ಸಂದರ್ಶನ: ವಿದ್ಯಾರ್ಥಿಗಳ ಪರೀಕ್ಷಾ ಒತ್ತಡದ ನಿರ್ವಹಣೆ

ತಮಗೆ ಅರಿವಿಲ್ಲದೇ ಶಿಕ್ಷಕರೇ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡವುಂಟಾಗಲು ಕಾರಣರಾಗಬಹುದು!

ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮವಾಗಿ ನಿರ್ವಹಣೆ ತೋರುವ ವಿದ್ಯಾರ್ಥಿಗಳು ಹಾಗೂ ಸಾಧಾರಣ ನಿರ್ವಹಣೆ ತೋರುವ ವಿದ್ಯಾರ್ಥಿಗಳ ನಡುವೆ ಇರುವ ಸಾಮಾನ್ಯ ಲಕ್ಷಣವೆಂದರೆ, ಇಬ್ಬರೂ ಪರೀಕ್ಷಾ ಒತ್ತಡದಿಂದ ಬಳಲುತ್ತಿರಬಹುದು. ಮತ್ತು ಹೆಚ್ಚಿನ ವೇಳೆ ಈ ಒತ್ತಡವುಂಟಾಗಲು ಶಿಕ್ಷಕರೇ ಪ್ರಮುಖವಾಗಿ ಕಾರಣರಾಗಿರುತ್ತಾರೆ. ಶಾಲೆಯ ಆಡಳಿತಗಾರರು ಶಾಲೆಯ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರ ಮೇಲೆ ಒತ್ತಡ ಹೇರುತ್ತಾರೆ ಇದರಿಂದ ಶಿಕ್ಷಕರು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುವ ಮತ್ತು ಹೆಚ್ಚಿನ ಅಂಕ ಗಳಿಸುವ ಅಗತ್ಯತೆಯನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ.

ಇದರಿಂದ ಕೊನೆಯಲ್ಲಿ ಶಿಕ್ಷಕರೂ ಕೂಡ ಎರಡು ಮುಖ್ಯವಾದ ಕಾರಣದಿಂದ ಒತ್ತಡವನ್ನು ಅನುಭವಿಸುತ್ತಾರೆ:

  • ಶೈಕ್ಷಣಿಕವಾಗಿ ಮುಂದಿರುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿರೀಕ್ಷೆ , ಏಕೆಂದರೆ ಇವರಿಂದ ಶಾಲೆಯು ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯವಾಗುತ್ತದೆ.
  • ಅಭ್ಯಾಸದಲ್ಲಿ ಹಿಂದಿರುವ ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಶಿಕ್ಷಕರು ಭಯ ಹೊಂದಿರುತ್ತಾರೆ ಏಕೆಂದರೆ ಈ ವಿದ್ಯಾರ್ಥಿಗಳ ಫಲಿತಾಂಶದ ಜವಾಬ್ದಾರಿಯನ್ನು ಅವರು ಹೊರಬೇಕಾಗಿರುತ್ತದೆ.

ಶಿಕ್ಷಕರು ಹೇಗೆ ತಮಗೇ ಅರಿವಿಲ್ಲದಂತೆ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡವುಂಟಾಗಲು ಕಾರಣರಾಗುತ್ತಾರೆ ಎಂದು ನಿಮ್ಹಾನ್ಸ್‍ನಲ್ಲಿ ಕ್ಲಿನಿಕಲ್ ಸೈಕಾಲಜಿಯ ಹೆಚ್ಚುವರಿ ಪ್ರಾಧ್ಯಾಪಕರಾದ ಡಾ.ಮಂಜುಳಾರವರು ತಿಳಿಸುತ್ತಾರೆ. 

