ಆಘಾತದ ನಂತರದ ಒತ್ತಡದಿಂದಾಗುವ ಅಸ್ವಸ್ಥತೆ (PTSD)

Q

ಆಘಾತದ ನಂತರದ ಒತ್ತಡದಿಂದಾಗುವ ಅಸ್ವಸ್ಥತೆ (PTSD) ಎಂದರೇನು?

A

ವ್ಯಕ್ತಿಗಳು ಯಾವುದಾದರೂ ಭಯ ಉಂಟಾಗುವಂತಹ ಘಟನೆಗಳನ್ನು ಅನುಭವಿಸಿದ್ದರೆ ಅಥವಾ ಅದಕ್ಕೆ ಸಾಕ್ಷಿಯಾಗಿದ್ದರೆ ಅದರ ನೆನಪುಗಳು ಮತ್ತು ಆ ಹಿಂದಿನ ಘಟನೆಗಳು ಅವರಲ್ಲಿ ಯಾವಾಗಲೂ ಆತಂಕ ಮತ್ತು ಭಯವನ್ನು ಪ್ರಚೋದಿಸುತ್ತವೆ. ಈ ಘಟನೆಗಳು ಅನೇಕ ರೀತಿಯದ್ದಾಗಿರಬಹುದು. ಉದಾಹರಣೆಗೆ, ದೈಹಿಕ ಅಥವಾ ಲೈಂಗಿಕ ಹಲ್ಲೆ, ಗಂಭೀರ ಅಪಘಾತಗಳು, ಯುದ್ಧಗಳು ಅಥವಾ ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳು ಮುಂತಾದವಾಗಿರಬಹುದು.  ಸೂಕ್ತ ಆರೈಕೆಯಿಂದ, ಕಾಲಕ್ರಮೇಣ, ಅನೇಕ ಜನರು ಇದರಿಂದ ಗುಣಮುಖರಾಗಿದ್ದಾರೆ. ಆತಂಕ ಮತ್ತು ಭಯದ ಪ್ರಮಾಣ ಕಡಿಮೆಯಾಗಿ ದೈನಂದಿನ ಜೀವನಕ್ಕೆ ಹೊಂದಿಕೊಂಡಿದ್ದಾರೆ.

ಹೀಗಿದ್ದರೂ, ಹಿಂದಿನ ಘಟನೆಯ ಕೆಟ್ಟ ನೆನಪು ಕೆಲವು ಜನರಲ್ಲಿ ಹೆಚ್ಚಾಗಿ ಕಾಡತೊಡಗುತ್ತದೆ. ವ್ಯಕ್ತಿಗಳಿಗೆ ಆಘಾತದ ಘಟನೆಗಳ ಕುರಿತಾದ ನೆನಪುಗಳು ಆಗಾಗ ಮರುಕಳಿಸುವ ಕಾರಣದಿಂದಾಗಿ ಅವರಲ್ಲಿ ತೀವ್ರ ಆತಂಕ ಮತ್ತು ಭಯ ಕಂಡುಬರುತ್ತದೆ. ಹಾಗಾಗಿ ಅವರಿಗೆ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗದು. ಅಂತಹ ವ್ಯಕ್ತಿಗಳು ಆಘಾತದ ನಂತರದ ಒತ್ತಡದ ಅಸ್ವಸ್ಥತೆಯಿಂದ (post traumatic stress disorder-PTSD) ಬಳಲುತ್ತಿರುತ್ತಾರೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಅನೇಕ ವೇಳೆ ತನ್ನೆದುರಿನಲ್ಲಿಯೇ ಮಾರಕ ಅಪಘಾತಗಳನ್ನು ನೋಡಿರುತ್ತಾನೆ. ಮೇಲಿಂದ ಮೇಲೆ ಈ ರೀತಿಯ ಅಪಘಾತದ ಚಿತ್ರಣಗಳು ಆತನ ಮನಸ್ಸಿನಲ್ಲಿ ಮೂಡತೊಡಗಬಹುದು. ಈ ನೆನಪುಗಳು ನೈಜವಾದವು ಮತ್ತು ಈ ಕ್ಷಣದಲ್ಲಿ ಅಲ್ಲಿ ಅಪಘಾತವಾಗುತ್ತಿದೆ ಎಂದು ಆ ವ್ಯಕ್ತಿಗೆ ಭಾಸವಾಗುತ್ತದೆ. ಈ ರೀತಿಯ ಹಿಂದಿನ ಘಟನೆಗಳ ನೆನಪುಗಳು ಅವನಲ್ಲಿ ತೀವ್ರ ಆತಂಕ ಮತ್ತು ಭಯವನ್ನು ಪ್ರಚೋದಿಸುತ್ತವೆ.

