ಸ್ಕಿಜೋಫ್ರೀನಿಯಾ ಹೊಂದಿರುವ ವ್ಯಕ್ತಿಯೊಂದಿಗೆ ಮಾತುಕತೆ

Q

ಸ್ಕಿಜ಼ೋಫ್ರೇನಿಯ ಹೊಂದಿರುವ ವ್ಯಕ್ತಿಯೊಂದಿಗೆ ಮಾತುಕತೆ

A

ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವ ಯಾರೊಂದಿಗೇ ಆದರೂ ಮಾತನಾಡುವುದು ಒಂದು ಸವಾಲು. ಇಕ್ಕಟ್ಟಿಗೆ ಸಿಲುಕಬಹುದಾದ ಮತ್ತು ಹಿಂಜರಿಯುವಂತೆ ಮಾಡಬಹುದಾದ ಅನೇಕ ಕಾರಣಗಳಿವೆ. ಉದಾಹರಣೆಗೆ, ‘ಏನು ಹೇಳಬೇಕೆಂಬುದೇ ನನಗೆ ತೋಚುವುದಿಲ್ಲ’, ‘ನಾನು ಒಳ್ಳೆಯದನ್ನೇ ಹೇಳಿದೆ ಆದರೆ ಅದು ಒತ್ತಾಯದ ಮಾತಿನಂತೆ ಕೇಳಿಸಿತೇ?’, ‘ನನಗೆ ಅವರ ಸಮಸ್ಯೆಯ ಕುರಿತು ಗೊತ್ತಿದೆ ಎಂಬುದು ಆ ವ್ಯಕ್ತಿಗೆ ಇಷ್ಟವಾಗದಿರಬಹುದು’, ‘ಅವರೇನಾದರೂ ತಪ್ಪು ತಿಳಿದುಕೊಂಡರೆ ಏನುಮಾಡುವುದು?’ ‘ಅವರಿಗೆ ಅವಮಾನವಾಗದ ಹಾಗೆ ನಾನು ಏನು ಹೇಳಲಿ?’ ‘ನಾನವರಿಗೆ ಬೇಜಾರು ಮಾಡಲಿಚ್ಛಿಸುವುದಿಲ್ಲ’, ‘ಅವರನ್ನು ಎದುರಿಸುವುದು ನನಗೆ ಸಾಧ್ಯವಾಗದಿದ್ದರೆ?’ ಇವೇ ಮುಂತಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅನೇಕ ಕಲ್ಪನೆಗಳಿವೆ. ನಮಗೆ ಇರುವ ಭಯದಿಂದ ನಾವು ಅತಿ ಎಚ್ಚರ ವಹಿಸುತ್ತೇವೆ ಮತ್ತು ಮಾನಸಿಕ ಅಸ್ವಸ್ಥರೊಂದಿಗೆ ವ್ಯವಹರಿಸುವಾಗ ಅತಿಯಾಗಿ ವಿಚಾರಮಾಡುತ್ತೇವೆ.

ಸ್ಕಿಜ಼ೋಫ್ರೇನಿಯ ಹೊಂದಿರುವ ವ್ಯಕ್ತಿಯ ಕುಟುಂಬದ ಸದಸ್ಯ, ಸ್ನೇಹಿತ ಅಥವಾ ಸಹೋದ್ಯೋಗಿಯಾಗಿ ನೀವು ಅವರೊಂದಿಗೆ ಸಹಜವಾಗಿ ಮಾತನಾಡುವ ಮೂಲಕ ವ್ಯಕ್ತಿಗಳಿಗೆ ಸಾಂತ್ವನ ಮತ್ತು ಬೆಂಬಲವನ್ನು ನೀಡಬಹುದು.

Q

ಸ್ಕಿಜೋಫ್ರೀನಿಯಾ ಹೊಂದಿರುವ ವ್ಯಕ್ತಿಯೊಡನೆ ಮಾತನಾಡುವುದು ಅವಶ್ಯ ಯಾಕೆ?

