ವ್ಯಕ್ತಿತ್ವದ ಖಾಯಿಲೆ

Q

ವ್ಯಕ್ತಿತ್ವ ಎಂದರೇನು?

A

ಒಬ್ಬ ವ್ಯಕ್ತಿಯು ಜನರ ಬಳಿ ಹೇಗೆ ವ್ಯವಹರಿಸುತ್ತಾನೆ, ಸಂಬಂಧವನ್ನಿಟ್ಟುಕೊಳ್ಳುತ್ತಾನೆ ಎನ್ನುವುದನ್ನು ವಿವರಿಸಲು ಮನೋವೈಜ್ಞಾನಿಕ ಸಂದರ್ಭದಲ್ಲಿ ವ್ಯಕ್ತಿತ್ವ ಎಂಬ ಪದವನ್ನು ಬಳಸಲಾಗುತ್ತದೆ. ನಾವು ಹೇಗೆ ವರ್ತಿಸುತ್ತೇವೆ ಮತ್ತು ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತೇವೆಂಬ ಎಲ್ಲ ರೀತಿಯ ಗುಣಸ್ವಭಾವಗಳ ಒಟ್ಟಾರೆಯಾದ ಚಿತ್ರಣವೇ ವ್ಯಕ್ತಿತ್ವ.

ನಮ್ಮ ಪಾಲಕರಿಂದ ಆನುವಂಶಿಕವಾಗಿ ಪಡೆಯಲಾದ ವಂಶವಾಹಿಗಳ ಕಾರಣದಿಂದಾಗಿ ನಮ್ಮಲ್ಲಿ ಕೆಲವು ಅಂತರ್ಗತ ಗುಣಸ್ವಭಾವಗಳು ಬಂದಿರುತ್ತವೆ. ನಮ್ಮ ಅನುಭವ ಮತ್ತು ಸುತ್ತಲಿನ ಪರಿಸರಗಳು ಕೂಡ ನಮ್ಮಲ್ಲಿ ಅಸ್ತಿತ್ವದಲ್ಲಿರುವ ಗುಣಸ್ವಭಾವಗಳನ್ನು ಬದಲಾಯಿಸಲು ಕಲಿಸುತ್ತವೆ ಅಥವಾ ಹೊಸತನ್ನು ಕಲಿತುಕೊಳ್ಳುವುದನ್ನು ಸಾಧ್ಯವಾಗಿಸುತ್ತವೆ. ಕೆಲವು ಸಂಗತಿಗಳು ಸಾಮಾಜಿಕವಾಗಿ ಸಮ್ಮತವಾಗಿಲ್ಲದ ಕಾರಣ ಅಥವಾ ನಮ್ಮ ಪರಿಸರದಲ್ಲಿ ಅವು ಸಹಾಯಕಾರಿಯಾಗದೇ ಇರುವುದರಿಂದ ಒಂದಷ್ಟನ್ನು ನಾವೇ ಕಲಿತುಕೊಳ್ಳುವುದಿಲ್ಲ. ಆದ್ದರಿಂದ ಪ್ರಾಕೃತಿಕ (ಆನುವಂಶಿಕ ಸಾಧನ) ಮತ್ತು ಲಾಲನೆ-ಪಾಲನೆಯ (ನಮ್ಮ ಅನುಭವಗಳು ಮತ್ತು ನಮ್ಮ ಪರಿಸರ) ಅಂಶಗಳು ನಮ್ಮ ವ್ಯಕ್ತಿತ್ವದ ಸ್ವಭಾವಗಳನ್ನು ರೂಪುಗೊಳಿಸುತ್ತವೆ. ವ್ಯಕ್ತಿತ್ವದ ಬಹುತೇಕ ಗುಣಸ್ವಭಾವಗಳು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತವೆ, ಆದರೆ ಅವುಗಳ ವಿಸ್ತಾರ/ಬೆಳವಣಿಗೆಯಲ್ಲಿ ವ್ಯತ್ಯಾಸವಿರುತ್ತದೆ. ಸಾರ್ವತ್ರಿಕ ಗುಣಸ್ವಭಾವಗಳ ಈ ವಿಶೇಷ ಸಂಯೋಜನೆಯೇ ನಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ.

Q

ಯಾವುದು ವ್ಯಕ್ತಿತ್ವದ ಖಾಯಿಲೆ?

A

ಮನೆ, ಕೆಲಸದ ಸ್ಥಳ ಮತ್ತು ಸಾಮಾಜಿಕ ಸಂಬಂಧಗಳ ನಿರ್ವಹಣೆ ಮೊದಲಾದ ಬೇರೆ ಬೇರೆ ಸಂದರ್ಭಗಳಲ್ಲಿ ವರ್ತಿಸಲು ಸಹಕಾರಿಯಾಗಿರುವ ವ್ಯಕ್ತಿತ್ವದ ಗುಣಸ್ವಭಾವಗಳನ್ನು ನಾವೆಲ್ಲರೂ ಹೊಂದಿರುತ್ತೇವೆ. ಈ ಗುಣಗಳು ನಮಗೆ ಜೀವನದ ನಾನಾ ಸಂದರ್ಭದಲ್ಲಿ ಮತ್ತು ಬದುಕಿನಲ್ಲುಂಟಾಗುವ ಬದಲಾವಣೆಗಳ ಸಂದರ್ಭದಲ್ಲಿ ಸಹಾಯ ಮಾಡುತ್ತವೆ. ಕೆಲವು ಜನರಲ್ಲಿನ ನಿರ್ದಿಷ್ಟ ಗುಣಸ್ವಭಾವಗಳು ಅವರ ಕಾರ್ಯಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮಟ್ಟವನ್ನು ತಲುಪುತ್ತವೆ ಮತ್ತು ಸ್ವತಃ ಅವರನ್ನು ಅಥವಾ ಅವರ ಸಹವರ್ತಿಗಳನ್ನು ಸಂಕಷ್ಟಕ್ಕೆ ಈಡುಮಾಡುತ್ತದೆ.