Q

ಪಿಟಿಎಸ್‌ಡಿಯ (PTSD) ಲಕ್ಷಣಗಳೇನು?

A

ಪಿಟಿಎಸ್‌ಡಿ ಸಮಸ್ಯೆಯನ್ನುಹೊಂದಿರುವ ವ್ಯಕ್ತಿ ತೀವ್ರ ಆತಂಕ ಹಾಗೂ ಭಯವನ್ನು ಅನುಭವಿಸುತ್ತಾರೆ. ಅವರಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣಗಳೆಂದರೆ:

  • ಘಟನೆಯನ್ನು ಮತ್ತೆಮತ್ತೆ ಮೆಲಕು ಹಾಕುವುದು: ವ್ಯಕ್ತಿಗಳು ಹಿಂದಿನ ಆಘಾತಕಾರಿ ಘಟನೆಗಳ ಕುರಿತಾಗಿ ದುಃಸ್ವಪ್ನ ಕಾಣುವುದರಿಂದ ಮತ್ತು ಪದೆಪದೇ ನೆನಪು ಮಾಡಿಕೊಳ್ಳುವುದರಿಂದ ಆ ಆಘಾತವನ್ನು ಕಲ್ಪಿಸಿಕೊಂಡು ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಇದು ಅವರಲ್ಲಿ ಬೆವರುವಿಕೆ, ಹೃದಯ ಬಡಿತದಲ್ಲಿನ ಹೆಚ್ಚಳ, ವಾಕರಿಕೆ ಮತ್ತು ಹೃದಯಾಘಾತ ಮುಂತಾಗಿ ಅನೇಕ ದೈಹಿಕ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು.

  • ತಲೆ ತಪ್ಪಿಸಿಕೊಳ್ಳುವುದು: ವ್ಯಕ್ತಿಗಳು ಆಘಾತಗಳ ಕುರಿತಾಗಿ ಮಾತನಾಡಲು, ಆ ಸ್ಥಳಗಳಿಗೆ ಭೇಟಿ ನೀಡಲು, ಅಂತಹ ಸನ್ನಿವೇಶಗಳನ್ನು ಎದುರಿಸಲು ಹಿಂದೇಟು ಹಾಕುತ್ತಾರೆ. ಅವುಗಳಿಂದಾಗಿ ಹಿಂದಿನ ಘಟನೆಗಳ ನೆನಪು ಮರುಕಳಿಸಿ ಭಯ ಹಾಗೂ ತೊಂದರೆ ಉಂಟಾಗಬಹುದೆಂದು ತಿಳಿಯುತ್ತಾರೆ.
  • ಅತಿ ಜಾಗರೂಕತೆ: ಅಂತಹ ವ್ಯಕ್ತಿಗಳು ನಿರಂತರವಾಗಿ ಜಾಗರೂಕತೆಯಿಂದಿರುತ್ತಾರೆ. ಸುರಕ್ಷತೆಯ ವಾತಾವರಣದಲ್ಲಿದ್ದರೂ ಯಾವಾಗಲೂ ಅಪಾಯವನ್ನು ಎದುರು ನೋಡುತ್ತಿರುತ್ತಾರೆ. ಅವರು ನೆಮ್ಮದಿಯಿಂದ ನಿದ್ರಿಸಲಾರರು. ಆಗಾಗ ಬೆಚ್ಚಿಬೀಳುತ್ತಿರುತ್ತಾರೆ.

