ಸ್ಪೀಚ್ ಡಿಸಾರ್ಡರ್

Q

ಸ್ಪೀಚ್ ಡಿಸಾರ್ಡರ್ (ವಾಕ್‌ದೋಷ) ಎಂದರೇನು?

A

ಮಾತಿನ ಕಲಿಕೆ ಶಿಶುವಾಗಿದ್ದಾಗಲೇ ಆರಂಭವಾಗುತ್ತದೆ. ಮಕ್ಕಳು ತಮ್ಮ ಸಹಜವಾದ ಬೆಳವಣಿಗೆಯ ಹಂತಗಳಲ್ಲೇ ಮಾತು ಮತ್ತು ಭಾಷಾ ಕೌಶಲ್ಯಗಳನ್ನು ಕಲಿಯಲು ಆರಂಭಿಸುತ್ತಾರೆ. ಆದರೆ ಕೆಲವು ಮಕ್ಕಳಿಗೆ ಮಾತಿನ ಕಲಿಕೆಯಲ್ಲಿ ತೊಂದರೆಗಳು ಎದುರಾಗುತ್ತವೆ.

ಮಕ್ಕಳು ಭಾಷೆ ಕಲಿಯುವ ಸಾಮರ್ಥ್ಯ ಹಾಗೂ ಸ್ಪಷ್ಟವಾಗಿ ಮಾತನಾಡುವ ಕೌಶಲ್ಯವನ್ನು ಹೊಂದಿದ್ದರೂ ಸಹ  ಕೆಲವೊಮ್ಮೆ ಮಾತು ಕಲಿಯುವ ಹಂತದಲ್ಲಿ ಪರಸ್ಪರ ಸಂಭಾಷಣೆಗೆ ತೀರಾ ಅಗತ್ಯವಾಗಿರುವ ಪದ ಜೋಡಣೆ, ಧ್ವನಿಯ ಉಚ್ಚಾರಣೆ, ಸ್ಪಷ್ಟತೆ ಮತ್ತು ಆಯಾ ಮಾತಿನ ಪದಗಳನ್ನು ರೂಪಿಸುವಲ್ಲಿ ಏನಾದರೂ ಸಮಸ್ಯೆಗಳನ್ನು ಎದುರಿಸಬಹುದು. ಇಂತಹ ತೊಂದರೆಯನ್ನು ಸ್ಪೀಚ್ ಡಿಸಾರ್ಡರ್ (ವಾಕ್‌ದೋಷ) ಎಂದು ಪರಿಗಣಿಸಲಾಗುತ್ತದೆ. 

ಸೂಚನೆ: ಸ್ಪೀಚ್ ಡಿಸಾರ್ಡರ್ ಭಾಷಾ ಕಲಿಕೆಯ ಸಮಸ್ಯೆಗಿಂತ ಭಿನ್ನವಾದದ್ದು. ಸ್ಪೀಚ್ ಡಿಸಾರ್ಡರ್ ಇದ್ದರೆ ಮಕ್ಕಳು ಪದಗಳ ಧ್ವನಿಯನ್ನು ಉಚ್ಚರಿಸಲು ಕಷ್ಟಪಡುತ್ತಾರೆ. ಆದರೆ ಭಾಷಾ ಕಲಿಕೆಯ ಸಮಸ್ಯೆಯಲ್ಲಿ ಮಕ್ಕಳು ನಿರ್ದಿಷ್ಟ ಭಾಷೆಗಳ ಮೂಲಕ ಇತರರೊಂದಿಗೆ ಸ್ಪಷ್ಟವಾಗಿ ಮಾತನಾಡಲು ಕಷ್ಟಪಡುತ್ತಾರೆ (ಎಕ್ಸ್ಪ್ರೆಸ್ಸಿವ್ ಲ್ಯಾಂಗ್ವೇಜ್ ಡಿಸಾರ್ಡರ್ - expressive language disorder)  ಅಥವಾ ಇತರರು ಮಾತನಾಡುವಾಗ ಅವುಗಳ ಅರ್ಥ ತಿಳಿಯದೆ ಪರದಾಡುತ್ತಾರೆ (ರಿಸೆಪ್ಟಿವ್ ಲ್ಯಾಂಗ್ವೇಜ್ ಡಿಸಾರ್ಡರ್ - receptive language disorder).

