ರೆಸ್ಟ್‌ಲೆಸ್‌ ಲೆಗ್ಸ್ ಸಿಂಡ್ರೋಮ್

Q

ರೆಸ್ಟ್‌ಲೆಸ್‌ ಲೆಗ್ಸ್ ಸಿಂಡ್ರೋಮ್‌ ಎಂದರೇನು?

A

ರೆಸ್ಟ್‌ಲೆಸ್‌ ಲೆಗ್ಸ್ ಸಿಂಡ್ರೋಮ್‌ (ಆರ್‌ಎಲ್ಎಸ್) ಒಂದು ನರವೈಜ್ಞಾನಿಕ ಖಾಯಿಲೆಯಾಗಿದ್ದು, ಇದರಿಂದಾಗಿ ವ್ಯಕ್ತಿಗಳು ಪದೇ ಪದೇ ಅವರ ಕಾಲುಗಳನ್ನು ಅಲ್ಲಾಡಿಸುತ್ತಿರುತ್ತಾರೆ ಹಾಗೂ ಅವರ ಕಾಲುಗಳು ಸುಮ್ಮನಿದ್ದರೆ ಅವರು ಹೆಚ್ಚು ಕಿರಿಕಿರಿ ಅನುಭವಿಸುತ್ತಾರೆ. ಅವರು ತಮ್ಮ ಕಿರಿಕಿರಿಯನ್ನು ಕಡಿಮೆಗೊಳಿಸಲು ತಮ್ಮ ಕಾಲುಗಳನ್ನು ಅಲ್ಲಾಡಿಸುತ್ತಾರೆ ಅಥವಾ ವಾಕಿಂಗ್‌ ಮಾಡುತ್ತಾರೆ. ಆರ್‌ಎಲ್‌ಎಸ್‌ ತೊಂದರೆ ಇರುವ ವ್ಯಕ್ತಿಗಳು ಕಾಲುಗಳನ್ನು ಅಲ್ಲಾಡಿಸುವ ಹಂಬಲದಿಂದ ಸರಿಯಾಗಿ ನಿದ್ರೆ ಮಾಡಲಾರರು ರಾತ್ರಿ ವೇಳೆ ಕೂಡ ಅವರು ಇದಕ್ಕಾಗಿ ಹಂಬಲಿಸಬಹುದು. ಇದು ಅವರಲ್ಲಿ ನಿದ್ರೆಯ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಮತ್ತು ಹಗಲಿನಲ್ಲಿ ತೂಕಡಿಸುವಂತೆ ಮಾಡುತ್ತದೆ. ಈ ಖಾಯಿಲೆ ಹೊಂದಿರುವವರಿಗೆ ಕಾರಿನಲ್ಲಿ ಅಥವಾ ವಿಮಾನದಲ್ಲಿ ಹೆಚ್ಚು ದೂರ ಪ್ರಯಾಣಿಸಲು ಕಷ್ಟವಾಗಬಹುದು. ಆರ್‌ಎಲ್‌ಎಸ್‌ ಹೆಚ್ಚು ಒತ್ತಡದಿಂದ ಕೂಡಿದ್ದಾಗಿರುತ್ತದೆ, ಆದರೆ ಕೆಲವು ಔಷಧಗಳು ಮತ್ತು ಜೀವನಶೈಲಿಯಲ್ಲಿನ ಒಂದಷ್ಟು ಬದಲಾವಣೆಯಿಂದ ಈ ಖಾಯಿಲೆಯನ್ನು ಬಹುತೇಕವಾಗಿ ಗುಣಪಡಿಸಬಹುದು.

Q

ಆರ್‌ ಎಲ್ ಎಸ್ ಲಕ್ಷಣಗಳೇನು?

A

ಆರ್‌ ಎಲ್ ಎಸ್ ಪ್ರಮುಖ ಲಕ್ಷಣಗಳು:

  • ಕಾಲುಗಳಲ್ಲಿ ಅಹಿತಕರ ಸಂವೇದನೆ: ಕಾಲುಗಳಲ್ಲಿ ತುರಿಕೆ, ಉರಿ ಅಥವಾ ಏನೋ ಸಂಚಲಿಸಿದಂಥ ಸನ್ನಿವೇಶಗಳನ್ನು ನೀವು ಅನುಭವಿಸಬಹುದು. ಆ ಕಾರಣದಿಂದ ನಿಮಗೆ ನಿಮ್ಮ ಕಾಲುಗಳನ್ನು ಅಲ್ಲಾಡಿಸಬೇಕೆಂಬ ಹಂಬಲ ಉಂಟಾಗಬಹುದು ಮತ್ತು ಹೀಗೆ ಮಾಡುವುದರಿಂದ ಆ ಅನುಭವಗಳು ಮಾಯವಾಗಬಹುದು. ಕೆಲವು ಸಲ, ನಿಮ್ಮ ತೋಳುಗಳಲ್ಲಿ ಅಥವಾ ದೇಹದ ಇತರ ಭಾಗಗಳಲ್ಲಿ ಈ ರೀತಿಯ ಅಹಿತಕರ ತುಡಿತ ಅನುಭವಿಸಬಹುದು. ಆದರೆ ಸಾಮಾನ್ಯವಾಗಿ ಕಾಲುಗಳಲ್ಲಿಯೇ ಈ ತುಡಿತ ಹೆಚ್ಚಾಗಿರುತ್ತದೆ.
  • ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹಂಬಲ ಆರಂಭವಾಗುತ್ತದೆ: ನೀವು ಸ್ಥಿರವಾಗಿ ಕುಳಿತುಕೊಂಡಿದ್ದಾಗ ಮತ್ತು ಮಲಗಿಕೊಂಡಿರುವಾಗಲೇ ಈ ತುಡಿತದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
  • ಹಗಲಿನಲ್ಲಿ ತೂಕಡಿಕೆ: ಕಾಲುಗಳನ್ನು ಅಲ್ಲಾಡಿಸಬೇಕೆಂಬ ಅತಿಯಾದ ಹಂಬಲದಿಂದ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದು ನಿಮ್ಮನ್ನು ಹಗಲಿಡೀ ಆಯಾಸಗೊಳ್ಳುವಂತೆ ಮತ್ತು ತೂಕಡಿಸುವಂತೆ ಮಾಡುತ್ತದೆ. ನಿದ್ರೆಯ ಕೊರತೆಯಿಂದ ನೀವು ಕಿರಿಕಿರಿಗೊಳ್ಳಬಹುದು. ಹೆಚ್ಚಿನವರು ಆರ್‌ಎಲ್ಎಸ್ ಲಕ್ಷಣಗಳು ಗಂಭೀರವಾದದ್ದಲ್ಲ ಎಂದು ಭಾವಿಸುತ್ತಾರೆ. ಅದು ಅವರ ಬದುಕಿನ ಗುಣಮಟ್ಟವನ್ನು ಹೇಗೆ ಕುಸಿಯುವಂತೆ ಮಾಡುತ್ತದೆ ಎಂಬುದನ್ನು ತಿಳಿಯಲಾರರು. ನಿಮ್ಮ ಪ್ರೀತಿಪಾತ್ರರು ಪದೆ ಪದೆ ಕಾಲುಗಳನ್ನು ಅಲ್ಲಾಡಿಸುತ್ತಿದ್ದರೆ, ಬದಲಿಸುತ್ತಿದ್ದರೆ ಅಥವಾ ಆರ್‌ಎಲ್ಎಸ್ ನ ಇತರೆ ಯಾವುದೇ ಲಕ್ಷಣಗಳನ್ನು ತೋರಿಸಿದರೆ, ಅದರ ಕುರಿತು ಅವರೊಂದಿಗೆ ಮಾತನಾಡಿ ಮತ್ತು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡುವಂತೆ ಸಲಹೆ ನೀಡಿ.

Q

ಆರ್‌ ಎಲ್ ಎಸ್ ಗೆ ಕಾರಣಗಳೇನು?

A

ಆರ್‌ಎಲ್ಎಸ್ ತೊಂದರೆಯ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು ಮತ್ತು ಕೆಲವು ಸಂದರ್ಭದಲ್ಲಿ ಕಾರಣವು ಕೂಡ ತಿಳಿಯದೇ ಇರಬಹುದು. ಮಿದುಳಿನಲ್ಲಿ ಸ್ನಾಯುಗಳ ಚಲನೆಯನ್ನು ನಿಯಂತ್ರಿಸುವ ಡೋಪಮೈನ್‌ ರಾಸಾಯನಿಕದ ಅಸಮತೋಲನದಿಂದ ಈ ಖಾಯಿಲೆ ಉಂಟಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ಇನ್ನಿತರ ಕಾರಣಗಳೆಂದರೆ:

  • ಕಬ್ಬಿಣಾಂಶದ ಕೊರತೆ: ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ಮೆದುಳಿನ ಜೀವಕೋಶಗಳ ಸಂವಹನದಲ್ಲಿ ಸಮಸ್ಯೆ ಉಂಟಾಗಿ, ಅದರ ಪರಿಣಾಮವಾಗಿ ಆರ್‌ಎಲ್ಎಸ್ ಕಾಣಿಸಿಕೊಳ್ಳಬಹುದು.