ಡಾ. ಮಂಜುಳಾರವರ ಪ್ರಕಾರ ಶಿಕ್ಷಕರಿಗೆ ಎಲ್ಲಾ ವಿದ್ಯಾರ್ಥಿಗಳನ್ನು ಅವಲೋಕಿಸಲು ಮತ್ತು ಶೈಕ್ಷಣಿಕವಾಗಿ ಮಾರ್ಗದರ್ಶನ ಮಾಡಲು ಸಾಧ್ಯವಿರುವುದಿಲ್ಲ. ಆದರೆ ಅವರು ಪರೀಕ್ಷೆ ಬಗ್ಗೆಇರುವ ವಿದ್ಯಾರ್ಥಿಗಳ ಒತ್ತಡವನ್ನು ಹೋಗಲಾಡಿಸಲು ಸಹಾಯ ಮಾಡಬಹುದು. ಈ ಒತ್ತಡವನ್ನು ಹೋಗಲಾಡಿಸುವ ಸಂದರ್ಭದಲ್ಲಿ ಶಿಕ್ಷಕರಿಗೆ ಎದುರಾಗುವ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ:

ವಿದ್ಯಾರ್ಥಿಯು ಪರೀಕ್ಷಾ ಒತ್ತಡದಿಂದ ಬಳಲುತ್ತಿದ್ದಾರೆಂದು ತಿಳಿಯುವುದು ಹೇಗೆ?

ದೀರ್ಘಕಾಲದ ಸಹವಾಸದಿಂದಾಗಿ ಶಿಕ್ಷಕರು ಸುಲಭವಾಗಿ ಮಧ್ಯಮ ಕ್ರಮಾಂಕದ ವಿದ್ಯಾರ್ಥಿಗಳು ಮತ್ತು ಅಭ್ಯಾಸದಲ್ಲಿ ಮುಂದಿರುವ ವಿದ್ಯಾರ್ಥಿಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಇದರಿಂದಾಗಿ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು ಪರಿಗಣಿಸದೇ ಪ್ರತಿ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಲು ಸಾಧ್ಯವಾಗುತ್ತದೆ. ಆದರೆ, ಸಾಮಾನ್ಯವಾಗಿ ಶಿಕ್ಷಕರು ಅಭ್ಯಾಸದಲ್ಲಿ ಮುಂದಿರುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ ಇದರಿಂದ ಉಳಿದ ಮಕ್ಕಳು ಶಿಕ್ಷಕರ ಗಮನವನ್ನು ಸೆಳೆಯಲು ಉತ್ತಮ ಫಲಿತಾಂಶಗಳಿಸಬೇಕೆಂಬ ಒತ್ತಡಕ್ಕೆ ಒಳಗಾಗುತ್ತಾರೆ.

ಆದರ್ಶ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನ ಹೇಗಿರಬೇಕು?

  • ಶಿಕ್ಷಕರಾದವರು ಅಭ್ಯಾಸದಲ್ಲಿ ಮುಂದಿರುವ ವಿಧ್ಯಾರ್ಥಿಗಳು ಮತ್ತು ಉಳಿದ ವಿದ್ಯಾರ್ಥಿಗಳಲ್ಲಿ ಯಾವುದೇ ಭೇದಭಾವ ಮಾಡದೇ ಎಲ್ಲರೂ ಉತ್ತಮ ಅಭ್ಯಾಸ ಮಾಡುವಂತೆ ನೋಡಿಕೊಳ್ಳಬೇಕು.
  • ಶೈಕ್ಷಣಿಕವಾಗಿ ಹಿಂದಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಕಡೆಗಣಿಸುತ್ತಾರೆ. ಇದು ವಿದ್ಯಾರ್ಥಿಗಳ ಆತ್ಮಗೌರವವನ್ನು ಕುಗ್ಗಿಸುತ್ತದೆ. ಶಿಕ್ಷಕರಾದವರು ಇಂಥ ವಿದ್ಯಾರ್ಥಿಗಳ ಬಗ್ಗೆ ಸೂಕ್ಷ್ಮವಾಗಿ ವರ್ತಿಸಬೇಕು ಮತ್ತು ಅವರ ಅಧ್ಯಯನದ ಯೋಜನೆ ತಯಾರಿಸಲು ನೆರವಾಗಬೇಕು. ಈ ರೀತಿಯ ಪ್ರೋತ್ಸಾಹಕ ಮತ್ತು ಬೆಂಬಲದ ಸಂವಹನವು ಪ್ರತಿ ವಿದ್ಯಾರ್ಥಿಯೊಂದಿಗೆ ಯಾವಾಗಲೂ ಜಾರಿಯಲ್ಲಿರಬೇಕು.

