ (ಒಸಿಡಿ) ಉಂಟಾಗಲು ಕಾರಣಗಳೇನು?
ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (OCD) ಸಮಸ್ಯೆ ಉಂಟಾಗಲು ನಿರ್ದಿಷ್ಟ ಕಾರಣಗಳೇನು ಎನ್ನುವುದು ಸ್ಪಷ್ಟವಾಗಿಲ್ಲವಾದರೂ, ಕೆಲವು ಕಾರಣಗಳನ್ನು ಹೀಗೆ ಹೆಸರಿಸಬಹುದು:
-
ವಂಶವಾಹಿ ಅಂಶಗಳು: ಒಸಿಡಿಯು (OCD) ಕೆಲವೊಮ್ಮೆ ವಂಶಪಾರಂಪರ್ಯವಾಗಿ ಉಂಟಾಗಬಹುದು.
-
ಜೈವಿಕ/ನರವೈಜ್ಞಾನಿಕ ಅಂಶಗಳು: ಕೆಲವು ಅಧ್ಯಯನಗಳು ಸೂಚಿಸುವಂತೆ, ಮಿದುಳಿನ ಸೆರ್ಟಾನಿನ್‌ನಲ್ಲಿನ ರಾಸಾಯನಿಕ ಅಸಮತೋಲನ ಒಸಿಡಿಗೆ (OCD) ಕಾರಣವಾಗಬಹುದು.
-
ಬದುಕಿನಲ್ಲಿನ ಬದಲಾವಣೆಗಳು: ಕೆಲವು ಸಂದರ್ಭಗಳಲ್ಲಿ ಬದುಕಿನಲ್ಲಾಗುವ ಮಹತ್ವದ ಬದಲಾವಣೆಗಳು ಒಸಿಡಿಗೆ (OCD) ಕಾರಣವಾಬಹುದು. ಉದಾಹರಣೆಗೆ ಹೊಸ ಕೆಲಸ ಅಥವಾ ಮಗುವಿನ ಜನನದಿಂದ ಹೆಚ್ಚಾಗುವ ಜವಾಬ್ದಾರಿಗಳು ಇತ್ಯಾದಿ.
-
ವರ್ತನೆಯ ಅಂಶಗಳು: ಅತಿಶಿಸ್ತು, ಅಚ್ಚುಕಟ್ಟು, ಕರಾರುವಾಕ್ಕುತನ ಹಾಗೂ ಚಿಕ್ಕ ವಯಸ್ಸಿನಿಂದಲೂ ಮುಖಂಡತ್ವ ಮನೋಭಾವ ಹೊಂದಿರುವ ವ್ಯಕ್ತಿಗಳು ಕೆಲವೊಮ್ಮೆ ಒಸಿಡಿಗೆ(OCD) ತುತ್ತಾಗಬಹುದಾದ ಅಪಾಯವಿದೆ.
-
ವೈಯಕ್ತಿಕ ಅನುಭವಗಳು: ತೀವ್ರವಾದ ಆಘಾತ ಅನುಭವಿಸಿರುವ ವ್ಯಕ್ತಿಗಳು ಒಸಿಡಿಗೆ (OCD) ಒಳಗಾಗಬಹುದು. ಉದಾಹರಣೆಗೆ, ಯಾವತ್ತೋ ಒಮ್ಮೆ ಮನೆಯಲ್ಲಿ ಇಲಿ ಪಾಷಾಣವನ್ನು ಮುಟ್ಟಿದ್ದರ ಪರಿಣಾಮವಾಗಿ ತೀವ್ರಸ್ವರೂಪದ ದದ್ದುಗಳುಂಟಾಗಿದ್ದು ಮುಂದೆ ಪದೆಪದೆ ಕೈತೊಳೆಯಬೇಕೆನಿಸುವ ಗೀಳಿಗೆ ಕಾರಣವಾಗಬಹುದು.
ಗೀಳು ಬೇನೆಯ (ಒಸಿಡಿ) ಚಿಕಿತ್ಸೆ
ಗೀಳು ಮನೋವ್ಯಾಧಿಗೆ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಚಿಕಿತ್ಸೆ ಪಡೆದ ಹೆಚ್ಚಿನ ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸಮಸ್ಯೆಯ ತೀವ್ರತೆಯನ್ನು ಪರೀಕ್ಷಿಸಿ ಬೇರೆ ಬೇರೆ ವಿಧದ ಔಷಧ ಹಾಗೂ ಥೆರಪಿಗಳನ್ನು ನೀಡಲಾಗುತ್ತದೆ. ಅಸ್ವಸ್ಥತೆಯ ಪ್ರಮಾಣ ಕಡಿಮೆಯಿದ್ದಲ್ಲಿ, ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಮಾತ್ರವೇ ಸಾಕಾಗುತ್ತದೆ. ಅತಿ ಹೆಚ್ಚಿನ ತೊಂದರೆಯ ಸಂದರ್ಭದಲ್ಲಿ ಔಷಧೋಪಚಾರವನ್ನು ಶಿಫಾರಸ್ಸು ಮಾಡಲಾಗುತ್ತದೆ. ಆತಂಕವನ್ನು ಕಡಿಮೆ ಮಾಡಲು ಶಮನಕಾರಿಗಳನ್ನು ಸಾಮಾನ್ಯವಾಗಿ ಶಿಫಾರಸ್ಸು ಮಾಡುತ್ತಾರೆ.