  • ಭಾವನಾತ್ಮಕವಾಗಿ ದೂರವಾಗುತ್ತಾರೆ: ಅವರು ತಮ್ಮ ಸ್ನೇಹಿತರಿಂದ ಹಾಗೂ ಕುಟುಂಬದವರಿಂದ ದೂರವಿರಲು ಆರಂಭಿಸುತ್ತಾರೆ. ಈ ಮೊದಲು ತಾವು ಖುಷಿ ಪಡೆಯುತ್ತಿದ್ದ ಚಟುವಟಿಕೆಗಳಲ್ಲಿಯೂ ಆಸಕ್ತಿ ಕಳೆದುಕೊಳ್ಳುತ್ತಾರೆ.

  • ಪಿಟಿಎಸ್‌ಡಿಯಿಂದ ಬಳಲುತ್ತಿರುವವರು ಖಿನ್ನತೆ, ತೀವ್ರ ತೆರನಾದ ಆತಂಕ, ಮಾದಕ ವಸ್ತುಗಳ ಚಟ ಮತ್ತು ಕೆಲವು ಸಂದರ್ಭಗಳಲ್ಲಿ ಆತ್ಮಹತ್ಯೆಯ ಆಲೋಚನೆಯಂತಹ ಮಾನಸಿಕ ಅನಾರೋಗ್ಯಗಳಿಗೂ ಒಳಗಾಗಬಹುದು.

ನಿಮ್ಮ ಪರಿಚಯದ ವ್ಯಕ್ತಿಗಳಲ್ಲಿ ಈ ರೀತಿಯ ಲಕ್ಷಣಗಳನ್ನು ನೀವು ಗಮನಿಸಿದರೆ, ಅವರೊಂದಿಗೆ ಈ ಅಸ್ವಸ್ಥತೆಯ ಕುರಿತಾಗಿ ಮಾತನಾಡಿ ಹಾಗೂ ಮಾನಸಿಕ ಆರೋಗ್ಯ ತಜ್ಞರ ಸಹಕಾರ ಪಡೆಯಲು ಸಲಹೆ ನೀಡಿ.

 

Q

ಪಿಟಿಎಸ್‌ಡಿಗೆ ಕಾರಣಗಳೇನು?

A

ಜೀವಕ್ಕೆ ಅಪಾಯವಾಗಬಹುದಾದ ದೈಹಿಕ ಅಥವಾ ಲೈಂಗಿಕ ಹಿಂಸೆಗಳಂತಹ ಘಟನೆಗಳನ್ನು ಅನುಭವಿಸಿದ ಅಥವಾ ನೋಡಿದ ಯಾವುದೇ ವ್ಯಕ್ತಿಗಳು ಪಿಟಿಎಸ್‌ಡಿಗೆ ಒಳಗಾಗಬಹುದು. ಹುಟ್ಟುತ್ತಲೇ ಹೆಚ್ಚಿನ ಆತಂಕ ಅಥವಾ ಖಿನ್ನತೆಯ ಅಪಾಯಕ್ಕೆ ಒಳಗಾದ ವ್ಯಕ್ತಿಗಳಲ್ಲಿ ಇದು ಸುಲಭವಾಗಿ ಗೋಚರಿಸಬಹುದು. ಘಟನೆಯನ್ನು ಎದುರಿಸಿದ ತೀವ್ರತೆ ಮತ್ತು ಕಂಡ ಕಾಲಾವಧಿ ಕೂಡ ಇದಕ್ಕೆ ಪೂರಕವಾದ ಒಂದು ಅಂಶವಾಗಿರಬಹುದು. ಕೆಲವು ಸಂದರ್ಭಗಳಲ್ಲಿ, ಮಿದುಳು ಒತ್ತಡವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಕೂಡ ಪರಿಣಾಮ ಬೀರುವ ಸಾಧ್ಯತೆಯಿದೆ. ಪಿಟಿಎಸ್‌ಡಿ ಉಂಟಾಗಲು ಯಾವುದೇ ಒಂದು ನಿರ್ದಿಷ್ಟ ಕಾರಣ ಅಂತಿಲ್ಲ, ಅದು ಅನೇಕ ಸಂಕೀರ್ಣ ಕಾರಣಗಳನ್ನು ಒಳಗೊಂಡಿರುತ್ತದೆ.