Q

ಸ್ಪೀಚ್ ಡಿಸಾರ್ಡರ್ ವಿಧಗಳು

A

ಅಪ್ರಾಕ್ಸಿಯ (Apraxia): ಈ ವಿಧದ ಸ್ಪೀಚ್ ಡಿಸಾರ್ಡರ್ನಲ್ಲಿ ಧ್ವನಿ ಹೊರಡಿಸುವಾಗ ನಾಲಿಗೆ, ತುಟಿಗಳು ಮತ್ತು ದವಡೆಗಳು ಸ್ವಯಂಚಾಲಿತವಾಗಿ ಹೊರಳುವುದಿಲ್ಲ. ಈ ಸ್ಥಿತಿಯಲ್ಲಿ ಮಕ್ಕಳಿಗೆ ತಾವೇನು ಹೇಳಬೇಕಾಗಿದೆ ಎಂದು ಗೊತ್ತಿರುತ್ತದೆ. ಆದರೆ ಶಬ್ದಗಳು ರೂಪುಗೊಳ್ಳಲು ಸ್ನಾಯುಗಳ ಚಲನೆಗೆ ಮೆದುಳು ಸಹಕಾರ ನೀಡದ ಕಾರಣ ಹೇಳಬೇಕಾದ ಮಾತು ಹೊರಡುವುದಿಲ್ಲ.

ಡಿಸಾರ್ಥ್ರಿಯ (Dysarthria): ಪಾರ್ಶ್ವವಾಯು, ನರದೌರ್ಬಲ್ಯ ಅಥವಾ ಬಾಯಿಯ ಸ್ನಾಯುಗಳಲ್ಲಿ ಸಮರ್ಪಕವಾಗಿ ಸಮನ್ವಯತೆ ಇಲ್ಲದಿರುವ ಸ್ಥಿತಿಯನ್ನು ಡಿಸಾರ್ಥ್ರಿಯ ಎಂದು ಕರೆಯಲಾಗುತ್ತದೆ. ಈ ವಿಧದ ಸ್ಪೀಚ್ ಡಿಸಾರ್ಡರ್ನಲ್ಲಿ ನಿಧಾನ ಮಾತು, ಅಸ್ಪಷ್ಟ ಮಾತು, ತಪ್ಪು ಪದ ಪ್ರಯೋಗ ಅಥವಾ ಮಾತನಾಡುವಾಗ ಮೂಗಿನಲ್ಲಿ ಧ್ವನಿ ಬರುವುದು ಮುಂತಾದ ಸಮಸ್ಯೆಗಳಿರುತ್ತವೆ.

 

Q

ಯಾವುದು ಸ್ಪೀಚ್ ಡಿಸಾರ್ಡರ್ ಅಲ್ಲ?

A

ಮಕ್ಕಳು ಮಾತು ಕಲಿಯಲು ಆರಂಭಿಸಿದಾಗ ಹೊಸ ಹೊಸ ಶಬ್ದಗಳನ್ನು ಕಲಿಯಲು ಮತ್ತು ಅವುಗಳನ್ನು ಅಭಿವ್ಯಕ್ತಿಗೊಳಿಸಲು ಸಮಯ ತೆಗೆದುಕೊಳ್ಳುತ್ತಾರೆ. ಈ ಹಂತದಲ್ಲಿ ಅವರು ತಡೆದು ತಡೆದು ಮಾತನಾಡುವ ಸಾಧ್ಯತೆ ಇರುತ್ತದೆ. ಇದೊಂದು ಸಹಜ ಪ್ರಕ್ರಿಯೆಯಾಗಿದ್ದು, ಇದನ್ನು ಸ್ಪೀಚ್ ಡಿಸಾರ್ಡರ್ ಎಂದು ಹೇಳಲಾಗುವುದಿಲ್ಲ.

ಗಮನಿಸಿ: ಮಕ್ಕಳು ತಡವರಿಸಿ ಮಾತನಾಡುವ ಹಂತದಲ್ಲಿ ಅತಿಯಾದ ಕಾಳಜಿವಹಿಸುವುದು ಮುಂದೆ ಉಗ್ಗುಮಾತಿಗೆ ಕಾರಣವಾಗಬಹುದು.