A

ಸ್ಕಿಜೋಫ್ರೀನಿಯಾದಿಂದ ಬಳಲುತ್ತಿರುವ ವ್ಯಕ್ತಿಗೆ ಬೆಂಬಲದ ವಾತಾವರಣದ ಅಗತ್ಯವಿದೆ. ಅಂತಹ ವ್ಯಕ್ತಿಯ ಸ್ನೇಹಿತರು, ಕುಟುಂಬದ ಸದಸ್ಯರು ಖಾಯಿಲೆಯ ಕುರಿತು ತಿಳುವಳಿಕೆ ಪಡೆದು ಸಹಾಯ ಮಾಡುವ ಮೂಲಕ ಈ ರೀತಿಯ ಪೂರಕವಾದ ವಾತಾವರಣವನ್ನು ನಿರ್ಮಿಸಬಹುದು.

ಸ್ಕಿಜೋಫ್ರೀನಿಯಾ ಹೊಂದಿರುವ ವ್ಯಕ್ತಿ ಒಂಟಿಯಾಗಿರಲು ಇಷ್ಟಪಡುತ್ತಾನೆ. ಅವರಿಗೆ ಒಂದು ಸಮಸ್ಯೆಯನ್ನು ಗುರುತಿಸಿ ಸಹಾಯ ಕೇಳಲು ಆಗುವುದಿಲ್ಲ. ಹಾಗಾಗಿ ಹೊರಗಿನವರ ಪ್ರೇರಣೆ ಅವರಿಗೆ ಅಗತ್ಯ. ಆ ಕಾರಣಕ್ಕಾಗಿಯೇ ಖಾಯಿಲೆಯಿಂದ ಚೇತರಿಸಿಕೊಳ್ಳಲು ಅವರಿಗೆ ನಿಮ್ಮ ಸಂಬಂಧ ಬೆಸೆಯುವ, ವಾಸ್ತವ ತಿಳಿಸುವ ಮಾತಿನ ಅವಶ್ಯಕತೆ ಇದೆ.

ಸ್ಕಿಜೋಫ್ರೀನಿಯಾದಿಂದ ಬಳಲುತ್ತಿರುವ ವ್ಯಕ್ತಿ ಜನರೊಂದಿಗೆ ಸಂಪರ್ಕದಲ್ಲಿರುವುದು, ಆರೋಗ್ಯಕರ ಸಂಭಾಷಣೆಗಳಲ್ಲಿ, ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದು ತಮ್ಮ ಒಂಟಿತನವನ್ನು ನೀಗಿಕೊಳ್ಳಲು ತುಂಬ ಸಹಾಯ ಮಾಡುತ್ತದೆ. ಹಾಗಾಗಿ ಅವರಿದ್ದಲ್ಲಿಗೇ ಹೋಗಿ ಮಾತನಾಡುವುದು, ಅವರನ್ನು ನಂಬಿಕೆ ಗಳಿಸುವುದು, ವ್ಯಕ್ತಿ ಚುರುಕಾಗಿರಲು ಉತ್ತೇಜಿಸುತ್ತದೆ.

ಈ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಯಾರೊಂದಿಗೂ ಹಂಚಿಕೊಳ್ಳದೇ ದುಃಖ, ಆತಂಕಗಳಿಂದ ಬಳಲುತ್ತಿರಬಹುದು. ಅವರನ್ನು ಮಾತನಾಡಿಸಿ ಸಾಂತ್ವನ ಹೇಳುವುದು ಅವರಿಗೆ ನೆಮ್ಮದಿದಾಯಕವಾಗಬಹುದು.

Q

ಅವರ ಜೊತೆ ಹೇಗೆ ಮಾತನಾಡಬೇಕು?

A

ನಿಮಗೆ ಅವರ ಬಗ್ಗೆ ಕಳಕಳಿ ಇದೆ ಮತ್ತು ಅವರಿಗೆ ಬೇಕಾದ ಬೆಂಬಲವನ್ನು ನೀಡಲು ಸಿದ್ಧರಿದ್ದೀರಿ ಎಂಬುದನ್ನು ಖಾಯಿಲೆಗೊಳಗಾದ ವ್ಯಕ್ತಿಗೆ ಹೇಳುವ ಮೂಲಕ ನೀವು ಅವರನ್ನು ತಲುಪಬಹುದು.” ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ನನಗೆ ನಿಮ್ಮ ಬಗ್ಗೆ ಕಾಳಜಿ ಇದೆ. ನಿಮ್ಮ ಸಹಾಯಕ್ಕೆ ನಾನು ಯಾವಾಗಲೂ ಇದ್ದೇನೆ” ಎಂದು ಹೇಳಿ.  

