ಸಾಮಾಜಿಕ ಆತಂಕದ ಸಮಸ್ಯೆ (Social Anxiety Disorder)

Q

ಸಾಮಾಜಿಕ ಆತಂಕದ ಸಮಸ್ಯೆ ಎಂದರೇನು?

A

ನಾವೆಲ್ಲರೂ ಸಮಾರಂಭಗಳಲ್ಲಿ , ಸಾಮಾಜಿಕ ಸಭೆಗಳಲ್ಲಿ, ಭಾಗವಹಿಸುವಾಗ ಕೊಂಚ ಒತ್ತಡಕ್ಕೊಳಗಾಗುತ್ತೇವೆ ಮತ್ತು ಇತರರು ಅತವಾ ಅಪರಿಚಿತರು ನಮ್ಮನ್ನು ‘ಇವರು ಹೀಗೆ’ ಎಂದು ತೀರ್ಪು ನೀಡುವ ಕುರಿತು ಎಚ್ಚರಿಕೆ ವಹಿಸುತ್ತೇವೆ. ಉದಾಹರಣೆಗೆ ಭಾಷಣ ಮಾಡುವಾಗ ನಮ್ಮ ಎದೆ ಬಡಿತ ರಭಸವಾಗುತ್ತದೆ ಮತ್ತು ಹೊಟ್ಟೆ ಕಿವುಚಿದಂತಾಗುತ್ತದೆ. ಕ್ಲಾಸಿನಲ್ಲಿ ಟೀಚರ್ ಪ್ರಶ್ನಿಸಿದಾಗ ಆತಂಕ  ಉಂಟಾಗುತ್ತದೆ, ಇತ್ಯಾದಿ… ಇತ್ಯಾದಿ. ಈ ರೀತಿಯ ಆತಂಕ ಸ್ವಾಭಾವಿಕ ಮತ್ತು ಕೆಲ ಸಮಯದಲ್ಲೇ ಮಾಯವಾಗುತ್ತದೆ.

ಆದರೆ, ಸಾಮಾಜಿಕ ಆತಂಕ ಹೊಂದಿರುವ ವ್ಯಕ್ತಿ ಬೇರೆಯವರು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬುದನ್ನು ಭಾವಿಸಿದಾಗೆಲ್ಲ ಹೆಚ್ಚಿನ ಭಯ ಮತ್ತು ಆತಂಕಕ್ಕೆ ಒಳಪಡುತ್ತಾರೆ. ಇವರು ದಿನಂಪ್ರತಿಯ ಸಾಮಾಜಿಕ ಸಂದರ್ಭಗಳಾದ ಕಾನ್ಫರೆನ್ಸ್ ಅಥವಾ ಕೆಲಸದ ನಿಮಿತ್ತದ ಮೀಟಿಂಗ್ ಗಳಿಗೆ ಹೋಗುವಾಗ, ಯಾವುದಾದರೊಂದು ವಿಷಯವನ್ನು ಮಂಡಿಸುವಾಗ, ಮದುವೆ ಮುಂತಾದ ಸಮಾರಂಭಗಳಲ್ಲಿ ಭಾಗವಹಿಸುವಾಗ ಅಥವಾ ಸ್ನೇಹಿತರೊಂದಿಗೆ ಹೊರಗೆ ಊಟಕ್ಕೆ ಹೋಗುವಾಗ ತೀವ್ರವಾದ ಆತಂಕಕ್ಕೆ ಒಳಗಾಗಬಹುದು.

Q

ಸಾಮಾಜಿಕ ಆತಂಕದ ಲಕ್ಷಣಗಳೇನು?

A

ಸ್ಯಾಡ್‌ ಸಮಸ್ಯೆಯಿಂದ ಬಳಲುವ ಜನರು ದೈಹಿಕ ಮತ್ತು ಮಾನಸಿಕ ಗುಣಲಕ್ಷಣಗಳನ್ನು ಒಟ್ಟಾಗಿ ಪ್ರಕಟಿಸುತ್ತಾರೆ. ಅಂತಹವರಲ್ಲಿ, ಮಾತನಾಡಲು ಯತ್ನಸಿದಾಗ ನಡುಕ, ಬೆವರುವುದು, ವಾಕರಿಕೆ, ಉಗ್ಗು ಅಥವಾ ತಡಬಡಾಯಿಸುವಿಕೆ ಮೊದಲಾದ ದೈಹಿಕ ಲಕ್ಷಣಗಳು ಕಾಣಿಸುತ್ತವೆ. ಸುತ್ತಲಿರುವ ಜನ ತಮ್ಮನ್ನೇ ಹೆಚ್ಚು ಗಮನಿಸುತ್ತಿದ್ದಾರೆಂದು ಭಾವಿಸುವದರಿಂದ ಒಂದುರೀತಿಯ ಅವಮಾನ ಮತ್ತು ಕಸಿವಿಸಿಗೆ ಒಳಗಾಗುವ ಇಂತಹ ವ್ಯಕ್ತಿಗಳು ತೋರುವ ಈ ರೀತಿಯ ಲಕ್ಷಣಗಳು ಆತನನ್ನು ಅಗತ್ಯಕ್ಕಿಂತ ಹೆಚ್ಚು ಜಾಗರೂಕವಾಗಿರುವಂತೆ ಮಾಡುತ್ತದೆ. ಪರಿಣಾಮವಾಗಿ ಅವರ ವರ್ತನೆಯಲ್ಲಿ ಈ ಕೆಳಗಿನ ಬದಲಾವಣೆಗಳು ಕಂಡುಬರಬಹುದು:

  • ಅವರು ಇಂತಹ ಪರಿಸ್ಥಿತಿಗಳಲ್ಲಿ ತಾವು ಮಾತನಾಡಬೇಕಾಗಿ ಬರುವ ಸಂದರ್ಭವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

  • ವೃತ್ತಿಪರ ಮತ್ತು ವೈಯಕ್ತಿಕ ಸಂಬಂಧಗಳನ್ನು ಕಡಿದುಕೊಳ್ಳಬಹುದು

  • ಸಾಮಾಜಿಕ ಸಂದರ್ಭಗಳಲ್ಲಿ ಮಾತನಾಡುವಾಗ ಸಾಮಾನ್ಯವಾಗಿ ದೃಷ್ಟಿ ಸಂಪರ್ಕವನ್ನು ತಪ್ಪಿಸಿತ್ತಾರೆ.

ಈ ಲಕ್ಷಣಗಳು ವ್ಯಕ್ತಿಯನ್ನು ಬಹುವಾಗಿ ಯಾತನೆಗೆ ಒಳಪಡಿಸಬಹುದು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಪರದಾಡುವಂತೆ ಮಾಡಬಹುದು. ನಿಮ್ಮ ಪರಿಚಯದ ಯಾರಲ್ಲಾದರೂ ಈ ಲಕ್ಷಣಗಳು ಕಂಡುಬಂದರೆ, ಮನೋವೈದ್ಯರನ್ನು ಭೇಟಿಮಾಡುವಂತೆ ಅವರಿಗೆ ತಿಳಿಹೇಳಲು ಪ್ರಯತ್ನಿಸಿ.

Q

ಸಾಮಾಜಿಕ ಆತಂಕಕ್ಕೆ ಕಾರಣಗಳೇನು?

A

ಸಾಮಾಜಿಕ ಆತಂಕಕ್ಕೆ ಕಾರಣವಾಗುವ ಕೆಲವು ಅಂಶಗಳೆಂದರೆ:

  • ಕೌಟುಂಬಿಕ ಇತಿಹಾಸ: ಕುಟುಂಬಸ್ಥರಲ್ಲಿ ಆತಂಕದ ಸಮಸ್ಯೆಗಳಿದ್ದರೆ ಇದು ಇತರ ಸದಸ್ಯರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಆದರೂ, ಇದು ಕೇವಲ ಆನುವಂಶೀಯವೋ ಅಥವಾ ಬಾಲ್ಯದಲ್ಲಿ ಕಲಿತ ವರ್ತನೆಯೋ ಎಂಬ ಕುರಿತು ಸ್ಪಷ್ಟತೆಯಿಲ್ಲ

  • ಹಿಂದಿನ ಅನುಭವಗಳು: ಚಿಕ್ಕವರಿರುವಾಗ ಶಾಲೆಯಲ್ಲಿ ಅವಮಾನಿತರಾದದ್ದು ಅಥವಾ ಮುಂದೆ ಕೆಲವು ಬಾರಿ ಆದ ಅವಮಾನಗಳು ಕೂಡ ಆತಂಕ ಸಮಸ್ಯೆಯನ್ನು ಉಂಟುಮಾಡಬಹುದು.

  • ಬಾಲ್ಯದ ಲಕ್ಷಣಗಳು: ಬಾಲ್ಯದಲ್ಲಿ ಹೆಚ್ಚು ನಾಚಿಕೆ ಸ್ವಭಾವ ಹೊಂದಿರುವ ಅಥವಾ ಪಾಲಕರಿಗೆ ಹೆಚ್ಚಾಗಿ ಅಂಟಿಕೊಂಡಿರುವ ಮಗು ಯೌವ್ವನಕ್ಕೆ ಬಂದಾಗ ಈ ಸ್ಥಿತಿ ಎದುರಾಗಬಹುದು.