Q

ಸ್ಪೀಚ್ ಡಿಸಾರ್ಡರ್ ಲಕ್ಷಣಗಳು

A

ಈ ಸಮಸ್ಯೆ ಇದೆ ಎಂಬುದನ್ನು ತೋರಿಸುವ ಹಲವಾರು ಲಕ್ಷಣಗಳು ಮತ್ತು ಅವುಗಳ ತೀವ್ರತೆ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಭಿನ್ನವಾಗಿರುತ್ತದೆ. ಕೆಲವೊಮ್ಮೆ ಈ ಸಮಸ್ಯೆಯ ಲಕ್ಷಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಸಮಸ್ಯೆಯನ್ನು ಗುರುತಿಸುವುದಕ್ಕೇ ಆಗುವುದಿಲ್ಲ. ಈ ರೀತಿಯ ಮಿತವಾದ ಸಮಸ್ಯೆ ಕೆಲವೊಮ್ಮೆ ತಾನೇ ಮರೆಯಾಗಿ ಬಿಡುತ್ತದೆ. 

ಕೆಲವು ಮಕ್ಕಳಲ್ಲಿ ಸ್ಪೀಚ್ ಡಿಸಾರ್ಡರ್ ಜೊತೆಗೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಡಿಮೆ ಶಬ್ದಬಂಢಾರ, ಓದುವ ಮತ್ತು ಬರೆಯುವ ಸಮಸ್ಯೆ, ಕಾಗುಣಿತ ಅಥವಾ ಗಣಿತದಲ್ಲಾಗುವ ತಪ್ಪುಗಳು, ಸಮನ್ವಯತೆ ಇಲ್ಲದಿರುವುದು ಅಥವಾ ಬಾಯಿಯ ಸ್ನಾಯುಗಳಲ್ಲಿ ದೌರ್ಬಲ್ಯ, ಬಾಯಿಯಲ್ಲಿ ಜಗಿಯುವಾಗ ಅಥವಾ ನುಂಗುವಾಗ ಸಮಸ್ಯೆ ಕಾಣಿಸಿಕೊಳ್ಳುವುದು ಇತ್ಯಾದಿ.

ತೀರಾ ಚಿಕ್ಕ (0-5 ವರ್ಷ ವಯಸ್ಸಿನ) ಮಗುವಿನಲ್ಲಿ ಸಮಸ್ಯೆಯ ಲಕ್ಷಣ:

  • ಶಿಶುವಾಗಿದ್ದಾಗ ಸಶಬ್ದವಾಗಿ ಅಳುವುದು ಅಥವಾ ತೊದಲ್ನುಡಿಯಾಡದೇ ಇರುವುದು

  • ಧ್ವನಿಗಳನ್ನು ಮತ್ತು ಪದಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಲು ಕಷ್ಟಪಡುವುದು.

  • ಶಬ್ದವೊಂದನ್ನು ಉಚ್ಚರಿಸುವಾಗ ಧ್ವನಿಗಳನ್ನು ಅಥವಾ ಪದಗಳನ್ನು ಬಿಟ್ಟುಬಿಡುವುದು

  • ಧ್ವನಿಗಳನ್ನು ಸಂಯೋಜಿಸುವಲ್ಲಿ ಕಷ್ಟಪಡುವುದು. ಧ್ವನಿಗಳ ನಡುವೆ ದೀರ್ಘ ವಿರಾಮ ತೆಗೆದುಕೊಳ್ಳಬಹುದು.

  • ಕಠಿಣವೆನಿಸುವ ಧ್ವನಿಗಳನ್ನು ಸುಲಭವಾದವುಗಳಿಂದ ಬದಲಾಯಿಸಿ ಪದಗಳನ್ನು ಸರಳಗೊಳಿಸುವುದು ಅಥವಾ ಕಠಿಣವೆನಿಸುವ ಧ್ವನಿಗಳನ್ನು ಬಿಟ್ಟುಬಿಡುವುದು

  • ಆಹಾರ ಸೇವನೆಯಲ್ಲಿ ಸಮಸ್ಯೆ ತೋರಬಹುದು

5-10 ವರ್ಷದೊಳಗಿನ ಮಗುವಿನಲ್ಲಿ ಸಮಸ್ಯೆಯ ಲಕ್ಷಣ:

  • ಅಸಮರ್ಪಕ ಪದ ಪ್ರಯೋಗಗಳು. ಇದು ಅಪಕ್ವತೆಯ ಪರಿಣಾಮವಲ್ಲ.

  • ತಾವು ಮಾತನಾಡುವುದಕ್ಕಿಂತ ಬೇರೆಯವರು ಹೇಳುವುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.

  • ಚಿಕ್ಕ ಪದಗಳನ್ನು ಅಥವಾ ವಾಕ್ಯಗಳನ್ನು ಹೇಳುವದಕ್ಕಿಂತಲೂ ದೀರ್ಘ ಶಬ್ದಗಳು ಮತ್ತು ಪದಗುಚ್ಛಗಳನ್ನು ಹೇಳಲು ಕಷ್ಟಪಡುವುದು.