ವ್ಯಕ್ತಿತ್ವದ ಖಾಯಿಲೆ ಹೊಂದಿರುವ ವ್ಯಕ್ತಿಯೋರ್ವನು ಇತರರೊಂದಿಗೆ ಬೆರೆಯುವಾಗ ಅಥವಾ ಹೊಸ ಜಾಗ, ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ಕಷ್ಟಪಡಬಹುದು. ಬದಲಾವಣೆಯ ಸಂದರ್ಭಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಅಥವಾ ಕಷ್ಟಕರ ಪರಿಸ್ಥಿತಿಯಿಂದ ಹೊರಬರುವ ವ್ಯಕ್ತಿಯ ಸಾಮರ್ಥ್ಯಕ್ಕೆ ಕೆಲವೊಂದು ಪ್ರಮುಖ ಗುಣಸ್ವಭಾವಗಳು ಅಡ್ಡಿಯುಂಟುಮಾಡುತ್ತವೆ. ತನ್ನ ಭಾವನೆಗಳನ್ನು ನಿರ್ವಹಿಸುವಲ್ಲಿ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಇತರರೊಂದಿಗೆ ಬೆರೆಯುವಾಗ ಕೂಡ ವ್ಯಕ್ತಿ ತೊಂದರೆ ಅನುಭವಿಸಬಹುದು. ಸಮಾಜದ ದೃಷ್ಟಿಯಲ್ಲಿ ಸಮ್ಮತವಲ್ಲದ ಕೆಲಸವನ್ನು ಅವರು ಮಾಡಬಹುದು ಅಥವಾ ಅಸಂಗತ ಸಂಗತಿಗಳನ್ನು ಹೇಳಬಹುದು. ಯಾವುದು ಸರಿ, ಯಾವುದು ತಪ್ಪು, ಜಗತ್ತು ಹೇಗಿರಬೇಕು ಮತ್ತು ಹೇಗೆ ಕೆಲಸಗಳನ್ನು ಮಾಡಬೇಕು ಎಂಬ ಕುರಿತು ಅವರು ಅತ್ಯಂತ ನಿಷ್ಠುರ ವಿಚಾರಗಳನ್ನು ಹೊಂದಿರಬಹುದು. ಈ ಎಲ್ಲ ಸಂಕಷ್ಟಗಳೊಂದಿಗೆ ವ್ಯಕ್ತಿಯು ಕ್ರಿಯಾತ್ಮಕ ಜೀವನವನ್ನು ನಡೆಸಲು ಪರದಾಡುತ್ತಿರುತ್ತಾನೆ. 

“ನನಗೆ ನೆನಪಿರುವಂತೆ ಮೊದಲಿನಿಂದಲೂ ನಾನು ಯಾವತ್ತಿಗೂ ಒಂದು ಗುಂಪಿನಲ್ಲಿ ಸೇರಿಕೊಂಡು ಬೆಳೆದವನಲ್ಲ. ನನ್ನ ಕುಟುಂಬ, ನೆರೆಹೊರೆಯವರು, ಸ್ನೇಹಿತರು ಅಥವಾ ಸಹಪಾಠಿಗಳು ಯಾರೊಂದಿಗೆ ಕೂಡ ಸೇರುತ್ತಿರಲಿಲ್ಲ. ಅವರೆಲ್ಲ ನನ್ನ ಸುತ್ತಮುತ್ತ ಇದ್ದಾಗ ನಾನು ಅವರೊಂದಿಗೆ ಬೆರೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದೆ. ನನ್ನ ಇಡೀ ಜೀವನದಲ್ಲಿ ನನ್ನ ಜನರೆನ್ನುವವರು ಯಾರೂ ನ್ಯಾಯೋಚಿತ ರೀತಿಯ ಪ್ರೀತಿ ಮತ್ತು ವಾತ್ಸಲ್ಯದಿಂದ ನನ್ನನ್ನು ಕಾಣಲೇ ಇಲ್ಲ. ನಾನು ಹೇಳುತ್ತಿದ್ದುದೇನು ಎಂಬುದರ ಔಚಿತ್ಯವನ್ನು ಅವರು ಗ್ರಹಿಸಲಿಲ್ಲ ಅಥವಾ ನಾನು ಸರಿಯಾಗಿದ್ದೇನೆ ಅವರು ತಪ್ಪಿತಸ್ಥರು ಎಂಬುದನ್ನು ಒಪ್ಪಿಕೊಳ್ಳಲು ಅವರು ತಯಾರಿರಲಿಲ್ಲ. 

ಯಾರೂ ಕೂಡ ನನ್ನನ್ನು ಪ್ರೀತಿಸುವುದಿಲ್ಲ. ನನ್ನ ಸ್ನೇಹಿತರು, ಕುಟುಂಬದವರು, ಸಹೋದ್ಯೋಗಿಗಳೆಲ್ಲರೊಂದಿಗೆ ನಾನು ಆತ್ಮೀಯನಾಗಲು ಪ್ರಯತ್ನಿಸಿದಾಗಲೆಲ್ಲ ನನ್ನನ್ನು ತಿರಸ್ಕರಿಸುತ್ತಾರೆ. ಕೆಲವೊಮ್ಮೆ ನನಗೆ ಪ್ರತಿದಿನವೂ ಹೊಸ ಅಗ್ನಿಪರೀಕ್ಷೆಯಂತೆ ಭಾಸವಾಗುತ್ತದೆ. ಕೆಲವೊಮ್ಮೆ ಜೀವನ ನಿಷ್ಪ್ರಯೋಜಕ ಎಂದೆನಿಸುತ್ತದೆ. ಕೆಲವೊಮ್ಮೆ, ನನ್ನ ಕಿಮ್ಮತ್ತೇನೆಂಬುದು ಅವರು ಅರಿತುಕೊಳ್ಳಬಹುದು ಎಂಬ ಉದ್ದೇಶದಿಂದ ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನನ್ನನ್ನು ನಾನೇ ಸಾಯಿಸಿಕೊಳ್ಳುತ್ತೇನೆ ಎಂದು ಕೂಡ ಹೇಳುತ್ತೇನೆ. ಆದರೆ ಅದು ಕೂಡ ಕೆಲಸ ಮಾಡುವುದಿಲ್ಲ.

ಅವರು ನನ್ನಿಂದ ನಿರೀಕ್ಷಿಸುವ ಎಲ್ಲವನ್ನೂ ಮಾಡಿದೆ, ಅವರು ನನ್ನನ್ನು ಪ್ರೀತಿಸುತ್ತಾರೆಂದು ತಿಳಿದು ನಾನು ನನ್ನ ನಡವಳಿಕೆಯನ್ನು ಬದಲಾಯಿಸಿಕೊಂಡೆ, ನಮ್ಮೆಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ನಾನು ಕೆಲಸ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ಆದರೆ ಇವು ಯಾವವೂ ನಿರೀಕ್ಷಿತ ಫಲ ನೀಡಲಿಲ್ಲ. ನನಗೆ ಯಾರೂ ಇಲ್ಲ. ನಾನು ಒಬ್ಬಂಟಿ”.

(ಈ ಕಾಲ್ಪನಿಕ ಕಥೆಯನ್ನು ವ್ಯಕ್ತಿತ್ವದ ಖಾಯಿಲೆ ನಿಜ ಜೀವನದಲ್ಲಿ ಹೇಗೆ ಕಂಡುಬರುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಲಿಕ್ಕಾಗಿ ಹೆಣೆಯಲಾಗಿದೆ.)

Q

ವ್ಯಕ್ತಿತ್ವದ ಲಕ್ಷಣ ಮತ್ತು ವ್ಯಕ್ತಿತ್ವದ ಖಾಯಿಲೆಗಳ ನಡುವೆ ಇರುವ ವ್ಯತ್ಯಾಸಗಳೇನು?