  • ಕೌಟುಂಬಿಕ ಇತಿಹಾಸ: ಕೆಲವೊಮ್ಮೆ ಕೌಟುಂಬಿಕ ಕಾರಣದಿಂದಾಗಿಯೂ ಆರ್‌ಎಲ್‌ಎಸ್‌ ಬರಬಹುದು. ನಿಮ್ಮ ಹಿಂದಿನ ತಲೆಮಾರಿನವರಲ್ಲಿ ಚಿಕ್ಕವಯಸ್ಸಿನಲ್ಲೇ ಆರ್‌ಎಲ್‌ಎಸ್‌ ಕಾಣಿಸಿಕೊಂಡಿದ್ದರೆ, ಈ ತಲೆಮಾರಿಗೂ ಅದು ಮುಂದುವರಿಯುವ ಸಾಧ್ಯತೆ ಹೆಚ್ಚು.

  • ಇತರ ವೈದ್ಯಕೀಯ ಸ್ಥಿತಿಗಳು: ಕಿಡ್ನಿ ವೈಫಲ್ಯ, ಮಧುಮೇಹ, ನರ ಹಾನಿ, ಸಂಧಿವಾತ ಮತ್ತು ರಕ್ತಹೀನತೆಯ ಸಮಸ್ಯೆಗಳು ಕೂಡ ಆರ್‌ಎಲ್ಎಸ್ ಬೆಳವಣಿಗೆಗೆ ಕಾರಣವಾಗಬಹುದು. ಆದಾಗ್ಯೂ ವ್ಯಕ್ತಿಯು ಈ ತೊಂದರೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳಲು ಆರಂಭಿಸಿದರೆ, ರೋಗಲಕ್ಷಣಗಳು ಕಡಿಮೆಯಾಗಬಹುದು.

  • ಗರ್ಭಧಾರಣೆ: ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಆರ್‌ಎಲ್ಎಸ್‌ಗೆ ಒಳಗಾಗಬಹುದು. ಆದಾಗ್ಯೂ ಪ್ರಸವದ ಒಂದು ತಿಂಗಳೊಳಗೆ ಈ ರೋಗ ಲಕ್ಷಣಗಳು ಕ್ಷೀಣಿಸುತ್ತವೆ.  

Q

ಆರ್‌ ಎಲ್ ಎಸ್‌ಗೆ ಚಿಕಿತ್ಸೆ

A

ಆರ್‌ಎಲ್ಎಸ್ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಬೇರೆಯಾಗಿರಬಹುದು. ಜೀವನಶೈಲಿಯಲ್ಲಿ ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವದರಿಂದ ಹಿಡಿದು ಆರ್‌ಎಲ್ಎಸ್ ಗೆ ಕಾರಣವಾಗುವ ವೈದ್ಯಕೀಯ ಲಕ್ಷಣಗಳಿಗೆ ಚಿಕಿತ್ಸೆನೀಡುವ ಮೂಲಕ ಮತ್ತು ನಿರ್ದಿಷ್ಟವಾಗಿ ಆರ್‌ಎಲ್‌ಎಸ್‌ನ ಲಕ್ಷಣಗಳನ್ನು ಗುಣಪಡಿಸುವ ಔಷಧಗಳನ್ನು ಸೇವಿಸುವ ಮೂಲಕ ಈ ಖಾಯಿಲೆಯನ್ನು ವಾಸಿ ಮಾಡಿಕೊಳ್ಳಬಹುದು.