  • ಶಬ್ದವೊಂದನ್ನು ಸರಿಯಾಗಿ ಉಚ್ಚರಿಸಲು ಕಷ್ಟಪಡುವುದು ಮತ್ತು ಅದನ್ನು ಪುನರುಚ್ಚರಿಸುವಾಗ ತಪ್ಪುಮಾಡುವುದು.

  • ಮಾತನಾಡುವಾಗ ಧ್ವನಿ ತುಂಡರಿಸುವುದು, ಏಕತಾನತೆ ಅಥವಾ ತಪ್ಪು ಅಕ್ಷರಗಳ ಮೇಲೆ ಒತ್ತಡ ಹಾಕಿ ಮಾತನಾಡುವ ಸಮಸ್ಯೆಗಳು.

  • ಮಾತನಾಡುವಾಗ ತುಂಬಾ ತಪ್ಪುಗಳನ್ನು ಮಾಡುವುದು.

Q

ಸ್ಪೀಚ್ ಡಿಸಾರ್ಡರ್ ಸಮಸ್ಯೆಗೆ ಕಾರಣಗಳೇನು?

A

ಬಹಳಷ್ಟು ಮಕ್ಕಳಲ್ಲಿ ಕಂಡು ಬರುವ ಸ್ಪೀಚ್ ಡಿಸಾರ್ಡರ್ ಸಮಸ್ಯೆಗೆ  ಕಾರಣವೇ ಪತ್ತೆಯಾಗಿಲ್ಲ. ಸಂಶೋಧನೆಗಳು ಹೇಳುವ ಪ್ರಕಾರ, ಮಾತಿಗೆ ಅಗತ್ಯವಿರುವ ಸ್ನಾಯುಗಳ ಚಲನೆಗೆ ಮೆದುಳು ಸೂಕ್ತವಾಗಿ ಸ್ಪಂದಿಸದ ಕಾರಣ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಬಾಯಿಯ ಅಂಗುಳು ಸೀಳಿದ್ದರೆ, ಕಿವುಡುತವಿದ್ದರೆ ಅಥವಾ ಸಿರೆಬ್ರಲ್ ಪಾಲ್ಸಿ ಸಮಸ್ಯೆಗಳಿದ್ದರೆ ಸ್ಪೀಚ್ ಡಿಸಾರ್ಡರ್ ಸಮಸ್ಯೆ ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Q

ಸ್ಪೀಚ್ ಡಿಸಾರ್ಡರ್ ಗುರುತಿಸುವುದು ಹೇಗೆ?

A

ಮಕ್ಕಳಲ್ಲಿ ಸ್ಪೀಚ್ ಡಿಸಾರ್ಡರ್ ಸಮಸ್ಯೆಯನ್ನು ಪತ್ತೆಮಾಡಲು ಯಾವುದೇ ನಿರ್ದಿಷ್ಟ ವಯೋಮಿತಿಯಿಲ್ಲ. ಆದರೆ 3 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಈ ಸಮಸ್ಯೆಯ ನಿರ್ಣಯ ಮಾಡಲು ತಜ್ಞರಿಗೆ ಕಷ್ಟವಾಗುತ್ತದೆ. ಯಾಕೆಂದರೆ ಈ ವಯಸ್ಸಿನ ಮಕ್ಕಳು ಪರೀಕ್ಷೆಯ ಸೂಚನೆಗಳನ್ನು ಪಾಲಿಸುವುದಿಲ್ಲ ಮತ್ತು ಮೌಲ್ಯಮಾಪನ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ನೀಡದೇ ಇರಬಹುದು. ಮಕ್ಕಳು ಈ ಪರೀಕ್ಷೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಮತ್ತು ಎಷ್ಟರಮಟ್ಟಿಗೆ ಸಂಪೂರ್ಣವಾಗಿ ಪಾಲ್ಗೊಳ್ಳುತ್ತಾರೆ ಎಂಬುದರ ಮೇಲೆ ಈ ಪರೀಕ್ಷೆಯ ಫಲಿತಾಂಶವು ಆಧರಿಸಿರುತ್ತದೆ.