A

ಕೆಲವೊಂದು ಗುಣಸ್ವಭಾವಗಳು ಅಸ್ತಿತ್ವದಲ್ಲಿದ್ದ ಕಾರಣಕ್ಕೆ ಮಾತ್ರ ವ್ಯಕ್ತಿತ್ವದ ಖಾಯಿಲೆಗಳು ಉಂಟಾಗುವುದಿಲ್ಲ. ವ್ಯಕ್ತಿತ್ವದ ಗುಣಸ್ವಭಾವಗಳು ನಮ್ಮೆಲ್ಲರಲ್ಲಿಯೂ ವ್ಯತ್ಯಾಸ ರೂಪದಲ್ಲಿ ಇರುತ್ತವೆ. ನಮ್ಮ ವರ್ತನೆಯಲ್ಲಿ ಎಷ್ಟು ಹೆಚ್ಚು ಅಥವಾ ಎಷ್ಟು ಕಡಿಮೆ ಸ್ವಭಾವವನ್ನು ಪ್ರದರ್ಶಿಸುತ್ತೇವೆ ಎಂಬುದರ ಮೇಲೆ ವ್ಯತ್ಯಾಸದ ಪ್ರಮಾಣ ಅವಲಂಬಿತವಾಗಿರುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವ್ಯಕ್ತಿತ್ವದ ಖಾಯಿಲೆ ಹೊಂದಿರುವ ವ್ಯಕ್ತಿ ಇತರರಂತೆ ಎಲ್ಲ ಗುಣಸ್ವಭಾವಗಳನ್ನು ಹೊಂದಿರುತ್ತಾನೆ. ಆದರೆ ಕೆಲವು ಸ್ವಭಾವಗಳು ಆತನನ್ನು ಸಂಕಷ್ಟಕ್ಕೆ ದೂಡುವಷ್ಟು ಪ್ರಬಲವಾಗಿರುತ್ತವೆ ಅಥವಾ ಅತಿಯಾಗಿರುತ್ತವೆ.

ಸಂಸ್ಕೃತಿ ಮತ್ತು ಸಂದರ್ಭ ಕೂಡ ಇದರಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದು ಪರಿಗಣಿಸುವುದು ಕೂಡ ಮಹತ್ವದ ಸಂಗತಿ. ಕೆಲವು ಗುಣಸ್ವಭಾವಗಳು ಕೆಲವು ಸಂಸ್ಕೃತಿಗಳಲ್ಲಿ ಆರೋಗ್ಯಪೂರ್ಣವಾಗಿ ಹಾಗೂ ಸಹಜವಾಗಿ ಕಾಣಿಸಬಹುದು ಮತ್ತು ಇನ್ನು ಕೆಲವು ಸಂಸ್ಕೃತಿಗಳಲ್ಲಿ ಅವು ಅನಾರೋಗ್ಯಕರವೆಂದೋ ಅಥವಾ ಅತಿಯೆಂದೋ ಪರಿಗಣಿಸಲ್ಪಟ್ಟಿರಬಹುದು.

ಇದನ್ನು ಉದಾಹರಣೆಯೊಂದಿಗೆ ವಿವರಿಸುವುದಾದರೆ, ನಾವು ಭೇಟಿ ಮಾಡುವ ಪ್ರತಿಯೊಬ್ಬರನ್ನೂ ನಂಬುವುದು ಸುರಕ್ಷಿತವಲ್ಲ ಎಂಬುದನ್ನು ನಾವು ನಮ್ಮ ಸ್ವಂತ ಅನುಭವಗಳಿಂದ ಅಥವಾ ನಮ್ಮ ಸುತ್ತಲಿನ ಜನರನ್ನು ಗಮನಿಸುತ್ತ ಕಲಿಯುತ್ತೇವೆ. ಈ ನಂಬುವ ಸ್ವಭಾವ ಅವಿಚ್ಛಿನ್ನವಾಗಿ ನಿರೂಪಿಸಲ್ಪಡುತ್ತಿರಬಹುದು. ಈ ನಿಟ್ಟಿನಲ್ಲಿ ಅತಿಯಾಗಿ ನಂಬಿ ಮೋಸಹೋಗುವ ವ್ಯಕ್ತಿಗಳದ್ದು ಒಂದು ಪರಾಕಾಷ್ಠೆಯಾದರೆ ಇನ್ನೊಂದು ಕಡೆ ತಮ್ಮ ಸುತ್ತಮುತ್ತಲಿನ ಯಾರನ್ನೇ ಆಗಲಿ ನಂಬದಿರುವ ಜನರೂ ಇರುತ್ತಾರೆ.

ಹೆಚ್ಚಿನ ಜನರು ಈ ಎರಡೂ ಅತಿರೇಕಗಳ ನಡುವೆ ಬರುತ್ತಾರೆ. ಅಂತವರು ತಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ನಂಬಲು ಶಕ್ತರಾಗಿರುತ್ತಾರೆ ಮತ್ತು ಅಪರಿಚಿತರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವರೆಡೆಗೆ ಆರೋಗ್ಯಕರ ಪ್ರಮಾಣದ ಅಪನಂಬಿಕೆ ಹೊಂದಿರುತ್ತಾರೆ. ಇವೆರಡೂ ತುದಿಗಳ ನಡುವೆ ಇರುವ ಜನ (ಆರೋಗ್ಯಕರ ಪ್ರಮಾಣದಲ್ಲಿ ಅಪನಂಬಿಕೆ ಹೊಂದಿರುವವರು) ಬದುಕಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಎಚ್ಚರಿಕೆಯಲ್ಲಿ ತಾವಿರುತ್ತಾರೆ. ಎಲ್ಲವನ್ನೂ, ಎಲ್ಲರನ್ನೂ ಅತಿಯಾಗಿ ನಂಬುವವರು ಪದೇಪದೇ ಮೋಸಹೋಗಬಹುದು, ಎಲ್ಲರಲ್ಲೂ ಅತಿಯಾದ ಅಪನಂಬಿಕೆ ಹೊಂದಿರುವವರು ಹತ್ತಿರದ ಸಂಬಂಧಗಳನ್ನು ನಿಭಾಯಿಸಲು ಶಕ್ತರಾಗಿರುವುದಿಲ್ಲ. ಅಂತವರು, ತಮ್ಮ ವರ್ತನೆ ಸಹಜ ಬದುಕಿಗೆ ಪೂರಕವಾಗಿಲ್ಲ ಎಂದು ತಿಳಿದರೂ ಕೂಡ ಅದನ್ನು ಬದಲಿಸಿಕೊಳ್ಳಲು ಪರದಾಡುತ್ತಾರೆ ಅಥವಾ ಅದು ಸಾಧ್ಯವೇ ಆಗುವುದಿಲ್ಲ. 

ವ್ಯಕ್ತಿಯು ನಿರಂತರ ಅವಧಿಯವರೆಗೆ ಮತ್ತು ಹಲವಾರು ಸಂದರ್ಭಗಳಲ್ಲಿ ಅದೇಅದೇ ರೀತಿಯ ಗುಣಸ್ವಭಾವಗಳನ್ನು ಪ್ರದರ್ಶಿಸುವುದು ವ್ಯಕ್ತಿತ್ವದ ಖಾಯಿಲೆಯನ್ನು ಪತ್ತೆ ಮಾಡುವಲ್ಲಿ ಅತ್ಯವಶ್ಯಕವಾದ ಅಂಶ.