Q

ಅವರಿಂದ ಯಾವ ರೀತಿಯ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಬಹುದು?

A

ನಾವು ಸಾಮಾನ್ಯವಾಗಿ ನಿರೀಕ್ಷಿಸುವ ಪ್ರತಿಕ್ರಿಯೆಯನ್ನು ಸ್ಕಿಜ಼ೋಫ್ರೇನಿಯ ಇರುವವರಿಂದ ಪಡೆಯಲು ಸಾಧ್ಯವಾಗದೇ ಇರಬಹುದು. ನಿಮ್ಮ ಮಾತಿಗೆ ಅವರು ಮೌನಿಯಾಗಿ ಅಥವಾ ಒಂದೇ ಪದದ ಉತ್ತರವನ್ನು ನೀಡಿ ಸುಮ್ಮನಾಗಬಹುದು. ಕೆಲವು ಸಲ, ‘ನೀವು ಚರ್ಚಿಸಬೇಕೆಂದಿರುವ ವಿಷಯದಲ್ಲಿ ನನಗೆ ತುಂಬಾ ಆಸಕ್ತಿಯಿದೆ’ ಎಂದು ಅವರು ಹೇಳಿದರೂ, ಅವರ ಮುಖಭಾವ ಮತ್ತು ಮಾತು ಬೇರೆಯಾಗಿಯೇ ಕಾಣಬಹುದು. ಇದು ನಿಮ್ಮಲ್ಲಿ ಗೊಂದಲವನ್ನುಂಟುಮಾಡಬಹುದು. ಆ ವ್ಯಕ್ತಿಯ ಉತ್ಸಾಹ ನಿಜವೇ ಅಥವಾ ಅವರು ಸಮ್ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವರೇ ಎಂದು ಅರ್ಥಮಾಡಿಕೊಳ್ಳಬೇಕು. ಖಾಯಿಲೆಯ ಕಾರಣದಿಂದ ಆಗುವ ನಡುವಳಿಕೆಯ ಈ ಬದಲಾವಣೆಗಳನ್ನು ಗಮನಿಸಿ ತಾಳ್ಮೆಯಿಂದ ಅವರ ಪ್ರತಿಕ್ರಿಯೆಗೆ ಕಾಯಬೇಕು.

ನಿಮ್ಮ ಮುಜುಗರ, ಹಿಂಜರಿಕೆ, ಅಥವಾ ಗೊಂದಲಗಳನ್ನು (ಏನು ಮಾಡಬೇಕು? ಏನು ಹೇಳಬೇಕು? ಇತ್ಯಾದಿ) ತೋರಿಸದಿರಿ. ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ವ್ಯಕ್ತಿಗೆ ಕಷ್ಟವಾಗಬಹುದು.

ನೆನಪಿಡಿ, ಸ್ಕಿಜ಼ೋಫ್ರೇನಿಯ ಹೊಂದಿರುವ ವ್ಯಕ್ತಿ ಭಾವರಹಿತವಾಗಿ ಕಾಣಿಸಬಹುದು. ಅಂದಮಾತ್ರಕ್ಕೆ ಅವರಲ್ಲಿ ಭಾವನೆಗಳಿಲ್ಲ ಅಥವಾ ದೊಡ್ಡದನಿಯಲ್ಲಿ ಮಾತನಾಡದೇ ಇರುವ ಅವರಿಗೆ ಅಭಿಪ್ರಾಯವೇ ಇಲ್ಲ ಎಂದರ್ಥವಲ್ಲ. 

Q

ತೆರೆಯನ್ನು ಸರಿಸುವ ಪರಿ

A

ಸಾಮಾನ್ಯವಾಗಿ ನೀವು ಇತರರನ್ನು ಭೇಟಿಯಾಗುವಂತೆ ಸ್ಕಿಜೋಫ್ರೀನಿಯಾ ಬಾಧಿತ ವ್ಯಕ್ತಿಯನ್ನೂ ಭೇಟಿಮಾಡಿ. ಖಾಯಿಲೆಯ ಕಾರಣಕ್ಕಾಗಿ ಅವರ ನಡುವಳಿಕೆಯಲ್ಲಿ ಬದಲಾವಣೆ ಇರಬಹುದು. ಸ್ವಾಭಾವಿಕ ಎನ್ನುವಂತೆ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿಕೊಳ್ಳಿ.