ಆರಂಭದಲ್ಲಿಯೇ ಸಮಸ್ಯೆಯನ್ನು ಪತ್ತೆ ಹಚ್ಚಿದರೆ ಮುಂದಕ್ಕೆ ಮಕ್ಕಳ ಮಾತು ಸಾಕಷ್ಟು ಸುಧಾರಣೆಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸ್ಪೀಚ್ ಡಿಸಾರ್ಡರ್  ಸಮಸ್ಯೆಯನ್ನು ಸೂಕ್ತ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಪರೀಕ್ಷೆ ಮಾಡಿ ಅದಕ್ಕೆ ಚಿಕಿತ್ಸೆ ನೀಡುವುದು ಅತಿ ಮುಖ್ಯವಾಗಿದೆ.

Q

ಸ್ಪೀಚ್ ಡಿಸಾರ್ಡರ್ ಚಿಕಿತ್ಸೆ

A

ಈ ಸಮಸ್ಯೆಗೆ ಒಂದೇ ವಿಧಾನದ ಚಿಕಿತ್ಸೆಯಿಲ್ಲ. ತಜ್ಞರು ಮಕ್ಕಳ ಸಮಸ್ಯೆಯನ್ನು ಸುಧಾರಿಸಲು ನೆರವಾಗುವ ವಿವಿಧ ಚಿಕಿತ್ಸಾ ವಿಧಾನಗಳನ್ನು ಮತ್ತು ಥೆರಪಿಗಳನ್ನು ಕೈಗೊಳ್ಳುತ್ತಾರೆ. ಈ ಚಿಕಿತ್ಸೆಗಳಿಗೆ ಪ್ರತಿ ಮಗುವು ಸ್ಪಂದಿಸುವ ರೀತಿಯು ಬೇರೆ ಬೇರೆಯಾಗಿರುತ್ತದೆ. ಕೆಲವು ಮಕ್ಕಳು ಚಿಕಿತ್ಸೆಗೆ ಇತರ ಮಕ್ಕಳಿಗಿಂತ ಬಲು ಬೇಗ ಸ್ಪಂದಿಸುತ್ತಾರೆ. ಈ ಚಿಕಿತ್ಸಾ ವಿಧಾನಗಳಲ್ಲಿ ಪೋಷಕರ ಪಾತ್ರವೂ ಪ್ರಮುಖವಾಗಿದೆ.

ಪೋಷಕರು ಆದಷ್ಟು ತಾಳ್ಮೆಯಿಂದ ಇದ್ದು, ತಮ್ಮ ಮಕ್ಕಳು ಮನೆಯಲ್ಲಿಯೇ ಮಾತುಗಳನ್ನು ಕಲಿಯಲು ಸಹಾಯ ಮಾಡಬೇಕು ಹಾಗೂ ಅವರಲ್ಲಿ ಮಾತು ಕಲಿಯಲು ಉತ್ತೇಜನ ತುಂಬಬೇಕು. ಮನೆಯಲ್ಲಿ ಸಹಕಾರ ಮತ್ತು ಪ್ರೀತಿಯ ವಾತಾವರಣವಿದ್ದರೆ ಮಕ್ಕಳು ಈ ಸಮಸ್ಯೆಯಿಂದ ಬಹು ಬೇಗನೆ ಹೊರಬರುತ್ತಾರೆ.

ವಿವಿಧ ಪರೀಕ್ಷೆಗಳು:

ಸ್ಪೀಚ್ ಡಿಸಾರ್ಡರ್ ಪತ್ತೆ ಹಚ್ಚಲು ಈ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುತ್ತವೆ:

  • ಡೆನ್ವರ್ ಅಳವಡಿಕೆ ತಪಾಸಣೆ ಪರೀಕ್ಷೆ (Denver Articulation Screening Examination-DASE) 

  • ಆರಂಭಿಕ ಭಾಷಾ ಬೆಳವಣಿಗೆ ಮಾಪನ (Early Language Milestone Scale-ELMS)
  • ಡೆನ್ವರ್ 2 (Denver II)

  • ಪಿಬಾಡಿ ಪಿಕ್ಚರ್ ಟೆಸ್ಟ್ –ರಿವೈಸ್ಡ್ (Peabody Picture Test Revised)

  • ಶ್ರವಣ ಪರೀಕ್ಷೆ (Hearing test)