ಉದಾಹರಣೆಗೆ, ಸಮಾಜವಿರೋಧಿ ವ್ಯಕ್ತಿತ್ವದ ಖಾಯಿಲೆ ಹೊಂದಿರುವ ವ್ಯಕ್ತಿಗಳು ಇತರರ ಕುರಿತು ಸಂವೇದನಾ ರಹಿತ ರೀತಿಯಲ್ಲಿ ಅನಾದರ ಹೊಂದಿರುತ್ತಾರೆ. ಇಂತವರು ತಮ್ಮ ಕೆಲಸವಾಗಬೇಕಾದರೆ ಅಥವಾ ತಾವು ಮುಂದೆ ಬರಬೇಕೆಂದರೆ ಇತರರನ್ನು ಹೀನಾಯವಾಗಿ ಬಳಸಿಕೊಳ್ಳುತ್ತಾರೆ ಅಥವಾ ದುರುಪಯೋಗಪಡಿಸಿಕೊಳ್ಳುತ್ತಾರೆ. ಕಛೇರಿಯಲ್ಲಿ ಅತಿಯಾಗಿ ಆಕ್ರಮಣಶೀಲ ಸ್ವಭಾವವನ್ನು ಪ್ರದರ್ಶಿಸುವ ಮತ್ತು ಇತರರನ್ನು ದುರುಪಯೋಗಪಡಿಸಿಕೊಳ್ಳುವ ಓರ್ವ ವ್ಯಕ್ತಿಯ ಪ್ರಕರಣವನ್ನು ಉದಾಹರಣೆಗಾಗಿ ತೆಗೆದುಕೊಳ್ಳೋಣ. ಅವನು ಎಷ್ಟು ಮಹತ್ವಾಕಾಂಕ್ಷಿ ಅಂದರೆ, ತನ್ನ ಯಶಸ್ಸಿಗೆ ಬೇರೆಯವರನ್ನು ಬಳಸಿಕೊಳ್ಳಲು ಯಾವತ್ತೂ ಆತ ಹಿಂದೆಮುಂದೆ ನೋಡುವುದಿಲ್ಲ. ಇತರ ಸಹೋದ್ಯೋಗಿಗಳಂತೆ ನ್ಯಾಯನಿಷ್ಠನಾಗಿರುವುದಿಲ್ಲ. ತನ್ನ ಕೆಲಸ ಪೂರೈಸಲು ಅಡ್ಡದಾರಿಗಳನ್ನು ಅನುಸರಿಸುತ್ತಾನೆ. ಅವನಿಗೆ ಪ್ರಾಮಾಣಿಕತೆಗಿಂತ ಗೆಲುವು ಮುಖ್ಯ. ಆದರೆ ಮನೆಯಲ್ಲಿ ಅವನ ನಡವಳಿಕೆ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಅವನು ತನ್ನ ಕುಟುಂಬದವರೊಂದಿಗೆ ಚೆನ್ನಾಗಿಯೇ ಇರುತ್ತಾನೆ. ಅವರೊಂದಿಗಿನ ಭಾವನಾತ್ಮಕ ಸಂಬಂಧಗಳಲ್ಲಿಯೂ ಯಾವುದೇ ಸಮಸ್ಯೆಗಳಿರುವುದಿಲ್ಲ.

ಕಛೇರಿಯಲ್ಲಿ ಈ ವ್ಯಕ್ತಿಯ ವರ್ತನೆ ಅವನು ಸಮಾಜವಿರೋಧಿ ವ್ಯಕ್ತಿತ್ವದ ಖಾಯಿಲೆ ಹೊಂದಿದ್ದಾನೆ ಎಂಬುದನ್ನು ಸೂಚಿಸಬಹುದು. ಆದರೆ ಈ ಮೌಲ್ಯಮಾಪನ ನಿಖರವಾದುದಲ್ಲ. ಅವನಲ್ಲಿ ಸಮಾಜ ವಿರೋಧಿ ವ್ಯಕ್ತಿತ್ವದ ಖಾಯಿಲೆಯಿದೆ ಎಂದು ನಿರ್ಣಯಿಸಬೇಕಾದರೆ, ಆತ ಅದೇ ರೀತಿಯ ಕಾಠಿಣ್ಯ, ಕೈಚಳಕ, ಮತ್ತು ಅನಾದರವನ್ನು ಕಛೇರಿಯಲ್ಲಿ, ಮನೆಯಲ್ಲಿ, ಸ್ನೇಹಿತರ ನಡುವೆ, ಹಾಗೂ ಇನ್ನಿತರ ಸಂದರ್ಭಗಳಲ್ಲಿ ಕೂಡ ಪ್ರದರ್ಶಿಸುತ್ತಿರಬೇಕು. 

Q

ವ್ಯಕ್ತಿತ್ವದ ಖಾಯಿಲೆ ಲಕ್ಷಣಗಳೇನು?

A

ಅನೇಕ ರೀತಿಯ ವ್ಯಕ್ತಿತ್ವದ ಖಾಯಿಲೆಗಳಿವೆ, ಪ್ರತಿಯೊಂದೂ ಕೂಡ ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ. ವ್ಯಕ್ತಿತ್ವದ ಖಾಯಿಲೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು:

ವರ್ಗ ಎ: ಅನಿಶ್ಚಿತ/ವಿಲಕ್ಷಣ ವರ್ತನೆ

ವರ್ಗ ಬಿ: ನಾಟಕೀಯ, ಮನಸೋಇಚ್ಛೆಯ, ಭಾವನಾತ್ಮಕ ವರ್ತನೆ

ವರ್ಗ ಸಿ: ಆತಂಕಿತ ಅಥವಾ ಭಯಪೂರಿತ ವರ್ತನೆ

ಛಿದ್ರಮನಸ್ಕತೆಯ ವ್ಯಕ್ತಿತ್ವದ ಖಾಯಿಲೆ

ಸಮಾಜ ವಿರೋಧಿ ವ್ಯಕ್ತಿತ್ವದ ಖಾಯಿಲೆ

ಪಲಾಯನ ವ್ಯಕ್ತಿತ್ವದ ಖಾಯಿಲೆ

ಬುದ್ಧಿಭ್ರಮಣೆಯಂತಹ (ಪಾರಾನೋಯ್ಡ್ ) ವ್ಯಕ್ತಿತ್ವದ ಖಾಯಿಲೆ

ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್

ಅವಲಂಬಿತ ವ್ಯಕ್ತಿತ್ವದ ಖಾಯಿಲೆ

ಸ್ಕಿಜೊಟೈಪಲ್ ವ್ಯಕ್ತಿತ್ವದ ಖಾಯಿಲೆ

ಆತ್ಮಶ್ಲಾಘನೆಯ ವ್ಯಕ್ತಿತ್ವದ ಖಾಯಿಲೆ

ಗೀಳು ಮನೋಭಾವದ ವ್ಯಕ್ತಿತ್ವದ ಖಾಯಿಲೆ

 

ಬೂಟಾಟಿಕೆಯ ವ್ಯಕ್ತಿತ್ವದ ಖಾಯಿಲೆ

 

