ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್

Q

ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ಎಂದರೇನು?

A

ಮಾನಸಿಕ ಅಸ್ವಸ್ಥತೆಯ ಬಗ್ಗೆ ನಾವು ಮಾತನಾಡುವಾಗ, ಜೈವಿಕ, ವಂಶವಾಹಿ ಅಥವಾ ವಾತಾವರಣದ ಅಂಶಗಳು ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಅದು ಬೇರೆ ಬೇರೆ ರೀತಿಯ ಮಾನಸಿಕ ಖಾಯಿಲೆ ಉಂಟು ಮಾಡುತ್ತದೆ ಎಂದು ನಮ್ಮಲ್ಲಿ ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ. ಆದಾಗ್ಯೂ, ಮೆದುಳಿನ ಗಾಯ, ನರಗಳ ತೊಂದರೆ, ಶಸ್ತ್ರಚಿಕಿತ್ಸೆ, ಮುಂತಾದ ಕೆಲ ದೈಹಿಕ ಖಾಯಿಲೆಗಳು, ಅತಿಯಾದ ದೈಹಿಕ ಗಾಯಗಳು, ಮಾನಸಿಕ ಆಘಾತ ಕೂಡ ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು.

ನಿಧಾನವಾಗಿ ಮೆದುಳಿನ ಕಾರ್ಯಚಟುವಟಿಕೆ ಕಡಿಮೆಯಾಗುವುದರಿಂದ ಉಂಟಾಗುವ ಯಾವುದೇ ಸ್ಥಿತಿಯನ್ನು ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ಅಥವಾ ಆರ್ಗ್ಯಾನಿಕ್ ಬ್ರೇನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಒಂದು ರೋಗವಲ್ಲ

ತಲೆಗೆ ಆಗುವ ಗಾಯಗಳಿಂದ (ತೀವ್ರವಾದ ತಲೆನೋವು, ಪಾರ್ಶ್ವವಾಯು, ರಾಸಾಯನಿಕ ಮತ್ತು ವಿಷಕಾರಿ ಅಂಶಗಳ ಪರಿಣಾಮ, ಮಾದಕ ದ್ರವ್ಯ ಸೇವನೆ ಇತ್ಯಾದಿ) ಮೆದುಳಿನ ಕೋಶಗಳಿಗೆ ಹಾನಿಯಾಗಬಹುದು ಅಥವಾ ಮನೋಸಾಮಾಜಿಕ ಅಂಶಗಳಾದ ಕೊರತೆ, ದೈಹಿಕ ನೋವು ಮತ್ತು ತೀವ್ರವಾದ ಮಾನಸಿಕ ಆಘಾತಗಳಿಂದಲೂ ಮೆದುಳಿನ ಕೋಶಗಳಿಗೆ ತೊಂದರೆಯಾಗಬಹುದು. ಈ ಸ್ಥಿತಿಗೆ ಒಳಗಾದ ವ್ಯಕ್ತಿಯು ಆಲೋಚಿಸುವ, ನೆನಪಿನಲ್ಲಿಟ್ಟುಕೊಳ್ಳುವ, ಗ್ರಹಿಸುವ ಮತ್ತು ಕಲಿಯುವ ಸಾಮರ್ಥ್ಯವನ್ನು ಹೊಂದಿರಬಹುದು ಆದರೆ ಅವುಗಳ ಶಕ್ತಿ ಸ್ವಲ್ಪ ಕಡಿಮೆಯಿದ್ದು, ನಿರಂತರ ಮೇಲ್ವಿಚಾರಣೆ ಬೇಕಾಗಬಹುದು. ಅದನ್ನು ಗಮನಿಸದೇ ಹಾಗೆಯೇ ಬಿಟ್ಟರೆ, ಖಾಯಿಲೆಯ ಸ್ಥಿತಿ ಹದಗೆಟ್ಟು ಹೆಚ್ಚು ಸಮಸ್ಯೆಗಳು ಉಂಟಾಗಬಹುದು.

ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ತಾತ್ಕಾಲಿಕ, ತೀವ್ರ (ಡೆಲಿರಿಯಂ) ಅಥವಾ ಶಾಶ್ವತ, ಹಾಗೂ ದೀರ್ಘಕಾಲೀನ ಅಥವಾ ನಿರಂತರವಾಗಿ ಭಾದಿಸಬಹುದು (ಡೆಮೆನ್ಶಿಯಾ).