ಸ್ಪೀಚ್ ಥೆರಪಿ: ಈ ಚಿಕಿತ್ಸಾ ವಿಧಾನದಲ್ಲಿ  ತಜ್ಞರು ಮಗುವಿನ ವೈದ್ಯಕೀಯ ಇತಿಹಾಸವನ್ನು ಮತ್ತು ಇತರ ವೈದ್ಯಕೀಯ ಸಮಸ್ಯೆಗಳನ್ನು ಪರಿಶೀಲಿಸುತ್ತಾರೆ. ಮಕ್ಕಳ ಮಾತಿನ ಬೆಳವಣಿಗೆಯು ಸಾಮಾನ್ಯ ವಿನ್ಯಾಸದಲ್ಲಿದೆಯೇ ಅಥವಾ ಇತರ ಮಕ್ಕಳಿಗೆ ಹೋಲಿಸಿದರೆ ನಿಧಾನಗತಿಯಲ್ಲಿದೆಯೇ ಎಂಬುದನ್ನು ಕೂಡ  ತಜ್ಞರು ಪರೀಕ್ಷಿಸುತ್ತಾರೆ.

ಲಕ್ಷಣಗಳು ಸಾಮಾನ್ಯ ರೀತಿಯ ಮಾತಿನ ಅಥವಾ ಭಾಷಾ ಕಲಿಕಾ ಸಮಸ್ಯೆಗೆ ಹೊಂದುತ್ತಿಲ್ಲ ಎಂದು ತಜ್ಞರಿಗೆ ಅನಿಸಿದರೆ, ಮಗುವಿಗೆ ಸ್ಪೀಚ್ ಡಿಸಾರ್ಡರ್ ಇರುವುದನ್ನು ದೃಢಪಡಿಸಲು ಬೇರೆ ವಿಧಾನದ ಪರೀಕ್ಷೆಗಳು ಮತ್ತು ಮೌಲ್ಯಮಾಪನವನ್ನು ನಡೆಸುತ್ತಾರೆ.

ಆಗ್ಮೆಂಟೆಟಿವ್ ಅಂಡ್ ಆಲ್ಟರ್‌ನೆಟಿವ್ ಕಮ್ಯುನಿಕೇಶನ್ (Augmentative and Alternative Communication): ಈ ಚಿಕಿತ್ಸಾ ವಿಧಾನದಲ್ಲಿ ಮಾತಿನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯಕ ತಂತ್ರಜ್ಞಾನವನ್ನು ಅಂದರೆ ಕಂಪ್ಯೂಟರ್, ಐಪಾಡ್, ಧ್ವನಿ ಮತ್ತು ದೃಶ್ಯ ಆಧರಿತ ಉಪಕರಣಗಳನ್ನು ಬಳಸಲಾಗುತ್ತದೆ.

ಆಡಿಯೋಮೆಟ್ರಿ ಪರೀಕ್ಷೆ (Audiometry Test): ಬೌದ್ಧಿಕ ಅಸಾಮರ್ಥ್ಯ ಮತ್ತು ಕಿವುಡುತನದಿಂದಲೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಅಪಾಯದಲ್ಲಿರುವ ಮಗುವನ್ನು ಧ್ವನಿ ಶಾಸ್ತ್ರಜ್ಞರ ಬಳಿಗೆ ಕಳುಹಿಸಿ ಸಂಪೂರ್ಣ ಧ್ವನಿ ಪರೀಕ್ಷೆ ಮತ್ತು ಶ್ರವಣ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅಗತ್ಯವಿದ್ದರೆ ಶ್ರವಣ ಮತ್ತು ಸ್ಪೀಚ್ ಥೆರಪಿಯನ್ನು ಆರಂಭಿಸಲು ಸೂಚಿಸಲಾಗುತ್ತದೆ.

ಚಿಕಿತ್ಸೆಯನ್ನು ಪಡೆಯುವ ಬಗೆ:

ಸ್ಪೀಚ್ ಡಿಸಾರ್ಡರ್ಗೆ ಯಾವುದೇ ಒಂದು ರೀತಿಯ ಚಿಕಿತ್ಸೆ ಇಲ್ಲ. ಮಗುವಿನ ಸಮಸ್ಯೆಯನ್ನು ಬಗೆಹರಿಸಲು ತಜ್ಞರು ಸಮ್ಮಿಶ್ರ ಚಿಕಿತ್ಸಾ ಮತ್ತು ಥೆರಪಿ ವಿಧಾನಗಳನ್ನು ಬಳಸುತ್ತಾರೆ. ಇತರರಿಗೆ ಹೋಲಿಸಿದಲ್ಲಿ ಕೆಲವು ಮಕ್ಕಳು ಶೀಘ್ರವಾಗಿ ಸುಧಾರಣೆ ಕಾಣುತ್ತಾರೆ. ಆದ್ದರಿಂದ ಚಿಕಿತ್ಸೆಗೆ ಪ್ರತಿಯೊಂದೂ ಮಗುವೂ ಭಿನ್ನವಾಗಿಯೇ ಸ್ಪಂದಿಸುತ್ತದೆ.