ಆರಂಭದಲ್ಲಿ ಪ್ರತಿನಿತ್ಯ ವ್ಯಾಯಾಮಮಾಡುವುದು, ಅತಿಯಾದ ತೂಕ ಹೊಂದಿದ್ದರೆ ತೂಕ ಕಡಿಮೆ ಮಾಡಿಕೊಳ್ಳುವುದು ಅಥವಾ ಧೂಮಪಾನ ಹಾಗೂ ಕೆಫೀನ್‌ಗಳನ್ನು ತ್ಯಜಿಸುವುದು ಮುಂತಾದ ಸರಳ ಬದಲಾವಣೆಗಳನ್ನು ಮಾಡಿಕೊಳ್ಳಲು ವೈದ್ಯರು ಸೂಚಿಸಬಹುದು. ನಿಮ್ಮಲ್ಲಿ ಕಬ್ಬಿಣಾಂಶದ ಕೊರತೆಯಿದ್ದರೆ, ವೈದ್ಯರು ಕಬ್ಬಿಣಾಂಶಯುಕ್ತ ಆಹಾರ/ಔಷಧ ಸೇವನೆಗೆ ಶಿಫಾರಸು ಮಾಡಬಹುದು. ವೈದ್ಯರು ಸೂಚಿಸಿದರೆ ಮಾತ್ರ ಔಷಧಗಳನ್ನು ತೆಗೆದುಕೊಳ್ಳಬೇಕು. ಈ ಚಿಕಿತ್ಸೆಗಳು ನಿಮ್ಮಲ್ಲಿ ಒತ್ತಡವನ್ನು ಕಡಿಮೆ ಮಾಡದಿದ್ದರೆ, ಆಗ ನಿಮಗೆ ಈ ಕೆಳಗಿನ ಔಷಧಗಳಲ್ಲಿ ಯಾವುದನ್ನಾದರೂ ಸೂಚಿಸಬಹುದು.

  • ಪಾರ್ಕಿನ್ಸನ್ಸ್ ಖಾಯಿಲೆ ಔಷಧೋಪಚಾರ: ಈ ಔಷಧಗಳು ಮೆದುಳಿನಲ್ಲಿ ಡೋಪಮೈನ್‌ ಪ್ರಮಾಣವನ್ನು ಹೆಚ್ಚಿಸುತ್ತವೆ ಮತ್ತು ಇದು ಆರ್‌ಎಲ್ಎಸ್ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಆರ್‌ಎಲ್ಎಸ್ ತೊಂದರೆಯಿದೆ ಎಂದರೆ, ನೀವು ಪಾರ್ಕಿನ್‌ಸನ್ಸ್ ಖಾಯಿಲೆಯಿಂದಲೂ ಬಳಲುತ್ತೀದ್ದೀರಿ ಎಂದು ಅರ್ಥವಲ್ಲ.

  • ನೋವು ನಿವಾರಕ ನಾರ್ಕೋಟಿಕ್ ಔಷಧಗಳು: ಈ ರೀತಿಯ ಔಷಧಗಳನ್ನು ಒಪಿಯಾಡ್ಸ್ ಎನ್ನುತ್ತಾರೆ. ಇವು ಆರ್‌ಎಲ್ಎಸ್ ಲಕ್ಷಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ, ಆದರೆ ಇವುಗಳ ಸೇವನೆ ಚಟವಾಗಿಬಿಟ್ಟರೆ ಅಪಾಯ.

  • ನಿದ್ರೆ ಮಾತ್ರೆಗಳು ಮತ್ತು ಸ್ನಾಯುಸೆಳೆತ ಶಮನಕಾರಿ ಔಷಧ: ಈ ಮಾತ್ರೆಗಳು ನೀವು ಆರಾಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತವೆ. ಆದರೆ ಸಂಪೂರ್ಣವಾಗಿ ಆರ್‌ಎಲ್ಎಸ್ ಲಕ್ಷಣಗಳನ್ನು ನಿವಾರಿಸುವುದಿಲ್ಲ. ಇವುಗಳ ಸೇವನೆಯಿಂದಾಗಿ ನೀವು ಹಗಲು ಕೂಡ ನಿದ್ದೆ ಮಂಪರನ್ನು ಅನುಭವಿಸುವಂತಾಗಬಹುದು.

ವೈದ್ಯರನ್ನು ಭೇಟಿ ಮಾಡಿ ಅವರು ಸೂಚಿಸುವ ಸೂಕ್ತ ಚಿಕಿತ್ಸಾ ಯೋಜನೆಯನ್ನು ಮತ್ತು ಔಷಧಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ. ಕೆಲವು ಔಷಧಿಗಳು ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡಬಹುದು. ಕೆಲವರಿಗೆ ರೋಗ ಲಕ್ಷಣಗಳು ಕಡಿಮೆಯಾಗಬಹುದು ಮತ್ತು ಕೆಲವರಲ್ಲಿ ಲಕ್ಷಣಗಳು ಹೆಚ್ಚಾಗಬಹುದು. ಆದ್ದರಿಂದ ಔಷಧವು ನಿಮ್ಮಲ್ಲಿ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎಂದು ನೀವು ವೈದ್ಯರಿಗೆ ಮಾಹಿತಿ ನೀಡುತ್ತಿರುವುದು ಅತಿ ಮಹತ್ವದ್ದು.