ಬಹುತೇಕ ಬಗೆಯ ವ್ಯಕ್ತಿತ್ವದ ಖಾಯಿಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳೆಂದರೆ:

 • ಬೇರೆಯವರೊಂದಿಗೆ ವ್ಯವಹರಿಸಲು ಪರದಾಡುವುದು (ಸ್ನೇಹಿತರು, ಕುಟುಂಬ ಅಥವಾ ಸಹೋದ್ಯೋಗಿಗಳು)

 • ಜೀವನದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಕಷ್ಟಪಡುವುದು

 • ಕೆಲಸಗಳನ್ನು ಯಾವ ರೀತಿ ಮಾಡಬಹುದು ಎಂಬುದರ ಕುರಿತ ಅಚಲ ಆಲೋಚನೆಯಿಂದಾಗಿ ಸುತ್ತಲಿನ ಪ್ರಪಂಚವನ್ನು ತಮ್ಮ ಮೂಗಿನ ನೇರಕ್ಕೆ ನೋಡುವ ಪ್ರವೃತ್ತಿ

 • ದೀರ್ಘಾವಧಿಯ, ಆರೋಗ್ಯಕಾರಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೇ ಇರುವುದು

 • ತಾವೇ ಮಾಡಿದ ಕೃತ್ಯಗಳ ಜವಾಬ್ದಾರಿ ಹೊರಲು ಅಸಮರ್ಥರಾಗಿರುವುದು.

 • ಕೆಲ ಸಂಗತಿಗಳನ್ನು ಅತಿ ಗಂಭೀರವಾಗಿ ತೆಗೆದುಕೊಳ್ಳುವುದು ಅಥವಾ ಸಂಪೂರ್ಣವಾಗಿ ನಿರ್ಲಿಪ್ತನಾಗಿರುವ ಪ್ರವೃತ್ತಿ (ಮುಖ್ಯವಾಗಿ ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿ)

 • ತಮ್ಮ ವರ್ತನೆಯ ರೀತಿ ತಮಗೆ ಅಥವಾ ಇತರರರಿಗೆ ನೋವುಂಟು ಮಾಡುತ್ತಿದ್ದರೂ ಅವುಗಳನ್ನು ಬದಲಾಯಿಸಿಕೊಳ್ಳಲು ಅಸಮರ್ಥರಾಗಿರುವುದು.

Q

ವ್ಯಕ್ತಿತ್ವದ ಖಾಯಿಲೆಗೆ ಕಾರಣಗಳೇನು?

A

ವಂಶವಾಹಿ ಅಂಶಗಳ ಜೊತೆಗೆ ಬಾಲ್ಯದಲ್ಲಿನ ಲೈಂಗಿಕ ಹಿಂಸೆ ಅಥವಾ ಆಘಾತಗಳು ವ್ಯಕ್ತಿತ್ವದ ಖಾಯಿಲೆಗಳಿಗೆ ಕಾರಣವಾಗಬಹುದು. ಆಧುನಿಕ ಜೈವಿಕ ಮನೋಸಾಮಾಜಿಕ ಮಾದರಿ ಹೇಳುವ ಪ್ರಕಾರ ವ್ಯಕ್ತಿತ್ವದ ಖಾಯಿಲೆಯ ನಿರ್ಧಾರಣೆಯ ಹಂತದಲ್ಲಿ ಜೈವಿಕ, ಮನೋವೈಜ್ಞಾನಿಕ ಮತ್ತು ಸಾಮಾಜಿಕ ಅಂಶಗಳ ಸಮ್ಮಿಶ್ರಣ ಒಟ್ಟಾಗಿ ಬರುತ್ತದೆ.

 • ಜೀವವಿಜ್ಞಾನಕ್ಕೆ ಸಂಬಂಧಿಸಿದ ಅಂಶಗಳು: ಇವೆಲ್ಲವೂ ಮೆದುಳಿನ ರಚನೆಗೆ ಮತ್ತು ಮೆದುಳಿಗೆ ನಿರ್ಣಾಯಕ ಸಂದೇಶವನ್ನು ರವಾನಿಸುವ ನರಸಂದೇಶ ವಾಹಕಗಳಿಗೆ ಸಂಬಂಧಿಸಿವೆ. ಸಂಶೋಧನೆಗಳು ಹೇಳುವಂತೆ, ವ್ಯಕ್ತಿತ್ವದ ಖಾಯಿಲೆ ಹೊಂದಿರುವ ವ್ಯಕ್ತಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ವಂಶವಾಹಿಯನ್ನು ಹೊಂದಿರಬಹುದಾಗಿದ್ದು, ಅದು ಅವರನ್ನು ಅಪಾಯಕ್ಕೆ ಸಿಲುಕಿಸಬಹುದು. ವ್ಯಕ್ತಿತ್ವದ ಖಾಯಿಲೆ ಹೊಂದಿರುವ ವ್ಯಕ್ತಿಯೊಂದಿಗೆ ಆನುವಂಶೀಯ ಸಂಬಂಧ ಹೊಂದಿರುವ ವ್ಯಕ್ತಿಯಲ್ಲಿ ಈ ಖಾಯಿಲೆ ಅಭಿವೃದ್ಧಿಗೊಳ್ಳುವ ಅಪಾಯ ಹೆಚ್ಚಿರುತ್ತದೆ.

 • ಮನೋವೈಜ್ಞಾನಿಕ ಅಂಶಗಳು: ಬಾಲ್ಯದಲ್ಲಿ ದೈಹಿಕ ಆಘಾತ ಅಥವಾ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ ಮಕ್ಕಳಲ್ಲಿ ವ್ಯಕ್ತಿತ್ವದ ಖಾಯಿಲೆ ಉಂಟಾಗಬಹುದು.

 • ಸಾಮಾಜಿಕ ಅಂಶಗಳು: ಪ್ರೀತಿಸುವ ಸಮುದಾಯ ಮತ್ತು ಪ್ರೋತ್ಸಾಹದಾಯಕ ಸಂಬಂಧಗಳು ಮೊದಲಾದ ಜೈವಿಕ ಮತ್ತು ಸಾಮಾಜಿಕ ಅಂಶಗಳ ಕೊರತೆ ಮಗು ವ್ಯಕ್ತಿತ್ವದ ಖಾಯಿಲೆಯಿಂದ ಬಳಲುವ ಅಪಾಯವನ್ನು ಹೆಚ್ಚಿಸುತ್ತದೆ. ಜೈವಿಕ ಮತ್ತು ಸಾಮಾಜಿಕ ಅಂಶಗಳಿಂದ ಉಂಟಾಗುವ ತೊಂದರೆಯನ್ನು ಪ್ರೀತಿಪೂರ್ವಕವಾಗಿರುವ ಸಂಬಂಧಗಳು ಪರಿಹರಿಸಬಲ್ಲವು ಎಂದು ಸಂಶೋಧನೆಗಳು ಹೇಳುತ್ತವೆ.

Q

ಯಾರಾದರು ವ್ಯಕ್ತಿತ್ವದ ಖಾಯಿಲೆ ಹೊಂದಿದ್ದಾರೆ ಎಂದು ನಾನು ತಿಳಿದುಕೊಳ್ಳುವುದು ಹೇಗೆ?