ಗೀಳು ಬೇನೆಗೆ ಒಳಗಾದವರ ಆರೈಕೆ
ಗೀಳಿನ ತೊಂದರೆ ಹೊಂದಿರುವ ವ್ಯಕ್ತಿಗಳ ಜೊತೆ ಇರುವುದು ಕೆಲವೊಮ್ಮೆ ಪ್ರಕ್ಷುಬ್ಧ ಭಾವನೆ ಉಂಟುಮಾಡುತ್ತದೆ. ಗೀಳುರೋಗದಿಂದ ಬಳಲುವ ವ್ಯಕ್ತಿಗಳು ಇತರರಿಗೆ ಹೊರೆಯಾಗಿರಲು ಪ್ರಯತ್ನಿಸುವುದಿಲ್ಲ, ಹೊರತಾಗಿ ತಮ್ಮ ಆತಂಕಗಳೊಂದಿಗೆ ಆದಷ್ಟೂ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಮುಖ್ಯವಾಗಿ ಇತರರು ನೆನಪಿಡಬೇಕು. ಆದ್ದರಿಂದ ಅವರಿಗಿರುವ ತೊಂದರೆಯ ಕುರಿತಾಗಿ ತಾಳ್ಮೆಯಿಂದ ಅವರೊಂದಿಗೆ ಮಾತನಾಡಬೇಕು. ಅಸ್ವಸ್ಥತೆಯಿಂದ ಹೊರಬರಲು ಇತರರ ಸಹಾಯ, ಚಿಕಿತ್ಸೆ ತೆಗೆದುಕೊಳ್ಳುವಂತೆ ಅವರಿಗೆ ತಿಳಿಸುವುದು ಕಷ್ಟವಾದ ವಿಷಯ. ಏಕೆಂದರೆ ಗೀಳಿನಿಂದ ತೊಂದರೆ ಅನುಭವಿಸುತ್ತಿರುವ ಹೆಚ್ಚಿನ ಜನರು ತಮಗೆ ಇತರರ ಸಹಾಯ ಬೇಕೆನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ತಮಗಿರುವ ಗೀಳಿನ ತೊಂದರೆಯ ಕುರಿತಾಗಿ ಅವಮಾನದ ಭಾವನೆ ಹೊಂದಿರುತ್ತಾರೆ. ಆದ್ದರಿಂದ ಆರೈಕೆದಾರರಾಗಿ ನೀವು ಅವರು ಸಮಸ್ಯೆಯಿಂದ ಚೇತರಿಸಿಕೊಳ್ಳಲು ಸಕ್ರಿಯವಾಗಿ ಸಹಕರಿಸಬೇಕು. ಅವರಲ್ಲಿನ ಭಯವನ್ನು ಎದುರಿಸಲು ಸಮಯಕ್ಕೆ ತಕ್ಕಂತೆ ಅವರಿಗೆ ಪ್ರೋತ್ಸಾಹ ನೀಡಬೇಕು. ಆದಾಗ್ಯೂ, ಪ್ರಾರಂಭದ ಹಂತದಲ್ಲಿ ವೃತ್ತಿಪರರ ಸಹಾಯ ತೆಗೆದುಕೊಳ್ಳುವುದು ಅವಶ್ಯಕ.
ನಿಮ್ಮನ್ನು ನೀವು ನೋಡಿಕೊಳ್ಳಿ
ಗೀಳು ಮನೋವ್ಯಾಧಿಯ ಕುರಿತಾಗಿ ನೀವು ನಂಬುವ ಅತಿ ಆಪ್ತರಲ್ಲಿ ಚರ್ಚಿಸುವುದು ಇದನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ಒಬ್ಸೆಶನ್ಸ್ ಕುರಿತಾಗಿ ನಿಮ್ಮಲ್ಲಿರುವ ಭಯವನ್ನು ಹೋಗಲಾಡಿಸಲು ಗಣನೀಯ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ದೈಹಿಕ ಚಟುವಟಿಕೆಗಳು, ಉದಾಹರಣೆಗೆ ಆಟೋಟಗಳು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ ಮತ್ತು ಗೀಳಿಗೆ ಸಂಬಂಧಿಸಿ ಪುನರಾವರ್ತಿಸುವ ಆಲೋಚನೆಗಳನ್ನು ಅಲಕ್ಷಿಸಲು ಸಹಾಯ ಮಾಡುತ್ತವೆ. ನಿಮಗೆ ನೀವೇ ಸಹಾಯ ಮಾಡಿಕೊಳ್ಳಬಹುದಾದ ಅತಿ ಪ್ರಮುಖವಾದ ವಿಧಾನವೆಂದರೆ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡುವುದು. ನಿಮ್ಮ ದೈನಂದಿನ ಚಿಕಿತ್ಸೆಯೊಂದಿಗೆ, ಗೀಳುಮನೋವ್ಯಾಧಿಯನ್ನು ನಿರ್ವಹಣೆ ಮಾಡಲು ತಜ್ಞರು ನಿಮಗೆ ಹೆಚ್ಚಿನ ಕ್ರಿಯಾಶೀಲ ಯೋಜನೆಗಳನ್ನು ರೂಪಿಸಿಕೊಡುತ್ತಾರೆ.