ಸಾಮಾನ್ಯ ವಿಷಯವೊಂದರಿಂದ ಮಾತನ್ನು ಆರಂಭಿಸಿ. ಸ್ನೇಹಿತನಾಗಿ ಅಥವಾ ಸಹೋದ್ಯೋಗಿಯಾಗಿ ಆ ವ್ಯಕ್ತಿಯ ಆರೋಗ್ಯ ಅಥವಾ ಭಾವನಾತ್ಮಕ ಸಂಗತಿಗಳ ಕುರಿತು ನೀವು ಒಮ್ಮೆಲೇ ಮಾತನಾಡುವುದು ಸೂಕ್ತವಲ್ಲ. ನೀವು ಕೆಲಸದ ಅಥವಾ ಇನ್ನಿತರ ಯಾವುದೇ ವಾಸ್ತವಿಕ ಸಂಗತಿಗಳ ಕುರಿತು ಮಾತುಕತೆಯನ್ನು ಆರಂಭಿಸಿ.

ಈ ರೀತಿ ಮಾತನಾಡುವ ಮೂಲಕ ಅವರ ವಿಶ್ವಾಸಕ್ಕೆ ಪಾತ್ರರಾಗಿ. ಅವರ ಸಹಾಯಕ್ಕೆ ಇರುವಿರಿ ಎಂದು ತಿಳಿಸಿ. ಆದರೆ ಸಹಾಯಮಾಡಬೇಕೆಂಬ ಭರದಲ್ಲಿ ಅತ್ಯುತ್ಸಾಹದಿಂದ ವರ್ತಿಸಬೇಡಿ. ವ್ಯಕ್ತಿಯು ಖಾಯಿಲೆಯಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನೀವು ಸಾಕಷ್ಟು ತಿಳಿಯದಿರಬಹುದು ಅಥವಾ ನಿಮ್ಮ ಸಹಾಯದ ಅಗತ್ಯ ಅವರಿಗೆ ಇಲ್ಲದಿರಬಹುದು.

ವ್ಯಕ್ತಿಯ ಖಾಯಿಲೆಯ ಕುರಿತಾದ ವಿವರಗಳು ಕೆದಕಬೇಡಿ. ‘ಧ್ವನಿಗಳು ಕೇಳಿದಾಗ ನಿಮಗೆ ಏನಾಗುತ್ತದೆ?’ ಅಥವಾ ‘ಧ್ವನಿಗಳು ನಿಮಗೆ ಏನು ಹೇಳುತ್ತವೆ?’, ಈ ರೀತಿಯಾಗಿ ಪ್ರಶ್ನೆ ಮಾಡಬೇಡಿ.     

Q

ಸಲಹೆ-ಸೂಚನೆಗಳನ್ನು ನೀಡುವುದು

A

ವ್ಯಕ್ತಿ ಖಾಯಿಲೆಯಿಂದ ಗುಣಮುಖನಾಗಲು ಸಹಾಯಕವಾಗಬಹುದೆಂಬ ಭಾವನೆಯಿಂದ ಹಲವಾರು ಸಲ ನಾವು ನಮಗೆ ತಿಳಿದ ಸಲಹೆಗಳನ್ನು ನೀಡುತ್ತೇವೆ. ಸ್ಕಿಜ಼ೋಫ್ರೇನಿಯಾದಿಂದ ಬಳಲುತ್ತಿರುವ ವ್ಯಕ್ತಿ ತನ್ನ ನಿರ್ಧಾರವನ್ನು ಪರಿಶಿಲಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ನಿಮ್ಮ ಸಲಹೆ ಅಥವಾ ಸೂಚನೆಯನ್ನು ಆ ವ್ಯಕ್ತಿ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ವ್ಯಕ್ತಿಯ ಕುಟುಂಬದವರು, ವೈದ್ಯರು ಮಾಡುತ್ತಿರುವ ಪ್ರಯತ್ನವನ್ನು ಕಡೆಗಣಿಸುವಂತಹ ಸಲಹೆಗಳನ್ನು ನೀಡದಿರಿ.