Q

ಪಿಟಿಎಸ್‌ಡಿಯ ಚಿಕಿತ್ಸಾ ವಿಧಾನ

A

ಆಘಾತದ ಅನುಭವವಾದ ತಕ್ಷಣದಲ್ಲಿ ಪಿಟಿಎಸ್‌ಡಿಯ ಲಕ್ಷಣಗಳು ಗೋಚರಿಸುವುದು ಸಹಜ. ಹೆಚ್ಚಿನ ಜನರು ಕುಟುಂಬ ಹಾಗೂ ಸ್ನೇಹಿತರ ಸಹಾಯದಿಂದ ಈ ತೊಂದರೆಯಿಂದ ಹೊರಬರುತ್ತಾರೆ. ಸಾಮಾನ್ಯ ಜೀವನ ನಡೆಸುವಂತಾಗುತ್ತಾರೆ. ಆದರೂ, ಆಘಾತದ ನಂತರದಲ್ಲಿಯೂ ಇದರ ಲಕ್ಷಣಗಳು ದೀರ್ಘ ಕಾಲದವರೆಗೆ ಕಂಡುಬಂದಲ್ಲಿ ನೀವು ಮಾನಸಿಕ ತಜ್ಞರನ್ನು ಭೇಟಿ ಮಾಡುವುದು ಅಗತ್ಯ. ಪಿಟಿಎಸ್‌ಡಿಯ ಚಿಕಿತ್ಸೆಯು ಪ್ರಾಥಮಿಕವಾಗಿ ಥೆರಪಿಯನ್ನು, ಮುಖ್ಯವಾಗಿ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (cognitive behavioral therapy-CBT) ಮತ್ತು ಎಕ್ಸ್‌ಪೋಶರ್ ಥೆರಪಿ(exposure therapy)ಯನ್ನು ಒಳಗೊಳ್ಳುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಗಳು ತಾನನುಭವಿಸಿದ ಆಘಾತಕರ ಘಟನಾವಳಿಯ ಕುರಿತು ವಿಚಾರಮಾಡುವಂತೆ ಪ್ರಚೋದಿಸಲಾಗುತ್ತದೆ. ಕಳವಳಕ್ಕೆ ಕಾರಣವಾಗುವ ಈ ವಿಚಾರಗಳು ಮೂಡಿಬರದಂತೆ ವ್ಯಕ್ತಿಯು ಸಾಮಾನ್ಯವಾಗಿ ಪ್ರಯತ್ನಿಸುತ್ತಿರುತ್ತಾನೆ. ಚಿಕಿತ್ಸಾ ವಿಧಾನದಲ್ಲಿ ಪದೆಪದೇ ಈ ರೀತಿಯ ವಿಚಾರಗಳು ಉಂಟಾಗುವಂತೆ ಮಾಡುವುದರಿಂದ ಕಳವಳ ಕಡಿಮೆಯಾಗತೊಡಗುತ್ತದೆ. ಖಿನ್ನತೆ, ಆತಂಕ ಮತ್ತು ನಿದ್ರೆಯ ತೊಂದರೆಯನ್ನು ಅನುಭವಿಸುತ್ತಿರುವವರಿಗೆ ಅದರಿಂದ ಬಿಡುಗಡೆ ಹೊಂದಲು ಔಷಧವನ್ನು ಶಿಫಾರಸ್ಸು ಮಾಡಲಾಗುತ್ತದೆ.

