ಪೋಷಕರೇ, ನಿಮ್ಮ ಮಗುವಿಗೆ ನೆರವಾಗಿ!

ಪೋಷಕರ ದೃಷ್ಟಿಕೋನ ಬದಲಾದರೆ ಮಕ್ಕಳು ಪರೀಕ್ಷೆಯ ಬಗ್ಗೆ ಆತಂಕ ಪಡುವುದು ಕಡಿಮೆಯಾಗುತ್ತದೆ.

ತಜ್ಞರ ಪ್ರಕಾರ, ಮಕ್ಕಳಿಗೆ ಓದಿನ ಬಗ್ಗೆ ಇರುವ ಆತಂಕ ಮತ್ತು ಅದರಿಂದಾಗುವ ಪರಿಣಾಮಕ್ಕೆ ಎಷ್ಟೋ ಬಾರಿ ತಿಳಿದೋ ತಿಳಿಯದೆಯೋ ಪೋಷಕರೇ ಕಾರಣರಾಗಿರುತ್ತಾರೆ.

ಪರೀಕ್ಷಾ ವೇಳೆಯಲ್ಲಿ ತಂದೆ ತಾಯಿ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು?

ಮಕ್ಕಳಿಗೆ ಸಹಜವಾಗಿ ಪರೀಕ್ಷೆ ಬಗ್ಗೆ ಆತಂಕವಿರುತ್ತದೆ ಎಂದು ನೆನಪಿಡಿ. ಈ ಸಂದರ್ಭದಲ್ಲಿ ನೀವು:

  • ಪರೀಕ್ಷೆಗೆ ಸಾಕಷ್ಟು ಸಮಯ ಇರುವಾಗಲೇ ಮಕ್ಕಳಿಗೆ ಟೈಮ್ ಟೇಬಲ್ ತಯಾರಿಸಲು ಸಹಾಯ ಮಾಡಿ.
  • ಪೌಷ್ಟಿಕ ಆಹಾರವನ್ನು ನೀಡಿ.
  • ಮಕ್ಕಳು ಅಗತ್ಯವಾದ ವಿಶ್ರಾಂತಿ ತೆಗೆದುಕೊಳ್ಳುವಂತೆ ಹಾಗೂ ಸರಿಯಾಗಿ ನಿದ್ದೆಮಾಡುವಂತೆ ನೋಡಿಕೊಳ್ಳಿ.
  • ಅವರಿಗೆ ಪಾಠದ ಬಗ್ಗೆ ಇರುವ ಸಂದೇಹ ದೂರ ಮಾಡಲು ಪ್ರಯತ್ನಿಸಿ ಅಥವಾ ಅಧ್ಯಾಪಕರ ಸಹಾಯ ಪಡೆಯಿರಿ.
  • ಮನೆಯಲ್ಲಿ ಒತ್ತಡ ಹೇರದೇ ಸಣ್ಣ ಟೆಸ್ಟ್ ಒಂದನ್ನು ನೀಡಿ ಮಕ್ಕಳಿಗೆ ಎಲ್ಲಿ ಸಹಾಯ ಬೇಕೆಂಬುದನ್ನು ಗುರುತಿಸಿ.
  • ಮಕ್ಕಳು ಆತಂಕ ಪಡದಂತೆ ಅವರಲ್ಲಿ ವಿಶ್ವಾಸ ತುಂಬಿ.

ಮಕ್ಕಳಿಗೆ ಇರುವ ಒತ್ತಡದ ಬಗ್ಗೆ ತಿಳಿಯುವುದು ಹೇಗೆ?

ನಿಮ್ಮ ಮಕ್ಕಳು ಆತಂಕ, ಒತ್ತಡ, ಭಯದಲ್ಲಿದ್ದಾಗ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದು ಪೋಷಕರಾದ ನಿಮಗೆ ತಿಳಿದಿರುತ್ತದೆ. ಮಕ್ಕಳು ಅವರಿಗಿರುವ ಆತಂಕವನ್ನು ಪೋಷಕರ ಬಳಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಕಡಿಮೆ ಅಂಕ ಸಿಕ್ಕರೆ ಅವರಿಗೆ ಬೇಕಾದ ಕೋರ್ಸ್ ಅಥವಾ ಬೇಕಾದ ಕಾಲೇಜಿನಲ್ಲಿ ಸೀಟ್ ಸಿಗದೇ ಇರಬಹುದು ಎಂದು ಮಕ್ಕಳು ಸಾಮಾನ್ಯವಾಗಿ ಆತಂಕ ಪಡುತ್ತಾರೆ. ಆತಂಕವಿದ್ದರೆ ಓದಲು ಕಷ್ಟಪಡಬಹುದು, ಅಭ್ಯಾಸ ಮಾಡಿದ್ದ ವಿಷಯ ಮರೆತು ಹೋಗಬಹುದು, ಪರೀಕ್ಷೆಗೆ ಮೊದಲು ಹೊಟ್ಟೆ ನೋವು ಅಥವಾ ತಲೆ ನೋವು ಬರಬಹುದು, ಆತಂಕ ತುಂಬಾ ವಿಪರೀತವಾದಾಗ ತಮಗೆ ತಾವೇ ಹಾನಿ ಮಾಡಿಕೊಳ್ಳಬಹುದು. ಇವೆಲ್ಲವೂ ಪರೀಕ್ಷೆಯ ಬಗ್ಗೆ ಇರುವ ಆತಂಕದ ಗುರುತುಗಳು. ಪೋಷಕರು ಮಕ್ಕಳ ಈ ಬದಲಾವಣೆಗಳನ್ನು ಗಮನಿಸಿ ಅವರಿಗೆ ಸಹಾಯ ಮಾಡಬೇಕು.