ವ್ಯಕ್ತಿಯು ನಿಮ್ಮಲ್ಲಿ ಸಲಹೆ ಕೇಳಿದರೂ, ನೀವಾಡುವ ಪ್ರತಿಯೊಂದುಮಾತಿನ ಮೇಲೂ ಎಚ್ಚರವಿರಲಿ. ಔಷಧಿಗಳನ್ನು ಸೇವಿಸುವುದು ಆ ವ್ಯಕ್ತಿಗೆ ಇಷ್ಟವಿರುವುದಿಲ್ಲ ಎಂದಿಟ್ಟುಕೊಳ್ಳಿ. ನೀವು ಮಾತನಾಡುವ ಸಂದರ್ಭದಲ್ಲಿ ಖಾಯಿಲೆಗೆ ಈಡಾದ ಯಾರೋ ಒಬ್ಬರಿಗೆ ಔಷಧಿ ಸೇವನೆಯಿಂದ ತಲೆ ಸುತ್ತು ಬಂದಿತು ಎಂಬ ನಿಮ್ಮ ಮಾತು ಕೇಳಿ, ವ್ಯಕ್ತಿ ತಮ್ಮ ಔಷಧಿ ಸೇವನೆಯನ್ನೇ ಬಿಟ್ಟು ಬಿಡಬಹುದು.

ನಿಮಗೆ ಆ ವ್ಯಕ್ತಿಯ ಖಾಯಿಲೆಯನ್ನು ವಾಸಿಮಾಡುವ ಅತ್ಯುತ್ತಮ ಚಿಕಿತ್ಸಾ ವಿಧಾನ ನಿಜವಾಗಿಯೂ ಗೊತ್ತಿದ್ದ,ರೆ ಅದರ ಬಗ್ಗೆ ವೈದ್ಯರು, ಆಪ್ತ ಸಮಾಲೋಚಕರು ಅಥವಾ ಆರೈಕೆದಾರರ ಬಳಿ ಚರ್ಚಿಸುವಂತೆ ಸೂಚಿಸಿ. ಒಂದು ಚಿಕಿತ್ಸೆಯೊಂದಿಗೆ ಮತ್ತೊಂದು ವಿಧಾನ ಅನುಸರಿಸಲು ವೈದ್ಯರ ಅನುಮತಿ ಮುಖ್ಯ.

ಬಾಧಿತ ವ್ಯಕ್ತಿಯು ತನ್ನ ಮನಸ್ಸಿನ ಒತ್ತಡಕ್ಕೆ ಕಾರಣವಾಗುತ್ತಿರುವವಿಷಯಗಳ ಬಗ್ಗೆ (ಆರೈಕೆದಾರರೊಂದಿಗೆ ಅಥವಾ ಕುಟುಂಬದ ಇತರ ಸದಸ್ಯರೊಂದಿಗೆ ಇರುವ ಮನಸ್ತಾಪ, ಇತ್ಯಾದಿ) ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ನಿಮಗೆ ಅದರ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲದೇ ಇದಲ್ಲಿ, ಸಹಾಯಕ್ಕಾಗಿ ಅವರ ವೈದ್ಯರು ಅಥವಾ ಆಪ್ತಸಮಾಲೋಚಕರ ಬಳಿ ತೆರಳುವಂತೆ ಸೂಚಿಸಿ. 

Q

ಭರವಸೆ ಮುರಿಯುವುದು

A

ಸ್ಕಿಜ಼ೋಫ್ರೇನಿಯಾದಿಂದ ಬಳಲುತ್ತಿರುವ ವ್ಯಕ್ತಿ ನಿಮ್ಮೊಡನೆ ಸೂಕ್ಷ್ಮ ವಿಷಯಗಳನ್ನು ಹಂಚಿಕೊಂಡು, ಆ ಸಂಗತಿಯ ಕೆಲ ಮಾಹಿತಿಯನ್ನು ವೈದ್ಯರಿಗೆ ಅಥವಾ ಆರೈಕೆದಾರರಿಗೆ ತಿಳಿಸವುದು ಮುಖ್ಯ ಎಂದು ನಿಮಗೆ ಅನಿಸಬಹುದು. ಆಗ ನೀವೇನು ಮಾಡುತ್ತೀರಿ?