Q

ಸಾಮಾಜಿಕ ಆತಂಕ ಸಮಸ್ಯೆಗೆ ಚಿಕಿತ್ಸೆ

A

ಸಾಮಾಜಿಕ ಆತಂಕ ಸಮಸ್ಯೆಯಾದರೂ ಇದನ್ನು ಗುಣಪಡಿಸಬಹುದಾಗಿದೆ. ಆತಂಕದಿಂದ ಚೇತರಿಸಿಕೊಂಡ ಮೇಲೆ  ಹಲವರು ಸಮಾಜದಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಸಾಮಾಜಿಕ ಸಂವಹನದ ಕೌಶಲ್ಯಗಳನ್ನು ಕಲಿತುಕೊಂಡಿದ್ದಾರೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ) ಅತ್ಯಂತ ಪರಿಣಾಮಕಾರಿ ಚಿಕಿತ್ಸೆಎಂದು ಸಾಬೀತಾಗಿದೆ. ಉಪಶಮನದ ಅವಧಿಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆದರೆ ಈ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಮುಖ್ಯ.

Q

ಸಾಮಾಜಿಕ ಆತಂಕ ಸಮಸ್ಯೆಯಿಂದ ಬಳಲುತ್ತಿರುವವರ ಆರೈಕೆ

A

ನಿಮಗೆ ಗೊತ್ತಿರುವವರಲ್ಲಿ ಮೇಲೆ ಹೇಳಿದ ಯಾವುದೇ ಲಕ್ಷಣಗಳನ್ನು ಗಮನಿಸಿದರೆ ನೀವು ಅವರೊಂದಿಗೆ  ಸಮಸ್ಯೆ  ಕುರಿತು ಮಾತನಾಡಿ ಮತ್ತು ವೃತ್ತಿಪರರ ಸಹಾಯ ಪಡೆಯಲು ಸೂಚಿಸಿ. ವೈದ್ಯರನ್ನು ಭೇಟಿಯಾಗುವಾಗ ನೀವು ಅವರೊಂದಿಗೆ ಹೋಗಿ.  ಸಮಸ್ಯೆ ಕುರಿತು ತಿಳಿದುಕೊಂಡರೆ ಸಮಸ್ಯೆ ಇರುವ ವ್ಯಕ್ತಿಗೆ ಸಹಾಯ ಮಾಡಬಹುದು. ತಾಳ್ಮೆಯಿಂದ ಅವರಿಗೆ ಬೆಂಬಲ ನೀಡಿ  ಚಿಕಿತ್ಸೆ ಮುಂದುವರಿಸಲು ಪ್ರೋತ್ಸಾಹಿಸಿ.

 

Q

ನಿಮ್ಮ ಬಗ್ಗೆ ಕಾಳಜಿವಹಿಸಿ

A

ಸಾಮಾಜಿಕ ಆತಂಕದ ಸಮಸ್ಯೆಯಿದ್ದರೆ ಆದಷ್ಟು ಬೇಗ ವೃತ್ತಿಪರರ ಸಹಾಯ ಪಡೆಯಿರಿ. ಈ ಕುರಿತು ನಿಮ್ಮ  ಆಪ್ತ ಸ್ನೇಹಿತರು ಅಥವಾ ಕುಟುಂಬದವರಿಗೆ  ನಿಮ್ಮ ಸಮಸ್ಯೆ ಬಗ್ಗೆ ತಿಳಿಸಿ ಮತ್ತು ಅವರನ್ನು ಕರೆದುಕೊಂಡು ಮಾನಸಿಕ ತಜ್ಞರ ಬಳಿ ಹೋಗಿ.

  • ಸಾಕಷ್ಟು ನಿದ್ದೆ, ವ್ಯಾಯಾಮ ಮಾಡಿ ಆರೋಗ್ಯಯುತ ಜೀವನಶೈಲಿಯನ್ನು ರೂಢಿಸಿಕೊಳ್ಳಿ.
  • ನಿಮ್ಮಂತಹುದೇ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಸಂಪರ್ಕ ಹೊಂದಲು ಸಪೋರ್ಟ್ ಗ್ರುಪ್ ಸೇರಿಕೊಳ್ಳಿ. ಇದು ನಿಮ್ಮನ್ನು ಸಮಸ್ಯೆಯಿಂದ ಬೇಗ ಹೊರಬರಲು ಸಹಾಯಮಾಡುತ್ತದೆ.
  • ನೀವಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯದ ಚಿಕಿತ್ಸೆ ಪಡೆಯಬೇಕಾಗಬಹುದು. ಭರವಸೆ ಕಳೆದುಕೊಳ್ಳದೇ ಚಿಕಿತ್ಸೆ ಮುಂದುವರೆಸಿ.
 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org