A

ವ್ಯಕ್ತಿತ್ವದ ಖಾಯಿಲೆಯ ಸಮಸ್ಯೆಗಳು ಸಾಮಾನ್ಯವಾಗಿ ಬಾಲ್ಯದ ಕೊನೆ ಅಥವಾ ಯೌವ್ವನದ ಹಂತದಲ್ಲಿ ಬೆಳವಣಿಗೆ ಹೊಂದುತ್ತವೆ. ಈ ಖಾಯಿಲೆ ಹೊಂದಿರುವ ವ್ಯಕ್ತಿಯು ನಿರ್ಗತಿಕನಂತೆ, ಅತಿಯಾಗಿ ದುಗುಡಗೊಂಡವನಂತೆ, ಜತೆಲ್ಲಿರುವುದು ಕಷ್ಟ ಎನಿಸುವಂತೆ ಅಥವಾ ಸ್ವಾರ್ಥಿಯಂತೆ ತೋರಬಹುದು. ಇದನ್ನೊಂದು ವರ್ತನೆಯ ಸಮಸ್ಯೆಯಾಗಿ ನೋಡಲಾಗುತ್ತದೆಯಾದ್ದರಿಂದ, ಪ್ರೌಢಾವಸ್ಥೆಯ ಪ್ರಾರಂಭದ ಅಥವಾ ನಂತರದ ಹಂತಗಳವರೆಗೂ ಇದನ್ನು ವ್ಯಕ್ತಿತ್ವದ ಖಾಯಿಲೆ ಎಂದು ಗುರುತಿಸುವುದು ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಸಾಧ್ಯವಾಗದೇ ಇರಬಹುದು.

ನಿಮ್ಮ ಪರಿಚಯದ ಯಾರಾದರೂ ವ್ಯಕ್ತಿತ್ವದ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ನಿಮಗೆ ಅನಿಸಿದಲ್ಲಿ, ಅವರಲ್ಲಿ ಈ ಕೆಳಗಿನ ಕೆಲವು ಲಕ್ಷಣಗಳನ್ನು ಗುರುತಿಸಬಹುದು:

 • ಅತ್ಯಧಿಕವಾಗಿರಬಹುದಾದ ಅಥವಾ ಅತ್ಯಲ್ಪ ಪ್ರಮಾಣದಲ್ಲಿರಬಹುದಾದ, ಈ ಸ್ವಭಾವವನ್ನು ವಿವಿಧ ಸನ್ನಿವೇಶಗಳಲ್ಲಿ ನಿಭಾಯಿಸುವುದು ಆ ವ್ಯಕ್ತಿಗೆ ಮತ್ತು/ಅಥವಾ ಆತನ ಸಹವರ್ತಿಗಳಿಗೆ ಕಷ್ಟವಾಗಬಹುದು. ಈ ಸ್ವಭಾವವು ಮನೆಯಲ್ಲಿ, ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಅಥವಾ ಇನ್ನಿತರ ಸಾಮಾಜಿಕ ಸಂವಹನ ತಾಣಗಳಲ್ಲಿ ಪುನರಾವರ್ತಿತವಾಗಿ ಕಾಣಿಸಿಕೊಳ್ಳಬಹುದು.

 • ವ್ಯಕ್ತಿತ್ವದ ಖಾಯಿಲೆ ಹೊಂದಿರುವ ವ್ಯಕ್ತಿ ತನ್ನ ಭಾವನೆಗಳನ್ನು ನಿಭಾಯಿಸುವಲ್ಲಿ ಸಮಸ್ಯೆ ಎದುರಿಸಬಹುದು. ಅವನು ಅಥವಾ ಅವಳು ಭಾವನಾತ್ಮಕವಾಗಿ ಅಸ್ಥಿರವಾಗಿರಬಹುದು.

 • ವ್ಯಕ್ತಿಯು ಗೆಳೆತನ ಹಾಗೂ ಸಂಬಂಧದ ವಿಷಯದಲ್ಲಿ ಪದೇಪದೇ ಸಮಸ್ಯೆ ಎದುರಿಸಬಹುದು. ಇತರರೊಂದಿಗೆ ಹೊಂದಿಕೊಂಡು ವ್ಯವಹರಿಸಲು ಅವರಿಗೆ ಯಾವತ್ತೂ ಸಾಧ್ಯವಾಗದಿರಬಹುದು ಅಥವಾ ಅನೇಕ ಜನರೊಂದಿಗೆ ಸಂಬಂಧ ಹೊಂದಲು ಪ್ರಯತ್ನಿಸಬಹುದು ಮತ್ತು ಹೆಚ್ಚಿನ ಸಂಬಂಧಗಳು ಮುರಿದು ಬೀಳಬಹುದು.

 • ತಾನು ಅಂದುಕೊಂಡ ರೀತಿಯಲ್ಲಿ ಕೆಲಸಗಳು ಆಗದಿದ್ದಾಗ ವ್ಯಕ್ತಿ ತನಗೆ ತಾನೇ ಸ್ವಯಂ ಹಾನಿ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು.

 • ವ್ಯಕ್ತಿತ್ವದ ಖಾಯಿಲೆ ಹೊಂದಿರುವ ವ್ಯಕ್ತಿ ನಮ್ಮಂತೆಯೇ ಗುಣಸ್ವಭಾವಗಳನ್ನು ಹೊಂದಿರುತ್ತಾನೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ವ್ಯಕ್ತಿತ್ವದ ಯಾವುದೇ ಗುಣಸ್ವಭಾವಗಳು ಅನಾರೋಗ್ಯಕರವಾಗಿರಬಹುದು, ಹಾಗೆಂದ ಮಾತ್ರಕ್ಕೆ ನಮ್ಮ ಸುತ್ತಲಿರುವರರೆಲ್ಲ ವ್ಯಕ್ತಿತ್ವದ ಖಾಯಿಲೆ ಹೊಂದಿದ್ದಾರೆ ಎಂದರ್ಥವಲ್ಲ. ಈ ಲಕ್ಷಣಗಳು ರೋಗವನ್ನು ಗುರುತಿಸುವುದಕ್ಕೆ ಮಾತ್ರ ಸಂಬಂಧಿಸಿದವು. ಯಾವುದಕ್ಕೂ, ರೋಗನಿರ್ಧಾರಣೆಯನ್ನು ತರಬೇತಿಹೊಂದಿದ ಮಾನಸಿಕ ಆರೋಗ್ಯ ತಜ್ಞರ ವಿವೇಚನೆಗೆ ಬಿಡುವುದು ಉತ್ತಮ.

Q

ವ್ಯಕ್ತಿತ್ವದ ಖಾಯಿಲೆ ಪತ್ತೆಮಾಡುವುದು ಹೇಗೆ?