ಒಂದೊಮ್ಮೆ ಆ ವ್ಯಕ್ತಿಯು ತನಗೆ ಅಥವಾ ಇತರರಿಗೆ ಅಪಾಯವನ್ನು ಮಾಡುವ ಬಗ್ಗೆ (ಆತ್ಮಹತ್ಯೆಯ ವಿಚಾರಗಳು, ಇನ್ನೊಬ್ಬರನ್ನು ಕೊಲೆಮಾಡುವ ವಿಚಾರ, ಇತರರಿಗೆ ನೋವುಂಟು ಮಾಡುವ ಆಲೋಚನೆ, ಇತ್ಯಾದಿ) ನಿಮಗೆ ಹೇಳಿದರೆ, ನೀವದನ್ನು ಅವರ ಕುಟುಂಬದವರಿಗೆ ಹೇಳಬೇಕೋ ಬೇಡವೋ ಎಂದು ಯೋಚಿಸಿ.

ವ್ಯಕ್ತಿ ಹೇಳಿದ ಎಲ್ಲ ಸಂಗತಿಗಳನ್ನೂ ಚಾಚೂ ತಪ್ಪದೆ ಆರೈಕೆದಾರರಿಗೆ ಹೇಳುವ ಅವಶ್ಯಕತೆಯಿಲ್ಲ. ಯಾಕೆಂದರೆ ಅವರು ಈ ಮೊದಲೇ ಕಂಗಾಲಾಗಿರಬಹುದು. ಬದಲಾಗಿ ವ್ಯಕ್ತಿಯ ಯಾವ ಮಾತಿನಿಂದ ನಿಮಗೆ ಆತಂಕ ಉಂಟಾಯಿತೆಂದು ತಿಳಿಸಿ.

ಇತರರಿಗೆ ಅಥವಾ ತಮಗೆ ನೋವನ್ನುಂಟುಮಾಡಿಕೊಳ್ಳುವುದು ಸರಿಯಾದ ಯೋಚನೆಯಲ್ಲ ಎಂದು ವ್ಯಕ್ತಿಗೆ ತಿಳಿಹೇಳಿ. ಈ ರೀತಿಯ ಪ್ರಚೋದನೆಗಳು ಉಂಟಾದಾಗ ಅದನ್ನು ಕುಟುಂಬದ ಸದಸ್ಯರಿಗೆ ಹೇಳುವುದರಿಂದ ಹೆಚ್ಚಿನ ಸಹಾಯವನ್ನು ಪಡೆಯಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ. ಉದಾಹರಣೆಗೆ, “ನನಗೆ ನಿಮ್ಮ ಕುರಿತು ತುಂಬ ಕಾಳಜಿಯಾಗುತ್ತಿದೆ. ಈ ವಿಷಯವನ್ನು ನಿಮ್ಮ ಮನೆಯವರೊಂದಿಗೆ ಹಂಚಿಕೊಂಡರೆ, ಅವರು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲರು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಬಲ್ಲರು”. ಎಂದು ಹೇಳುವ ಮೂಲಕ ನೀವು ಅವರ ನಂಬಿಕೆಗೆ ದ್ರೋಹ ಮಾಡುತ್ತಿಲ್ಲ ಎಂದು ಅವರು ಅರ್ಥಮಾಡಿಕೊಳ್ಳುವರು.

ಸ್ಕಿಜೋಫ್ರೀನಿಯಾ ಖಾಯಿಲೆಯ ಕುರಿತು ನೀವು ಸಾಕಷ್ಟು ತಿಳಿದುಕೊಳ್ಳಿ. ಈ ಖಾಯಿಲೆಯಿಂದ ಬಳಲುವ ಎಲ್ಲ ವ್ಯಕ್ತಿಗಳೂ ಇದರ ಎಲ್ಲ ಲಕ್ಷಣಗಳನ್ನೂ ತೋರಿಸುವುದಿಲ್ಲ. ಆ ವ್ಯಕ್ತಿ ನಿಮ್ಮ ಸುತ್ತಮುತ್ತಲಿರುವವರಿಗಿಂತ ತೀರಾ ಭಿನ್ನವಾಗಿರುವುದಿಲ್ಲ. ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿ ಸಹನೆಯಿಂದಿರುವುದು ಸ್ಕಿಜೋಫ್ರೀನಿಯಾ ಬಾಧಿತ ವ್ಯಕ್ತಿಗೆ ಸಹಾಯಕ.