ಪರೀಕ್ಷೆಯ ಸಂಧರ್ಭದಲ್ಲಿ ಪಾಲಕರೊಂದಿಗೆ ಮಾತನಾಡುವುದು ಅಗತ್ಯವೇ?

ಎಲ್ಲಾ ಸಂದರ್ಭದಲ್ಲಿಯೂ ಮಾತನಾಡುವ ಅಗತ್ಯವಿರುವುದಿಲ್ಲ. ಆದರೆ ಮಾತನಾಡುವಾಗ ಶಿಕ್ಷಕರು ಜಾಗರೂಕರಾಗಿರಬೇಕು. ಅವರ ಮಾತುಕತೆ ತಪ್ಪು ಸಂದೇಶವನ್ನು ರವಾನಿಸಬಾರದು. ‘ಮಕ್ಕಳು ಅಭ್ಯಾಸ ಮಾಡುವುದನ್ನು ದೃಢಪಡಿಸಿ’, ‘ಅವರಿಗೆ ಟಿವಿ ನೋಡಲು ಮತ್ತು ಹೊರ ಹೋಗಲು ಬಿಡಬೇಡಿ ಇದು ಅವರ ಬೋರ್ಡ್ ಎಕ್ಸಾಮ್’ ಎಂದೆಲ್ಲಾ ಹೇಳುವುದರಿಂದ ಒಳ್ಳೆಯದಕ್ಕಿಂತ ಹಾನಿಯಾಗುವ ಸಂಭವವೇ ಅಧಿಕ. ಶಿಕ್ಷಕರು ತಮಗೆ ತಿಳಿಯದೇ ಅವರ ಭಯವನ್ನು ಪಾಲಕ ಮೇಲೆ ಹೇರುತ್ತಾರೆ ಇದರಿಂದ ಮಕ್ಕಳ ಭಯ ಇನ್ನೂ ಜಾಸ್ತಿಯಾಗುತ್ತದೆ.

ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಹೇಗೆ ಮಾರ್ಗದರ್ಶನ ನೀಡಬೇಕು?

ಶಿಕ್ಷಕರು ಅಭ್ಯಾಸದಲ್ಲಿ ಮುಂದಿರುವ ಮತ್ತು ಮಧ್ಯಮ ಕ್ರಮಾಂಕದ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಿದರೆ ಅದು ಸಾಧಾರಣ ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳ ಬಗ್ಗೆ ಅಥವಾ ಅವರ ಆಲೋಚನಾ ಸಾಮಥ್ರ್ಯದ ಬಗ್ಗೆ ಶಿಕ್ಷಕರು ಆಡುವ ಮಾತುಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ.

ಶಿಕ್ಷಕರು ವಿದ್ಯಾರ್ಥಿಗಳಿಗೆ ಈ ರೀತಿಯಾಗಿ ಸಹಾಯ ಮಾಡಬಹುದು:

  • ಅವರಿಗೆ ಅಭ್ಯಾಸದ ವೇಳಾಪಟ್ಟಿಯನ್ನು ಮಾಡಿಕೊಳ್ಳಲು ಸಹಾಯ ಮಾಡಬಹುದು.
  • ವಿದ್ಯಾರ್ಥಿಗಳ ಸಾಮರ್ಥ್ಯವನ್ನಾಧರಿಸಿ ಅವರಿಗೆ ಮಾರ್ಗದರ್ಶನ ನೀಡಬಹುದು.
  • ಶಿಕ್ಷಕರು ಅವರ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರದೇ ಅವರಿಗೆ ಬೆಂಬಲ ನೀಡಬೇಕು.
  • ವಿದ್ಯಾರ್ಥಿಗಳ ಸಾಧನೆ ಮತ್ತು ಅವರ ಗುರಿಯ ಬಗ್ಗೆ ಚರ್ಚಿಸಲು ಮುಕ್ತ ಅವಕಾಶ ಕಲ್ಪಿಸಬೇಕು.

Related Stories

No stories found.