ಓದುವುದರ ಉದ್ದೇಶ ವಿಷಯಗಳನ್ನು ತಿಳಿಯುವುದೇ ಹೊರತು ಕೇವಲ ಅಂಕ ಗಳಿಸುವುದಲ್ಲ ಎಂದು ಮಕ್ಕಳಿಗೆ ಹೇಳಿ. ಇದು ಅವರನ್ನು ಶಾಂತಗೊಳಿಸುತ್ತದೆ. ನೀವೂ ಕೂಡ ಸಮಾಧಾನದಿಂದಿರಬೇಕು.

ಮಕ್ಕಳು ರಾತ್ರಿ ವೇಳೆಯಲ್ಲಿ ಅಭ್ಯಾಸ ಮಾಡಲು ಬಯಸುತ್ತಾರೆ.

ಪ್ರತಿಯೊಂದು ಮಗು ಓದುವ ರೀತಿ ಬೇರೆ ಇರುತ್ತದೆ. ಕೆಲವರು ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಓದಲು ಇಷ್ಟ ಪಡುತ್ತಾರೆ, ಮತ್ತೆ ಕೆಲವರು ರಾತ್ರಿ ಓದಲು ಇಷ್ಟಪಡುತ್ತಾರೆ. ನಿಮ್ಮ ಮಗು ಅನುಸರಿಸುವ ವಿಧಾನವನ್ನು ಗೌರವಿಸಿ ಅವರ ಇಷ್ಟಕ್ಕೆ ಬಿಡಿ. ಹದಿಹರೆಯದಲ್ಲಿ ಮಕ್ಕಳು ಜಾಸ್ತಿ ನಿದ್ರಿಸುತ್ತಾರೆ. ಇದು, ಅವರು ಬೆಳೆಯುವಾಗ ಆಗುವ ಬದಲಾವಣೆ. ಅವರಿಗೆ ನಿದ್ದೆ ಸರಿಯಾಗಿ ಆಗದಿದ್ದರೆ, ಕೆಲಸಗಳನ್ನು ಮಾಡಲು ಕಷ್ಟವಾಗಬಹುದು.

ಪರೀಕ್ಷೆಯ ಸಮಯದಲ್ಲಿ ಮಕ್ಕಳ ಸ್ವಭಾವ ಬದಲಾಗುವುದು ಸಹಜ.

ಹೆಚ್ಚಿನ ಮಕ್ಕಳು ತಮ್ಮ ಹೈಸ್ಕೂಲಿನಲ್ಲಿ ಹೆಚ್ಚು ಜವಾಬ್ದಾರಿಯಿಂದ ಓದುತ್ತಾರೆ. ಅವರ ಓದು ಅವರ ಜವಾಬ್ದಾರಿ ಎಂಬ ಭಾವನೆ ಮೂಡಿಸುವುದು ನಿಮ್ಮ ಕೆಲಸ. ಅತಿಯಾದ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದ ಅಗತ್ಯವಿಲ್ಲ. ಹೈಸ್ಕೂಲಿನ ಮಕ್ಕಳ ಜೊತೆ ಕೂತು ಓದಿಸುವ ತಂದೆ ತಾಯಿ, ಸಹಾಯಕ್ಕಿಂತ ಒತ್ತಡ ನೀಡುವುದೇ ಹೆಚ್ಚು. ಇದರ ಬದಲು ಅವರಿಗೆ ಅರ್ಥವಾಗದ ವಿಷಯದಲ್ಲಿ ಮಾತ್ರ ಸಹಾಯ ಮಾಡಬೇಕು. ಪರೀಕ್ಷೆಯ ಹೊರೆ ಹೊರುವ ಅಗತ್ಯವಿಲ್ಲ ಎಂದು ಮಕ್ಕಳಿಗೆ ತಿಳಿಸಬೇಕು.