Q

ಸ್ಕಿಜೋಫ್ರೀನಿಯಾ ಹೊಂದಿರುವ ವ್ಯಕ್ತಿಗಳೊಂದಿಗೆ ವ್ಯವಹರಿಸಲು ಕೆಲ ಸಲಹೆಗಳು

A

ಎಲ್ಲರೊಂದಿಗೆ ಮಾತನಾಡುವಂತೆ ಅವರೊಂದಿಗೂ ಮಾತನಾಡಿ. ಹೆಚ್ಚಿನ ವೇಳೆ, ಅವರ ಪ್ರತಿಕ್ರಿಯೆ ಸ್ವಾಭಾವಿಕವೇ ಆಗಿರುತ್ತದೆ. ಕೆಲವು ಸಲ, ವ್ಯಕ್ತಿ ನಿಮ್ಮ ಊಹೆ ಮೀರಿ ನಡೆದುಕೊಳ್ಳಬಹುದು. ಇದರಿಂದ ನಿಮಗೇನು ಮಾಡಬೇಕೆಂದೇ ತೋಚದಿರಬಹುದು. ಸ್ಕಿಜ಼ೋಫ್ರೇನಿಯ ಖಾಯಿಲೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ಕಾಣಬರುತ್ತವೆ ಮತ್ತು ಕಾಲಕಾಲಕ್ಕೆ ಇವು ಬದಲಾಗಲೂಬಹುದು. ಅಂತಹ ವ್ಯಕ್ತಿಗಳು ನೀಡಬಹುದಾದ ಕೆಲವು ಪ್ರಕಾರದ ಪ್ರತಿಕ್ರಿಯೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

  • ವ್ಯಕ್ತಿಯು ಹೆಚ್ಚು ಮಾತನಾಡದೇ ಇರಬಹುದು ಅಥವಾ ಆಸಕ್ತಿಯಿಲ್ಲದವರಂತೆ ವರ್ತಿಸಬಹುದು. ಅಂತಹ ಸಂದರ್ಭಗಳಲ್ಲಿ ಆ ವ್ಯಕ್ತಿ ಅಸಮ್ಮತಿ ಸೂಚಿಸುವವರೆಗೂ ಸಂಭಾಷಣೆಯನ್ನು ಮುಂದುವರೆಸಿ. (ಸ್ಕಿಜೋಫ್ರೀನಿಯಾದಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮೊಳಗಿನ ಭಾವನೆಗಳನ್ನು ತೋರ್ಪಡಿಸುವುದಿಲ್ಲ. ಸುತ್ತಮುತ್ತಲಿನವರಿಗೆ ‘ಅನಾಸಕ್ತ’ರಂತೆ ಕಾಣಬಹುದು.)

  • ಇಂತಹ ವ್ಯಕ್ತಿ ಅಸಹಜವಾಗಿ ವರ್ತಿಸಬಹುದು. ಅದರ ಕಡೆಗೆ ಗಮನ ನೀಡಬೇಡಿ ಅಥವಾ ಪ್ರಶ್ನಿಸಬೇಡಿ. ಸಹಜವಾಗಿ ಮಾತುಕತೆಯನ್ನು ಮುಂದುವರೆಸಿ.

  • ಅವರ ಈ ರೀತಿಯ ವರ್ತನೆ ನಿಮಗೆ ಮುಜುಗರ ಉಂಟುಮಾಡಿತ್ತಿದ್ದರೆ ಆ ವ್ಯಕ್ತಿ ಶಾಂತವಾಗುವವರೆಗೆ ಸುಮ್ಮನಿದ್ದುಬಿಡಿ.

  • ವ್ಯಕ್ತಿಯು ನಿಮ್ಮನ್ನು ಅನುಮಾನಿಸಬಹುದು ಮತ್ತು ನಿಮ್ಮ ಮೇಲೆ ಸಿಟ್ಟುಗೊಳ್ಳಬಹುದು. ಆತನನ್ನು ಪ್ರಚೋದಿಸುವ ಯಾವುದೇ ವಿಷಯವನ್ನು ಮಾತನಾಡಬೇಡಿ. ಅವರ ಬಗ್ಗೆ ನಿಮಗೆ ಕಾಳಜಿಯಿರುವುದನ್ನು ದೃಢಪಡಿಸಿ, ಅವರು ಮಾತನಾಡಲು ಸಿದ್ಧರಾದಾಗ ಮತ್ತೆ ಮಾತನ್ನು ಮುಂದುವರೆಸುವುದಾಗಿ ಹೇಳಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org