Q

ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ಗೆ ಕಾರಣಗಳೇನು?

A

ಅನೇಕ ರೀತಿಯ ಅಂಶಗಳು ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ಉಂಟಾಗಲು ಕಾರಣವಾಗುತ್ತವೆ.

ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ಗೆ ಕಾರಣವಾಗುವ ದೈಹಿಕ ಅಥವಾ ವೈದ್ಯಕೀಯ ಅಂಶಗಳು :

ಆಘಾತದಿಂದಾದ  ಮೆದುಳಿಗೆ ಉಂಟಾಗುವ ಹಾನಿ

  • ಮೆದುಳಿನೊಳಗೆ ಉಂಟಾಗುವ ರಕ್ತಸ್ರಾವ

  • ಮೆದುಳಿನ ಸುತ್ತಲೂ ಉಂಟಾಗುವ ರಕ್ತಸ್ರಾವ

  • ತಲೆ ಚಿಪ್ಪಿನೊಳಗೆ ರಕ್ತ ಹೆಪ್ಪುಗಟ್ಟಿ ಮೆದುಳಿನಲ್ಲಿ ಉಂಟಾಗುವ ಒತ್ತಡ

  • ಬಲವಾದ ಏಟುಗಳು

ಉಸಿರಾಟದ ಸ್ಥಿತಿ

  • ದೇಹದಲ್ಲಿ ಕಡಿಮೆಯಿರುವ ಆಮ್ಲಜನಕದ (oxygen) ಪ್ರಮಾಣ

  • ದೇಹದಲ್ಲಿ ಕಾರ್ಬನ್ ಡೈ ಆಕ್ಸೈಡ್ (carbondioxide)ಪ್ರಮಾಣ ಹೆಚ್ಚಿರುವುದು

ಹೃದಯದ ರಕ್ತನಾಳಗಳಲ್ಲಿನ ಸ್ಥಿತಿ

  • ಪಾರ್ಶ್ವವಾಯು

  • ಹಲವು ಸಲ ಲಕ್ವ ಹೊಡೆಯುವದರಿಂದ ಉಂಟಾಗುವ ಮರೆಗುಳಿತನ

  • ಹೃದಯದ ಸೋಂಕುಗಳು

  • ಟ್ರಾನ್ಸಿಯೆಂಟ್ ಐಸ್ಕೆಮಿಕ್ ಅಟ್ಯಾಕ್ (Transient Ischemic Attack-TIA)

ಉಲ್ಬಣಗೊಳ್ಳುವ ಖಾಯಿಲೆಗಳು:

  • ಆಲ್ಜೈಮರ್ಸ್‌ ಖಾಯಿಲೆ

  • ಮರೆಗುಳಿತನ

  • ಹಂಟಿಗ್ಟಂಟನ್‌ ಖಾಯಿಲೆ

  • ಮಲ್ಟಿಪಲ್‌ ಸ್ಕೆಲರೋಸಿಸ್‌

  • ಪಾರ್ಕಿಸನ್‌ ಖಾಯಿಲೆ

ಇತರ ಸ್ಥಿತಿಗಳು

ಜೈವಿಕ ವಿಸ್ಮೃತಿ ಖಾಯಿಲೆ (ಆರ್ಗ್ಯಾನಿಕ್ ಅಮ್ನೆಸಿಕ್ ಸಿಂಡ್ರೋಮ್): ಈ ಖಾಯಿಲೆ ತಕ್ಷಣ ನೆನಪಾಗುವ ಇತ್ತೀಚಿನ ಮತ್ತು ಹಳೆಯ ನೆನಪುಗಳ ಮೇಲೂ ತೀವ್ರ ಹಾನಿಯನ್ನು ಉಂಟುಮಾಡುತ್ತದೆ. ಕ್ರಮೇಣವಾಗಿ ಹೊಸ ವಿಷಯಗಳನ್ನು ಕಲಿಯುವ ಸಾಮರ್ಥ್ಯವು ಕ್ಷೀಣಗೊಳ್ಳುತ್ತದೆ.