Q

ಪಿಟಿಎಸ್‌ಡಿ ತೊಂದರೆಯಿಂದ ಬಳಲುತ್ತಿರುವವರ ಆರೈಕೆ

A

ಭಾವನಾತ್ಮಕ ತೊಂದರೆಯು ಪಿಟಿಎಸ್‌ಡಿಯ ಒಂದು ಭಾಗವಾಗಿದೆ. ಆದ್ದರಿಂದ ಪಿಟಿಎಸ್‌ಡಿ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಆರೈಕೆ ಮಾಡಲು ಹೆಚ್ಚಿನ ಸಹನೆ ಮತ್ತು ಸಹಾನುಭೂತಿ ಅಗತ್ಯ ಎಂದು ಅವರನ್ನು ನೋಡಿಕೊಳ್ಳುವವರು ಅರ್ಥಮಾಡಿಕೊಂಡಿರಬೇಕು. ಈ ಸಮಸ್ಯೆಯ ಕುರಿತಾಗಿ ನೀವು ಹೆಚ್ಚು ತಿಳಿದುಕೊಳ್ಳುವುದರಿಂದ ರೋಗಿಗಳು ಯಾವ ರೀತಿ ವರ್ತಿಸುತ್ತಿದ್ದಾರೆ, ತೊಂದರೆಯ ಪ್ರಮಾಣ ಹೇಗಿದೆ ಎಂಬುದನ್ನು ಗಮನಿಸಲು ಸಾಧ್ಯವಾಗುತ್ತದೆ. ಮಾನಸಿಕ ತಜ್ಞರನ್ನು ಭೇಟಿ ಮಾಡುವುದರಿಂದ ನೀವು ಹೆಚ್ಚಿನ ಸಹಕಾರ ಮತ್ತು ಅಸ್ವಸ್ಥತೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಮಾನಸಿಕ ತಜ್ಞರ ಸಹಾಯ ಪಡೆಯುವಂತೆ ರೋಗಿಗಳನ್ನು ನೀವು ಪ್ರೇರೇಪಿಸಬೇಕು. ಆದರೆ ಯಾವುದೇ ವಿಷಯದ ಕುರಿತಾಗಿಯೂ ಅವರನ್ನುಒತ್ತಾಯಿಸಬಾರದು; ಇದರಿಂದ ಹೊರಬರಲು ಅವರಿಗೆ ಅವರದೇ ಆದ ಸಮಯವನ್ನು ನೀಡಬೇಕು.

Q

ಪಿಟಿಎಸ್‌ಡಿಯ ನಿರ್ವಹಣೆ

A

ನಿಮಲ್ಲಿ ಪಿಟಿಎಸ್‌ಡಿಯ ಲಕ್ಷಣಗಳು ಕಂಡುಬಂದರೆ ತಕ್ಷಣ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಬೇಕು. ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ನೀವು ಎಷ್ಟು ಬೇಗ ಸಹಾಯವನ್ನು ಪಡೆದುಕೊಳ್ಳುವಿರೋ ಅಷ್ಟು ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಆತ್ಮೀಯರೊಂದಿಗೆ ಅಥವಾ ಅದೇ ರೀತಿಯ ಸಮಸ್ಯೆ ಹೊಂದಿರುವವರೊಂದಿಗೆ ಚರ್ಚಿಸುವುದರಿಂದ ಸಮಸ್ಯೆಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಸಾಕಷ್ಟು ವಿಶ್ರಾಂತಿ, ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವ ಮೂಲಕ ಆತಂಕವನ್ನು ಕಡಿಮೆಗೊಳಿಸಿಕೊಳ್ಳಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org