Q

ಆರ್‌ ಎಲ್ ಎಸ್ ತೊಂದರೆ ಹೊಂದಿರುವವರ ಆರೈಕೆ

A

ನಿಮ್ಮ ಪರಿಚಯದ ಯಾರಾದರೂ ಆರ್‌ಎಲ್ಎಸ್ ತೊಂದರೆಯಿಂದ ಬಳಲುತ್ತಿರುವದು ಕಂಡುಬಂದಲ್ಲಿ, ಅವರು ಅತೀವ ಯಾತನೆಯನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಹೆಚ್ಚಿನ ಜನರಿಗೆ ಇದೊಂದು ಖಾಯಿಲೆ, ಇದನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ತಿಳಿದಿರುವುದಿಲ್ಲ. ನೀವು ಈ ಖಾಯಿಲೆ ಕುರಿತು ಹೆಚ್ಚು ತಿಳಿದುಕೊಳ್ಳುವುದು ಅತಿ ಮಹತ್ವದ್ದು. ನಿಮ್ಮ ಸಂಗಾತಿ ಆರ್‌ಎಲ್ಎಸ್ ತೊಂದರೆಯನ್ನು ಅನುಭವಿಸುತ್ತಿದ್ದರೆ, ನೀವೂ ಕೂಡ ನಿದ್ರೆ ಮಾಡುವಾಗ ತೊಂದರೆ ಅನುಭವಿಸುವ ಸಾಧ್ಯತೆಯಿರುತ್ತದೆ.

ನೀವು ತಾಳ್ಮೆಯಿಂದಿರುವುದು ಮತ್ತು ಇದು ಅವರ ನಿಯಂತ್ರಣದಲ್ಲಿ ಇರುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಅವಶ್ಯಕ. ರೋಗಿಯೊಂದಿಗೆ ಅವರ ಸ್ಥಿತಿಯ ಕುರಿತು ಮಾತನಾಡಿ ಮತ್ತು ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಲು ಅವರನ್ನು ಪ್ರೇರೇಪಿಸಿ.

ಅವರಿಗೆ ಬೆಂಬಲ ನೀಡಲು ಅವರೊಂದಿಗೆ ನೀವು ವೈದ್ಯರ ಬಳಿ ಹೋಗಿ. ವ್ಯಕ್ತಿಯು ಚಿಕಿತ್ಸಾ ಕ್ರಮಗಳನ್ನು ಸರಿಯಾಗಿ ಅನುಸರಿಸುತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ವೈದ್ಯರು ಸೂಚಿಸದೇ ಇರುವ ಯಾವುದೇ ಔಷಧಗಳನ್ನು ಸೇವಿಸಬೇಡಿ.

Q

ಆರ್‌ ಎಲ್ ಎಸ್‌ನೊಂದಿಗೆ ಬದುಕುವುದು

A

ಆರ್‌ಎಲ್ಎಸ್‌ನೊಂದಿಗೆ ಬದುಕುವುದು ಅತ್ಯಂತ ಒತ್ತಡದಾಯಕ, ಆದರೆ ಕೆಲವೊಂದು ಅಂಶಗಳಿಂದ ನೀವು ನಿಮ್ಮ ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ಹಾಗೂ ಚೆನ್ನಾಗಿ ನಿದ್ರೆಮಾಡುವುದನ್ನು ರೂಢಿಸಿಕೊಳ್ಳಿ. ಬಿಸಿ ನೀರಿನ ಸ್ನಾನ, ಮಸಾಜ್ ಮತ್ತು ಬಿಸಿ ಅಥವಾ ತಂಪಾದ ಪೊಟ್ಟಣ್ಣಗಳನ್ನು ನಿಮ್ಮ ಕಾಲುಗಳ ಮೇಲೆ ಹಾಕಿಕೊಳ್ಳುವುದು ಸ್ನಾಯುಗಳಿಗೆ ಹಿತವೆನಿಸುತ್ತದೆ. ತಂಬಾಕು ಮತ್ತು ಕೆಫೆನ್‌ ತ್ಯಜಿಸುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಅತಿ ಮುಖ್ಯವಾಗಿ, ನೀವು ನಿಮ್ಮ ಚಿಕಿತ್ಸಾ ಕ್ರಮಗಳನ್ನು ಪಾಲಿಸಿ ಹಾಗೂ ರೋಗ ಲಕ್ಷಣಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ ನಿಮ್ಮ ವೈದ್ಯರಿಗೆ ತಕ್ಷಣ ತಿಳಿಸಿ.

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org