ಮಕ್ಕಳಿಗೆ ಅಗತ್ಯವಿರುವ ಸೂಕ್ತ ನೆರವು ನೀಡುವಂತೆ ಮತ್ತು ಕಾಳಜಿಯನ್ನು ವಹಿಸುವಂತೆ ತಜ್ಞರು ಪೋಷಕರಿಗೆ ಶಿಫಾರಸು ಮಾಡಬಹುದು. ಈ ಥೆರಪಿ ಪ್ರಕ್ರಿಯೆಯಲ್ಲಿ ಪೋಷಕರೂ ಪಾಲ್ಗೊಳ್ಳಬಹುದು. ಇದರಿಂದ ಅವರು ಮನೆಯಲ್ಲೂ ಈ ಥೆರಪಿಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿಯೂ ಎಡೆಬಿಡದೆ ಈ ಥೆರಪಿಗಳನ್ನು ಮಾಡಿದರೆ ಮಕ್ಕಳ ಬೇಗನೆ ಸುಧಾರಿಸಬಹುದು. ಕುಟುಂಬದವರ ಪ್ರೀತಿ ಹಾಗೂ ಬೆಂಬಲದಿಂದ ಕೂಡಿದ ವಾತಾವರಣವಿದ್ದಲ್ಲಿ ಶೀಘ್ರ ಉಪಶಮನಕ್ಕೆ ಸಹಾಯಮಾಡುತ್ತದೆ.

ಚಿಕಿತ್ಸೆ ಹಾಗೂ ಥೆರಪಿಗಳಿಗೆ ಆರೋಗ್ಯವಂತ ಮಗು ಬಲು ಬೇಗನೆ ಸ್ಪಂದಿಸುತ್ತದೆ. ಆದರೆ ಯಾವುದಾದರೂ ದೈಹಿಕ ಅನಾರೋಗ್ಯ ಸಮಸ್ಯೆಯಿದ್ದರೆ (ಕಿವಿಯ ಸೋಂಕು, ಸೈನಸ್, ಟಾನ್ಸಿಲ್, ಅಲರ್ಜಿ ಅಥವಾ ಅಸ್ತಮಾ) ಈ ಚಿಕಿತ್ಸೆಗಳಿಗೆ ಸ್ಪಂದಿಸದೇ ಇರಬಹುದು. ಯಾಕೆಂದರೆ ದೈಹಿಕ ಸಮಸ್ಯೆಗಳಿಗೆ ನೀಡುವ ಚಿಕಿತ್ಸೆ ಅಥವಾ ಔಷಧಿಗಳಿಗೂ ಸ್ಪೀಚ್ ಡಿಸಾರ್ಡರ್ ಸಮಸ್ಯೆಗಳಿಗೆ ನೀಡುವ ಚಿಕಿತ್ಸೆಗೂ ಹೊಂದಾಣಿಕೆಯಾಗದಿರಬಹುದು. ಆದ್ದರಿಂದ ಮಕ್ಕಳು ಮಾತು ಕಲಿಕೆಗೆ ಇರುವ ಥೆರಪಿ ಮತ್ತು ಚಿಕಿತ್ಸೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕಿದ್ದರೆ ಅವರ ದೈಹಿಕ ಆರೋಗ್ಯವೂ ಉತ್ತಮವಾಗಿರುವಂತೆ ಪೋಷಕರು ನೋಡಿಕೊಳ್ಳಬೇಕು.

Q

ಚಿಕಿತ್ಸೆ ಪಡೆಯದೆ ಇದ್ದರೆ ಏನಾಗುತ್ತದೆ?

A

ಸ್ಪೀಚ್ ಡಿಸಾರ್ಡರ್ ಸಮಸ್ಯೆಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡದಿದ್ದರೆ ಆ ಮಕ್ಕಳಲ್ಲಿ ಇನ್ನಿತರ ತೊಂದರೆಗಳೂ ಕಂಡುಬರಬಹುದು. 

  • ಮಾತು ಕಲಿಯುವ ಸಮಯ ನಿಧಾನವಾಗಬಹುದು.