ಮಕ್ಕಳನ್ನು ಇಂಟರ್ನೆಟ್, ಟಿವಿ ನೋಡಲು ಅಥವಾ ಹೊರಗೆ ಆಡಲು ಕಳಿಸಬಹುದೇ?

ಮಕ್ಕಳು ಓದಿನ ಮಧ್ಯೆ ಸ್ವಲ್ಪ ಸಮಯ ಫೋನ್ ಬಳಸಲು ಬಿಡಿ. ಆದರೆ ಅದರಲ್ಲಿ ಕಳೆಯುವ ಸಮಯದ ಬಗ್ಗೆ ಸ್ವಲ್ಪ ನಿಯಂತ್ರಣವಿರಬೇಕು. ಇದರ ಬದಲು ವಾಕಿಂಗ್ ಹೋಗಲು ಅಥವಾ ಸಂಗೀತ ಕೇಳಲು ಸೂಚಿಸಿ. ಇದು ಅವರಿಗೆ ಉಲ್ಲಾಸ ನೀಡುತ್ತದೆ.

ಪರೀಕ್ಷೆಯ ಸಮಯದಲ್ಲಿ ಪೋಷಕರು ಆತಂಕದಿಂದ ದೂರವಿರುವುದು ಹೇಗೆ?

ಪ್ರತಿಯೊಂದು ಮಗುವಿಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿ ಇರುತ್ತದೆ. ಅದನ್ನು ಗುರುತಿಸಿ ಉತ್ತೇಜಿಸಬೇಕು. ಎಲ್ಲರೂ ಓದಿನಲ್ಲಿ ಮುಂದೆ ಇರಬೇಕು ಎಂದು ಆಸೆ ಪಡಬಾರದು.

ಓದಿನಲ್ಲಿ ಮಗು ಸಾಧಿಸಿದರೆ ಅದು ಜೀವನದ ಒಂದು ಭಾಗ ಮಾತ್ರ. ಮಗು ಹೇಗೆ ಓದುತ್ತದೆ ಎಂಬ ಆಧಾರದ ಮೇಲೆ ಮಗುವನ್ನು ಅಳೆಯಬಾರದು. ಎಲ್ಲಾ ಪೋಷಕರೂ ಈ ಭಾವನೆಯಿಂದ ಹೊರಬರಬೇಕು.

ಸೋಲು-ಗೆಲುವಿನ ಬಗ್ಗೆ ಮಕ್ಕಳ ಜೊತೆ ಹೇಗೆ ಮಾತನಾಡಬೇಕು?

ಸೋಲು ಗೆಲುವಿನ ಬಗ್ಗೆ ನೀವು ಹೊಂದಿರುವ ಅಭಿಪ್ರಾಯವನ್ನೇ ಮಗುವೂ ಕೂಡ ಬೆಳೆಸಿಕೊಳ್ಳುತ್ತದೆ. ಮಗು 90% ಗಳಿಸಿದಾಗ ಮಾತ್ರ ಅದು ಗೆಲುವು. 80% ಬಂದರೆ ಅದು ಕಡಿಮೆ. ಅದಕ್ಕೆ ಪುರಸ್ಕಾರ ಇರುವುದಿಲ್ಲ ಎಂಬ ಭಾವನೆಯಿಂದ ನೀವು ಹೊರಬರಬೇಕು. ಮಕ್ಕಳಲ್ಲಿ ಹೆಚ್ಚು ವಿವೇಕ ಮತ್ತು ಸಹಾನುಭೂತಿ ತುಂಬಿ ಬೆಳೆಸಬೇಕು. 

ಮಗುವು ತನ್ನ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಗುರುತಿಸಲು ಸಹಾಯ ಮಾಡಿ. ತನ್ನ ಆತ್ಮಗೌರವ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವಂತೆ ಮಾಡಿ.

ಮಗುವಿನ ಮುಂದೆ ಮಾತನಾಡುವಾಗ ನೀವು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತೀರಿ ಎಂಬ ಭರವಸೆ ಮೂಡುವಂತೆ ನಡೆದುಕೊಳ್ಳಿ. ನಿಮ್ಮ ಮುಂದೆ ಸೋಲುವ ಭಯ ಮಗುವಿಗೆ ಬೇಡ. ಮಗುವಿನಲ್ಲಿ ನೀವು ತುಂಬುವ ಆಲೋಚನೆಗಳು ಬಹಳ ಮುಖ್ಯ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org