A

ವ್ಯಕ್ತಿತ್ವದ ಖಾಯಿಲೆಯನ್ನು ನಿರ್ಣಯಿಸುವುದು ಸವಾಲಿನ ಕೆಲಸ, ವ್ಯಕ್ತಿತ್ವದ ಖಾಯಿಲೆ ಹೊಂದಿರುವ ವ್ಯಕ್ತಿ ತನ್ನಲ್ಲಿನ ಯಾವ ಸ್ವಭಾವ ತನಗೆ ಹಾಗೂ ಇತರರಿಗೆ ಯಾತನೆಯನ್ನು ಉಂಟುಮಾಡುತ್ತಿದೆ ಎನ್ನುವುದನ್ನು ಗುರುತಿಸಲು ಬಯಸುವುದಿಲ್ಲ ಅಥವಾ ಅಸಮರ್ಥರಾಗಿರುತ್ತಾನೆ.

ಅಸಹಜ ಸ್ವಭಾವಗಳನ್ನು, ಅವುಗಳಿಂದಾಗುವ ಹಾನಿಯ ಪ್ರಮಾಣವನ್ನು ಗುರುತಿಸಿ, ಪುನರ್ ಪರಿಶೀಲನೆ ಮಾಡಿದ ನಂತರದಲ್ಲಿ ಮಾನಸಿಕ ಆರೋಗ್ಯ ತಜ್ಞರು ರೋಗಿ, ಅವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರನ್ನು ಸಂದರ್ಶಿಸಿ ರೋಗನಿರ್ಣಯ ಮಾಡುತ್ತಾರೆ. ವ್ಯಕ್ತಿಯನ್ನು ಸೂಕ್ಷ್ಮವಾಗಿ ತಪಾಸಣೆಗೆ ಒಳಪಡಿಸಲು ಮನೋರೋಗ ತಜ್ಞರು ನಿರ್ದಿಷ್ಟ ಪ್ರಶ್ನೆಗಳೊಂದಿಗೆ ಕೂಡ ಸಂದರ್ಶನಗಳನ್ನು ಮಾಡಬಹುದು.

Q

ವ್ಯಕ್ತಿತ್ವದ ಖಾಯಿಲೆಗೆ ಚಿಕಿತ್ಸೆ

A

ವ್ಯಕ್ತಿತ್ವದ ಖಾಯಿಲೆ ಹೊಂದಿರುವವರ ಚಿಕಿತ್ಸೆಯ ಪ್ರಮುಖ ವಿಧಾನ ಮಾತಿನ ಚಿಕಿತ್ಸೆ. ರೋಗಿಗಳಿಗೆ ಅವನು ಅಥವಾ ಅವಳು ಈಗ ಹೇಗಿದ್ದಾರೆ, ಎಂಬುದರ ಕುರಿತು ಚರ್ಚಿಸಲು, ಅವರ ವ್ಯಕ್ತಿತ್ವದ ಗುಣಸ್ವಭಾವಗಳ ಕುರಿತು ಹೆಚ್ಚಿನ ತಿಳುವಳಿಕೆಯನ್ನು ಹೊಂದುವಂತಾಗಲು, ಇತರರೊಂದಿಗೆ ಅವರು ಹೇಗೆ ಬೆರೆಯುತ್ತಿದ್ದಾರೆ ಎಂಬುದನ್ನು ಗಮನಿಸುವ ಸಲುವಾಗಿ ಪ್ರತಿನಿತ್ಯ ತಜ್ಞ ಚಿಕಿತ್ಸಕರನ್ನು ಭೇಟಿಮಾಡುವಂತೆ ರೋಗಿಗೆ ಸೂಚಿಸಬಹುದು. ತಮ್ಮ ಯಾವ ನಡವಳಿಕೆಯನ್ನು ಬದಲು ಮಾಡಿಕೊಳ್ಳುವುದು ಅವಶ್ಯಕ ಎಂಬುದನ್ನು ತಿಳಿದುಕೊಳ್ಳಲು ಇದು ಸಹಕಾರಿ.

ಬಾಲ್ಯದಲ್ಲಿನ ಕೆಲವು ಅಹಿತಕರ ಘಟನೆಗಳಿಂದ (ಆಘಾತ, ದೈಹಿಕ ಅಥವಾ ಮಾನಸಿಕ ದೌರ್ಜನ್ಯ ಇತ್ಯಾದಿ) ಉಂಟಾದ ಕೆಲವು ವ್ಯಕ್ತಿತ್ವದ ಖಾಯಿಲೆಗಳಲ್ಲಿ ಕೆಲ ವರ್ತನೆಗಳನ್ನು ಯಾಕೆ ಕಲಿತುಕೊಳ್ಳಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಮತ್ತು ಅದನ್ನು ಹೇಗೆ ಬದಲಿಸಬಹುದು ಎಂಬುದಕ್ಕೆ ಚಿಕಿತ್ಸಕರು ಸಹಾಯ ಮಾಡುತ್ತಾರೆ.

ಸಾಮಾನ್ಯವಾಗಿ ವ್ಯಕ್ತಿತ್ವದ ಖಾಯಿಲೆ ಹೊಂದಿರುವ ರೋಗಿಗಳಿಗೆ ಅವರ ಗುಣಸ್ವಭಾವಗಳಿಗೆ ಸಂಬಂಧಪಟ್ಟಂತೆ ಔಷಧೋಪಚಾರದ ಅಗತ್ಯವಿರುವುದಿಲ್ಲ. ಖಿನ್ನತೆ, ಮನೋವಿಕಾರ ಅಥವಾ ಆತಂಕದಂಥ ಸಂಬಂಧಿತ ಇತರೆ ಸಮಸ್ಯೆಗಳಿಗೆ ವೈದ್ಯರು ಕೆಲವು ಔಷಧಗಳನ್ನು ಶಿಫಾರಸ್ಸು ಮಾಡಬಹುದು.

Q

ವ್ಯಕ್ತಿತ್ವದ ಖಾಯಿಲೆ ಹೊಂದಿರುವವರ ಆರೈಕೆ

A

ವ್ಯಕ್ತಿತ್ವದ ಖಾಯಿಲೆ ಹೊಂದಿರುವವರ ಆರೈಕೆ ಮಾಡುವುದು ಅನೇಕ ಕಾರಣಗಳಿಂದಾಗಿ ಅತಿ ಸವಾಲಿನ ಕೆಲಸ. ಮೊದಲನೆಯದಾಗಿ, ರೋಗಿಗಳು ಅವರ ವರ್ತನೆ ‘ಅಸಹಜ’ ಮತ್ತು ಅದು ಅವರಿಗೆ ಮತ್ತು ಸಂಬಂಧಿಸಿದ ಇತರರಿಗೆ ಯಾತನೆಯನ್ನು ಉಂಟು ಮಾಡುತ್ತಿದೆ ಎಂದು ಒಪ್ಪಿಕೊಳ್ಳಲು ಅಥವಾ ಅರ್ಥೈಸಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಎರಡನೆಯದಾಗಿ ರೋಗಿಯು, ವಾತಾವರಣ ಅನುಕೂಲರವಾಗಿಲ್ಲ, ತಾನು ಒಬ್ಬಂಟಿ, ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ, ತಾನು ನಿಷ್ಪ್ರಯೋಜಕ ಎಂಬಿತ್ಯಾದಿ ಕೆಲ ಪ್ರಬಲವಾದ ನಂಬಿಕೆಗಳನ್ನು ಹೊಂದಿರುತ್ತಾನೆ. ಈ ನಂಬಿಕೆಗಳಿಂದಾಗಿ ರೋಗಿ ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಿಟ್ಟು, ದುಃಖ, ಕಿರಿಕಿರಿ ವ್ಯಕ್ತಪಡಿಸುತ್ತಾನೆ. ಇಂಥ ಪರಿಸ್ಥಿತಿಯಲ್ಲಿ ಆರೈಕೆದಾರಾಗಿ ನೀವು ರೋಗಿಗಳಿಗೆ ಸಹಾಯ ಮಾಡಬಹುದಾದ ಕೆಲವು ಸಂಗತಿಗಳನ್ನು ಇಲ್ಲಿ ಹೇಳಲಾಗಿದೆ.