  • ಶಬ್ದವನ್ನು ನಪಿನಲ್ಲಿಟ್ಟುಕೊಳ್ಳಲು ಅಥವಾ ವಾಕ್ಯದ ಪದವಿನ್ಯಾಸದ ಬಗ್ಗೆ ಗೊಂದಲಕ್ಕೊಳಗಾಗುವುದು

  • ಸ್ನಾಯುಗಳ ಉತ್ತಮ ಚಲನೆ ಅಥವಾ ಸಮನ್ವಯತೆ ಕಷ್ಟವೆನಿಸುವುದು.

  • ಬಾಯಿಯ ಅತಿರೇಕದ ಸೂಕ್ಷ್ಮತೆ ಅಥವಾ ಅಸೂಕ್ಷ್ಮತೆ (ಹಲ್ಲುಜ್ಜಲು ಅಥವಾ ಗರಿಗರಿಯಾದ ಆಹಾರಗಳನ್ನು ಸೇವಿಸಲು ಇಷ್ಟಪಡದೇ ಇರುವುದು)

  • ಓದುವಾಗ, ಪದ ಉಚ್ಛಾರಣೆ ಮಾಡುವಾಗ ಅಥವಾ ಬರೆಯುವಾಗ ಸಮಸ್ಯೆ ಕಾಣಿಸಿಕೊಳ್ಳುವುದು. ಮುಂದೆ ಈ ಸಮಸ್ಯೆ ಶೈಕ್ಷಣಿಕ ಪ್ರಗತಿಯ ಮೇಲೂ ಪರಿಣಾಮ ಬೀರಬಹುದು.

Q

ಸ್ಪೀಚ್ ಡಿಸಾರ್ಡರ್ ಸಮಸ್ಯೆಯಿಂದ ಬಳಲುವ ಮಗುವಿನ ಆರೈಕೆ

A

ಸೂಚಿಸಿದ ಥೆರಪಿಗಳ ಜೊತೆಗೆ ಇಲ್ಲಿ ಕೊಟ್ಟಿರುವ ಕೆಲವು ಮಾರ್ಗದರ್ಶನಗಳನ್ನು ಪಾಲಿಸುವುದರ ಮೂಲಕ ನಿಮ್ಮ ಮಗುವಿನ ಸಮಸ್ಯೆಯನ್ನು ಬಗೆಹರಿಸಲು ಸಹಾಯಮಾಡಬಹುದು.

  • ಕೆಲವು ಥೆರಪಿ ಚಟುವಟಿಕೆಗಳನ್ನು ಮನೆಯಲ್ಲಿಯೂ ಅಳವಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮಗು ಪದಗಳ ಸರಿಯಾದ ಧ್ವನಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

  • ಸರಳ ಪ್ರಶ್ನೆಗಳನ್ನು ಕೇಳಿ. ಇದರಿಂದ ಮಗು ಮಾತನಾಡತೊಡಗುತ್ತದೆ ಮತ್ತು ಶಬ್ದಗಳನ್ನು ಉಪಯೋಗಿಸಲು ಕಲಿಯುತ್ತದೆ.

  • ನಿಮ್ಮ ಮಗು ನಿಧಾನವಾಗಿ ಮಾತನಾಡುವುದನ್ನು ಪ್ರೋತ್ಸಾಹಿಸಿ. ಅದು ಏನನ್ನು ಮಾತನಾಡುತ್ತದೆ ಎಂಬುದನ್ನು ಸಹನೆಯಿಂದ ಆಲಿಸಿ. ಪದಗಳನ್ನು ಸರಯಾಗಿ ಉಚ್ಚರಿಸಿದಾಗ ಮಗುವನ್ನು ಪ್ರಶಂಸಿಸಿ.

  • ನಿಮ್ಮ ಮಗು ಸುರಕ್ಷತೆಯ ಭಾವವನ್ನು ಅನುಭವಿಸಲು ಬಿಡಿ ಮತ್ತು ಯಾವಾಗಲೂ ಅವರ ಹೇಳಿಕೆಗಳನ್ನು ಕೇಳಲು ಹಾಗೂ ಅವರ ಕಷ್ಟಗಳನ್ನು ಮೀರಿಬರಲು ನೀವು ಸದಾಕಾಲ ಜೊತೆಯಾಗಿರುತ್ತೀರಿ ಎಂದು ಮಗುವಿನಲ್ಲಿ ವಿಶ್ವಾಸದ ಭಾವನೆ ಮೂಡಿಸಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org