ಭಾವೋದ್ರೇಕ/ಸನ್ನಿ (ಡಿಲಿರಿಯಮ್): ತೀವ್ರವಾಗಿದ್ದರೂ ಇದು ತಾತ್ಕಾಲಿಕವಾದ ಆರ್ಗ್ಯಾನಿಕ್ ಸೆರೆಬ್ರಲ್ ಸಿಂಡ್ರೋಮ್ ಆಗಿದ್ದು, ಪ್ರಜ್ಞೆ, ಗಮನ, ಗ್ರಹಿಕೆ, ಆಲೋಚನೆ, ಜ್ಞಾಪಕ ಶಕ್ತಿ, ನಡವಳಿಕೆ ಮತ್ತು ನಿದ್ದೆ-ಎಚ್ಚರಗೊಳುವಿಕೆ ಮುಂತಾದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

ಮೆದುಳಿನ ಖಾಯಿಲೆ, ಹಾನಿ ಅಥವಾ ನಿಷ್ಕ್ರಿಯತೆಯಿಂದಾಗಿ ವ್ಯಕ್ತಿತ್ವ ಮತ್ತು ವರ್ತನೆಗೆ ಸಂಬಂಧಿಸಿದ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ. 

Q

ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ಲಕ್ಷಣಗಳು:

A

ಮೆದುಳಿನ ಯಾವ ಭಾಗಕ್ಕೆ ತೊಂದರೆಯಾಗಿದೆ ಮತ್ತು ತೊಂದರೆಗೆ ಕಾರಣವೇನು ಎನ್ನುವುದನ್ನು ರೋಗ ಲಕ್ಷಣವು ಅವಲಂಬಿಸಿದೆ. ಸಾಮಾನ್ಯವಾದ ಲಕ್ಷಣಗಳೆಂದರೆ :

ಜ್ಞಾಪಕ ಶಕ್ತಿಯ ನಷ್ಟ: ವ್ಯಕ್ತಿಯು ಕುಟುಂಬ ಸದಸ್ಯರನ್ನು ಹಾಗೂ ಸ್ನೇಹಿತರನ್ನು ಗುರುತಿಸಲು ಅಸಮರ್ಥನಾಗಬಹುದು.

ಗೊಂದಲ: ಈ ಖಾಯಿಲೆಯಿಂದ ಬಳಲುತ್ತಿರುವವರು ಗೊಂದಲಗೊಳ್ಳಬಹುದು ಮತ್ತು ತಾವು ಎಲ್ಲಿದ್ದೇವೆ ಅಥವಾ ಏನು ನಡೆಯುತ್ತಿದೆ ಎನ್ನುವುದನ್ನು ಗುರುತಿಸಲು ಅಸಮರ್ಥರಾಗಬಹುದು.

  • ಮಾತುಕತೆ, ಸಂಭಾಷಣೆಗಳನ್ನು ಅರ್ಥೈಸಿಕೊಳ್ಳಲು ಕಷ್ಟಪಡುವುದು

  • ಆತಂಕ ಮತ್ತು ಭಯ

  • ಗಮನ ನೀಡಲು ಅಥವಾ ಏಕಾಗ್ರತೆಯಿಂದಿರಲು ಸಾಧ್ಯವಾಗದಿರಬಹುದು.

  • ಅಲ್ಪಾವಧಿಯ ಜ್ಞಾಪಕ ಶಕ್ತಿಯ ನಷ್ಟ ( ತಾತ್ಕಾಲಿಕ ಬುದ್ಧಿ ಭ್ರಮಣೆ)

  • ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಕಷ್ಟಪಡುವುದು

  • ದೇಹದ ಸ್ನಾಯುಗಳ ಸ್ವಯಂ ಚಲನವಲನಗಳನ್ನು ನಿಯಂತ್ರಿಸಲು ಕಷ್ಟಪಡುವುದು

  • ದೃಷ್ಟಿಯಲ್ಲಿ ತೊಂದರೆ

  • ಕಳಪೆ ತೀರ್ಮಾನ

  • ದೇಹದ ಸಮತೋಲನ ಕಾಪಾಡಿಕೊಳ್ಳಲು ಪ್ರಯಾಸಪಡುವುದು (ನಡೆಯುವಾಗ, ನಿಲ್ಲುವಾಗ)

  • ಒಮ್ಮೊಮ್ಮೆ ವ್ಯಕ್ತಿಯು ಅತ್ಯುತ್ಸಾಹಿಯಾಗಬಹುದು ಅಥವಾ ಸಂಶಯಗ್ರಸ್ಥ ಆಲೋಚನೆಗಳನ್ನು ಹೊಂದಬಹುದು

Q

ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ಪತ್ತೆಮಾಡುವುದು ಹೇಗೆ?