ವ್ಯಕ್ತಿತ್ವದ ಖಾಯಿಲೆ ವ್ಯಕ್ತಿಯ ಮೊಂಡುತನ ಅಥವಾ ಉದ್ದೇಶಪೂರಿತ ವರ್ತನೆ ಅಲ್ಲ ಎನ್ನುವುದನ್ನು ನೆನಪಿಡಿ. ಇದು ರೋಗಿಯ ಕ್ರಿಯಾತ್ಮಕ ಜೀವನದ ಕೊನೆಯ ಹಂತವೂ ಅಲ್ಲ. ಆರಂಭದ ಹಂತದಲ್ಲಿ ದೊರೆಯುವ ಮಧ್ಯಸ್ಥಿಕೆ ಮತ್ತು ಸೂಚಿತ ಚಿಕಿತ್ಸಾ ಯೋಜನೆಯನ್ನು ಸರಿಯಾಗಿ ಅನುಕರಿಸುವುದರಿಂದ ಚೇತರಿಕೆಯ ಸಾಧ್ಯತೆಗಳು ಹೆಚ್ಚು.

ಸಮಾಜ ವಿರೋದಿ ವ್ಯಕ್ತಿತ್ವದ ಖಾಯಿಲೆ, ಛಿದ್ರಮನಸ್ಕತೆಯ ವ್ಯಕ್ತಿತ್ವದ ಖಾಯಿಲೆ, ಸಂಶಯಗ್ರಸ್ತ ವ್ಯಕ್ತಿತ್ವದ ಖಾಯಿಲೆ, ಗೀಳು ಮನೋಭಾವದ ವ್ಯಕ್ತಿತ್ವದ ಖಾಯಿಲೆ, ಆತ್ಮಶ್ಲಾಘನೆಯ ವ್ಯಕ್ತಿತ್ವದ ಖಾಯಿಲೆ ಮೊದಲಾದ ರೀತಿಯ ವ್ಯಕ್ತಿತ್ವದ ಖಾಯಿಲೆಗಳಿಂದ ಬಳಲುವ ರೋಗಿಗಳು ತಮ್ಮ ವರ್ತನೆ ಯಾತನಾದಾಯಕವಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ ಅಥವಾ ಅರ್ಥೈಸಿಕೊಳ್ಳುವುದಿಲ್ಲ. ಅವನು ಅಥವಾ ಅವಳಿಗೆ ಚಿಕಿತ್ಸೆ ಅಗತ್ಯವಿದೆ ಎನ್ನುವುದನ್ನು ರೋಗಿಗೆ ಮನವರಿಕೆ ಮಾಡುವಲ್ಲಿ ಆರೈಕೆದಾರರು ಕಷ್ಟ ಎದುರಿಸಬಹುದು. ಅವರ ವರ್ತನೆ ತಪ್ಪಾಗಿದೆ ಎಂದು ಬೊಟ್ಟುಮಾಡಿ ತೋರಿಸುವ ಬದಲು, ವ್ಯಕ್ತಿಯ ಯಾವ ಅನಾರೋಗ್ಯಕರ ಸ್ವಭಾವದಿಂದಾಗಿ ಆತ ಸಂಕಷ್ಟವನ್ನು ಅನುಭವಿಸುತ್ತಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ವೇದನೆ ಹೇಗೆ ಉಂಟಾಗುತ್ತದೆ ಎನ್ನುವುದನ್ನು ಅವರಿಗೆ ತಿಳಿಸಲು ಈ ಅವಕಾಶವನ್ನು ಬಳಸಿಕೊಳ್ಳಿ (ಆದರೆ ಇದು ಅವರ ತಪ್ಪಿನಿಂದಾದದ್ದು ಎಂದು ಹೇಳಬೇಡಿ). ನೀವು ಅವರ ಕುರಿತಾಗಿ ಕಾಳಜಿ ಹೊಂದಿದ್ದೀರಿ, ಅವರು ಸಹಾಯ ಬಯಸಿದಾಗ ನೀವು ಅವರಿಗೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧರಿರುವಿರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ.

ಅವರ ಖಾಯಿಲೆಗೆ ಅವರೇ ಹೊಣೆಗಾರರು ಎಂಬಂಥ ಭಾವನೆಯನ್ನು ಮೂಡಿಸುವ ಯಾವುದೇ ಹೇಳಿಕೆ ಅಥವಾ ಹಾವಭಾವಗಳ ಪ್ರದರ್ಶನವನ್ನು ತಡೆಯಲು ಪ್ರಯತ್ನಿಸಿ.

ರೋಗಿಯು ಮನೋವೈದ್ಯರನ್ನು ಭೇಟಿಮಾಡಲು ನಿರಾಕರಿಸಿದರೆ, ಅವನ ಅಥವಾ ಅವಳ ಸಮಸ್ಯೆಯನ್ನು ಅರಿತು ಸಲಹೆ ನೀಡುವ ಉತ್ತಮ ಆಪ್ತ ಸಲಹೆಗಾರರನ್ನು ಭೇಟಿ ಮಾಡಲು ಸೂಚಿಸಿ. ಆಪ್ತ ಸಲಹೆಗಾರರು ರೋಗಿಯ ಸಮಸ್ಯೆಯನ್ನು ಗುರುತಿಸಲು ಸಮರ್ಥರಿರುತ್ತಾರೆ ಮತ್ತು ಚಿಕಿತ್ಸೆ ಅಗತ್ಯ ಎನ್ನುವುದನ್ನು ರೋಗಿಗೆ ನಿಮಗಿಂತ ಚೆನ್ನಾಗಿ ಅವರು ಮನವರಿಕೆ ಮಾಡಿಸುತ್ತಾರೆ! ರೋಗಿಯು ಸ್ವಯಂಹಾನಿ ಮಾಡಿಕೊಳ್ಳಬಹುದು ಅಥವಾ ಇತರರಿಗೆ ತೊಂದರೆಯನ್ನು ಉಂಟುಮಾಡಬಹುದು ಎಂದು ನಿಮಗೆ ಅನಿಸಿದರೆ, ನೇರವಾಗಿ ಮಾನಸಿಕ ತಜ್ಞರನ್ನು ಭೇಟಿ ಮಾಡುವುದು ಅತ್ಯಂತ ಪರಿಣಾಮಕಾರಿ.

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org