A

ಈ ಖಾಯಿಲೆ ಕೆಲ ಲಕ್ಷಣಗಳು ಇತರ ಮಾನಸಿಕ ತೊಂದರೆಯ ಲಕ್ಷಣಗಳಿಗೆ ಹೋಲಿಕೆಯಾಗಬಹುದು. ಹೀಗಾಗಿ ಮಾನಸಿಕ ತಜ್ಞರು ವಿವಿಧ ರೀತಿಯ ಪರೀಕ್ಷೆಗಳಿಂದ ಸರಿಯಾಗಿ ತಪಾಸಣೆ ಮಾಡುತ್ತಾರೆ.

ಆ ನಿಟ್ಟಿನಲ್ಲಿ ಕೆಲವು ಪರೀಕ್ಷೆಗಳು:

  • ಮೆದುಳಿನ ಹಾನಿ ಪರಿಶೀಲಿಸಲು ಎಂ.ಆರ್‌.ಐ ಸ್ಕ್ಯಾನಿಂಗ್ (MRI scan) ಮಾಡಬಹುದು.

  • ಮೆದುಳಿನಲ್ಲಿ ಹಾನಿಗೊಳಗಾದ ಭಾಗ ಪತ್ತೆಮಾಡಲು ಪೋಸಿಟ್ರಾನ್ ಎಮಿಶನ್ ಟೋಮೋಗ್ರಫಿ (positron emission tomography-PET) ಮಾಡಬಹುದು

  • ಬ್ಯಾಕ್ಟೀರಿಯಲ್ ಮೆನಿಂಜೈಟಿಸ್ ನಂತಹ ಮೆದುಳಿನ ಸೋಂಕು ಪತ್ತೆಗೆ ಸೆರೆಬ್ರೋಸ್ಪೈನಲ್ ದ್ರವ ಗುರುತುಕಾರಕಗಳನ್ನು ಬಳಸಬಹುದು

Q

ಆರ್ಗ್ಯಾನಿಕ್ ಮೆಂಟಲ್ ಡಿಸಾರ್ಡರ್ ಚಿಕಿತ್ಸೆ

A

ಖಾಯಿಲೆಯ ತೀವ್ರತೆ ಅಥವಾ ಯಾವ ಖಾಯಿಲೆಯಿಂದ ಈ ತೊಂದರೆ ಸಂಭವಿಸಿತು ಎಂಬುದರ ಮೇಲೆ ಚಿಕಿತ್ಸೆಯು ಅವಲಂಬಿಸಿರುತ್ತದೆ. ಬಲವಾದ ಏಟು ಬೀಳುವದು ಮುಂತಾದ ತಾತ್ಕಾಲಿಕ ಜೈವಿಕ ಮಾನಸಿಕ ಆರೋಗ್ಯ ತೊಂದರೆಗೆ ವಿಶ್ರಾಂತಿ ಮತ್ತು ಔಷಧ ಸಾಕಾಗಬಹುದು.

ಪುನಶ್ಚೇತನ ಮತ್ತು ಪೂರಕ ಚಿಕಿತ್ಸೆಯೊಂದಿಗೆ ಈ ಖಾಯಿಲೆಯ ಹೆಚ್ಚಿನ ಸ್ಥಿತಿಯನ್ನು ಗುಣಪಡಿಸಬಹುದು. ವ್ಯಕ್ತಿಯ ಚೇತರಿಕೆಯ ಮಟ್ಟ ಸುಧಾರಣೆಗೆ ದೈಹಿಕ ಚಿಕಿತ್ಸೆ (ವಾಕಿಂಗ್) ಮತ್ತು ವೃತ್ತಿ  ಚಿಕಿತ್ಸೆಯನ್ನು (occupational therapy) ನೀಡಬಹುದು. ಈ ಚಿಕಿತ್ಸೆಯು ದೈನಂದಿನ ಚಟುವಟಿಕೆಗಳನ್ನು ಮತ್ತೆ ಕಲಿಯಲು ಸಹಕರಿಸುವುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org